ಮಾಳದ ರಾಜಾರಾಮ ಬಸ್ಸಿನಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಕಂಡಕ್ಟರ್ ಬಗ್ಗೆ FBಯಲ್ಲಿ ಇತ್ತೀಚೆಗೆ ಕೆಲವು ಪೋಸ್ಟುಗಳು ಕಾಣಿಸಿದ್ದವು. . ಅವುಗಳನ್ನು ಓದಿ ನಮ್ಮ ಅಕ್ಕನ ಮನೆ ಇರುವ ಮಾಳದ ಯಾನಗಳ ಹಳೆ ಕಾಲದ ಅಂದರೆ 1950ರ ದಶಕದ ಉತ್ತರಾರ್ಧ ಮತ್ತು 60ರ ದಶಕದ ನೆನಪುಗಳು ನನ್ನ ಮನಸ್ಸಿನಲ್ಲಿ ಮರುಕಳಿಸಿದವು.
1970ರ ದಶಕದ ಆದಿ ಭಾಗದಲ್ಲಿ ವಿನಾಯಕ ಮತ್ತು ರಾಜಾರಾಮ ಬಸ್ಸು ಸರ್ವೀಸ್ ಆರಂಭವಾಗುವುದಕ್ಕಿಂತ ಮೊದಲು ಕೆಲವು ದಶಕಗಳ ಕಾಲ ಮಾಳ ಕಾರ್ಕಳಗಳ ನಡುವೆ ನಿಗದಿತ ಸಮಯಕ್ಕೆ ಓಡಾಡುತ್ತಾ ಸಾರಿಗೆ ಸೇವೆ ಒದಗಿಸಿದ್ದ 'ಕಜೆ ಕಾರು' ಎಂದು ಪ್ರಸಿದ್ಧವಾಗಿದ್ದ ಮಹಾದೇವ ಮರಾಠೆಯವರ ಕಪ್ಪು ಬಣ್ಣದ ಕಾರು ನನಗೆ ಹೆಚ್ಚು ನೆನಪಾಗುವುದು. ಅದು ಅಂಬಾಸೆಡರಿನ ಪೂರ್ವಾವತಾರವಾದ ಹಿಂದುಸ್ಥಾನ್ ಆಗಿತ್ತೇ ಅಥವಾ ಹಾಗೆಯೇ ಕಾಣಿಸುತ್ತಿದ್ದ ಆಸ್ಟಿನ್ ಆಫ್ ಇಂಗ್ಲಂಡ್ ಆಗಿತ್ತೇ ಎಂದು ನನಗೆ ನೆನಪಿಲ್ಲ. ನಾವು 6 ಗಂಟೆಗೆ ಮನೆಯಿಂದ ಹೊರಟು ಮೃತ್ಯುಂಜಯಾ ಮತ್ತು ನೇತ್ರಾವತಿ ನದಿಗಳನ್ನು ದಾಟಿ ನಿಡ್ಗಲನ್ನು ಬೈಪಾಸ್ ಮಾಡಿ ಒಳದಾರಿಯಲ್ಲಿ ಟಾರು ರಸ್ತೆ ಸೇರಿ ಉಜಿರೆಗೆ ನಡೆದು ಅಲ್ಲಿಂದ 7 ಗಂಟೆಗೆ ಹೊರಡುವ ವೆಂಕಟೇಶ ಬಸ್ಸಿನಲ್ಲಿ 9-30ರ ಸುಮಾರಿಗೆ ಕಾರ್ಕಳ ತಲುಪಿ ಬಸ್ಟಾಂಡ್ ಸಮೀಪದ ಉಡುಪಿ ಹೋಟಲಿನಲ್ಲಿ ಬನ್ಸ್ ಕಾಪಿ ಸೇವಿಸಿ ಅನಂತಶಯನ ತಲುಪುವಾಗ ಕಜೆ ಕಾರು ಹೊರಡಲು ತಯಾರಾಗಿರುತ್ತಿತ್ತು.
ನಾನು ಯಾವಾಗಲೂ ಎದುರಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಹಾದೇವ ಮರಾಠೆಯವರು ಸ್ವಲ್ಪ ವಾಚಾಳಿ. ಕಾರಿನಲ್ಲಿರುತ್ತಿದ್ದ ಯಾರಾದರೂ ಊರಿನ ಓರಗೆಯವರೊಡನೆ ಮಾತಾಡುತ್ತಲೇ ಇರುತ್ತಿದ್ದರು. ಇಂಧನ ಉಳಿಸಲೆಂದು ಇಳಿಜಾರಿನಲ್ಲಿ ಎಂಜಿನ್ ಆಫ್ ಮಾಡುತ್ತಿದ್ದರು. ಕಾರ್ಕಳದಿಂದ ಮಲ್ಲಾರಿಗೆ ಆಗ ಒಂದು ರೂಪಾಯಿ ಚಾರ್ಜು. ಮಲ್ಲಾರಿನಲ್ಲಿ ಕಾರಿನಿಂದ ಇಳಿದು ಏರು ಹಾದಿಯಲ್ಲಿ ನಡೆಯುತ್ತಾ ಶಿವೇತೋಟದ ಅಕ್ಕನ ಮನೆಗೆ ಹೋಗುವುದು.
ನಾನು ಯಾವಾಗಲೂ ಎದುರಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಹಾದೇವ ಮರಾಠೆಯವರು ಸ್ವಲ್ಪ ವಾಚಾಳಿ. ಕಾರಿನಲ್ಲಿರುತ್ತಿದ್ದ ಯಾರಾದರೂ ಊರಿನ ಓರಗೆಯವರೊಡನೆ ಮಾತಾಡುತ್ತಲೇ ಇರುತ್ತಿದ್ದರು. ಇಂಧನ ಉಳಿಸಲೆಂದು ಇಳಿಜಾರಿನಲ್ಲಿ ಎಂಜಿನ್ ಆಫ್ ಮಾಡುತ್ತಿದ್ದರು. ಕಾರ್ಕಳದಿಂದ ಮಲ್ಲಾರಿಗೆ ಆಗ ಒಂದು ರೂಪಾಯಿ ಚಾರ್ಜು. ಮಲ್ಲಾರಿನಲ್ಲಿ ಕಾರಿನಿಂದ ಇಳಿದು ಏರು ಹಾದಿಯಲ್ಲಿ ನಡೆಯುತ್ತಾ ಶಿವೇತೋಟದ ಅಕ್ಕನ ಮನೆಗೆ ಹೋಗುವುದು.
ನಾನು ಮೊದಲ ಸಲ ಅವರ ಕಾರಲ್ಲಿ ಕುಳಿತದ್ದು ಅಕ್ಕನ ಹಿರಿ ಮಗನ ಮುಂಜಿಗೆ ಹೋದಾಗ. ಆ ಸಲ ಉಜಿರೆಯಿಂದ 10-30ಕ್ಕೆ ಹೊರಡುವ, ಅದ್ರಾಮರು ಡ್ರೈವರ್ ಆಗಿದ್ದ ಪಿ.ವಿ. ಬಸ್ಸಿನಲ್ಲಿ ಬಂದದ್ದು. ಅದು 1-30ಕ್ಕೆ ಕಾರ್ಕಳ ತಲುಪುತ್ತಿತ್ತು. ಅದ್ರಾಮ ಬಲು ನಿಧಾನಿ. ಅವರ ಬಸ್ಸು ಏರಿನಲ್ಲಿ ಸಾಗುವಾಗ ಕೆಳಗಿಳಿದು ಪ್ರಕೃತಿಯ ಕರೆಗೆ ಓಗೊಟ್ಟು ಓಡಿ ಬಂದು ಮತ್ತೆ ಹತ್ತಿಕೊಳ್ಳಬಹುದು ಎಂದು ಜನರು ಹೇಳುವುದಿತ್ತು. ವೆಂಕಟೇಶ ಬಸ್ಸಿಗೆ ಅವರ ತಮ್ಮ ಡ್ರೈವರ್. ವೇಗದ ವಿಷಯದಲ್ಲಿ ಆತ ತದ್ವಿರುದ್ಧ. ಮೂಡುಬಿದ್ರೆ ಬೆಳುವಾಯಿಗಳ ಮಧ್ಯದ ನೇರ ರಸ್ತೆಯಲ್ಲಿ ಆ ಶರವೇಗದ ಸರದಾರನ ಡ್ರೈವಿಂಗ್ ರೋಮಾಂಚನ ಉಂಟುಮಾಡುತ್ತಿತ್ತು. ಪಿ.ವಿ ಮತ್ತು ವೆಂಕಟೇಶ್ ಎರಡೂ ಫಾರ್ಗೊ ಎಂಜಿನ್ ಹೊಂದಿದ್ದ ಬಸ್ಸುಗಳು. ಪಿ.ವಿ ಬಸ್ಸು ಉಪ್ಪಿನಂಗಡಿ - ಧರ್ಮಸ್ಥಳ - ಕಾರ್ಕಳ ಮತ್ತು ವೆಂಕಟೇಶ್ ಧರ್ಮಸ್ಥಳ - ಕುಂದಾಪುರ ಮಧ್ಯೆ ದಿನಕ್ಕೊಂದೊಂದು ಟ್ರಿಪ್ ಮಾಡುತ್ತಿದ್ದುದು.
ನಮ್ಮನ್ನು ಉಜಿರೆಯಿಂದ ಕಾರ್ಕಳಕ್ಕೊಯ್ಯುತ್ತಿದ್ದ ಅದ್ರಾಮರ ಪಿ.ವಿ.ಮೋಟರ್ ಮತ್ತು ಅವರ ತಮ್ಮ ಸಾರಥಿಯಾಗಿದ್ದ ವೆಂಕಟೇಶ್ ಬಸ್ಸುಗಳು.
ಕಾರ್ಕಳ ತಲುಪಿದೊಡನೆ ದುಗ್ಗಿ ಬಾಯಿಯವರ ಹೋಟೆಲಿನಲ್ಲಿ ಊಟ ಪೂರೈಸಿ ಕಜೆ ಕಾರಿನ ಮಧ್ಯಾಹ್ನದ ಟ್ರಿಪ್ಪಿನಲ್ಲಿ ಮಾಳಕ್ಕೆ ಹೋದದ್ದು. 7-8 ವರ್ಷದವನಾಗಿದ್ದ ನಾನು ಆ ದಿನ ತಂದೆಯವರ ಒಟ್ಟಿಗೆ ಹಿಂದಿನ ಸೀಟಲ್ಲಿ ಕುಳಿತಿದ್ದೆ. ಅಲ್ಲಿ ಕಾಲಿಡುವಲ್ಲಿ ಒಂದು ಅಡಿಕೆ ಮರ ಉದ್ದಕ್ಕೆ ಇಟ್ಟ ಹಾಗೆ ನನಗೆ ಅನಿಸಿತ್ತು!
ಅದಕ್ಕಿಂತ ಮೊದಲು ಉನ್ನಿ ಎಂಬವರ ಕಾರು ಸರ್ವೀಸ್ ಇತ್ತಂತೆ. ಅದು ನಡು ದಾರಿಯಲ್ಲಿ ಕೆಟ್ಟರೆ ಬಿಳಲುಗಳ ಕಟ್ಟ ಹಾಕಿ ಓಡಿಸುವಷ್ಟು ಅವರು ನಿಪುಣರಾಗಿದ್ದರು ಎಂದು ಜನರಾಡಿಕೊಳ್ಳುವುದಿತ್ತು. ಒಂದು ಶೆವರ್ಲೆ (ನಾವು ಚವರ್ಲೆಟ್ ಎಂದು ಉಚ್ಚರಿಸುತ್ತಿದ್ದುದು) ವ್ಯಾನ್ ಸರ್ವಿಸ್ ಕೂಡ ಇತ್ತು. ಅದನ್ನು 'ಟೇಕ್ಸಿ‘ ಎಂದು ಕರೆಯುತ್ತಿದ್ದರು. ರಿಟರ್ನ್ ಜರ್ನಿಗೆ ನಾವು ಈ ಟೇಕ್ಸಿಯನ್ನೇ prefer ಮಾಡುತ್ತಿದ್ದೆವು. ಆದರೆ ಕಾರ್ಕಳದಿಂದ ಮಾಳಕ್ಕೆ ನಾನು ಒಮ್ಮೆಯೂ ಅದರಲ್ಲಿ ಹೋದದ್ದಿಲ್ಲ.
ಶೆವರ್ಲೆ ವ್ಯಾನ್ ಹೀಗಿತ್ತು.
ಶೆವರ್ಲೆ ವ್ಯಾನ್ ಹೀಗಿತ್ತು.
ಕಾರ್ಕಳದಿಂದ ಮಾಳಕ್ಕೆ ಆಗ ಇದ್ದದ್ದು ಮಣ್ಣಿನ ರಸ್ತೆಯಾದರೂ ಚೆನ್ನಾಗಿಯೇ ಇತ್ತು. ಆದರೆ ಗಂಟಲು ಮೂಗೊಳಗೆ ಧೂಳು ಹೋಗಿ ಒಂದು ದಿನ ಗಂಟಲ ಕೆರೆತ ಮತ್ತು ಕೆಮ್ಮು ಕಾಡುತ್ತಿತ್ತು. ಮಿಯಾರಿನ ನದಿ ಮತ್ತು ಮಾಳದವರು ದೊಡ್ಡ ನದಿ ಎಂದು ಕರೆಯುವ ಕಡಾರಿಯ ನದಿಗಳಿಗೆ ಆಗಿನ್ನೂ ಸೇತುವೆಗಳಾಗಿರಲಿಲ್ಲ. ಹೀಗಾಗಿ ಈ ಸರ್ವೀಸುಗಳೇನಿದ್ದರೂ ಬೇಸಿಗೆಯಲ್ಲಿ ಮಾತ್ರ. ಮಳೆಗಾಲದಲ್ಲಿ ನದಿಗೆ ದೋಣಿ. ರಸ್ತೆಗೆ ನಟರಾಜ ಸರ್ವೀಸು. ಆದರೆ ನನಗೆ ಈ ಅನುಭವ ಇಲ್ಲ. ನಾನು ಅಕ್ಕನ ಮನೆಗೆ ಹೋಗುತ್ತಿದ್ದುದು ಬೇಸಿಗೆ ರಜೆಯಲ್ಲಿ ಮಾತ್ರ.
ನಾವು ಮಾಳಕ್ಕೆ ಹೋಗುತ್ತಿದ್ದುದಾಗಲಿ ಹಿಂತಿರುಗುತ್ತಿದ್ದುದಾಗಲಿ ಬೆಳಗಿನ ಹೊತ್ತಿನಲ್ಲೇ. ಒಂದು ಸಲ ನಾನು ಮತ್ತು ಅಣ್ಣನ ಮಗ ಏಕೋ ಅಪರಾಹ್ನ ವಾಪಸ್ ಹೊರಡುವ ಸಂದರ್ಭ ಬಂದಿತ್ತು. .ಆದರೆ ಮಲ್ಲಾರಿನಲ್ಲಿ ಸಂಜೆ 5 ಗಂಟೆ ವರೆಗೆ ಕಾದರೂ ಯಾವ ವಾಹನವೂ ಸಿಗಲಿಲ್ಲ. ಆಗ ಕಡು ಬೇಸಿಗೆಯಾಗಿದ್ದು ಸಿಕ್ಕಾಪಟ್ಟೆ ಬಾಯಾರಿಕೆ ಆಗುತ್ತಿದ್ದುದರಿಂದ ಅಲ್ಲಿದ್ಧ 'ತಾಷ್ಕೆಂಟ್' ಹೋಟೆಲಿನಲ್ಲಿ ಆ ದಿನ 6-7 ಸರ್ತಿ ಕಾಫಿ ಕುಡಿದಿರಬಹುದು! (ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾಷ್ಕೆಂಟಿನಲ್ಲಿ ನಿಧನರಾದ ದಿನ ಆ ಹೋಟೆಲ್ ಆರಂಭ ಆದ್ದರಿಂದ ಊರವರು ಇಟ್ಟಿದ್ದ ಹೆಸರಂತೆ ಅದು.) ಕೊನೆಗೆ ಯಾವುದೋ ಲಾರಿ ಬಂತು. ಅದರಲ್ಲಿ ಕಾರ್ಕಳಕ್ಕೆ ಬಂದೆವು. ಜೈಹಿಂದ್ ಟಾಕೀಸಲ್ಲಿ ಪ್ರತಿಜ್ಞೆ ಸಿನಿಮಾ ನೋಡಿ ಅನಂತಶಯನ ಬಳಿಯ ಒಂದು ಹೋಟೆಲಿನ ಹಜಾರದಲ್ಲಿ ರಾತ್ರಿ ಕಳೆದು ಬೆಳಗ್ಗೆ 6 ಗಂಟೆಯ ಹನುಮಾನ್ ಬಸ್ಸಿನಲ್ಲಿ ಮುಂಡಾಜೆಗೆ ಹೊರಟೆವು.
ಕಜೆ ಕಾರು ನೋಡಿ ಮಾಳದ ಇನ್ನೋರ್ವ ಮಹನೀಯರಿಗೂ ಉಮೇದು ಬಂದು ಸ್ವಂತ ಉಪಯೋಗಕ್ಕೆ ಒಂದು ಅಂಥದ್ದೇ ಕಾರು ಕೊಂಡಿದ್ದರು. ಅವರಿಗೆ accelerator ಯಾವುದು ಮತ್ತು ಬ್ರೇಕ್ ಯಾವುದು ಎಂದು ಯಾವಾಗಲೂ ಗೊಂದಲ. ಅನೇಕ ಸಲ ಅದರ ಬದಲು ಇದು, ಇದರ ಬದಲು ಅದು ಒತ್ತುತ್ತಿದ್ದರಂತೆ. ಒಂದು ಸಲ ಅವರ ಕಾರಿನಲ್ಲಿ ಪಯಣಿಸುವ ಸಂದರ್ಭ ನನಗೂ ಒದಗಿ ಬಂದಿತ್ತು. ಪುಣ್ಯಕ್ಕೆ ಆ ದಿನ ಸರಿಯಾಗಿಯೇ ಚಲಾಯಿಸಿದರು.
ಕೆಲ ವರ್ಷಗಳ ನಂತರ ಮಾಳ ಕಾರ್ಕಳಗಳ ಮಧ್ಯೆ ಒಂದೆರಡು ಆಧುನಿಕ ಅಂಬಾಸೆಡರ್ ಕಾರು ಸರ್ವೀಸುಗಳೂ ಆರಂಭವಾದವು. ಮುಂದೆ ಬಸ್ಸುಗಳ ಓಡಾಟ ಆರಂಭವಾಗಿ ಕುದುರೆಮುಖ ಪ್ರಾಜೆಕ್ಟ್ ಕಾರಣದಿಂದ ಮಾಳ ಸರ್ವತೋಮುಖ ಅಭಿವೃದ್ಧಿಯತ್ತ ಹೆಜ್ಜೆ ಹಾಕತೊಡಗಿದ ಹೊತ್ತಿಗೆ ನಾನು ಉದ್ಯೋಗದಲ್ಲಿ ವ್ಯಸ್ತನಾದುದರಿಂದ ಅಲ್ಲಿಗೆ ನನ್ನ ಭೇಟಿ ಕಮ್ಮಿ ಆಗತೊಡಗಿತು.
50-60ರ ದಶಕಗಳಲ್ಲಿ ನಮ್ಮೂರು ಮುಂಡಾಜೆಯಲ್ಲೂ ಒಂದಿಬ್ಬರು ಸ್ಪಂತ ಬಳಕೆಗೆ ಹಿಂದುಸ್ಥಾನ್ ಕಾರು ಇಟ್ಟುಕೊಂಡವರಿದ್ದರು. ಅನಿವಾರ್ಯ ಸಂದರ್ಭಗಳಲ್ಲಿ ಇತರರಿಗೂ ಅವು ಒದಗುತ್ತಿದ್ದವು. ಇಲ್ಲವಾದರೆ ಊರಿನವರೆಲ್ಲ ಮುಂಡಾಜೆ, ನಿಡ್ಗಲ್ ಅಥವಾ ಉಜಿರೆ ವರೆಗೆ ನಡೆದೇ ಬಸ್ಸು ಹಿಡಿಯುತ್ತಿದ್ದುದು. 70ರ ದಶಕದಲ್ಲಿ ಊರ ಮಹನೀಯರೊಬ್ಬರು ಅಂಬಾಸಿಡರ್ ಕಾರು ಖರೀದಿಸಿ ಡ್ರೈವರ್ ನೇಮಿಸಿಕೊಂಡು ಉಜಿರೆ ಬೆಳ್ತಂಗಡಿಗಳಿಗೆ ನಿಯಮಿತ ಸರ್ವೀಸ್ ನಡೆಸತೊಡಗಿದರು. ಅವರ ಬಂಧುವೇ ಆಗಿದ್ದ ಡ್ರೈವರ್ ಸುಳ್ಳು ಲೆಕ್ಕ ತೋರಿಸಿ ನಷ್ಟ ಉಂಟು ಮಾಡಿದ್ದರಿಂದ ಅವರು ಕಾರು ಮಾರಿ ಬಿಟ್ಟರು. ಮತ್ತೆ ಕೆಲವು ವರುಷ ಒಂದೆರಡು ಜೀಪುಗಳು ಸೋಮಂತಡ್ಕ ಸಿದ್ದಬೈಲು ಮಧ್ಯೆ ನಿಯಮಿತ ಓಡಾಟ ನಡೆಸುತ್ತಿದ್ದವು. ಆದರೆ ಮನೆಯಲ್ಲಿ ಸ್ವಂತ ವಾಹನ ಇಟ್ಟುಕೊಂಡವರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಪ್ರಯಾಣಿಕರ ಕೊರತೆಯಿಂದ ಅವೂ ನಿಂತು ಹೋದವು. ಈಗ ಪರಿಸ್ಥಿತಿ ಮತ್ತೆ 50ರ ದಶಕದಲ್ಲಿದ್ದಂತೆ. ಆದರೆ ಮುಂಚಿನಂತೆ ಜನರು ನಡೆಯುವುದಿಲ್ಲ, ಫೋನ್ ಮಾಡಿ ಅಟೋರಿಕ್ಷಾ ತರಿಸುತ್ತಾರೆ - ಅಷ್ಟೇ ವ್ಯತ್ಯಾಸ. ದಕ್ಷಿಣ ಕನ್ನಡದ ಚಿತ್ಪಾವನರ ಮುಖ್ಯ ಆವಾಸ ಸ್ಥಾನಗಳಾಗಿದ್ದ ಶಿಶಿಲ, ಮುಂಡಾಜೆ, ದುರ್ಗ ಮತ್ತು ಮಾಳಗಳ ಪೈಕಿ ಒಂದು ಕಾಲಕ್ಕೆ ಹೆಚ್ಚು ಮುಂದುವರೆದದ್ದು ಎಂದು ಅನ್ನಿಸಿಕೊಂಡಿದ್ದ ಮುಂಡಾಜೆಯ ಒಳ ಪ್ರದೇಶಗಳ ಮೂಲಕ ಸರ್ವಋತು ಟಾರು ರಸ್ತೆ ಹಾದು ಹೋಗುತ್ತಿದ್ದರೂ ಈ 21ನೆಯ ಶತಮಾನದಲ್ಲೂ ಬಸ್ಸು ಸೌಕರ್ಯ ಇಲ್ಲದಿರುವುದು ವಿಪರ್ಯಾಸವೇ ಸರಿ.