Monday, 18 March 2024

ಫೇಸ್‌ಬುಕ್ ಗಾದೆಗಳು

 



ನಾನು ಹೊಸೆದಿರುವ 25  ಫೇಸ್‌ಬುಕ್ ನಾಣ್ನುಡಿಗಳು ಇಲ್ಲಿವೆ. ಹಿಂದಿನ ಕಾಲದಲ್ಲೂ ಫೇಸ್‌ಬುಕ್ ಇದ್ದಿದ್ದರೆ ಇಂಥ ಕೆಲವಾದರೂ ಗಾದೆಗಳು ಹುಟ್ಟಿಕೊಂಡು ಕಿಟ್ಟೆಲ್ ಕೋಶದಲ್ಲಿ ಸ್ಥಾನ ಪಡೆಯುತ್ತಿದ್ದವೋ ಏನೋ!

1. ಪೋಸ್ಟಿಂಗೇವಾಧಿಕಾರಸ್ತೇ
ಮಾಲೈಕೇಷು ಕದಾಚನ.

ಪೋಸ್ಟ್ ಹಾಕುತ್ತಲೇ ಹೋಗು, ಲೈಕುಗಳನ್ನು ಲೆಕ್ಕಿಸಬೇಡ. ಇದು ಫೇಸ್ಬುಕ್ಕಿಗರ ಧ್ಯೇಯವಾಕ್ಯವಾಗಿರಬೇಕು!

2. ಲೈಕುಗಳಿಗೇ ಗತಿಯಿಲ್ಲದವನು
ಕಮೆಂಟಿಗಾಗಿ ಅತ್ತನಂತೆ.

ಸಾಮಾನ್ಯವಾಗಿ ಲೈಕುಗಳಿಗಿಂತ ಕಮೆಂಟುಗಳು ಕಮ್ಮಿ ಇರುವುದು.  ಲೈಕಿಸುವವರಿಗೇ ಗತಿ ಇಲ್ಲದಿದ್ದ ಮೇಲೆ ಕಮೆಂಟುಗಳೆಲ್ಲಿಂದ ಬಂದಾವು?

3. ಫೋಟೊ ಕದ್ದರೂ ಕಳ್ಳ,
ಪೋಸ್ಟು ಕದ್ದರೂ ಕಳ್ಳ.

ಬಹುತೇಕ ಎಲ್ಲರೂ ಫೋಟೋಗಳನ್ನು ಅಲ್ಲಿಂದ ಇಲ್ಲಿಂದ ಹಾರಿಸಿ ಬಳಸುವ ಅಭ್ಯಾಸ ಉಳ್ಳವರೇ.  ಫೋಟೋಗಳಿಗೂ ಕಾಪಿರೈಟ್ ಇದ್ದರೂ ಇದನ್ನು ಯಾರೂ ಅಷ್ಟೊಂದು ಗಂಭೀರವಾಗಿ  ಪರಿಗಣಿಸುವುದಿಲ್ಲ. ತಮ್ಮ ಫೋಟೊಗಳಿಗೆ ವಾಟರ್  ಮಾರ್ಕ್ ಅಳವಡಿಸಿ ಇದನ್ನು ಕೊಂಚ ಮಟ್ಟಿಗೆ ತಡೆಯಲೂ ಸಾಧ್ಯವಿದೆ. ಆದರೆ ಬರಹಗಳನ್ನು ಕದಿಯುವುದು ಖಂಡಿತ ತಪ್ಪು.  ಇತರರ FB ಪೋಸ್ಟುಗಳನ್ನು  ಕದ್ದು ತಮ್ಮದೆಂಬಂತೆ ಬಿಂಬಿಸುವವರ ಸಂಖ್ಯೆ ಸಾಕಷ್ಟಿದೆ.  ಸುಲಭದಲ್ಲಿ  Copy  Paste ಮಾಡಲು   ಸಾಧ್ಯವಾಗುವುದು ಅಂಥವರಿಗೊಂದು ವರದಾನವಿದ್ದಂತೆ. ನೇರವಾಗಿ FBಯಲ್ಲಿ ಬರೆಯದೆ ತಮ್ಮದೇ ಒಂದು ಬ್ಲಾಗ್ ಮಾಡಿಕೊಂಡರೆ ಅದರಿಂದ Copy Paste  ಮಾಡದಂತೆ ತಡೆಯುವ ಅನುಕೂಲ ಇರುತ್ತದೆ. ನಾನಿಲ್ಲಿ ಮಾಡಿದಂತೆ ಬರಹದ ಲಿಂಕ್  ಫೇಸ್‌ಬುಕ್ಕಲ್ಲಿ ಒದಗಿಸಿ ಜನರಿಗೆ   ತಲುಪುವಂತೆ ಮಾಡಬಹುದು.   ತಾವೇ ಸ್ವತಃ ಟೈಪಿಸಿ ಮರುಬಳಕೆ ಮಾಡುವಷ್ಟು ತಾಳ್ಮೆ, ವ್ಯವಧಾನ ಕಳ್ಳರಿಗೆ ಇರುವುದಿಲ್ಲ.

4. ಪೋಸ್ಟಿನ ಗುಣ ಕಮೆಂಟಲ್ಲಿ ನೋಡು.

ಕೆಲವರು ಕಾಟಾಚಾರಕ್ಕೆ ಕಮೆಂಟ್ ಮಾಡುತ್ತಾರಾದರೂ ಪೋಸ್ಟಿನ ಮೌಲ್ಯವರ್ಧನೆ ಆಗುವಂಥ ಕಮೆಂಟ್ ಬರೆಯುವವರೂ  ತುಂಬಾ ಮಂದಿ ಇದ್ದಾರೆ.

5. ಅತ್ತೂ ಕರೆದು ಲೈಕ್ ಹಾಕಿಸಿಕೊಂಡರು.

ಲೈಕ್ ಮಾಡಿ, ಕಮೆಂಟ್ ಮಾಡಿ, share ಮಾಡಿ ಎಂದು ಬೇಡುತ್ತಾ ಗೋಗರೆಯುವ ಕೆಲವರನ್ನು ನೀವೂ ನೋಡಿರುತ್ತೀರಿ.  ನನಗಂತೂ ಅವರನ್ನು, ಅವರ ಪೋಸ್ಟುಗಳನ್ನು ಕಂಡರಾಗುವುದಿಲ್ಲ. ಈಗ ಲೈಕುಗಳು ಕೊಳ್ಳಲೂ ಸಿಗುತ್ತವಂತೆ! 

6. ಹುಳಿ ರುಚಿಯೆಲ್ಲವೂ ಮಜ್ಜಿಗೆಯಲ್ಲ,
ಲೈಕುಗಳೆಲ್ಲವೂ ಮೆಚ್ಚುಗೆಯಲ್ಲ.

ಪೋಸ್ಟುಗಳಿಗೆ ಬಿದ್ದ ಲೈಕುಗಳೆಲ್ಲ ಮನದಾಳದ ಮೆಚ್ಚುಗೆ ಎಂದೇನೂ ತಿಳಿಯಬೇಕಾಗಿಲ್ಲ.  ಹೆಚ್ಚಿನವರು ದಾಕ್ಷಿಣ್ಯಕ್ಕೆ ಲೈಕ್ ಒತ್ತಿ ಬಿಡುತ್ತಾರೆ.  ಲೈಕ್ ಒತ್ತದೆ, ಕಮೆಂಟ್ ಬರೆಯದೇ ಇದ್ದೂ ಪೋಸ್ಟನ್ನು ಪೂರ್ತಿ ಓದಿ ಆನಂದಿಸುವವರೂ ಅನೇಕರಿರುತ್ತಾರೆ.  ಮುಖತಾ ಸಿಕ್ಕಿದಾಗ ಈ ಬಗ್ಗೆ ಹೇಳುತ್ತಾರೆ ಕೂಡ.

7. ಸಿಟ್ಟಿಗೆ ಹತ್ತು ಎಣಿಸು, ಪೋಸ್ಟಿಗೆ ನೂರು ಎಣಿಸು.

ಕೆಲವೊಮ್ಮೆ ಯಾವುದೋ ವಿಷಯದ ಬಗ್ಗೆ ಪೋಸ್ಟ್ ಹಾಕಬೇಕೆಂಬ ತೀವ್ರ ತುಡಿತ ಉಂಟಾಗುತ್ತದೆ.  ಅದು ನಾಲ್ಕು ಜನರು ನೋಡಲು ಯೋಗ್ಯವೇ, ಯಾರಿಗಾದರೂ ಅದರಿಂದ ಉಪಯೋಗವಿದೆಯೇ ಎಂದು ಯೋಚಿಸದೆ ಪೋಸ್ಟ್ ಮಾಡಿಯೇ ಬಿಡುತ್ತೇವೆ. ಅಂಥ ಸಮಯದಲ್ಲಿ ನೂರು ಎಣಿಸುವಷ್ಟು ಸಮಯ ಸುಮ್ಮನಿದ್ದರೆ ಹೆಚ್ಚಿನ ಸಲ ಅದು ಸಾರಹೀನ  ಎಂದು ನಮಗೇ ಅರಿವಾಗಿ  ಅದನ್ನು ಪೋಸ್ಟ್ ಮಾಡುವ ಆಲೋಚನೆಯೇ ಬಿದ್ದು ಹೋಗುತ್ತದೆ. ಕಮೆಂಟುಗಳಿಗೂ ಇದು ಅನ್ವಯಿಸುತ್ತದೆ.

8. ಪೋಸ್ಟೇ ಓದದೆ ಕಮೆಂಟ್ ಬರೆದಂತೆ.

ಇಂಥವರು ಬಹಳ ಮಂದಿ ಇದ್ದಾರೆ.  ಒಂದೋ ಏನಾದರೂ ಅಸಂಬದ್ಧವಾದದ್ದನ್ನು ,ಇಲ್ಲವೇ ಪೋಸ್ಟಲ್ಲಿ ಇದ್ದ ವಿಚಾರವನ್ನೇ ಕಮೆಂಟ್ ರೂಪದಲ್ಲಿ ಬರೆಯುತ್ತಾರೆ.

9. ಸ್ವಂತ Post ಹಾಕದಿದ್ದರೆ  forward ಆದರೂ ಮಾಡು.

ಸ್ವತಃ ಒಂದೂ ಪೋಸ್ಟ್ ಹಾಕದೆ ಅಲ್ಲಿ ಇಲ್ಲಿ ಕಂಡದ್ದನ್ನೆಲ್ಲ forward  ಮಾಡುವವರ ಸಂಖ್ಯೆ ದೊಡ್ಡದಿದೆ.  FBಯಲ್ಲಾದರೆ ಅಂಥವರನ್ನು unfollow ಆದರೂ ಮಾಡಬಹುದು.  ಆದರೆ Whatsappನಲ್ಲಿ ಹೀಗೆ ಮಾಡುವ ಅನುಕೂಲ ಇಲ್ಲದ್ದರಿಂದ ಇಂಥವರಿಗೆ ಒಂದೆರಡು ಸಲ ನಯವಾಗಿ ಹೇಳಿ ಪ್ರಯೋಜನವಾಗದಿದ್ದರೆ ಬ್ಲಾಕ್ ಮಾಡಬೇಕಾಗುತ್ತದೆ.  ಗ್ರೂಪುಗಳಲ್ಲಿ ಇಂಥವರ ಹಾವಳಿ ಜಾಸ್ತಿ. ಕೆಲವರಿಗಂತೂ ದಿನಾ ಎಲ್ಲರಿಗೂ good morning, good night ಮೆಸೇಜ್ ಕಳಿಸದಿದ್ದರೆ ನಿದ್ದೆಯೇ ಹತ್ತುವುದಿಲ್ಲವೇನೋ!

10. ಲೈಕಿಗೂ ಲಾಯಕಲ್ಲದ್ದಕ್ಕೆ ಕಮೆಂಟೇ?

ಲೈಕಿಗೂ ಲಾಯಕಲ್ಲದ ಪೋಸ್ಟುಗಳು ಕಾಣಸಿಗುವುದು ಅಪರೂಪವೇನಲ್ಲ. ಇಂಥವಕ್ಕೂ ಇಂದ್ರ ಚಂದ್ರ ಎಂದು ಹೊಗಳಿ ಕಮೆಂಟ್ ಮಾಡುವವರೂ ಬೇಕಾದಷ್ಟಿದ್ದಾರೆ.

11. ಪೋಸ್ಟೇ ಹಾಕದವನಿಗೆ FB ಗೊಡವ ಏಕೆ?

ನಮ್ಮ ಫ್ರೆಂಡ್ ಲಿಸ್ಟ್ ಮೇಲೆ ಕಣ್ಣಾಡಿಸಿದರೆ 75 ಶೇಕಡಾಕ್ಕಿಂತ ಹೆಚ್ಚು ಮಂದಿ ಸುಪ್ತ ಸ್ಥಿತಿಯಲ್ಲಿರುವುದು ಕಂಡು ಬರುತ್ತದೆ.  ಅವರೇಕೆ FBಯಲ್ಲಿರುತ್ತಾರೋ, ಏಕೆ ಫ್ರೆಂಡ್  ಆಗಿರುತ್ತಾರೋ.  ಸ್ವಚ್ಛತಾ ಅಭಿಯಾನ ಕೈಗೊಂಡು ಪಟ್ಟಿಯಿಂದ ಕಿತ್ತು ಹಾಕಿದರೂ ಮತ್ತೆ friend request ಕಳಿಸುತ್ತಾರೆ!

12. ಹೊಟ್ಟೆಗೆ ಹಿಟ್ಟಿನ ಆಸೆ,
ಪೋಸ್ಟಿಗೆ ಲೈಕಿನ ಆಸೆ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ                                                          
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ
ತಿನ್ನುವುದಾತ್ಮವನೆ ಮಂಕುತಿಮ್ಮ
ಎಂದು ಡಿ.ವಿ.ಜಿ. ಹೇಳಿದಂತೆ ಪೋಸ್ಟ್ ಹಾಕಿದಾಕ್ಷಣ ಧಬಧಬನೆ ಲೈಕುಗಳು ಬೀಳಲಿ ಎಂದು ಆಶಿಸದವರು ಯಾರೂ ಇರಲಾರರು.


13. ಗಟ್ಟದ ಪೋಸ್ಟು, ಬೆಟ್ಟದ ಲೈಕು.

ಸಮೀಪದ  ಬಂಧುಬಳಗ, ಇಷ್ಟಮಿತ್ರರಿಗಿಂತ ಗುರುತು ಪರಿಚಯವಿಲ್ಲದ ದೂರದವರೇ ಹೆಚ್ಚಾಗಿ ಪೋಸ್ಟುಗಳನ್ನು ಮನಸಾರೆ ಮೆಚ್ಚಿ ಪ್ರತಿಕ್ರಿಯಿಸುವುದು. ಹಿತ್ತಲ ಗಿಡ ಯಾವತ್ತಿಗೂ ಮದ್ದಲ್ಲ !

14. ಲೈಕು ಬರದ್ದು ನೋಡಿ ಪೋಸ್ಟೇ ಅಳಿಸಿದನಂತೆ.

ಪೋಸ್ಟು ಹಾಕಿ ಎಷ್ಟು ಹೊತ್ತಾದರೂ ಒಂದೂ ಲೈಕ್ ಬೀಳದಿದ್ದರೆ ಅದು ಪಾಯಿಂಟ್ ನಂಬರ್ ಏಳನ್ನು ಅನುಸರಿಸದಿದ್ದುದರ ಪರಿಣಾಮ ಎಂದು ತಿಳಿಯಬೇಕು. Better late than never ಎಂಬಂತೆ ಆ ಮೇಲಾದರೂ ಆ ಪೋಸ್ಟ್ ಕಿತ್ತು ಹಾಕಿ ಮರ್ಯಾದೆ ಉಳಿಸಿಕೊಳ್ಳುವುದು ಕ್ಷೇಮಕರ. ಅದನ್ನೇ  ಸ್ಟೋರಿ ರೂಪದಲ್ಲೂ ಹಾಕಿದ್ದರೆ ಎಷ್ಟು ಮಂದಿ ನೋಡಿಯೂ ನೋಡದವರಂತೆ ಮುಖ ತಿರುಗಿಸಿದರು ಎಂಬುದರ ಚಿತ್ರಣವೂ ಸಿಗುತ್ತದೆ!

15. FB ಮಿತ್ರ ಕಂಡರೂ ಪರಾಂಬರಿಸಿ ನೋಡು.

ಅನೇಕ ಸಲ ಫೇಸ್‌ಬುಕ್ ಮಿತ್ರರು ಎದುರಿಗೆ ಸಿಕ್ಕಾಗ ಗುರುತೇ ತಿಳಿಯುವುದಿಲ್ಲ.  FB DPಯಲ್ಲಿ ಯಾವುದೋ ಹಳೆ ಫೋಟೊ ಹಾಕಿರುತ್ತಾರೆ.  ಕೆಲವು ಸಲ ಅವರೇ ‘ಗುರುತು ಸಿಕ್ಕಿತೇ’ ಎಂದು ಕೇಳಿದಾಗ ತುಂಬಾ ಇರಿಸು ಮುರುಸಾಗುವುದುಂಟು!


16. ತಾನು ಲೈಕ್ ಮಾಡದವ
ತನಗೆ ಲೈಕ್ ಗಳಿಸ್ಯಾನೆಯೇ?

ನೀ ನನಗಿದ್ದರೆ ನಾ ನಿನಗೆ.  ಇತರರ ಪೋಸ್ಟುಗಳತ್ತ ಕಣ್ಣೆತ್ತಿಯೂ ನೋಡದವನು, ನೋಡಿದರೂ ನೋಡದವಂತೆ ನಟಿಸುವವನು ತನ್ನ ಪೋಸ್ಟನ್ನು ಅವರು ನೋಡಬೇಕು, ಲೈಕ್ ಮಾಡಬೇಕು, ಕಮೆಂಟ್ ಬರೆಯಬೇಕು ಎಂದು ಅಪೇಕ್ಷಿಸುವುದು ತಪ್ಪಾಗುತ್ತದೆ.

17. ಪ್ರೊಫೈಲ್ ಮುಚ್ಚಿಟ್ಟು
ಫ್ರೆಂಡ್ ರಿಕ್ವೆಸ್ಟ್ ಕಳಿಸಿದಂತೆ.

ಇತ್ತೀಚೆಗೆ ಹೀಗೆ ಮಾಡುವವರ ಸಂಖ್ಯೆ ಸಂಖ್ಯೆ ತುಂಬಾ ಜಾಸ್ತಿಯಾಗಿದೆ.  ಪ್ರೊಫೈಲ್ ಮುಚ್ಚಿಟ್ಟರೂ ತನ್ನ ಗುರುತು ಪರಿಚಯ ಮತ್ತು  ಇಂಥ ಕಾರಣಕ್ಕಾಗಿ ಮಿತ್ರತ್ವ ಬಯಸಿದ್ದೇನೆ ಎಂಬ ವಿವರಗಳ ಮೆಸೇಜ್ ಕಳಿಸಿದರೆ ಒಳ್ಳೆಯದು.

18. ಜೀವನದಲ್ಲಿ ಸಂಸಾರ ಗುಟ್ಟು, ರೋಗ ರಟ್ಟು,
FBಯಲ್ಲಿ  ಸಂಸಾರ ರಟ್ಟು, ರೋಗ ಗುಟ್ಟು.


ಸಂಸಾರದ ರಹಸ್ಯಗಳನ್ನು ಗುಟ್ಟಾಗಿರಿಸಿಕೊಂಡು ರೋಗ ರುಜಿನಗಳೇನಾದರೂ ಬಂದರೆ ಎಲ್ಲರಿಗೂ ತಿಳಿಸುವುದು ಹಿಂದಿನ ಪದ್ಧತಿ.  ಅಸೌಖ್ಯ ಉಂಟಾದಾಗ  ಆಪ್ತರ ಅನುಭವದ  ಸಲಹೆಗಳು ಉಪಯುಕ್ತವೆನಿಸಬಹುದು ಎಂದು ಇದರ ಹಿಂದಿನ ಆಶಯ. ಆದರೆ ಈಗ ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ್ದನ್ನು FBಯಲ್ಲಿ ಬಟಾಬಯಲು ಮಾಡುವುದು,  ರೋಗ ರುಜಿನ ಬಂದಾಗ ಯಾರಿಗೂ ಹೇಳದೆ ನೇರವಾಗಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಹೋಗುವುದು!


19. ದಿನಾ ಪೋಸ್ಟ್ ಹಾಕುವವರಿಗೆ
ಲೈಕ್ ಒತ್ತೋರ್ಯಾರು, ಕಮೆಂಟ್ ಬರಿಯೋರ್ಯಾರು?

ಅತಿ ಪರಿಚಯಾತ್ ಅವಜ್ಞಾ ಎಂದು ಒಂದು ಸುಭಾಷಿತದಲ್ಲಿ ಹೇಳಿದಂತೆ ಪೋಸ್ಟಿನ ಮೇಲೆ ಪೋಸ್ಟು ಹಾಕುತ್ತಲೇ ಇರುವವರ ಬಗ್ಗೆ ಸಹಜವಾಗೇ ಆದರ ಕಮ್ಮಿಯಾಗುತ್ತದೆ.  ಅಂಥವರು  unfriend ಆಗದಿದ್ದರೂ unfollow ಆಗುವ ಸಾಧ್ಯತೆ ಹೆಚ್ಚು.

20. ಬಡ್ಡಿಯಾಸೆಗೆ ಬಿದ್ದು  ಹಣ ಹೂಡ ಬೇಡ,
Facebook ಫ್ರೆಂಡಲ್ಲಿ ಹಣ ಬೇಡ ಬೇಡ.

FBಯ ಮಿತ್ರತ್ವ ಮತ್ತು ವೈಯಕ್ತಿಕ ಸಂಬಂಧಗಳ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಿರಬೇಕು.  FB ಫ್ರೆಂಡ್‌ಗಳಲ್ಲಿ ಎಂದೂ ಹಣಕ್ಕಾಗಿ ಬೇಡಿಕೆ ಇಡಬಾರದು.  ನಕಲಿ ಅಕೌಂಟ್ ಸೃಷ್ಟಿಸಿ ಈ ರೀತಿ ಹಣ ದೋಚುವ ಧಂಧೆಯೂ ಇತ್ತೀಚೆಗೆ ನಡೆಯುತ್ತಿದೆ.  ಕುಟುಂಬ ಸಮೇತ  ಪ್ರವಾಸ ಇತ್ಯಾದಿ ಹಮ್ಮಿಕೊಂಡು FBಯಲ್ಲಿ ಫ್ರೆಂಡ್ ಆಗಿರುವವರ ಮನೆಯಲ್ಲಿ ಠಿಕಾಣಿ ಹೂಡುವುದು ಇತ್ಯಾದಿ ಕೂಡ ಮಾಡಬಾರದು.  ಇದಕ್ಕೆ ಅಪವಾದಗಳಿದ್ದು ಸ್ವಂತ ಬಂಧು ಬಳಗಕ್ಕಿಂತ ಹೆಚ್ಚಾಗಿ ಆದರಿಸುವ FB ಫ್ರೆಂಡುಗಳೂ ಇರಬಹುದು.

21. ಫ್ರೆಂಡ್ ರಿಕ್ವೆಸ್ಟ್ ಕಳಿಸಿ
unfollow ಮಾಡಿದನಂತೆ.

ಇದು ಕೆಲವೊಮ್ಮೆ ಅನಿವಾರ್ಯವೆನಿಸುವ ಕಾರ್ಯ.  ಯಾರದೋ ಪೋಸ್ಟೊಂದನ್ನು ನೋಡಿ ಅವರಿಗೆ friend request ಕಳಿಸುತ್ತೇವೆ.  ಸ್ವೀಕೃತವೂ ಆಗುತ್ತದೆ.  ಮರುದಿನದಿಂದ ದಿನಕ್ಕೆ ಹತ್ತಿಪ್ಪತ್ತರಂತೆ ಆತನ ಪೋಸ್ಟುಗಳು ಬಂದು ಬೀಳತೊಡಗುತ್ತವೆ. ಒಂದಾದರೂ ನಮಗೆ ಆಸಕ್ತಿ  ಇರುವ ವಿಷಯದ್ದಲ್ಲ.  ಆಗ unfollow ಮಾಡದೆ ಏನು ಮಾಡಲಾದೀತು!

22. ಸೆಕ್ಯುರಿಟಿ ಸೆಟ್ಟಿಂಗ್ ಸರಿಯಾಗಿ ಮಾಡದೆ
ಅಕೌಂಟ್ ಹ್ಯಾಕ್ ಆಯಿತೆಂದು ಹುಯಿಲೆಬ್ಬಿಸಿದನಂತೆ.

ಸೂಕ್ತ password ಅಳವಡಿಕೆ , ಸೆಕ್ಯುರಿಟಿ ಆಪ್ಷನುಗಳಲ್ಲಿ ಸಾಧ್ಯವಾದಲ್ಲೆಲ್ಲ only me ಆಯ್ಕೆ ಇತ್ಯಾದಿ ಮಾಡದಿದ್ದರೆ ಇತರರು ನಮ್ಮ ಮೇಲೆ ಸವಾರಿ ಮಾಡುವ ಸಾಧ್ಯತೆ ಜಾಸ್ತಿ. ಯಾವ್ಯಾವ ಡಿವೈಸುಗಳಿಂದ  ನಮ್ಮ ಅಕೌಂಟಿಗೆ ಲಾಗಿನ್ ಮಾಡಲಾಗಿದೆ ಎಂದು ನೋಡುವ ಸೌಲಭ್ಯವನ್ನೂ ಉಪಯೋಗಿಸಬೇಕು.  ನಾವು ಸಾಮಾನ್ಯವಾಗಿ ಬಳಸದ ಡಿವೈಸಿನಿಂದ ಲಾಗಿನ್ ಆದ ಬಗ್ಗೆ ಸಿಸ್ಟಮಿನಿಂದ ಮೆಸೇಜ್ ಏನಾದರೂ ಬಂದರೆ ಅದನ್ನು ಅವಗಣಿಸಬಾರದು.
 
23. ಕಮೆಂಟಲ್ಲಿ ಹೊಗಳು
ಮೆಸೇಜಲ್ಲಿ ತೆಗಳು.

ಎದುರು ತೆಗಳಬೇಕು, ಹಿಂದೆ ಹೊಗಳಬೇಕು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ.  ಆದರೆ ಫೇಸ್‌ಬುಕ್‌ನ  ವಿಷಯಕ್ಕೆ ಬಂದಾಗ ಒಂದು ಪೋಸ್ಟ್ ಮೆಚ್ಚಿಗೆಯಾದರೆ ಎಲ್ಲರಿಗೂ ತಿಳಿಯುವಂತೆ ಕಮೆಂಟ್ ರೂಪದಲ್ಲಿ ಅದನ್ನು ವ್ಯಕ್ತಪಡಿಸಬೇಕು. ಏನಾದರೂ ತಪ್ಪು ಕಂಡರೆ ಅವರಿಗೆ ಮಾತ್ರ ತಿಳಿಯುವಂತೆ ಇನ್ ಬಾಕ್ಸ್ ಮಾಡುವುದು ಸೌಜನ್ಯ.  ನಾನಂತೂ ಹೀಗೆಯೇ ಮಾಡುವುದು.

24. ಹಣ ಹೆಚ್ಚಾದರೆ ಕಳ್ಳರ ಕಾಟ
ಫ್ರೆಂಡ್ಸ್ ಹೆಚ್ಚಾದರೆ ಹ್ಯಾಕರ್ಸ್ ಕಾಟ.

ಫ್ರೆಂಡ್ಸ್ ಸಂಖ್ಯೆಯನ್ನು ಸಾಧ್ಯವಾದಷ್ಟು ಸೀಮಿತವಾಗಿರಿಸುವುದೂ ಒಳ್ಳೆಯದು.  ಹೆಚ್ಚಿನ ಫ್ರೆಂಡ್ಸ್ ಇರುವವರು ಹೆಚ್ಚು ಪ್ರಸಿದ್ಧರು ಎಂದು ತಿಳಿದು ಅಂಥವರನ್ನು ದುಷ್ಕರ್ಮಿಗಳು ಗುರಿಯಾಗಿಸುವ ಸಂಭವ ಹೆಚ್ಚಂತೆ.

25. FBಯಲ್ಲೇ ಇಲ್ಲದವನಿಗೆ
ಲೈಕೇನು ಕಮೆಂಟೇನು?

ಫೇಸ್ ಬುಕ್, Whatsapp ಇತ್ಯಾದಿಗಳ ಗೊಡವೆಯೇ ಇಲ್ಲದೆ ಹಾಯಾಗಿರುವ ಲಕ್ಷಾಂತರ ಮಂದಿ ಈಗಲೂ ಇದ್ದಾರೆ.  ಅಂಥವರಿಗೆ ಪೋಸ್ಟ್, ಲೈಕ್, ಕಮೆಂಟ್ ಯಾವುದರ ಹಂಗೂ ಇಲ್ಲ. ಈ ಬರಹವೂ ಅವರಿಗಲ್ಲ!

------

ಈ ಲೇಖನ 24-11-2024ರ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಾಪ್ತಾಹಿಕ  ಸೌರಭದಲ್ಲೂ ಪ್ರಕಟವಾಯಿತು.

ಇದರ ಮೇಲೆ ಕ್ಲಿಕ್ಕಿಸಿ ಹಿಗ್ಗಿಸಿ ಓದಬಹುದು.







22 5 22

No comments:

Post a Comment

Your valuable comments/suggestions are welcome