ಜೊ ವಾದಾ ಕಿಯಾ ವೊ ಮತ್ತು ಬಹಾರೊ ಫೂಲ್ ಬರ್‌ಸಾವೋ ಇವೆರಡು ಮೊದಲ ಸಲ ರೇಡಿಯೋದಲ್ಲಿ ಕೇಳಿದ ಕೂಡಲೇ ನನ್ನ Top Ten ಹಾಡುಗಳ ಪಟ್ಟಿಗೆ ಸೇರಿ ಇನ್ನೂ ಅಲ್ಲೇ ಉಳಿದಿರುವ ಹಿಂದಿ ಹಾಡುಗಳು. ಕನ್ನಡದಲ್ಲಿ ನನ್ನಿಂದ ಈ ಗೌರವ ಗಳಿಸಿದ ಏಕೈಕ ಹಾಡು ವಿರಹ ನೂರು ನೂರು ತರಹ. ಇದನ್ನು ನಾನು ಮೊದಲು ಕೇಳಿದ್ದು ರೇಡಿಯೋದಲ್ಲಲ್ಲ, 4-11-1973ರ ಭಾನುವಾರದಂದು ಮಂಗಳೂರಿನ ಜ್ಯೋತಿ ಟಾಕಿಸಿನಲ್ಲಿ. ಅದೇ ಶುಕ್ರವಾರ ಬಿಡುಗಡೆಯಾಗಿದ್ದ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಮ್ಯಾಟಿನಿ ನೋಡಲು ಸಹೋದ್ಯೋಗಿಗಳೊಂದಿಗೆ ಹೋಗಿದ್ದಾಗ ಚಿತ್ರ ಆರಂಭವಾಗುವ ಮೊದಲು ಈ ಹಾಡು ಹಾಕಿದ್ದರು. ಕೈಯಲ್ಲಿ ಚಿತ್ರದ ಪದ್ಯಾವಳಿ ಇದ್ದುದರಿಂದಷ್ಟೇ ಇದು ಅದೇ ಚಿತ್ರದ ಹಾಡು ಎಂದು ನನಗೆ ಗೊತ್ತಾದದ್ದು. ಕನ್ನಡ ಚಿತ್ರಗಳ ಮಟ್ಟಿಗೆ ಅಂದು ಇದು ಅಪರೂಪದ ಸಂಗತಿಯಾಗಿತ್ತು. ಚಿತ್ರ ಬಿಡುಗಡೆ ಆಗಿ ಕೆಲವು ತಿಂಗಳುಗಳ ಬಳಿಕವಷ್ಟೇ ಗ್ರಾಮೊಫೋನ್ ರೆಕಾರ್ಡುಗಳು ತಯಾರಾಗುತ್ತಿದ್ದ ಕಾಲ ಅದು.
ಕೆಲ ವರ್ಷಗಳ ಹಿಂದೆ ಭಾರತೀಸುತ ಅವರ ಎಡಕಲ್ಲು ಗುಡ್ಡದ ಮೇಲೆ ಕಾದಂಬರಿ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದುದನ್ನು ಒಂದೂ ಕಂತು ಬಿಡದೆ ಓದಿದ್ದೆ. ಜಿ.ಕೆ. ಸತ್ಯ ಅವರು ಚಿತ್ರಿಸುತ್ತಿದ್ದ ಮಾಧವಿ ಮತ್ತು ದೇವಕಿಯರ ಚೆಲುವು, ನಂಜುಂಡನ ಕಟ್ಟುಮಸ್ತಾದ ದೇಹ ಆ ಧಾರಾವಾಹಿಯ ಹೈಲೈಟ್ ಆಗಿದ್ದವು. ಚಿತ್ರದಲ್ಲಿ ಆ ಪಾತ್ರಗಳು ಹೇಗೆ ಮೂಡಿ ಬಂದಿವೆ ಎಂದು ತಿಳಿಯುವ ಕುತೂಹಲವಿತ್ತು. ತೆರೆಯ ಮೇಲಿನ ಮಾಧವಿ ಮತ್ತು ದೇವಕಿ ಸುಮಾರಾಗಿ ಜಿ.ಕೆ. ಸತ್ಯ ಅವರು ಚಿತ್ರಿಸಿದಂತೆಯೇ ಇದ್ದರೂ ನಂಜುಂಡ ವ್ಯತಿರಿಕ್ತವಾಗಿ ಕಂಡ. ನನಗೆ ಕಥೆ ಮೊದಲೇ ಗೊತ್ತಿದ್ದುದರಿಂದ ಮುಂಬರುವ ಸನ್ನಿವೇಶಗಳನ್ನು ಮೊದಲೇ ಹೇಳುತ್ತಾ ಅಕ್ಕಪಕ್ಕದಲ್ಲಿ ಕೂತಿದ್ದ ಸಹೋದ್ಯೋಗಿಗಳಿಗೆ ಕಿರಿಕಿರಿ ಉಂಟುಮಾಡಿದ್ದೆ!
ಅದು ವರೆಗಿನ ಎಲ್ಲ ಪುಟ್ಟಣ್ಣ ಕಣಗಾಲ್ ಚಿತ್ರಗಳಿಗೆ ವಿಜಯಭಾಸ್ಕರ್ ಅವರದೇ ಸಂಗೀತ ಇರುತ್ತಿದ್ದುದು. ಇದು ಶ್ರೀಕಾಂತ್ & ಶ್ರೀಕಾಂತ್ ತಯಾರಿಕೆಯಾದ್ದರಿಂದ ಆ ಸಂಸ್ಥೆಯೊಂದಿಗೆ ನಕ್ಕರೆ ಅದೇ ಸ್ವರ್ಗದ ಕಾಲದಿಂದಲೂ ಒಡನಾಡಿಯಾಗಿದ್ದ ಎಂ. ರಂಗರಾವ್ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿರಬಹುದು.
ಆಗಿನ್ನೂ ನಾನು ಶಾಸ್ತ್ರೀಯವಾಗಿ ಕೊಳಲು ಅಭ್ಯಾಸ ಆರಂಭಿಸಿರಲಿಲ್ಲ. ರಾಗ, ತಾಳ, ಶ್ರುತಿ ಅಂದರೆ ಏನೆಂದು ಗೊತ್ತಿರಲಿಲ್ಲ. ಆದರೂ ನಾನೇ ತಯಾರಿಸಿದ್ದ ಕೊಳಲಿನಲ್ಲಿ ಏಕಪಾಠಿಯಂತೆ ಒಮ್ಮೆ ಕೇಳಿದ ಹಾಡುಗಳನ್ನು ನುಡಿಸಬಲ್ಲವನಾಗಿದ್ದೆ. ಈ ಹಾಡಿನ ಆರಂಭದ ‘ವಿರಹಾ.....’ ಎಂಬ ಸಾಲಿನಲ್ಲಿ ಅದ್ಭುತ ಮಾಂತ್ರಿಕ ಶಕ್ತಿ ಇದೆ. ನಾನು ಎಂದಾದರೂ ಕೊಳಲಿನಲ್ಲಿ ಆ ಸಾಲು ನುಡಿಸಿದರೆ ಅದು ಎಂಥವರನ್ನೂ ಆಕರ್ಷಿಸುತ್ತಿತ್ತು. ಒಮ್ಮೆ ಮಿತ್ರರೊಬ್ಬರ ರೂಮಲ್ಲಿ ಇದನ್ನು ನುಡಿಸಿದಾಗ ಅಕ್ಕಪಕ್ಕದ ಮನೆಯವರು ಇದು ಯಾವ ಸ್ಟೇಶನ್ ಎಂದು ಹುಡುಕಲು ತಮ್ಮ ರೇಡಿಯೊ ಬಿರಡೆ ತಿರುಗಿಸತೊಡಗಿದರಂತೆ! ಆಗ ನಾನು ಶಾಲೆಗಳ ವಾರ್ಷಿಕೋತ್ಸವಗಳಿಗೆ ಕೊಳಲು ನುಡಿಸಲು ಹೋಗುವುದಿತ್ತು. ನಾಟಕದ ದೃಶ್ಯಗಳ ಮಧ್ಯೆ ಇತರ ಜನಪ್ರಿಯ ಹಾಡುಗಳ ಜೊತೆಗೆ ಇದನ್ನೂ ತಪ್ಪದೆ ನುಡಿಸುತ್ತಿದ್ದೆ. ಒಂದು ಕಡೆ ಈ ಹಾಡಿನ ಆರಂಭದ ಆಲಾಪವನ್ನು ಕೇಳಿದ ಹಿರಿಯರೊಬ್ಬರು ಬಂದು ನಿಮ್ಮ ಕೊಳಲ ಧ್ವನಿ ಟಿ.ಆರ್. ಮಹಾಲಿಂಗಂ ಅವರ ಶೈಲಿಯನ್ನು ನೆನಪಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು!
ಭೀಮ್ ಪಲಾಸ್ ರಾಗಾಧಾರಿತವಾದ ಈ ಹಾಡು ಕೇಳಲು ಬಲು ಮಧುರವಾದರೂ 8 ಅಕ್ಷರದ ಏಕತಾಳದ ಅತಿ ಕ್ಲಿಷ್ಟ ಲಯದಲ್ಲಿ ಸಂಯೋಜಿಸಲ್ಪಟ್ಟಿದೆ ಎಂದು ಶಾಸ್ತ್ರೀಯ ಸಂಗೀತದ ಆ ಆ ಈ ಕಲಿತ ಮೇಲೆ ನನಗೆ ಮನವರಿಕೆಯಾಯಿತು. ಸಾಮಾನ್ಯವಾಗಿ ಹಾಡುಗಳು ತಾಳದ ಸಮದಲ್ಲಿ ಆರಂಭವಾಗುತ್ತವೆ. ಇನ್ನು ಕೆಲವು ತಾಳದಲ್ಲಿ ಒಂದೋ ಎರಡೋ ಅಕ್ಷರ ಬಿಟ್ಟು ಅತೀತದಲ್ಲಿ ಅಥವಾ ಅಪರೂಪಕ್ಕೆ ತಾಳಕ್ಕಿಂತ ಕೆಲವು ಅಕ್ಷರ ಮೊದಲು ಅನಾಗತದಲ್ಲಿ ಆರಂಭವಾಗುತ್ತವೆ. ಆದರೆ ಈ ಹಾಡಲ್ಲಿ ಸಮ, ಅತೀತ ಮತ್ತು ಅನಾಗತ ಮೂರೂ ಇವೆ! ಪಲ್ಲವಿ ಮೊದಲ ಸಾಲು ಆರಂಭವಾಗುವುದು ತಾಳಕ್ಕಿಂತ ಎರಡಕ್ಷರ ಮೊದಲು ಅನಾಗತದಲ್ಲಿ. ಎರಡನೇ ಸಾಲು ತಾಳದ ಸಮದಲ್ಲಿ. ಚರಣ ತಾಳದಿಂದ ಮೂರಕ್ಷರ ಬಿಟ್ಟು ಅತೀತದಲ್ಲಿ. ಈ ಹಾಡಿನ ಅಕ್ಕ ಅನ್ನಬಹುದಾದ ಭೀಮ್ ಪಲಾಸ್ ರಾಗದ್ದೇ ಆದ ಹೂವು ಚೆಲುವೆಲ್ಲ ನಂದೆಂದಿತು ಕೂಡ ತಾಳದ ಇದೇ ಅಚ್ಚಿನಲ್ಲಿ ಸಂಯೋಜಿತವಾಗಿರುವುದು.
ಸಿನಿಮಾ ಸಂಗೀತವೆಂದರೆ ಅಲ್ಲಿ ರಾಗ, ತಾಳ, ಲಯ ಏನೂ ಇರುವುದಿಲ್ಲ ಎಂದು ಸಂಕುಚಿತ ಮನೋಭಾವದ ಕೆಲವರು ಮೂಗು ಮುರಿಯುವುದುಂಟು. ಆದರೆ ವಾಸ್ತವದಲ್ಲಿ ಅದು ಬೇಕಿದ್ದರೆ ಒಂದು ಕ್ಯಾಬರೇ ಹಾಡೇ ಆಗಿದ್ದರೂ ಸಂಗೀತದ ಎಲ್ಲ ನಿಯಮಗಳನ್ನೂ ಪಾಲಿಸಿರುತ್ತದೆ. ತಾಳ ಮತ್ತು ಲಯಕ್ಕಂತೂ ಹೆಚ್ಚೇ ಪ್ರಾಧಾನ್ಯ ನೀಡಲಾಗಿರುತ್ತದೆ. ಆದರೆ ಏಕೋ ಈ ಹಾಡಲ್ಲಿ ಆ ನಿಟ್ಟಿನಲ್ಲಿ ಸ್ವಲ್ಪ ಎಡವಟ್ಟಾಗಿದೆ!
ಪಲ್ಲವಿ ಮತ್ತು ಒಂದನೇ ಚರಣ ಮುಗಿಯುವ ವರೆಗೆ ಅನಾಗತ, ಸಮ, ಅತೀತ ನಿಯಮಗಳನ್ನು ಪಾಲಿಸುತ್ತಾ 8 ಅಕ್ಷರದ ಏಕತಾಳದಲ್ಲಿ ಸಲೀಸಾಗಿ ಸಾಗುವ ಹಾಡು ಎರಡನೇ ಗಂಧರ್ವ ಲೋಕದಲ್ಲಿ ಚರಣದ ಆಲಾಪ ಮತ್ತು ಕೋರಸ್ ಭಾಗದ ನಂತರ ಅರ್ಧ ತಾಳ ಅಂದರೆ 4 ಮಾತ್ರೆಗಳಷ್ಟು drift ಆಗಿ ಕೊನೆ ವರೆಗೆ ಹಾಗೇಯೇ ಮುಂದುವರಿಯುತ್ತದೆ! ಇದೊಂದು ಬಲು ಅಪರೂಪದ ವಿದ್ಯಮಾನ. ಸಂಗೀತ ನಿರ್ದೇಶಕರಿಗೆ, ಹಾಡಿದವರಿಗೆ, arrangersಗೆ, ತಾಳ ವಾದ್ಯಗಳನ್ನು ನುಡಿಸಿದವರಿಗೆ ಖಂಡಿತವಾಗಿ ಇದು ಗೊತ್ತಾಗಿರುತ್ತದೆ. ಆದರೆ ಉಳಿದಂತೆ ಅತಿ ಶ್ರೇಷ್ಠವಾಗಿ ಮೂಡಿ ಬಂದ ಹಾಡು ಇನ್ನೊಂದು ಟೇಕ್ ಮಾಡಿದರೆ ಅಷ್ಟು ಚೆನ್ನಾಗಿ ಬರಲಾರದು ಎಂದೆನ್ನಿಸಿ ಹಾಗೆಯೇ ಉಳಿಸಿಕೊಂಡಿರಬಹುದೇನೋ ಎಂದು ನನ್ನ ಊಹೆ. ಇದೊಂದು ತಾಂತ್ರಿಕ ಅಂಶವೇ ಹೊರತು ಹಾಡಿನ ಮೌಲ್ಯ ಇದರಿಂದ ಒಂದಿನಿತೂ ಕಮ್ಮಿಯಾಗಿಲ್ಲ. ಸಾಮಾನ್ಯ ಕೇಳುಗರಿಗೆ ಇದು ಗೊತ್ತೂ ಆಗುವುದಿಲ್ಲ. ಆಸಕ್ತಿ ಇದ್ದವರು ಬೇಕಿದ್ದರೆ ತಾಳ ಹಾಕುತ್ತಾ ಹಾಡು ಕೇಳಿ ಪರೀಕ್ಷಿಸಬಹುದು. ಎರಡನೆ ಚರಣ ಭಾಗದ ಸ್ವರಲಿಪಿಯಲ್ಲೂ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು.
ಹಾಡು ಕೇಳಲು ಬಾಣದ ಗುರುತಿನ ಮೇಲೆ ಕ್ಲಿಕ್ಕಿಸಿ.
ಹಾಡು ಕೇಳಲು ಬಾಣದ ಗುರುತಿನ ಮೇಲೆ ಕ್ಲಿಕ್ಕಿಸಿ.
ವೀರ ಕೇಸರಿಯ ಹಾಡನ್ನು ತಪ್ಪಾಗಿ ಮೆಲ್ಲುಸಿರೇ ಸವಿಗಾನ ಎಂದಂತೆ ಈ ಹಾಡಿನ ಮೊದಲ ಸಾಲು ವಿರಹ ನೋವು ನೂರು ತರಹ ಎಂದು ವಾದಿಸುವವರೂ ಇದ್ದಾರೆ! ಸರಿಯಾಗಿ ಗಮನಿಸದಿದ್ದರೆ ಕೆಲವೊಮ್ಮೆ ಅದು ನೋರು ನೂರು ತರಹ ಎಂದು ಕೇಳಿಸುವುದು ಹೌದು. ಆದರೆ ಹೆಡ್ ಫೋನ್ ಹಾಕಿಕೊಂಡರೆ ನೂರು ನೂರು ಎಂದೇ ಸ್ಪಷ್ಟವಾಗಿ ಕೇಳಿಸುತ್ತದೆ.
ಕೆಲವರಿಗೆ ಈ ಹಾಡಿನಲ್ಲಿ ನೈನೋಂ ಮೆಂ ಬದ್‌ರಾ ಛಾಯೆಯ ಛಾಯೆ ಕಾಣಿಸುವುದುಂಟು. ಅದೇ ರಾಗ, ಸುಮಾರಾಗಿ ಅದೇ ಮೀಟರ್ ಇರುವುದರಿಂದ ಹೀಗನ್ನಿಸಬಹುದೇ ಹೊರತು ಧಾಟಿಯಲ್ಲಿ ಎಲ್ಲೂ ಹೋಲಿಕೆ ಕಂಡು ಬರುವುದಿಲ್ಲ.
ನಾನು ಕಾರ್ಯಕ್ರಮವೊಂದರಲ್ಲಿ ನುಡಿಸಿದ ಈ ಹಾಡಿನ ಸಂಯೋಜಿತ ವೀಡಿಯೊ ಇಲ್ಲಿ ನೋಡಬಹುದು. ಆಹ್ಲಾದಕರ ಆಡಿಯೊ ಅನುಭವಕ್ಕಾಗಿ ಹೆಡ್‌ಫೋನ್ ಬಳಸಿ.
ಕೆಲವರಿಗೆ ಈ ಹಾಡಿನಲ್ಲಿ ನೈನೋಂ ಮೆಂ ಬದ್‌ರಾ ಛಾಯೆಯ ಛಾಯೆ ಕಾಣಿಸುವುದುಂಟು. ಅದೇ ರಾಗ, ಸುಮಾರಾಗಿ ಅದೇ ಮೀಟರ್ ಇರುವುದರಿಂದ ಹೀಗನ್ನಿಸಬಹುದೇ ಹೊರತು ಧಾಟಿಯಲ್ಲಿ ಎಲ್ಲೂ ಹೋಲಿಕೆ ಕಂಡು ಬರುವುದಿಲ್ಲ.
ನಾನು ಕಾರ್ಯಕ್ರಮವೊಂದರಲ್ಲಿ ನುಡಿಸಿದ ಈ ಹಾಡಿನ ಸಂಯೋಜಿತ ವೀಡಿಯೊ ಇಲ್ಲಿ ನೋಡಬಹುದು. ಆಹ್ಲಾದಕರ ಆಡಿಯೊ ಅನುಭವಕ್ಕಾಗಿ ಹೆಡ್‌ಫೋನ್ ಬಳಸಿ.