ಈಗ ಕುಟುಕು ಜೀವ ಮಾತ್ರ ಹಿಡಿದುಕೊಂಡಿರುವ ರೇಡಿಯೊ ಸಿಲೋನ್ ತನ್ನ ಉತ್ತುಂಗದ ದಿನಗಳಲ್ಲಿ ಪ್ರಸಾರ ಮಾಡುತ್ತಿದ್ದ ಅನೇಕ ಜನಪ್ರಿಯ ಸಾಪ್ತಾಹಿಕ ಕಾರ್ಯಕ್ರಮಗಳ ಪೈಕಿ ಏಕ್ ಔರ್ ಅನೇಕ್ ಕೂಡ ಒಂದು. ಇದರಲ್ಲಿ ಒಬ್ಬ ಗಾಯಕ/ಗಾಯಕಿಯೊಡನೆ ಇತರರು ಹಾಡಿರುವ ಗೀತೆಗಳು ಪ್ರಸಾರವಾಗುತ್ತಿದ್ದವು.
ಇದೇ ಮಾದರಿಯಲ್ಲಿ ಪಿ.ಬಿ.ಶ್ರೀನಿವಾಸ್ ಅವರನ್ನು ಕೇಂದ್ರವಾಗಿರಿಸಿ ಒಂದು compilation ಮಾಡಬೇಕೆಂಬುದು ನನ್ನ ಬಹು ದಿನಗಳ ಬಯಕೆಯಾಗಿತ್ತು. ಈ ದಿಸೆಯಲ್ಲಿ ಕಾರ್ಯಪ್ರವೃತ್ತನಾದಾಗ ಅವರು ಕ್ರಿಯಾಶೀಲರಾಗಿದ್ದ 3 ದಶಕಗಳಿಗೆ ಸರಿಹೊಂದುವಂತೆ 35ಕ್ಕೂ ಹೆಚ್ಚು ಕಲಾವಿದರೊಂದಿಗೆ ಅವರು ಹಾಡಿದ 30 ವೈವಿಧ್ಯಮಯ ಹಾಡುಗಳನ್ನು ಒಟ್ಟುಗೂಡಿಸಲು ನನಗೆ ಸಾಧ್ಯವಾಯಿತು. ಈ ಸುಗ್ರಾಸ ರಸದೌತಣವನ್ನು ಒಂದೆರಡು ದಿನಗಳಲ್ಲಿ ಆಸ್ವಾದಿಸಲು ಸಾಧ್ಯವಾಗದು. ಸಾವಕಾಶವಾಗಿ ಸವಿಯಿರಿ.
01. ಪಿ. ಸುಶೀಲ - ಹಾರುತ ದೂರ ದೂರ
ಪಿ.ಬಿ.ಎಸ್ ಅವರು ಅತಿ ಹೆಚ್ಚು ಹಾಡುಗಳನ್ನು ಹಾಡಿರುವುದು ಸುಶೀಲ ಮತ್ತು ಜಾನಕಿ ಅವರೊಂದಿಗೆ. ಹೀಗಾಗಿ ಅವರ ಒಂದೊಂದು ಹಾಡನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಆದರೂ ನಾನು 1960ರ ರಾಣಿ ಹೊನ್ನಮ್ಮ ಚಿತ್ರದ ಈ ಹಾಡು ಆಯ್ಕೆ ಮಾಡಿದ್ದೇನೆ. ಕನ್ನಡದಲ್ಲಿ ಇದು ಅವರಿಬ್ಬರ ಪ್ರಥಮ ಯುಗಳಗೀತೆ. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಶಂಕರ್ ಜೈಕಿಶನ್ ಶೈಲಿಯಲ್ಲಿ ಅತಿ ಶ್ರೀಮಂತ ಆರ್ಕೆಸ್ಟ್ರೇಶನ್ ಮಾಡಿದ ಹಾಡಿದು. ಗ್ರೂಪ್ ವಯಲಿನ್ಸ್, ಚೇಲೊ, ಪಿಯಾನೊ, ಗಿಟಾರ್, ತಬ್ಲಾ ತರಂಗ್ ಇತ್ಯಾದಿ ಹತ್ತಾರು ವಾದ್ಯಗಳ ಬಳಕೆ ಇದರಲ್ಲಿದೆ. ಹಾಡು ಆರಂಭವಾಗುತ್ತಿದ್ದಂತೆ ನಾವೂ ಚಂದಿರ ತಾರಾ ಲೋಕದತ್ತ ಮೇಲೇರತೊಡಗುತ್ತೇವೆ. ಅತ್ಯಾಕರ್ಷಕ ಪದಪುಂಜಗಳನ್ನು ಬಳಸುವುದರಲ್ಲಿ ಕು.ರ.ಸೀ ಅಗ್ರಗಣ್ಯರು. ಬಿಂಕದ ಸಿಂಗಾರಿಯ ಮಧುಪಾನಪಾತ್ರೆಯಂತೆ ಇಲ್ಲಿ ಬಳಸಲಾದ ಪೂರ್ಣೇಂದುಹಾಸಭಾಸ ಪ್ರಯೋಗ ನನಗೆ ಬಲು ಇಷ್ಟ. ಪಿ.ಬಿ.ಎಸ್ ಅವರ ಪ್ರವೇಶ ಚರಣದಲ್ಲಿ ಆಗುವುದು ಈ ಹಾಡಿನ ಒಂದು ವಿಶೇಷ. ಚರಣಗಳ ಕೊನೆಯಲ್ಲಿ ಬರುವ ಒಂದು ಸಣ್ಣ pause ಹಾಡಿನ ಒಟ್ಟಂದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಜಯಭಾಸ್ಕರ್ ಅವರು ಮುಂದೆ ಯಾವ ಹಾಡುಗಳಲ್ಲೂ ಇಷ್ಟು ವೈಭವೋಪೇತ ಆರ್ಕೇಷ್ಟ್ರಾ ಬಳಸಲಿಲ್ಲ. 70ರ ದಶಕದಲ್ಲಿ ರಾಜನ್ ನಾಗೇಂದ್ರ ಮತ್ತಿತರರು ಹೆಚ್ಚು ಹೆಚ್ಚು ವಾದ್ಯೋಪಕರಣಗಳನ್ನು ಬಳಸಿ ದೊಡ್ಡ ಆರ್ಕೆಷ್ಟ್ರಾದತ್ತ ವಾಲಿದರೂ ವಿಜಯಭಾಸ್ಕರ್ ಸರಳ ಸಂಯೋಜನೆಗಳಲ್ಲೇ ಮಾಧುರ್ಯ ತುಂಬುತ್ತಿದ್ದರು.
೦2. ಎಸ್.ಜಾನಕಿ - ಬಾರಾ ಚಂದ್ರಮಾ
ತನ್ನ ಮೊದಲ ಚಿತ್ರ ಭಕ್ತ ಕನಕದಾಸದ ಮೂಲಕ ಆರ್ಕೆಸ್ಟ್ರೇಶನ್ ರಾಜನಾಗಿ ಚಿತ್ರರಂಗ ಪ್ರವೇಶಿಸಿದ ಎಂ. ವೆಂಕಟರಾಜು ಅವರ ಎರಡನೆ ಚಿತ್ರ ಸ್ವರ್ಣಗೌರಿಯ ಹಾಡಿದು. ಸೀಮಿತ ಸಂಖ್ಯೆಯ ವಾದ್ಯಗಳನ್ನು ಬಳಸಿ ಅತ್ಯುತ್ತಮ ಪರಿಣಾಮ ಉಂಟುಮಾಡುವುದು ಇವರ ಹೆಚ್ಚುಗಾರಿಕೆ. ಈ ಹಾಡಿನ ಆರಂಭದಲ್ಲಿ ವೀಣೆ ಮತ್ತು ಕೊಳಲುಗಳ ಒಂದು ಕಿರು ಜುಗಲ್ ಬಂದಿ ಇದೆ. ನಂತರ ಕೆಲ ಹಿಂದಿ ಹಾಡುಗಳ ಆರಂಭದಲ್ಲಿರುತ್ತಿದ್ದಂತಹ ಶಾಯರಿಯನ್ನು ಹೋಲುವ ನಾಲ್ಕು ಸಾಲುಗಳನ್ನು ಜಾನಕಿ ಹಾಡುತ್ತಾರೆ. ಸಿನಿಮಾದ ಪದ್ಯಾವಳಿಗಳಲ್ಲಿ ಇದನ್ನು ‘ಸಾಕಿ’ ಎಂದು ಉಲ್ಲೇಖಿಸಲಾಗುತ್ತಿತ್ತು. ಆ ಮೇಲೆ ಮನ ಸೆಳೆಯುವ preludeನೊಂದಿಗೆ ಮುಖ್ಯ ಹಾಡು ಶುರುವಾಗುತ್ತದೆ. ಇತರ ವಾದ್ಯಗಳ ಜೊತೆಗೆ ಅಕಾರ್ಡಿಯನ್, Vibraphoneಗಳನ್ನು ಬಳಸಲಾಗಿದೆ. ಹಿಂದಿಯ ಚಿತ್ರಗುಪ್ತ ಅವರ ಶೈಲಿಯಲ್ಲಿ interludeಗಳಿಗೆ ತಬ್ಲಾ ಢೋಲಕ್ ಬದಲಿಗೆ ಗಿಟಾರ್ ರಿದಂ ಇದೆ. ಹಿನ್ನೆಲೆಯಲ್ಲಿ Bass Guitar ಬಳಕೆ ಮುದ ನೀಡುತ್ತದೆ. ಎಸ್.ಕೆ.ಕರೀಂ ಖಾನ್ ಅವರ ಪ್ರಾಸಬದ್ಧ ಸಾಹಿತ್ಯವಿದೆ.
03. ಎಸ್.ಪಿ. ಬಾಲಸುಬ್ರಹ್ಮಣ್ಯಂ - ಹಗಲೇನು ಇರುಳೇನು
ಇದು ರಾಜ್ ಕುಮಾರ್ ಅವರ 100ನೇ ಚಿತ್ರವೆಂದು ಪತ್ರಿಕೆಗಳಲ್ಲೆಲ್ಲ ಹೆಚ್ಚಿನ ಪ್ರಚಾರ ಪಡೆದ 1968ರ ಭಾಗ್ಯದ ಬಾಗಿಲು ಚಿತ್ರದ ಗೀತೆ. ಉದಯಶಂಕರ್ ಸಾಹಿತ್ಯಕ್ಕೆ ವಿಜಯಭಾಸ್ಕರ್ ಸಂಗೀತವಿದೆ. 1967ರ ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟ ಎಸ್.ಪಿ.ಬಿ ಅವರು ಪಿ.ಬಿ.ಎಸ್ ಅವರೊಂದಿಗೆ ಹಾಡಿದ ಮೊದಲ ಯುಗಳ ಗೀತೆಯಿದು. ದೂರವಾಣಿ ಇಲಾಖೆಯಲ್ಲಿ ಅನೇಕ ವರ್ಷ round the clock ಕಾರ್ಯ ನಿರ್ವಹಿಸಿದ ನಾನು ಕೂಡ ‘ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು’ ಅನ್ನುವ ತತ್ವ ಅಳವಡಿಸಿಕೊಂಡಿದ್ದವನೇ!
04. ರಾಜಕುಮಾರ್ - ಭಕ್ತ ಪ್ರಹ್ಲಾದ ಹರಿಕತೆ
ಯಾರು ತಿಳಿಯರು ನಿನ್ನ, ನಾ ಬೆಂಕಿಯಂತೆ, ಅಮ್ಮ ನೀನು ನಮಗಾಗಿ, ನಿನ್ನೀ ನಗುವೇ ಇವುಗಳ ಪೈಕಿ ಯಾವುದಾದರೊಂದು ಇರಬಹುದೆಂದುಕೊಂಡರೆ ಇದ್ಯಾವುದಪ್ಪಾ ಹರಿಕತೆ ಅಂದಿರಾ. ಹೌದು. ಇದು ಕ್ರಾಂತಿವೀರ ಚಿತ್ರದಲ್ಲಿ ರಾಜ್‌ಕುಮಾರ್ ನಡೆಸುವ ಭಕ್ತ ಪ್ರಹ್ಲಾದ ಹರಿಕತೆ. ಅದರೊಳಗಿನ ಗಾಯನ ಭಾಗವನ್ನು ನಿರ್ವಹಿಸಿರುವುದು ಪಿ.ಬಿ.ಎಸ್ . ಇಲ್ಲಿ ನಾನು ರೇಡಿಯೊ ಸಿಲೋನಿನ ಪದ್ಧತಿ ಅನುಸರಿಸಿದ್ದೇನೆ. ಅಲ್ಲಿ ಏಕ್ ಔರ್ ಅನೇಕ್ ಕಾರ್ಯಕ್ರಮಕ್ಕೆ ಹಾಡುಗಳಲ್ಲಿ ಖಯಾಲೊ ಮೆಂ, ಬದ್ಕಮ್ಮಾ ಓ ಬದ್ಕಮ್ಮಾ, ಚೂನಿಯಾ ಕಿಧರ್ ಹೈ ರಿ ತೂ ಎಂದು ಒಂದೆರಡು ಸಾಲುಗಳನ್ನು ಹೇಳುವ ಮೆಹಮೂದ್ ಕೂಡ ಗಾಯಕರೆಂದು ಪರಿಗಣಿಸಲ್ಪಡುತ್ತಿದ್ದರು. ಹೀಗಾಗಿ ಅವರ ಬದ್ಕಮ್ಮ, ಹಮ್ ಕಾಲೆ ಹೈಂ ತೊ ಕ್ಯಾ ಹುವಾ, ಯಕ್ ಚತುರ ನಾರ್ ಮುಂತಾದ ಹಾಡುಗಳು ಕಾರ್ಯಕ್ರಮದಲ್ಲಿ ಸೇರ್ಪಡೆಯಾಗುತ್ತಿದ್ದವು. ಆದರೆ ಇಲ್ಲಿ ರಾಜ್‌ಕುಮಾರ್ ಅವರು ಹರಿಕಥೆಯ ಗದ್ಯ ಮಾತ್ರವಲ್ಲದೆ ಕೊನೆಯಲ್ಲಿ ಒಂದು ಪದ್ಯವನ್ನೂ ಸುಂದರವಾಗಿ ಹಾಡಿದ್ದಾರೆ. ಹಾಗೆ ನೋಡಿದರೆ ಗಾಯನಭಾಗ ಸಮೇತ ಇಡೀ ಹರಿಕಥೆಯನ್ನು ಅವರೇ ನಿರ್ವಹಿಸಬಲ್ಲವರಾಗಿದ್ದರು. ಆದರೆ ಆಗ ಬಹಳ ಆಳಕ್ಕೆ ಬೇರು ಬಿಟ್ಟಿದ್ದ ಶರೀರ ಶಾರೀರ ಸಂಬಂಧವನ್ನು ಬೇರ್ಪಡಿಸುವ ರಿಸ್ಕ್ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ ವೃತ್ತಿಪರರ ಹಾಡಿಗೆ lip sync ಮಾಡುವುದು ಆಗ stardomನ ಭಾಗವೂ ಆಗಿತ್ತು. ಈ ಬಗ್ಗೆ ಕರುಣೆಯೇ ಕುಟುಂಬದ ಕಣ್ಣು ಚಿತ್ರದಲ್ಲಿ ಬಾಲಣ್ಣನ ಒಂದು ಡಯಲಾಗ್ ಕೂಡ ಇದೆ. ಅದೇನೇ ಇರಲಿ. ಈಗ ಹರಿಕಥಾಶ್ರವಣ ಮಾಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಿ.
05. ವಾಣಿ ಜಯರಾಮ್ - ಎಂದೆಂದೂ ನಿನ್ನನು ಮರೆತು.
ಎಲ್ಲೆಡೆ ಕೇಳಿಬರುವ ಜನಪ್ರಿಯ ಹಾಡುಗಳಿಗೆ ಹೊರತಾದ ಆಯ್ಕೆ ನನ್ನ ಪ್ರಾಶಸ್ತ್ಯವಾಗಿರುತ್ತದಾದರೂ ಈ ಹಾಡನ್ನು ಸೇರಿಸದಿರಲು ನನ್ನ ಮನಸ್ಸು ಒಪ್ಪಲಿಲ್ಲ. ಅದುವರೆಗೆ ಸರಳ ಸಂಗೀತ ಸಂಯೋಜಿಸುತ್ತಿದ್ದ ರಾಜನ್ ನಾಗೇಂದ್ರ ಅವರು ದೀರ್ಘ interludeಗಳ ಶ್ರೀಮಂತ ಆರ್ಕೆಷ್ಟ್ರಾ ಬಳಸಲು ಆರಂಭಿಸಿದ ದಿನಗಳ ಹಾಡಿದು. ಬೋಲೆರೆ ಪಪೀಹರಾ ಎಂದು ಹಿಂದಿಯಲ್ಲಿ ಹಾಡಿ ನಿಗೂಢ ಕಾರಣದಿಂದ ದಕ್ಷಿಣಕ್ಕೆ ಹಾರಿಬಂದ ಕೋಗಿಲೆ ವಾಣಿ ಜಯರಾಮ್ ಅವರು ಪಿ.ಬಿ.ಎಸ್ ಜೊತೆ ಹಾಡಿದ ಮೊದಲ ಯುಗಳ ಗೀತೆ ಇದು. ಇದಕ್ಕೆ ಸಂಬಂಧಿಸಿದಂತೆ ನನ್ನ ಇನ್ನೊಂದು ನೆನಪೂ ಇದೆ. ಇದನ್ನು ನಾನು ಮೊದಲು ಕೇಳಿದ್ದು ರೇಡಿಯೋ ಸಿಲೋನಿನ ಮಧ್ಯಾಹ್ನದ ಕನ್ನಡ ಹಾಡುಗಳ ಕಾರ್ಯಕ್ರಮದಲ್ಲಿ. ಆಗಿನ್ನೂ ತುಲಸಿ ಸಮೀರ್, ಮೀನಾಕ್ಷಿ ಪೊಣ್ಣುದೊರೈ ಇರಲಿಲ್ಲ. ಹಾಗಾಗಿ announcement ತಮಿಳಲ್ಲೇ ಇರುತ್ತಿತ್ತು. ಅಂದಿನ announcer ‘ಅಡತ್ತದಾಕ ಎರಡು ಕನಸು ಅಂದ ಪಡತ್ತಿಲ್ ಎಸ್.ಪಿ. ಬಾಲಸುಬ್ರಹ್ಮಣ್ಯಂ - ವಾಣಿ ಜಯರಾಮ್ ಪಾಡಿಯದ್’ ಎಂದು ಹೇಳಿ ಈ ಹಾಡು ಕೇಳಿಸಿದ್ದ. ಹಾಡು ಕೇಳಿದ ಮೇಲಷ್ಟೇ ಅದು ಪಿ.ಬಿ.ಎಸ್ ಎಂದು ಗೊತ್ತಾದದ್ದು. 90ರ ದಶಕದ ಜಾನ್ ಸೆ ಪ್ಯಾರಾ ಎಂಬ ಚಿತ್ರದಲ್ಲಿ ಬಿನ್ ತೇರೆ ಕುಛ್ ಭಿ ನಹೀಂ ಹೈ ಎಂಬ ಹಾಡಿಗೆ ಆನಂದ್ ಮಿಲಿಂದ್ ಈ ಧಾಟಿಯನ್ನು ಬಳಸಿದ್ದರು. ಚರಣಗಳ ಕೊನೆಯಲ್ಲಿ ಬರುವ ಗಿಟಾರಿನ ‘ಚಕ ಚಕ ಛಂ’ ನನಗೆ ಈ ಹಾಡಿನ ಅತ್ಯಂತ ಇಷ್ಟವಾದ ಭಾಗ!
06. ಜೇಸುದಾಸ್ - ಕಾಣದ ದೇವರು ಊರಿಗೆ ನೂರು.
ಇಲ್ಲಿ ಇರುವುದು ಇದೊಂದೇ ಆಯ್ಕೆ. ಸುವರ್ಣ ಭೂಮಿ ಚಿತ್ರದ ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಾಯಿಯ ಹಾಡು ಒಂದಲ್ಲ ಎರಡು ನೋಡಿ.
07. ಜಮುನಾರಾಣಿ - ನಗೆಯೆಂಬ ಅಂದಗಾತಿ
ಹಿಂದಿಯಲ್ಲಿ ದಿಲೀಪ್ ಕುಮಾರ್ ಮತ್ತು ಮೀನಾ ಕುಮಾರಿ ನಟಿಸಿದ್ದ ಆಜಾದ್ ಚಿತ್ರವು ಕನ್ನಡದಲ್ಲಿ ಕಲ್ಯಾಣ್ ಕುಮಾರ್ ಮತ್ತು ಮೈನಾವತಿ ನಟನೆಯೊಂದಿಗೆ ಬೆಟ್ಟದ ಕಳ್ಳ ಎಂಬ ಹೆಸರಲ್ಲಿ ತಯಾರಾಗಿತ್ತು. ಹಿಂದಿಯ ನ ಬೋಲೆ ನ ಬೋಲೆ ಹಾಡು ವೈಯಾರಿ ವೈಯಾರಿ ವೈಯಾರಿಯೇ ಹಾಗೂ ಕಿತನಾ ಹಸೀನ್ ಹೈ ಮೌಸಮ್ ಹಾಡು ನಗೆಯೆಂಬ ಅಂದಗಾತಿ ಮತ್ತು ದೇಖೊಜಿ ಬಹಾರ್ ಆಯಿ ಇದ್ದದ್ದು ಬಂದಿದೆ ವಸಂತ ಮಾಸ ಆಗಿ ಮೂಲ ಧಾಟಿಯಲ್ಲೇ ಕನ್ನಡೀಕರಣಗೊಂಡಿದ್ದವು. ಉಳಿದ ಹಾಡುಗಳಿಗೆ ಸುಬ್ಬಯ್ಯ ನಾಯ್ಡು ಸ್ವತಂತ್ರ ರಾಗಸಂಯೋಜನೆ ಮಾಡಿದ್ದರು. ಪಿ.ಬಿ.ಎಸ್ ಅವರ ಕಂಠಮಾಧುರ್ಯ ಹಾಗೂ ಯಥಾವತ್ತಾಗಿ ಮರು ಸೃಷ್ಟಿಸಲಾದ ಸಿ.ರಾಮಚಂದ್ರ ಅವರ ಮೂಲ orchestration ಇವುಗಳಿಂದಾಗಿ ಈ ಹಾಡಿಗೆ ಬೆಲೆ. ಸಾಹಿತ್ಯದ ಸಾಲುಗಳು ಅರ್ಥಹೀನ ಅನಿಸುವಂತಿವೆ. ‘ಕಿತನಾ ಹಸೀಂ ಹೈ ಮೌಸಮ್ ಕಿತ್‌ನಾ ಹಸೀಂ ಸಫರ್ ಹೈ’ ಎನ್ನುವಲ್ಲಿರುವ ಹಸೀಂ ಪದವನ್ನು ಸುಂದರ ಎಂಬುದರ ಬದಲಾಗಿ ನಗೆ ಎಂದು ತಿಳಿದುಕೊಂಡು ‘ನಗೆಯೆಂಬ ಅಂದಗಾತಿ’ ಎಂದು ಭಾಷಾಂತರಿಸಲಾಗಿದೆ! ‘ಈ ನೋಟವೇನು ಅಂದ ಈ ಪಯಣವೇನು ಚಂದ’ ಎಂದಾದರೂ ಹೇಳಬಹುದಾಗಿತ್ತು.
08. ಜಿ.ಕೆ. ವೆಂಕಟೇಶ್ - ನಗುವೇ ನಾಕ
‘ನಾ ಪಾಪವದೇನಾ ಮಾಡಿದೆನೋ’ದಿಂದ ಎಮ್ಮೆ ಹಾಡಿನವರೆಗೂ ಪಿ.ಬಿ.ಎಸ್ ಅವರ ಅಸಂಖ್ಯ ಮಧುರ ಗೀತೆಗಳನ್ನು ಕೊಟ್ಟವರು ಜಿ.ಕೆ. ವೆಂಕಟೇಶ್. ಆದರೆ ಭೂತಯ್ಯನ ಮಗ ಅಯ್ಯು ಚಿತ್ರದ ‘ಮಾರಿಯೆ ಗತಿಯೆಂದು’ ಬಿಟ್ಟರೆ ಅವರಿಬ್ಬರು ಸೇರಿ ಹಾಡಿರುವ ಮಲ್ಲಿ ಮದುವೆ ಚಿತ್ರದ ಇದೊಂದೇ ಹಾಡು ನನಗೆ ನೆನಪಾಗುತ್ತಿರುವುದು. ‘ಮಲ್ಲಿ ಮದುವೆ’ಯ ಇತರ ಹಾಡುಗಳು ಆಗಾಗ ರೇಡಿಯೊದಲ್ಲಿ ಬರುತ್ತಿದ್ದರೂ ನಾನು ಇದನ್ನು ಕೇಳಿದ್ದು ಅಂತರ್ಜಾಲದಲ್ಲಿ ಮಾತ್ರ. ಬಹುಶ: ಮಧುಪಾನದ ನಶೆಯ ಹಾಡಾದ್ದರಿಂದ ಆಕಾಶವಾಣಿ ಇದನ್ನು ಬಹಿಷ್ಕರಿಸಿತ್ತೋ ಏನೋ. ಅಥವಾ ಇದು ಗ್ರಾಮಫೋನ್ ರೆಕಾರ್ಡ್ ರೂಪದಲ್ಲಿ ಬಿಡುಗಡೆಯೇ ಆಗಿರಲಿಲ್ಲವೋ ಏನೋ. ಇದರಲ್ಲಿ ಜಿ.ಕೆ.ವಿ ಅವರ ಗುರು ವಿಶ್ವನಾಥನ್ ರಾಮಮೂರ್ತಿ ಅವರ ಪಾಡಾದ ಪಾಟ್ಟೆಲ್ಲಾಂ ಪಾಡವಂದಾಳ್ ಹಾಡಿನ ಛಾಯೆ ಗೋಚರಿಸುತ್ತದೆ.09. ಎಲ್.ಆರ್. ಈಶ್ವರಿ - ಡೂ ಡೂ ಡೂ ಬಸವಣ್ಣ
ಹಣ್ಣೆಲೆ ಚಿಗುರಿದಾಗ ಚಿತ್ರಕ್ಕಾಗಿ ಇವರಿಬ್ಬರು ಹಾಡಿದ ‘ಇದೇ ಹುಡುಗಿ’ ಹಾಡು ಗ್ರಾಮಫೋನ್ ಡಿಸ್ಕಿನಲ್ಲಿ ‘ಹೂವು ಚೆಲುವೆಲ್ಲ’ ಹಾಡಿನ ಹಿಂಬದಿಯಲ್ಲಿದ್ದು ಹೆಚ್ಚು ಕೇಳಿಬರುತ್ತಿತ್ತು. ಸಂತ ತುಕಾರಾಮ್ ಚಿತ್ರದ ಹೇ ಪಂಢರಯ್ಯ, ಸತಿ ಅನಸೂಯದ ಆದಿ ದೇವ, ಮೇಯರ್ ಮುತ್ತಣ್ಣದ ಅಯ್ಯಯ್ಯಯ್ಯೋ ಹಳ್ಳಿ ಮುಕ್ಕ , ಲಗ್ನ ಪತ್ರಿಕೆಯ ಥಳುಕು ಮೋರೆ ಹೆಣ್ಣಿಗೆ ಕೂಡ ಜನಪ್ರಿಯ ಹಾಡುಗಳೇ. ನಾನಿಲ್ಲಿ ಆಯ್ದುಕೊಂಡದ್ದು ಬಂಗಾರದ ಹೂವು ಚಿತ್ರದ ಈ ಹಾಡು.
10. ಎ.ಎಲ್. ರಾಘವನ್ - ಶೀನು ಸುಬ್ಬು
ಇದು ಲಗ್ನ ಪತ್ರಿಕೆ ಚಿತ್ರದ `ಬಲು ಅಪರೂಪ ನಮ್ ಜೋಡಿ' ಹಾಡಲ್ಲ. ಭಲೆ ಅದೃಷ್ಟವೋ ಅದೃಷ್ಟ ಚಿತ್ರದಲ್ಲಿದ್ದ ಅದರ sequel ಅರ್ಥಾತ್ ಮುಂದುವರಿದ ಭಾಗವಾದ ‘ನಾವು ಹಾಡಿದರೆ ಸಂಗೀತ ಇನ್ಯಾರೂ ಹಾಡಿದರೂ someಗೀತ’. ಜಿಗಿ ಜಿಗಿಯುತ ನಲಿ ಹಾಡಿದ ಜೆ.ವಿ.ರಾಘವುಲು ಅವರೇ ಶೀನು ಸುಬ್ಬು ಹಾಡುಗಳನ್ನು ಪಿ.ಬಿ.ಎಸ್ ಅವರೊಂದಿಗೆ ಹಾಡಿದ್ದು ಎಂದು ನಾನು ಬಹಳ ಕಾಲ ಅಂದುಕೊಂಡಿದ್ದೆ. ಆ ಮೇಲೆ ಸೂಕ್ಷ್ಮವಾಗಿ ಗಮನಿಸಿದಾಗಷ್ಟೇ ಗೊತ್ತಾಯಿತು ಅವರು ‘ವುಲು’ ಮತ್ತು ಇವರು ‘ವನ್’ ಎಂದು! ತಮಿಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದ ಎ.ಎಲ್. ರಾಘವನ್ ಕನ್ನಡದಲ್ಲಿ ಹಾಡಿದ್ದು ಬೆರಳೆಣಿಕೆಯಷ್ಟು ಮಾತ್ರ. ಅನ್ನಪೂರ್ಣ ಚಿತ್ರದಲ್ಲಿ ಅವರು ರಾಜ್‌ಕುಮಾರ್ ಅವರಿಗೆ ಹಾಡಿದ್ದು ಒಂದು ದಾಖಲೆ. ತೆರೆಯ ಮೇಲೆ ಚಿ. ಉದಯಶಂಕರ್ ಮತ್ತು ಶಿವರಾಂ ಅವರು ಶೀನು ಮತ್ತು ಸುಬ್ಬುವಾಗಿ ಅಭಿನಯಿಸಿದ ಈ ‘ಬಲು ಅಪರೂಪ ನಮ್ ಜೋಡಿ’ ಹಾಡು ಎಷ್ಟು ಜನಪ್ರಿಯವಾಯಿತೆಂದರೆ ಈ sequel ಮಾತ್ರವಲ್ಲದೆ ಆ ಮೇಲೆ ಇದೇ ಹೆಸರಿನ ಒಂದು ಸಿನಿಮಾ ಕೂಡ ತಯಾರಾಯಿತು.
11. ಜೆ.ವಿ ರಾಘವುಲು, ರುದ್ರಪ್ಪ - ದೇವರು ದೇವರು ದೇವರೆಂಬುವರು
ಈ ರಾಘವುಲು ಅವರೇ ನನ್ನಲ್ಲಿ ಗೊಂದಲ ಉಂಟುಮಾಡಿದ್ದವರು. ಕಿತ್ತೂರು ಚೆನ್ನಮ್ಮ ಚಿತ್ರದ ಈ ಸವಾಲ್ ಜವಾಬಿನ ಹಾಡಲ್ಲಿ ಜಾನಕಿ ಕೂಡ ಇದ್ದಾರೆ. ಈ ಹಾಡಲ್ಲಿರುವ ನರಸಿಂಹರಾಜು ಮತ್ತು ಬಾಲಕೃಷ್ಣ ಅವರ ಸಂಭಾಷಣೆ ನಮ್ಮ ಮನೆಯ ರೇಡಿಯೋವನ್ನು ನಾನು ಆ ಚಿತ್ರ ನೋಡಿದ್ದ ಕಾರ್ಕಳದ ಜೈಹಿಂದ್ ಟಾಕೀಸ್ ಆಗಿ ಪರಿವರ್ತಿಸುತ್ತಿತ್ತು. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ರೇಡಿಯೋವನ್ನು ಸಿನಿಮಾ ಟಾಕೀಸ್ ಮಾಡುತ್ತಿದ್ದ ಹಾಡು ಲೇಖನ ನೋಡಬಹುದು. ಜೆ.ವಿ. ರಾಘವುಲು ಅವರು ತೆಲುಗಿನ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಕನ್ನಡದಲ್ಲೂ ದ್ವಾರಕೀಶ್ ಅವರ ಪೋಲೀಸ್ ಪಾಪಣ್ಣ ಚಿತ್ರಕ್ಕೆ ಅವರ ಸಂಗೀತವಿತ್ತು.
12. ಬಿ.ಕೆ.ಸುಮಿತ್ರಾ - ಓರೆ ನೋಟದ ವೈಯಾರಿ
ಈ ಕಾಂಬಿನೇಶನ್ ಅಂದೊಡನೆ ಎಲ್ಲರ ಮನಸ್ಸಲ್ಲಿ ಮೂಡುವ ಹಾಡು ಮಧುರ ಮಧುರವೀ ಮಂಜುಳಗಾನ. ಆದರೆ ಅದನ್ನು ಚಂದನ ವಾಹಿನಿಯಲ್ಲಿ ಅಜೀರ್ಣವಾಗುವಷ್ಟು ನೋಡಿ/ಕೇಳಿ ಆಗಿದೆ. ಹೀಗಾಗಿ ಒಂದೇ ಬಳ್ಳಿಯ ಹೂಗಳು ಚಿತ್ರದ ಈ ಹಾಡನ್ನು ಆಯ್ಕೆ ಮಾಡಿದ್ದೇನೆ. ಇದು ಹಿಂದಿಯ ಛೋಟಿ ಬಹನ್ ಚಿತ್ರದ ಕನ್ನಡ ಅವತರಣಿಕೆ. ಶಂಕರ್ ಜೈಕಿಶನ್ ಅವರ ಮಹಾನ್ ಭಕ್ತರಾಗಿದ್ದ ಸತ್ಯಂ ಆ ಚಿತ್ರದ ಮೂಲ ಧಾಟಿಗಳನ್ನು ಬಳಸಿಕೊಳ್ಳಬಹುದಾಗಿತ್ತು. ಆದರೆ ಹಾಗೆ ಮಾಡದೆ ಇತರ ಹಾಡುಗಳ ಅಲ್ಪ ಸ್ವಲ್ಪ ಛಾಯೆಯುಳ್ಳ ಬೇರೆ ಧಾಟಿಗಳನ್ನು ಸಂಯೋಜಿಸಿದರು. ದೂರದಿಂದಲಿ ಬಂದವಳೆ ಹಾಡಲ್ಲಿ ಶಂ.ಜೈ. ಅವರ ‘ಆಯೀ ಮಿಲನ್ ಕೀ ಬೇಲಾ’ದ ಓ ಸನಮ್ ತೆರೆ ಹೋಗಯೆ ಹಮ್ ಛಾಯೆ ಇದೆ! ರಫಿಯ ದೊಡ್ಡ ಅಭಿಮಾನಿಯಾಗಿದ್ದ ಸತ್ಯಂ ಈ ಚಿತ್ರದಲ್ಲಿ ಅವರಿಂದ ಒಂದು ಹಾಡು ಹಾಡಿಸಿ ದಾಖಲೆ ನಿರ್ಮಿಸಿದರು. ಮುಂದಿನ ದಿನಗಳಲ್ಲಿ ತನ್ನ ರಚನೆಗಳನ್ನು ಎಸ್.ಪಿ.ಬಿ ಅವರಿಂದ ಹಾಡಿಸುವಾಗ ರಫಿ ಶೈಲಿಯಲ್ಲಿ ಹಾಡುವಂತೆ ಸಲಹೆ ನೀಡುತ್ತಿದ್ದರಂತೆ. ಈ ಓರೆ ನೋಟದ ವೈಯಾರಿ ಹಾಡಿನ tune ಮತ್ತು interludeಗಳಲ್ಲೂ ಕೆಲ ಹಾಡುಗಳ ಅಸ್ಪಷ್ಟ ಪ್ರಭಾವ ಇದೆ. ಶ್ರುತಿ ಭೇದದಂಥ ಕಸರತ್ತೂ ಇದೆ.
13. ಎಚ್. ಕೃಷ್ಣಮೂರ್ತಿ - ಅಮ್ಮಾ ಎಂದರೆ
ಕಳ್ಳ ಕುಳ್ಳ ಚಿತ್ರದ ಈ ಹಾಡನ್ನು ಪಿ.ಬಿ.ಎಸ್ ಅವರೊಡನೆ ಹಾಡಿದ ಕೃಷ್ಣಮೂರ್ತಿ ಒಬ್ಬ ಅಜ್ಞಾತ ಗಾಯಕ. ಬೇರೆ ಯಾವ ಹಾಡಲ್ಲೂ ನಾನು ಅವರ ಧ್ವನಿ ಕೇಳಿಲ್ಲ. ಆದರೂ legend ಪಿ.ಬಿ.ಎಸ್ ಅವರಿಗೆ ಸರಿ ಸಾಟಿಯಾಗಿ ಹಾಡಿದ ಅವರಿಗೆ ಮೆಚ್ಚುಗೆ ಸಲ್ಲಲೇ ಬೇಕು. ಪಿ.ಬಿ.ಎಸ್ ಅವರ ಕೊಂಚ ಅನುನಾಸಿಕ ಧ್ವನಿ ಹಾಡಿಗೆ ವಿಶೇಷ ಮೆರುಗು ನೀಡಿದೆ. ಉದಯ ಶಂಕರ್ ಅವರ ಸಾಹಿತ್ಯ ಎಂದಿನಂತೆ ಸರಳ ಸುಂದರ. ಅತ್ಯುತ್ತಮ ಆರ್ಕೆಸ್ಟ್ರೇಶನ್ ಉಳ್ಳ ಈ ಹಾಡಿನಲ್ಲಿ ರಾಜನ್ ನಾಗೇಂದ್ರ ಅವರು ಅಮ್ಮನನ್ನು ಕಾಣಲು ತೆರಳುತ್ತಿರುವ ಪುತ್ರರ ಉಲ್ಲಾಸವನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಣ್ಣು ಮುಚ್ಚಿ ಆಲಿಸಿದರೂ ಚಲಿಸುತ್ತಿರುವ ವಾಹನದ ಕಲ್ಪನೆ ಮನದಲ್ಲಿ ಮೂಡುತ್ತದೆ. ಕೊನೆಯ ಭಾಗದಲ್ಲಿ, ಕನ್ನಡದಲ್ಲಿ ಅಪರೂಪವಾದ ಶ್ರುತಿಯನ್ನು ಒಂದು ಪಟ್ಟಿ ಎತ್ತರಿಸಿ ಹಾಡುವ scale change ತಂತ್ರ ಬಳಸಲಾಗಿದೆ. ಸೀತಾ ಔರ್ ಗೀತಾ ಚಿತ್ರದ ಕೊಯಿ ಲಡಕಿ ಮುಝೆ ಕಲ್ ರಾತ್ ಹಾಡಿನಲ್ಲೂ ಈ ತಂತ್ರ ಬಳಕೆಯಾಗಿದೆ.
14. ಪಿ. ಲೀಲ - ಮಿಕ್ಸ್ಚರ್ ಹಾಡು
ಇವರಿಬ್ಬರ ಹಾಡುಗಳು ಬಲು ಕಮ್ಮಿ. ವಿಜಯ ನಗರದ ವೀರ ಪುತ್ರದ ಎನ್ಮನ ಮಂದಿರದೆ ಹಾಡಿನ ಉಲ್ಲೇಖ ಮನದಲ್ಲಿ ಉಳಿದಂಥ... ಲೇಖನದಲ್ಲಿ ಈಗಾಗಲೇ ಆಗಿದೆ. ಇಲ್ಲಿ ಆಯ್ದುಕೊಂಡದ್ದು ಗಂಡೊಂದು ಹೆಣ್ಣಾರು ಚಿತ್ರದ ಒಂದು ಹಾಡು. ಇದು ಬೇರೆ ಚಿತ್ರಗಳ ಹಾಡಿನ ತುಣುಕುಗಳನ್ನೊಳಗೊಂಡಿರುವಂಥ ಫ್ರುಟ್ ಸಲಾದ್. ಇದೇ ಚಿತ್ರದಲ್ಲಿ ಇವರಿಬ್ಬರು ಹಾಡಿದ ಹರಿಕಥಾ ಶೈಲಿಯ ಹಾಡೂ ಒಂದಿದೆ.
15. ಬೆಂಗಳೂರು ಲತಾ - ನಗುತಿದೆ ಅನುರಾಗ
ನಿಮ್ಮಲ್ಲಿ ಬಹುಪಾಲು ಮಂದಿ ಈ ಹಾಡನ್ನು ಮೊದಲ ಬಾರಿ ಕೇಳುತ್ತಿದ್ದೀರಿ. ಇದು 60ರ ದಶಕದಲ್ಲಿ ಬಂದ ಬೇವು ಬೆಲ್ಲ ಎಂಬ ಚಿತ್ರದ್ದು. ಸಂಗೀತ ನಿರ್ದೇಶಕರು ಹೆಸರೇ ಕೇಳಿ ಗೊತ್ತಿಲ್ಲದ ದಿವಾಕರ್ ಎಂಬವರು. ರಚನೆ ಎಸ್. ಕೆ. ಕರೀಂ ಖಾನ್ ಅವರದ್ದು. ಹಾಡಿನ ಸ್ವಲ್ಪ ಭಾಗ ಪಾಶ್ಚಾತ್ಯ ವಾದ್ಯಗಳೊಂದಿಗೆ ಕ್ಲಬ್ ಡಾನ್ಸ್ ಶೈಲಿಯಲ್ಲಿದ್ದರೆ ಸ್ವಲ್ಪ ಭಾಗ ಕೊಳಲು, ಢೋಲಕ್ ಹಿನ್ನೆಲೆಯೊಡನೆ ದೇಸೀ ಶೈಲಿಯಲ್ಲಿದೆ. ‘ಚಿಕ್ ಚಿಕ್ ಚಿಕ್ ಲೂ ಪಾಪ ಲುಪ ಲುಪ’ ಎಂಬ ಅರ್ಥರಹಿತ ಸಾಲುಗಳೂ ಹಾಡಲ್ಲಿವೆ. ರೇಡಿಯೋ ಸಿಲೋನಿನಲ್ಲಿ ಇಂಥ ಸಾಲುಗಳುಳ್ಳ ಹಾಡುಗಳದ್ದೇ ಅನೋಖೆ ಬೋಲ್ ಎಂಬ ಕಾರ್ಯಕ್ರಮ ಇರುತ್ತಿತ್ತು.
16. ರವೀ - ಉಪ್ಪ ತಿಂದ ಮ್ಯಾಲೆ
ರವೀ ಅರ್ಥಾತ್ ಕೆ.ಎಸ್.ಎಲ್ ಸ್ವಾಮಿ ಪಿ.ಬಿ.ಎಸ್ ಅವರ ದೊಡ್ಡ ಅಭಿಮಾನಿ ಹಾಗೂ ಸಹಚರರಾಗಿದ್ದವರು. ತಮ್ಮ ಚಿತ್ರಗಳಾದ ತೂಗುದೀಪ, ಅರಸಿನ ಕುಂಕುಮ ಮತ್ತು ಭಾಗ್ಯ ಜ್ಯೋತಿ ಚಿತ್ರಗಳಲ್ಲಿ ಅವರನ್ನು ತೆರೆಯ ಮೇಲೆ ತೋರಿಸಿದ್ದರು. ಈ ಹಾಡು ತಮ್ಮ ಗುರು ಬಿ.ಆರ್. ಪಂತುಲು ಅವರ ನೆನಪಿಗಾಗಿ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ್ದ ಕಾಲೇಜು ರಂಗ ಚಿತ್ರದ್ದು. ಸಂಗೀತ ನಿರ್ದೇಶನ ಪಂತುಲು ಅವರ ಪದ್ಮಿನಿ ಸಂಸ್ಥೆಯ ಆಸ್ಥಾನ ವಿದ್ವಾನ್ ಟಿ.ಜಿ. ಲಿಂಗಪ್ಪ ಅವರದ್ದು.
17. ಸಿ.ಕೆ. ರಮಾ - ಸಿರಿವಂತನಾದರೂ
ಚಿತ್ರವೇ ಇಲ್ಲದ ಈ ಚಿತ್ರಗೀತೆಯ ವಿವರಗಳು ಸಿರಿವಂತನಾದರೂ ಕನ್ನಡ ಹಾಡನ್ನಾಲಿಸುವೆ ಲೇಖನದಲ್ಲಿವೆ.
18. ಟಿ.ಎ. ಮೋತಿ - ಷೋಡಶಿ ಷೋಡಶಿ
ಇದು ಭವಭೂತಿಯ ಕೃತಿಯನ್ನಾಧರಿಸಿದ ಮಧುಮಾಲತಿ ಚಿತ್ರದಲ್ಲಿ ಅಳವಡಿಸಲಾದ ಕು.ವೆಂ.ಪು ರಚನೆ. ಈ ಚಿತ್ರದ ನಿರ್ದೇಶಕ ಎಸ್.ಕೆ.ಎ. ಚಾರಿ ಅವರು ತಮ್ಮ ಇತರ ಚಿತ್ರಗಳಾದ ಮನೆ ಅಳಿಯ, ಮಾವನ ಮಗಳು, ಗೌರಿ ಮುಂತಾದ ಚಿತ್ರಗಳಲ್ಲೂ ಪ್ರಸಿದ್ಧ ಕವಿಗಳ ರಚನೆಗಳನ್ನು ಬಳಸಿಕೊಂಡಿದ್ದರು. ಟಿ.ಎ. ಮೋತಿ ಜಿ.ಕೆ. ವೆಂಕಟೇಶ್ ಅವರ ಮೆಚ್ಚಿನ ಗಾಯಕರಾಗಿದ್ದವರು. ಕಲಾವತಿ, ಕನ್ಯಾರತ್ನ, ಬಂಗಾರದ ಮನುಷ್ಯ ಚಿತ್ರಗಳಲ್ಲೂ ಅವರನ್ನು ಬಳಸಿಕೊಂಡಿದ್ದರು. ಈ ಹಾಡಿನ ಕೊನೆಯಲ್ಲಿ ಪಿ.ಬಿಎಸ್, ಮೋತಿ ಜೊತೆಗೆ ಇನ್ನೋರ್ವ ಗಾಯಕನ ಧ್ವನಿಯೂ ಇದ್ದು ಸ್ವತಃ ಜಿ.ಕೆ.ವಿ ಅವರದ್ದೋ ಅಥವಾ ಪೀಠಾಪುರಂ ನಾಗೇಶ್ವರ ರಾವ್ ಅವರದ್ದೋ ಎಂದು ಗೊತ್ತಾಗುತ್ತಿಲ್ಲ.
19. ಪೀಠಾಪುರಂ ನಾಗೇಶ್ವರ ರಾವ್ - ನಾ ಹಾಡಬೇಕೆ
ನಾನು ಕನ್ನಡದ ಮನ್ನಾಡೆ ಎಂದು ಉಲ್ಲೇಖಿಸುವ ಇವರು ಪಿ.ಬಿ.ಎಸ್ ಜೊತೆ ಹಾಡಿದ ಈ ಏಕೈಕ ಹಾಡು ಕುಲಗೌರವ ಚಿತ್ರದ್ದು. ಹಿನ್ನೆಲೆ ಮತ್ತು ಹಾಸ್ಯ ಸಂದರ್ಭದ ಹಾಡುಗಳನ್ನೇ ಇವರು ಹೆಚ್ಚು ಹಾಡುತ್ತಿದ್ದುದು. ಇಲ್ಲೂ ಅವರು ಹಾಡಿದ್ದು ನರಸಿಂಹರಾಜು ಅವರಿಗಾಗಿ. ಸಂಗೀತ ಟಿ.ಜಿ. ಲಿಂಗಪ್ಪ.
20. ವಿದ್ಯಾರಾಣಿ - ಗೋವಿನ ಹಾಡು
ಭೈರಪ್ಪ ಅವರ ತಬ್ಬಲಿಯು ನೀನಾದೆ ಮಗನೆ ಕೃತಿಯನ್ನಾಧರಿಸಿದ ಚಿತ್ರದಲ್ಲಿ ಅಳವಡಿಸಲಾದ ಗೋವಿನ ಹಾಡಿನಲ್ಲಿ ಬಿ.ಕೆ. ಸುಮಿತ್ರಾ ಕೂಡ ಇದ್ದಾರೆ. ಭಾಸ್ಕರ ಚಂದಾವರ್ಕರ್ ಅವರ ಸಂಗೀತ. ಪಿ.ಬಿ.ಎಸ್ ಅವರ ಅಜ್ಞಾತವಾಸ ಕಾಲದ ಪ್ರಸಿದ್ಧ ಹಾಡುಗಳ ಪೈಕಿ ಇದೂ ಒಂದು.
21. ಮಾಧವಪೆದ್ದಿ ಸತ್ಯಂ - ಏಳೇಳು ಶರಧಿಯು
ಮಾಯಾ ಬಜಾರ್‌ನಂಥ ಚಿತ್ರಗಳಲ್ಲಿ ಎಸ್.ವಿ.ರಂಗರಾವ್ ಅಭಿನಯಿಸಿದ ರಾಕ್ಷಸ ಪಾತ್ರಗಳಿಗೆ ಹಾಡುತ್ತಿದ್ದ ಕೃಶಕಾಯದ ಆದರೆ ಘನ ಗಂಭೀರ ಧ್ವನಿಯ ಸತ್ಯಂ ಎಲ್ಲಿ, ನವಿರು ದನಿಯ ಪಿ.ಬಿ.ಎಸ್ ಎಲ್ಲಿ. ಆದರೂ ಇವರಿಬ್ಬರದೂ ಒಂದು ಯುಗಳ ಗೀತೆ ಭಲೇ ಭಾಸ್ಕರ್ ಚಿತ್ರದಲ್ಲಿದೆ. ಇಲ್ಲಿಯೂ ಅವರು ಹಾಡಿದ್ದು ರಾವಣನ ಪಾತ್ರಕ್ಕೆ! ರಾವಣ-ಹನುಮ ಸಂವಾದಕ್ಕಾಗಿ ಇವರಿಬ್ಬರನ್ನು ಒಟ್ಟು ಸೇರಿಸಿದವರು ಸಂಗೀತ ನಿರ್ದೇಶಕ ಸತ್ಯಂ.
22. ಎ.ಪಿ. ಕೋಮಲ- ಜೀವನ ಹೂವಿನ ಹಾಸಿಗೆ
ಏಕ್ ಹೀ ಫಿಲ್ಮ್ ಕೇ ಗೀತ್ ಹೊರತಾಗಿ ಯಾವುದೇ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಒಂದೇ ಚಿತ್ರದ ಎರಡು ಹಾಡುಗಳಿರದಂತೆ ನೋಡಿಕೊಳ್ಳುವ ಅಲಿಖಿತ ನಿಯಮವೊಂದು ರೇಡಿಯೊ ಸಿಲೋನ್ ಸೇರಿದಂತೆ ಎಲ್ಲ ರೇಡಿಯೊ ಸ್ಟೇಶನ್‌ಗಳಲ್ಲಿತ್ತು. ಬಿನಾಕಾ ಗೀತ್‍ಮಾಲಾದಲ್ಲಿ ಮಾತ್ರ ಇದಕ್ಕೆ ವಿನಾಯಿತಿ ಇದ್ದು ಒಂದು ಚಿತ್ರದ ಎರಡು ಹಾಡುಗಳಿಗೆ ಅವಕಾಶವಿರುತ್ತಿತ್ತು. ರಾಣಿ ಹೊನ್ನಮ್ಮ ಚಿತ್ರದ ‘ಹಾರುತ ದೂರ ದೂರ’ ಹಾಡು ಈಗಾಗಲೇ ಇಲ್ಲಿ ಸಮ್ಮಿಳಿತವಾಗಿದ್ದು ಕು.ರ.ಸೀ ವಿರಚಿತ ಈ ಹಾಡೂ ಅದೇ ಚಿತ್ರದ್ದಾಗಿರುವುದು ಈ ವಿಷಯ ಇಲ್ಲಿ ಪ್ರಸ್ತಾಪವಾಗಲು ಕಾರಣ. ‘ಹಾರುತ ದೂರ ದೂರ’ ಹಾಡಿನ ಶಂಕರ್ ಜೈಕಿಶನ್ ಮಾದರಿಯ heavy ಆರ್ಕೆಷ್ಟ್ರಾಕ್ಕೆ ವಿರುದ್ಧವಾಗಿ ಈ ಹಾಡು ಸೌಮ್ಯವಾದ ನೌಷಾದ್ ಶೈಲಿಯಲ್ಲಿದೆ. ಕೊಹಿನೂರ್ ಚಿತ್ರದ ಕೋಯಿ ಪ್ಯಾರ್ ಕಿ ದೇಖೆ ಜಾದೂಗರಿ ಹಾಡಿನ ಛಾಯೆಯೂ ಇದರಲ್ಲಿದೆ. ಕೆಲ ಕಾಲ ಮುಂಬಯಿ ಚಿತ್ರರಂಗದಲ್ಲೂ ದುಡಿದ ಅವರ ಮೇಲೆ ಹಿಂದಿ ಚಿತ್ರ ಸಂಗೀತದ ಪ್ರಭಾವವಿದ್ದುದು ಸಹಜವೇ ಆಗಿದೆ. ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಜಿಂಬೊ ನಗರ ಪ್ರವೇಶ, ಸಂಪೂರ್ಣ ರಾಮಾಯಣ ಮುಂತಾದ ಚಿತ್ರಗಳಲ್ಲಿ ಮೂಲ ಹಿಂದಿ ಹಾಡುಗಳನ್ನು ಯಥಾವತ್ತಾಗಿ ಮರುಸೃಷ್ಟಿಸುವ ಜವಾಬ್ದಾರಿಯನ್ನೂ ಅವರು ನಿಭಾಯಿಸಿದ್ದರು. ಅವರ ಅನೇಕ ಪ್ರಸಿದ್ಧ ಹಾಡುಗಳ interludeಗಳಲ್ಲಿ ಹಿಂದಿ ಹಾಡುಗಳ ಎಳೆ ಇರುತ್ತಿತ್ತು.
23. ಬಾಲಸುಬ್ರಹ್ಮಣ್ಯಂ, ಇಂದುಮತಿ - ಭಾಗ್ಯವಂತರು ನಾವು ಭಾಗ್ಯವಂತರು
ಭಾಗ್ಯವಂತರು ಚಿತ್ರದ ಈ ಟೈಟಲ್ ಹಾಡಲ್ಲಿ ‘ಕಾಣದೆ ಗೌರಿ ಆತುರ ತೋರಿ....’ ಎಂಬ ಎರಡು ಸಾಲುಗಳನ್ನು ಎಸ್.ಪಿ.ಬಿ ಅವರು ಹಾಡಿದ್ದೆಂದು ಅನೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಆ ಸಾಲುಗಳನ್ನು ಸೂಕ್ಷ್ಮವಾಗಿ ಆಲಿಸಿದರೆ ಅದು ಅವರ ಧ್ವನಿ ಅಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಚಿತ್ರದ ಟೈಟಲ್ಸಲ್ಲಿ ‘ಬಾಲಸುಬ್ರಹ್ಮಣ್ಯಮ್’ ಎಂದಷ್ಟೇ ಉಲ್ಲೇಖ ಇದ್ದರೂ ರೇಡಿಯೋದಲ್ಲಿ ಈ ಹಾಡು ಪ್ರಸಾರವಾಗುವಾಗ ‘ಜಿ.ಬಾಲಸುಬ್ರಹ್ಮಣ್ಯಂ’ ಅನ್ನುತ್ತಿದ್ದರೆಂದು ನನ್ನ ನೆನಪು. ಹೀಗಾಗಿ ಅವರು ಅದೇ ಹೆಸರಿನ ಬೇರೆ ಗಾಯಕ ಎಂದು ನನ್ನ ಅನಿಸಿಕೆ. ಉದಯಶಂಕರ್ ಸಾಹಿತ್ಯಕ್ಕೆ ಸಂಗೀತ ರಾಜನ್ ನಾಗೇಂದ್ರ ಅವರದ್ದು. ತನ್ನ ಚಿತ್ರಗಳಲ್ಲಿ ಪಿ.ಬಿ.ಎಸ್ ಅವರ ಒಂದಾದರೂ ಹಾಡಿರಬೇಕೆಂದು ರಾಜ್‌ಕುಮಾರ್ ಅವರು ಆಸೆಪಡುತ್ತಿದ್ದ ಕಾಲದ ಹಾಡಿದು.
24. ಬಿ.ವಸಂತ, ಟಿ.ಆರ್. ಜಯದೇವ್ - ಸರಸಮಯ ಇದು ಸಮಯ
ಮನೆ ಅಳಿಯ ಚಿತ್ರದ ಈ ಹಾಡು ಇವರಿಬ್ಬರೊಡನೆ ಪಿ.ಬಿ.ಎಸ್ ಮತ್ತು ಜಾನಕಿ ಸೇರಿ ಎರಡು ಜೋಡಿ ಪ್ರೇಮಿಗಳಿಗಾಗಿ ಹಾಡಿರುವುದು. ಈ ಚಿತ್ರದ ಸಂಗೀತ ನಿರ್ದೇಶನ ಟಿ. ಛಲಪತಿ ರಾವ್. ಜಯದೇವ್ ಕೆಲ ಕಾಲ ಕನ್ನಡದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದರು ಇದೇ ಚಿತ್ರದ ನಿಲ್ಲೆ ಗೊಲ್ಲರು ಬಾಲೆ ಮತ್ತು ಅನ್ನಪೂರ್ಣ ಚಿತ್ರದ ಅಂದಚಂದದ ಹೂವೆ ಹಾಡುಗಳು ಜನಪ್ರಿಯತೆ ಗಳಿಸಿದ್ದವು. ಹೆಸರು ನೋಡಿದರೆ ಪುರುಷ ಎಂಬ ಭಾವನೆ ಬರುವ ಬಿ. ವಸಂತ ಅವರು ಕೂಡ ಸಾಕಷ್ಟು ಗೀತೆಗಳನ್ನು ಹಾಡಿದ್ದಾರೆ. ಅವರು ಎಮ್. ಸತ್ಯಂ ಅವರೊಂದಿಗೆ ಹಾಡಿದ್ದ ಅಮರ ಶಿಲ್ಪಿ ಜಕ್ಕಣ್ಣದ ಜಂತರ್ ಮಂತರ್ ಮಾಟವೋ ಹಾಡು ಬಲು ಪ್ರಸಿದ್ಧವಾಗಿತ್ತು.
25. ಅಂಜಲಿ, ಕೌಸಲ್ಯ - ನಿನ್ನೊಲುಮೆ ನಮಗಿರಲಿ ತಂದೆ
ನಮ್ಮ ಮಕ್ಕಳು ಚಿತ್ರದ ಈ ಜನಪ್ರಿಯ ಹಾಡಿನಲ್ಲಿ ಇವರಿಬ್ಬರೊಂದಿಗೆ ಬಿ.ಕೆ.ಸುಮಿತ್ರಾ ಕೂಡ ದನಿಗೂಡಿಸಿದ್ದಾರೆ. ಆರಂಭದ ಶ್ಲೋಕದಲ್ಲಿ ಪಿ.ಬಿ.ಎಸ್ ಅವರ ಸಂಸ್ಕೃತ ಶಬ್ದಗಳ ಉಚ್ಚಾರ ಸ್ಪಟಿಕದಂತೆ ಶುಭ್ರ. ಭಕ್ತಿ ಭಾವಕ್ಕೆ ಸೂಕ್ತವಾದ ಜಂಪೆತಾಳದಲ್ಲಿರುವ ನಟಭೈರವಿ ರಾಗಛಾಯೆಯ ಸರಳ ಸಂಯೋಜನೆ ವಿಜಯ ಭಾಸ್ಕರ್ ಅವರದ್ದು. ಹಾಡಿನ ಸಾಹಿತ್ಯ ಆರ್. ಎನ್. ಜಯಗೋಪಾಲ್ ಅವರದ್ದು.
26. ಕಸ್ತೂರಿ ಶಂಕರ್, ಎಚ್.ಎಮ್, ಮಹೇಶ್ - ಅರೆರೆರೆ ಎಂಥ ಗಂಡಿಗೆ
ಬೆಸುಗೆ ಚಿತ್ರಕ್ಕಾಗಿ ಇವರಿಬ್ಬರೊಂದಿಗೆ ಅಂಜಲಿಯೂ ಸೇರಿ ಪಿ.ಬಿ.ಎಸ್ ಜೊತೆ ಹಾಡಿದ quadruplet ಹಾಡಿದು. ಈ ಸಮಯದಲ್ಲಿ ಪಿ.ಬಿ. ಶ್ರೀನಿವಾಸ್ ಅವರಿಗೆ ಇಂತಹ ಭಾಗಶಃ ಅವಕಾಶಗಳು ಮಾತ್ರ ದೊರಕುತ್ತಿದ್ದವು.
27. ಜಿಕ್ಕಿ - ಶ್ರಮದಿ ನಾವ್ ದುಡಿದು
ಪಿ.ಜಿ.ಕೃಷ್ಣವೇಣಿ ಎಂಬ ನಿಜ ನಾಮಧೇಯದ ಜಿಕ್ಕಿ ಜೊತೆ ಪಿ.ಬಿ.ಎಸ್ ಹಾಡಿರುವ ಈ ಹಾಡು 1965ರಲ್ಲಿ ತೆರೆಕಂಡ ವಾತ್ಸಲ್ಯ ಚಿತ್ರದ್ದು. ಇದು ತಮಿಳಿನ ಪಾಸಮಲರ್ ಚಿತ್ರದ ರೀಮೇಕ್. ರಾಜಕುಮಾರ್ ಮತ್ತು ಲೀಲಾವತಿ ಅಣ್ಣ ತಂಗಿ ಪಾತ್ರಗಳಲ್ಲಿ ಅಭಿನಯಿಸಿದ ಏಕೈಕ ಚಿತ್ರ ಇದು. ಆಗ ಪತ್ರಿಕೆಗಳಿಗೆಲ್ಲ ಇದು ಸೆನ್ಸೇಷನಲ್ ಸುದ್ದಿಯಾಗಿತ್ತು. ಈ ಹಾಡಿನ ಹಿನ್ನೆಲೆ ಸಂಗೀತದಲ್ಲಿ ಶಂಕರ್ ಜೈಕಿಶನ್ ಛಾಯೆ ಗೋಚರಿಸುತ್ತಿದ್ದು ಇದರ ಛಾಯೆ ಆ ಮೇಲೆ ಬಂದ ಲಕ್ಷ್ಮಿ-ಪ್ಯಾರೇ ಅವರ ಸಾಧು ಔರ್ ಶೈತಾನ್ ಚಿತ್ರದ ಮೆಹಬೂಬಾ ಮೆಹೆಬೂಬ ಹಿನ್ನೆಲೆ ಸಂಗೀತದ ಮೇಲೆ ಬಿದ್ದಿದೆ! ಉಳಿದೆಲ್ಲ ಹಾಡುಗಳಿಗೆ ಸ್ವಂತ ಧಾಟಿ ಸಂಯೋಜಿಸಿದ ವಿಜಯಾ ಕೃಷ್ಣಮೂರ್ತಿ ಮುದ ತುಂಬಿ ಮೆರೆವ ಮದುಮಗಳೇ ಎಂಬ ಎಲ್.ಆರ್.ಈಶ್ವರಿ ಹಾಡಿಗೆ ತಮಿಳಿನ ವಾರಾಯನ್ ತೋಡಿ ವಾರಾಯೋ ಧಾಟಿಯನ್ನು ಉಳಿಸಿಕೊಂಡಿದ್ದರು.
28. ಆರ್.ಎನ್. ಸುದರ್ಶನ್ - ಒಂದೇ ಒಂದು ಹೂವು
ಆರ್.ಎನ್.ಆರ್ ಕುಟುಂಬದ ನಗುವ ಹೂವು ಚಿತ್ರದಲ್ಲಿ ಇರಬೇಕು ಇರಬೇಕು ಹಾಡನ್ನು ಆರ್.ಎನ್. ಸುದರ್ಶನ್ ಸ್ವತಃ ಹಾಡಿದ್ದರು. ಈ ಹಾಡಲ್ಲಿ ವಾಚನ ಭಾಗ ಮಾತ್ರ ಅವರದಾಗಿದ್ದು ಪಿ.ಬಿ.ಎಸ್ ಹಾಡಿದ್ದರು. ಇತ್ತೀಚೆಗೆ ನಮ್ಮನ್ನಗಲಿದ ಸುದರ್ಶನ್ ಅವರಿಗೆ ಶ್ರದ್ಧಾಂಜಲಿ ರೂಪವಾಗಿ ಈ ಸುಂದರ ಹಾಡಿನ ಸೇರ್ಪಡೆ.
29. ಸುಮನ್ ಕಲ್ಯಾಣ್‌ಪುರ್ - ತಲ್ಲಣ ನೂರು ಬಗೆ
ಜಯತೆ ಸತ್ಯಮೇವ ಜಯತೆ, ಒಂದೊಂದಾಗಿ ಜಾರಿದರೆ ಹಾಡುಗಳ ಕಲ್ಪವೃಕ್ಷ ಚಿತ್ರದ ಸಂಗೀತ ನಿರ್ದೇಶಕ ‘ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ’ ಖ್ಯಾತಿಯ ಹಿಂದಿ ಚಿತ್ರರಂಗದ ಅದೇ ಜಯದೇವ್ ಎಂದು ನನಗೆ ಬಹಳ ಕಾಲ ಗೊತ್ತೇ ಇರಲಿಲ್ಲ. ಅದೇ ಹೆಸರಿನ ಇನ್ಯಾರೋ ಇರಬಹುದು ಅಂದುಕೊಂಡಿದ್ದೆ. ಆ ಚಿತ್ರದಲ್ಲಿ ಪಿ.ಬಿ.ಎಸ್ ಮತ್ತು ಸುಮನ್ ಕಲ್ಯಾಣ್‌ಪುರ್ ಹಾಡಿದ ಯುಗಳ ಗೀತೆಗಳಿವೆ ಎಂದು ಗೊತ್ತಾದದ್ದೂ ಈಚೆಗೆ. ಇದು ಅವುಗಳಲ್ಲೊಂದು.
30. ಆಶಾ ಭೋಸ್ಲೆ - ಸವಾಲು ಹಾಕಿ ಸೋಲಿಸಿ ಎಲ್ಲರ
ಮರಾಠಿ ಲಾವಣಿ ಶೈಲಿಯಲ್ಲಿ ಆಶಾ ಭೋಸ್ಲೆ ಹಾಕಿದ ಸವಾಲಿಗೆ ಪಿ.ಬಿ.ಶ್ರೀನಿವಾಸ್ ಅವರು ಕನ್ನಡದ ಲಾವಣಿ ಮೂಲಕ ಸೂಕ್ತ ಉತ್ತರ ನೀಡುವ ದೂರದ ಬೆಟ್ಟ ಚಿತ್ರದ ಸುದೀರ್ಘ ಹಾಡು ಇದು. ಇದರಲ್ಲಿ ಸೂತ್ರಧಾರನ ಮಾತುಗಳನ್ನಾಡಿದ್ದು ಚಿ. ಉದಯಶಂಕರ್ ಇರಬಹುದೇನೋ ಎಂದು ನನ್ನ ಊಹೆ. ಹೋಳಿಯ ಸನ್ನಿವೇಶ ಮತ್ತು ಈ ಹಾಡಿನ ಭಾಗ ಮಾತ್ರ ವರ್ಣದಲ್ಲಿ ಚಿತ್ರೀಕರಣಗೊಂಡ ಆ ಚಿತ್ರ ಉಳಿದಂತೆ ಕಪ್ಪು ಬಿಳುಪಿನಲ್ಲಿತ್ತು. ಬಹುಶ: ಇದು ಭಾಗಶಃ ವರ್ಣ ಮಾದರಿಯ ಕೊನೆಯ ಕನ್ನಡ ಚಿತ್ರ.
ಇಲ್ಲಿರುವ ಮಾಹಿತಿ ಪರಿಪೂರ್ಣವಲ್ಲ. ನನಗೆ ತಿಳಿದಂತೆಯೇ ಪಿ.ಬಿ.ಶ್ರೀನಿವಾಸ್ ಜೊತೆಯಲ್ಲಿ ಹಾಡಿದ ಇನ್ನೂ ಕೆಲ ಕಲಾವಿದರಿದ್ದಾರೆ. ನನಗೆ ಗೊತ್ತಿಲ್ಲದವರು ಇನ್ನೂ ಹಲವರಿರಬಹುದು. ಮೂವತ್ತಕ್ಕೆ ಮುಕ್ತಾಯವಾಗಲಿ ಎಂದು ಇಷ್ಟಕ್ಕೇ ಸೀಮಿತಗೊಳಿಸಿದ್ದೇನೆ. ಸಾವಕಾಶವಾಗಿ ಓದಿ. ಹಾಡುಗಳನ್ನು ಒಂದೊಂದಾಗಿ ಆಲಿಸಿ.