Saturday, 20 January 2024

ರಾಮನ ಅವತಾರ


ವಾಲ್ವ್ ರೇಡಿಯೋಗಳ ಕಾಲದಲ್ಲಿ ಎಷ್ಟು ಆಸ್ಥೆಯಿಂದ ಆಲಿಸಲ್ಪಡುತ್ತಿತ್ತೋ ಈಗಿನ ವೆಬ್ ರೇಡಿಯೋ ಕಾಲದಲ್ಲೂ ಅಷ್ಟೇ ಆಸ್ಥೆಯಿಂದ  ಆಲಿಸಲ್ಪಡುತ್ತಿರುವ ಹಾಡು ರಾಮನ ಅವತಾರ ರಘುಕುಲ ಸೋಮನ ಅವತಾರ. 1958ರಲ್ಲಿ ತಯಾರಾದ  ಭೂ ಕೈಲಾಸ ಚಿತ್ರಕ್ಕಾಗಿ ಇದನ್ನು ರಚಿಸಿದ್ದು ಕು.ರ. ಸೀತಾರಾಮ ಶಾಸ್ತ್ರಿ.  ಸಂಗೀತ ಸಂಯೋಜಿಸಿದವರು  ಆರ್. ಸುದರ್ಶನಂ ಮತ್ತು ಆರ್. ಗೋವರ್ಧನ್ ಸೋದರರು. ಇದನ್ನು ಹಾಡಿದವರು ಯಾರು ಎಂದು ಹೇಳಬೇಕಾಗಿಯೇ ಇಲ್ಲ; ಏಕೆಂದರೆ ಕನ್ನಡಿಗರಿಗೆ ಸೀರ್ಕಾಳಿ ಗೋವಿಂದರಾಜನ್ ಎಂದರೆ ರಾಮನ ಅವತಾರ, ರಾಮನ ಅವತಾರ ಎಂದರೆ ಸೀರ್ಕಾಳಿ ಗೋವಿಂದರಾಜನ್. ಒಟ್ಟಾರೆಯಾಗಿ ಅವರು ಕನ್ನಡದಲ್ಲಿ ಹಾಡಿದ್ದು ಬೆರಳೆಣಿಕೆಯ ಹಾಡುಗಳು.  ಯಕ್ಷಗಾನ ಭಾಗವತಿಕೆಯನ್ನು ಹೊರತು ಪಡಿಸಿ ಕಪ್ಪು ಎರಡು (ಎರಡೂವರೆ ಕಟ್ಟೆ ಅಥವಾ D Sharp) ಶ್ರುತಿಯಲ್ಲಿ ಮಧ್ಯ ಸಪ್ತಕದ ಷಡ್ಜಕ್ಕಿಂತ ಕೆಳಗೆ ಮಂದ್ರಕ್ಕಿಳಿಯದೆ falsetto ಅಂದರೆ ಕಳ್ಳದನಿ ಬಳಸದೆ ತಾರ ಸಪ್ತಕದ ಪಂಚಮದ ವರೆಗೆ ಸಂಚರಿಸಿ ಈ ಹಾಡಿಗೆ ನ್ಯಾಯ ಒದಗಿಸಬಲ್ಲ ಗಾಯಕರು ಅವರೊಬ್ಬರೇ ಇದ್ದದ್ದು.   ಭೂ ಕೈಲಾಸ ಚಿತ್ರ ಕನ್ನಡದೊಂದಿಗೆ ಏಕ ಕಾಲದಲ್ಲಿ ತೆಲುಗಿನಲ್ಲೂ ತಯಾರಾಗಿದ್ದು ಅಲ್ಲಿ ಈ ರಾಮಾವತಾರ ಹಾಡನ್ನು ಘಂಟಸಾಲ ಒಂದು ಮನೆ ಕೆಳಗೆ ಅಂದರೆ C sharp ಶ್ರುತಿಯಲ್ಲಿ ಹಾಡಿದ್ದು  ಕನ್ನಡದ ಉಠಾವ್ ಅದಕ್ಕೆ ಒದಗಲಿಲ್ಲ.



ಮೈಸೂರಿನ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಅಭಿನಯಿಸುತ್ತಿದ್ದ ಗೋಕರ್ಣ ಕ್ಷೇತ್ರ ಮಹಾತ್ಮೆಯ ಕಥೆಯನ್ನಾಧರಿಸಿದ ಚಿತ್ರ ಭೂ ಕೈಲಾಸ.  ತಾಯಿ ಕೈಕಸೆ ಮರಳಿನ ಲಿಂಗ ಮಾಡಿ ಶಿವನನ್ನು ಪೂಜಿಸುವುದನ್ನು ನೋಡಲಾರದೆ ರಾವಣನು ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ಆಕೆಗಾಗಿ ಆತ್ಮಲಿಂಗವನ್ನು ಪಡೆಯಲು ಪ್ರಯತ್ನಿಸುವುದು ಇಲ್ಲಿಯ ಮುಖ್ಯ  ಕಥಾಹಂದರ.  ವಾಸ್ತವವಾಗಿ ಇದರಲ್ಲಿ ರಾಮಾಯಣ ಕಥಾನಕಕ್ಕೆ ಎಡೆ ಇಲ್ಲ. ಹೀಗಾಗಿ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಫ್ಲಾಶ್ ಬ್ಯಾಕ್ ಇರುವಂತೆ ಫ್ಲಾಶ್ ಫೋರ್ವಾರ್ಡ್ ತಂತ್ರ ಬಳಸಿ ಐಟಂ ಸಾಂಗ್ ಎನಿಸದಂತೆ ಈ ರಾಮಾವತಾರ ಹಾಡನ್ನು ಕಥೆಯ ಭಾಗವನ್ನಾಗಿಸಲಾಗಿದೆ.



ಸಾಮಾನ್ಯವಾಗಿ ಪುರಾಣದ ಕಥೆಗಳಿಗೆಲ್ಲ ನಾರದನೇ ಸೂತ್ರಧಾರ.  ಇಲ್ಲೂ ಆತನದ್ದೇ ಕಾರುಬಾರು.  ರಾವಣ ಆತ್ಮಲಿಂಗ ಪಡೆಯುವ ಉದ್ದೇಶದಿಂದ ತಪಸ್ಸನ್ನಾಚರಿಸುವ ಸುದ್ದಿಯನ್ನು ಆತ ಪಾರ್ವತಿಗೆ ಹೇಳಿದ.  ಆತ್ಮ ಲಿಂಗವೇ ರಾವಣನ ಪಾಲಾದರೆ ಶಿವನ ಆತ್ಮವೇ ನಷ್ಟವಾದಂತೆ ಎಂದು ಯೋಚಿಸಿದ ಪಾರ್ವತಿ ನಾರದನ ಸಲಹೆಯಂತೆ ವಿಷ್ಣುವಿನ ಮೊರೆ ಹೋದಳು. ರಾವಣ ಆತ್ಮಲಿಂಗದ ಬದಲು ಬೇರೇನನ್ನಾದರೂ ಕೇಳುವಂತೆ ತಾನು ಮಾಡುವುದಾಗಿ ವಿಷ್ಣು ಅಭಯವಿತ್ತ.  ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾದಾಗ ತನ್ನೊಳಗಿನ ಮಾಯೆ ರಾವಣನನ್ನು ಸೇರುವಂತೆ ಮಾಡಿದ.  ಆದರೆ ಅಂದುಕೊಂಡದ್ದು ಒಂದು, ಆದದ್ದು ಇನ್ನೊಂದು.  ವಿಷ್ಣುವಿನ  ಮಾಯೆಯ ಪ್ರಭಾವದಿಂದ ರಾವಣ ಆತ್ಮ ಲಿಂಗವನ್ನೇನೋ ಮರೆತ,  ಆದರೆ ಅದರ ಬದಲಿಗೆ ಪಾರ್ವತಿಯನ್ನೇ ತನಗೆ ಕೊಡುವಂತೆ ಶಿವನನ್ನು ಕೇಳಿದ. ಇದರಿಂದ ಕೆರಳಿದ ಪಾರ್ವತಿ  ತಾನು ಮತ್ತು ಶಿವ ಹೇಗೆ ವಿಯೋಗವನ್ನು ಹೊಂದಬೇಕಾಯಿತೋ ಅದೇ ರೀತಿ ವಿಷ್ಣುವೂ ಭೂಲೋಕದಲ್ಲಿ ನರನಾಗಿ ಜನ್ಮವೆತ್ತಿ ಪತ್ನೀ ವಿಯೋಗದಲ್ಲಿ ಕಾಡುಮೇಡು ಅಲೆಯುವಂತಾಗಲಿ ಎಂದು ಶಾಪವಿತ್ತಳು. ಆಗ ನಾರದನಿಗೆ ಇದೀಗ ರಾಮಾಯಣದ ಬೀಜಾಂಕುರವಾಯಿತು, ಇನ್ನು ರಾವಣನ ಅಂತ್ಯ ನಿಶ್ಚಿತ  ಎನ್ನಿಸಿ ಆತನ ಅಂತಃಚಕ್ಷುಗಳಿಗೆ  ರಾಮಾಯಣದ ದೃಶ್ಯಾವಳಿಗಳು ಫ್ಲಾಶ್ ಫೋರ್ವಾರ್ಡ್ ರೂಪದಲ್ಲಿ ರಾಮಾವತಾರ ಹಾಡಿನ ಮೂಲಕ ಗೋಚರಿಸಿದವು.  ಮುಂದೆ ನಾರದನ ತಂತ್ರದಿಂದ ಪಾರ್ವತಿ ಭದ್ರಕಾಳಿಯಂತೆ, ಮಂಡೋದರಿ ಪಾರ್ವತಿಯಂತೆ ಗೋಚರಿಸುವುದು, ರಾವಣ ಮತ್ತೆ ತಪಸ್ಸು ಮಾಡಿ ಆತ್ಮಲಿಂಗ ಪಡೆಯುವುದು, ವಟು ರೂಪಿ ಗಣಪ ಅದು ಗೋಕರ್ಣದಲ್ಲಿ ಪ್ರತಿಷ್ಟಾಪನೆ ಆಗುವಂತೆ ಮಾಡುವುದು ಇತ್ಯಾದಿ ನಮಗಿಲ್ಲಿ ಅಪ್ರಸ್ತುತ.

ಈ ಹಾಡು ರಚನೆಯಾದ ಬಗೆಗೂ ಒಂದು ಕಥೆ ಇದೆ.  6 ನಿಮಿಷ ಅವಧಿಯಲ್ಲಿ ರಾಮಾಯಣದ ಸಾರವನ್ನು ಹೇಳುವ ಹಾಡು ಬೇಕೆಂದು ನಿಮಾಪಕರಾದ ಎ.ವಿ. ಮೇಯಪ್ಪನ್ ಹೇಳಿದಾಗ ತೆಲುಗಿನಲ್ಲಿ ಸಂಭಾಷಣೆ, ಗೀತೆಗಳನ್ನು ಬರೆಯುತ್ತಿದ್ದ ಸಮುದ್ರಾಲ ಇದು ಆಗದ ಮಾತು ಅಂದರಂತೆ.  ಅಷ್ಟೇ ಅಲ್ಲ, ಇನ್ಯಾರಾದರೂ ಇದನ್ನು ಮಾಡಿ ತೋರಿಸಿದರೆ ತಾನು ಲೇಖನ ವೃತ್ತಿಯನ್ನೇ ತ್ಯಜಿಸುತ್ತೇನೆ ಅಂದರಂತೆ.  ಕನ್ನಡ ಆವೃತ್ತಿಗೆ ಸಂಭಾಷಣೆ, ಗೀತೆ ಬರೆಯುತ್ತಿದ್ದ ಕು.ರ. ಸೀತಾರಾಮ ಶಾಸ್ತ್ರಿ ಈ ಸವಾಲನ್ನು ಸ್ವೀಕರಿಸಿ ಕೆಲವೇ ನಿಮಿಷಗಳಲ್ಲಿ ಈ ಆದಿ, ಅಂತ್ಯ, ಒಳ ಪ್ರಾಸ ಇರುವ  ಹಾಡು ಬರೆದು ಮುಗಿಸಿದರಂತೆ.  ನಿರ್ಮಾಪಕರ ಆದೇಶದಂತೆ ಸಮುದ್ರಾಲ ಇದನ್ನೇ ತೆಲುಗಿಗೆ ಅನುವಾದಿಸಿದರಂತೆ.  


ಹೆಚ್ಚಿನ ಕಥನಗೀತೆಗಳಲ್ಲಿ ಇರುವಂತೆ ಕಥೆ ಹೇಳುತ್ತಾ ಹೋಗುವ ಸರಳ ನಿರೂಪಣೆ ಇದಾಗಿರದೆ ಮಧ್ಯೆ ಕವಿಯ ಸ್ವಗತಗಳೂ ಇರುವ ಈ ರಚನೆಯ ಪ್ರತೀ ಸಾಲನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.  ಆ ದಿಸೆಯಲ್ಲಿ ಸ್ವಲ್ಪ ಪ್ರಯತ್ನಿಸೋಣ.

ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ

ವಿಷ್ಣುವಿನ ದ್ವಾರಪಾಲಕರಾದ  ಜಯ ವಿಜಯರು ಸನಕಾದಿ ಮುನಿಗಳ ಶಾಪಕ್ಕೊಳಗಾಗಿ ರಾವಣ ಕುಂಭಕರ್ಣರಾಗಿ ಜನ್ಮ ತಾಳಿರುತ್ತಾರೆ. ಈಗ ರಾಮನ ರೂಪದಲ್ಲಿ ವಿಷ್ಣು ಅವರಿಗೆ ಮೋಕ್ಷ ಕರುಣಿಸಲಿದ್ದಾನೆ.

ಜಾರತನ ಸದೆಬಡಿವ ಸಂಭ್ರಮದ ನೆಪವೋ

ಪರಸ್ತ್ರೀ ವ್ಯಾಮೋಹ ಸಲ್ಲದೆಂದು ಲೋಕಕ್ಕೆ ತಿಳಿಸಲು  ಒಂದು ನೆಪ.

ರಾಮನ ಅವತಾರ ರಘುಕುಲ ಸೋಮನ ಅವತಾರ
 
ತಾರೆಗಳ ಮಧ್ಯೆ ಚಂದ್ರನು ಶೋಭಿಸುವಂತೆ ರಘುಕುಲವನ್ನು ಬೆಳಗಲು ರಾಮನು ಅವತರಿಸಲಿದ್ದಾನೆ.

ನಿರುಪಮ ಸಂಯಮ ಜೀವನ ಸಾರ
ಎಂಥ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದಿರುವ ರಾಮನ ಆದರ್ಶ ಗುಣ ಅನುಕರಣೀಯ.

ಹರಿಪುದು ಭೂಮಿಯ ಭಾರ

ಭೂಮಿಗೆ ಭಾರವಾಗಿರುವ ದುಷ್ಟರು ನಾಶವಾಗಲಿದ್ದಾರೆ. 

ದಾಶರಥಿಯ ದಿವ್ಯಾತ್ಮವ ತಳೆವ
ಕೌಸಲ್ಯೆಯ ಬಸಿರೆನಿತು ಪುನೀತ

ದಶರಥ ಸುತ ರಾಮನಿಗೆ ಜನ್ಮವೀಯಲಿರುವ ಕೌಸಲ್ಯೆಯ ಬಸಿರು ಅದೆಷ್ಟು ಪುಣ್ಯಶಾಲಿ.  ಇತ್ತೀಚಿನ ವರೆಗೂ ನಾನಿದನ್ನು ಬಸಿರೆನಿಸು ಪುನೀತ ಎಂದು ಕೇಳಿಸಿಕೊಂಡು ಓ ಪಾವನಮೂರ್ತಿಯೇ, ಕೌಸಲ್ಯೆಯ ಬಸಿರಲ್ಲಿ ಜನ್ಮತಾಳು ಎಂದು ಅರ್ಥೈಸುತ್ತಿದ್ದೆ. 

ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತ್ರುಘ್ನ ಭರತ
ರಾಮನ ಸಹೋದರರಾಗಿ ಹುಟ್ಟಲಿರುವವ ಲಕ್ಷ್ಮಣ ಶತ್ರುಘ್ನ ಭರತ ಇವರೆಲ್ಲ  ಉತ್ತಮ ಗುಣವುಳ್ಳವರೇ ಆಗಿರುತ್ತಾರೆ.

ತ್ರಿಭುವನ ಪಾಲಗೆ ನೆಪ ಮಾತ್ರ
ವರಗುರು ವಿಶ್ವಾಮಿತ್ರ
ಮಹಾವಿಷ್ಣುವಿಗೆ ಗುರುವಿನ ಅಗತ್ಯವಾದರೂ ಏನಿದೆ, ಈ ಶಿಷ್ಯತ್ವ ಲೋಕರೂಢಿ ಪಾಲಿಸಲು ಮಾತ್ರ.

ಅಭಯ ಅಹಲ್ಯೆಗೆ ನೀಡುವ ಪಾತ್ರ
ತರಿಸುವ ಹರಿ ಸುಭಗಾತ್ರ
ಕಲ್ಲಾಗಿದ್ದ ಅಹಲ್ಯೆಗೆ ಇಲ್ಲಿ ಹರಿಯು ಪಾದಸ್ಪರ್ಶದ ಮೂಲಕ ಚೆಲುವಾದ ರೂಪವನ್ನು ತರಿಸುತ್ತಾನೆ.

ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಕಲೆಯೋ
ದನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ  
ಈ ಚರಣ ಅತ್ಯಂತ ಕಾವ್ಯಾತ್ಮಕ. ಮಿಥಿಲೆಯಲ್ಲಿ ಮುರಿಯುವುದು ಶಿವ ಧನುಸ್ಸು ಮಾತ್ರವಲ್ಲ.   ಮೈಥಿಲಿಯೊಂದಿಗೆ ಜನಕನ ಮಮತೆಯ ಬಂಧ, ಆಕೆಯ ಕನ್ಯಾಸೆರೆ ಮತ್ತು ರಾವಣಾದಿ ದಾನವರ ದುರಾಸೆಯ ಕನಸಿನ ಗೋಪುರಗಳೆಲ್ಲವೂ ಮುರಿಯಲಿವೆ ಎಂದು ಕವಿ ವರ್ಣಿಸುತ್ತಾನೆ.

ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕ 
ಪಟ್ಟಾಭಿಷೇಕದ ತಯಾರಿ, ಕೈಕೇಯಿಯಿಂದ ವಿಘ್ನ, ದಶರಥನ ದುಃಖ, ಹದಿನಾಲ್ಕು ವರ್ಷ ವನವಾಸ ಇತ್ಯಾದಿ ಲೋಕೋದ್ಧಾರಕ್ಕಾಗಿ ಹಮ್ಮಿಕೊಂಡ ನಾಟಕದ ಒಂದು ಭಾಗ ಮಾತ್ರ. 

ಭರತಗೆ ಪಾದುಕೆ ನೀಡುವ ವೇಷ

ಗುರುಜನ ಭಕ್ತಿಯೆ ಆದೇಶ
ನರಲೋಕಕೆ ನವ ಸಿರಿ ಸಂತೋಷ
ಭರವಸೆ ನೀಡುವ ಸಂಕೇತ
ಕೈಗೆತ್ತಿಕೊಂಡ ಕಾರ್ಯ ಸಂಪನ್ನವಾದೊಡನೆ ಅಯೋಧ್ಯೆಗೆ ಮರಳುತ್ತೇನೆ ಎಂಬ ಭರವಸೆಗೆ ಸಂಕೇತ ರೂಪದಲ್ಲಿ ರಾಮನು ಗುರುಜನರ ಆದೇಶದಂತೆ ಭರತನಿಗೆ ತನ್ನ ಪ್ರತಿನಿಧಿಯಾಗಿ ಪಾದುಕೆಗಳನ್ನು ನೀಡುತ್ತಿದ್ದಾನೆ.

ಆಹಾ! ನೋಡದೊ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೇ
ಮಣ್ಣಾಗುವೆ ನೀ ನಿಶ್ಯಂಕೆ 

ಮಾವ ಮಾರೀಚನನ್ನು ಹೊನ್ನಿನ ಜಿಂಕೆಯಾಗಿ ಕಳಿಸಿರುವುದು  ಲಂಕೆಯ ನಾಶದತ್ತ ರಾವಣನಿಟ್ಟ ಮೊದಲ ಹೆಜ್ಜೆ. ಸೀತೆಯತ್ತ ಕಣ್ಣೆತ್ತಿ ನೋಡಿದರೆ ಅಂದು ಕಾಮನನ್ನು ಸುಟ್ಟಿದ್ದ ಶಿವನ ಉರಿಗಣ್ಣು ನಿನ್ನನ್ನೂ ನಾಶ ಮಾಡೀತು ಎಂದು ರಾವಣನಿಗೆ ಎಚ್ಚರಿಕೆ.

ಶರಣು ಶರಣು ಹೇ ಭಾಗವತೋತ್ತಮ

ಕನ್ನಡ ಕುಲಪುಂಗವ ಹನುಮ

ಇಲ್ಲಿ  ವೈದೇಹಿ ಹರಣವಾದ ಮೇಲೆ ಕಿಷ್ಕಿಂಧೆಯಲ್ಲಿ ಭೇಟಿಯಾಗುವ ಹನುಮನ ಗುಣಗಾನ ಇದೆ. ಕಿಷ್ಕಿಂಧೆ ಈಗಿನ ಹಂಪಿ ಪರಿಸರದಲ್ಲಿದ್ದುದು ಎಂದು ನಂಬಲಾಗಿರುವುದರಿಂದ ಆತ ಕನ್ನಡ ಕುಲಪುಂಗವ ಎಂದು ಕವಿ ಹೆಮ್ಮೆ ಪಡುತ್ತಾನೆ. ಹಾಡಿನ ತೆಲುಗು ಅವತರಣಿಕೆಯಲ್ಲಿ ಈ ಸಾಲು ಹೇಗಿದೆ ಎಂಬ ಕುತೂಹಲ ನನಗಿತ್ತು.  ಹಾಡನ್ನು ಹುಡುಕಿ ಆಲಿಸಿದಾಗ ಅದು ವಾನರ ಕುಲಪುಂಗವ ಹನುಮ ಎಂದಿರುವುದು ತಿಳಿಯಿತು. 

ಮುದ್ರಿಕೆಯಲ್ಲಿದು ಸೋಹಂ ಭೌಮ
ಎಂಬುವ ತತ್ವವೊ ತಿಳಿತಮ್ಮಾ

ಇದು ಅರ್ಥೈಸಲು  ಅತ್ಯಂತ ಕಠಿಣವಾದ ಸಾಲು. ಮುದ್ರಿಕೆಯಲ್ಲಿದು ಎಂಬುದನ್ನು ಮುದ್ರಿಕೆಯಲ್ಲ + ಇದು  ಅಥವಾ ಮುದ್ರಿಕೆಯಲ್ಲಿ + ಇದು ಎಂದು ಎರಡು ರೀತಿ ವಿಂಗಡಿಸಬಹುದು. ಮುದ್ರಿಕೆಯಲ್ಲ + ಇದು ಎಂದು ತಿಳಿದುಕೊಂಡರೆ ಲಂಕೆಗೆ ಹೊರಟ ಹನುಮನ ಗುರುತು ಸೀತೆಗೆ ತಿಳಿಯಲು ರಾಮನು ಉಂಗುರ ಕೊಡುವಾಗ "ಇದು ಬರೀ ಮುದ್ರಿಕೆಯಲ್ಲ, ಭೂಮಿಗೊಡೆಯ ಅಥವಾ ಭೂಮಿಜಾತನಾಗಿ ಅವತರಿಸಿದ ಮಹಾವಿಷ್ಣುವಾದ ನಾನೇ ಇದಾಗಿದ್ದೇನೆ ಎನ್ನುವ ತತ್ತ್ವವನ್ನು ಅರಿತು ಕೋ" ಎಂದು ಹನುಮನಿಗೆ ಹೇಳಿದ ಎಂಬರ್ಥ ಬರುತ್ತದೆ. ಮುದ್ರಿಕೆಯಲ್ಲಿ + ಇದು ಎಂದು ತಿಳಿದರೆ ಆ ಉಂಗುರದಲ್ಲಿ ಯಾವುದೋ ಆಕೃತಿಯನ್ನು ಕೆತ್ತಲಾಗಿದ್ದು ರಾಮನು ಅದನ್ನು ಹನುಮನಿಗೆ ಕೊಡುವಾಗ " ಇದರಲ್ಲಿರುವ ಕಾಣಿಸುತ್ತಿರುವುದು   ಭೂಮಿಗೊಡೆಯನಾದ  ನಾನೇ ಈ ಮುದ್ರಿಕೆಯಲ್ಲಿದ್ದೇನೆ ಎಂದುದರ ಸಂಕೇತ ಎಂಬುದನ್ನು ತಿಳಿದು ಕೋ" ಎಂದು ಹೇಳಿದ ಎಂದಾಗುತ್ತದೆ. ಇಲ್ಲಿ ಭೌಮ ಎಂಬುದು ಕೆಲವರಿಗೆ ಬ್ರಹ್ಮ ಎಂದೂ ಕೇಳಿಸುವುದಿದೆ. ಹಾಗೆಂದುಕೊಂಡರೂ ಅಂಥ ಅರ್ಥವ್ಯತ್ಯಾಸ ಏನಿಲ್ಲ. ಒಟ್ಟಿನಲ್ಲಿ "ಈ ಮುದ್ರಿಕೆ ಎಂದರೆ ಸ್ವಯಂ ನಾನೇ" ಎಂಬ ಭಾವಾರ್ಥ.  ಇಲ್ಲಿ ಮಕಾರ ಪ್ರಾಸಕ್ಕಾಗಿ ರಾಮನು ಹನುಮನನ್ನು ಸಲುಗೆಯಿಂದ ತಮ್ಮಾ ಎಂದು ಸಂಬೋಧಿಸಿದ ಎನ್ನಲಾಗಿದೆ.

ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ 
ಈ ಸಾಲುಗಳಲ್ಲಿ ರಾಮನು ರಾವಣನ ಮೇಲೆ ಜಯ ಸಾಧಿಸಿ ಸೀತೆಯನ್ನು ಕರೆತಂದಿರುವುದನ್ನು ಸಾಂಕೇತಿಕವಾಗಿ ಹೇಳಲಾಗಿದೆ.  ಚಲನಚಿತ್ರದ ದೃಶ್ಯದಲ್ಲೂ ಯುದ್ಧ ಇತ್ಯಾದಿ ದೃಶ್ಯಗಳಿಲ್ಲದೆ ಲಂಕೆ ಉರಿಯುತ್ತಿರುವುದನ್ನಷ್ಟೇ ತೋರಿಸಲಾಗಿದೆ.

ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ಸತ್ವ ವಿಚಾರ
ಪರಸತಿ ಬಯಕೆಯ ಸಂಹಾರ

ಈ ಉಪಸಂಹಾರದಲ್ಲಿ ರಾವಣನನ್ನು ಹೀಗಳೆಯದೆ  ದಾನವ ಭಕ್ತಾಗ್ರೇಸರ ಎಂದು ಗೌರವಿಸಲಾಗಿದೆ.  ರಾಮ ವಧಿಸಿದ್ದು ರಾವಣನನ್ನಲ್ಲ, ಆತನಲ್ಲಿದ್ದ ಪರಸತಿ ಬಯಕೆಯಂಥ ದುರ್ಗುಣಗಳನ್ನು ಮಾತ್ರ ಎಂದು ಸಾಂಕೇತಿಕವಾಗಿ ಹೇಳಲಾಗಿದೆ. ಈ ಕಥೆಯಲ್ಲಡಗಿದ ತತ್ತ್ವ ಎಲ್ಲೆಡೆ ಹರಡಿ ಜಗದಲ್ಲಿರುವ ದುಷ್ಟತನ ದೂರಾಗಲಿ ಎಂಬ ಹಾರೈಕೆಯೂ ಇದರಲ್ಲಿದೆ.

ಈ ಹಾಡು ಸ ರಿ2 ಗ3 ಮ1 ಪ  ದ2 ನಿ3 ಸ್ವರಗಳ  23ನೇ ಮೇಳಕರ್ತ (ಧೀರ) ಶಂಕರಾಭರಣ ಮತ್ತು ಅದರಲ್ಲಿರುವ ನಿ3ಯನ್ನು ನಿ2 ಆಗಿ ಬದಲಾಯಿಸಿದಾಗ ಸಿಗುವ 22ನೇ ಮೇಳಕರ್ತ   ಹರಿಕಾಂಬೋಜಿ  ರಾಗಗಳ ಮಿಶ್ರಣ ರೂಪದಲ್ಲಿದೆ. ರಾಮನು ಹರಿಯ ಅವತಾರ ಆಗಿದ್ದು ರಾವಣನು ಶಂಕರನ ಪರಮ ಭಕ್ತನಾಗಿರುವುದರಿಂದ ಹರಿ ಮತ್ತು ಶಂಕರರ ಉಲ್ಲೇಖ ಇರುವ ರಾಗಗಳ ಬಳಕೆ ಇಲ್ಲಿ ಸೂಕ್ತವೇ ಆಗಿದೆ. ಹರಿಕಾಂಭೋಜಿಯಲ್ಲಿ ಅಪರೂಪಕ್ಕೊಮ್ಮೆ ನಿ3 ಪ್ರಯೋಗ ಕಾಣಿಸಿದರೆ ಅದು ಕಾಂಭೋಜಿ ಅನ್ನಿಸುವುದಾದರೂ ಈ ಹಾಡಿನಲ್ಲಿ ನಿ2 ಮತ್ತು ನಿ3ಗಳ ವ್ಯಾಪಕ ಬಳಕೆ ಇರುವುದರಿಂದ ಇದನ್ನು ಶಂಕರಾಭರಣ ಹರಿಕಾಂಭೋಜಿ ಮಿಶ್ರ ಎಂದೇ ಹೇಳಬೇಕಾಗುತ್ತದೆ.   ಹೊನ್ನಿನೆ ಜಿಂಕೆಯ ಚರಣಕ್ಕಿಂತ ಮುನ್ನ ಬರುವ ಸಣ್ಣ ಬ್ರಿಡ್ಜ್ ಮ್ಯೂಸಿಕ್ ತುಣುಕೊಂದು ಮ1 ಪ ದ2 ಸ ಗ2 ಗ3  ಪ ದ2 -  ಸ ದ2 ಪ ಗ3 ಗ2 ರಿ2 ಸ ಎಂಬ  ಶಿವರಂಜಿನಿ ಸ್ವರಗಳನ್ನು ಹೊಂದಿದೆ. ಆ ಚರಣ ಪೂರ್ತಿ ಹಿಂದೋಳ ರಾಗದಲ್ಲಿದೆ.  ನಂತರದ ಚರಣಗಳು ಮತ್ತೆ ಶಂಕರಾಭರಣ - ಹರಿಕಾಂಭೋಜಿ ಮಿಶ್ರಕ್ಕೆ ಮರಳುತ್ತವೆ. 

ಆಗ 78 rpm ಗ್ರಾಮೊಫೋನ್ ಪ್ಲೇಟುಗಳಲ್ಲಿ ಸಿನಿಮಾ ಹಾಡುಗಳು ಬರುತ್ತಿದ್ದುದು.  ಹೀಗಾಗಿ ಯಾವುದೇ ಹಾಡಿನ ಅವಧಿ ಮೂರುವರೆ ನಿಮಿಷಕ್ಕಿಂತ ಹೆಚ್ಚು ಇರುವಂತಿರಲಿಲ್ಲ. ಹೆಚ್ಚು ಅವಧಿಯ ಹಾಡುಗಳನ್ನು ಎರಡು ಭಾಗಗಳನ್ನಾಗಿಸಿ ರೆಕಾರ್ಡಿನ ಎರಡೂ ಬದಿಗಳಲ್ಲಿ ಮುದ್ರಿಸಲಾಗುತ್ತಿತ್ತು.  ಬಹುಶಃ ಇದು ಗಾನತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಕನ್ನಡದ ಮೊದಲ 6 ನಿಮಿಷ ಅವಧಿಯ  ಸಿನಿಮಾ ಹಾಡು.  ಮಧ್ಯದಲ್ಲಿ ಪ್ಲೇಟು ತಿರುಗಿಸಿ ಹಾಕುವಾಗ ರೇಡಿಯೋದಲ್ಲಿ "ಭೂಕೈಲಾಸ ಚಿತ್ರಕ್ಕಾಗಿ ಸೀರ್ಕಾಳಿ ಗೋವಿಂದರಾಜನ್ ಹಾಡಿದ ಗೀತೆ ಕೇಳುತ್ತಿರುವಿರಿ" ಎಂಬ ಹೆಚ್ಚುವರಿ ಅನೌನ್ಸ್‌ಮೆಂಟ್ ಇರುತ್ತಿತ್ತು.

ಇಷ್ಟೆಲ್ಲವನ್ನು ಮನಸಲ್ಲಿಟ್ಟುಕೊಂಡು ಈಗ ಸಾಹಿತ್ಯ ಗಮನಿಸುತ್ತಾ ಆ ಗೀತೆ ಆಲಿಸಿದರೆ ಅದರ ಸ್ವಾದವೇ  ಬೇರೆ ಎನಿಸೀತು.




ಚಿತ್ರ : ಭೂಕೈಲಾಸ.
ಗಾಯಕ : ಸೀರ್ಕಾಳಿ ಗೋವಿಂದರಾಜನ್
ರಚನೆ : ಕು.ರ.ಸೀ.
ಸಂಗೀತ : ಆರ್. ಗೋವರ್ಧನ್  - ಆರ್. ಸುದರ್ಶನಂ

ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆಬಡಿವ ಸಂಭ್ರಮದ ನೆಪವೋ

ರಾಮನ ಅವತಾರ ರಘುಕುಲ ಸೋಮನ ಅವತಾರ 
ನಿರುಪಮ ಸಂಯಮ ಜೀವನ ಸಾರ
ಹರಿಪುದು ಭೂಮಿಯ ಭಾರ

ದಾಶರಥಿಯ ದಿವ್ಯಾತ್ಮವ ತಳೆವ
ಕೌಸಲ್ಯೆಯ ಬಸಿರೆನಿತು ಪುನೀತ 
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತ್ರುಘ್ನ ಭರತ

ತ್ರಿಭುವನ ಪಾಲಗೆ ನೆಪ ಮಾತ್ರ
ವರಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ತರಿಸುವ ಹರಿ ಸುಭಗಾತ್ರ

ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಕಲೆಯೋ
ದನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ

(ಇಲ್ಲಿಂದ ಮುಂದೆ ಪ್ಲೇಟಿನ ಹಿಂಬದಿಯ ಭಾಗ)

ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕ  

ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯೆ ಆದೇಶ
ನರಲೋಕಕೆ ನವ ಸಿರಿ ಸಂತೋಷ
ಭರವಸೆ ನೀಡುವ ಸಂಕೇತ

ಆಹಾ! ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೇ
ಮಣ್ಣಾಗುವೆ ನೀ ನಿಶ್ಯಂಕೆ

ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಭೌಮ
ಎಂಬುವ ತತ್ವವೊ ತಿಳಿತಮ್ಮಾ

ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ 

ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ಸತ್ವ ವಿಚಾರ
ಪರಸತಿ ಬಯಕೆಯ ಸಂಹಾರ 

****

ಹಿಂದಿನ ಕಾಲದಲ್ಲಿ ಹಾಡುಗಳನ್ನು ಎರಡೆರಡು ಸಲ ರೆಕಾರ್ಡ್ ಮಾಡಲಾಗುತ್ತಿತ್ತು.  ಒಮ್ಮೆ ಸಿನಿಮಾದಲ್ಲಿ ಬಳಸಲು.  ಇನ್ನೊಮ್ಮೆ ಗ್ರಾಮೊಫೋನ್ ರೆಕಾರ್ಡಿಗಾಗಿ.  ಬಹುತೇಕ ಸಂದರ್ಭಗಳಲ್ಲಿ ಎರಡೂ ಏಕರೂಪವಾಗಿರುತ್ತಿದ್ದರೂ ಕೆಲವು ಸಲ ಸೂಕ್ಷ್ಮ ವ್ಯತ್ಯಾಸಗಳಿರುತ್ತಿದ್ದವು.  ಇಲ್ಲಿ ಆಲಿಸಿದ ಗ್ರಾಮೊಫೋನ್ ವರ್ಶನ್ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಈ ಹಾಡಿನ ಸಿನಿಮಾ ವರ್ಶನ್‌ಗಳನ್ನು ಹೋಲಿಸಿ ಎರಡರ ಮಧ್ಯೆ ಏನಾದರೂ ವ್ಯತ್ಯಾಸಗಳಿವೆಯೇ ಎಂದು ಪರಿಶೀಲಿಸಿ.

- ಚಿದಂಬರ ಕಾಕತ್ಕರ್.


1 comment:

  1. ಬರಹ ತುಂಬಾ ಚೆನ್ನಾಗಿದೆ. ಈ ಹಾಡನ್ನು ಕೇಳುವಾಗ ಶ್ರೀ ರಾಮನೇ ಕಣ್ಣ ಮುಂದೆ ಪ್ರತ್ಯಕ್ಷವಾದಂತೆ ಭಾಸವಾಗುತ್ತದೆ. ಹಾಗೂ ನನ್ನ ಬಾಲ್ಯದ ನೆನಪಾಗುತ್ತದೆ. ಆಗಿನ National Ekco valve radio ಕಣ್ಣ ಮುಂದೆ ಬರುತ್ತದೆ. ಅದರಲ್ಲಿ ಸುಸ್ಪಷ್ಟ ಧ್ವನಿಯಲ್ಲಿ ಹಾಡುಗಳನ್ನು ಆಲಿಸುವಾಗಿನ ಆನಂದವೇ ಬೇರೆ ಇತ್ತು.
    Padmanabh Kakathkar.

    ReplyDelete

Your valuable comments/suggestions are welcome