Sunday, 20 February 2022

ವೀರ ಸಂಕಲ್ಪ

ಹುಣಸೂರು ಕೃಷ್ಣಮೂರ್ತಿ ಅವರು  ತಮ್ಮ ಎವರ್‌ಗ್ರೀನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಿಸಿದ ವೀರ ಸಂಕಲ್ಪ 1964ರಲ್ಲಿ ತುಂಬಾ ಸದ್ದು ಮಾಡಿದ ಚಿತ್ರ.  ಆಗಿನ ಎಲ್ಲ ಪತ್ರಿಕೆಗಳ ಸಿನಿಮಾ ಪುಟಗಳಲ್ಲಿ ಪ್ರತೀ ವಾರವೂ ಈ ಚಿತ್ರದ ಬಗ್ಗೆ ಏನಾದರೊಂದು ಸುದ್ದಿ ಇದ್ದೇ ಇರುತ್ತಿತ್ತು. ಆಗ ಮಂಗಳೂರಿನಲ್ಲಿದ್ದ ನಮ್ಮ ಅಣ್ಣ ಆ ಚಿತ್ರ ನೋಡಿ ತಂದಿದ್ದ ಪದ್ಯಾವಳಿಯೂ ನಮ್ಮಲ್ಲಿತ್ತು.  ಚಿತ್ರ  ಬಿಡುಗಡೆ ಆಗಿ ಸುಮಾರು ಎರಡು ತಿಂಗಳುಗಳ ನಂತರ  ರೇಡಿಯೋದಲ್ಲೂ ಈ ಚಿತ್ರದ ಹಾಡು ಬಾ ಕೋಗಿಲೆ ಮತ್ತು ಸಿಟ್ಯಾಕೊ ಸಿಡುಕ್ಯಾಕೊ ಹಾಡುಗಳು ದಿನ ನಿತ್ಯ ಬರತೊಡಗಿದವು. ಎಲ್ಲೋ ಒಂದೆರಡು ಸಲ ದುಡುಕದಿರು ಹೃದಯೇಶ ಕೇಳಿದ ನೆನಪಿದೆ. ಚಿತ್ರದ ಒಟ್ಟು ಏಳು ಹಾಡುಗಳ  ಪೈಕಿ ಉಳಿದ ನಾಲ್ಕು ಪದ್ಯಾವಳಿಯಲ್ಲಿ ಮತ್ತು ಅವು ಹೇಗಿರಬಹುದೆಂಬ ಕುತೂಹಲ ಮನಸ್ಸಿನಲ್ಲಿ ಭದ್ರವಾಗಿ ಕುಳಿತಿದ್ದವು. ಅಂತರ್ಜಾಲವೆಂಬ ಅಂಗೈನೆಲ್ಲಿಯಲ್ಲಿ ಹುಡುಕಿದರೆ ಅವುಗಳ ಪೈಕಿ ಯಾವುದಾದರೂ ಸಿಗುತ್ತಿತ್ತೋ ಏನೋ.  ಆದರೆ ನಾನೇಕೋ ಆ ಕಡೆ ಗಮನವನ್ನೇ ಹರಿಸಿರಲಿಲ್ಲ. ನಿನ್ನೆ ಇನ್ನೇನನ್ನೋ ಹುಡುಕುತ್ತಿರಬೇಕಾದರೆ ವೀರಸಂಕಲ್ಪ ಚಿತ್ರದ ಉತ್ತಮ ಕಾಪಿ ಅಂತರ್ಜಾಲದಲ್ಲಿ ಇರುವುದು ಗಮನಕ್ಕೆ ಬಂತು. ಹೇಗಿದೆ ನೋಡೋಣ ಎಂದು ನೋಡಲು ಆರಂಭಿಸಿದರೆ ಪ್ರತಿ ಪಾತ್ರಧಾರಿಯ ಸ್ವಚ್ಛ ಸ್ಪಷ್ಟ ಕನ್ನಡ ಉಚ್ಚಾರ ವೀಕ್ಷಣೆಯನ್ನು ನಡುವಿನಲ್ಲಿ ನಿಲ್ಲಿಸಲು ಬಿಡಲಿಲ್ಲ. ಹಾಡುಗಳೆಲ್ಲವೂ ಕ್ಷತಿರಹಿತವಾಗಿ ಇರುವುದನ್ನು ತಿಳಿದು ಅವುಗಳೆಲ್ಲವನ್ನೂ ಧ್ವನಿಮುದ್ರಿಸಿಕೊಂಡೆ. ಹಾಡುಗಳ ಪೂರ್ತಿ ಆಲ್ಬಂ ಒಳಗೊಂಡ ಲೇಖನವನ್ನು ಬರೆಯಬೇಕೆಂದು ವೀರಸಂಕಲ್ಪವನ್ನೂ ಮಾಡಿದೆ. ಅದರ ಪರಿಣಾಮವೇ  ಈ ಬರಹ.

ಚಿತ್ರವನ್ನು ವೀಕ್ಷಿಸಿದ ಮೇಲೆ ಹುಣಸೂರು ಕೃಷ್ಣಮೂರ್ತಿಯವರು ಮಾಡಿದ್ದುಣ್ಣೋ ಮಹರಾಯಾ, ಮುತ್ತೈದೆ ಭಾಗ್ಯ, ಅಡ್ಡದಾರಿ ಮತ್ತು ಈ ಚಿತ್ರ ಬಿಟ್ಟರೆ ಬೇರೆ ಯಾವುದರಲ್ಲೂ ಸ್ವತಃ ಅಭಿನಯಿಸಲ್ಲಿಲ್ಲವೇಕೆ ಎಂಬ ಸಂದೇಹ  ನನ್ನಲ್ಲಿ ಮೂಡಿತು.  ಈ ಚಿತ್ರದಲ್ಲಿ ಬೇರೆ ಕೆಲವು ವಿಶೇಷತೆಗಳೂ ನನಗೆ ಕಂಡವು.  ಚಿತ್ರದ ತಾರಾಗಣದಲ್ಲಿ ಆದವಾನಿ ಲಕ್ಷ್ಮೀ ದೇವಿ, ಜಯಶ್ರೀ ಮತ್ತು ತಮ್ಮ ಹಿಂದಿನ ಚಿತ್ರ ರತ್ನಮಂಜರಿಯಲ್ಲಿ ಪರಿಚಯಿಸಿದ್ದ ಎಂ.ಪಿ. ಶಂಕರ್ ಬಿಟ್ಟರೆ ಉಳಿದವರೆಲ್ಲರೂ ಅಪರಿಚಿತರೇ.  ಅವರ ಪೈಕಿ ವಿದ್ಯಾಸಾಗರ್ ಹೆಸರಿನೊಂದಿಗೆ ಕಾಣಿಸಿಕೊಂಡವರು ಮುಂದೆ ರಾಜೇಶ್ ಆಗಿ, ಬಿ.ಎಸ್. ದ್ವಾರಕಾನಾಥ್ ಹೆಸರಿನೊಂದಿಗೆ ಪಾತ್ರ ವಹಿಸಿದ ಹುಣಸೂರರ ಸೋದರಳಿಯ ಮುಂದೆ ದ್ವಾರಕೀಶ್   ಆಗಿ ಮಿಂಚಿದರು.  ನಾಯಕ ನಟನಾಗಿ ಪರಿಚಯಿಸಲ್ಪಟ್ಟ ಬಿ.ಎಂ ವೆಂಕಟೇಶ್ ಮುಂದೆಯೂ ಕೆಲವು ಚಿತ್ರಗಳಲ್ಲಿ ನಟಿಸಿದರೂ ಆ ಮೇಲೆ ನಿರ್ಮಾಣ ಕ್ಷೇತ್ರವನ್ನು ಆಯ್ದುಕೊಂಡರು.   ಉಳಿದ ಅಪರಿಚಿತರೆಲ್ಲರೂ ರಂಗಭೂಮಿ ಕಲಾವಿದರಿರಬಹುದು ಅನ್ನಿಸುತ್ತದೆ. ಹೀಗಾಗಿ ಅತಿ ಸಣ್ಣ ಪಾತ್ರ ವಹಿಸಿದ ಕಲಾವಿದರು ಕೂಡ ಸ್ಪಷ್ಟ ಕನ್ನಡ ಮಾತನಾಡಿದ್ದಾರೆ. ಸ್ವಂತ ತಯಾರಿಕೆಯ ಸೀಮಿತ ಬಜೆಟ್ ಖ್ಯಾತನಾಮರನ್ನು ಬಳಸಿಕೊಳ್ಳದಿರಲು ಕಾರಣವಾಗಿರಬಹುದು.

ಗಮನಕ್ಕೆ ಬಂದ ಇನ್ನೊಂದು ವಿಷಯವೆಂದರೆ ಹಿನ್ನೆಲೆ ಗಾಯಕ ಗಾಯಕಿಯರ ಉಲ್ಲೇಖ ಚಿತ್ರದ ಟೈಟಲ್ಸಲ್ಲಾಗಲಿ ಪದ್ಯಾವಳಿಯಲ್ಲಾಗಲಿ  ಇಲ್ಲದಿರುವುದು. ಹೀಗಾಗಿ  ಪರಿಚಯದ ಪೀಠಾಪುರಂ, ಎಲ್.ಆರ್. ಈಶ್ವರಿ ಮತ್ತು ಎಸ್. ಜಾನಕಿ ಬಿಟ್ಟರೆ ಇತರ ಗಾಯಕರು ಯಾರೆಂಬ ಕುತೂಹಲ ಹಾಗೆಯೇ ಉಳಿಯುತ್ತದೆ.  ಹಾಡುಗಳ ಗ್ರಾಮೊಫೋನ್ ಡಿಸ್ಕ್ ದೊರಕಿದರೆ ವಿವರ ಗೊತ್ತಾಗಬಹುದು. ಪ್ರತಿಯೊಬ್ಬ ಕಲಾವಿದ ನಿರ್ವಹಿಸಿದ ಪಾತ್ರದ ಹೆಸರು ಪದ್ಯಾವಳಿಯಲ್ಲಿರುವುದು ಉತ್ತಮ ಅಂಶ.

ಈಗ ಪದ್ಯಾವಳಿಯಲ್ಲಿರುವ ಪಾತ್ರವರ್ಗ, ಪಾರಿಭಾಷಿಕ ವಿವರಗಳು, ಕಥಾ ಸಾರಾಂಶ ಮತ್ತು  ಹಾಡುಗಳತ್ತ ದೃಷ್ಟಿ ಹರಿಸೋಣ. ಅಂದಿನ ಪದ್ಯಾವಳಿಗಳಲ್ಲಿ ಕಥಾಭಾಗದ ಸುಂದರ ನಿರೂಪಣೆ ಮಾಡುತ್ತಿದ್ದವರು ಯಾರೋ ಏನೋ. ಇತರ ಭಾಷೆಯ ಚಿತ್ರಗಳ ಪದ್ಯಾವಳಿಗಳೂ ಸೊಗಸಾಗಿರುತ್ತಿದ್ದವು. ಮುಂದಿನ ಕಥೆಯನ್ನು ರಜತ ಪರದೆಯ ಮೇಲೆ ನೋಡಿ ಆನಂದಿಸಿ ಎಂಬುದು ಕಥೆಯ ಕೊನೆಯಲ್ಲಿ ಇರುತ್ತಿದ್ದ ಸಾಲು.   ಪದ್ಯಾವಳಿಯಲ್ಲಿ ಇರಬಹುದಾದ ಚಿಕ್ಕಪುಟ್ಟ ಮುದ್ರಣದೋಷಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕಾಗುತ್ತದೆ.




 
 
 
 
 


ಹಾಡುಗಳು

ಈ ಚಿತ್ರದ ಎರಡು ಹಾಡುಗಳು ಮಾತ್ರ ಚಲಾವಣೆಯಲ್ಲಿರುವ ವಿಷಯ ಆಗಲೇ ಪ್ರಸ್ತಾಪಿಸಿದ್ದೇನೆ.  ಹುಣಸೂರರ ಹಿಂದಿನ ಚಿತ್ರ ರತ್ನಮಂಜರಿಯಲ್ಲೂ ಎರಡೇ ಹಾಡುಗಳು ಜನಪ್ರಿಯವಾದದ್ದು ಕಾಕತಾಳೀಯ ಆಗಿರಬಹುದು.  ಆದರೆ ಅವರು ಇತರರಿಗಾಗಿ ನಿರ್ದೇಶಿಸಿದ ಚಿತ್ರಗಳ ಹಾಡುಗಳೆಲ್ಲವೂ ಹಿಟ್ ಆಗುತ್ತಿದ್ದವು!  ಈಗ ಚಿತ್ರದ  ಏಳೂ ಹಾಡುಗಳತ್ತ ಗಮನ ಹರಿಸೋಣ.

1. ಹಾಡು ಬಾ ಕೋಗಿಲೆ.
ರೇಡಿಯೋದಲ್ಲಿ ಈ ಹಾಡು ಬರುತ್ತಿದ್ದುದರಿಂದ ಪೀಠಾಪುರಂ ನಾಗೇಶ್ವರ ರಾವ್ ಜೊತೆಗೆ ದನಿಗೂಡಿಸಿದ ಗಾಯಕಿಯ ಹೆಸರು ಸತ್ಯವತಿ ಎಂದು ಗೊತ್ತಿದೆ. ಚಿತ್ರದಲ್ಲಿ ಈ ಹಾಡು ಎರಡು ಸಲ ಬರುತ್ತದೆ.  ಹೆಚ್ಚಾಗಿ ಕಾಮಿಡಿ ಹಾಡುಗಳನ್ನು ಹಾಡುತ್ತಿದ್ದ ಪೀಠಾಪುರಂ ಅವರನ್ನು ರಾಜನ್ ನಾಗೇಂದ್ರ ಬಳಸಿಕೊಂಡದ್ದು ಬಹುಶಃ ಹುಣಸೂರರ ಚಿತ್ರಗಳಲ್ಲಿ ಮಾತ್ರ.   ಅಂಥ ಹಾಡುಗಳನ್ನು ಹೆಚ್ಚಾಗಿ  ನಾಗೇಂದ್ರ ಅವರೇ ಹಾಡುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು.

2. ಪರಶಿವನೊ ಸಿರಿವರನೊ.

ಚಾರಿತ್ರಿಕ, ಪೌರಾಣಿಕ ಚಿತ್ರಗಳಲ್ಲಿ ಸಾಮಾನ್ಯವಾಗಿ ಇರುವಂಥ ಸಂತಾನ ಸಂಭ್ರಮ ಸಂದರ್ಭದ ಹಾಡು. ಗಾಯಕಿ ಯಾರೆಂದು ಗೊತ್ತಿಲ್ಲ. ನಾನಿದನ್ನು ನಿನ್ನೆ ಚಿತ್ರ ನೋಡುವಾಗ ಮೊದಲ ಬಾರಿ ಕೇಳಿದೆ.

3. ದುಡುಕದಿರು ಹೃದಯೇಶ.
ಎಸ್. ಜಾನಕಿ ಹಾಡಿದ್ದಾರೆ. ರೇಡಿಯೊದಲ್ಲಿ ಒಂದೆರಡು ಸಲ ಕೇಳಿದ್ದಿದೆ. ಚಿತ್ರದಲ್ಲಿ ಶ್ರೀರಂಗರಾಯ ಯುದ್ಧಕ್ಕೆ ಹೊರಟಾಗ ಆತನ ಪತ್ನಿ ಮಲ್ಲೇಶ್ವರಿ ಹಾಡುತ್ತಾಳೆ.

4. ಸಿಟ್ಯಾಕೊ ಸಿಡುಕ್ಯಾಕೊ.
ಎಲ್. ಆರ್. ಈಶ್ವರಿ ಹಾಡಿದ ಇದು ಎಲ್ಲರಿಗೂ ಗೊತ್ತಿರುವಂಥದ್ದು. ಚಿತ್ರದಲ್ಲಿ ಈ ಹಾಡಿಗೆ ಚೆನ್ನಿಯಾಗಿ ಅಭಿನಯಿಸಿದ ರತ್ನಕುಮಾರಿ ಆ ಮೇಲೆ ವಾಣಿಶ್ರೀ ಆಗಿ ತೆಲುಗಿನಲ್ಲಿ ಪ್ರಸಿದ್ಧರಾದರು.

5.  ಯಾವೂರಯ್ಯ.
ಇದು ಕೂಡ ಎಲ್.ಆರ್. ಈಶ್ವರಿ ಅವರು ಚೆನ್ನಿಗಾಗಿ ಹಾಡಿರುವುದು. ಆದರೆ ಅಜ್ಞಾತವಾಗಿ ಉಳಿದಿದೆ.  ಸೆರೆಮನೆಯ ಕಾವಲುಗಾರರನ್ನು ಯಾಮಾರಿಸಲು ಹೆಣ್ಣೊಬ್ಬಳು  ಹಾಡುವ ಇಂಥ ಹಾಡು ಅಂದಿನ ಚಿತ್ರಗಳಲ್ಲಿ ಸಾಮಾನ್ಯವೇ ಆಗಿತ್ತು.

6.  ಕನ್ನಡದ ತಾಯಿ ಭುವನೇಶ್ವರಿ.
ಭಾರತೀಂದ್ರ ಸ್ವಾಮಿಗಳ ರಚನೆ ಇದು ಎಂಬ ಉಲ್ಲೇಖ ಇದೆ. ಗಾಯಕರ ಕುರಿತಾದ ಮಾಹಿತಿ ಇಲ್ಲ. ಧ್ವನಿ ಕೇಳಿದರೆ ಜೆ.ವಿ. ರಾಘವುಲು ಇರಬಹುದೇನೋ ಅನ್ನಿಸುತ್ತದೆ.  ಚಿತ್ರದಲ್ಲಿ ಎರಡು ಸಲ ಇದೆ.  ಒಮ್ಮೆ ಟೈಟಲ್ಸ್‌ಗೆ ಹಿನ್ನೆಲೆಯಾಗಿ, ಇನ್ನೊಮ್ಮೆ ಚಿತ್ರದೊಳಗೆ. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಮತ್ತು ಕನ್ನಡವೇ ತಾಯ್ನುಡಿಯು ಕೂಡ ಇದೇ ರೀತಿ ಕಣ್ತೆರೆದು ನೋಡು ಮತ್ತು ಅನ್ನಪೂರ್ಣ ಚಿತ್ರಗಳಲ್ಲಿ ಎರಡೆರಡು ಸಲ  ಇರುವುದು ಗಮನಾರ್ಹ. ನಾಡು ನುಡಿಯ ಕುರಿತಾದ ಹಾಡಾದರೂ ನವಂಬರ್ ತಿಂಗಳಲ್ಲೂ ಇದನ್ನು ಕೇಳಿದಂತಿಲ್ಲ!

7.  ಯುದ್ಧ ಯುದ್ಧ.
ಇಷ್ಟು ದಿನ ಪದ್ಯಾವಳಿಯಲ್ಲಿ ಅಡಗಿದ್ದು ಕೇಳಲು ಹೇಗಿರಬಹುದೆಂದು ನನ್ನಲ್ಲಿ ಕುತೂಹಲ ಉಳಿಸಿದ್ದ ಹಾಡಿದು. ಇದನ್ನು ನಾಗೇಂದ್ರ ಸ್ವತಃ ಹಾಡಿದ್ದಿರಬಹುದು ಎಂದುಕೊಂಡಿದ್ದೆ.  ಆದರೆ ಯಾವುದೋ ಅಪರಿಚಿತ ಧ್ವನಿ ಎಂದು ಈಗ ತಿಳಿಯಿತು.  ಆಸಕ್ತ ಮಿತ್ರವರ್ಗದ ಸಹಕಾರದಿಂದ ಕೊಂಚ ಸಂಶೋಧನೆ ನಡೆಸಿದಾಗ ಗಾಯಕನ ಹೆಸರು ಎಸ್.ಸಿ. ಕೃಷ್ಣನ್ ಎಂಬ ಮಾಹಿತಿ ದೊರಕಿತು. ನಾನು ಆ ಹೆಸರು ಕೇಳಿದ್ದು ಇದೇ ಮೊದಲು.  ಬಹಳಷ್ಟು ತಮಿಳು ಚಿತ್ರಗಳಲ್ಲಿ  ಹಾಡಿದ ಗಾಯಕರಿವರೆಂದು ಗೂಗಲೇಶ್ವರ ತಿಳಿಸಿದ. ಕನ್ನಡದಲ್ಲಿ ಹಾಡಿದ್ದು ಬಹುಶಃ ಇದೊಂದೇ ಹಾಡು ಇರಬಹುದು. ಚಿತ್ರದಲ್ಲಿ ಚಿಕ್ಕರಾಯನಾದ ದ್ವಾರಕಾನಾಥ್ ಉರುಫ್ ದ್ವಾರಕೀಶ್ ಈ ಹಾಡಿಗೆ  ಅಭಿನಯಿಸಿದ್ದಾರೆ.

 
 

ಕೆಳಗಿನ ಜ್ಯೂಕ್ ಬಾಕ್ಸಿನಿಂದ ಬೇಕಿದ್ದ ಹಾಡು ಆರಿಸಿ ಆಲಿಸಿ.


 


 

 

 

 


 

Thursday, 17 February 2022

ಹೃದಯವೀಣೆ ಮಿಡಿಯೆ ತಾನೆ



     60ರ ದಶಕ ಅಂದರೆ ಅದು ಚಿತ್ರ ಸಂಗೀತ ಕ್ಷೇತ್ರದಲ್ಲಿ ಅನೇಕ ಅಲಿಖಿತ ನಿಯಮಗಳು ಪಾಲಿಸಲ್ಪಡುತ್ತಿದ್ದ ಕಾಲ. ಹಿಂದಿಯಲ್ಲಿ ರಾಜ್ ಕಪೂರ್ ಅವರಿಗೆ ಮುಕೇಶ್, ದೇವಾನಂದ್ ಅವರಿಗೆ ಕಿಶೋರ್ ಕುಮಾರ್, ಉಳಿದವರೆಲ್ಲರಿಗೆ ರಫಿ ಇದ್ದಂತೆ  ಕನ್ನಡದಲ್ಲಿ ಹಾಸ್ಯದ ಹಾಗೂ ಹಿನ್ನೆಲೆಯ ಹಾಡುಗಳನ್ನು ಪೀಠಾಪುರಂ ಹಾಡುತ್ತಿದ್ದುದು ಬಿಟ್ಟರೆ ಕುಮಾರತ್ರಯರಾದ ರಾಜ್, ಕಲ್ಯಾಣ್, ಉದಯ್ ಸಹಿತ ಎಲ್ಲರ ಧ್ವನಿಯಾಗುತ್ತಿದ್ದುದು ಪಿ.ಬಿ.ಶ್ರೀನಿವಾಸ್. ತೆಲುಗಿನಲ್ಲಿ ಘಂಟಸಾಲ, ಮಲಯಾಳಂನಲ್ಲಿ ಜೇಸುದಾಸ್ ಹಾಗೂ ತಮಿಳಿನಲ್ಲಿ ಸೌಂದರರಾಜನ್ ಅವರಿಗೆ ಸಂಬಂಧಿಸಿದಂತೆ ಕೂಡ ಸುಮಾರಾಗಿ ಇದೇ ರೀತಿಯ ನಿಯಮ ಜಾರಿಯಲ್ಲಿತ್ತು. ಆದರೆ ಆಗೊಮ್ಮೆ ಈಗೊಮ್ಮೆ ಈ ನಿಯಮಗಳು ಮುರಿಯಲ್ಪಡುವುದೂ ಇತ್ತು.  ಪೆಂಡ್ಯಾಲ ನಾಗೇಶ್ವರ ರಾವ್ ಅವರ ಸಂಗೀತವಿದ್ದ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ರಾಜ್ ಅವರಿಗೆ ಘಂಟಸಾಲ ಧ್ವನಿಯಾಗಿದ್ದರು. ಟಿ.ಜಿ.ಲಿಂಗಪ್ಪ  ಸಂಗೀತವಿದ್ದ ಗಾಳಿಗೋಪುರ ಚಿತ್ರದಲ್ಲೂ ರಾಜ್ ಹಾಡುಗಳನ್ನು ಘಂಟಸಾಲ ಹಾಗೂ ಕಲ್ಯಾಣ್ ಹಾಡುಗಳನ್ನು ಪಿ.ಬಿ.ಎಸ್ ಹಾಡಿದ್ದರು.  ವಿಜಯಾ ಕೃಷ್ಣಮೂರ್ತಿ ಸಂಗೀತದ ಮುರಿಯದ ಮನೆಯಲ್ಲಿ ರಾಜ್ ಅವರಿಗೆ  ಘಂಟಸಾಲ, ಪಿ.ಬಿ.ಎಸ್ ಇಬ್ಬರೂ ಹಾಡಿದ್ದರು. ಜೇಸುದಾಸ್ ಅವರು ರಾಜ್ ಧ್ವನಿಯಾದದ್ದು ಪ್ರೇಮಮಯಿ ಚಿತ್ರದಲ್ಲಿ. ನಿಯಮ ಮುರಿತದ ಇಂತಹ ಇನ್ನೂ ಹಲವು ಉದಾಹರಣೆಗಳಿವೆ. ಆದರೆ ಗಾಯಕಿಯರಿಗೆ ಸಂಬಂಧಿಸಿದಂತೆ ಈ  ತರಹ ನಿಯಮಗಳು ಇಲ್ಲದಿದ್ದಿದು ಗಮನಾರ್ಹ. ಬಿ.ಸರೋಜಾದೇವಿ ನಾಯಕಿಯಾಗಿದ್ದಾಗ ಪಿ.ಸುಶೀಲ ಅವರೇ ಹಾಡುತ್ತಿದ್ದುದನ್ನು ಬಿಟ್ಟರೆ ಬಹುತೇಕ ಚಿತ್ರಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಜಾನಕಿ ಮಾತ್ರ, ಸುಶೀಲ ಮಾತ್ರ ಅಥವಾ ಇಬ್ಬರೂ ಹಾಡುತ್ತಿದ್ದರು. ಕ್ಯಾಬರೇ ಸ್ಪೆಷಲಿಸ್ಟ್ ಅನ್ನಿಸಿದ್ದ ಎಲ್.ಆರ್.ಈಶ್ವರಿ ಕೂಡ ಸಂತ ತುಕಾರಾಂ, ಮಹಾಸತಿ ಅನಸೂಯ ಮುಂತಾದ ಚಿತ್ರಗಳಲ್ಲಿ ಮುಖ್ಯ  ಗಾಯಕಿಯಾದದ್ದುಂಟು.  ಅಲಿಖಿತ ನಿಯಮಗಳ ಕುರಿತು ಈ ಪೀಠಿಕೆಗೆ ಕಾರಣ ಇಲ್ಲೀಗ ಚರ್ಚಿಸಲ್ಪಡುವ, ಇಂತಹ ಅನೇಕ ನಿಯಮಗಳನ್ನು ಮುರಿದಿದ್ದ ಅನ್ನಪೂರ್ಣ ಚಿತ್ರದ  ಒಂದು ಮಧುರವಾದ ಹಾಡು.

     ಅನ್ನಪೂರ್ಣ 1964ರಲ್ಲಿ ತೆರೆಕಂಡ ಚಿತ್ರ.  ಎಂ.ಪಂಢರಿಬಾಯಿ ಇದರ ನಿರ್ಮಾಪಕಿ.  ಆರೂರು ಪಟ್ಟಾಭಿ ನಿರ್ದೇಶಕರು.  ಕೆ.ಎಸ್. ಅಶ್ವಥ್ ಮತ್ತು ಸ್ವತಃ ಪಂಢರಿಬಾಯಿ ಮುಖ್ಯ ಕಲಾವಿದರು.  ರಾಜಕುಮಾರ್, ಕಲ್ಯಾಣ್ ಕುಮಾರ್, ಆರ್. ನಾಗೇಂದ್ರ ರಾವ್, ಪಂಢರಿಬಾಯಿಯ ತಂಗಿ ಮೈನಾವತಿ, ತೆಲುಗಿನ ಪ್ರಸಿದ್ಧ ನಟ ವಿ. ನಾಗಯ್ಯ ಮುಂತಾದವರು ಅತಿಥಿ ಕಲಾವಿದರು! ಪಂಢರಿಬಾಯಿ ಮೇಲಿನ ಅಭಿಮಾನದಿಂದ ಇವರೆಲ್ಲ ಅತಿಥಿ ಕಲಾವಿದರಾಗಿ ಸಹಕರಿಸಿರಬಹುದು.  

ಉದಯಶಂಕರ್ ಗೀತರಚನೆಕಾರರಾಗಿ ಹೊಮ್ಮಿದ ಮೊದಲ ಚಿತ್ರ
     ಚಿ.ಉದಯಶಂಕರ್ ಅವರು ಅದಾಗಲೇ ಸಂತ ತುಕಾರಾಂ ಚಿತ್ರದ ಸಂಭಾಷಣೆ  ಹಾಗೂ  ಶಿವರಾತ್ರಿ ಮಹಾತ್ಮೆ ಚಿತ್ರಕ್ಕಾಗಿ ಒಂದು ಹಾಡನ್ನು  ಬರೆದಿದ್ದರೂ ಅವರೇ ಎಲ್ಲ ಹಾಡುಗಳನ್ನು ಬರೆದ ಪ್ರಥಮ ಚಿತ್ರ ಈ ಅನ್ನಪೂರ್ಣ. ಅವರ ತಂದೆ ಚಿ. ಸದಾಶಿವಯ್ಯ ಈ ಚಿತ್ರಕ್ಕೆ ಸಂಭಾಷಣೆ ಬರೆದವರು.  ಅಂದರೆ ಸಂತ ತುಕಾರಾಂ ಚಿತ್ರದಲ್ಲಿ ತಂದೆಯ ಹಾಡುಗಳು ಮತ್ತು ಮಗನ ಸಂಭಾಷಣೆ ಇದ್ದರೆ ಇಲ್ಲಿ ಅದು ಅದಲು ಬದಲಾಗಿ ಮಗನ ಹಾಡುಗಳು ಮತ್ತು ತಂದೆಯ ಸಂಭಾಷಣೆ!  ಚಿತ್ರದ ಸಂಗೀತ ನಿರ್ದೇಶಕರು ರಾಜನ್ ನಾಗೇಂದ್ರಶಂಕರ್ ಜೈಕಿಶನ್ ಅವರಂತೆ ಅತಿ ದೊಡ್ಡ ಆರ್ಕೆಷ್ಟ್ರಾ ನಿರ್ವಹಿಸಬಲ್ಲವರಾಗಿದ್ದ ಇವರು ಅತಿ ಕಡಿಮೆ ವಾದ್ಯಗಳನ್ನು ಉಪಯೋಗಿಸಿಯೂ ಅದೇ ಪರಿಣಾಮ ಉಂಟು ಮಾಡುವುದರಲ್ಲಿ ನಿಷ್ಣಾತರು.


ಮುರಿದ ನಿಯಮಗಳು
     ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕ ನಾಯಕಿಯರು ಬಹುತೇಕ ಹಾಡುಗಳನ್ನು ಹಾಡುತ್ತಾರೆ.  ಆದರೆ ಇಲ್ಲಿ ಮುಖ್ಯ ಕಲಾವಿದರಾದ ಅಶ್ವಥ್ ಮತ್ತು ಪಂಢರಿಬಾಯಿ ಅಂದ ಚಂದದ ಮಗುವೆ ಎಂಬ ಪಹಾಡಿ ರಾಗದ ಹಾಡನ್ನು ಪಿ.ಲೀಲ ಮತ್ತು ಟಿ.ಆರ್. ಜಯದೇವ್ ಎಂಬ ನವ ಗಾಯಕರ ಧ್ವನಿಯಲ್ಲಿ ಹಾಡಿದ್ದು ಬಿಟ್ಟರೆ  ಉಳಿದೆಲ್ಲ ಹಾಡುಗಳನ್ನು ಹಾಡಿದ್ದು ಅತಿಥಿ ಕಲಾವಿದರು!  ಮೋಹ ಸಿಹಿ ಸಿಹಿ ಮತ್ತು ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಎಂಬ ಹಾಡುಗಳನ್ನು ಜಾನಕಿ ಧ್ವನಿಯಲ್ಲಿ ಮೈನಾವತಿ ಹಾಡಿದರೆ ಇನ್ನೊಬ್ಬ ಅತಿಥಿ ಕಲಾವಿದ ರಾಜಕುಮಾರ್ ಹಾಡಿದ್ದು ಚೆಲುವಿನ ಸಿರಿಯೇ ಬಾರೆಲೇ ಎಂಬ ಹಾಡನ್ನು.  ಆದರೆ ಧ್ವನಿ ನೀಡಿದ್ದು ಪಿ.ಬಿ.ಶ್ರೀನಿವಾಸ್ ಅಲ್ಲ. ಬದಲಾಗಿ ಎ.ಎಲ್.ರಾಘವನ್ಶೀನು ಸುಬ್ಬು ಸುಬ್ಬು ಶೀನು ಹಾಡನ್ನು ಪಿ.ಬಿ.ಎಸ್ ಜೊತೆಗೆ ಹಾಡಿದವರು ಎಂದರೆ ಎ.ಎಲ್.ರಾಘವನ್ ಪರಿಚಯ ಸುಲಭವಾಗಿ ಆದೀತು. ಬಹಳ ಸಮಯ ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಹಾಡಿದ ಜೆ.ವಿ.ರಾಘವಲು ಅವರೇ ಇದನ್ನು ಹಾಡಿದ್ದು ಎಂದೇ ನಾನು ಅಂದುಕೊಂಡಿದ್ದೆ!  ರಾಘವ ಎಂಬುದಷ್ಟೇ ಮನಸ್ಸಲ್ಲಿ ರಿಜಿಸ್ಟರ್ ಆಗಿದ್ದುದು ಇದಕ್ಕೆ ಕಾರಣವಿರಬಹುದು. ಚಿತ್ರದ ಎರಡು ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿದ್ದು ಅವುಗಳಲ್ಲೊಂದು ಅತಿ ಜನಪ್ರಿಯವಾದ ಕನ್ನಡವೇ ತಾಯ್ನುಡಿಯು ಮತ್ತು ಇನ್ನೊಂದು ಅತಿ ಮಧುರವಾದ ಹೃದಯವೀಣೆ ಮಿಡಿಯೆ ತಾನೆ.   ಈ ಎರಡೂ ಹಾಡುಗಳನ್ನು ತೆರೆಯ ಮೇಲೆ ನಿರ್ವಹಿಸಿದ, ಕೆಲವು ಕೋನಗಳಲ್ಲಿ ಆರ್.ಎನ್.ಸುದರ್ಶನ್ ಅವರನ್ನು ಹೋಲುವ ಸ್ಪುರದ್ರೂಪಿ ನಟ ಯಾರೆಂಬುದರ ಬಗ್ಗೆ ಇಷ್ಟು ವರ್ಷ ಯೋಚಿಸಿರಲೇ ಇಲ್ಲ.  ಈ ಬರಹ ಸಿದ್ಧಪಡಿಸುವಾಗ ಕೆಲವರನ್ನು ಆ ಬಗ್ಗೆ  ಕೇಳಿದರೂ ಸೂಕ್ತ ಮಾಹಿತಿ ಸಿಗಲಿಲ್ಲ.  ಕೊನೆಗೆ facebook ಮಿತ್ರ ಸಿಂಗರ್ ಶ್ರೀನಾಥ್  ಆತ ಕೆ.ಎಸ್. ಅಶ್ವಥ್ ಅವರ ಸಂಬಂಧಿ ಭಾಸ್ಕರ್ ಎಂದು ತಿಳಿಸಿ ಅನುಮಾನ ಪರಿಹರಿಸಿದರು. ಅವರಿಗೆ ವಿಶೇಷ ಧನ್ಯವಾದ. ಕಲಾವತಿ ಚಿತ್ರದಲ್ಲೂ ಭಾಸ್ಕರ್ ಅಭಿನಯಿಸಿರುವುದು ಆ ಮೇಲೆ ತಿಳಿಯಿತು. ಕನ್ನಡವೇ ತಾಯ್ನುಡಿಯು ಮತ್ತು ಕಣ್ತೆರೆದು ನೋಡು ಚಿತ್ರದ ಕನ್ನಡದ  ಮಕ್ಕಳೆಲ್ಲ ಹಾಡುಗಳಲ್ಲಿ ಕೆಲವು ಸಮಾನ ಅಂಶಗಳನ್ನು ಗುರುತಿಸಬಹುದು.  ಎರಡೂ ನಾಡು ನುಡಿಯ ಬಗೆಗಿನ ಹಾಡುಗಳು, ಚಿತ್ರದಲ್ಲಿ ಆಕಾಶವಾಣಿಯಿಂದ ನೇರ ಪ್ರಸಾರಗೊಳ್ಳುತ್ತವೆ, ಎರಡರಲ್ಲೂ ಹಾಡಿನ ಸಂಗೀತ ನಿರ್ದೇಶಕರು ಕಾಣಿಸಿಕೊಂಡಿದ್ದಾರೆ, ಎರಡನ್ನೂ ಚಿತ್ರದ ಟೈಟಲ್ಸ್ ಜೊತೆಗೂ ಬಳಕೆ ಮಾಡಿಕೊಳ್ಳಲಾಗಿದೆ.


ಹೃದಯವೀಣೆ ಮಿಡಿಯೆ ತಾನೆ
     ಬಹುಶಃ ಇದು ಕನ್ನಡದಲ್ಲಿ ಬಂದ ಮೊದಲ ಗಜಲ್ ಶೈಲಿಯ ಪ್ರೇಮ ಗೀತೆ. ಹಿಂದಿಯ ಆನಂದ್ ಬಕ್ಷಿ ಅವರಂತೆ ಆಡುಮಾತಿನ ಶೈಲಿಯಲ್ಲಿ ಚಿ.ಉದಯಶಂಕರ್  ಬರೆದ ಸಾಹಿತ್ಯವನ್ನು  ರಾಜನ್ ನಾಗೇಂದ್ರ  ಅವರು ಬಾಗೇಶ್ರೀ ರಾಗದಲ್ಲಿ ಎಷ್ಟು ಸುಂದರವಾಗಿ ಸಂಯೋಜಿಸಿದ್ದಾರೋ, ಪಿ.ಬಿ.ಶ್ರೀನಿವಾಸ್  ಕೇಳುವವರ ಹೃದಯ ವೀಣೆ ಮಿಡಿಯುವಂತೆ ಅಷ್ಟೇ ಮಧುರವಾಗಿ ಹಾಡಿದ್ದಾರೆ.  ಮಂದ್ರದ ಮಧ್ಯಮವನ್ನು ಸ್ಪರ್ಶಿಸುವ ಆರಂಭದ ಆಲಾಪಕ್ಕೇ ಮನಸೋಲುವ ಕೇಳುಗರು  ತಬ್ಲಾದ ದಾದ್ರಾ ಠೇಕಾದೊಂದಿಗಿನ  ಪಲ್ಲವಿ ಆರಂಭವಾಗುತ್ತಿದ್ದಂತೆ ಯಾವುದೋ ಲೋಕಕ್ಕೆ ಹೊರಟು ಹೋಗುತ್ತಾರೆ. Vibraphone, ವೀಣೆ, ಕೊಳಲು ಮುಂತಾದ ವಾದ್ಯಗಳ ಹಿತಮಿತವಾದ ಹಿಮ್ಮೇಳದೊಂದಿಗೆ ಕೋಗಿಲೆ ಗಾನ, ಸಮುದ್ರದ ಅಬ್ಬರ, ದುಂಬಿಯ ಮೊರೆತಗಳು ಮೇಳೈಸಿದ ಚರಣಗಳ ನಂತರ  ಕಾರಣ ನೀನೆ ಓ ಜಾಣೆ ಎಂಬ ಕೊನೆಯ ಸಾಲು Vibraphoneನೊಂದಿಗೆ ಮುಗಿದು ಮೌನ ಆವರಿಸಿದಾಗಲೆ ಮತ್ತೆ ಇಹಲೋಕದ ಪರಿವೆಯುಂಟಾಗುವುದು.  ಈ ಹಾಡು ಆರಂಭವಾಗುವ ಮೊದಲು ನಾಯಕಿ ‘ನಾನು ಎಷ್ಟೋ ಜನರ ಸಂಗೀತ ಕೇಳಿದ್ದೇನೆ.ಆದರೆ ನಿಮ್ಮ ಹಾಗೆ ಕೇಳುವವರು ಮೈ ಮರೆಯುವಂತೆ ಹಾಡುವವರನ್ನು ನೋಡೆ ಇರ್ಲಿಲ್ಲ. ನೀವು ಹಾಡುವಾಗ ಸಂಗೀತದ ಜತೆಗೆ ರಾಗಮಾಧುರ್ಯಕ್ಕೂ, ಭಾವಕ್ಕೂ, ಸಾಹಿತ್ಯಕ್ಕೂ ಕೊಡುವ ಸಮಾನ ಪ್ರಾಧಾನ್ಯತೆಯಿಂದಾನೇ ನಿಮ್ಮ ಗೀತೆ ಕೇಳುವವರ ಹೃದಯ ಮುಟ್ಟೋದು’ ಎಂದು  ಹೇಳುತ್ತಾಳೆ. ಈ ಮಾತುಗಳು  ಪಿ.ಬಿ.ಶ್ರೀನಿವಾಸ್ ಅವರನ್ನು ಕುರಿತೇ ಹೇಳಿದಂತಿವೆ! ಕ್ಲಿಷ್ಟಕರವಾದ ಪದಪುಂಜಗಳನ್ನು ಹೊಂದಿದ್ದ ಹಾಡುಗಳನ್ನಷ್ಟೇ ಕೇಳಿ ಗೊತ್ತಿದ್ದ  ಆಗಿನ ಪೀಳಿಗೆಗೆ ಉದಯಶಂಕರ್ ಅವರ ಸರಳ ಶಬ್ದಗಳ  ಸಾಹಿತ್ಯವಂತೂ ಒಂದು ಹೊಸ ಲೋಕವನ್ನೇ ತೆರೆದಿಟ್ಟಿತ್ತು.  ಚಂದ್ರ ಮತ್ತು ಕಡಲಿನ ಸ್ನೇಹ, ಮಾಮರ ಮತ್ತು ಕೋಗಿಲೆಯ ಸಂಬಂಧ ಮುಂತಾದವುಗಳ ಉಲ್ಲೇಖ ಉದಯಶಂಕರ್ ಅವರ ಮೇಲೆ ಆಗಲೇ ವಚನಗಳ ಪ್ರಭಾವ ಬಹಳಷ್ಟಿದ್ದುದನ್ನು ಸ್ಪಷ್ಟಪಡಿಸುತ್ತದೆ. ಪಲ್ಲವಿ ಭಾಗದಲ್ಲಿರುವ ಪದಗಳ ಒಳಪ್ರಾಸ ಕು.ರ.ಸೀ ಶೈಲಿಯನ್ನು ನೆನಪಿಸುತ್ತದೆ.  ಇಬ್ಬರೂ ಸಮ ಶ್ರುತಿಯಲ್ಲಿದ್ದರೆ ಮಾತ್ರ resonance ಮೂಲಕ ಹೃದಯ ವೀಣೆ ತಾನಾಗಿ ಮಿಡಿದೀತು ಎಂಬ ವೈಜ್ಞಾನಿಕ ತಥ್ಯವೂ ಈ ಹಾಡಿನಲ್ಲಿದೆ. ‘ಬಿದುರಿನ ಕೊಳಲು ಗಾನದ ಹೊನಲು ಹರಿಸದೇ ಕೃಷ್ಣನ ಕರ ಸೋಕಲು’ - ಇದು ಈ ಕವನದ ಅತ್ಯುತ್ತಮ ಸಾಲು. ಕೊಳಲು ಅದೇ ಆದರೂ ಹೊರಡುವ ನಾದವು ಅದನ್ನು ನುಡಿಸುವವರ ಮೇಲೆ ಹೊಂದಿಕೊಂಡಿರುವಂತೆ  ಜೀವನವೆಂಬ ಕೊಳಲು ಶ್ರುತಿಯಲ್ಲಿರುತ್ತದೋ ಅಥವಾ ಅಪಸ್ವರ ಹೊರಡಿಸುತ್ತದೋ ಎಂಬುದು ಜೀವನ ನಡೆಸುವವರ ಮೇಲೆ ನಿರ್ಭರವಾಗಿರುತ್ತದೆ ಎಂದು ಇದನ್ನು ಅರ್ಥೈಸಬಹುದೋ ಏನೋ!

     ಇದು ಉದಯಶಂಕರ್ ಅವರ ಆರಂಭದ ದಿನಗಳ ರಚನೆಯಾದ್ದರಿಂದ ಚಲನ ಚಿತ್ರ ಭಾಷೆಯಲ್ಲಿ ಮೀಟರ್ ಅನ್ನಲಾಗುವ ಹಾಡಿನ ಪ್ರತಿ ಸಾಲಿನ ಮಾತ್ರೆಗಳ ಹರಹು ಒಂದೇ ರೀತಿ ಇಲ್ಲದಿರುವುದನ್ನು ಗಮನಿಸಬಹುದು.  ಹೀಗಿದ್ದಾಗ ಹಾಡನ್ನು ಲಯಕ್ಕೆ ಹೊಂದಿಸಲು ಸಂಗೀತ ನಿರ್ದೇಶಕ ಮತ್ತು ಹಾಡಲು ಗಾಯಕ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.  ರಾಜನ್ ನಾಗೇಂದ್ರ ಮತ್ತು ಪಿ.ಬಿ.ಶ್ರೀನಿವಾಸ್ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಒಂದು ಉಪಕಥೆ

     ವರ್ಷಕ್ಕೊಂದೆರಡು ಬಾರಿ ಯಾವುದಾದರೂ ನೆಪದಲ್ಲಿ ಕಾರ್ಕಳಕ್ಕೋ ಮಂಗಳೂರಿಗೋ ಹೋಗಿ ಒಂದೆರಡು ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ನನಗೆ ಸಿಗುತ್ತಿತ್ತು.  ಆದರೆ ಈ ಅನ್ನಪೂರ್ಣ ಚಿತ್ರ ನೋಡಿದ ಸಂದರ್ಭ ಮಾತ್ರ ಕೊಂಚ ಭಿನ್ನ.  ನಾನು ಆಗಷ್ಟೇ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಏಳನೆ ತರಗತಿ ಮುಗಿಸಿ ಹೈಸ್ಕೂಲ್ ಸೇರಿದ್ದೆ.  ಅಲ್ಲಿಯ ದೊಡ್ಡ ದೊಡ್ಡ ಕೊಠಡಿಗಳಲ್ಲಿ ಸಾಕಷ್ಟು ದೂರದಲ್ಲಿರುತ್ತಿದ್ದ ಬೋರ್ಡಲ್ಲಿ ಬರೆದುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲವೆಂದು ಗಮನಕ್ಕೆ ಬಂದುದರಿಂದ  ಕಣ್ಣು ಪರೀಕ್ಷೆ ಮಾಡಿಸಲು ಮಂಗಳೂರಿಗೆ ಹೋಗಬೇಕಾಯಿತು.  ಆಗ ಈಗಿನಂತೆ ಕಣ್ಣನ್ನು ನೇರವಾಗಿ ಪರೀಕ್ಷಿಸಲು ಸಾಧ್ಯವಾಗುವ ಆಧುನಿಕ ಉಪಕರಣಗಳೆಲ್ಲಿದ್ದವು?  ಹೀಗಾಗಿ ಕಣ್ಣಿನ ಒಳ ಭಾಗ ವೀಕ್ಷಿಸಲು ಸುಲಭವಾಗುವಂತೆ ಬೆಳಕಿನ ತೀಕ್ಷ್ಣತೆಗನುಸಾರವಾಗಿ ಹಿರಿದು ಕಿರಿದಾಗುವ ಕನೀನಿಕೆಯನ್ನು ಸದಾಕಾಲ ಹಿರಿದಾಗುವಂತೆ ಮಾಡುವ ಒಂದು ಅಂಜನ ಕೊಟ್ಟು ಹುಲ್ಲಿನ ಕಡ್ಡಿಯಿಂದ ಕಣ್ಣಿಗೆ ಹಚ್ಚಲು ತಿಳಿಸಿ ಮೂರು ದಿನ ಬಿಟ್ಟು ಬರುವಂತೆ ಹೇಳುತ್ತಿದ್ದರು.  ಅದನ್ನು ಹಚ್ಚಿದ ಮೇಲೆ  ಕೆಲವು ದಿನ ಬೆಳಕಿನತ್ತ ನೋಡುವುದೇ ಕಷ್ಟವಾಗುತ್ತದೆ.  ಈ ರೀತಿ ಮೂರು ದಿನದ ನಂತರ ಮತ್ತೆ ಮಂಗಳೂರಿಗೆ ಹೋದಾಗ ಪ್ರಭಾತ್ ಟಾಕೀಸಿನಲ್ಲಿ ಅನ್ನಪೂರ್ಣ ಸಿನಿಮಾ ಪ್ರದರ್ಶಿಸಲ್ಪಡುತ್ತಿತ್ತು!  ನನ್ನನ್ನು ಕರೆದುಕೊಂಡು ಹೋದ ಅಣ್ಣ ಬೇಡವೆಂದರೂ ಕೇಳದೆ ಅರ್ಧ ಕಣ್ಣು ತೆರೆದು ಆ ಸಿನಿಮಾ ಹೇಗೆ ನೋಡಿದೆನೋ ಎಂದು ಈಗ ಆಶ್ಚರ್ಯವಾಗುತ್ತಿದೆ!  ಆ ಪರಿಸ್ಥಿತಿಯಲ್ಲೂ ಚಿತ್ರವನ್ನು ಸಂಪೂರ್ಣ ಆನಂದಿಸಿದ್ದಂತೂ ಹೌದು. ಆಗಲೇ ರೇಡಿಯೋ ಮತ್ತು ವಿವಿಧ ವಾದ್ಯಗಳ ಕಡು ಅಭಿಮಾನಿಯಾಗಿದ್ದ ನನಗೆ ಕನ್ನಡವೇ ತಾಯ್ನುಡಿಯು ಹಾಡಿನಲ್ಲಿ ಆಕಾಶವಾಣಿಯ ಸ್ಟುಡಿಯೊ, ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು, ಪ್ರಸಾರ ಗೋಪುರದಿಂದ ಸೂಸುವ ತರಂಗಗಳು ಮುಂತಾದವನ್ನು ತೋರಿಸಿದ್ದು ಥ್ರಿಲ್ ಉಂಟುಮಾಡಿತ್ತು. ಆದರೆ ಆ ದೃಶ್ಯದಲ್ಲಿ ಸ್ವತಃ ರಾಜನ್ ಮತ್ತು ನಾಗೇಂದ್ರ ಕೂಡ ಇದ್ದರೆಂದು ಆಗ ಗೊತ್ತಾಗಿರಲಿಲ್ಲ.   ಸಿನಿಮಾದ ಸಂಭ್ರಮ ಮುಗಿದ ಮೇಲೆ ಡಾಕ್ಟರ ಬಳಿ ಹೋದೆವು. ಅವರು short sight ಎಂದು ನಿರ್ಧರಿಸಿ ಕೊಟ್ಟ ಕನ್ನಡಕ ಬಹಳಷ್ಟು ವರ್ಷ ನನ್ನ ಮೂಗಿನ ಮೇಲೆ ರಾರಾಜಿಸುತ್ತಿತ್ತು.  ಆದರೆ ಎಲ್ಲರಿಗೂ ಚಾಳೀಸು ಬರುವ ಕಾಲಕ್ಕೆ ನನ್ನ short sight neutralize ಆಗಿ ಈಗ ಬಹಳ ವರ್ಷಗಳಿಂದ ದೂರದ ವಸ್ತುಗಳನ್ನು ಬರಿಗಣ್ಣಿಂದ ಸ್ಪಷ್ಟವಾಗಿ ನೋಡಬಲ್ಲವನಾಗಿದೇನೆ. ಇದಕ್ಕಾಗಿ ನಾನು ಆ ಅಂತರ್ಯಾಮಿಗೆ ಕೃತಜ್ಞ.  ಈಗ ನಾನು  ಅಕ್ಷರಗಳನ್ನೋದುವ ಸಲುವಾಗಿ reading glass ಮಾತ್ರ ಉಪಯೋಗಿಸುತ್ತಿರುವುದು.

ಇರಲಿ. ಈಗ ಹಾಡಿನ ಸಾಹಿತ್ಯದ ಮೇಲೆ ಕಣ್ಣಾಡಿಸುತ್ತಾ ಕಿರು ಡಯಲಾಗಿನೊಂದಿಗಿನ ಹಾಡು ಆಲಿಸಿ ಮಾಧುರ್ಯದಲ್ಲಿ ಮೀಯಲು ತಯಾರಾಗಿ.  ಸಾಧ್ಯವಾದರೆ headphone  ಬಳಸಿ.

ಹೃದಯವೀಣೆ


ಹೃದಯವೀಣೆ ಮಿಡಿಯೆ ತಾನೆ
ಕಾರಣ ನೀನೆ ಓ ಜಾಣೆ ಕಾರಣ ನೀನೆ ಓ ಜಾಣೇ

ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲು ||2||
ಚಂದ್ರನ ಕಾಣಲು ಮೊರೆಯದೇ ಕಡಲು
ತಿಂಗಳ ಬೆಳಕಿನ ರಾತ್ರಿಯೊಳೂ

ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು ||2||
ಹೂವು ಅರಳಲು ಕಂಪು ಚೆಲ್ಲಲು
ದುಂಬಿಯು ನಲಿಯದೆ ಗಾನದೊಳು
******

ಸದಭಿರುಚಿಯ ಈ ಪೂರ್ತಿ ಚಿತ್ರ  ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.

     ಈಗ ಕೊನೆಗೊಂದು ಬೋನಸ್.  1951ನೇ ಇಸವಿಯ ಚಂದಮಾಮದಲ್ಲಿ ಬಾಲಕ ಚಿ.ಉದಯಶಂಕರ್ ಬರೆದ ಚುಟುಕವೊಂದು ಪ್ರಕಟವಾದದ್ದು ಇಲ್ಲಿದೆ ನೋಡಿ.  ಬೆಳೆಯ ಗುಣ ಮೊಳಕೆಯಲ್ಲಿ ಅನ್ನುವಂತೆ ಸರಳ ಪದಗಳನ್ನುಪಯೋಗಿಸಿ ಹೇಳಬೇಕಾದ್ದನ್ನು ಹೇಳುವ ಕಲೆ ಆಗಲೇ ಆತನಿಗೆ ಸಿದ್ಧಿಸಿತ್ತು ಎಂದು ಇದರಿಂದ ಅರಿವಾಗುತ್ತದೆ.


4-5-2017

Friday, 4 February 2022

ಟಾಕೀಸ್ ಟಾಕ್


ಇತ್ತೀಚೆಗೆ ಮಂಗಳೂರಿನ ಜ್ಯೋತಿ ಚಿತ್ರಮಂದಿರ ಧರಾಶಾಯಿಯಾದದ್ದು ದೊಡ್ಡ ಸುದ್ದಿಯಾಯಿತು. ನಾನು ಆ ಚಿತ್ರಮಂದಿರದಲ್ಲಿ ಸ್ವರ್ಣಗೌರಿ, ಕೃಷ್ಣಾರ್ಜುನ ಯುದ್ಧ, ಮುರಿಯದ ಮನೆ, ರೌಡಿ ರಂಗಣ್ಣ, ತುಂಬಿದ ಕೊಡ, ಸೂರಜ್, ಬಿಸತ್ತಿ ಬಾಬು,  ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಕೋಟಿ ಚೆನ್ನಯ, ಎಡಕಲ್ಲುಗುಡ್ಡದ ಮೇಲೆ,   ಗಂಧದ ಗುಡಿ, ಬಂಗಾರದ ಪಂಜರ, ಬೂತಯ್ಯನ   ಮಗ ಅಯ್ಯು, ಉಪಾಸನೆ,    ಬಯ್ಯ ಮಲ್ಲಿಗೆ, ಚಿರಂಜೀವಿ,    ಬಯಲುದಾರಿ, ವಿಜಯವಾಣಿ, ನಾನಿನ್ನ ಮರೆಯಲಾರೆ,   ಬಬ್ರುವಾಹನ, ನಾಗರಹಾವು, ಎರಡು ಕನಸು, ಶ್ರೀನಿವಾಸ ಕಲ್ಯಾಣ ಇತ್ಯಾದಿ ಚಿತ್ರಗಳನ್ನು ನೋಡಿದ್ದರೂ 1978ರ ನಂತರ ಅಲ್ಲಿಗೆ ಒಮ್ಮೆಯೂ ಹೋಗದಿದ್ದ  ನನಗೆ ಈಗ ಅದೇಕೆ ಮುಚ್ಚಿತು ಎಂದು ಕೇಳುವ ಹಕ್ಕಿಲ್ಲ!


1926ರಲ್ಲಿ ಹಿಂದುಸ್ಥಾನ್ ಸಿನೆಮಾ ಎಂಬ ಹೆಸರಲ್ಲಿ ಆರಂಭಗೊಂಡು ಮೂಕಿ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದು ಆಮೇಲೆ 1936ರಲ್ಲಿ ಹೊಸ ನಾಮಧೇಯ  ಹೊಂದಿ ಕರಾವಳಿ ಭಾಗದ ಮೊತ್ತ ಮೊದಲ ಸಿನಿಮಾ ಟಾಕೀಸು ಎನ್ನಿಸಿಕೊಂಡಿದ್ದ ನ್ಯೂಚಿತ್ರಾ ಕೆಲ ಕಾಲ ಹಿಂದೆ  ಫರ್ನಿಚರ್ ಮಾರ್ಟ್ ಆಗಿ ಪರಿವರ್ತನೆ ಹೊಂದಿತು. ಹಳೆ ಚಂದಮಾಮಗಳಲ್ಲಿರುವ ಅನೇಕ ಸಿನಿಮಾ ಜಾಹೀರಾತುಗಳಲ್ಲಿ ಈ ಟಾಕೀಸಿನ ಹೆಸರು ಕಾಣಸಿಗುತ್ತದೆ.   ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳನ್ನೇ ಪ್ರದರ್ಶಿಸುತ್ತಿದ್ದ ಅದು ನನ್ನ ಮೆಚ್ಚಿನ ಟಾಕೀಸೇನೂ ಆಗಿರಲಿಲ್ಲ.  ಆದರೂ ದೂರದ ದಾರಿ ಬದಿಯ ಬೃಹತ್ ಪುರಾತನ ಮರವೊಂದು ಫರ್ನಿಚರಿಗಾಗಿ ಧರೆಗುರುಳಿದಂತೆ ನನಗನ್ನಿಸಿತು.  ಅಲ್ಲಿದ್ದ ಅತ್ಯಂತ ಪುರಾತನ ಸೆಂಚುರಿ ಪ್ರಾಜೆಕ್ಟರ್ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯ ಸೇರಿ ಈ ಭಾಗದ ಪ್ರಥಮ  ಟಾಕೀಸಿನ ನೆನಪು ಶಾಶ್ವತವಾಗಿ ಉಳಿಯುವಂತಾಗಿರುವುದು ಸ್ತ್ಯುತ್ಯರ್ಹ.


ಎಲ್ಲೆಡೆಯಂತೆ ಮಂಗಳೂರಿನಲ್ಲೂ ಹಳೆ ಸಿನಿಮಾ ಮಂದಿರಗಳು ಒಂದೊಂದಾಗಿ ಮುಚ್ಚುತ್ತಿವೆ.  ನಾನು ಅನೇಕ ಮೆಚ್ಚಿನ ಚಿತ್ರಗಳನ್ನು ನೋಡಿದ್ದ ಅಮೃತ್ ಸಿನಿಮಾ ಇದ್ದ ಜಾಗದಲ್ಲಿ ಬೃಹತ್ ವಸತಿ ಸಂಕೀರ್ಣವೊಂದು ತಲೆಯೆತ್ತಿ ವರ್ಷಗಳೇ ಆದವು.  ಹಿಂದಿ ಚಿತ್ರಗಳಿಗಾಗಿ ನಂ 1 ಆಯ್ಕೆಯಾಗಿದ್ದ ಸೆಂಟ್ರಲ್ ಟಾಕೀಸ್ ಇತಿಹಾಸ ಸೇರಿದೆ.  ಮಂಗಳೂರಿನ ಪ್ರಥಮ  ಹವಾನಿಯಂತ್ರಿತ ಥಿಯೇಟರ್ ಪ್ಲಾಟಿನಮ್  ಕೂಡ ಈಗ  ಪ್ರದರ್ಶನ ಸ್ಥಗಿತಗೊಳಿಸಿದೆ.  ಈ  ಥಿಯೇಟರ್ 17-5-1974ರಂದು ಹಿಂದಿ ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡು ಪ್ರಥಮ ಚಿತ್ರವಾಗಿ ಕನ್ನಡ ರಾಜ್‌ಕುಮಾರ್ ಅಭಿನಯದ ಎರಡು ಕನಸು ಪ್ರದರ್ಶಿತವಾಗಿತ್ತು .  ಪ್ರಥಮ ದಿನದ ಪ್ರಥಮ ದೇಖಾವೆಯಲ್ಲಿ ಆ ಚಿತ್ರವನ್ನು ನಮ್ಮ ಆಫೀಸಿನ ಮಿತ್ರ ಗಡಣದೊಂದಿಗೆ  ನಾನೂ ನೋಡಿದ್ದೆ. ವಾಡಿಕೆಗಿಂತ ಭಿನ್ನವಾಗಿ ಅಲ್ಲಿಯ ಬಾಲ್ಕನಿಯಲ್ಲಿ ಮುಂದಿನ ಸೀಟುಗಳಿಗೆ  ಹಿಂಬದಿಯವುಗಳಿಗಿಂತ ಹೆಚ್ಚಿನ ದರ ಇದ್ದುದು ನಮಗೆಲ್ಲ ಅಚ್ಚರಿಯ ವಿಷಯವಾಗಿತ್ತು.  ಹೊಸ ಥಿಯೇಟರಿನ ಪ್ರಥಮ ಚಿತ್ರ ಎಂದು ಬಂದಿದ್ದ ಎಂದೂ ಕನ್ನಡ ಸಿನಿಮಾ ನೋಡದಿದ್ದ  ಕೆಲವು ಪಡ್ಡೆ ಹುಡುಗರು ಇಂದು ಎನಗೆ ಗೋವಿಂದ ಹಾಡು ಬಂದಾಗ ಗೊಣಗುತ್ತಾ ಎದ್ದು ಹೊರಗೆ ಹೋಗಿದ್ದರು!


ಇತ್ತೀಚಿನ ವರ್ಷಗಳಲ್ಲಿ ಟಿ.ವಿಯ ಪ್ರಭಾವದಿಂದ ಮನೆಯ ಡ್ರಾಯಿಂಗ್ ರೂಮ್, ಆ ಮೇಲೆ ಅಂತರ್ಜಾಲ ಮತ್ತು ಸ್ಮಾರ್ಟ್ ಫೋನುಗಳಿಂದಾಗಿ ಅಂಗೈಯೇ ಸಿನಿಮಾ ಮಂದಿರವಾಗಿ ಪರಿವರ್ತನೆ ಹೊಂದಿವೆ. ಹೊಸ ಪೀಳಿಗೆಯವರು ಆಗಾಗ ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡುತ್ತಾರಾದರೂ  ನಾನೂ ಸೇರಿದಂತೆ ಅನೇಕರು ಟಾಕೀಸುಗಳಲ್ಲಿ ಸಿನಿಮಾ ನೋಡದೆ ದಶಕಗಳೇ ಕಳೆದಿವೆ. ಆದರೆ   ಸುಮಾರು 1945ರಿಂದ 1970ರ ಮಧ್ಯೆ  ಜನಿಸಿದವರೆಲ್ಲರೂ ಬಾಲ್ಯದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂರುವ ಕನಸು ಮತ್ತು ಯೌವನದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂತು ಕನಸು ಕಂಡವರೇ.  ಹೆಚ್ಚಿನವರು ತಾನೂ ಹೀರೋ/ಹಿರೋಯಿನ್‌ನಂತೆ ಕಾಣಿಸಬೇಕು,  ಅಂತಹ ಬಟ್ಟೆಗಳನ್ನೇ ಧರಿಸಬೇಕು ಎಂಬಿತ್ಯಾದಿ ಕನಸು ಕಂಡರೆ ನಾನು ಮಾತ್ರ ಸಿನಿಮಾಗಳಲ್ಲಿ ಆಗಾಗ ಕಾಣಿಸುವ ವಾದ್ಯಗಳನ್ನು ನಾನೂ ಅವರಂತೆ ನುಡಿಸಬೇಕು ಎಂದು ಕನಸು ಕಾಣುತ್ತಿದ್ದೆ.  ಅದರಲ್ಲೂ ನಾಯಕನು ಕೊಳಲೊಂದನ್ನು ತುಟಿಗೆ ತಾಗಿಸಿದೊಡನೆ ಅದರಿಂದ ಮಧುರ ನಾದದ ಅಲೆಗಳು ಹೊರಟು ಸುತ್ತಲಿನವರನ್ನು ಆಕರ್ಷಿಸುವುದು,  ನಾಯಕಿಯು ಆ ನಾದಕ್ಕೆ ಮರುಳಾಗುವುದು ನನ್ನನ್ನೂ ಮರುಳು ಮಾಡುತ್ತಿತ್ತು!

ನನಗೆ ಅರಿವು ಮೂಡುವುದಕ್ಕೂ ಮುನ್ನ ನಾನು ಮನೆ ಮಂದಿಯೊಡನೆ ನೋಡಿದ ಮೊದಲ ಸಿನಿಮಾ ಜಗನ್ಮೋಹಿನಿ ಆಗಿರಬಹುದು.  ಏನೂ ಅರ್ಥವಾಗದಿದ್ದರೂ ಅದರೊಳಗಿನ ಜನರೆಲ್ಲ ಬೂದಿ ರಾಶಿಯ ಮೇಲೇಕೆ ಓಡಾಡುತ್ತಾರೆ ಎಂದು ನನಗನ್ನಿಸಿದ್ದು ನೆನಪಿದೆ.  ಕಪ್ಪು ಬಿಳುಪಿನ ಆ ಸಿನಿಮಾದಲ್ಲಿನ ನೆಲ, ಬೆಟ್ಟ, ಗುಡ್ಡಗಳೆಲ್ಲ ನನಗೆ ಹಾಗೆ ಕಂಡಿರಬಹುದು.  ಆ  ಮೇಲೆ ಅಣ್ಣಂದಿರೊಡನೆ ಕಾರ್ಕಳ ಸಮೀಪದ ಅಕ್ಕನ ಮನೆಗೆ ಹೋಗುವಾಗ ಅಲ್ಲಿಯ ಜೈಹಿಂದ್ ಟಾಕೀಸಿನಲ್ಲಿ ವರ್ಷಕ್ಕೊಂದು ಸಿನಿಮಾ ನೋಡುವ ಅವಕಾಶ ಸಿಗುತ್ತಿತ್ತು. ಅಲ್ಲಿ ಮೊತ್ತ ಮೊದಲು ಬರ್‌ಸಾತ್ ಕೀ ರಾತ್  ನೋಡಿದ್ದು ನೆನಪಿದೆ. ಆ ಸಿನಿಮಾ ಏನೇನೂ ಅರ್ಥವಾಗದಿದ್ದರೂ ಅದರಲ್ಲಿ ಟೊಪ್ಪಿ ಧರಿಸಿದ ಕೆಲವರು ತಲೆ ಅಲ್ಲಾಡಿಸುತ್ತಾ ತಬಲಾ ನುಡಿಸುತ್ತಿದ್ದುದು, ಪರದೆ ತುಂಬಾ ತುಂಬಿಕೊಂಡ ದಪ್ಪ ಮುಖದವನೊಬ್ಬ ಮೈಕ್ ಎದುರು ಹಾಡು ಹಾಡಿದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.  ಬಹುಶಃ ಅವು ಆ ಚಿತ್ರದ ನ ತೊ ಕಾರವಾಂ ಕೀ ತಲಾಶ್ ಹೈ ಕವ್ವಾಲಿ ಮತ್ತು ಜಿಂದಗೀ ಭರ್ ನಹೀಂ ಭೂಲೇಗಿ ಹಾಡಿನ ಕ್ಲೋಸ್ ಅಪ್ ದೃಶ್ಯಗಳಿರಬಹುದು.  ಮುಂದೆ  ಕಿತ್ತೂರು ಚೆನ್ನಮ್ಮ, ಜೇನುಗೂಡು, ಕನ್ಯಾರತ್ನ ಮುಂತಾದ ಒಳ್ಳೊಳ್ಳೆಯ ಚಿತ್ರಗಳನ್ನು ಅಲ್ಲಿ ನೋಡುವ ಅವಕಾಶ ಸಿಕ್ಕಿತ್ತು.  ಕನ್ಯಾರತ್ನ ಚಿತ್ರವನ್ನು ಒಂದೇ ದಿನ ಎರಡು ಬಾರಿ ನೋಡಿದ್ದೆ! ಆಗ ನಾನಿನ್ನೂ ಆರನೇ ಕ್ಲಾಸ್. ಆ ಸಲ ಅಕ್ಕನ ಮನೆಗೆ ಹೋಗಿದ್ದಾಗ ಯಾವುದೋ ಕಾರಣದಿಂದ ಅಣ್ಣನಿಗೆ ನನ್ನೊಂದಿಗೆ ಸಿನಿಮಾಗೆ ಬರಲು  ಸಾಧ್ಯವಾಗದೆ  ಕಸಿನ್ ಒಬ್ಬರೊಡನೆ   ಆ ಚಿತ್ರ ನೋಡಿ ಕಾರ್ಕಳದಲ್ಲಿ ಯಾರದೋ ಮನೆಯಲ್ಲಿ halt ಮಾಡುವ ಪ್ರಸಂಗ ಬಂದೊದಗಿತು.  ಆದರೆ  ನಾವು ಪ್ರಥಮ ದೇಖಾವೆಯಲ್ಲಿ ಆ ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ   ಹೊರಗಡೆ ಅಣ್ಣ ಮತ್ತು ಭಾವ ಹಾಜರ್!  ನಾನು ಇನ್ನೊಬ್ಬರ ಮನೆಯಲ್ಲಿ halt ಮಾಡುವುದು ಇಷ್ಟವಾಗದೆ ಅಕ್ಕ ಅವರನ್ನು ಕಳಿಸಿದ್ದರಂತೆ.  ಅವರಿಬ್ಬರೊಡನೆ ಮತ್ತೆ ಆ ಚಿತ್ರದ 2nd show  ನೋಡಿ ರಾತ್ರೆಯೇ ಅಕ್ಕನ ಮನೆ ಸೇರಿದೆವು. ಹೀಗೆ ಅನೇಕ ನೆನಪುಗಳಿಗೆ ಸಾಕ್ಷಿಯಾಗಿದ್ದ ಕಾರ್ಕಳದ ಜೈಹಿಂದ್ ಟಾಕೀಸ್ ಇತಿಹಾಸದ ಪುಟ ಸೇರಿ ವರ್ಷಗಳೇ ಕಳೆದಿವೆ.  ಕೆಲವು ವರ್ಷಗಳ ನಂತರ ಒಮ್ಮೆ ಅಣ್ಣನೊಡನೆ ಮಂಗಳೂರಿಗೆ ಹೋಗಿದ್ದಾಗ ಇದೇ ರೀತಿಯ ಅನುಭವ ಮರುಕಳಿಸಿತ್ತು.  ಅಲ್ಲಿಯ ಸೆಂಟ್ರಲ್  ಟಾಕೀಸಿನಲ್ಲಿ ಅಂದು ಆರಾಧನಾ ಬಿಡುಗಡೆಗೊಂಡಿತ್ತು.  ಗೇಟು ತೆರೆಯುವುದನ್ನೇ ಕಾದು ಕೂಡಲೇ ಒಳನುಗ್ಗಿ ಕ್ಯೂನಲ್ಲಿ ಸೇರಿಕೊಂಡದ್ದೂ ಆಯಿತು.  ಹೇಗೂ ಒಬ್ಬರಿಗೆ ಎರಡು ಟಿಕೇಟು ಕೊಡುತ್ತಾರಲ್ಲ ಎಂದು ಅಣ್ಣನನ್ನು ಕ್ಯೂನಲ್ಲಿ ನಿಲ್ಲಿಸಿ ನಾನು ಆರಾಧನಾದ lobby cards ನೋಡುತ್ತಾ ಮೈ ಮರೆತೆ. ಆದರೆ ಅಂದು ಚಿತ್ರದ ಪ್ರಥಮ ದಿನವಾದ್ದರಿಂದ ಒಬ್ಬರಿಗೆ ಒಂದೇ ಟಿಕೇಟು ಕೊಟ್ಟರು.  ಕ್ಯೂನಲ್ಲಿ ನಿಲ್ಲದ್ದಕ್ಕೆ ನನಗೆ ಒಮ್ಮೆ ಬೈದ ಅಣ್ಣ  ಟಿಕೆಟು ನನಗೆ ಕೊಟ್ಟು ಸಮೀಪದ ಇನ್ನೊಂದು ಟಾಕೀಸಿನಲ್ಲಿ ಬೇರೆ ಯಾವುದೋ ಚಿತ್ರ ನೋಡಿದರು.  ನಾನು ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ ಅವರು ಮತ್ತು ಆರಾಧನಾ ನೋಡಲೆಂದೇ ಬಂದ ಇನ್ನೊಬ್ಬ ಸೋದರ ಸಂಬಂಧಿ ಜೊತೆಯಲ್ಲಿ ಬರುವುದು ಕಾಣಿಸಿತು.   ಸೋದರ ಸಂಬಂಧಿಯ ಒತ್ತಾಯದ ಮೇಲೆ ಈ ಸಲ  ಮೂವರೂ ಕ್ಯೂನಲ್ಲಿ ನಿಂತು ಟಿಕೆಟು ಪಡೆದು ಮತ್ತೆ ಆರಾಧನಾ ನೋಡಿದೆ.  ಈಗ ಹಾಡುಗಳನ್ನು ಹೊರತುಪಡಿಸಿದರೆ ಆರಾಧನಾ ಬರೀ ಬೋರ್ ಅನ್ನಿಸುತ್ತಿದ್ದರೂ ಅಂದು  ಎರಡು ಸಲ ನೋಡಿದಾಗಲೂ ಬಲು ಆಪ್ಯಾಯಮಾನವೆನ್ನಿಸಿತ್ತು.


ಆರನೇ ತರಗತಿಯಲ್ಲಿರುವಾಗ ಬೆಳ್ತಂಗಡಿಯ ಮರುಳ ಸಿದ್ದೇಶ್ವರ ಎಂಬ ಟೂರಿಂಗ್ ಟಾಕೀಸಿನಲ್ಲಿಯೂ ಮಹಿಷಾಸುರ ಮರ್ದಿನಿ ಮತ್ತು ತೆಲುಗಿನಿಂದ ಡಬ್ ಆದ ಮೋಹಿನಿ ರುಕ್ಮಾಂಗದ ಎಂಬ ಚಿತ್ರಗಳನ್ನು ನೋಡಿದ್ದೆ.  ನಮ್ಮನ್ನು ಕರೆದೊಯ್ದಿದ್ದ ಸಹಪಾಠಿ  ಮುಂದಿನ ದೇಖಾವೆ ಆರಂಭವಾಗುವವರೆಗೆ ಕಾದು ನಮ್ಮನ್ನು ಟೆಂಟಿನ ಹಿಂಬದಿಗೆ ಕರೆದೊಯ್ದು ಅಲ್ಲಿ  ಕಾಣಿಸುತ್ತಿದ್ದ ಪರದೆಯ ಹಿಂಭಾಗದಲ್ಲಿ free ಉಲ್ಟಾ ಸಿನಿಮಾ ತೋರಿಸಿದ್ದ!  ರಾತ್ರಿ ಆ ಸಹಪಾಠಿಯ ಮನೆಯಲ್ಲೇ ಉಳಿದಿದ್ದೆವು. ಈ ಮರುಳ ಸಿದ್ದೇಶ್ವರ ಟೂರಿಂಗ್ ಟಾಕೀಸನ್ನು ಬೆಳ್ತಂಗಡಿಯ ಉದ್ಯಮಿಯೋರ್ವರು ಖರೀದಿಸಿ ಸ್ಥಾಪಿಸಿದ ಭಾರತ್ ಟಾಕೀಸ್ ಈಗಲೂ ಅಲ್ಲಿದೆ. 

ಮನೆಗೆ ರೇಡಿಯೋ ಬಂದ ಮೇಲೆ ಸಿನಿಮಾ ಜಾಹೀರಾತು ಮತ್ತು ಹಾಡುಗಳನ್ನು ಕೇಳುತ್ತಾ ಸಿನಿಮಾ ಟಾಕೀಸಿನ ಕನಸುಗಳು ಜಾಸ್ತಿಯಾಗತೊಡಗಿದ್ದವು. ನಮ್ಮಣ್ಣ ವಾರ್ಷಿಕ ಖರೀದಿಗಾಗಿ ಮಂಗಳೂರಿಗೆ ಹೋಗುವಾಗ ಜೊತೆಗಾರನ ನೆಲೆಯಲ್ಲಿ ನನ್ನನ್ನೂ ಕರೆದೊಯ್ಯುತ್ತಿದ್ದರು. ಅಂಥ ಭೇಟಿಗಳಲ್ಲಿ ಕನಿಷ್ಠ ಒಂದು ಸಿನಿಮಾ ನೋಡಿಯೇ ನೋಡುತ್ತಿದ್ದೆವು. ಕೆಲವೊಮ್ಮೆ ಒಂದು ಥಿಯೇಟರಿನಲ್ಲಿ ಮ್ಯಾಟಿನಿ ಮತ್ತು ಇನ್ನೊಂದರಲ್ಲಿ ಮೊದಲ ದೇಖಾವೆ ನೋಡುವುದೂ ಇತ್ತು. ಕೆಲವು ಸಲ ನಾನು ಹೋಗದಿದ್ದರೂ ಅವರು ನೋಡಿದ ಸಿನಿಮಾದ ಪದ್ಯಾವಳಿ ತಪ್ಪದೆ ತರುತ್ತಿದ್ದರು.  ಅದನ್ನು ನೋಡಿ ನಾನೆ ಸ್ವತಃ ಸಿನಿಮಾ ನೋಡಿದಷ್ಟು ಖುಶಿಪಡುತ್ತಿದ್ದೆ. ಜಾತ್ರೆಯಲ್ಲಿ ಕೊಳ್ಳಲು ಸಿಗುತ್ತಿದ್ದ ಬಯೋಸ್ಕೋಪ್‌ನಲ್ಲಿ  ಹಳೆ ಫಿಲ್ಮಿನ ತುಂಡುಗಳನ್ನು ನೋಡಿ  ನಿಜವಾದ ಸಿನಿಮಾ ನೋಡಿದಂತೆ ಆನಂದಿಸುತ್ತಿದ್ದೆ.  ಟಾರ್ಚ್ ಉಪಯೋಗಿಸಿದರೆ ಬ್ಯಾಟರಿ ಮುಗಿಯುತ್ತದೆಂಬ ಭಯದಿಂದ    ಕಿಟಿಕಿಯಿಂದ ಒಳನುಗ್ಗುತ್ತಿದ್ದ ಬಿಸಿಲುಕೋಲಿನ ಎದುರು ಆ ಫಿಲ್ಮ್ ತುಂಡುಗಳನ್ನು ಹಿಡಿದು ಪೀನಮಸೂರವೊಂದರ ಮೂಲಕ ಗೋಡೆಯ ಮೇಲೆ ದೊಡ್ಡ ಚಿತ್ರ ಮೂಡಿಸುವ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದೆ.


ಹೈಸ್ಕೂಲ್ ವಿಧ್ಯಾಭ್ಯಾಸಕ್ಕಾಗಿ ಉಜಿರೆ ಹಾಸ್ಟೆಲ್ ಸೇರಿದ್ದಾಗ ಬೆಳ್ತಂಗಡಿ ಟಾಕೀಸಿಗೆ ಬಂದ ಸಂತ ತುಕಾರಾಂ ಚಿತ್ರ ನೋಡಲು ವಾರ್ಡನ್ ವಿಶೇಷ ಅನುಮತಿ ನೀಡಿದ್ದರು. ನಂತರ ನಾವು ಕೆಲವು ಮಿತ್ರರು  ಅವರ ಕಣ್ಣು ತಪ್ಪಿಸಿ ಜಂಗ್ಲಿ, ಸುಬ್ಬಾಶಾಸ್ತ್ರಿ, ಪೂರ್ಣಿಮಾ, ತೂಗುದೀಪ ಮುಂತಾದ ಚಿತ್ರಗಳನ್ನು ಅಲ್ಲಿ ನೋಡಿದ್ದಿದೆ.  ಇದಕ್ಕಾಗಿ ರೂಮಿನ ಬಾಗಿಲನ್ನು ಒಳಗಿನಿಂದ ಬಂದು ಮಾಡಿಕೊಂಡು ಸರಳು ಕೀಳಲು ಬರುತ್ತಿದ್ದ ಒಂದು ಕಿಟಿಕಿಯ ಮೂಲಕ ಹೊರಬಿದ್ದು ಬಸ್ಸಿನಲ್ಲಿ ಬೆಳ್ತಂಗಡಿಗೆ ಹೋಗುತ್ತಿದ್ದೆವು. ಸಿನಿಮಾ ಮುಗಿದ ಮೇಲೆ ಮಧ್ಯರಾತ್ರೆ ಸಿಕ್ಕಿದ ವಾಹನದಲ್ಲಿ ಉಜಿರೆಗೆ ಬಂದು ಮತ್ತೆ ಅದೇ ದಾರಿಯ ಮೂಲಕ ಒಳಸೇರಿ ಏನೂ ಅರಿಯದವರಂತೆ ಮಲಗಿ ಬಿಡುತ್ತಿದ್ದೆವು.


1973ರಲ್ಲಿ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರೆತು ಮಂಗಳೂರು ಸೇರಿದ ಮೇಲೆ ಹಸಿದವನಿಗೆ ಮೃಷ್ಟಾನ್ನ ಬಡಿಸಿದಂತಾಯಿತು. ಆಗ ವಾರಾಂತ್ಯದಲ್ಲಿ   ಹಳೆ ಚಿತ್ರಗಳ ಇಳಿಸಿದ ದರದ ಬೆಳಗಿನ ದೇಖಾವೆಗಳಿರುತ್ತಿದ್ದವು. ಇವುಗಳ ವಿವರ ಇರುತ್ತಿದ್ದ ಶುಕ್ರವಾರದ ಪತ್ರಿಕೆ  ಈ ಮೃಷ್ಟಾನ್ನ ಭೋಜನಕ್ಕೆ ಆಹ್ವಾನಪತ್ರಿಕೆಯಾಗಿರುತ್ತಿತ್ತು. ಕೆಲವು ಹಳೆ ಚಿತ್ರಗಳ ಹೊಸ ಪ್ರಿಂಟುಗಳೂ regular ದೇಖಾವೆಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು.  ಅತ್ಯುತ್ತಮ ಧ್ವನಿ ವ್ಯವಸ್ಥೆಯ ಕಾರಣದಿಂದ  ನನ್ನ ಮೆಚ್ಚಿನದಾಗಿದ್ದ ರೂಪವಾಣಿ ಟಾಕೀಸಿನಲ್ಲಿ ಮುಂಬರುವ ಬೆಳಗಿನ ದೇಖಾವೆಯ ಪೋಸ್ಟರನ್ನು ಒಂದು ವಾರ ಮುಂಚಿತವಾಗಿಯೇ ಒಂದು ನಿರ್ದಿಷ್ಟ  ಜಾಗದಲ್ಲಿ ಹಚ್ಚಿಡುತ್ತಿದ್ದರು. ಅದು ನನ್ನ ಮೆಚ್ಚಿನ ಚಿತ್ರವಾಗಿದ್ದರೆ ಆ ಒಂದು ವಾರದ ಕಾಯುವಿಕೆ ಬಲು ರೋಮಾಂಚಕವಾಗಿರುತ್ತಿತ್ತು.   ಆಗ ಬಾಲ್ಕನಿಗೆ regular ದರ 5 ರೂಪಾಯಿ ಮತ್ತು ಇಳಿಸಿದ ದರ 2 ರೂಪಾಯಿ ಇತ್ತು. ಆ ವರ್ಷ ನಾನು ಮೇ ತಿಂಗಳಿಂದ ಡಿಸೆಂಬರ್ ವರೆಗೆ  ಅಲ್ಲಿ ತನಕ  ಕನಸಿನಲ್ಲಿ ಕಾಣುತ್ತಿದ್ದ 56  ಸಿನಿಮಾಗಳನ್ನು ನೋಡಿದೆ!  ಈ trend ಮುಂದುವರಿದು 1974ರಲ್ಲಿ  69  ಮತ್ತು  1975ರಲ್ಲಿ  63  ಬಾರಿ ಟಾಕೀಸುಗಳಿಗೆ ಹಾಜರಿ ಹಾಕಿದೆ!! ಆಗ ನಾನು ನೋಡಿದ ಚಿತ್ರಗಳ ಲಿಖಿತ ದಾಖಲೆ ಇರಿಸುತ್ತಿದ್ದುದರಿಂದ ಈ ನಿಖರ ಅಂಕಿ ಅಂಶಗಳನ್ನು ಒದಗಿಸಲು ಸಾಧ್ಯವಾಯಿತು.  ಆಗ ನನ್ನ ಮೆಚ್ಚಿನ ಗಾಯಕರಾದ  ರಫಿ ಹಿನ್ನೆಲೆಗೆ ಸರಿದಿದ್ದರು. ಕೆಲವೇ ಸಮಯದಲ್ಲಿ ಪಿ.ಬಿ.ಶ್ರೀನಿವಾಸ್ ಕೂಡ ಅದೇ ಹಾದಿ ಹಿಡಿಯಬೇಕಾಯಿತು.  ಅವರ ಹಾಡುಗಳಿಲ್ಲ ಎಂಬ ಕಾರಣಕ್ಕಾಗಿ ನಾನು ಅನೇಕ ಹೊಸ ಚಿತ್ರಗಳನ್ನು ನೋಡುತ್ತಿರಲಿಲ್ಲ.  ಇಲ್ಲದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತಿತ್ತು.  ಮುಂದೆ ಜೂನಿಯರ್ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿ ತರಬೇತಿಗಾಗಿ ಬೆಂಗಳೂರಿಗೆ ಹೋದಾಗ ಅಲ್ಲಿಯ ಪರಿಮಳ, ಪ್ರದೀಪ್ ಮುಂತಾದ ಟಾಕೀಸುಗಳಲ್ಲಿಯೂ ಬಹಳ ಸಮಯದಿಂದ ನೋಡಲು ಕಾತರಿಸುತ್ತಿದ್ದ ಅನೇಕ ಹಳೆ ಚಿತ್ರಗಳು ನೋಡಲು ಸಿಕ್ಕಿದವು.  ಒಮ್ಮೆ ಪ್ರದೀಪ್ ಟಾಕೀಸಿನಲ್ಲಿ ಧೂಲ್ ಕಾ ಫೂಲ್ ಚಿತ್ರ ನೋಡಲು ಹೋದಾಗ ದೊಡ್ಡ ಕ್ಯೂ ಇದ್ದರೂ ಸುಲಭವಾಗಿ ಟಿಕೇಟು ಸಿಕ್ಕಿದ ಖುಶಿಯಲ್ಲಿ ಕೊಟ್ಟ ದೊಡ್ಡ ನೋಟಿಗೆ ಬಾಕಿ ಚಿಲ್ಲರೆ ಪಡೆಯುವುದನ್ನು ಮರೆತು ಮುಂದೆ ಸಾಗಿದ್ದೆ.  ಮತ್ತೆ ಹಿಂದೆ ಬಂದು ಕ್ಯೂ ಒಳಗೆ ತೂರಿ ಕೌಂಟರಿನವನೊಡನೆ ವಿಚಾರಿಸಲು ಪ್ರಯತ್ನಿಸಿದಾಗ ಆತ ಸಿಟ್ಟುಗೊಂಡು  ಇಂಟರ್‌ವಲ್ ಹೊತ್ತಿಗೆ ಬರಬೇಕೆಂದೂ ಕೊನೆಯಲ್ಲಿ ಎಣಿಸಿ ತಾಳೆ ಮಾಡುವಾಗ ಹೆಚ್ಚುವರಿ ದುಡ್ಡು ಉಳಿದರೆ ಕೊಡುವುದಾಗಿಯೂ ತಿಳಿಸಿದ.  ಇಂಟರ್‌ವಲ್‌ನಲ್ಲಿ ಹೋಗಿ ವಿಚಾರಿಸಿದಾಗ ಹೇಳಿದಂತೆಯೇ ಚಿಲ್ಲರೆ ದುಡ್ಡಿನ ಅಷ್ಟು  ರಾಶಿ ಕೊಟ್ಟ.  ಎಣಿಸುವ ಗೋಜಿಗೆ ಹೋಗದೆ ಕಿಸೆಗೆ ಹಾಕಿದೆ.  ಒಂದೆರಡು ಮಾರ್ನಿಂಗ್ ಶೋಗಳಲ್ಲಿ ಅರ್ಧ ಸಿನಿಮಾ ಆಗುವಾಗ ಪ್ರಾಜೆಕ್ಟರ್ ಕೈ ಕೊಟ್ಟು ಮುಂದಿನ ವಾರದ ಸಿನಿಮಾಗೆ  ಪಾಸ್ ಪಡೆದದ್ದೂ ಇದೆ. 

ಟಾಕೀಸುಗಳಲ್ಲಿ ಪೇವ್‌ಮೆಂಟ್   ಎದುರಿನ ಹಿಂಬದಿಯ ಕೊನೇ ಸಾಲಿನ  ಸೀಟು ಯಾವಾಗಲೂ ನನ್ನ ಆದ್ಯತೆಯಾಗಿರುತ್ತಿತ್ತು. ಏಕೆಂದರೆ ಅಲ್ಲಿ  ಮುಂದೆ ಕೂತವರ ತಲೆ ಅಡ್ಡಬರುವ ಸಮಸ್ಯೆ ಇರುತ್ತಿರಲಿಲ್ಲ. ತೆರೆಯ ಹಿಂದಿನಿಂದ ಕೇಳಿಬರುವ ಅಚ್ಚ ಹೊಸ ಚಿತ್ರಗೀತೆಗಳನ್ನು ಕೇಳುತ್ತಾ ತೆರೆಯ ಮೇಲೆ Welcome ಸ್ಲೈಡ್ ಬೀಳುವುದನ್ನು ಕಾಯುವುದು ಹಿತಕರವಾದ ಅನುಭವವಾಗಿರುತ್ತಿತ್ತು. ಕೆಲವು ಟಾಕೀಸುಗಳಲ್ಲಿ ದೀಪಗಳು ಆರಿ ತೆರೆಯೆ ಮೇಲೆ ಚಿತ್ರಮೂಡಲು ಆರಂಭಿಸುವ ಹೊತ್ತಲ್ಲಿ ಒಂದು ನಿರ್ದಿಷ್ಟ ಗೀತೆ ಅಥವಾ ಟ್ಯೂನ್ ಕೇಳಿಬರುತ್ತಿತ್ತು.    ಜಾಹೀರಾತಿನ slides ಮತ್ತು ಕಿರುಚಿತ್ರಗಳ ನಂತರ ಮುಂಬರುವ ಚಿತ್ರಗಳ ಟ್ರೈಲರ್ ತೋರಿಸುತ್ತಿದ್ದರು.  ಅವುಗಳನ್ನು ಅನೇಕ ಸಲ ನೋಡಿ ಸಿನಿಮಾ ಬರುವುದಕ್ಕೆ ಮೊದಲೇ ಕೆಲವು ಡಯಲಾಗುಗಳು ನಮಗೆ ಕಂಠಪಾಠವಾಗಿರುತ್ತಿದ್ದವು. ಕೆಲವು ಸಲ ಟ್ರೈಲರಲ್ಲಿ ಇದ್ದ ದೃಶ್ಯ ಸಿನಿಮಾದಲ್ಲಿ ಇಲ್ಲದಿರುವುದೂ ಇತ್ತು. ಸಾಮಾನ್ಯವಾಗಿ ಟ್ರೈಲರ್‍ಗಳ ಗುಣಮಟ್ಟ ಕಳಪೆಯಾಗಿರುತ್ತಿತ್ತು. ಅಂದಿನ ದಿನಗಳಲ್ಲಿ ಸಿನಿಮಾ ಆರಂಭದ ಮೊದಲು ವಾರ್ತಾ ಇಲಾಖೆಯ ನ್ಯೂಸ್ ರೀಲ್ ಪ್ರದರ್ಶನ ಕಡ್ಡಾಯವಾಗಿತ್ತು.  ಕೆಲವು ನ್ಯೂಸ್ ರೀಲುಗಳು ಅತಿ ದೀರ್ಘವಾಗಿ ಬೋರ್ ಹೊಡೆಸುವಂತಿರುತ್ತಿದ್ದವು.  ಆಗ ಪ್ರೇಕ್ಷಕರ ಸಿಳ್ಳೆಗಳಿಗೆ ಮಣಿದು ಅದನ್ನು ಅಲ್ಲಿಗೇ ಮೊಟಕುಗೊಳಿಸಿ ಮುಖ್ಯ ಚಿತ್ರ ಆರಂಭಿಸಿದಾಗ ನನಗೂ ಖುಶಿ ಆಗುತ್ತಿತ್ತು. ಕೆಲವು ಇಂಗ್ಲಿಷ್ ಸಿನಿಮಾಗಳ ಅವಧಿ ತುಂಬಾ ಕಮ್ಮಿ ಇರುತ್ತಿದ್ದುದರಿಂದ ಜಾಹೀರಾತು , ಟ್ರೈಲರ್ ಮತ್ತು ನ್ಯೂಸ್ ರೀಲು ಇತ್ಯಾದಿಗಳಗಳ ನಂತರ ಕಾರ್ಟೂನ್ ಚಿತ್ರ ತೋರಿಸುತ್ತಿದ್ದರು.  ಅಷ್ಟರಲ್ಲಿ ಇಂಟರ್‌ವಲ್ ಆಗುತ್ತಿತ್ತು. ಸಿನಿಮಾ ಶುರುವಾದ ಮೇಲೆ ಆಗಾಗ ಹಿಂದೆ ತಿರುಗಿ ಯಾವ ಕಂಡಿಯ ಮೂಲಕ ಪ್ರಾಜೆಕ್ಟರ್ ಬೆಳಕು ಬರುತ್ತಿದೆ ಎಂದೂ ನಾನು ನೋಡುವುದಿತ್ತು.   ನಾವು ಮುಂಗಡ ಬುಕಿಂಗ್ ಮಾಡಿದ ದಿನ ಟಾಕೀಸು ತುಂಬು ತುಳುಕುತ್ತಿದ್ದರೆ, ಬುಕಿಂಗ್ ಮಾಡದ ದಿನ ಖಾಲಿಯಾಗಿದ್ದರೆ ಖುಶಿ ಆಗುತ್ತಿತ್ತು.  ಸಿನಿಮಾ ನೋಡುವಾಗ ಕೆಲವೊಮ್ಮೆ ಅತೀ ಬಾಯಾರಿಕೆಯಾಗುವುದಿತ್ತು.  ಆಗ ಸಿನಿಮಾದಲ್ಲಿ ತಿಳಿ ನೀರ ತೊರೆ ಕಂಡರೆ ಅಥವಾ ಪಾತ್ರವೊಂದು ತಂಪು ಪಾನೀಯ ಕುಡಿಯುವ  ದೃಶ್ಯ ಬಂದರೆ ಬಾಯಾರಿಕೆ ಮತ್ತೂ ಹೆಚ್ಚಾಗುತ್ತಿತ್ತು! 

ಅಂದಿನ ಸಿನಿಮಾಗಳಲ್ಲಿ  ಆಪ್ಟಿಕಲ್ track ಮೂಲಕ ಪುನರುತ್ಪತ್ತಿಯಾಗುತ್ತಿದ್ದ ಆಡಿಯೊ  ಇರುತ್ತಿದ್ದುದರಿಂದ ಟಾಕೀಸುಗಳು ಮಾತ್ರವಲ್ಲ, ಟೆಂಟ್ ಸಿನಿಮಾಗಳಲ್ಲೂ ಸುಸ್ಪಷ್ಟ ಶ್ರೀಮಂತ ಧ್ವನಿ ಕೇಳಿಸುತ್ತಿತ್ತು. ಮೊದಲೇ ರೇಡಿಯೋದಲ್ಲಿ, ಧ್ವನಿವರ್ಧಕಗಳಲ್ಲಿ ಹಾಡುಗಳನ್ನು ಕೇಳಿರುತ್ತಿದ್ದರೂ ಸಿನಿಮಾದ ಭಾಗವಾಗಿ  ಅವುಗಳನ್ನು ಕೇಳುವುದು ಅನನ್ಯ ಅನುಭವ ನೀಡುತ್ತಿತ್ತು.  ಈಗಿನ ಡಿ.ಟಿ.ಎಸ್ , Dolby ಮುಂತಾದ ಯಾವ  ತಂತ್ರಜ್ಞಾನವೂ ಅದನ್ನು ಸರಿಗಟ್ಟಲಾರದು.  ಮೂರು ಗಂಟೆಗಳ ಕಾಲ ಹೊರಗಿನ ಪ್ರಪಂಚವನ್ನು ಮರೆಸಿ ನಮ್ಮನ್ನು ಕನಸಿನ ಲೋಕಕ್ಕೆ ಒಯ್ಯುತ್ತಿದ್ದ ಆ ಸಿನಿಮಾಗಳು ಅಂದಿನ ಆ  ಟಾಕೀಸುಗಳು ಇನ್ನು ಕನಸು ಮಾತ್ರ.


11-2-2018