Thursday, 21 December 2017

ನಮ್ಮ ಮೊದಲ ಟೀವಿ


ನಾನು ಮೊದಲು ಟೀವಿ ನೋಡಿದ್ದು 1977ರಲ್ಲಿ ಟೆಲಿಕಾಂ ಜೂನಿಯರ್ ಎಂಜಿನಿಯರ್ ತರಬೇತಿಯಲ್ಲಿದ್ದಾಗ.  ಬರಿ ನೋಡಿದ್ದು ಮಾತ್ರ ಅಲ್ಲ, ಅದರಲ್ಲಿ ಕಾಣಿಸಿಕೊಂಡಿದ್ದೆ ಕೂಡ.  ಅಲ್ಲಿಯ  Audio Visual Labಗೆ ಒಂದು ಕಪ್ಪು ಬಿಳುಪು ಟೀವಿ ಮತ್ತು ಒಂದು ವಿಡಿಯೊ ಕ್ಯಾಮರಾ ಆಗ ತಾನೇ ಬಂದಿತ್ತು.  ಪ್ರಯೋಗಾರ್ಥವಾಗಿ ನಮ್ಮ ಕ್ಲಾಸ್ ರೂಮಿನ ಚಿತ್ರೀಕರಣ ಮಾಡಿದ್ದರು.  ಕ್ಲಾಸಲ್ಲಿ ನಾನು ಯಾವಾಗಲೂ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಟಿ.ವಿ.ಯಲ್ಲಿ ಕಾಣಿಸಿಕೊಳ್ಳಬೇಕೆಂಬ ಉತ್ಸಾಹದಿಂದ ಅಂದು ಬೋಧಕರಿಗೆ ಎಂದಿಗಿಂತ ಸ್ವಲ್ಪ ಜಾಸ್ತಿಯೇ ಪ್ರಶ್ನೆಗಳನ್ನು ಎಸೆದಿದ್ದೆ.  ತಕ್ಷಣ ಆ ದೃಶ್ಯವನ್ನು ಟೀವಿಯಲ್ಲಿ  ತೋರಿಸಿದಾಗ  ನಾನು ಮಾತು ಮಾತಿಗೂ ತಲೆಯನ್ನು ಅತ್ತ ಇತ್ತ ಆಡಿಸುತ್ತಿರುವುದು ಅರಿವಾಯಿತು!  ಆ ಮೇಲೆ ಮಾತನಾಡುವಾಗ ತಲೆಯನ್ನು ನಿಯಂತ್ರಣದಲ್ಲಿಡತೊಡಗಿದೆ.  ಅದೇ ವರ್ಷ ಲಾಲ್ ಬಾಗ್ ಸಮೀಪ ನಡೆದ ಒಂದು ವಿಜ್ಞಾನ ಪ್ರದರ್ಶನದಲ್ಲಿ ಕಲರ್ ಟೀವಿಯನ್ನು ನೋಡುವ ಮತ್ತು ಅದರಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ದೊರಕಿತು.  ಈ ಸಲ ತಲೆ ಸ್ಥಿರವಾಗಿಟ್ಟುಕೊಂಡಿದ್ದೆ!

ನಾನು ನಿಜವಾದ ಟೀವಿ ಪ್ರಸಾರ ವೀಕ್ಷಿಸಿದ್ದು 70ರ ದಶಕದ ಕೊನೆಯಲ್ಲಿ.  ಅದುವರೆಗೆ ಸಾತಾರಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನ್ನ ಅಣ್ಣ ತನ್ನ ಕರ್ಮಭೂಮಿಯನ್ನು ಪುಣೆಗೆ ಬದಲಾಯಿಸಿಕೊಂಡಿದ್ದರು.  ನಾನೊಮ್ಮೆ ಅಲ್ಲಿಗೆ ಹೋದಾಗ ಒಂದು ದಿನ ಅವರ ಸಾತಾರಾ ಬಾಡಿಗೆ ಮನೆಯೊಡೆಯ ದಾಂಡೇಕರ್ ತನ್ನ ಪುಣೆ ನಿವಾಸಕ್ಕೆ ನಮ್ಮನ್ನೆಲ್ಲ ಆಹ್ವಾನಿಸಿದ್ದರು.  ತಮ್ಮ ಹೊಸ ಟೀವಿಯನ್ನು ನಮಗೆ ತೋರಿಸುವುದು ಅವರ ಉದ್ದೇಶವಾಗಿತ್ತು. ಕಾಕತಾಳೀಯವೋ ಎಂಬಂತೆ ಅಲ್ಲಿ ನನಗೆ ಮುಕೇಶ್  ಲೈವ್ ಕಾರ್ಯಕ್ರಮ ವೀಕ್ಷಿಸುವ  ರಸದೌತಣ ದೊರಕಿತ್ತು.  ಒಂದು ವರ್ಷದ ನಂತರ ಮತ್ತೆ ಪುಣೆಗೆ ಹೋದಾಗ ಅಣ್ಣನ ಮನೆಗೇ ಟೀವಿ ಬಂದಿತ್ತು. ಬುಧವಾರ ಬರುತ್ತಿದ್ದ ಛಾಯಾಗೀತ್ ಕಾರ್ಯಕ್ರಮದಿಂದ ಅವರು ನೇರವಾಗಿ ಟೇಪ್ ರೆಕಾರ್ಡರಲ್ಲಿ ಧ್ವನಿಮುದ್ರಿಸಿಕೊಳ್ಳುತ್ತಿದ್ದ  ಹಾಡುಗಳ ಸ್ಪಷ್ಟತೆ ಕಂಡು ದಂಗಾಗಿದ್ದೆ.  ಮಂಗಳೂರಿಗೂ ದೂರದರ್ಶನ ಪ್ರಸಾರ ವಿಸ್ತರಿಸಿ ನಾನೂ ಒಂದು ಟೀವಿ ಹೊಂದುವಂತಾಗಿ ಹೀಗೆ ನನ್ನಿಷ್ಟದ ಹಾಡುಗಳನ್ನು ಧ್ವನಿಮುದ್ರಿಸುವ  ಕನಸು ಕಾಣತೊಡಗಿದ್ದೆ.

1982ರ ಏಷ್ಯನ್ ಗೇಮ್ಸ್ ಸಂದರ್ಭದಲ್ಲಿ ಭಾರತದಲ್ಲಿ ಕಲರ್ ಟೀವಿ ಪ್ರಸಾರ ಆರಂಭಗೊಂಡು ದೇಶದಾದ್ಯಂತ ಮುಖ್ಯ ನಗರಗಳಲ್ಲಿ ದೂರದರ್ಶನದ low power transmitters  ಸ್ಥಾಪಿಸಲ್ಪಟ್ಟವು.  ಮಂಗಳೂರೂ ಅವುಗಳಲ್ಲಿ ಒಂದಾಗಿತ್ತು.  ಕೆಲವೇ ದಿನಗಳಲ್ಲಿ ಇಲ್ಲಿಯ ರೇಡಿಯೊ ಅಂಗಡಿಗಳೆಲ್ಲ ಟೀವಿ ಶೋರೂಂಗಳಾಗಿ ಪರಿವರ್ತನೆ ಹೊಂದಿದವು.  ಸಾಯಂಕಾಲಗಳಲ್ಲಿ ಪೇಟೆ ಸುತ್ತುತ್ತಾ  ವಿವಿಧ ಮಾದರಿಯ ಕಪ್ಪು ಬಿಳುಪು ಮತ್ತು ಕಲರ್ ಟೀವಿಗಳನ್ನು ಹೊರಗಿನಿಂದಲೇ ಆಸೆಯ ಕಣ್ಣುಗಳಿಂದ ನೋಡುತ್ತಿದ್ದೆ.  ಒಳಗೆ ಕಾಲಿರಿಸಲು ಜೇಬು ಅನುಮತಿ ಕೊಡುತ್ತಿರಲಿಲ್ಲ.  ಪುರಭವನದ ಹೊರಭಾಗದಲ್ಲಿ ಸಾರ್ವಜನಿಕ ವೀಕ್ಷಣೆಗೆಂದು ಒಂದು ಕಲರ್ ಟೀವಿ ಇಟ್ಟಿದ್ದರು.  ಭಾನುವಾರದ ಹಿಂದಿ ಚಲನಚಿತ್ರವನ್ನು ನೋಡಲು ಮನೆಯವರೆಲ್ಲರೂ  ಒಮ್ಮೊಮ್ಮೆ ಅಲ್ಲಿಗೆ ಹೋಗುತ್ತಿದ್ದೆವು.

ಹೀಗೆಯೇ ಎರಡು ವರ್ಷಗಳು ಕಳೆದವು.  1984ರಲ್ಲಿ ಒಂದು ದಿನ 12 ಇಂಚು ಪರದೆಯ ಚಿಕ್ಕ second hand ಕಪ್ಪು ಬಿಳುಪು ಟೀವಿಯೊಂದು ಅಗ್ಗದ ದರಕ್ಕೆ ಒಂದೆಡೆ ಮಾರಾಟಕ್ಕಿದೆ ಎಂಬ ಸುದ್ದಿ ನಮ್ಮ ಆಫೀಸಿನ ತಾಂತ್ರಿಕ ನಿಪುಣ ಗೆಳೆಯರೊಬ್ಬರ ಮೂಲಕ ಸಿಕ್ಕಿತು. ಟೀವಿ ವೀಕ್ಷಣೆಗೆ ಬೇಕಾದ ಕನಿಷ್ಟ ಅಂತರವೂ ಇಲ್ಲದ ಬೆಂಕಿಪೆಟ್ಟಿಗೆಯಂಥ ಬಾಡಿಗೆ ಮನೆಯಲ್ಲಿ ಆಗ ನಾವಿದ್ದರೂ  ಈ ಸದವಕಾಶ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿ ಒಂದು ಸಾಯಂಕಾಲ ಟೀವಿ ನೋಡಲು  ಆ ಮಿತ್ರರೊಡನೆ ಹೊರಟೇ  ಬಿಟ್ಟೆ.  Wooden cabinet ಮತ್ತು rolling shutter ಇದ್ದ ಆ ಟೀವಿ Televista ಕಂಪನಿಯದಾಗಿತ್ತು. ಕಲರ್ ಟೀವಿಯ ಭ್ರಮೆ ಮೂಡಿಸಲು ಬಣ್ಣ ಬಣ್ಣದ  ಗಾಜೊಂದು screen ಎದುರಿಗಿತ್ತು. ಚಿತ್ರ ಅಷ್ಟೊಂದು clear ಆಗಿ ಬರದಿದ್ದರೂ ನನಗೆ ಮುಖ್ಯವಾಗಿದ್ದ sound quality ತುಂಬಾ ಚೆನ್ನಾಗಿದ್ದುದರಿಂದ 1500 ರೂ.ಗಳಿಗೆ(ಗಮನಿಸಿ- 15000 ಅಲ್ಲ!) ಆ ಮನೆಯವರೊಡನೆ ವ್ಯವಹಾರ ಕುದುರಿಸಿ antenna ಸಮೇತ  ಟೀವಿಯನ್ನು ಮನೆಗೆ ತಂದೇ ಬಿಟ್ಟೆವು.  ನಾವಿದ್ದ ಬಾಡಿಗೆ ಮನೆಯ ಮಾಲೀಕರು ಏನನ್ನುತ್ತಾರೋ ಎಂಬ ಅಳುಕಿನಿಂದ ಮಾಡಿನ ತುದಿಯಲ್ಲಿ ಹಂಚಿಗೆ ತೂತು ಕೊರೆಯಲು ಹೋಗದೆ  ಆ ತಾಂತ್ರಿಕ ನಿಪುಣ ಮಿತ್ರರು ಪಕ್ಕಾಸು ತುದಿಗೆ antenna   ಅಳವಡಿಸಿಕೊಟ್ಟರು. ಕೆಲವೇ ಕ್ಷಣಗಳಲ್ಲಿ ನಮ್ಮ ಪುಟ್ಟ ಮನೆಯ ಪುಟ್ಟ ಹಜಾರದ ಪುಟ್ಟ ಟೇಬಲ್ ಮೇಲೆ ಕೂತ ಪುಟ್ಟ ಟೀವಿಯಲ್ಲಿ ಚಿತ್ರಗಳು  ಮಾತನಾಡತೊಡಗಿದವು.  ಅಂದು ನಾವು ಮೊತ್ತಮೊದಲು ನೋಡಿದ್ದು ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ವಿವಿಧ ಭಾಷೆಯ ಸಿನಿಮಾ ಹಾಡುಗಳ ಕಾರ್ಯಕ್ರಮ ಚಿತ್ರಮಾಲಾ.

ಆದರೆ ಆ ಟೀವಿಯಲ್ಲಿ ನನ್ನ ಮುಖ್ಯ ಅವಶ್ಯಕತೆಯಾಗಿದ್ದ  ನೇರ ಆಡಿಯೊ ರೆಕಾರ್ಡಿಂಗ್ ಮಾಡಲು head phone jack ಇರಲಿಲ್ಲ. ಹೀಗಾಗಿ ಆ ಭಾನುವಾರ ಪ್ರಸಾರವಾದ ಹರೇ ಕಾಂಚ್ ಕೀ ಚೂಡಿಯಾಂ ಚಿತ್ರದಿಂದ ನನ್ನ ಮೆಚ್ಚಿನ ಹಾಡು ಧಾನಿ ಚುನರೀ ಪಹನ್ ಧ್ವನಿಮುದ್ರಿಸಲಾಗದೆ ಕೈ ಕೈ ಹಿಸುಕಿಕೊಳ್ಳುವಂತಾಯಿತು.  ಮರುದಿನವೇ speakerನಿಂದ parallel connection ಮಾಡಿ  jack ಅಳವಡಿಸಿಕೊಂಡೆ.  ಅಲ್ಲಿಂದ ಉತ್ತಮ ಹಾಡುಗಳಿಗಾಗಿ ಕಾಯುತ್ತಾ ಟೇಪ್ ರೆಕಾರ್ಡರ್ ಸಿದ್ಧವಾಗಿರಿಸಿಕೊಂಡು ಧ್ವನಿಮುದ್ರಿಸುವ ನನ್ನ ಕಾಯಕ ಆರಂಭಗೊಂಡಿತು. ಆಗ ಅನಲಾಗ್ ಪ್ರಸಾರ ಇದ್ದುದರಿಂದ  ಅತ್ಯುತ್ತಮ ಗುಣಮಟ್ಟದ ನೂರಾರು  ಹಾಡುಗಳು ನನ್ನ ಕ್ಯಾಸೆಟ್ಟುಗಳಲ್ಲಿ ಸೆರೆಯಾದವು. ಕೆಳಗಿನ ಚಿತ್ರದಲ್ಲಿ ನನ್ನ ಟೇಪ್ ರೆಕಾರ್ಡರ್ ಯಾವಾಗಲೂ ಟೀವಿಯ ಪಕ್ಕದಲ್ಲೇ ಇರುತ್ತಿದ್ದುದನ್ನು ಗಮನಿಸಬಹುದು.


ಆಗ ದೆಹಲಿಯ ಹಿಂದಿ ಪ್ರಸಾರ ಮಾತ್ರವಿದ್ದು ವಾರದ ದಿನಗಳಲ್ಲಿ ಸಂಜೆ ನಾಲ್ಕರಿಂದ ಹಾಗೂ ಭಾನುವಾರಗಳಂದು ಬೆಳಗ್ಗಿನಿಂದ ರಾತ್ರಿಯ ವರೆಗೆ ದಿನವಿಡೀ ಕಾರ್ಯಕ್ರಮಗಳಿರುತ್ತಿದ್ದವು. ಪ್ರಸಾರ ಆರಂಭದ ಮೊದಲು ಕೂ ಶಬ್ದದೊಡನೆ ನಮಗೆ ಕಪ್ಪು ಬಿಳುಪಿನಲ್ಲಿ ಕಾಣುತ್ತಿದ್ದ ಬಣ್ಣದ ಪಟ್ಟಿಗಳನ್ನು ನೋಡುತ್ತಾ signature tuneಗಾಗಿ ಕಾಯುವುದು ರೋಮಾಂಚಕಾರಿ ಅನುಭವವಾಗಿರುತ್ತಿತ್ತು.  ಭಾನುವಾರ ಅಪರಾಹ್ನ ಒಂದು ಪ್ರಾದೇಶಿಕ ಭಾಷೆಯ ಚಿತ್ರ ಮತ್ತು ಸಂಜೆ  ಒಂದು ಹಿಂದಿ ಚಲನಚಿತ್ರ ಪ್ರಸಾರವಾಗುತ್ತಿತ್ತು.  ಶನಿವಾರದಂದು ಮುಂದಿನ ವಾರದ ಕಾರ್ಯಕ್ರಮಗಳ ಮುನ್ನೋಟದ ಸಾಪ್ತಾಹಿಕಿ ಎಂಬ ಕಾರ್ಯಕ್ರಮವಿರುತ್ತಿತ್ತು.  ಹೆಚ್ಚಾಗಿ ವಾರದ ಎಲ್ಲ ಕಾರ್ಯಕ್ರಮಗಳ ವಿವರ ಮುಗಿದ ಮೇಲೆ ಭಾನುವಾರದ ಚಲನಚಿತ್ರದ ಹೆಸರು ಹೇಳುತ್ತಿದ್ದರು. ಉತ್ತಮ ಹಾಡುಗಳುಳ್ಳ ಯಾವುದಾದರೂ ಚಿತ್ರವೆಂದಾದರೆ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.  ಮರುದಿನ ಸಂಜೆಯ ಸಂಭ್ರಮದ ಬಗ್ಗೆ ಕನಸು ಕಾಣುತ್ತಾ ಸಾಕಷ್ಟು  ಸ್ಥಳಾವಕಾಶವುಳ್ಳ ಕ್ಯಾಸೆಟ್ ಸಿದ್ಧವಾಗಿಟ್ಟುಕೊಂಡು ಕರೆಂಟು ಕೈಕೊಡದಿರಲಿ ಎಂಬ ಹಾರೈಕೆಯೊಡನೆ ಆ ಕ್ಷಣಕ್ಕಾಗಿ ಕಾಯುತ್ತಿದ್ದೆ.   ಕೆಲವು ವೇಳೆ  ಸಾಪ್ತಾಹಿಕಿಯಲ್ಲಿ ಚಲನಚಿತ್ರದ ಹೆಸರು ಹೇಳದೇ ಇರುವುದೂ ಇತ್ತು.  ಆಗ ಮರುದಿನ ಸಂಜೆಯವರೆಗೆ ಕುತೂಹಲದಿಂದ  ಕಾದು ನಮಗಿಷ್ಟವಿಲ್ಲದ ಯಾವುದಾದರೂ ಚಿತ್ರ ಪ್ರಸಾರವಾದರೆ ಆಗುತ್ತಿದ್ದ ನಿರಾಸೆ ಅಷ್ಟಿಷ್ಟಲ್ಲ. ಚಲನ ಚಿತ್ರಗಳಿಂದ ಹಾಡುಗಳನ್ನು ರೆಕಾರ್ಡ್ ಮಾಡಲು ಕಣ್ಣಲ್ಲಿ ಎಣ್ಣೆ ಹಾಕಿ  ಕಾಯಬೇಕಾಗುತ್ತಿತ್ತು.  ಎಷ್ಟು ಎಚ್ಚರ ವಹಿಸಿದರೂ ಕೆಲವು ಸಲ ಹಾಡು ಯಾವ ಕ್ಷಣದಲ್ಲಿ ಆರಂಭವಾಗುತ್ತದೆಂದು ತಿಳಿಯದೆ ಮೊದಲ ಸಾಲು ತಪ್ಪಿ ಹೋಗುತ್ತಿತ್ತು. ಇಲ್ಲವೇ ಕೊಂಯ್ಕ್ ಎಂಬ ಸದ್ದಿನೊಡನೆ ಅರ್ಧದಿಂದ ರೆಕಾರ್ಡ್ ಆಗುತ್ತಿತ್ತು. ಹಾಗಾದ ಎಷ್ಟೋ ಹಾಡುಗಳನ್ನು ಡಿಜಿಟಲ್ ಯುಗ ಆರಂಭವಾದ ಮೇಲೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಸರಿಪಡಿಸಿಕೊಂಡೆ, 

ಹೆಚ್ಚು ಹಾಡು ಹೆಕ್ಕಲು ಸಿಗುತ್ತಿದ್ದ ರಂಗೋಲಿ ಮತ್ತು ಚಿತ್ರಹಾರ್ ಕಾರ್ಯಕ್ರಮಗಳನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇದರಲ್ಲಿ ಬರುವ ಹಾಡುಗಳಲ್ಲಿ ರೇಡಿಯೊದಲ್ಲಿ ಕೇಳುತ್ತಿದ್ದುದಕ್ಕಿಂತ ಹೆಚ್ಚಿನ ಚರಣ ಇರುತ್ತಿದ್ದುದರಿಂದ ನನ್ನ ಕ್ಯಾಸೆಟ್ಟುಗಳಲ್ಲಿ ಆಗಲೇ ಇದ್ದ ಹಾಡುಗಳನ್ನೂ ಮತ್ತೆ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ.  ವಾರ್ತಾಪ್ರಸಾರವನ್ನೂ ತಪ್ಪದೆ ನೋಡುತ್ತಿದ್ದೆವು.  ರಮಣ್, ಕಿವಿಯ ಬಳಿ ಹೂ ಮುಡಿಯುತ್ತಿದ್ದ  ಸಲ್ಮಾ ಸುಲ್ತಾನ್, ಗೀತಾಂಜಲಿ ಅಯ್ಯರ್ ಮುಂತಾದವರು ಮೆಚ್ಚಿನ ವಾರ್ತಾ ವಾಚಕರಾಗಿದ್ದರು.

ನಮ್ಮ ಮನೆಯ ಆಸುಪಾಸಿನಲ್ಲಿ ಆಗ ಬೇರೆಲ್ಲೂ ಟೀವಿ ಇರಲಿಲ್ಲ.  ಹೀಗಾಗಿ ಚಲನಚಿತ್ರ, ಕ್ರಿಕೆಟ್ ಮ್ಯಾಚ್ ಇತ್ಯಾದಿ ಇರುವಾಗ ನಮ್ಮ ಮನೆ ಒಂದು ಮಿನಿ ಥಿಯೇಟರ್ ಆಗಿ ಪರಿವರ್ತನೆಗೊಳ್ಳುತ್ತಿತ್ತು.  ಪ್ರಮುಖ ಮ್ಯಾಚ್ ಇದ್ದರೆ ಹಳ್ಳಿಯಿಂದ ಬಂಧುಮಿತ್ರರೂ ಬರುವುದಿತ್ತು. ಇಂದಿರಾ ಗಾಂಧಿ ನಿಧನರಾದ ದಿನ ಮನೆಯ ಒಳಗೆ ಜಾಗ ಸಾಕಾಗದೆ ಅಂಗಳದಲ್ಲೂ ನಿಂತು ಜನರು ಪ್ರಸಾರ ವೀಕ್ಷಿಸಿದ್ದರು.

ನಾವು ಟೀವಿ ಕೊಂಡಾಗ ಹಂ ಲೋಗ್ ಎಂಬ ಒಂದು ದೈನಿಕ ಧಾರಾವಾಹಿ ಪ್ರಸಾರವಾಗುತ್ತಿತ್ತು.  ಅದರ ಕೊನೆಯಲ್ಲಿ ಚಿತ್ರ ನಟ ಅಶೋಕ್ ಕುಮಾರ್ ಕಾಣಿಸಿಕೊಂಡು ಅಂದಿನ ಎಪಿಸೋಡ್ ಬಗ್ಗೆ ಕೆಲವು ಮಾತುಗಳನ್ನು ಆಡುತ್ತಿದ್ದರು.  ಕೆಲವೊಮ್ಮೆ ಕೊನೆಯಲ್ಲಿ ವೈವಿಧ್ಯಕ್ಕೆಂದು ಹಮ್ ಲೋಗ್ ಎಂಬುದನ್ನು ಬೇರೆ ಬೇರೆ ಭಾಷೆಗಳಲ್ಲಿ ಹೇಳುತ್ತಿದ್ದರು.  ಒಮ್ಮೆ ಮಂಗಳೂರಿನ ತುಳುವಿನಲ್ಲೂ ‘ಎಂಕುಲು ಜನ’ ಎಂದು ಹೇಳಿದ್ದರು!

ಕೆಲವೇ ದಿನಗಳಲ್ಲಿ ಯೆ ಜೊ ಹೈ ಜಿಂದಗಿ ಎಂಬ ಹಾಸ್ಯಲೇಪನದ ದೈನಿಕ ಸೀರಿಯಲ್ ಒಂದು ಆರಂಭವಾಯಿತು.  ದಿನವೂ ಬೇರೆ ಬೇರೆ ಕಥಾ ಪ್ರಸಂಗಗಳಿರುತ್ತಿದ್ದ ಅದರಲ್ಲಿ ಶಫಿ ಇನಾಮ್‌ದಾರ್, ಸತೀಷ್ ಷಾ, ಸ್ವರೂಪ್ ಸಂಪತ್  ಮತ್ತು ರಾಕೇಶ್ ಬೇಡಿ ಮುಖ್ಯ ಪಾತ್ರಧಾರಿಗಳಾಗಿರುತ್ತಿದ್ದರು.  ಕಿಶೋರ್ ಕುಮಾರ್ ಹಾಡಿದ ಟೈಟಲ್ ಹಾಡು ಇದರ ವಿಶೇಷತೆಯಾಗಿತ್ತು.



ಆ ಮೇಲೆ ಅಡೋಸ್ ಪಡೋಸ್, ನುಕ್ಕಡ್, ಬುನಿಯಾದ್  ಇತ್ಯಾದಿ ಸೀರಿಯಲ್‌ಗಳು ಪುಂಖಾನುಪುಂಖವಾಗಿ ಬರತೊಡಗಿದವು.  ಇವೆಲ್ಲ ರಾತ್ರಿ ವೇಳೆ ಪ್ರಸಾರವಾಗುತ್ತಿದ್ದದ್ದು. 1986ರಲ್ಲಿ ಆರಂಭವಾದ ರಾಮಾನಂದ್ ಸಾಗರ್ ಅವರ ರಾಮಾಯಣ ಭಾನುವಾರ ಹಗಲು ಹೊತ್ತಿನ ಮೆಗಾ ಧಾರಾವಾಹಿಗಳಿಗೆ ನಾಂದಿ ಹಾಡಿತು.  ಆ ಮೇಲಂತೂ ಧಾರಾವಾಹಿಗಳ ಪಟ್ಟಿ  ಹೆಸರುಗಳನ್ನು ನೆನಪಿಡಲಾಗದಷ್ಟು  ಉದ್ದ ಬೆಳೆಯಿತು.

ಭಾನುವಾರ ಬೆಳಗ್ಗೆ ದೂರದರ್ಶನವೇ ನಿರ್ವಹಿಸುತ್ತಿದ್ದ ಖ್ಯಾತರೊಡನೆ ಸಂದರ್ಶನಗಳ ಒಂದು ಗಂಟೆಯ ಕಾರ್ಯಕ್ರಮವೊಂದು ಚೆನ್ನಾಗಿರುತ್ತಿತ್ತು.  ಅದರಲ್ಲೊಮ್ಮೆ ಸಂಗೀತ ನಿರ್ದೇಶಕ ರಾಜ್ ಕಮಲ್ ಅವರು ಹಾರ್ಮೋನಿಯಮ್, ಢೋಲಕ್ ಮತ್ತು ಗಾಜಿನ ಪಟ್ಟಿಗಳ ಹಿಮ್ಮೇಳ ಮಾತ್ರ ಇಟ್ಟುಕೊಂಡು ಸ್ವತಃ ಹಾಡಿದ ಸಾವನ್ ಕೊ ಆನೆ ದೊ ಚಿತ್ರದ  ಚಾಂದ್ ಜೈಸೆ ಮುಖಡೆ ಪೆ ಬಿಂದಿಯಾ ಸಿತಾರಾ ನನಗೆ ಧ್ವನಿಮುದ್ರಿಸಲು ಸಿಕ್ಕಿತ್ತು.



ಆಗ ಜಾಹೀರಾತುಗಳ ಹಾವಳಿ ಈಗಿನ ಖಾಸಗಿ ವಾಹಿನಿಗಳಲ್ಲಿರುವಷ್ಟು ಇರಲಿಲ್ಲ.  ಕೇಳಲು ನೋಡಲು ಹಿತಕರವಾದ ಬೆರಳೆಣಿಕೆಯ  ಕೆಲವೇ ಜಾಹೀರಾತುಗಳಿರುತ್ತಿದ್ದವು.  ಆಯ್ದ ಕೆಲವನ್ನು ನಾನು ಧ್ವನಿಮುದ್ರಿಸಿಕೊಂಡದ್ದೂ ಇದೆ. ಈಗ ದೂರದರ್ಶನ ವಾಹಿನಿಗಳಲ್ಲಿ ವಾಣಿಜ್ಯ ಜಾಹೀರಾತುಗಳು ಶೂನ್ಯವಾದರೂ ತಮ್ಮದೇ ಪ್ರೊಮೋಗಳನ್ನು ಪದೇ ಪದೇ ತೋರಿಸುತ್ತಾ ವೃಥಾ ಕಾಲಹರಣ ಮಾಡುತ್ತಾರೆ.



ಕೆಲ ವರ್ಷಗಳ ನಂತರ ಕಲರ್ ಟೀವಿ ಕೊಂಡ ಮೇಲೆ ನನ್ನ ಮೊದಲ ಟೀವಿಗೆ ಭಾರವಾದ ಮನಸ್ಸಿನಿಂದ ವಿದಾಯ ಕೋರಿದೆ. ಕೇಬಲ್ ಕನೆಕ್ಷನ್ ಬಂದ ಮೇಲೆ ಆ antennaವನ್ನು FM ರೇಡಿಯೋಗೆ ಉಪಯೋಗಿಸತೊಡಗಿದೆ.

ಆ ಮೊದಲ ಕಪ್ಪು ಬಿಳುಪು ಯುಗದಲ್ಲಾಗಲಿ, ನಂತರದ ಕಲರ್ ಕಾಲದಲ್ಲಾಗಲಿ, 90ರ ದಶಕದಲ್ಲಿ ಕನ್ನಡ ಪ್ರಸಾರ ರಾಜ್ಯವ್ಯಾಪಿಯಾದ ಮೇಲಾಗಲೀ,  ಈಗಿನ ಕೇಬಲ್, ಸೆಟಿಲೈಟುಗಳ ಸಂತೆಯಲ್ಲಾಗಲಿ ನಾನು ಟೀವಿಯನ್ನು ನೋಡಿದ್ದು ಕಮ್ಮಿ  ಕೇಳಿದ್ದು ಜಾಸ್ತಿ.

ಸಹವಾಸ ದೋಷ !

ಬಹಳ ಕಾಲ ಟೀವಿ ಜತೆಯಲ್ಲಿ ಇದ್ದ ನನ್ನ ಟೇಪ್ ರೆಕಾರ್ಡರ್ ಸಹವಾಸ ದೋಷದಿಂದ ತಾನೇ ಟೀವಿ ಆದದ್ದನ್ನು ಇಲ್ಲಿ ನೋಡಬಹುದು!



Friday, 15 December 2017

ವೈದೇಹಿ ಏನಾದಳು

ಯಕ್ಷಗಾನ , ಹರಿಕಥೆ, ನಾಟಕಗಳಲ್ಲಿ ರಾಮ ಹಾಡುವ ಹಾಡುಗಳಿರುತ್ತವೆ.  ಸುಧೀರ್ ಫಡ್ಕೆ ಅವರ ಪ್ರಸಿದ್ಧ ಗೀತರಾಮಾಯಣದಲ್ಲೂ ಕೋಠೆ ಸೀತಾ ಜನಕ ನಂದಿನಿ ಎಂದು ರಾಮ ಹಾಡುತ್ತಾನೆ. ಆದರೆ ಚಲನಚಿತ್ರಗಳಲ್ಲಿ ರಾಮನನ್ನು ಕುರಿತ ಹಾಡುಗಳು, ರಾಮನ ಉಲ್ಲೇಖ ಇರುವ ಹಾಡುಗಳು ನೂರಾರು ಇದ್ದರೂ ಯುದ್ಧ ಸಂದರ್ಭದ ಕಂದ ಪದ್ಯಗಳನ್ನು ಹೊರತು ಪಡಿಸಿದರೆ ಸ್ವತಃ ರಾಮ ಹಾಡುವ ಹಾಡುಗಳು ಇಲ್ಲವೆನ್ನುವಷ್ಟು ಕಮ್ಮಿ. ಸಂಪೂರ್ಣ ರಾಮಾಯಣ, ಲವ ಕುಶದಂಥ ಸಿನಿಮಾಗಳಲ್ಲೂ ರಾಮನ ಭಾವನೆಗಳನ್ನು ವ್ಯಕ್ತ ಪಡಿಸುವ ಹಾಡುಗಳು ಹಿನ್ನೆಲೆಯಲ್ಲಷ್ಟೇ ಕೇಳಿ ಬರುತ್ತವೆ. ಕನ್ನಡಕ್ಕೂ ಡಬ್ ಆಗಿದ್ದ ಹೋಮಿ ವಾಡಿಯಾ ಅವರ ಸಂಪೂರ್ಣ ವರ್ಣರಂಜಿತ ಸಂಪೂರ್ಣ ರಾಮಾಯಣ ಚಿತ್ರಕ್ಕಾಗಿ ರಾಮ ಮತ್ತು ಸೀತೆ  ಹಾಡಲೆಂದು ತುಮ್ ಗಗನ್ ಕೆ ಚಂದ್ರಮಾ ಔರ್ ಮೈ ಧರಾ ಕೀ ಧೂಲ್ ಹೂಂ ಎಂಬ ಒಂದು ಯುಗಳ ಗೀತೆಯನ್ನು ಕವಿ ಭರತವ್ಯಾಸ್ ಅವರು ರಚಿಸಿದ್ದರೂ ಆ ಮೇಲೆ ಅದನ್ನು ಕೈಬಿಡಲಾಯಿತಂತೆ. ಮುಂದೆ ಅದೇ ಗೀತೆಯನ್ನು ಸತಿ ಸಾವಿತ್ರಿ ಚಿತ್ರದಲ್ಲಿ ಬಳಸಿಕೊಳ್ಳಲಾಯಿತು.  ಹಸಿರು ತೋರಣ ಚಿತ್ರದ ಒಂದು ನಾಟಕದ ಸನ್ನಿವೇಶದಲ್ಲಿ ರಾಮನ ಪಾತ್ರಧಾರಿಯಾಗಿ ರಾಜ್ ಕುಮಾರ್ ಅವರಿಗೆ ಒಂದು ಹಾಡಿದ್ದರೂ ಅದನ್ನು  ನಾಟಕದ ಹಾಡೆಂದೇ ಪರಿಗಣಿಸಬೇಕಾಗುತ್ತದೆ.   ಈ ನಿಟ್ಟಿನಲ್ಲಿ ಸೀತಾ ವಿಯೋಗದಲ್ಲಿ ರಾಮ ಹಾಡುವ ದಶಾವತಾರ ಚಿತ್ರದ ವೈದೇಹಿ ಏನಾದಳು ಹಾಡು  ಏಕಮೇವಾದ್ವಿತೀಯವಾಗಿ ನಿಲ್ಲುತ್ತದೆ.

1960ರಲ್ಲಿ ಬಿಡುಗಡೆಯಾದ ದಶಾವತಾರ ಚಿತ್ರವನ್ನು  ಬಿ.ಎಸ್. ರಂಗಾ ಅವರು  ನಿರ್ಮಿಸಿದ್ದರು.  ಸಾಹಿತ್ಯ ಮತ್ತು ಹಾಡುಗಳ  ಹೊಣೆ ಹೊತ್ತವರು ಜಿ.ವಿ.ಅಯ್ಯರ್. ಸಂಗೀತ ನಿರ್ದೇಶನ ಜಿ.ಕೆ. ವೆಂಕಟೇಶ್ ಅವರದ್ದು. ಚಿತ್ರದ ಹತ್ತರಲ್ಲಿ ಒಂದು ಭಾಗವಾದ ರಾಮಾವತಾರದಲ್ಲಿ ಸೀತಾಪಹರಣ ಸನ್ನಿವೇಶಕ್ಕೆ  ಒಂದು ಹಾಡಿರಬೇಕೆಂಬ ಪ್ರೇರಣೆ ಹೇಗುಂಟಾಯಿತೋ, ಜಿ.ವಿ. ಅಯ್ಯರ್ ಅವರ ಲೇಖನಿಯನ್ನು ಯಾರು ಹಿಡಿದು ನಡೆಸಿದರೋ, ಕನ್ನಡ ಚಿತ್ರ ಸಂಗೀತ  ಇನ್ನೂ ಶೈಶವಾವಸ್ಥೆಯಲ್ಲಿದ್ದು ಹಿಂದಿ ಹಾಡುಗಳ ಧಾಟಿಗಳನ್ನೇ ಬಳಸುತ್ತಿದ್ದ ಕಾಲದಲ್ಲಿ  ಹಿಂದೆ ಬಂದಿರದ ಮುಂದೆ ಬರಲು ಸಾಧ್ಯವಿಲ್ಲದ ಧಾಟಿಯೊಂದನ್ನು ಜಿ.ಕೆ. ವೆಂಕಟೇಶ್ ಅವರು ಹೇಗೆ ಸಂಯೋಜಿಸಿದರೋ, ಕಲ್ಲೂ ಕರಗುವಂತೆ, ಸಕಲ ಚರಾಚರಗಳು ಕ್ಷಣಕಾಲ ಸ್ತಬ್ಧವಾಗುವಂತೆ ಗಾನ ಗಂಧರ್ವ ಪಿ.ಬಿ.ಶ್ರೀನಿವಾಸ್ ಅದನ್ನು ಹೇಗೆ ಹಾಡಿದರೋ ಆ ರಾಮನಿಗೇ ಗೊತ್ತು.

ಗೋದಾವರಿ ದೇವಿ ಮೌನವಾಂತಿಹೆ ಏಕೆ ಎಂದು ಆರಂಭವಾಗುವ ಈ ಹಾಡನ್ನು ಎಲ್ಲರೂ ಗುರುತಿಸುವುದು ವೈದೇಹಿ ಏನಾದಳು ಎಂಬ ನಂತರದ ಸಾಲಿನಿಂದಲೇ.  ಆ ಮೊದಲ ಸಾಲು ಮತ್ತೆ ಮರುಕಳಿಸುವುದೂ ಇಲ್ಲ. ಜಂಪೆ ತಾಳದಲ್ಲಿದ್ದು ಶುಭಪಂತುವರಾಳಿ ರಾಗವನ್ನು ಆಧರಿಸಿದ ಈ ಹಾಡಿನ ಷಡ್ಜ ಎಲ್ಲಿ ಎಂದೇ ಸುಲಭದಲ್ಲಿ ಗೊತ್ತಾಗುವುದಿಲ್ಲ. ಇದನ್ನು ಯಥಾವತ್ ಮರು ಸೃಷ್ಟಿ ಮಾಡುವುದಂತೂ ದೂರದ ಮಾತು.

ಚೇಲೋ ಮತ್ತು ವೈಬ್ರಾಫೋನ್ ಜೊತೆಯಾಗಿರುವ ಈ ಹಾಡಿನ prelude ಆಲಿಸುವಾಗಲೇ ನಮ್ಮ ಚೈತನ್ಯವೆಲ್ಲ ಕಾಲುಗಳ ಮೂಲಕ ಬಸಿದು ನೆಲಕ್ಕಿಳಿದಂಥ ಅನುಭವವಾಗುತ್ತದೆ. ಕಾನನದ ನೀರವತೆಯನ್ನು ಬಿಂಬಿಸುವ ವಿಶಿಷ್ಟ ದನಿಯ ತಾಳವಾದ್ಯ ಮತ್ತು ಕೊಳಲಿನ ಹಿನ್ನೆಲೆಯೊಂದಿಗೆ ಪಲ್ಲವಿ ಆರಂಭವಾಗುತ್ತದೆ.  ಚೇಲೋ ಮತ್ತು ವೈಬ್ರಾಫೋನ್‌ಗಳ ಅತಿ ಚಿಕ್ಕ interlude  ನಂತರ ಪಲ್ಲವಿಯ ಮುಂದುವರಿದ ಭಾಗವೇ ಎನ್ನಿಸುವ  ಪ್ರೀತಿ ಅಮೃತವನೆರೆದು ಎಂಬ ಸಾಲು ಇರುವ ಮೊದಲ ಚರಣ ಬರುತ್ತದೆ. ಪಿ.ಬಿ.ಶ್ರೀನಿವಾಸ್ ಅವರ ಹೆಗ್ಗುರುತಾದ ವಿಶಿಷ್ಟ ಮುರ್ಕಿಗಳು ಅರ್ಥಾತ್ ಸಣ್ಣ ಸಣ್ಣ ಬಳುಕುಗಳನ್ನು ಹೊಂದಿದ ಚರಣ ಭಾಗದ ಸಂಚಾರ  ಮುಂದುವರೆಯುತ್ತಾ ಕರ್ಕಶವೆನ್ನಿಸದ ರೀತಿ false voiceನಲ್ಲಿ ಏರು ಸ್ವರಗಳನ್ನು ಸ್ಪರ್ಶಿಸಿ ಮತ್ತೆ ಕೆಳಗಿಳಿಯಲು ವೈಬ್ರಾಫೋನ್ ಮತ್ತು ಚೇಲೊಗಳ bridge music  ಸೇತುವೆ ನಿರ್ಮಿಸಿಕೊಡುತ್ತದೆ.

ಮುಂದಿನ interlude ಬರೇ ಹಕ್ಕಿಗಳ ಚಿಲಿಪಿಲಿ ಸದ್ದು.  ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು ಎಂದು ಉದಯ ಶಂಕರ್ ಅವರು ಬರೆಯುವ ಎಷ್ಟೋ ವರ್ಷ ಮೊದಲೇ ಜಿ.ಕೆ. ವೆಂಕಟೇಶ್ ಅವರು ಈ ಪ್ರಯೋಗ ಮಾಡಿದ್ದರು.  ಈ ಚರಣದಲ್ಲಿ ಪ್ರೇಮಗಾನದ ಸುಧೆಯ ಎಂಬಲ್ಲಿ ದಿಂದ ಕ್ಕೆ ಒಂದು ಸ್ವರ ಸ್ಥಾನ ಏರುವ ಸೊಗಸು ಅನನ್ಯ. ಉಳಿದ ಚರಣಗಳ ಇಂತಹ  ಭಾಗದಲ್ಲಿ  ಈ ಪ್ರಯೋಗ ಇಲ್ಲ.

ಮಸಣ ಮೌನದೆ ಸುಳಿವ ಎಂಬ ಚರಣದ ಸುಳಿವ ಎಂಬಲ್ಲಿ ಪಿ.ಬಿ.ಎಸ್ ಅವರ ಧ್ವನಿ ಅತಿ ಮಂದ್ರ ಸ್ಥಾಯಿಯಲ್ಲಿ sustain ಆಗುವಾಗಿನ ಅನುಭವ ಅನನ್ಯ. ಹಾಡಿನ ಇಡೀ ಸಾರವೇ ಈ ಭಾಗದಲ್ಲಿ ಅಡಕವಾಗಿದೆಯೇನೋ ಎಂದು ಅನ್ನಿಸುತ್ತದೆ.  ಮಸಣದ ಮೌನವನ್ನು ಅಭಿವ್ಯಕ್ತಿಗೊಳಿಸಲೋ ಎಂಬಂತೆ ಈ ಇಡೀ ಚರಣದಲ್ಲಿ ಯಾವ ತಾಳವಾದ್ಯವನ್ನೂ ಉಪಯೋಗಿಸಲಾಗಿಲ್ಲ. ಆದರೆ ನಾವು ಹಾಡಲ್ಲಿ ಎಷ್ಟು ತಲ್ಲೀನರಾಗಿರುತ್ತೇವೆ ಎಂದರೆ ಈ ವಿಷಯ ನಮ್ಮ ಗಮನಕ್ಕೇ ಬರುವುದಿಲ್ಲ!

ಈ ಸುದೀರ್ಘ ಡಬಲ್ ಪ್ಲೇಟ್ ಹಾಡು ನಮ್ಮ ತಾಯಿಗೆ ಬಲು ಮೆಚ್ಚಿನದಾಗಿತ್ತು.  ರೇಡಿಯೋದಲ್ಲಿ ಪ್ರಸಾರವಾದರೆ ಎಲ್ಲಿದ್ದರೂ ಬಂದು ಪೂರ್ತಿ ಕೇಳದೆ ಹೋಗುತ್ತಿರಲಿಲ್ಲ.  ಪಿ.ಬಿ.ಎಸ್  ಧ್ವನಿಯನ್ನು ತುಂಬಾ ಇಷ್ಟ ಪಡುತ್ತಿದ್ದ  ಅವರು ಈ ಹಾಡಂತೂ ಸ್ವತಃ ಶ್ರೀರಾಮನೇ ಹಾಡಿದಂತಿದೆ ಅನ್ನುತ್ತಿದ್ದರು.

ಆದರೆ ಇಂತಹ ಅದ್ವಿತೀಯ ಹಾಡನ್ನು ಸೂಕ್ತವಾಗಿ ಚಿತ್ರೀಕರಿಸುವಲ್ಲಿ  ನಿರ್ದೇಶಕರು ಸೋತಿದ್ದಾರೆ ಎಂದೇ ಅನ್ನಬೇಕಾಗುತ್ತದೆ. ಹಾಡಿನ ಬಹು ಭಾಗ  long shot ಗಳನ್ನೇ ಹೊಂದಿದ್ದು ಹಾಡಿನ ಭಾವಕ್ಕೆ ಯಾವ ರೀತಿಯಲ್ಲೂ ಪೂರಕವಾಗಿಲ್ಲ.  ಇತ್ತೀಚೆಗೆ ಗಮನವಿಟ್ಟು ನೋಡುವವರೆಗೆ ಶ್ರೀರಾಮನ ಪಾತ್ರಧಾರಿ ಪ್ರಸಿದ್ಧ ನಟ ರಾಜಾ ಶಂಕರ್ ಎಂದು ನನಗೆ ಗೊತ್ತಾಗಿರಲೇ ಇಲ್ಲ!.  ಯಾರೋ ಅನಾಮಿಕ ಕಲಾವಿದ ಎಂದೇ ನಾನಂದುಕೊಂಡಿದ್ದೆ.

ನಮ್ಮನ್ನು ಭಾವನಾಲೋಕಕ್ಕೊಯ್ಯುವ  ಈ ಮಧುರ ಹಾಡನ್ನು ಈಗ ಸಾಹಿತ್ಯ ಓದುತ್ತಾ  ಆಲಿಸಿ. ಹೆಡ್ ಫೋನ್ ಬಳಸಿದರೆ ಉತ್ತಮ.






ಗೋದಾವರಿ ದೇವಿ ಮೌನವಾಂತಿಹೆ ಏಕೆ
ವೈದೇಹಿ ಏನಾದಳು  ವೈದೇಹಿ ಏನಾದಳು

ಪ್ರೀತಿ ಅಮೃತವನೆರೆದು ಜೀವಜ್ಯೋತಿಯ ಬೆಳಗಿ
ನೀತಿ ನೇಹದ ದಾರಿ ತೋರಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಾಮರದ ಮರೆಯಲ್ಲಿ ಕುಳಿತಿರುವ ಕೋಗಿಲೆಯೆ
ನಿನ್ನ ದನಿ ಜೊತೆಯಲ್ಲಿ ತನ್ನ ದನಿ ಸೇರಿಸುತ
ಪ್ರೇಮಗಾನದ ಸುಧೆಯ ಹರಿಸಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಲ್ಲೆ ಮಲ್ಲಿಗೆ ಜಾಜಿ ಸಂಪಿಗೆಯ ಹೂಗಳೆ
ಎಲ್ಲ ನಗುಮೊಗವೆಲ್ಲ ತನ್ನೊಡನೆ ನಗಲೆಂದು
ಶಿರದಲ್ಲಿ ಧರಿಸಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಸಣಮೌನದೆ ಸುಳಿವ ವಿಪಿನವಾಸಿಗಳೆ
ನೀವು ಧರಣಿಜಾತೆಯ ಕಾಣಿರಾ
ಧರಣಿಜಾತೆಯ ಕಾಣಿರಾ

ನೇಸರನೆ ನೀನೇಕೆ ಮೋರೆಮರೆ ಮಾಡುತಿಹೆ
ಸೀತೆ ಇರುವನು ತೋರೆಯಾ
ಸೀತೆ ಇರುವನು ತೋರೆಯಾ

ವೈದೇಹಿ ಏನಾದಳು  ವೈದೇಹಿ ಏನಾದಳು