Tuesday, 8 June 2021

ಸಾಕಿ ಗೀತ


ಬೇಂದ್ರೆ ಅವರ ಸಖಿ ಗೀತ ಶೀರ್ಷಿಕೆಯ ಅಪಭ್ರಂಶ ಇದು ಎಂದು ತಿಳಿದುಕೊಳ್ಳದಿರಿ. ಸಾಕಿ ಗೀತಗಳ ಬಗೆಗಿನ ಲೇಖನವಾದ್ದರಿಂದ ಈ ಶೀರ್ಷಿಕೆ. ನಿಮ್ಮಲ್ಲಿ ಹಳೆ ಸಿನಿಮಾಗಳ ಪದ್ಯಾವಳಿ ಇದ್ದರೆ ಅವುಗಳಲ್ಲಿ ನೀವು ಸಾಕಿ ಎಂಬ ಪದವನ್ನು ನೋಡಿರುತ್ತೀರಿ. ಸಾಕಿ ಎಂದರೆ ಮುಖ್ಯ ಗೀತೆ ಆರಂಭವಾಗುವ ಮೊದಲು ಯಾವುದೇ ಹಿಮ್ಮೇಳವಿಲ್ಲದೆ ಅಥವಾ ಕನಿಷ್ಠ ವಾದ್ಯಗಳ ಸಹಕಾರದೊಡನೆ ಒಂದೆರಡು ಸಾಲುಗಳನ್ನು ಆಲಾಪದ ರೀತಿ ಹೇಳುವುದು. ಇದು ಮುಂದೆ ಬರಲಿರುವ ಹಾಡಿಗೆ ಪೂರ್ವರಂಗ ಇದ್ದ ಹಾಗೆ. ಅಥವಾ ಒಂದು ರೀತಿ ಊಟದ ಮೊದಲು ಕೊಡುವ ಸ್ಟಾರ್ಟರ್ ಅಥವಾ ಎಪೆಟೈಜರ್  ಇದ್ದ ಹಾಗೆ. ಹಿಂದಿ ಹಾಗೂ ಕನ್ನಡ ಚಿತ್ರಸಂಗೀತದಲ್ಲಿ ಈ ಪದ್ಧತಿ ಸುಮಾರು 70ರ ದಶಕದ ವರೆಗೂ ಚಾಲ್ತಿಯಲ್ಲಿತ್ತು.  ಕನ್ನಡ ಚಿತ್ರಸಂಗೀತಕ್ಕೆ ಇದು ನಾಟಕಗಳಲ್ಲಿ ಪ್ರಚಲಿತವಾಗಿದ್ದ ಕಂದ ಪದ್ಯ, ಸೀಸ ಪದ್ಯಗಳ ಪ್ರಭಾವದಿಂದ ಬಂದಿರಬಹುದು. ಮುಶಾಯಿರಾ ಎಂದು ಕರೆಯಲ್ಪಡುವ ಕವಿಗೋಷ್ಠಿಗಳಲ್ಲಿ ಕವಿಗಳು ರಾಗವಾಗಿ  ಕವಿತೆಗಳನ್ನು ವಾಚಿಸುವ ತರನ್ನುಮ್ ಎಂಬ ಪದ್ಧತಿ ಇದು ಹಿಂದಿ ಚಿತ್ರಸಂಗೀತದಲ್ಲಿ ಪ್ರಚಲಿತವಾಗಲು ಕಾರಣವಾಗಿರಬಹುದು.

ಸಾಕಿ ಹಾಡುವಿಕೆ ಗಾಯಕ ಗಾಯಕಿಯರಿಗೆ ಒಂದು ಅಗ್ನಿಪರೀಕ್ಷೆ. ತಪ್ಪುಗಳನ್ನು ಮುಚ್ಚಲು ವಾದ್ಯಗಳ ಸದ್ದು ಇಲ್ಲದಿರುವುದರಿಂದ ಶ್ರುತಿ ಶುದ್ಧತೆ, ಉಚ್ಚಾರದ ಸ್ಪಷ್ಟತೆ, ಉಸಿರಿನ ನಿಯಂತ್ರಣ, ಮೈಕ್ ಮ್ಯಾನೇಜ್‌ಮೆಂಟ್  ಎಲ್ಲಕ್ಕೂ ಇಲ್ಲಿ ಮಹತ್ವ ಇದೆ.

ಇಲ್ಲಿ ಕೆಲವು ಕನ್ನಡ ಮತ್ತು ಹಿಂದಿ ಗೀತೆಗಳ ಸಾಕಿ ಭಾಗಗಳಿವೆ. ಸಂಬಂಧಿಸಿದ ಹಾಡಿನ ಬಗ್ಗೆ ಕೊಂಚ ವಿವರಗಳಿರುತ್ತವೆ.  ಆದರೆ ಹಾಡು ಯಾವುದೆಂದು ಉಲ್ಲೇಖ ಇರುವುದಿಲ್ಲ. ಇದು ಮೆದುಳಿಗೆ ಮೇವು ಒದಗಿಸುವುದಕ್ಕಾಗಿ. ಹೆಚ್ಚಿನವು ಬಲು ಪ್ರಸಿದ್ಧ ಹಾಡುಗಳೇ ಆಗಿವೆ. ಚಿತ್ರದ ಹೆಸರು ಇರುವುದರಿಂದ ಅಂತರ್ಜಾಲದಲ್ಲೂ ಹಾಡು ಹುಡುಕಿ ಕೇಳಬಹುದು.

ಕನ್ನಡ

1. ಶರಣು ಶಂಕರ ಶಂಭೊ
ಇದು ರಾಜ್‌‍ಕುಮಾರ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪದ ಹಾಡು.  ಸಿ.ಎಸ್. ಜಯರಾಮನ್ ಹಾಡಿದ್ದಾರೆ. ಈ ಚಿತ್ರ ತೆಲುಗಿನಲ್ಲೂ ಕಾಳಹಸ್ತಿ ಮಹಾತ್ಮ್ಯಂ ಎಂಬ ಹೆಸರಲ್ಲಿ  ತೆರೆಕಂಡಿದ್ದು ಅಲ್ಲಿ ಇದನ್ನು ಘಂಟಸಾಲ ಹಾಡಿದ್ದರು.

 2. ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಭೂಕೈಲಾಸ ಚಿತ್ರಕ್ಕಾಗಿ ಕು.ರ.ಸೀ ಅವರು ರಚಿಸಿದ ಆರು ನಿಮಿಷಗಳ ಪ್ರಾಸಬದ್ಧ ರಾಮಾಯಣವನ್ನೊಳಗೊಂಡ ಈ ಹಾಡು ಗೊತ್ತಿಲ್ಲದವರು ಯಾರೂ ಇರಲಾರರು.  ಏರು ದನಿಯ ಸಿರ್ಕಾಳಿ ಗೋವಿಂದರಾಜನ್ ಹಾಡಿದ ಈ ಗೀತೆ ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಕನ್ನಡದ ಮೊದಲ ದೀರ್ಘ ಗೀತೆ ಆಗಿರಬಹುದು.

3. ವಿರಹಾಗ್ನಿ ತಾಪದುರಿಯ
ಎಸ್. ಜಾನಕಿ ಕನ್ನಡ ಚಿತ್ರಗಳಲ್ಲಿ ಹಾಡಲು ಆರಂಭಿಸಿದ ಕಾಲದ ಅಬ್ಬಾ ಆ ಹುಡುಗಿ ಚಿತ್ರದ ಗೀತೆ ಇದು. ಪಿ.ಕಾಳಿಂಗ ರಾವ್ ಸಂಗೀತ ನಿರ್ದೇಶನ.  ಮೊದಲ ಸಾಲಿನಲ್ಲಿ ಕೇಳಿಸುವುದು ವಯಲಿನ್ ಧ್ವನಿಯೋ ಜಾನಕಿ ಸ್ವರವೋ ಎಂಬ ಸಂದೇಹ ಮೂಡುತ್ತದೆ!

4. ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ಭಕ್ತ ಕನಕದಾಸ ಚಿತ್ರದ ನಂಬರ್ ವನ್ ಗೀತೆಯ ಪೂರ್ವರಂಗ ಇದು. ಗ್ರಾಮಫೋನ್ ತಟ್ಟೆಯಲ್ಲಿ  ಈ ಭಾಗ  ಇರಲಿಲ್ಲ. ಪಿ.ಬಿ. ಶ್ರೀನಿವಾಸ್  ರಾಜ್‌ಕುಮಾರ್ ಅವರಿಗಾಗಿ ಎಲ್ಲ ಹಾಡುಗಳನ್ನು ಹಾಡಿದ ಮೊದಲ ಚಿತ್ರ ಇದು. ಎಂ.ವೆಂಕಟರಾಜು ಸಂಗೀತ ನೀಡಿದ ಮೊದಲ ಚಿತ್ರವೂ ಹೌದು. ಕನಕದಾಸ ವಿರಚಿತ ಭಾಮಿನಿ ಷಟ್ಪದಿ ಛಂದಸ್ಸಿನ  ಹರಿಭಕ್ತಿಸಾರದ  49ನೆಯ ಪದ್ಯವನ್ನು ಇಲ್ಲಿ ಉಗಾಭೋಗದ ರೂಪದಲ್ಲಿ ಬಳಸಲಾಗಿದೆ.
 
5. ಅರಳೆ ರಾಸಿಗಳಂತೆ

ವಿಜಯನಗರದ ವೀರಪುತ್ರನಾಗಿದ್ದ ಆರ್.ಎನ್. ಸುದರ್ಶನ್ ಅವರಿಗಾಗಿ ಆರ್.ಎನ್. ಜಯಗೋಪಾಲ್ ರಚಿಸಿ ವಿಶ್ವನಾಥನ್ ರಾಮಮೂರ್ತಿ ಸಂಗೀತದಲ್ಲಿ ಪಿ.ಬಿ.ಎಸ್ ಹಾಡಿದ್ದ ಅತಿ ಜನಪ್ರಿಯ ಗೀತೆ ಇದು.  ಹೆಚ್ಚು ವಿವರಣೆಯ ಅಗತ್ಯವಿಲ್ಲ.

6. ಮೂಡಿ ಸಾವಿರ ದಳದಿ ಕಾಯುತಿರುವೆನು ನಿನ್ನ
ಸ್ವರ್ಣಗೌರಿ ಚಿತ್ರಕ್ಕಾಗಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಹಾಡಿದ ಅತಿ ಮಧುರ ಗೀತೆಯ ಸಾಕಿ ಭಾಗದಲ್ಲಿ ಜಾನಕಿ ಧ್ವನಿ ಮಾತ್ರ ಇದೆ. ಇದು ಕೂಡ ಗ್ರಾಮಫೋನ್ ತಟ್ಟೆಯಲ್ಲಿ ಇರಲಿಲ್ಲ. ಎಸ್.ಕೆ. ಕರೀಂ ಖಾನ್ ರಚನೆಗೆ ವೆಂಕಟರಾಜು ಸಂಗೀತ.
 
7. ವಿಮಲ ನೀಲ ಜಲದೊಳೇನು
ಇದು ಕೂಡ ಸ್ವರ್ಣಗೌರಿ ಚಿತ್ರದ ಇನ್ನೊಂದು ಹಾಡಿನ ಪೂರ್ವಭಾವಿ ಭಾಗ. ಜಾನಕಿ ಧ್ವನಿಯಲ್ಲಿದೆ.  ಹಾಡು ಬಲು ಮಧುರ.  ಆದರೆ ಅಷ್ಟೊಂದು ಜನಪ್ರಿಯ ಅಲ್ಲ.
 
8. ಆದಿ ಪೂಜೆಯ ಕೊಂಬ ಆನೆ ಮೊಗನೆ
ಮುರಿಯದ ಮನೆ ಚಿತ್ರದಲ್ಲಿ ರಾಜ್‌ಕುಮಾರ್ ಅವರಿಗಾಗಿ ಘಂಟಸಾಲ ಮತ್ತು ಎಲ್.ಆರ್.ಈಶ್ವರಿ ಸಂಗಡಿಗರೊಡನೆ ಹಾಡಿದ ಹಾಡಿದು. ಕು.ರ.ಸೀ ಸಾಹಿತ್ಯ, ವಿಜಯಾ ಕೃಷ್ಣಮೂರ್ತಿ ಸಂಗೀತ.

9. ಮತಿಹೀನೆ ಕೈಕೇಯಿ

ಇದು ಕೂಡ ಮುರಿಯದ ಮನೆ ಚಿತ್ರದ್ದೇ. ಹಿನ್ನೆಲೆಯಲ್ಲಿ ಬರುವ ಹಾಡಿದು. ರಾಜ್ ಅವರಿಗಾಗಿ ಘಂಟಸಾಲ ಮತ್ತು ಪಿ.ಬಿ.ಶ್ರೀನಿವಾಸ್ ಇಬ್ಬರೂ ಈ ಚಿತ್ರದಲ್ಲಿ ಹಾಡಿದ್ದರು.
 
10. ಪರಿಪರಿಯ ಪರಿಮಳದಿ
ಪಂಢರಿ ಬಾಯಿ ನಿರ್ಮಿಸಿದ ಅನ್ನಪೂರ್ಣ ಚಿತ್ರದ ಹಾಡು ಇದು. ಉದಯಶಂಕರ್ ರಚನೆಗೆ ರಾಜನ್ ನಾಗೇಂದ್ರ ಸಂಗೀತವಿದೆ. ಚಿತ್ರದಲ್ಲಿ ಇದನ್ನು ರೇಡಿಯೋ ನಿಲಯದಲ್ಲಿ ಹಾಡಿದಂತೆ ತೋರಿಸಲಾಗಿದ್ದು ರಾಜನ್ ಮತ್ತು ನಾಗೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ.
 
11. ಓ ನನ್ನ ಬಾಂಧವರೆ
ತ.ರಾ.ಸು ಕಾದಂಬರಿಯನ್ನಾಧರಿಸಿದ ಚಂದವಳ್ಳಿಯ ತೋಟ ಚಿತ್ರದ ಈ ಹಾಡನ್ನು ಬರೆದವರು ಸ್ವತಃ ತ.ರಾ.ಸು. ಸಂಗೀತ ಟಿ.ಜಿ. ಲಿಂಗಪ್ಪ. ಹಾಡಿದವರು ಪೀಠಾಪುರಂ ನಾಗೇಶ್ವರ ರಾವ್.
 
12. ದಯೆಯಿಲ್ಲದಾ ಧರ್ಮವು ಯಾವುದಯ್ಯಾ
ನವಜೀವನ ಚಿತ್ರದ ಹಾಡೊಂದು ಆರಂಭವಾಗುವ ಮೊದಲು ಬಸವೇಶ್ವರರ ಈ ವಚನವನ್ನು ಅಳವಡಿಸಿಕೊಳ್ಳಲಾಗಿದೆ. ಪಿ.ಸುಶೀಲಾ ಹಾಡಿದ್ದಾರೆ.  ಸಂಗೀತ ರಾಜನ್ ನಾಗೇಂದ್ರ.

13. ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ
ಎಸ್.ಪಿ. ಬಾಲಸುಬ್ರಮಣಿಯಂ ದಕ್ಷಿಣ ಭಾರತ ಚಿತ್ರಸಂಗೀತ ಕ್ಷೇತ್ರವನ್ನು ಪೂರ್ತಿ ಆವರಿಸುವುದಕ್ಕೂ ಮೊದಲಿನ  ಈ ಜನಪ್ರಿಯ ಗೀತೆ ಸೀತಾ ಚಿತ್ರದ್ದು.  ಆ ಹಾಡು ಇರದ ಮದುವೆ ಆರ್ಕೆಷ್ಟ್ರಾ ಕಲ್ಪಿಸಲೂ ಸಾಧ್ಯವಿಲ್ಲ.

14. ಪರತತ್ವವನು ಬಲ್ಲ

ಭಕ್ತ ಕುಂಬಾರ ಚಿತ್ರದ ಈ ಹಾಡಿನ ಪರಿಚಯ ಇಲ್ಲದವರು ಯಾರು? ಬಹುಶಃ ರಾಜ್ ಅವರಿಗಾಗಿ ಎಲ್ಲ ಹಾಡುಗಳನ್ನು ಪಿ.ಬಿ.ಎಸ್ ಹಾಡಿದ ಕೊನೆಯ ಚಿತ್ರ ಇದು.
 
15. ಹಾಡುವ ದನಿಯೆಲ್ಲ
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಒಲ್ಲದ ಮನಸ್ಸಿನಿಂದ ಸ್ವತಃ ಎಮ್ಮೆ ಹಾಡು ಹಾಡಿ ಅದು ಜನಪ್ರಿಯವಾದ ಮೇಲೆ ರಾಜ್‌ಕುಮಾರ್ ಅವರು ಬಹದ್ದೂರ್ ಗಂಡು ಚಿತ್ರಕ್ಕಾಗಿ ಮೂರು ಹಾಡುಗಳನ್ನು ಹಾಡಿ  ಗಾಯನ ಕ್ಷೇತ್ರದಲ್ಲಿ ದೃಢ  ಹೆಜ್ಜೆ ಇರಿಸಿದರು. ಆ ಮೂರರಲ್ಲಿ ಇದು ಅತಿ ಜನಪ್ರಿಯವಾಯಿತು.

16. ಸತ್ಯಾತ್ಮಾ ಸತ್ಯಕಾಮಾ
ರಾಜಕುಮಾರ್ ಅವರು ತನ್ನ ಹಾಡುಗಳನ್ನೂ ತಾವೇ ಹಾಡಲು ಆರಂಭಿಸಿದ ಮೇಲೂ ಪಿ.ಬಿ.ಶ್ರೀನಿವಾಸ್ ಅವರಿಗ ದೊರೆತ ಕೆಲವು ಒಳ್ಳೆಯ ಹಾಡುಗಳಲ್ಲಿ ದಾರಿ ತಪ್ಪಿದ ಮಗ ಚಿತ್ರದ ಈ ಹಾಡೂ ಒಂದು.  ಎಸ್. ಜಾನಕಿ ಮತ್ತು ಹಳೆ ಕಾಲದ ಗಾಯಕಿ ಎ.ಪಿ. ಕೋಮಲಾ ಕೂಡ ಜೊತೆಗೆ ಹಾಡಿದ್ದಾರೆ.

17. ಪಾಲ್ಗಡಲಿನಿಂದುದಿಸಿ
ಅಷ್ಟಲಕ್ಷ್ಮಿಯರ ಪೈಕಿ ಧನಲಕ್ಷ್ಮಿ ಅಂದರೆ ಎಲ್ಲರಿಗೂ ಅಧಿಕ ಅಕ್ಕರೆ. ಅದೇ ಹೆಸರಿನ ಚಿತ್ರಕ್ಕಾಗಿ ಪಿ.ಬಿ.ಶ್ರೀನಿವಾಸ್ ಹಾಡಿದ ಗೀತೆ ಇದು. ಸಂಗೀತ ಪಿ.ಬಿ.ಶ್ರೀನಿವಾಸ್ ಅವರ ಸಮೀಪ ಬಂಧು ಎಂ ರಂಗರಾವ್ ಅವರದ್ದು.  ಎಂ. ರಂಗರಾವ್ ಅಂದರೆ ಎಂ. ವೆಂಕಟರಾಜು ಅವರ ಸೋದರ ಎಂಬ ತಪ್ಪು ಅಭಿಪ್ರಾಯವೂ ಕೆಲವರಲ್ಲಿದೆ.
 
18. ಕಂಡೊಡನೆ ಕರ ಪಿಡಿದು
ನಾಟಕರಂಗದ ನಿಕಟ ನಂಟು ಹೊಂದಿದ್ದ   ರಾಜ್‌ಕುಮಾರ್ ಅವರಿಗೆ ಸಾಕಿ ಹಾಡುವುದೆಂದರೆ ನೀರು ಕುಡಿದಷ್ಟು ಸಲೀಸು. ರವಿಚಂದ್ರ ಚಿತ್ರದ ಗೀತೆಯೊಂದರ ಪೂರ್ವರಂಗವಾಗಿ ಇದನ್ನು ಬಲು ಸುಂದರವಾಗಿ ಹಾಡಿದ್ದಾರೆ.
 

ಹಿಂದಿ

ಮಹಮ್ಮದ್ ರಫಿಯನ್ನು ಸಾಕಿ ಗೀತಗಳ ಸರದಾರ ಎನ್ನಬಹುದು. ಏಕೆಂದರೆ  ಸಾಕಿ ಗೀತೆಗಳನ್ನು ಅವರು ಹಾಡಿರುವಷ್ಟು  ಸಂಖ್ಯೆಯಲ್ಲಿ  ಇನ್ಯಾರೂ ಹಾಡಿರಲಾರರು. ಹೀಗಾಗಿ ಲತಾ, ಆಶಾ, ಕಿಶೋರ್, ಮುಕೇಶ್, ಮನ್ನಾಡೇ ಮುಂತಾದವರೂ ಬೆರಳೆಣಿಕೆಯ ಸಾಕಿ ಗೀತೆಗಳನ್ನು ಹಾಡಿರುವರಾದರೂ ಇಲ್ಲಿ ರಫಿಯ ಕೆಲವು ಗೀತೆಗಳನ್ನು ಮಾತ್ರ ದಾಖಲಿಸಿದ್ದೇನೆ.  ಈ ಅಷ್ಟೂ ಗೀತೆಗಳಲ್ಲಿ ರಫಿಯ ಧ್ವನಿ ಒಂದರಲ್ಲಿದ್ದಂತೆ ಇನ್ನೊಂದರಲ್ಲಿ ಇಲ್ಲದಿರುವುದನ್ನು ಗಮನಿಸಬಹುದು. ಪ್ರಕೃತಿಯ ಹಸುರಿನಲ್ಲಿ ನೂರಾರು ವೈವಿಧ್ಯಮಯ ಛಾಯೆಗಳಿರುತ್ತವಂತೆ. ರಫಿಯ ಧ್ವನಿಯ ವೈವಿಧ್ಯವನ್ನೂ ಇದಕ್ಕೆ ಹೋಲಿಸಬಹುದೇನೋ ಏನೋ.

ಕಾಲಕ್ರಮೇಣ ಹಾಡುಗಾರಿಕೆಯ ಶೈಲಿಯಲ್ಲಿ  ಯಾವ ರೀತಿ ಬದಲಾವಣೆಗಳುಂಟಾಗುತ್ತಾ ಹೋದವು ಎಂದು ತಿಳಿಯಲು ಈ ತುಣುಕುಗಳನ್ನು ಕಾಲಾನುಕ್ರಮವಾಗಿ ಜೋಡಿಸಲು ಪ್ರಯತ್ನಿಸಿದ್ದೇನೆ

19. ಅಸೀರ್ ಎ ಪಂಜಾ ಏ ಅಹದೆ ಶಬಾಬ್ ಕರ್ ಕೆ ಮುಝೆ
ಗಾಢ ಪರ್ಶಿಯನ್ ಪ್ರಭಾವದ ಉರ್ದುವಿನಲ್ಲಿರುವ ಮುಜ್ತರ್ ಖೈರಾಬಾದಿಯವರ ಈ ಸಾಲುಗಳು ದಿಲೀಪ್ ಕುಮಾರ್ ಅಭಿನಯದ ದೀದಾರ್ ಚಿತ್ರದ  ಹಾಡಿನವು. ಸಂಗೀತ ನೌಷಾದ್ ಅವರದ್ದು.  ತನ್ನ ಬಾಲ್ಯದ ಗೆಳತಿಯ ಏರುಜವ್ವನದ ದಿನಗಳ ನೆನಪುಗಳು ತನ್ನನ್ನು ತಮ್ಮ ಮುಷ್ಟಿಯಲ್ಲಿ  ಬಿಗಿಯಾಗಿ ಹಿಡಿದಿಟ್ಟಿವೆ ಎಂದು ಈ ಸಾಲುಗಳ ಅರ್ಥವಂತೆ.

20. ಅಕೇಲಿ ಮತ್ ಜೈಯೊ ರಾಧೆ
ರಫಿಯ ಎಲ್ಲ ಹಾಡುಗಳು ಸುಪರ್ ಹಿಟ್ ಆದ ಮೊದಲ ಚಿತ್ರ ಬೈಜೂ ಬಾವ್ರಾದ ಹಾಡಿನ ಸಾಲುಗಳಿವು. ಶಕೀಲ್ ಬದಾಯೂನಿ ಸಾಹಿತ್ಯ ಮತ್ತು ನೌಷಾದ್ ಸಂಗೀತ.
 
21. ಪಾಸೆ ಸಭಿ ಉಲಟ್ ಗಯೆ
ಜಾಗೃತಿ ಎಂಬ ದೇಶಭಕ್ತಿ ಪ್ರಧಾನ ಚಿತ್ರದ ಗೀತೆ ಇದು.  ಈ ಚಿತ್ರದ ಸಂಗೀತ ನಿರ್ದೇಶಕ ಹೇಮಂತ್ ಕುಮಾರ್  ಸ್ವತಃ ಉತ್ತಮ ಗಾಯಕನಾಗಿದ್ದರೂ ರಫಿ ಧ್ವನಿಯನ್ನು ಬಳಸಿದ್ದರು.
 
22. ಚಲೆ ಆಜ್ ತುಮ್ ಜಹಾಂ ಸೆ
ಸಂಗೀತ ನಿರ್ದೇಶಕ ನೌಷಾದ್ ಸ್ವತಃ ನಿರ್ಮಿಸಿದ ಉಡನ್ ಖಟೋಲಾ ಚಿತ್ರದ ಹಾಡು ಇದು. ಇದು ವಾನರಥಮ್ ಎಂಬ ಹೆಸರಲ್ಲಿ ತಮಿಳಿನಲ್ಲೂ ತೆರೆ ಕಂಡಿತ್ತು. ಅದರಲ್ಲಿ ರಫಿ ಹಾಡುಗಳನ್ನು ಟಿ.ಎ. ಮೋತಿ ಹಾಡಿದ್ದರು. ಟಿ.ಎ. ಮೋತಿ ಅಂದರೆ ಕನ್ಯಾರತ್ನ ಚಿತ್ರದ ಮೈಸೂರ್ ದಸರಾ ಬೊಂಬೆ,  ಕಲಾವತಿ ಚಿತ್ರದ ಗಾನ ನಾಟ್ಯ ರಸಧಾರೆ ಮುಂತಾದವುಗಳನ್ನು ಹಾಡಿದವರು.

23. ವಫಾ ಕಿ ರಾಹ ಮೆಂ ಆಶಿಕ್ ಕಿ ಈದ್ ಹೋತಿ ಹೈ

ಮುಗಲ್-ಎ-ಆಜಮ್ ಚಿತ್ರದ ಏಕೈಕ ರಫಿ ಹಾಡು ಇದು. ಜೊತೆಗೆ ಕೋರಸ್ ಕೂಡ ಇದೆ. ನೌಷಾದ್ ಸಂಗೀತ, ಶಕೀಲ್ ಬದಾಯೂನಿ ಸಾಹಿತ್ಯ ಇದ್ದ ಈ ಚಿತ್ರ ವರ್ಣರಂಜಿತವಾಗಿ ಪುನಃ ತೆರೆ ಕಂಡಿತ್ತು.

24.  ಲಾಗಾ ಗೋರಿ ಗುಜರಿಯಾಸೆ

ದಿಲೀಪ್ ಕುಮಾರ್, ವೈಜಯಂತಿಮಾಲಾ ಅಭಿನಯದೊಂದಿಗೆ ತಯಾರಾದ ಟೆಕ್ನಿಕಲರ್ ಚಿತ್ರ ಗಂಗಾ ಜಮುನಾದಲ್ಲಿ ಸಂಭಾಷಣೆಗಳು ಮಾತ್ರ ಭೋಜ್‌ಪುರಿ ಭಾಷೆಯಲ್ಲಿ ಇದ್ದುದಲ್ಲ,  ಹಾಡುಗಳೂ ಅದೇ ಭಾಷೆಯಲ್ಲಿ ಇದ್ದದ್ದು ವಿಶೇಷ.  ಅನೇಕ ಚಿತ್ರಗಳಲ್ಲಿ ಗ್ರಾಮ್ಯ ಭಾಷೆಯಲ್ಲಿ ಮಾತನಾಡುವ ಪಾತ್ರ ಹಾಡುವಾಗ ಮಾತ್ರ ಶಿಷ್ಠ ಭಾಷೆ ಬಳಸುವುದಿದೆ.

25. ಜರಾ ಠಹರೊ ಸದಾ ಮೇರೆ ದಿಲ್ ಕೀ

ಶಮ್ಮಿ ಕಪೂರ್ ಡ್ಯಾಶಿಂಗ್ ಹೀರೋ ರೂಪದಲ್ಲಿ ಉತ್ತುಂಗದಲ್ಲಿರುವಾಗಲೇ ಚಿತ್ರದ ಬಹುಭಾಗದಲ್ಲಿ ವಯಸ್ಸಾದ ಪ್ರಾಧ್ಯಾಪಕನಾಗಿ   ನಟಿಸಿದ ಪ್ರೊಫೆಸರ್ ಚಿತ್ರದ ಹಾಡು ಇದು. ಹಸ್ರತ್ ಜೈಪುರಿ ಸಾಹಿತ್ಯಕ್ಕೆ ಶಂಕರ್ ಜೈಕಿಶನ್ ಸಂಗೀತ.

26. ಬಿಜ್‌ಲೀ ಗಿರಾ ಕೆ ಆಪ್ ಖುದ್
ಬಿ.ಆರ್. ಪಂತುಲು ಅವರು ನಿರ್ಮಿಸಿ ನಿರ್ದೇಶಿಸಿದ ಶಮ್ಮಿ ಕಪೂರ್ ಅಭಿನಯದ ದಿಲ್ ತೇರಾ ದೀವಾನಾ ಚಿತ್ರದ ಹಾಡು.  ಸಂಗೀತ ಶಂಕರ್ ಜೈಕಿಶನ್ ಅವರದ್ದು. ಸಾಮಾನ್ಯವಾಗಿ ಗಜಲ್ ಶೈಲಿಯ ಹಾಡುಗಳಿಗೆ ಬಳಸುವ ಸಾಕಿ ಆಲಾಪ ಈ ಏರು ಸ್ಥಾಯಿಯಲ್ಲಿ ಆರಂಭವಾಗುವ ಜಾಸ್ ಶೈಲಿಯ ಗೀತೆಯಲ್ಲಿರುವುದು ವಿಶೇಷ.

27. ಜಾನೆ ವಾಲೆ ಕಭೀ ನಹಿಂ ಆತೆ

ದಿಲ್ ಏಕ್ ಮಂದಿರ್ ಚಿತ್ರದ ಕೊನೆಯಲ್ಲಿ ಬರುವ ಹಾಡಿದು.  ಸಾಧಾರಣವಾಗಿ ಚಿತ್ರ ಕೊನೆಯಾಗುತ್ತಾ ಬಂದಂತೆ ಪ್ರೇಕ್ಷಕರು ಒಬ್ಬೊಬ್ಬರೇ ಎದ್ದು ಹೊರಡುವುದು ವಾಡಿಕೆ.  ಆದರೆ ಈ ಶಂಕರ್ ಜೈಕಿಶನ್ ಹಾಡು  ಚಿತ್ರಮಂದಿರದ ದೀಪಗಳು ಬೆಳಗುವ ವರೆಗೆ ಎಲ್ಲರನ್ನೂ ಹಿಡಿದಿಟ್ಟಿರಬಹುದು.

28. ಬಹಾರೇ ಹುಸ್ನ್ ತೆರಿ
ಈ ಮೊದಲು ಸರಸ್ವತಿ ದೇವಿ ಎಂಬ ಸಂಗೀತ ನಿರ್ದೇಶಕಿ ಆಗಿ ಹೋಗಿದ್ದರೂ ಸಂಗೀತ ನಿರ್ದೇಶನ ಕ್ಷೇತ್ರದಲ್ಲಿ 60ರ ದಶಕದಲ್ಲಿ ಹೆಚ್ಚು ಯಶಸ್ಸು ಗಳಿಸಿದ ಏಕೈಕ ಮಹಿಳೆ ಉಷಾ ಖನ್ನಾ.  ಅವರ ಸಂಗೀತವಿದ್ದ ಆವೋ ಪ್ಯಾರ್ ಕರೇಂ ಚಿತ್ರದ ಹಾಡು ಇದು. ಸಾಹಿತ್ಯ ರಾಜೇಂದ್ರ ಕೃಷ್ಣ. ಜೋಯ್ ಮುಖರ್ಜಿ, ಸಾಯಿರಾಬಾನು ಮುಖ್ಯ ಭೂಮಿಕೆಯಲ್ಲಿದ್ದರು. ನನಗೆ ಬಲು ಇಷ್ಟವಾದ ಸಾಕಿಗಳಲ್ಲಿ ಇದು ಒಂದು.
 
29.  ದೂರ್ ಬಹುತ್ ಮತ್ ಜಾಯಿಯೆ
ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರಕ್ಕಾಗಿ ಓ.ಪಿ. ನಯ್ಯರ್ ನಿರ್ದೇಶನದಲ್ಲಿ ರಫಿ ಮತ್ತು ಆಶಾ ಭೋಸ್ಲೆ ಹಾಡಿದ ಹಾಡು ಇದು. ಸಾಕಿ ಭಾಗದಲ್ಲಿ ಇಬ್ಬರ ಧ್ವನಿಯೂ ಇರುವುದು ವಿಶೇಷ. ಹೀಗಿರುವುದು ಕಮ್ಮಿ.  ಹಾಡಿನ ಈ ಭಾಗ ಕೇಳಿದಾಗಲೆಲ್ಲ ನಾನು ಉಜಿರೆಯಿಂದ ನಡೆದುಕೊಂಡು ಹೋಗುವಾಗ  ನಿಡಿಗಲ್ ಸಮೀಪ ಟಾರ್ ರಸ್ತೆ ಬಿಟ್ಟು ನಮ್ಮ ಮನೆಯತ್ತ ಸಾಗುವ ಒಳದಾರಿ ಹಿಡಿಯುವ ದೃಶ್ಯವೇ ನನ್ನ ಕಣ್ಣ ಮುಂದೆ ಬರುವುದು.

30. ಮೆಹರಬಾನ್ ಲಿಖೂಂ

ರಾಜ್ ಕಪೂರ್ ಅವರ ಸಂಗಂ ಚಿತ್ರದಲ್ಲಿದ್ದ ಏಕೈಕ ರಫಿ ಹಾಡು ಇದು ಅಂದರೆ ಯಾವುದೆಂದು ತಿಳಿದು ಬಿಡುತ್ತದೆ. ಇದರ ಉದಾಹರಣೆ ಕೊಡುತ್ತಾ  ಚಿತ್ರದಲ್ಲಿ ವೈಜಯಂತಿಮಾಲಾ ಅವರಿಗೆ ರಾಜೇಂದ್ರ ಕುಮಾರ್ ಅವರೊಂದಿಗೆ ಲವ್ ಆದದ್ದಲ್ಲ, ರಫಿ ಅವರ ಧ್ವನಿಯೊಂದಿಗೆ ಎಂದು ಎಸ್.ಪಿ.ಬಿ ಹೇಳುವುದಿತ್ತು. ಇಲ್ಲಿ ಬರುವ ಮೆಹರಬಾನ್, ಹಸೀನಾ, ದಿಲ್‌ರುಬಾ ಮುಂತಾದವುಗಳೆಲ್ಲ ಪತ್ರ ಬರೆಯುವ ವಿವಿಧ ಶೈಲಿಗಳಿರಬಹುದು ಎಂದು ನಾನು ಮೊದಲು ಅಂದುಕೊಂಡಿದ್ದೆ! ಅವೆಲ್ಲ ಆರಂಭದ ಸಂಬೋಧನೆಯ ಆಯ್ಕೆಗಳು ಎಂದು ಆ ಮೇಲೆ ಅರಿತೆ.

31. ದುಖ್ ಹೊ ಯಾ ಸುಖ್ ಜಬ್ ಸದಾ

ಪಾರಸ್ ಮಣಿ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಲಕ್ಷ್ಮಿಕಾಂತ್ ಪ್ಯಾರೇಲಾಲ್ ಅವರನ್ನು ಉನ್ನತ ಶ್ರೇಣಿಯಲ್ಲಿ ತಂದು ನಿಲ್ಲಿಸಿದ ಚಿತ್ರ ದೋಸ್ತಿಯ ಹಾಡು ಇದು. ಮಜರೂಹ್ ಸುಲ್ತಾನ್‌ಪುರಿ ಅವರು ಬರೆದ ‘ದುಃಖವಾಗಲಿ ಸುಖವಾಗಲಿ ನಮ್ಮೊಂದಿಗೆ ಸದಾ ಇರುವುದಿಲ್ಲ.  ಹಾಗಿದ್ದರೆ ಹೋದರೂ ದುಃಖವಾಗದ ದುಃಖವನ್ನೇ ನಮ್ಮದಾಗಿಸಿಕೊಳ್ಳುವುದು ಒಳ್ಳೆಯದಲ್ಲವೇ’ ಎಂಬ ತಾತ್ಪರ್ಯದ ಸಾಲುಗಳು ಸಿನಿಮಾ ಹಾಡಿನಂತೆ ಭಾಸವಾಗುವುದಿಲ್ಲ. ಕಬೀರರ ದ್ವಿಪದಿಯೇನೋ ಎನಿಸುತ್ತವೆ. ನಾನೊಮ್ಮೆ ಮಲೇರಿಯಾ ಬಾಧೆಗೆ ತುತ್ತಾಗಿ ಆಸ್ಪತ್ರೆ ವಾಸಿಯಾಗಬೇಕಾಗಿ ಬಂದಿತ್ತು.  ಅಲ್ಲಿ ರಾತ್ರಿಯ ನೀರವತೆಯಲ್ಲಿ ಈ ಸಾಲುಗಳೇ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದ್ದವು.

32. ಪ್ಯಾರ್ ಕಾ ಸಾಜ್ ಭಿ ಹೈ
ಆರಂಭದಿಂದಲೂ ದೇವಾನಂದ್ ಕಿಶೋರ್ ಕುಮಾರ್ ಧ್ವನಿಯಲ್ಲೇ ಹಾಡುತ್ತಿದ್ದುದು. ಆದರೆ 60ರ ದಶಕದ  ಅವರ ಹೆಚ್ಚಿನ ಚಿತ್ರಗಳಲ್ಲಿ  ರಫಿಯೇ ಹಾಡಿದ್ದು.  ಅಸ್ಲಿ ನಕ್ಲಿ   ಅಂಥವುಗಳಲ್ಲೊಂದು. ಹೃಷೀಕೇಶ್ ಮುಖರ್ಜಿ ಅವರ ನಿರ್ದೇಶನವಿದ್ದ ಈ ಚಿತ್ರದ ನಾಯಕಿ ಸಾಧನಾ.  ಶಂಕರ್ ಜೈಕಿಶನ್ ಸಂಗೀತ ಇತ್ತು.

33. ಖುಶಿ ಜಿಸ್ ನೆ ಖೋಜಿ
ಚಾ ಚಾ ಚಾ ಎಂಬ ವಿಚಿತ್ರ ಎಂದೆನಿಸುವ ಹೆಸರಿನ ಚಿತ್ರದ ಗೀತೆ ಇದು. ವಾಸ್ತವವಾಗಿ ಚಾ ಚಾ ಚಾ ಅಂದರೆ  ಒಂದು ಪಾಶ್ಚಾತ್ಯ ನೃತ್ಯ ಶೈಲಿ.  ಈ ಚಿತ್ರದ  ಸಂಗೀತ ನಿರ್ದೇಶಕ  ಅತಿ ಪ್ರತಿಭಾವಂತ, ಆದರೆ ಹೆಚ್ಚು ಅವಕಾಶಗಳು ಸಿಗದ ಇಕ್ ಬಾಲ್ ಖುರೇಶಿ.  ಹಿಂದಿಯ ಪ್ರಸಿದ್ಧ ಕವಿ ಗೋಪಾಲದಾಸ್ ನೀರಜ್ ಅವರ ಗೀತೆಗಳು ಈ ಚಿತ್ರದಲ್ಲಿದ್ದವು.

34.  ಕಭೀ ಪಹಲೆ ದೇಖಾ ನಹೀಂ ಯೇ ಸಮಾ
ಶಶಿ ಕಪೂರ್ ಅವರನ್ನು ಯಶಸ್ವಿ ಹೀರೊಗಳ ಸಾಲಿಗೆ ತಂದು ನಿಲ್ಲಿಸಿದ ಜಬ್ ಜಬ್ ಫೂಲ್ ಖಿಲೆ ಚಿತ್ರದ  ಹಾಡುಗಳು  ಗೀತ ರಚನೆಕಾರ ಆನಂದ್ ಬಕ್ಷಿ ಅವರನ್ನೂ  ಮುಂಚೂಣಿಗೆ ತಂದವು. ಆಗಿನ ಚಿತ್ರಗಳಲ್ಲಿ ನಾಯಕ ಪಾರ್ಟಿಗಳಲ್ಲಿ ಪಿಯಾನೊ ಹಿಮ್ಮೇಳದೊಂದಿಗೆ ಹಾಡುವ ಒಂದಾದರೂ ಹಾಡು ಇರುವುದು ಸಾಮಾನ್ಯವಾಗಿತ್ತು.  ಇದೂ ಅಂಥದ್ದೇ. ಕಲ್ಯಾಣಜೀ ಆನಂದಜೀ ಸಂಗೀತವಿದೆ.

35. ಜಲ್ತೆ ಭಿ ಗಯೆ ಕಹತೆ ಭಿ ಗಯೆ

ಮರ ಸುತ್ತುತ್ತಾ ಹಾಡುವ ಚಾಕಲೇಟ್ ಹೀರೋ ಆಗಿ  ಸಾಕಷ್ಟು ಯಶಸ್ಸು ಪಡೆದಿದ್ದ ಮನೋಜ್ ಕುಮಾರ್ ಮೊದಲ ಬಾರಿಗೆ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರವನ್ನು ನಿರ್ವಹಿಸಿದ ಶಹೀದ್ ಚಿತ್ರದ ಹಾಡು. ಈ ಚಿತ್ರದೊಂದಿಗೆ ಅದು ವರೆಗೆ ಗೀತ ರಚನೆಕಾರನ ರೂಪದಲ್ಲಿ ಗುರುತಿಸಿಕೊಂಡಿದ್ದ ಪ್ರೇಮ್ ಧವನ್ ಸಂಗೀತ ನಿರ್ದೇಶಕ ಕೂಡ ಆದರು.  ಈ ಚಿತ್ರದ ಮುಖ್ಯ ಗಾಯಕ ರಫಿಯೇ ಆಗಿದ್ದರು.  ಆದರೆ ನಂತರದ ಉಪಕಾರ್, ಪೂರಬ್ ಔರ್ ಪಶ್ಚಿಮ್ ಇತ್ಯಾದಿ ಚಿತ್ರಗಳಲ್ಲಿ ಮನೋಜ್ ಕುಮಾರ್ ಮಹೇಂದ್ರ ಕಪೂರ್ ಅವರನ್ನು ಹೆಚ್ಚು ಬಳಸಿಕೊಂಡರು. ನಾನೊಮ್ಮೆ ಅಗಸ್ಟ್ ತಿಂಗಳಲ್ಲಿ ಇಲಾಖಾ ತರಬೇತಿಗಾಗಿ ಜಬಲ್‌ಪುರಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ತರಬೇತಿ ಕೇಂದ್ರ  ಕಂಟೋನ್ಮೆಂಟ್ ಪರಿಸರದಲ್ಲೇ ಇರುವುದು. ನಾವು ಆಚೀಚೆ ಅಡ್ಡಾಡುವಾಗೆಲ್ಲ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಲ್ಲಿಂದ ಈ ಹಾಡು ಪದೇ ಪದೇ ಧ್ವನಿವರ್ಧಕದಲ್ಲಿ ಕೇಳಿ ಬರುತ್ತಿತ್ತು.  ಹಾಗಾಗಿ ಈ ಹಾಡಿನೊಂದಿಗೆ ಜಬಲ್‌ಪುರದ ನೆನಪು ಶಾಶ್ವತವಾಗಿ ತಳಕು ಹಾಕಿ ಕೊಂಡಿದೆ.
 
36. ಮೆರೆ ದಿಲ್ ಸೆ ಸಿತಂಗರ್
ಹಿಟ್ ಚಿತ್ರಗಳನ್ನು ಕೊಡುತ್ತಲೇ ಬಂದ ಜೆ. ಓಂ ಪ್ರಕಾಶ್ ಅವರ ಆಯೇ ದಿನ್ ಬಹಾರ್ ಕೇ ಚಿತ್ರದ ಈ ಹಾಡಿನಲ್ಲಿ ನಾಯಕ  ತನ್ನ ಪ್ರಿಯತಮೆಗೆ ಕೆಟ್ಟದನ್ನೇ ಹಾರೈಸುವುದು ಇದನ್ನು ಬೇರೆಯಾಗಿ ನಿಲ್ಲಿಸುತ್ತದೆ.  ಒಮ್ಮೆ ರೇಡಿಯೋ ಸಿಲೋನಿನಲ್ಲಿ ಸಿನಿಮಾ ಜಾಹೀರಾತುಗಳು ಯಾವುದೋ ಕಾರಣಕ್ಕೆ ನಿಂತು ಹೋಗಿದ್ದವು.  ಅವು ಮತ್ತೆ ಆರಂಭವಾದದ್ದು ಈ ಚಿತ್ರದ ಪ್ರಚಾರದೊಂದಿಗೆ. 

37.  ಚಾಹೆ ಲಾಖ್ ಕರೊ ತುಮ್ ಪೂಜಾ

ಸಂಜಯ್ ಖಾನ್ ಬಬಿತಾ ಜೊತೆಗೆ ಮೊದಲ ಬಾರಿ ಕಾಣಿಸಿಕೊಂಡು ಭಿಕ್ಷುಕನೊಬ್ಬನ ಹಾರ್ಮೋನಿಯಮ್ ನುಡಿಸುತ್ತಾ ದಸ್ ಲಾಖ್ ಚಿತ್ರದಲ್ಲಿ ಈ ಹಾಡು ಹಾಡಿದ್ದರು.  ಸಾಹಿತ್ಯ ಮತ್ತು ಸಂಗೀತ ರವಿ ಅವರದ್ದು. ಪ್ರೊ ಶಂಕರ್ ಅವರ ಮ್ಯಾಜಿಕ್ ಕಾರ್ಯಕ್ರಮದಲ್ಲಿ ಮನಿ ಮನಿ ಎಂಬ ಐಟಮಿಗೆ ನಾನು ಈ ಟ್ಯೂನ್ ನುಡಿಸುತ್ತಿದ್ದೆ.
 
38. ಕಿಸ್ ಬಿಧಿ ಕರೆಂ ಬಖಾನ್
ಸದಾ ದುಡ್ಡಿಗಾಗಿ ಹಪಹಪಿಸುತ್ತಿರುವ ವ್ಯಕ್ತಿಯೊಬ್ಬ ಒಮ್ಮಿಂದೊಮ್ಮೆಲೇ ಲಕ್ಷಾಧೀಶನಾದಾಗ ದೇವರಿಗೆ ಧನ್ಯವಾದ ಅರ್ಪಿಸುವ ಈ ಹಾಡೂ ದಸ್ ಲಾಖ್ ಚಿತ್ರದ್ದೇ. ಹಿಂದಿನ ಹಾಡನ್ನು ಹೀರೋಗಾಗಿ ಹಾಡಿದ ರಫಿ ಇದನ್ನು ಹೀರೊನ ಅಪ್ಪನಿಗಾಗಿ ಹಾಡಿದ್ದು.

39. ನ ಮೈ ಸಿಂಧಿ ನ ಮೈ ಮರಾಠಿ

ಜಾನ್‌ವರ್ ಚಿತ್ರದ ಪ್ರಸಿದ್ಧ ಹಾಡಿನ ಮೊದಲ ಸಾಲನ್ನು ಶೀರ್ಷಿಕೆಯಾಗಿರಿಸಿಕೊಂಡ ಚಿತ್ರ ತುಮ್ ಸೆ ಅಚ್ಛಾ ಕೌನ್ ಹೈ.  ಈ ಚಿತ್ರದಲ್ಲಿ ಶಮ್ಮಿ ಕಪೂರ್ ಹಾಡುವ ರಾಷ್ಟ್ರೀಯ ಸಮನ್ವತೆಯನ್ನು  ಸಾರುವ ಈ ಹಾಡು ಬರೆದವರು ರಾಜೇಂದ್ರ ಕಿಶನ್.  ಶೈಲೇಂದ್ರ ಅವರ ನಿಧನದ ನಂತರ  ಇವರು ಶಂಕರ್ ಜೈಕಿಶನ್ ಬಳಗಕ್ಕೆ ಸೇರ್ಪಡೆಯಾಗಿದ್ದರು.

40. ಅಪ್‍ನೆ ರುಖ್ ಪರ್ ನಿಗಾಹ ಕರ್‌ನೇ ದೇ
ಆ ಕಾಲದಲ್ಲಿ ಮುಸ್ಲಿಂ ಸೋಶಿಯಲ್  ಎಂದು ಕರೆಯಲ್ಪಡುವ ಕೆಲವು ಚಿತ್ರಗಳು ತಯಾರಾಗುತ್ತಿದ್ದವು. ಚೌದವೀಂ ಕಾ ಚಾಂದ್, ಮೇರೇ ಮೆಹಬೂಬ್, ಪಾಲ್ಕಿ ಮುಂತಾದವುಗಳಂತೆ  ಮೇರೇ ಹುಜೂರ್ ಕೂಡ ಅಂಥದ್ದೇ ಚಿತ್ರ. ನಾಯಕಿ ಮಾಲಾ ಸಿನ್ಹಾ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜಿತೇಂದ್ರ ಆಕೆಯನ್ನು ನೋಡಿ ಈ ಹಾಡು ಹಾಡುತ್ತಾನೆ. ಸಾಹಿತ್ಯ ಹಸರತ್ ಜೈಪುರಿ. ಸಂಗೀತ ಶಂಕರ್ ಜೈಕಿಶನ್

41. ಫಲಕ್ ಪೆ ಜಿತ್ನೆ ಸಿತಾರೆ

ಇದು ಕೂಡ ಮೇರೇ ಹುಜೂರ್ ಚಿತ್ರದ್ದೇ.  ಹಿಂದಿನ ಹಾಡಿನ ಸೌಮ್ಯತೆಗೆ   ವಿರುದ್ಧವಾಗಿ ಇದು ಏರು ಸ್ಥಾಯಿಯ ಹತಾಶ ಭಾವವನ್ನು ಪ್ರದರ್ಶಿಸುತ್ತದೆ.

42. ಕರಾರ್ ಖೋಯಾ ಮೊಹಬ್ಬತ್ ಮೆಂ

ರಾಜೇಂದ್ರ ಕುಮಾರ್, ಬಬಿತಾ ಅಭಿನಯದ ಅಂಜಾನಾ ಚಿತ್ರದ ಮಾಧುರ್ಯಪೂರ್ಣ ಹಾಡು ಇದು.  ಆನಂದ್ ಬಕ್ಷಿ ಅವರ ಸಾಹಿತ್ಯಕ್ಕೆ ಲಕ್ಷ್ಮೀ ಪ್ಯಾರೆ ಸಂಗೀತ ಇತ್ತು.

43. ನಜರ್ ವೊ
ಜೊ ದುಶ್ಮನ್ ಪೆ ಭಿ ಮೆಹರ್‌ಬಾನ್ ಹೊ
ಜೆ. ಓಂಪ್ರಕಾಶ್ ಅವರ ಆಯಾ ಸಾವನ್ ಝೂಮ್ ಕೆ ಚಿತ್ರದಲ್ಲಿ ಧರ್ಮೇಂದ್ರ ಮತ್ತು ಆಶಾ ಪಾರೇಖ್ ಮುಖ್ಯ ಪಾತ್ರಗಳಲ್ಲಿದ್ದರು.  ಆ ಚಿತ್ರದಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಏಳು ಹಾಡುಗಳಿದ್ದು `Seven Songs Are Seven Steps To Heaven' ಎಂದು ಚಿತ್ರದ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಚಿತ್ರಕ್ಕೂ ಆನಂದ್ ಬಕ್ಷಿ ಅವರ ಸಾಹಿತ್ಯ ಮತ್ತು ಲಕ್ಷ್ಮೀ ಪ್ಯಾರೆ ಸಂಗೀತ ಇತ್ತು.

44. ಯೇ ರಾತ್ ಜೈಸೆ ದುಲ್ಹನ್

ಟ್ರಾಜಿಡಿ ಕಿಂಗ್ ಎಂದೇ ಪ್ರಸಿದ್ಧರಾಗಿದ್ದ ದಿಲೀಪ್ ಕುಮಾರ್ ತಾನು ಲಘು ಶೈಲಿಯ ಹಾಸ್ಯಭರಿತ ಪಾತ್ರಗಳನ್ನೂ ಅಷ್ಟೇ ಲೀಲಾಜಾಲವಾಗಿ ನಿಭಾಯಿಸಬಲ್ಲೆ ಎಂದು ಸಾಬೀತು ಪಡಿಸಿದ ರಾಮ್ ಔರ್ ಶ್ಯಾಮ್ ಚಿತ್ರದ ಪಿಯಾನೋ ಹಾಡಿದು. ನೌಷಾದ್, ಶಕೀಲ್ ಬದಾಯೂನಿ ಟೀಮಿನ ಕೊನೆಯ ಕೆಲವು ಸಫಲ  ಚಿತ್ರಗಳ ಪೈಕಿ ಇದು ಒಂದು.  ಯಾವುದಾದರೂ ನೆಪದಲ್ಲಿ ಊರಿಂದ ಮಂಗಳೂರಿಗೆ ಬಂದು ವರ್ಷಕ್ಕೆ  ಒಂದೆರಡು ಸಿನಿಮಾಗಳನ್ನಾದರೂ ನೋಡುವ ಪ್ರಯತ್ನ ನಾನು ಮಾಡುತ್ತಿದ್ದೆ.  ನಾನು ಟಾಕೀಸು ತಲುಪುವಷ್ಟರಲ್ಲಿ ಹೌಸ್ ಫುಲ್ ಆಗಿ ಟಿಕೇಟು ಸಿಗದೆ ನನ್ನನ್ನು ನಿರಾಶೆಗೊಳಿಸಿದ್ದ ಮೊದಲ ಸಿನಿಮಾ ಇದು. ಉದ್ಯೋಗ ಸಿಕ್ಕಿದ ಮೇಲೆ ಈ ಚಿತ್ರ  ಮರುಬಿಡುಗಡೆ ಆದಾಗ ನೋಡಿ ಮನಸಾರೆ ಆನಂದಿಸಿದೆ ಎನ್ನಿ.

45.  ತೇರಿ ಮೊಹಬ್ಬತ್ ಪೆ ಶಕ್ ನಹೀಂ ಹೈ

ದಿಲೀಪ್ ಕುಮಾರ್, ನೌಷಾದ್, ಶಕೀಲ್ ಸಹಯೋಗದ ಇನ್ನೊಂದು ಚಿತ್ರ ಆದ್ಮಿ. ಅದರಲ್ಲಿ ತನ್ನ ಪತ್ನಿಯ ಶೀಲವನ್ನು ಶಂಕಿಸಿ ನಾಯಕ ಹಾಡುವ ಹಾಡು ಇದು.  ಈ ಹಾಡು ಬೇರೆಯೇ ಧಾಟಿಯಲ್ಲಿ  ಮಹೇಂದ್ರ ಕಪೂರ್ ಧ್ವನಿಯಲ್ಲೂ ರೆಕಾರ್ಡ್ ಆಗಿದ್ದು ಅಂತರ್ಜಾಲದಲ್ಲಿ ಕೇಳಲು ಲಭ್ಯ ಇದೆ.
 
46. ದಿಲ್ ಪಾಯಾ ಅಲಬೇಲಾ ಮೈನೆ
ದಿಲೀಪ್ ಕುಮಾರ್ ಮತ್ತು ವೈಜಯಂತಿಮಾಲಾ ಮುಖ್ಯ ಭೂಮಿಕೆಯಲ್ಲಿದ್ದು ನೌಷಾದ್ ಅವರದ್ದೇ ಸಂಗೀತವಿದ್ದ ಸಂಘರ್ಷ್ ಚಿತ್ರದ ಈ ಹಾಡಿನ ಮೂಡು 17ನೇ ನಂಬರಿನ ಗಂಗಾ ಜಮುನಾ ಚಿತ್ರದ ಹಾಡಿನಂಥದ್ದೇ. ಎಲ್ಲ ಹಾಡುಗಳೂ ಸುಶ್ರಾವ್ಯವಾಗಿದ್ದ  ಈ ಚಿತ್ರ ವ್ಯಾವಹಾರಿಕವಾಗಿ ಅಷ್ಟೊಂದು ಯಶಸ್ಸು ಪಡೆಯಲಿಲ್ಲ.

47. ಉನ್ ಕಿ ಜುಲ್ಫೆಂ ಉನ್ಕೆ ಚೆಹೆರೆ ಸೆ

ಲಿಖೆ ಜೊ ಖತ್ ತುಝೆ ಹಾಡಿನಿಂದಾಗಿ ಎಲ್ಲರಿಗೂ ಗೊತ್ತಿರುವ ಕನ್ಯಾದಾನ್ ಚಿತ್ರದ ಇನ್ನೊಂದು ಚಂದದ ಹಾಡು ಇದು. ಹಸರತ್ ಜೈಪುರಿ ಸಾಹಿತ್ಯಕ್ಕೆ ಶಂಕರ್ ಜೈಕಿಶನ್ ಸಂಗೀತ ಇದೆ.
 
48. ಪಲಕ್ ಸೆ ತೋಡ್ ಕರ್ ಸಿತಾರೆ
ರಾಜೇಶ್ ಖನ್ನಾ ಯುಗಾರಂಭದ ಚಿತ್ರಗಳಾದ ಆರಾಧನಾ,  ದೋ ರಾಸ್ತೆ, ದ ಟ್ರೇನ್ ಮುಂತಾದವುಗಳಲ್ಲಿ ರಫಿ ಹಾಡುಗಳಿದ್ದಂತೆ ಆನ್ ಮಿಲೋ ಸಜ್‌ನಾದಲ್ಲೂ ಇದ್ದವು. ಇದು ಆ ಚಿತ್ರದಲ್ಲಿ ನಾಯಕಿಯ ಜನ್ಮ ದಿನದಂದು ನಾಯಕ ಹಾಡುವ ಹಾಡು.

49. ಶಬಾಬ್ ಪೆ ಮೈ ಜರಾ ಸಿ

ಆರಾಧನೋತ್ತರ ಕಾಲದ ಕೆಲವು ವರ್ಷ  ವಿವಿಧ ಕಾರಣಗಳಿಂದ ಹಿನ್ನೆಲೆ ಗಾಯನ ಕ್ಷೇತ್ರದ ತನ್ನ ಪಾರಮ್ಯ ಗ್ರಹಣಗ್ರಸ್ತವಾದರೂ ರಫಿ ಮತ್ತೆ ಮುಂಚೂಣಿಯತ್ತ ಸಾಗಿ ರಿಷಿ ಕಪೂರ್ ಅವರಂಥ ಆಗಿನ ಕಾಲದ ಮೂರನೆ ಪೀಳಿಗೆಯ ಯುವ ನಟರಿಗೂ ಹಾಡುವಂತಾದದ್ದು ಅಚ್ಚರಿಯೇ. ಇದರಲ್ಲಿ ಮದನ್ ಮೋಹನ್ ಮತ್ತು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರ ಕೊಡುಗೆ ಸಾಕಷ್ಟು ಇದೆ. ರಫಿ ಫುಲ್ ಜೋಶಲ್ಲಿ ಹಾಡಿದ ಅಮರ್ ಅಕ್ಬರ್ ಆಂಟನಿ ಚಿತ್ರದ ಈ ಕವ್ವಾಲಿ ಎಲ್ಲರಿಗೂ ಗೊತ್ತಿರುವಂಥದ್ದೇ. ಅನೇಕ ವರ್ಷಗಳ ನಂತರ ಮತ್ತೆ ಇದರಲ್ಲಿ ರಫಿಯ ಸಾಕಿ ಗಾಯನ ಕೇಳಲು ಸಿಕ್ಕಿತು.
 
50. ತೂ ಕಹೀಂ ಆಸ್ ಪಾಸ್ ಹೈ ದೋಸ್ತ್
ಹೀಗೆ ವೈವಿಧ್ಯಮಯ ಸಾಕಿ ಗೀತಗಳನ್ನು ಹಾಡಿ ನಮ್ಮನ್ನು ರಂಜಿಸಿದ ಮಹಮ್ಮದ ರಫಿ ಕೊನೆಯದಾಗಿ ರೆಕಾರ್ಡ್ ಮಾಡಿದ್ದೂ ಸಾಕಿ ಶೈಲಿಯ ಸಾಲುಗಳನ್ನೇ. 1980 ಜುಲೈ 31ರಂದು ಜಗತ್ತಿಗೆ ವಿದಾಯ ಹೇಳುವ ಒಂದು ದಿನ ಮೊದಲು ಲಕ್ಷ್ಮೀಕಾಂತ್ ಪ್ಯಾರೇಲಾಲ್ ನಿರ್ದೇಶನದಲ್ಲಿ ಆಸ್‌ಪಾಸ್ ಚಿತ್ರಕ್ಕಾಗಿ ಅವರು ಈ ಸಾಲುಗಳನ್ನು ಹಾಡಿದರು. ಆದರೆ ಈ ಸಾಲುಗಳ ನಂತರ ಹಾಡು ಇಲ್ಲ.



ಈ ಬರಹ 50 ಹಾಡುಗಳ ಉಲ್ಲೇಖ ಹೊಂದಿ ಗಜ ಗಾತ್ರಕ್ಕೆ ಬೆಳೆದಿರುವುದರಿಂದ ಪ್ಲೇಯರ್‌ನ ಅಷ್ಟು ಆವೃತ್ತಿಗಳು ಲೋಡ್ ಆಗಲು ಕಷ್ಟ ಆಗಬಹುದು.  ಹಾಗಾಗಿ ಇಲ್ಲಿ ಕೆಳಗೆ ಕಾಣಿಸುವ ಹಾಡುಗಳ ಪಟ್ಟಿಯನ್ನು  Scroll ಮಾಡುತ್ತಾ ಬೇಕಿದ್ದ ತುಣುಕು ಆರಿಸಿ ಆಲಿಸಬಹುದು. ಆಲಿಸಿದ ಮೇಲೆ ಬಲ ಮೂಲೆಯಲ್ಲಿರುವ x  ಮಾರ್ಕ್ ಕ್ಲಿಕ್ಕಿಸಿದರೆ ಮತ್ತೆ ಪಟ್ಟಿ ಕಾಣಿಸುತ್ತದೆ.  Log in, Sign up ಗಳ ಮೇಲೆ ಕ್ಲಿಕ್ಕಿಸಬೇಡಿ. ಪಟ್ಟಿ ಮೂರು ಭಾಗಗಳಲ್ಲಿರುವುದನ್ನು ಗಮನಿಸಿ.

  





2 comments:

  1. Nice collection.This type of singing increases the curiosity of upcoming song!

    ReplyDelete

Your valuable comments/suggestions are welcome