Wednesday, 18 October 2017

ದೀಪಾವಳಿಯೂ ಮಸಾಲೆದೋಸೆಯೂ



ಬೇಕೆನಿಸಿದಾಗ ಹೋಟಲಿಗೆ ಹೋಗಿ ತಿನ್ನುವ ಮಸಾಲೆದೋಸೆಗೂ ದೀಪಾವಳಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದೆನ್ನಿಸುತ್ತಿದೆಯೇ?  ಆದರೆ ನಮ್ಮ ಮನೆಯ ಮಟ್ಟಿಗೆ ಇವೆರಡಕ್ಕೆ ಅವಿನಾಭಾವ ಸಂಬಂಧವಿದೆ.  ಹಾಗೆಂದು ಇದು ಬಲು ಹಿಂದಿನಿಂದ ನಡೆದು ಬಂದದ್ದೇನೂ ಅಲ್ಲ.

ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದಿನ ನಿತ್ಯ ಬೆಳಗ್ಗೆ ಗಂಜಿ ಉಣ್ಣುವ ದಿನಚರಿಯ ಮನೆಗಳಲ್ಲಿ ಎಂದಾದರೊಮ್ಮೆ  ದೋಸೆಯಂಥ ತಿಂಡಿ   ಇರುತ್ತಿರಲಿಲ್ಲವೆಂದೇನೂ ಅಲ್ಲ.  ಆದರೆ ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು.  ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ   ಬೆರೆಸಲಾಗುತ್ತಿತ್ತು.  ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ  ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ.  ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ.  ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ   ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ.  ಆಗ ನಮ್ಮಲ್ಲಿ  ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ.  ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ  ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು.  ಗೋಪೂಜೆಯ ದಿನ ದನಕರುಗಳಿಗೂ  ಎರಡೆರಡು ದೋಸೆ ತಿನ್ನುವ ಭಾಗ್ಯ.  ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ  ಸಿಗುತ್ತಿತ್ತು.


ಒಂದು ಗ್ರೂಪ್ ಫೊಟೋದ ಸುತ್ತ
ಲೇಖನದ ಮೂಲಕ ಈಗಾಗಲೇ ಪರಿಚಿತರಾದ ನಮ್ಮ ಕುಟುಂಬದ ಹೊಸತನದ ಹರಿಕಾರ ಗಣಪತಿ ಅಣ್ಣನಿಗೆ  ಈ ಮೂರು ದಿನಗಳ ದೋಸೆ ಹಬ್ಬದಲ್ಲಿ ಏನಾದರೂ ಬದಲಾವಣೆ ಬೇಕೆನ್ನಿಸಿತು.  ಪ್ರತಿ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಅಲ್ಲಿಯ ಮಿತ್ರ ಸಮಾಜ ಹೋಟೆಲಿನಲ್ಲಿ ನಾವು ಮಸಾಲೆ ದೋಸೆ ತಿನ್ನುವುದಿತ್ತು. ಮೊದಲೇ ಚಿಕ್ಕ ಹೋಟೆಲು ಅದು.  ಜಾತ್ರೆಯ ಜನಸಂದಣಿ ಬೇರೆ.  ಹೀಗಾಗಿ  ಸಪ್ಲಯರ್ ನಮ್ಮ ಟೇಬಲ್ ಬಳಿಗೆ ಬಂದು  ಆರ್ಡರ್ ಪಡೆದು ಮಸಾಲೆ ದೋಸೆ ನಮ್ಮ ಮುಂದೆ ಪ್ರತ್ಯಕ್ಷವಾಗಲು ಬಹಳ ತಡವಾಗುತ್ತಿತ್ತು. ಕೆಲವೊಮ್ಮೆ ಆತ ನಮ್ಮನ್ನು ಮರೆತೇ ಬಿಟ್ಟನೇನೋ ಎಂದೂ ಅನ್ನಿಸುವುದಿತ್ತು. ಕೊನೆಗೂ ಆತ ದೋಸೆಗಳ ಪ್ಲೇಟುಗಳೊಡನೆ ನಮ್ಮತ್ತ ಬಂದಾಗ ನಿಧಿ ದೊರಕಿದಷ್ಟು ಸಂತೋಷ. ಇತರ ದಿನಗಳಲ್ಲೂ ಮನೆಗೆ ಬೇಕಾದ ದಿನಸಿ ಇತ್ಯಾದಿ ತರಲು ಬೆಳಗ್ಗಿನ ಹೊತ್ತು  ಉಜಿರೆ, ಬೆಳ್ತಂಗಡಿ ಇತ್ಯಾದಿ ಕಡೆ ಹೋದಾಗ ಕೆಲವೊಮ್ಮೆ ಹೋಟೆಲಿಗೆ ಭೇಟಿ ಕೊಡುತ್ತಿದ್ದರೂ ಅಲ್ಲಿ ಗೋಳಿಬಜೆ, ಅವಲಕ್ಕಿ-ಕಡ್ಲೆಯಂಥ ತಿಂಡಿಗಳಲ್ಲೇ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತಿತ್ತು ಏಕೆಂದರೆ ಆಗ ಹೋಟೆಲುಗಳಲ್ಲಿ ಮಸಾಲೆ, ತುಪ್ಪ, ಸಾದಾ ದೋಸೆಗಳು ಸಂಜೆ ನಾಲ್ಕರ ನಂತರವಷ್ಟೇ ಇರುತ್ತಿದ್ದುದು.  ನಮ್ಮಲ್ಲಿ ಅಪರಾಹ್ನದ ನಂತರ ಪೇಟೆಗೆ ಹೋಗುವ ಪದ್ಧತಿಯೇ ಇರಲಿಲ್ಲ. ಹೀಗಾಗಿ ಜಾತ್ರೆಯಂದು ಹೋಟೆಲಿನಲ್ಲಿ ಅಷ್ಟು ಹೊತ್ತು ಕಾದು ವರ್ಷಕ್ಕೊಮ್ಮೆ ತಿನ್ನುವ ಮಸಾಲೆ ದೋಸೆಯನ್ನು ಮನೆಯಲ್ಲೇ ಏಕೆ ಮಾಡಬಾರದೆಂಬ ಯೋಚನೆ ಅಣ್ಣನಿಗೆ ಮೂಡಿತು.  ಇದನ್ನು ಕಾರ್ಯರೂಪಕ್ಕೆ ತರಲು ದೀಪಾವಳಿಯೇ ಸೂಕ್ತ ಎಂದೂ ಅವರಿಗೆ ಅನ್ನಿಸಿತು.  ಮನಸ್ಸಿಗೆ ಅನ್ನಿಸಿದ್ದನ್ನು  ಕಾರ್ಯಗತಗೊಳಿಸಲು ಮೀನ ಮೇಷ ಎಣಿಸುವವರಲ್ಲ  ಅವರು. ಒಂದು ವರ್ಷ ದೀಪಾವಳಿಯ ಹಿಂದಿನ ದಿನ ಪೇಟೆಗೆ ಹೋಗಿ ಒಂದು ಚೀಲ ಬಟಾಟೆ ತಂದೇ ಬಿಟ್ಟರು.  ತೂಗಾಡಿಸಿದ ನೀರುಳ್ಳಿಯ ಗೊಂಚಲು  ಮನೆಯಲ್ಲಿ ಯಾವಾಗಲೂ ಇರುತ್ತಿತ್ತು.  ದೀಪಾವಳಿಯಂದು ಬೆಳಗ್ಗೆ ತಾವೇ ಮುತುವರ್ಜಿ ವಹಿಸಿ ಬಟಾಟೆ ಬೇಯಿಸಿ ಸುಲಿದು, ಈರುಳ್ಳಿ ಹೆಚ್ಚಿ  ಪಲ್ಯ ಮಾಡಿದರು. ಹಬ್ಬದ ದಿನ ನೀರುಳ್ಳಿಯ ಬಳಕೆಗೆ ನಮ್ಮ ತಾಯಿ ಮತ್ತು ಹಿರಿಯಣ್ಣನಿಂದ ಆಕ್ಷೇಪ ವ್ಯಕ್ತವಾದರೂ ಬೇರೆ ಒಲೆ, ಬೇರೆ ಕಾವಲಿಯನ್ನು ಬಳಸಿ ಮಸಾಲೆ  ದೋಸೆ ತಯಾರಿಸಿಯೇ ಬಿಟ್ಟರು.  ನಾವೆಲ್ಲ ಮತ್ತೆ ಮತ್ತೆ ಕೇಳಿ ಹಾಕಿಸಿಕೊಂಡು ತಿಂದೆವು.  ಅಂದಿನಿಂದ ಸಾಂಪ್ರದಾಯಿಕ ಹಳದಿ ದೋಸೆ ಮತ್ತು ಬಾಳೆ ಹಣ್ಣಿನ ಸೀಕರಣೆಗೆ ಸಮಾನಾಂತರವಾಗಿ ಮಸಾಲೆ ದೋಸೆಯೂ ನಮ್ಮ ಮನೆ ದೀಪಾವಳಿಯ ಅವಿಭಾಜ್ಯ ಅಂಗವಾಯಿತು.

ಉದ್ಯೋಗ ನಿಮಿತ್ತ ನಮ್ಮ ಕುಟುಂಬ ಸದಸ್ಯರೆಲ್ಲ ಈಗ ಬೇರೆ ಬೇರೆ ಕಡೆ ನೆಲೆಸಿದ್ದರೂ ದೀಪಾವಳಿಯ ಸಂದರ್ಭದಲ್ಲಿ ಒಂದು ದಿನವಾದರೂ ಮನೆಯಲ್ಲೇ ಮಸಾಲೆ ದೋಸೆ ತಯಾರಿಸಿ ಈಗಿಲ್ಲದ ಅಣ್ಣನನ್ನು ನೆನಪಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ನಮ್ಮೂರ ಪ್ರಸಿದ್ಧ ಕವಿ ರಾಮಚಂದ್ರ ಮಾಸ್ತರರ ಹಳೆಯ ಚುಟುಕವೊಂದು ನೆನಪಾಗುತ್ತಿದೆ.

ನಮ್ಮ ಅಣ್ಣ ಬಂದ
ಆಲೂಗಡ್ಡೆ ತಂದ
ಉಳ್ಳಿಗಡ್ಡೆಯೊಡನೆ ಬೆರೆಸಿ
ಪಲ್ಯ ಮಾಡಿ ತಿಂದ

ಆದರೆ ಇಲ್ಲಿ ಕೊನೆಯೆ ಪದ ತಿಂದ ಎಂದಿದ್ದುದನ್ನು ತಿನ್ನಿಸಿದ ಎಂದು ಬದಲಾಯಿಸಬೇಕಾಗುತ್ತದೆ.

ಈ ಮಸಾಲೆದೋಸೆ ಪುರಾಣದ ಕೊನೆಯಲ್ಲೊಂದು ಪ್ರಶ್ನೆ.  ಬಟಾಟೆ ನೀರುಳ್ಳಿ ಪಲ್ಯ ಪೂರಿಯೊಡನೆ ಸೇರಿದರೆ ಪೂರಿ ಭಾಜಿ, ದೋಸೆಯೊಡನೆ ಸೇರಿದರೆ ಮಸಾಲೆ ದೋಸೆ ಹೇಗಾಗುತ್ತದೆ?  ಇದಕ್ಕೆ ಉತ್ತರ ತಿಳಿದೂ ಹೇಳದಿದ್ದರೆ ನೀವು ತಿನ್ನುವ ಗರಿ ಗರಿ ಮಸಾಲೆದೋಸೆ ಬಾಯಿ ತಲುಪುವ ಮುನ್ನವೇ ಪುಡಿ ಪುಡಿಯಾಗಿ ಕೈಯಿಂದ ಉದುರೀತು!



Sunday, 1 October 2017

ಲಂಡನ್‌ನಲ್ಲಿ ಜಗನ್ಮೋಹಿನಿ ಪತ್ತೆಯಾದಳು!


ಇಲ್ಲ ಇಲ್ಲ.  ಕೊಹಿನೂರ್ ವಜ್ರ ಅಥವಾ ಟಿಪ್ಪು ಖಡ್ಗದಂತೆ ಜಗನ್ಮೋಹಿನಿಯನ್ನು ಯಾರೂ ಹಾರಿಸಿಕೊಂಡು ಹೋಗಲಿಲ್ಲ. ವಾಸ್ತವವಾಗಿ  ಮೂಲ ಜಗನ್ಮೋಹಿನಿ ಲಂಡನ್‌ನಲ್ಲಿ ಇಲ್ಲ ಕೂಡ. ರಾಮಾಯಣದ ಕೆಲವು ಪಾಠಾಂತರಗಳ ಪ್ರಕಾರ ರಾವಣನ ಅಶೋಕವನದಲ್ಲಿದ್ದ ಛಾಯಾ ಸೀತೆಯಂತೆ  ಅಲ್ಲಿ ಇರುವುದು ಜಗನ್ಮೋಹಿನಿಯ ಛಾಯಾ ರೂಪ ಮಾತ್ರ! ಯಾರಪ್ಪಾ ಈ ಜಗನ್ಮೋಹಿನಿ ಎಂದು ಯೋಚಿಸುತ್ತಿದ್ದೀರಾ?  ಈಕೆ ಬೇರಾರೂ ಅಲ್ಲ.  50ರ ದಶಕದಲ್ಲಿ ಎಂದೋ ಎಂದೋ ಎಂದು ಹಾಡಿ ಎಲ್ಲರನ್ನೂ ಸಮ್ಮೋಹನಗೊಳಿಸಿದ್ದವಳು.  ಅರ್ಥಾತ್ ನಾನು ಅನೇಕ ವರ್ಷಗಳಿಂದ ಹುಡುಕಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದ ಜಗನ್ಮೋಹಿನಿ ಚಿತ್ರದ ಕೆಲವು ಹಾಡುಗಳು ಕೊನೆಗೂ ಲಂಡನ್‌ನಲ್ಲಿರುವ ಬ್ರಿಟಿಷ್ ಲೈಬ್ರರಿಯಲ್ಲಿ ಪತ್ತೆಯಾದವು.  ಅಷ್ಟೇ ಅಲ್ಲ. ನಾನು ನಿರೀಕ್ಷಿಸದಿದ್ದ ಇನ್ನೂ ಅನೇಕ ಹಳೆ ಹಾಡುಗಳ ಭಂಡಾರದ ಕೀಲಿ ಕೈಯೇ ದೊರಕಿದಂತಾಯಿತು.  ಮಿತ್ರರೊಬ್ಬರು ನೀಡಿದ ಸಣ್ಣ ಸುಳಿವೊಂದು ಇದಕ್ಕೆ ಕಾರಣವಾಯಿತು.

ಬ್ರಿಟಿಷ್ ಲೈಬ್ರರಿ ಹಮ್ಮಿಕೊಂಡ Endangered Archives Programme ಅಡಿಯಲ್ಲಿ ಯಂಗ್ ಇಂಡಿಯಾ ಲೇಬಲ್ ಹೊಂದಿ ಮುಂಬಯಿಯ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ ಸುಮಾರು 1935 ರಿಂದ 1955ರ ವರೆಗೆ ತಯಾರಿಸಿದ್ದ ಸಾವಿರಾರು 78 rpm ರೆಕಾರ್ಡುಗಳನ್ನು digitised ರೂಪದಲ್ಲಿ ಸಂಗ್ರಹಿಸಲಾಗಿದ್ದು ನಾವು ಚಂದಮಾಮ ಜಾಹೀರಾತುಗಳಲ್ಲಿ ನೋಡುತ್ತಾ ಬಂದಿರುವ ಅನೇಕ ಕನ್ನಡ ಚಿತ್ರಗಳ ಹಾಡುಗಳು  ಮುಕ್ತವಾಗಿ ಆಲಿಸಲು  ಅಲ್ಲಿ ಲಭ್ಯವಿವೆ.  ಜಗನ್ಮೋಹಿನಿಯ ಕೆಲವು ಹಾಡುಗಳ ಜೊತೆಗೆ ಶ್ರೀನಿವಾಸ ಕಲ್ಯಾಣ, ದಳ್ಳಾಳಿ, ಆಶಾಢಭೂತಿ, ಗಂಧರ್ವ ಕನ್ಯೆ, ಚಂಚಲ ಕುಮಾರಿ ಮುಂತಾದವು ಅಲ್ಲದೆ ಅನೇಕ ನಾಟಕಗಳು, ಲಾವಣಿಗಳು, ರಂಗ ಗೀತೆಗಳು, ಶಾಸ್ತ್ರೀಯ ಸಂಗೀತ ಇತ್ಯಾದಿಗಳ ದೊಡ್ಡ ಖಜಾನೆಯೇ ಇದೆ.  ಆಗಲೇ ಹೇಳಿದಂತೆ ಇವುಗಳ ಪ್ರತಿ ಮಾತ್ರ ಅಲ್ಲಿದ್ದು ಮೂಲ ಸಾಮಗ್ರಿ ಆಯಾ ಸಂಗ್ರಾಹಕರ ಬಳಿಯಲ್ಲೇ ಇರುತ್ತದೆ.  ಈ ಕನ್ನಡ ಖಜಾನೆ ಅಲ್ಲಿ ಸೇರ್ಪಡೆಯಾದದ್ದು  ವೆಂಕಟಮೂರ್ತಿ ಮತ್ತು ಕೊಚ್ಚಿಯ ಸಮೀಪದ ಪಾಲ ಎಂಬಲ್ಲಿ ಹಳೆ ಗ್ರಾಮೊಫೋನ್ ಮತ್ತು ರೆಕಾರ್ಡುಗಳ ಬೃಹತ್ ಸಂಗ್ರಹಾಲಯವನ್ನೇ ಹೊಂದಿರುವ ಸನ್ನಿ ಮಾಥ್ಯೂ ಎಂಬ ಮಹಾನುಭಾವರ ಸಹಕಾರದಿಂದ.  ಇತರ ಅನೇಕರೂ ವಿವಿಧ ಭಾಷೆಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.



ಬ್ರಿಟಿಷ್ ಮತ್ತು ಜರ್ಮನ್ ರೆಕಾರ್ಡಿಂಗ್ ಕಂಪನಿಗಳ ತೀವ್ರ ಸ್ಪರ್ಧೆ ಎದುರಿಸಿಯೂ ಈ ಅಪ್ಪಟ ಸ್ವದೇಶಿ ಸಂಸ್ಥೆಯಾದ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ  ಸುಮಾರು ಎರಡು ದಶಕಗಳ ಕಾಲ  10000ಕ್ಕೂ ಹೆಚ್ಚು 78 rpm ರೆಕಾರ್ಡುಗಳನ್ನು   ಬಿಡುಗಡೆ ಮಾಡಿತ್ತು.  ಸಿನಿಮಾ ಸಂಗೀತದ ಜೊತೆಗೆ ಹವ್ಯಾಸಿ ಕಲಾವಿದರಿಗೂ ಅವಕಾಶ ನೀಡುತ್ತಿದ್ದ ಇದು 1948ರ ಹೊತ್ತಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲತೊಡಗಿ 1955ರಲ್ಲಿ ಬಾಗಿಲು ಮುಚ್ಚಿತು.  ಕನ್ನಡದಲ್ಲಿ ಮಹಾತ್ಮಾ ಸಂಸ್ಥೆ ಬಿಟ್ಟರೆ ಇನ್ಯಾವ ಚಿತ್ರ ನಿರ್ಮಾಪಕರೂ ಈ ಲೇಬಲ್‌ನಲ್ಲಿ ರೆಕಾರ್ಡು ಬಿಡುಗಡೆ ಮಾಡಿದಂತಿಲ್ಲ. 

ಹಳೆ ಗ್ರಾಮೊಫೋನ್ ರೆಕಾರ್ಡು ಸಂಗ್ರಹದ ಹವ್ಯಾಸ ಇರುವ  ಎಷ್ಟೋ ಮಂದಿ ಇದ್ದಾರೆ. ಬೆಂಕಿ ಪೆಟ್ಟಿಗೆ ಸಂಗ್ರಹದಿಂದ ಕಡ್ಡಿ ಗೀರಲಾಗದು, ಸ್ಟಾಂಪ್ ಸಂಗ್ರಹದಿಂದ ಅಂಚೆಯಲ್ಲಿ ಕಾಗದ ಕಳಿಸಲಾಗದು, ನಾಣ್ಯ ಸಂಗ್ರಹದಿಂದ ಏನನ್ನೂ ಕೊಳ್ಳಲಾಗದು.  ಆದರೆ ಗ್ರಾಮೊಫೋನ್ ರೆಕಾರ್ಡುಗಳನ್ನು ಸುಮ್ಮನೆ ಕಪಾಟಿನಲ್ಲಿ ಇಟ್ಟುಕೊಳ್ಳುವ ಬದಲು ಈ ರೀತಿ ಡಿಜಿಟೈಸ್ ಮಾಡಿ ಈ ಮಹನೀಯರಂತೆ ಪ್ರಪಂಚಕ್ಕೆ ಹಂಚಬಹುದು.  ಎಲ್ಲ ಸಂಗ್ರಾಹಕರು ಬ್ರೀಟಿಷ್ ಲೈಬ್ರರಿ ಜೊತೆ ಕೈ ಜೋಡಿಸಿ  ಅಥವಾ ತಮ್ಮದೇ ರೀತಿಯಲ್ಲಿ ಈ ದಿಸೆಯಲ್ಲಿ ಮುಂದುವರಿಯಲಿ ಎಂದು ಹಾರೈಸೋಣ.

ಬ್ರಿಟಿಷ್ ಲೈಬ್ರರಿಯ ಮಹಾನ್ ಸಮುದ್ರವನ್ನು ಜಾಲಾಡಬಯಸುವವರು ಇಲ್ಲಿ ಕ್ಲಿಕ್ಕಿಸಬಹುದು.  ನಾನು ಅಲ್ಲಿ ಮುಳುಗು ಹಾಕಿ ತಂದಿರುವ ಕೆಲವು ಅನರ್ಘ್ಯ ಮುತ್ತು ರತ್ನಗಳನ್ನು ಸಾಧ್ಯವಾದಷ್ಟು ಸ್ವಚ್ಛಗೊಳಿಸಿ ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದೇನೆ. ಇವುಗಳೆಲ್ಲ ಡಿ.ಶಂಕರ್ ಸಿಂಗ್ ಅವರ ಚಿತ್ರಗಳ ಹಾಡುಗಳಾಗಿದ್ದು ಹೆಚ್ಚಿನವು ಅಕ್ಕನ ಅಂಗಿ ತೊಟ್ಟ ತಂಗಿಯಂತೆ ಜನಪ್ರಿಯ ಹಿಂದಿ  ಟ್ಯೂನ್ ಹೊಂದಿವೆ.   ಅಂದಿನ ರೆಕಾರ್ಡುಗಳಲ್ಲಿ ಚಿತ್ರದ ಹೆಸರು ಮತ್ತು ಸಂಗೀತ ನಿರ್ದೇಶಕರ ಹೆಸರುಗಳು ಮಾತ್ರ ಅಂಕಿತವಾಗುತ್ತಿದ್ದು ಗಾಯಕರು ಮತ್ತು ಗೀತ ರಚನೆಕಾರ ಕುರಿತ ಮಾಹಿತಿ ಇರುತ್ತಿರಲಿಲ್ಲ. ಮಹಾತ್ಮಾ ಫಿಲಂಸ್ ಸಂಸ್ಥೆಯ ಆಗಿನ ಬಹುತೇಕ ಚಿತ್ರಗಳಿಗೆ ಹುಣಸೂರ್ ಕೃಷ್ಣಮೂರ್ತಿ ಅವರ ಸಾಹಿತ್ಯ ಮತ್ತು ಹಾಡುಗಳಿರುತ್ತಿದ್ದುದು. ಆಗ ಅವರು ಕೆ.ಎಂ. ಹುಣಸೂರ್ ಆಗಿದ್ದರು. ಪಿ.ಶ್ಯಾಮಣ್ಣ ಎಂದೇ ಗುರುತಿಸಲ್ಪಡುತ್ತಿದ್ದ ಪಲವಂಗುಡಿ ಶ್ಯಾಮ ಐಯರ್  ಅವರ ಸಂಗೀತವಿರುತ್ತಿತ್ತು.  ಟಿ. ಕಲ್ಯಾಣಂ ಎಂಬವರು arranger ರೂಪದಲ್ಲಿ ಅವರಿಗೆ ಸಹಾಯಕರಾಗಿರುತ್ತಿದ್ದರು.

ಚಂದಮಾಮದ ಪ್ರತಿ ಸಂಚಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗನ್ಮೋಹಿನಿ ಹಾಡುಗಳ ಜಾಹೀರಾತು. 


ಜಗನ್ಮೋಹಿನಿಯ 12 ಹಾಡುಗಳ ಪೈಕಿ 4 ಮಾತ್ರ ಆ ಲೈಬ್ರರಿಯಲ್ಲಿವೆ. ನನ್ನ ಮುಖ್ಯ ಗುರಿಯಾಗಿದ್ದ ಆಯೇಗಾ ಆನೇವಾಲಾ ಧಾಟಿಯ  ಎಂದೋ ಎಂದೊ, ಓ ಮುಝೆ ಕಿಸೀಸೆ ಪ್ಯಾರ್ ಹೋಗಯಾ ಧಾಟಿಯ ವಸಂತ ಮಾಸ ಓಡಿ ಬಂದಿದೆ, ಓ ದಿಲ್‌ವಾಲೋ ದಿಲ್ ಕಾ ಲಗಾನಾ ಧಾಟಿಯ ಕರೆಯುವೆ ನಿನ್ನ ಇತ್ಯಾದಿ ಇಲ್ಲ.  

ನೀ ಎನ್ನ ಜೀವನ
ಬಹುಕಾಲದಿಂದ  ಚಂದಮಾಮದ ಜಾಹೀರಾತಿನಲ್ಲಿ ಈ ಸಾಲುಗಳನ್ನು ನೋಡುತ್ತಿದ್ದರೂ ಈ ಯುಗಳ ಗೀತೆ ದಿಲ್ಲಗಿ ಚಿತ್ರದ ತೂ ಮೇರಾ ಚಾಂದ್ ಮೈ ತೆರೀ ಚಾಂದನೀ ಧಾಟಿಯನ್ನು ಹೊಂದಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ.  ಪುರುಷ ಧ್ವನಿ ಯಾರದ್ದೆಂದು ಗೊತ್ತಿಲ್ಲ.  ಸ್ತ್ರೀ ಕಂಠ ನೀಲಮ್ಮ ಕಡಾಂಬಿ ಅಥವಾ ಸರೋಜಾ ಅವರದ್ದಿರಬಹುದೆನ್ನಿಸುತ್ತದೆ.



ಮನದೊಳತಿ ಚಿಂತೆ 
ಇದೊಂದು ವಿಷಾದ ಭಾವದ ಗೀತೆಯಾಗಿದ್ದು ಹೆಚ್ಚಿನ ಭಾಗ ಆಲಾಪ ಶೈಲಿಯಲ್ಲಿದ್ದು ಬರ್‌ಸಾತ್ ಚಿತ್ರದ ಅಬ್ ಮೇರಾ ಕೌನ್ ಸಹಾರಾ ಧಾಟಿಯನ್ನಾಧರಿಸಿದೆ. 



ಎಂದೋ ಎಂದೋ
ಈ ಹಾಡಿಲ್ಲದೆ ಜಗನ್ಮೋಹಿನಿಯ ನೆನಪೇ ಅಪೂರ್ಣ.  ಮೂಲ ಹಾಡು ಲಭ್ಯವಿಲ್ಲದ್ದರಿಂದ ನಾನು ಮರುಸೃಷ್ಟಿಗೊಳಿಸಿದ ವರ್ಷನ್ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.  ಇದರಲ್ಲಿ ಕೇಳುತ್ತಿರುವುದು ನನ್ನ ಮಗಳು ಪಲ್ಲವಿಯ ಧ್ವನಿ.




ಜಗನ್ಮೋಹಿನಿ ಚಿತ್ರದ ರೀಲುಗಳು  ನಾಶವಾಗಿ ಹೋಗಿವೆಯಂತೆ.  ಹೀಗಾಗಿ ಆ ಚಿತ್ರ ಎಂದೂ ನೋಡಲು ಸಿಗಲಾರದು. ಇಲ್ಲಿರುವ  ಅದರ ಪದ್ಯಾವಳಿಯಲ್ಲಿ ಹಾಡುಗಳ ಸಾಹಿತ್ಯ ಮತ್ತು ಪಾರಿಭಾಷಿಕ ವರ್ಗದ ವಿವರಗಳು ಲಭ್ಯವಿವೆ.  ನೋಡಲು ಒಮ್ಮೆ ಕ್ಲಿಕ್ಕಿಸಿ scroll ಮಾಡಿ. 



ಜಗನ್ಮೋಹಿನಿಯ ಒಂದು ಜಾಹೀರಾತು.




ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ವಿಮರ್ಶೆ  ಆ  ಚಿತ್ರದ ಬಗ್ಗೆ   ಒಂದಷ್ಟು ಮಾಹಿತಿ ಒದಗಿಸುತ್ತದೆ.






ಅನೇಕ ಕೇಂದ್ರಗಳಲ್ಲಿ 25 ವಾರ ಪ್ರದರ್ಶನ ಕಂಡಿದ್ದ ಜಗನ್ಮೋಹಿನಿ ಚಿತ್ರ ಪ್ರೇಕ್ಷಕರ ಮೇಲೆ ಎಷ್ಟೊಂದು ಪರಿಣಾಮ ಬೀರಿತ್ತೆಂದರೆ ದಾವಣಗೆರೆಯ ಓರ್ವ ವ್ಯಕ್ತಿ  ಈ ಚಿತ್ರವನ್ನು ಪ್ರತೀ ದಿನ ನೋಡಿ ಮತಿಭ್ರಮಣೆಗೊಂಡಿದ್ದನಂತೆ.  ಈ ಚಿತ್ರ ನೋಡಲು ಹಣ ಹೊಂದಿಸುವುದಕ್ಕಾಗಿ  ಹಸು, ಎಮ್ಮೆ, ಕೋಣ, ಕುರಿ ಮಾರಿದವರೂ ಇದ್ದರಂತೆ. ಈ ಚಿತ್ರವನ್ನು ಪ್ರದರ್ಶಿಸದಂತೆ ಕೋರ್ಟಿನಿಂದ ತಡೆಯಾಜ್ಞೆಯೂ ಬಂದಿತ್ತಂತೆ.