Tuesday 5 October 2021

ಸ್ಪಿರಿಟ್ ಕಮ್ ಎಂಬ ಗೇಮ್


 
ಸಿಮೆಂಟ್ ನೆಲದ ಮೇಲೆ ಚಾಕ್ ಪೀಸ್ ಬಳಸಿ ಬರೆದ ಈ ರೀತಿಯ ನಕ್ಷೆ.  YES ಮತ್ತು NOಗಳ ನಡುವಿನ ವೃತ್ತಾಕಾರದ ಮೇಲೆ ಬೋರಲು ಹಾಕಿದ ಸ್ಟೀಲ್ ಕಪ್.  ನಕ್ಷೆಯ ಸುತ್ತಲೂ ಕುಳಿತ ಮೂರು ಅಥವಾ ನಾಲ್ಕು ಮಂದಿ ಆ ಕಪ್  ಮೇಲೆ  ತೋರು ಬೆರಳಿಟ್ಟು ಸ್ಪಿರಿಟ್ ಕಮ್, ಸ್ಪಿರಿಟ್ ಕಮ್ ಎಂದು ನಿರಂತರ ಉಚ್ಚರಿಸುತ್ತಿದ್ದಾರೆ. ಕೊಂಚ ಹೊತ್ತಿನಲ್ಲಿ ಬೆರಳುಗಳ ಸಮೇತ ಕಪ್ಪು ಚಲಿಸ ತೊಡಗಿ Yes ಎಂದು ಬರೆದಿರುವಲ್ಲಿಗೆ ಹೋಗಿ  ಮತ್ತೆ ವೃತ್ತಾಕಾರಕ್ಕೆ ಮರಳುತ್ತದೆ. ಬೆರಳಿಟ್ಟವರ ಪೈಕಿ  ಒಬ್ಬರು ‘Do you know Kannada’ ಎಂದು ಕೇಳುತ್ತಾರೆ. ಕಪ್ YESಗೆ ಚಲಿಸಿ ಹಿಂದಿರುಗಿದರೆ ‘ಚಿತ್ಪಾವನಿ ಭಾಷೆ ಬರುತ್ತದೆಯೇ’ ಎಂದು ಕೇಳಲಾಗುತ್ತದೆ. ಸಿಗುವ ಉತ್ತರಕ್ಕೆ ಹೊಂದಿಕೊಂಡು ಮುಂದಿನ ಸಂಭಾಷಣೆ ನಡೆಯುತ್ತದೆ. ‘ನಿನ್ನ ಹೆಸರೇನು?’ ಎಂದು ಕೇಳಿದಾಗ ಕಪ್ ಸರಸರನೆ ಒಂದೊಂದೇ ಅಕ್ಷರಗಳತ್ತ ಚಲಿಸುತ್ತದೆ. ಆ ಅಕ್ಷರಗಳನ್ನು ಜೋಡಿಸಿದಾಗ ಅದೊಂದು ಹೆಸರಾಗಿರುತ್ತದೆ! ಬುದ್ಧಿಪೂರ್ವಕವಾಗಿ ಹಾಗೆ ಅಷ್ಟು ವೇಗದಲ್ಲಿ ಅಕ್ಷರಗಳತ್ತ ಕಪ್ಪನ್ನು ದೂಡಲು ಸಾಧ್ಯವಿಲ್ಲ. ಮುಂದೆ ಕೇಳುವ ಪ್ರಶ್ನೆಗಳಿಗೆಲ್ಲ  YES ಅಥವಾ  NO, ಇಲ್ಲವೇ ಅಕ್ಷರ ಮತ್ತು ಅಂಕೆಗಳತ್ತ ಕಪ್ ಚಲಿಸುವ ಮೂಲಕ ಉತ್ತರ ದೊರೆಯುತ್ತದೆ. ಸಾಕೆನಿಸಿದ ಮೇಲೆ ಕಪ್ ತೆಗೆದು ನಕ್ಷೆಯನ್ನು ಅಳಿಸಲಾಗುತ್ತದೆ. ಕಪ್ ಅಡುಗೆಮನೆ ಸೇರುತ್ತದೆ.

ಇದು 1968ರ ಸುಮಾರಿಗೆ ನಾವು ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ನನ್ನ ತಂಗಿಯಂದಿರು, ಅಣ್ಣನ ಮಕ್ಕಳೆಲ್ಲ ಮನೆಯಲ್ಲಿ ಆಡುತ್ತಿದ್ದ ಆಟ. ಇದು ನಮ್ಮೂರಿಗೆ ಎಲ್ಲಿಂದ ಯಾರ ಮೂಲಕ ಬಂತು ಎಂದು ನೆನಪಿಲ್ಲ. ಆರಂಭದಲ್ಲಿ ಕೆಲ ಸಮಯ  ನಕ್ಷೆಯನ್ನು ಒಂದು ಮಣೆಯ ಮೇಲೆ ಬರೆಯಲಾಗುತ್ತಿತ್ತು.  ಆದರೆ ಚಲಿಸುವ ಕಪ್ ಮಣೆಯ ಪರಿಧಿಯನ್ನು ದಾಟಿ ಕೆಳಗೆ ಬೀಳತೊಡಗಿದ್ದರಿಂದ ನೆಲದ ಮೇಲೆ ಬರೆಯುವ ಪದ್ಧತಿ ಆರಂಭವಾಯಿತು. ಮೊದಮೊದಲು ಬಹಳ ಸಲ ಸ್ಪಿರಿಟ್ ಕಮ್, ಸ್ಪಿರಿಟ್ ಕಮ್ ಎಂದು ಉಚ್ಚರಿಸಿದ ಮೇಲಷ್ಟೇ ಕಪ್ ಚಲಿಸತೊಡಗುತ್ತಿತ್ತು.  ಕ್ರಮೇಣ ಈ ಅವಧಿ ಕಮ್ಮಿಯಾಗುತ್ತಾ ಬಂತು.  ಎರಡು ಅಥವಾ ಮೂರು ಮಂದಿ ಒಟ್ಟಿಗೆ ತೋರುಬೆರಳಿಡುವುದು ಸ್ಪಿರಿಟನ್ನು ಆಹ್ವಾನಿಸುವುದು ರೂಢಿಯಾದರೂ ತಂಗಿ ಒಬ್ಬಳೇ ಬೆರಳಿಟ್ಟರೂ ಕಪ್ ಚಲಿಸತೊಡಗುತ್ತಿತ್ತು. ಇಲ್ಲಿ ಸ್ಪಿರಿಟ್ ಅಂದರೆ ಡಾಕ್ಟರ್ ಇಂಜಕ್ಷನ್ ಕೊಡುವ ಮುನ್ನ ಹಚ್ಚುವಂಥದ್ದು ಅಥವಾ ಗ್ಯಾಸ್ ಲೈಟ್ ಉರಿಸಲು ಉಪಯೋಗಿಸುವಂಥದ್ದು ಅಲ್ಲ, ಅದು ಮೃತ ವ್ಯಕ್ತಿಗಳ ಆತ್ಮ ಎಂಬ ಅರ್ಥದ್ದು ಎಂಬ ಅರಿವಿದ್ದರೂ ಇದನ್ನು ಒಂದು ಆಟ ಎಂದು ತಿಳಿಯಲಾಗುತ್ತಿತ್ತೇ ಹೊರತು ಯಾರಿಗೂ ಭಯವಾಗಲೀ ಅಳುಕಾಗಲೀ ಇರುತ್ತಿರಲಿಲ್ಲ. ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಲೂ ಇರಲಿಲ್ಲ.  ಸಂಪ್ರದಾಯಸ್ಥರಾದ ನಮ್ಮ ಹಿರಿಯಣ್ಣ ಕೂಡ ಈ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ.  ಬದಲಾಗಿ Spiritಗೆ ಅವರೇ ಪ್ರಶ್ನೆಗಳನ್ನು ಕೇಳುತ್ತಿದ್ದರು! ಅವರು ಕಠಿಣ ಪ್ರಶ್ನೆ ಕೇಳಿದರೆ ಕಪ್ ರಭಸವಾಗಿ ನಕ್ಷೆಯ ಪರಿಧಿಯಿಂದ ಹೊರಗೆ ಹೋಗಿ ಸಿಟ್ಟು ತೋರಿಸುತ್ತಿತ್ತು. ಬಹಳ ಪ್ರಶ್ನೆಗಳನ್ನು ಕೇಳಿದರೆ ಇನ್ನು ನಾನು ಹಿಂತಿರುಗುವ ಸಮಯ ಆಯಿತು ಎಂದು ಸೂಚಿಸಿ ಕಪ್ ನಿಶ್ಚಲವಾಗುತ್ತಿತ್ತು.

ಚಲಿಸುವ  ಕಪ್ ಹೆಚ್ಚಾಗಿ ಪಾಶ್ಚಾತ್ಯ ಹೆಸರುಗಳನ್ನೇ ಸೂಚಿಸುತ್ತಿತ್ತು. ಅಂಥ ಸಂದರ್ಭದಲ್ಲಿ ಇಂಗ್ಲೀಷಲ್ಲೆ ಸಂವಹನ ನಡೆಸಬೇಕಾದ್ದರಿಂದ ಸೆಷನ್  ಬೇಗ ಮುಗಿಯುತ್ತಿತ್ತು. ನಮ್ಮ ಪರಿಸರದ ಹೆಸರುಗಳಾದರೆ ಕೇಳುವ ಪ್ರಶ್ನೆಗಳು, ಸಿಗುವ ಉತ್ತರಗಳು ಸ್ವಾರಸ್ಯಪೂರ್ಣವಾಗಿರುತ್ತಿದ್ದವು. ನಮ್ಮ ಕುಟುಂಬದ ಹಿರಿಯರ ಹೆಸರಿನ ‘ಸ್ಪಿರಿಟ್ ’ ಸಹ ಕೆಲವೊಮ್ಮೆ ಬರುವುದಿತ್ತು!  ಕಪ್ ಮೇಲೆ ಬೆರಳಿಟ್ಟವರಿಗೆ ಗೊತ್ತಿರದಿರುವ ವಿಷಯಗಳ ಬಗೆಗಿನ ಪ್ರಶ್ನೆಗಳಿಗೂ ಸೂಕ್ತ ಉತ್ತರ  ಅಂಥ ಸಂದರ್ಭದಲ್ಲಿ ದೊರಕಿದ್ದುಂಟು! ಇಂಥವರೇ ಬರಲಿ ಎಂಬ ಕೋರಿಕೆಗೂ ಕೆಲವು ಸಲ ಮನ್ನಣೆ ದೊರಕುತ್ತಿತ್ತು.

ನಮ್ಮಲ್ಲಿ ಇತರರೆಲ್ಲರೂ ಈ ಆಟದಲ್ಲಿ ಸಕ್ರಿಯ ಭಾಗಿಗಳಾಗುತ್ತಿದ್ದರೂ ನಾನು ಪ್ರೇಕ್ಷಕ ಮಾತ್ರ ಆಗಿರುತ್ತಿದ್ದೆ.  ಕಾಲಕ್ರಮೇಣ ಇದು ಹಿನ್ನೆಲೆಗೆ ಸರಿದು ಈಗ ಎಲ್ಲರಿಗೂ ಮರೆತೇ ಹೋಗಿದೆ.

ಕುತೂಹಲಕ್ಕಾಗಿ ಸ್ಪಿರಿಟ್ ಕಮ್ ಆಟದ ಬಗ್ಗೆ ಗೂಗಲೇಶ್ವರನನ್ನು ವಿಚಾರಿಸಿದಾಗ Ouija Board ಎಂಬ ಹೆಸರಿನಲ್ಲಿ ಇದು 19ನೆಯ ಶತಮಾನದಿಂದಲೇ  ವಿಶ್ವದೆಲ್ಲೆಡೆ ಚಾಲ್ತಿಯಲ್ಲಿರುವುದು ತಿಳಿಯಿತು. ಬೇರೆಡೆ ಬಳಸುವ ನಕ್ಷೆಯಲ್ಲಿ ಅಕ್ಷರ, ಅಂಕೆಗಳು ಅವೇ ಇದ್ದರೂ ವಿನ್ಯಾಸ  ಕೊಂಚ ಭಿನ್ನವಾಗಿದ್ದು ಬೋರಲು ಹಾಕಿದ ಕಪ್ ಬದಲಿಗೆ planchette ಎಂಬ ಬಿಲ್ಲೆ ಅಥವಾ ನಾಣ್ಯವನ್ನು ಈ ಆಟಕ್ಕೆ ಉಪಯೋಗಿಸುತ್ತಾರಂತೆ. ಕೆಲವೆಡೆ ಇದಕ್ಕೆ coined spirit game, planchette game ಎಂಬ ಹೆಸರುಗಳೂ ಇವೆಯಂತೆ.


ಈ ಚಿತ್ರದಲ್ಲಿ Ouija Board ಮತ್ತು planchette ಬಿಲ್ಲೆಗಳನ್ನು ನೋಡಬಹುದು.



ಮನೋವಿಜ್ಞಾನಿಗಳು ಈ ವಿದ್ಯಮಾನದ ಬಗ್ಗೆ ಸಂಶೋಧನೆ ನಡೆಸಿದ್ದು ಈ ಆಟಕ್ಕೆ  ಸುಪ್ತ ಮನಸ್ಸು ಅಪ್ರಯತ್ನವಾಗಿ ಸ್ನಾಯುಗಳನ್ನು ಚಲಿಸುವಂತೆ ಮಾಡುವ Ideomotor Response ಎಂಬ  ಪ್ರಕ್ರಿಯೆ ಕಾರಣವೇ ಹೊರತು  ಬೇರೇನೂ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಆಡುವವರ ಕಣ್ಣುಗಳಿಗೆ ಬಟ್ಟೆ ಕಟ್ಟಿದಾಗ planchette ಅಂಕೆ ಅಕ್ಷರಗಳ ಬದಲಿಗೆ ಎಲ್ಲೆಲ್ಲೋ ಚಲಿಸಿತಂತೆ! ನಾವು ಒಮ್ಮೊಮ್ಮೆ ನಿದ್ರೆಯಲ್ಲಿ ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದಂತಾಗುವುದು Ideomotor Responseಗೆ ಇನ್ನೊಂದು ಉದಾಹರಣೆ ಎಂದು ಹೇಳಲಾಗಿದೆ. ಅಂತರ್ಜಲ ಹುಡುಕುವವರ ಕೈಯ ಕೋಲು ಕಂಪಿಸುವುದಕ್ಕೂ Ideomotor Responseಗೂ ಸಂಬಂಧವಿದೆಯೇ ಎಂಬುದೂ ಸಂಶೋಧನೆಗೆ ಯೋಗ್ಯವಾದ ವಿಚಾರ.

 

 

 

 










9 comments:

  1. ಕಾಕತ್ಕರ್,
    ನೀವು ಬಾಲ್ಯದ ಆಟಗಳ ನೆನಪನ್ನು ಮರುಕಳಿಸಿ ಕೊಟ್ಟಿರಿ.
    ನಾವೂ ಪ್ರಯತ್ನ ಮಾಡಿ ಸೋತು ಹೋದೆವು.
    ಆದರೆ ನಿಮ್ಮ ಲೇಖನದಲ್ಲಿ ನಿಜವಾಗಿಯೂ
    ಕಪ್ ಚಲಿಸಿದನ್ನು ಒಕ್ಕಣೆ ಮಾಡಿದಿರಿ!
    ನಂಬಲು ಆಗುತ್ತಿಲ್ಲ.!

    Rohindranath Kodikal (FB)

    ReplyDelete
  2. ಆಶ್ಚರ್ಯ, ನಮ್ಮ ದೈವಪ್ರಶ್ನೆಗಳೂ ಇದೇ ಮಾದರಿಯದ್ದಾ?
    Sukumar Alampadyಯವರನ್ನು ಪ್ರಶ್ನಿಸಿದರೆ ಉತ್ತರ ಸಿಕ್ಕೀತು.

    Subhashini Hiranya (FB)

    ReplyDelete
  3. ನಾನು ಕಾಲೇಜು ಹಾಸ್ಟೆಲ್ ನಲ್ಲಿರುವಾಗ ಕೆಲವರು ನಾಳಿನ ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳನ್ನು ಇದನ್ನು ಉಪಯೋಗಿಸಿ ತಿಳಿಯುವ ಪ್ರಯತ್ನ ಮಾಡುತ್ತಿದ್ದರು.ಪರೀಕ್ಷೆಸಮಯಕ್ಕೆ ಸ್ಪಿರಿಟ್ ಕೈಕೊಟ್ಟದ್ದೇ ಜಾಸ್ತಿ.
    ದೇವಪ್ರಶ್ನೆ ದೈವಪ್ರಶ್ನೆಗಳಲ್ಲಿ ನಾವು ಗ್ರಹಗತಿಗಳ ಆಧಾರದಲ್ಲಿ ಸಾಧ್ಯತೆಗಳನ್ನು ಪರಿಶೀಲನೆ ನಡೆಸಿ ಚಿಂತಿಸುತ್ತೇವೆ.

    Sukumar Ambalpady (FB)

    ReplyDelete
  4. ನನಗೆ ತಿಳಿದ ಮಟ್ಟಿಗೆ ಇದು ಆಟ ಆಗಿರಲಿಲ್ಲ.ಕೆಲವರು ವಿದ್ಯಾವಂತರೂ ಸಹ ಇದನ್ನು ಸತ್ಯ ವೆಂದೂ ಒಂದು ರೀತಿ ದೈವಿ ಶಕ್ತಿ ಅಥವಾ ದರ್ಶನಪಾತ್ರಿ ಗೆ ದೇವರು ಮೈಮೇಲೆ ಬಂದಂತೆ ಎಂದು ನಂಬತೊಡಗಿದ್ದರು.ನಮ್ಮವರೇ ಒಬ್ಬರು ಇದನ್ನುಮಾಡುತ್ತಿದ್ದರು. ಕೊನೆಗೆ ಜನ ದಾರಿ ತಪ್ಪುವುದನ್ನು ಕಂಡು ಅವರೇ ಹೇಳಿದರು ಇದು ಸುಳ್ಳು ಅಂತ. ಆದರೂ ಕೆಲವರು ಒಪ್ಪಲು ತಯಾರಿರಲಿಲ್ಲ.ನಾವು ಕೆಲ ಸಲ ಕುಚೇಷ್ಟೆಯ ಪ್ರಶ್ನೆ ಕೇಳಿ ಸ್ಪಿರಿಟನ್ನು ರೇಗಿಸಿದ್ದು ಇದೆ. ಆಗ ಮೂಢ ಭಕ್ತರು ನಮ್ಮ ಮೇಲೆ ಸಿಟ್ಟಾಗುತ್ತಿದ್ದರು.ಒಂದು ವಿಷಯ ಮಾತ್ರ ಸತ್ಯ ವಂಚಿಸಲು ಗೊತ್ತಿದ್ದರೆ ವಂಚನೆಗೆ ಒಳಗಾಗುವ ಭಾವುಕರೋ ಅಥವಾ ಮೂಢರೋ ತುಂಬಾ ಜನ ಇದ್ದಾರೆ.ಆದ್ದರಿಂದಲೇ ಕೆಲ ಢೋಂಗಿ ಬಾಬಾಗಳಿಗೆ ಸಾವಿರಾರು ಭಕ್ತರಿದ್ದಾರೆ.

    Aravinda Chiplunkar (FB)

    ReplyDelete
  5. ನಾನು ಇದನ್ನು ಮಾಡುತ್ತಿದ್ದೆ; ಕೆಲವೊ೦ದು ಸಲ ಹುಚ್ಚುಚ್ಚು ಉತ್ತರ ಸಿಗ್ತಿತ್ತು. ಕ್ಲಾಸಿನ ಪ್ರಷ್ಣೆಗಳನ್ನು ಕೇಳಿದರೆ ಒ೦ದೊ೦ದು ರೀತಿಯಲ್ಲಿ ಚಲಿಸುತ್ತಿತ್ತು. ಆದರೆ ದೇವರ ಕೋಣೆ ಎದುರು ಮಾಡಿದರೆ ಚಲಿಸುತ್ತಿರಲಿಲ್ಲ. ಕೆಲವೊ೦ದು ಸಲ ಸನ್ಯಾಸಿಗಳದ್ದು ಋಶಿಗಳದ್ದು ಬರುತ್ತಿತ್ತು. ಒಬ್ಬೊಬ್ಬರು ಕುಳಿತು ಮಾಡಬಾರದೆ೦ದು ಹೇಳುತ್ತಿದ್ದುದರಿ೦ದ ಮೂವರು ಕೂತೇ ಮಾಡುತ್ತಿದ್ದುದು. ಅದರಲ್ಲಿ ನ೦ಬಿಕೆ ಇರುವವರನ್ನು ಮಾತ್ರ ಕೂಡಿಸುತ್ತಿದ್ದುದು. ಆದರೆ ನೆಲ ಬ ಹು ನೈಸ್ ಇರಬೇಕು.ದೊರಗು ನೆಲ ಹಿಡಿಸುತ್ತಿರಲಿಲ್ಲ. ನನ್ನ ಚಿಕ್ಕಪ್ಪ ಒಳ್ಳೆಯ ಧಾರ್ಮಿಕ ರಾಗಿದ್ದುದರಿ೦ದ ಅವರು ಹತ್ತಿರಬ೦ದಾಗ ಸ್ಥಬ್ಧವಾಗುತ್ತಿತ್ತು. ಹಾಗೂ ನಡುರಾತ್ರಿ ಅಮಾವಾಸ್ಯೆಯ೦ದೂ ಮೂವರೂ ಕೂರು ಮಾಡಿದ್ದಿದೆ. ಆದರೆ ನ೦ತರ ಪುಕು ಪುಕು ಆಗಿ ಆ ರಾತ್ರಿ ನಿದ್ರೆ ಖೋತಾ!

    Mukunda Chiplunkar (FB)

    ReplyDelete
  6. ನಾನೂ ಇದನ್ನು ಸಾಕಷ್ಟು ಬಾರಿ ಮಾಡಿರುವೆ. ಎಪ್ಪತ್ತರ ದಶಕದಲ್ಲಿ ಚಿತ್ರದುರ್ಗದಲ್ಲಿದ್ದಾಗ ಅಲ್ಲಿ ಅ. ಭಾ. ಮಹಾ ಮಾಧ್ವ ಮಂಡಳದ ಹಾಸ್ಟೆಲ್ ಸಮೀಪವೇ ಇದ್ದ ಡಾ. ರಾಮಣ್ಣ ಎಂಬವರು ಸ್ಥಾಪಿಸಿದ್ದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಚಿಮಣಿ ಎಣ್ಣೆಯ ಪಂಪ್ ಸ್ಟೌ ಮೇಲೆ ಇದೇ ರೀತಿಯ 'ಅತೀಂದ್ರಿಯ' ಶಕ್ತಿ ಆವಾಹನೆ ಯಾಗುವುದನ್ನೂ ನೋಡಿರುವೆ. ಭಜನೆ ಪೂಜೆ ನಡೆಯುವಾಗ ಅತೀಂದ್ರಿಯ ಶಕ್ತಿಯ 'ಅಟಾಟೋಪದ' ರಭಸವನ್ನೂ ನೋಡಿ ಬೆರಗಾಗಿರುವೆ. ಡಾ. ರಾಮಣ್ಣನವರೇ ಸ್ಟೌ ಹಿಡಿದುಕೊಂಡು ಅದನ್ನು ನಿಯಂತ್ರಿಸುತ್ತಿದ್ದರು. ಸ್ಥಳೀಯ ಹಾಗೂ ಹೊರ ಊರುಗಳಿಂದ ಬಂದ ಭಕ್ತರ ಮನೋಕಾಮನೆ, ಪ್ರಶ್ನೆಗಳಿಗೆ ಉತ್ತರದಂಥ ಮಾನಸಿಕ 'ಕೌಂಸಲಿಂಗ್' ಕೂಡ ಇಲ್ಲಿ ನಡೆಯುತ್ತಿತ್ತು.ಆದರೆ ಹೊರಊರುಗಳಿಂದ ಬಂದವರ ಹೆಸರು, ಅವರೇನೂ ಹೇಳದಿದ್ದರೂ ಅವರ ಸಮಸ್ಯೆಗಳನ್ನು 'ಸ್ಟೌ' ಬರೆದೇ ಹೇಳುತ್ತಿದ್ದುದು ಒಂದು ಅಚ್ಚರಿಯ ವಿಷಯ!

    Anantharaj Melanta (FB)

    ReplyDelete
  7. ನಾವು ಸಣ್ಣವರಿದ್ದಾಗ ಇದನ್ನು ತುಂಬಾ ಆಡುತ್ತಿದ್ದೆವು. ಆದರೆ ಬರಬರುತ್ತಾ ಅದರ ಏಕತಾನತೆಗೆ ಬೇಸತ್ತು ನಿಲ್ಲಿಸಿದೆವು. ಜೊತೆಗೆ ಕೆಲವರು "ಲೋಟದೊಳಗೆ ಜೀವಂತ ಇರುವ ಜನರ ಆತ್ಮಗಳೂ ಬಂದು ಆ ಜನರು ಮೂರ್ಛೆ ಹೋಗುತ್ತಾರಂತೆ" ಅಂತ ಹೆದರಿಸಿದ್ದರು. 🙂

    Vinod Phadke (FB)

    ReplyDelete
  8. ಇಂದಿರಾತನಯ ಅವರ ಕಾದಂಬರಿ ಮಂತ್ರಶಕ್ತಿ ಯಲ್ಲಿ ಇದರ ಉಪಯೋಗ ಆದ ಘಟನೆ ಇದೆ.

    P Suresh Hebbar (FB)

    ReplyDelete
  9. ನಮ್ಮ ಅಪ್ಪ ಇದನ್ನು ಮಾಡ್ತಿದ್ರು ನಿಜ ಇದು ನೀವು ಹೇಳಿದ ರೀತಿಯಲ್ಲಿ ಚಲಿಸುತಿತ್ತು.

    Jyothi Bhat (FB)

    ReplyDelete

Your valuable comments/suggestions are welcome