ನಾವು ಚಿಕ್ಕವರಿದ್ದಾಗ ಅಂದರೆ 50-60ರ ದಶಕಗಳಲ್ಲಿ ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಒಂದು ತಿಂಗಳು ಮೊದಲೇ ಅಂದರೆ ಶ್ರಾವಣ ಶುದ್ಧ ಚೌತಿಯಂದೇ ಆರಂಭವಾಗುತ್ತಿತ್ತು. ಕುಂಬಾರನೊಬ್ಬ ತಂದು ಕೊಟ್ಟಿರುತ್ತಿದ್ದ ಆವೆ ಮಣ್ಣಿನ ಮುದ್ದೆಯನ್ನು ಅಂದು ಅಟ್ಟದಿಂದ ತಂದು ಒಡೆದು ನೀರು ಬೆರಸಿ ಸಣ್ಣ ಒನಕೆಯೊಂದರಿಂದ ಕುಟ್ಟಿ ಹದ ಮಾಡುವುದರೊಂದಿಗೆ ಗಣೇಶ ನಿರ್ಮಾಣದ ಶ್ರೀಗಣೇಶವಾಗುತ್ತಿತ್ತು. ಮೂರ್ತಿಯ ನಿರ್ಮಾಣ ತಂದೆಯವರೇ ಮಾಡುತ್ತಿದ್ದರೂ ಮಣ್ಣು ಹದಮಾಡುವ ಕಾರ್ಯದಲ್ಲಿ ನಮ್ಮ ಅಣ್ಣಂದಿರೂ ಕೈ ಜೋಡಿಸುತ್ತಿದ್ದರು. ಮಣ್ಣು ಕಮ್ಮಿಯಾಗಬಹುದೆಂದೇನಾದರೂ ಅನಿಸಿದರೆ ಹಿಂದಿನ ವರುಷ ಗಣಪ ಮಾಡಿದ ಮೇಲೆ ಉಳಿದ ಮಣ್ಣಿಂದ ನಾವೆಲ್ಲ ಮಾಡಿರುತ್ತಿದ್ದ ಸಣ್ಣ ಸಣ್ಣ ಬೊಂಬೆಗಳಿಗೆ ಮೋಕ್ಷ ಪ್ರಾಪ್ತವಾಗುವುದೂ ಇತ್ತು. ಗಣಪನನ್ನು ಕೂರಿಸುವ ಮರದ ಮಣೆಯನ್ನು ಅಟ್ಟದ ಮೇಲಿನಿಂದ ತರುವ ಕೆಲಸ ನಮ್ಮಂಥ ಕಿರಿಯರ ಪಾಲಿಗೆ ಬರುತ್ತಿತ್ತು. ಹಿಂದಿನ ವರ್ಷದ ಗಣಪನ ಕಾಲಿನ ಭಾಗದ ಕೆಂಪು ಬಣ್ಣದ ಒಂದಷ್ಟು ಪಳೆಯುಳಿಕೆ ಆ ಮಣೆಯಲ್ಲಿರುತ್ತಿತ್ತು. ಅದನ್ನೇ ಗಣಪನೆಂದು ಕಲ್ಪಿಸಿ ಬಾಯಲ್ಲೇ ಢಾಂಯ್ ಢಾಂಯ್ ಎಂದು ಜಾಗಟೆ ಬಾರಿಸುತ್ತಾ ಆ ಮಣೆಯನ್ನು ನಾವು ಕೆಳಗೆ ತರುತ್ತಿದ್ದೆವು.
ನಮ್ಮ ತಂದೆಯವರು ಮೂರ್ತಿ ನಿರ್ಮಾಣದ ಕೆಲಸವನ್ನು ಹಂತ ಹಂತವಾಗಿ ಮಾಡುತ್ತಿದ್ದರು. ಮೊದಲ ದಿನ ಗಣಪ ಕೂರುವ ಪೀಠ ಮತ್ತು ಆತನ ವಾಹನವಾದ ಇಲಿಯ ಅಸ್ಪಷ್ಟ ರೂಪ ಮಾತ್ರ ಮೈದಳೆಯುತ್ತಿತ್ತು. ದಿನ ಕಳೆದಂತೆ ಒಂದೊಂದಾಗಿ ಕಾಲುಗಳು, ಹೊಟ್ಟೆ ಮತ್ತು ಎದೆಯ ಭಾಗ , ಚತುರ್ಭುಜಗಳು ಇತ್ಯಾದಿ ರೂಪುಗೊಳ್ಳುತ್ತಾ ಬರುತ್ತಿದ್ದವು. ಈ ಭಾಗಗಳು ಸಾಕಷ್ಟು ಗಟ್ಟಿಯಾದ ಮೇಲಷ್ಟೇ ಕೈ ಕಾಲುಗಳ ಬೆರಳುಗಳನ್ನು ಜೋಡಿಸುತ್ತಿದ್ದರು. ನಂತರ ಹೊಟ್ಟೆಗೆ ಹಾವು, ಕೈ ಕಾಲು ಮತ್ತು ಕಂಠದ ಆಭರಣಗಳ ಕುಸುರಿ ಕೆಲಸ. ಇದಕ್ಕಾಗಿ ಅಡಿಕೆ ಮರದ ಸಿಬ್ಬಿಯಿಂದ ಮಾಡಿದ ವಿಶೇಷ ಉಪಕರಣಗಳು ಅವರಲ್ಲಿದ್ದವು. ಅವರ ಈ ಕಾರ್ಯಗಳನ್ನೆಲ್ಲ ಪಕ್ಕದ ಬೆಂಚಲ್ಲಿ ಕೂತು ನಾವು ಕುತೂಹಲದಿಂದ ವೀಕ್ಷಿಸುತ್ತಿದ್ದೆವು. ನಾವು ಕೂತಲ್ಲೇ ಕಾಲೇನಾದರೂ ಜೋರಾಗಿ ಅಲ್ಲಾಡಿಸತೊಡಗಿದರೆ ಅಲ್ಲಿಂದಲೇ ಹೂಂ ಎಂದು ಗದರಿಸುತ್ತಿದ್ದರು.
ಈ ಹಂತ ಮುಗಿದ ಮೇಲೆ ಶಿರೋಭಾಗದ ಕೆಲಸ ಆರಂಭವಾಗುತ್ತಿತ್ತು. ಶೂರ್ಪಕರ್ಣಗಳು, ಕರ್ಣ ಕುಂಡಲಗಳು ಮತ್ತು ತಲೆಗೊಂದು ಮುಂಡಾಸಿನ ರೀತಿಯ ರಚನೆ ರೂಪುಗೊಳ್ಳುತ್ತಿತ್ತು. ಈ ಮುಂಡಾಸಿನ ಮೇಲೆಯೇ ಆಮೇಲೆ ಪೂಜೆಯ ಸಮಯದಲ್ಲಿ ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕೃತವಾಗಿ ತುದಿಯಲ್ಲಿ ನವಿಲುಗರಿಯಿದ್ದ ತೆಂಕು ಯಕ್ಷಗಾನ ಶೈಲಿಯ ಮರದ ಕಿರೀಟ ರಾರಾಜಿಸುತ್ತಿದ್ದುದು.
ಇಷ್ಟೆಲ್ಲ ಆದ ಮೇಲೆ ಬಹುತೇಕ ಕೃಷ್ಣಾಷ್ಟಮಿಯ ದಿನ ನಾವೆಲ್ಲ ಬಹು ದಿನದಿಂದ ನಿರೀಕ್ಷಿಸುತ್ತಿದ್ದ ಸೊಂಡಿಲು ಇಡುವ ಆ ಗಳಿಗೆ ಬರುತ್ತಿತ್ತು. ಆ ದಿನ ರಜೆಯೂ ಇರುತ್ತಿದ್ದುದರಿಂದ ಈ ಹಂತವನ್ನು ಸಂಪೂರ್ಣವಾಗಿ ವೀಕ್ಷಿಸುವ ಸಂಭ್ರಮ ನಮಗೆ. ಕೆಳದುಟಿ, ಸೊಂಡಿಲಿನ ಅಕ್ಕ ಪಕ್ಕ ಒಂದು ಪೂರ್ತಿ ಇನ್ನೊಂದು ಮುರಿದ ದಾಡೆಗಳು ರೂಪುಗೊಂಡು ಹಸ್ತಗಳಲ್ಲಿ ಪಾಶ ಅಂಕುಶ, ದಂತಗಳು ಸೇರಿ, ಹಣೆಯಲ್ಲಿ ಅರ್ಧ ಚಂದ್ರ ಮೂಡಿ ಗಣಪ ಸಾಕಾರನಾದಾಗ ನಮಗೊಂದು ಥ್ರಿಲ್. ಕಣ್ಣುಗಳನ್ನು ರೂಪಿಸಲು ಮಣ್ಣಿನಿಂದ ರಚಿಸಿ ಸುಟ್ಟು ಗಟ್ಟಿಗೊಳಿಸಿದ ಅಚ್ಚೊಂದನ್ನು ಉಪಯೋಗಿಸಲಾಗುತ್ತಿತ್ತು. ಹಸಿ ಮಣ್ಣಿನ ಮೇಲೆ ಆ ಅಚ್ಚನ್ನೊತ್ತಿದರೆ ಏಕ ಪ್ರಕಾರವಾದ ಎರಡು ಕಣ್ಣುಗಳು ಮೂಡುತ್ತಿದ್ದವು. ನಮ್ಮ ತಂದೆ ತಯಾರಿಸುತ್ತಿದ್ದ ಗಣಪನ ವಿಗ್ರಹ ಹಿಂದಿನ ವರ್ಷಗಳ ಗಣಪನ ಯಥಾವತ್ ಪ್ರತಿರೂಪವಾಗಿರುತ್ತಿತ್ತು. ಒಂದಿನಿತೂ ವ್ಯತ್ಯಾಸವಿರುತ್ತಿರಲಿಲ್ಲ. ಗಣಪನ ಮೇಲಿನ ಬಲ ಕೈಯ್ಯಲ್ಲಿ ಅಂಕುಶ, ಮೇಲಿನ ಎಡ ಕೈಯಲ್ಲಿ ಸರ್ಪರೂಪಿ ಪಾಶ, ಕೆಳ ಬಲಗೈಯಲ್ಲಿ ಮುರಿದ ದಂತ ಇರುತ್ತಿದ್ದವು. ಕೆಳ ಎಡಗೈ ಮೋದಕವೊಂದನ್ನು ಹಿಡಿದ ಸೊಂಡಿಲನ್ನು ಆಧರಿಸುತ್ತಿತ್ತು. ವಾಹನ ಇಲಿಯ ಕೈಗಳಲ್ಲೂ ಒಂದು mini ಮೋದಕ ಇರುತ್ತಿತ್ತು.
ಮುಂದೆ ಮಣ್ಣಿನ ತೇವ ಪೂರ್ತಿ ಆರುವ ವರೆಗೆ ಗಣಪನ ಕೆಲಸಕ್ಕೆ ವಿರಾಮ. ಈ ಅವಧಿಯಲ್ಲಿ ಗೌರಿ ಹಬ್ಬದ ದಿನದ ಪೂಜೆಗಾಗಿ ಪಾರ್ವತಿಯ ಪುಟ್ಟ ವಿಗ್ರಹ ಮತ್ತು ಶಿವಲಿಂಗವನ್ನು ಅಣ್ಣ ತಯಾರಿಸುತ್ತಿದ್ದರು. ಪಾರ್ವತಿಯ ಹಿಂದೆ ಪರಿಚಾರಕಿಯೋರ್ವಳ ಅಸ್ಪಷ್ಟ ರೂಪದ ಬಿಂಬವೂ ಇರುತ್ತಿತ್ತು. ನಾವು ‘ಬಾವ್ವನ್ನ’ ಎಂದು ಕರೆಯುತ್ತಿದ್ದ ಆ ರಚನೆ ನಮಗೆ ಚೋದ್ಯದ ವಸ್ತುವಾಗಿತ್ತು. ಇದಾದ ಮೇಲೆ ಮಣ್ಣು ಉಳಿದರೆ ನಾವು ಚಿಕ್ಕ ಮನುಷ್ಯಾಕೃತಿಯ ಬೊಂಬೆ, ಮಾವಿನ ಹಣ್ಣು, ಗೇರು ಹಣ್ಣು ಇತ್ಯಾದಿಗಳನ್ನು ರಚಿಸುವುದಿತ್ತು. ಈ ರೀತಿ ಉಳಿದ ಮಣ್ಣಿನಲ್ಲಿ ನಮ್ಮ ಅಣ್ಣ ತಯಾರಿಸಿದ ದತ್ತಾತ್ರೇಯ, ಶಿವ ಪಾರ್ವತಿ ಇತ್ಯಾದಿ ಸುಂದರ ಮೂರ್ತಿಗಳು ಈಗಲೂ ಇವೆ. ಆದರೆ ಆಗಲೇ ಹೇಳಿದಂತೆ ನಾವು ಮಾಡಿದ ಬೊಂಬೆಗಳು ಮರು ವರ್ಷ ಮೋಕ್ಷ ಹೊಂದಿ ಗಣಪನ ಮಣ್ಣಿನಲ್ಲಿ ಲೀನವಾಗುವ ಸಾಧ್ಯತೆ ಹೆಚ್ಚಾಗಿರುತ್ತಿತ್ತು.
ನಂತರದ್ದು ವರ್ಣ ಪರ್ವ. ಈ ಹಂತದಲ್ಲಿ ತಂದೆಯವರೊಂದಿಗೆ ಅಣ್ಣಂದಿರೂ ಸೇರಿಕೊಳ್ಳುತ್ತಿದ್ದರು. ಆಗ paint ಬಳಸುವ ಪರಿಪಾಠ ಇರಲಿಲ್ಲ. ಬಣ್ಣದ ಹುಡಿಗಳನ್ನು ಪಿಂಗಾಣಿ ಪಾತ್ರೆ ಅಥವಾ ಗೆರಟೆಯಲ್ಲಿ ನೀರಿನೊಡನೆ ಕಲಸಿ ಗೋಂದು ಬೆರೆಸಿ ಬಣ್ಣಗಳನ್ನು ತಯಾರಿಸಲಾಗುತ್ತಿತ್ತು. ಬಣ್ಣ ಹಚ್ಚಲು ನದಿ ತಟದಲ್ಲಿ ಬೆಳೆಯುವ ಮುಂಡೇವು ಎಂಬ ಪೊದೆಯ ಬೇರುಗಳನ್ನು ಜಜ್ಜಿ ತಯಾರಿಸಿದ ಬ್ರಶ್ಯುಗಳು. ಮೊದಲು ಇಡೀ ಮೂರ್ತಿಗೆ ಸಫೇತು ಅಂದರೆ ಬಿಳಿ ಬಣ್ಣದ ಕೋಟಿಂಗ್. ನಂತರ ಪೀತಾಂಬರ ಮತ್ತು ಕರ್ಣಕುಂಡಲಗಳಿಗೆ ಹಳದಿ, ಮೈಗೆ ಕೆಂಪು, ಪೀಠಕ್ಕೆ ನೀಲಿ, ಮುಂಡಾಸಿಗೆ ಹಸಿರು, ಹಾವಿಗೆ ಹಳದಿಯ ಮೇಲೆ ಕಪ್ಪು ಇತ್ಯಾದಿ ಬಣ್ಣಗಳ ಲೇಪನ. ‘ಇವತ್ತು ಗಣಪತಿಗೆ ರಂಗು ಬಳಿಯುವುದು’ ಎಂಬ ನೆಪ ಹೇಳಿ ನಾವು ಆ ದಿನ ಶಾಲೆಗೆ ಚಕ್ಕರ್ ಹಾಕುವುದೂ ಇತ್ತು. ಬೆನ್ನಿನ ಭಾಗಕ್ಕೆ ಬಣ್ಣ ಹಚ್ಚುವ ಅವಕಾಶವೂ ಕೆಲವೊಮ್ಮೆ ನಮಗೆ ಸಿಗುತ್ತಿತ್ತು. ನೀಲಿಗೆ ಹಳದಿ ಬೆರೆಸಿದರೆ ಹಸಿರು, ಕೆಂಪಿಗೆ ಹಳದಿ ಬೆರೆಸಿದರೆ ಕಿತ್ತಳೆ, ಕೆಂಪಿಗೆ ಕಪ್ಪು ಬರೆಸಿದರೆ ಕಂದು ಎಂಬಿತ್ಯಾದಿ ವಿಷಯಗಳು ಈ ಹಂತದಲ್ಲಿ ನಮಗೆ ಮನವರಿಕೆಯಾಗುತ್ತಿದ್ದವು. ಈ ಬಣ್ಣಗಳು ಒಣಗಿದ ಮೇಲೆ ಆಭರಣಗಳಿಗೆ ತೆಳ್ಳಗಿನ ಬೇಗಡೆ ಹಚ್ಚಿ ಬಟ್ಟೆಯಿಂದ ಒತ್ತುವ ನಾಜೂಕಿನ ಕೆಲಸ.
ಹುಡಿಯನ್ನು ನೀರಲ್ಲಿ ಬೆರೆಸಿ ತಯಾರಿಸಿದ ಬಣ್ಣ ಉಪಯೋಗಿಸುತ್ತಿದ್ದುದರಿಂದ ಅದಕ್ಕೆ ಹೊಳಪು ಇರುತ್ತಿರಲಿಲ್ಲ. ಅಲ್ಲದೆ ಪೂಜೆಯ ಸಮಯದಲ್ಲಿ ಪ್ರೋಕ್ಷಿಸುವ ನೀರು ಮೂರ್ತಿಯ ಬಣ್ಣವನ್ನು ಕದಡಿಸುವ ಅಪಾಯವೂ ಇರುತ್ತಿತ್ತು. ಅದಕ್ಕಾಗಿ ಧೂಪದ ಮರದಿಂದ ಒಸರುವ ಸೊನೆಯನ್ನು ಸಂಗ್ರಹಿಸಿ ಬಣ್ಣದ ಮೇಲೆ ಲೇಪಿಸಲಾಗುತ್ತಿತ್ತು. ಮರದ ಮಣೆಯ ಮೇಲೆ ನಿರ್ಮಿತವಾದ ಗಣಪನ ವಿಗ್ರಹ ಅಲ್ಲಾಡದಂತೆ ಧೃಢವಾಗಿರಲೂ ಈ ಧೂಪದ ಸೊನೆ ಸಹಾಯ ಮಾಡುತ್ತಿತ್ತು. ಆದರೆ ಆ ಭಾಗಕ್ಕೆ ಹೆಚ್ಚು ಸೊನೆ ಹಚ್ಚಿದರೆ ವಿಸರ್ಜನೆಯ ದಿನ ಮೂರ್ತಿಯನ್ನು ಮಣೆಯಿಂದ ಬೇರ್ಪಡಿಸಲು ತೊಂದರೆಯಾಗುವ ಸಂಭವವೂ ಇರುತ್ತಿತ್ತು. ದೂರದ ಕಾಡಲ್ಲಿದ್ದ ಧೂಪದ ಮರವೊಂದಕ್ಕೆ ಹರಿತವಾದ ಚೂರಿಯಿಂದ tapping ಮಾಡಿ ಒಸರುವ ಸೊನೆ ದೊಡ್ಡ ಗೆರಟೆಯೊಂದರಲ್ಲಿ ಸಂಗ್ರಹವಾಗುವಂತೆ ಮಾಡಿ ಮರುದಿನ ಅದನ್ನು ತರುವ ಕೆಲಸ ನಮ್ಮ ಅಣ್ಣನದಾಗಿರುತ್ತಿತ್ತು. ಉಪಯೋಗಿಸಿ ಉಳಿದ ಸೊನೆಯಲ್ಲಿ ಚಿಂದಿ ಬಟ್ಟೆಗಳನ್ನು ನೆನೆಸಿ ಕೋಲುಗಳ ತುದಿಗೆ ಕಟ್ಟಿ ಚೌತಿಯ ದಿನ ರಾತ್ರೆ ಉರಿಸಲು ಕೊಳ್ಳಿಗಳನ್ನು ತಯಾರಿಸುತ್ತಿದ್ದೆವು.
ಇತ್ತ ಕಡೆ ಮನೆಯ ಮಹಿಳೆಯರು ಚೌತಿಗೆ ಬೇಕಾಗುವ ಭಕ್ಷಗಳಿಗಾಗಿ ಅಕ್ಕಿ ಬೇಳೆಗಳನ್ನು ಕಲ್ಲಿನಲ್ಲಿ ಬೀಸಿ ಹಿಟ್ಟು ತಯಾರಿಸುವ ಕಾಯಕ ಆರಂಭಿಸುತ್ತಿದ್ದರು. ಚೌತಿಗೆ ಎರಡು ದಿನ ಉಳಿದಿದೆ ಎನ್ನುವಾಗ ಊರಿನ ಇತರ ಮಹಿಳೆಯರ ಸಹಕಾರದೊಂದಿಗೆ ಚಕ್ಕುಲಿ, ಮೋದಕ, ಪಂಚಕಜ್ಜಾಯ ಇತ್ಯಾದಿ ತಯಾರಾಗುತ್ತಿದ್ದವು. ಓರಗೆಯ ಮಹಿಳೆಯರೆಲ್ಲ ಒಂದೆಡೆ ಸೇರುವ ಆ ಸಂದರ್ಭದಲ್ಲಿ ನಡೆಯುವ ‘ಚರಪಟಪಂಜರಿಕೆ’ ಕೇಳಲು ಬಲು ಸ್ವಾರಸ್ಯಕರವಾಗಿರುತ್ತಿತ್ತು!
ಚೌತಿಯ ಮುನ್ನಾ ದಿನ ಮಂಟಪ ಸಿದ್ಧಗೊಳಿಸುವ ಕೆಲಸ. ಮಂಟಪವನ್ನು ನಿಲ್ಲಿಸಲು ಬೇಕಾಗುವ ಗಳುಗಳೆರಡು ಬಚ್ಚಲುಮನೆಯ ಅಟ್ಟದ ಮೇಲಿರುತ್ತಿದ್ದವು. ಅವುಗಳನ್ನು ಕೆಳಗಿಳಿಸಿ ತೊಳೆದು ಮಧ್ಯಾಹ್ನದೊಳಗೆ ‘ಬಾಹೆರ್ಲಿ ಮಾಳಿ’ ಅರ್ಥಾತ್ ಹೊರ ಹಜಾರದ ಸೂಕ್ತ ಜಾಗದಲ್ಲಿ ಕಟ್ಟಿ ಮಂಟಪವನ್ನು ಅಳವಡಿಸುವ ಕೆಲಸ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಮನೆಯ ಆಳು ಕಾಳುಗಳಿಗೂ ಚೌತಿ ಗಣಪನ ದರ್ಶನ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಮಂಟಪಕ್ಕೆ ದೇವರ ಕೋಣೆ ಇದ್ದ ‘ಆಂತ್ಲಿ ಮಾಳಿ’ ಅಂದರೆ ಒಳ ಹಜಾರದ ಬದಲು ಹೊರ ಚಾವಡಿಯಿಂದಲೂ ವೀಕ್ಷಿಸಲು ಸಾಧ್ಯವಾಗುವ ಈ ಸ್ಥಳವನ್ನು ನಿಗದಿ ಪಡಿಸಿರಬಹುದು. ಆ ದಿನ ಗೌರಿ ತದಿಗೆಯೂ ಆಗಿರುತ್ತಿದ್ದುದರಿಂದ ದೇವರ ಕೋಣೆ ಇರುವ ಒಳ ಹಜಾರದಲ್ಲಿ ಬೇರೊಂದು ಮಂಟಪವೂ ಸಿದ್ಧವಾಗುತ್ತಿತ್ತು. ಮಹಿಳೆಯರಿಗೆಲ್ಲ ಆ ದಿನ ಕಾಫಿ ಕೂಡ ನಿಷಿದ್ಧವಾದ ಕಟ್ಟುನಿಟ್ಟಿನ ಹರತಾಲಿಕಾ ಉಪವಾಸ. ಗೌರಿ ಪೂಜೆ ಮುಗಿದ ಮೇಲೆ ಬಾಳೆ ಹಣ್ಣು, ಸಿಯಾಳ, ಕಿತ್ತಳೆ ಇತ್ಯಾದಿಗಳ ಸೇವನೆಗೆ ಮಾತ್ರ ಅವಕಾಶ. ಆಗ ನಮ್ಮ ತೋಟದಲ್ಲೇ ಕಿತ್ತಳೆ ಮರ ಇತ್ತು. ನಮ್ಮ ಅಣ್ಣ ಆ ಮಳೆಗಾಲದಲ್ಲೂ ಸರಸರನೆ ಮರವನ್ನೇರಿ ಕಿತ್ತಳೆ ಕೊಯ್ಯುತ್ತಿದ್ದರು. ಹೀಗಾಗಿ ಯಾವುದೇ ಫಲಗಳನ್ನು ದುಡ್ಡು ಕೊಟ್ಟು ಹೊರಗಿನಿಂದ ತರುವ ಅಗತ್ಯ ಬೀಳುತ್ತಿರಲಿಲ್ಲ. ಉಪವಾಸ ಆಚರಿಸದ ನಮಗೂ ಒಂದೊಂದು ಸಿಯಾಳ ಕುಡಿದು ಹಣ್ಣುಗಳನ್ನು ಮೆಲ್ಲುವ ಸೌಭಾಗ್ಯ ದೊರಕುತ್ತಿತ್ತು. ಹೆಚ್ಚಾಗಿ ಆ ದಿನ ಮಧ್ಯಾಹ್ನ ಊಟಕ್ಕೆ ಬೇಯಿಸಿದ ಬಟಾಟೆಯ ಗೊಜ್ಜು ಒಂದೇ ಇರುತ್ತಿತ್ತು. ನಾವು ‘ಇಂದಿನ ಗೊಜ್ಜು ಎಂದಿಗಿಂತಲೂ ಹೆಚ್ಚು ರುಚಿಕರವಾಗಿದೆ’ ಎಂದು ಹೇಳಿ ಮೊದಲೇ ಉಪವಾಸದಿಂದ ಬಳಲಿರುತ್ತಿದ್ದ ಮಹಿಳೆಯರ ಹೊಟ್ಟೆ ಉರಿಸುವುದಿತ್ತು.
ಭೋಜನದ ನಂತರ ಮಂಟಪಕ್ಕೆ ಬಣ್ಣದ ಕಾಗದಗಳನ್ನು ಹಚ್ಚುವ ಕೆಲಸ. ಇದಕ್ಕೆ ಮೈದಾ ಹಿಟ್ಟಿನ ಅಂಟು ಬಳಸಲಾಗುತ್ತಿತ್ತು. ಇಂತಹ ಅಂಟು ಕೆಲ ದಿನ ಉಳಿದರೂ ದುರ್ವಾಸನೆ ಬರದಂತೆ ಹಾಗೂ ಹಚ್ಚಿದ ಭಾಗವನ್ನು ಜಿರಲೆಗಳು ತಿನ್ನದಂತೆ ಸ್ವಲ್ಪ ಮೈಲುತುತ್ತು ಬೆರೆಸುವ ಉಪಾಯವನ್ನು ನಾನು ಉಜಿರೆ ಹೈಸ್ಕೂಲಿನ ಬುಕ್ ಬೈಂಡಿಂಗ್ ವಿಭಾಗದಲ್ಲಿ ಕಲಿತ ಮೇಲೆ ಇಲ್ಲಿಯೂ ಅನುಷ್ಠಾನಗೊಳಿಸಿದ್ದೆ. ಎರಡು ಬಣ್ಣದ ಹಾಳೆಗಳು ಸೇರುವ ಜಾಗದಲ್ಲಿ ಬಿಳಿ ಕಾಗದವನ್ನು ವಿಶಿಷ್ಟ ರೀತಿಯಲ್ಲಿ ಮಡಚಿ ಕಡೆಗೋಲಿನಾಕಾರವನ್ನು ರೂಪಿಸಲಾಗುತ್ತಿತ್ತು. ನಮ್ಮಣ್ಣ ಹಳೆ ಬ್ಯಾಟರಿಗಳನ್ನುಪಯೋಗಿಸಿ ಮಂಟಪದೊಳಗೆ ಗಣಪ ಕೂರುವ ಜಾಗಕ್ಕೆ focus ಬೀಳುವ ರೀತಿ ಚಿಕ್ಕ ಬಲ್ಬೊಂದನ್ನು ಅಳವಡಿಸುತ್ತಿದ್ದರು. ಟೂತ್ ಪೇಸ್ಟಿನ ಮುಚ್ಚಳ ಬಳಸಿ ತಯಾರಿಸಿದ ಸ್ವಿಚ್ಚೊಂದರಿಂದ ಅದನ್ನು ನಿಯಂತ್ರಿಸಲಾಗುತ್ತಿತ್ತು. ಮನೆಗೆ ವಿದ್ಯುತ್ ಬಂದ ಮೇಲೆ ಬಣ್ಣ ಬಣ್ಣದ ಬಲ್ಬುಗಳನ್ನು ಬಳಸುವ ಪರಿಪಾಠ ಆರಂಭವಾಯಿತು. ಅದರ circuitನಲ್ಲಿ ಟ್ಯೂಬ್ ಲೈಟಿನ starter ಒಂದನ್ನು ಸೇರಿಸಿ ಅವು flicker ಆಗುವಂತೆಯೂ ನಾನು ಮಾಡುತ್ತಿದ್ದೆ. Flickering ಬೇಡವೆನಿಸಿದರೆ ಒಂದು ಸ್ವಿಚ್ಚಿನ ಮೂಲಕ ಆ starter ಬೈಪಾಸ್ ಆಗುವ ವ್ಯವಸ್ಥೆಯೂ ಇರುತ್ತಿತ್ತು.
ಚೌತಿಯ ದಿನ ಬೆಳಗ್ಗೆ ಆಸುಪಾಸಿನ ಮನೆಗಳ ಪುರುಷರೆಲ್ಲ ತರಕಾರಿ ಹೆಚ್ಚುವ ಕೆಲಸದಲ್ಲಿ ಕೈ ಜೋಡಿಸಲು ಬರುತ್ತಿದ್ದರು. ತಡ ಮಾಡಿ ಬಂದವರಿಗೆ ತೆಂಗಿನ ಕಾಯಿಗಳನ್ನು ಒಡೆದು ತುರಿಯುವ ಶ್ರಮದಾಯಕ ಕೆಲಸ! ಯಾವುದೇ ರಾಸಾಯನಿಕಗಳ ಸಂಸರ್ಗವಿಲ್ಲದ ಆ ಕಾಲದ ತರಕಾರಿಗಳನ್ನು ತುಂಡರಿಸಿದಾಗ ಸೂಸುತ್ತಿದ್ದ ಪರಿಮಳ ಈಗ ನೆನಪು ಮಾತ್ರ. ನಾವು ಕಿರಿಯರು ಗಣಪನಿಗೆ ಪ್ರಿಯವಾದ ಗರಿಕೆ ಮತ್ತು ಇತರ ಪತ್ರ ಪುಷ್ಪಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದೆವು. ನಮ್ಮಣ್ಣ ಮುತುವರ್ಜಿ ವಹಿಸಿ ಕುಂಡಗಳಲ್ಲಿ ಬೆಳೆಸಿರುತ್ತಿದ್ದ ವಿವಿಧ ಬಣ್ಣದ ಡೇಲಿಯಾ ಹೂಗಳೂ ಆಗ ಯಥೇಚ್ಛವಾಗಿ ಅರಳಿರುತ್ತಿದ್ದವು. ಇತರರೂ ತಮ್ಮ ಮನೆಗಳಲ್ಲಿ ಅರಳಿದ ವಿವಿಧ ಹೂಗಳನ್ನು ತರುತ್ತಿದ್ದರು.
ನವಿಲುಗರಿಯುಕ್ತ ಅಲಂಕೃತ ಕಿರೀಟವನ್ನು ತಲೆಯ ಮೇಲೆ, ಆತನಿಗಾಗಿಯೇ ಮಾಡಿಸಿದ್ದ ಚಿನ್ನದ ಉಂಗುರವನ್ನು ಕಿರು ಬೆರಳಲ್ಲಿ ಹಾಗೂ ತೊಳೆದು ಶುಭ್ರಗೊಳಿಸಿದ ಇತರ ಚಿನ್ನದ ಆಭರಣಗಳನ್ನು ಕೊರಳಲ್ಲಿ ಧರಿಸಿ ಚಾವಡಿಯಲ್ಲಿದ್ದ ಮೇಜಿನ ಮೇಲೆ ಸಿದ್ಧನಾಗಿ ಕೂತಿರುತ್ತಿದ್ದ ಗಣಪನನ್ನು ಪೂಜೆಗೆ ಮುನ್ನ ಗಂಟೆ ಜಾಗಟೆಗಳ ಘೋಷದೊಂದಿಗೆ ಒಯ್ದು ಮಂಟಪದಲ್ಲಿ ಕೂರಿಸಲಾಗುತ್ತಿತ್ತು. ನಿತ್ಯದ ಕೆಂಪು ಮಡಿಯ ಬದಲು ತಂದೆಯವರು ಆ ದಿನ ಕಡು ನೀಲಿ ಬಣ್ಣದ ಪೀತಾಂಬರ ಉಡುತ್ತಿದ್ದರು. ಪೂಜಾ ವಿಧಿಯನ್ನು ಓದಿ ಹೇಳಲು ಪುರೋಹಿತರಿರುತ್ತಿದ್ದರು. ಗಣಪನ ಪೂಜೆ ಆರಂಭಗೊಂಡು ಕುಶಾಗ್ರಳಿಂದ ವಿಗ್ರಹದ ನೇತ್ರಗಳನ್ನು ಸ್ಪರ್ಷಿಸಿ ಪ್ರಾಣ ಪ್ರತಿಷ್ಠೆ ಮಾಡಿದೊಡನೆ ಗಣಪನು ದಿವ್ಯ ತೇಜಸ್ಸಿನಿಂದ ಕಂಗೊಳಿಸಿದಂತೆ ನಮಗೆ ಭಾಸವಾಗುತ್ತಿತ್ತು. ಮಂಟಪದ ಎಡ ಬದಿಗೆ ಎಣ್ಣೆಯ ಹಾಗೂ ಬಲ ಬದಿಗೆ ತುಪ್ಪದ ಕಾಲುದೀಪವಿರುತ್ತಿತ್ತು. ಅದರಲ್ಲಿ ತುಪ್ಪ ಘನೀಕೃತಗೊಂಡು ಜ್ಯೋತಿ ಆರದಂತೆ ತಡೆಯಲು ವೃತ್ತಾಕಾರದ ತಗಡೊಂದನ್ನು ದೀಪದ ಮೇಲೆ ಅಳವಡಿಸಿ ಅದರ ಮೂಲಕ ಪ್ರತಿಫಲಿತವಾದ ಉಷ್ಣ ತುಪ್ಪವನ್ನು ಕರಗುವಂತೆ ಮಾಡುವ ತಂತ್ರಜ್ಞಾನವನ್ನು ಆಗಲೇ ನಮ್ಮ ಹಿರಿಯರು ಕಂಡುಕೊಂಡಿದ್ದರು. ಪೂಜೆಯ ಭಾಗವಾದ 21 ಆವರ್ತ ಅಥರ್ವಶೀರ್ಷ ಆರಂಭವಾಗುವ ಹೊತ್ತಿಗೆ ಮನೆಯ ಇತರ ಪುರುಷರೂ ಜೊತೆಗೂಡಿ ಆವರ್ತಗಳನ್ನು ಹಂಚಿಕೊಂಡು ಸಮಯ ಉಳಿಸುತ್ತಿದ್ದರು. ಪೂಜೆ ಕೊನೆಯ ಹಂತ ತಲುಪುತ್ತಿದ್ದಂತೆ ಮಂಟಪದ ಮೂರು ಬದಿಗಳಲ್ಲಿ ಉರಿಯುವ ಹಣತೆಗಳನ್ನು ಇರಿಸಿದಾಗ ಗಣಪ ಮತ್ತಷ್ಟು ದಿವ್ಯ ಪ್ರಭೆಯಿಂದ ಬೆಳಗುತ್ತಿದ್ದ. ಮಹಾ ನೈವೇದ್ಯದ ಸಮಯ ಮಹಿಳೆಯರೆಲ್ಲ ಸೇರಿ ‘ಆರೋಗಣೆ ಮಾಡೋ ಗಣ ನಾಯಕ ಅಭಯವ ನೀ ನೀಡೊ. ಮಾಡಿದ ಭಕ್ಷಂಗಳನೆಲ್ಲ ನೋಡೊ ತಡವಿನ್ಯಾತಕೆ ಸೊಂಡಿಲ ನೀಡೋ’ ಎಂಬ ಹಾಡು ಹೇಳುತ್ತಿದ್ದರು. ಮಹಾ ಮಂಗಳಾರತಿಗೆ ಮನೆಯಲ್ಲಿರುವ ಬಾಜಾ ಬಜಂತ್ರಿಗಳೆಲ್ಲ ಮೊಳಗುತ್ತಿದ್ದವು. ಅಕ್ಕ ಪಕ್ಕದ ಮನೆಯವರೂ ತಮ್ಮ ಜಾಗಟೆ ತರುತ್ತಿದ್ದರು. ಕೆಲವೊಮ್ಮೆ ಪುಟ್ಟ ಮಕ್ಕಳು ಜಾಗಟೆ ಬಾರಿಸಲು ಉತ್ಸಾಹ ತೋರಿ ಅದರ ಭಾರ ತಾಳಲಾರದೆ ಕೈ ಸೋತು ಕೆಲವೇ ನಿಮಿಷಗಳಲ್ಲಿ ಅದನ್ನು ಹಿರಿಯರಿಗೆ ಹಸ್ತಾಂತರಿಸುತ್ತಿದ್ದರು. ಚೌತಿಯ ದಿನ ಮಾತ್ರ ಶಂಖದಂತೆ ಊದಲು ಉಪಯೋಗಿಸಲ್ಪಡುತ್ತಿದ್ದ ಸಾರಂಗದ ಕೊಂಬೊಂದು ನಮ್ಮಲ್ಲಿತ್ತು. ಅತಿ ಭಾರದ ದೊಡ್ಡ ರಥಾರತಿಯನ್ನು ಕೂಡ ಅಂದು ಮತ್ತು ನವಾನ್ನ ಪೂಜೆಯಂದು ಮಾತ್ರ ಉಪಯೋಗಿಸುತ್ತಿದ್ದುದು.
ಚೌತಿಯ ಅಡುಗೆಗೆ ಫಜಿರಡ್ಕದ ಹೊಳ್ಳರು ನೇತ್ರಾವತಿ ನದಿಯನ್ನು ದೋಣಿಯಲ್ಲಿ ದಾಟಿ ಬರುತ್ತಿದ್ದರು. ಆನಂಗಳಿ ಮತ್ತು ಪರಾರಿ ‘ವಾಳ್ಯ’ದವರಿಗೆ (ಬೇಸಗೆಯಲ್ಲಿ ಮೃತ್ಯುಂಜಯಾ ನದಿಯ ಕಟ್ಟದ ನೀರು ಹರಿಯುವ ಕಾಲುವೆಯ ಗುಂಟ ಇರುವ ಮನೆಗಳ ಸಾಲು) ಆಮಂತ್ರಣವಿರುತ್ತಿತ್ತು. ದೂರದೂರುಗಳ ಬಂಧುಗಳು ಒಂದಿಬ್ಬರಾದರೂ ಬರುತ್ತಿದ್ದರು. ಮಧ್ಯಾಹ್ನ ಭೋಜನಕ್ಕೆ ಕೂತ ಪುರುಷರಿಗೆ ಕೆಂಪು ಚಂದನದ ತಿಲಕ ಹಚ್ಚುವ ಸಂಪ್ರದಾಯವಿತ್ತು. ಭೋಜನ ಸಮಯದಲ್ಲಿ ಗಣಪತಿಗೆ ಸಂಬಂಧಿಸಿದ ಚೂರ್ಣಿಕೆಗಳನ್ನೇ ಹೇಳಿ ಕೊನೆಗೆ ಗೋವಿಂದ ನಾಮ ಸಂಕೀರ್ತನದ ಬದಲು ಮೋರೇಶ್ವರ ನಾಮ ಸಂಕೀರ್ತನ ಮೋರೆಯಾ ಮೋರೆಯಾ ಅನ್ನುತ್ತಿದ್ದುದು ಚೌತಿ ದಿನದ ವಿಶೇಷಗಳಲ್ಲೊಂದು. ಭೂರಿ ಭೋಜನದೊಂದಿಗೆ ಚೌತಿಯ ಪ್ರಮುಖ ಘಟ್ಟ ಮುಕ್ತಾಯವಾಗುತ್ತಿತ್ತು. ಅಂದು ರಾತ್ರಿಯ ಸಮಯ ಧೂಪದ ಸೊನೆಯಲ್ಲಿ ಅದ್ದಿ ತಯಾರಿಸಿಟ್ಟಿದ್ದ ಕೊಳ್ಳಿಗಳನ್ನು ಉರಿಸಿ ಆನಂದಿಸುತ್ತಿದ್ದೆವು. ಅವು ಉರಿಯುವಾಗ ಧೂಪದ ಆಹ್ಲಾದಕರ ಪರಿಮಳ ಎಲ್ಲೆಡೆ ಪಸರಿಸುತ್ತಿತ್ತು.
ಕೆಲವು ವರ್ಷ ಚೌತಿಯ ದಿನವೇ ಗೌರಿ ಪೂಜೆ ಇರುವುದುಂಟು. ಅಂಥ ಸಂದರ್ಭಗಳಲ್ಲಿ ಮಹಿಳೆಯರ ಕಷ್ಟ ಹೇಳ ತೀರದು. ಉಪವಾಸವನ್ನೂ ಆಚರಿಸಬೇಕು. ಚೌತಿಗೆ ಸಂಬಂಧಪಟ್ಟ ಕೆಲಸಕಾರ್ಯಗಳನ್ನೂ ನಿಭಾಯಿಸಬೇಕು. ವಿವಾಹಿತ ಮಹಿಳೆಯರಿಗೆ ಮತ್ತೂ ಕಷ್ಟ. ಏಕೆಂದರೆ ಮರುದಿನವೂ ಅವರಿಗೆ ಋಷಿ ಪಂಚಮಿಯ ಕಟ್ಟುನಿಟ್ಟಿನ ಉಪವಾಸ!
ಹೆಚ್ಚಿನ ಕಡೆ ಗಣಪನನ್ನು ಒಂದೋ ಚೌತಿಯ ದಿನವೇ ಅಥವಾ ಒಂದು ನಿರ್ದಿಷ್ಟ ದಿನ ವಿಸರ್ಜಿಸಲಾಗುತ್ತದೆ. ಆದರೆ ನಮ್ಮಲ್ಲಿ ವಿಶಿಷ್ಟ ನಿಯಮವೊಂದನ್ನು ಅನುಸರಿಸಲಾಗುತ್ತಿತ್ತು. ಚೌತಿಯ ನಂತರದ ಆದಿತ್ಯವಾರ, ಬುಧವಾರ ಅಥವಾ ಶನಿವಾರಗಳಂದು ಪಂಚಮಿ ಅಥವಾ ಸಪ್ತಮಿ ತಿಥಿ ಇದ್ದು ಚಿತ್ರಾ ನಕ್ಷತ್ರ, ವಿಶಾಖಾ ನಕ್ಷತ್ರ, ಶೂರ್ಪ ಯೋಗ, ಐಂದ್ರ ಯೋಗ, ವ್ಯತೀ ಪಾತ ಯೋಗ, ವೈಧೃತಿ ಯೋಗ ಇವ್ಯಾವುವೂ ಇಲ್ಲದಿದ್ದರೆ ಅಂದು ಇಲ್ಲವಾದರೆ ದಶಮಿಯಂದು ಗಣಪನನ್ನು ವಿಸರ್ಜಿಸುವುದೇ ಆ ನಿಯಮ. ಹೀಗಾಗಿ ಕಮ್ಮಿ ಎಂದರೆ ಎರಡು ದಿನ ಮತ್ತು ಜಾಸ್ತಿ ಎಂದರೆ ಏಳು ದಿನ ಗಣಪ ನಮ್ಮ ಅತಿಥಿ ಆಗಿರುತ್ತಿದ್ದ. ಅಷ್ಟು ದಿನ ಆತನಿಗೆ ಎರಡು ಹೊತ್ತು ಪೂಜೆ, ನಮಗೆ ವೈವಿಧ್ಯಮಯ ಕಜ್ಜಾಯಗಳು ದೊರೆಯುತ್ತಿದ್ದವು. ಚೌತಿಯ ದಿನ ಬರಲಾಗದವರು ಈ ಯಾವುದಾದರೂ ದಿನಗಳಲ್ಲಿ ಬಂದು ಗಣಪನ ದರ್ಶನ ಪಡೆಯುತ್ತಿದ್ದರು. ಈ ಮಧ್ಯೆ ಅನುಕೂಲಕರವಾದ ಒಂದು ದಿನ ನಿತ್ಯದ ಅಷ್ಟೋತ್ತರಶತ ನಾಮಾವಳಿಯ ಬದಲು ದೂರ್ವಾಂಕುರ ಅಥವಾ ಮೋದಕಗಳ ಸಹಸ್ರ ನಾಮಾವಳಿ ಪೂಜೆ ನಡೆಯುತ್ತಿತ್ತು. ಚೌತಿಯ ನಂತರದ ದಿನಗಳ ಪೂಜೆಗೆ ಅಷ್ಟೋತ್ತರ ಅಥವಾ ಸಹಸ್ರನಾಮಾವಳಿಯನ್ನು ಮಾತ್ರ ಪುಸ್ತಕದಿಂದ ಓದಿ ಹೇಳುವ ಕೆಲಸವನ್ನು ಮನೆಯವರೇ ಯಾರಾದರೂ ಮಾಡುತ್ತಿದ್ದರು. ಅಷ್ಟೋತ್ತರನಾಮಾವಳಿಯ ಆರಂಭದ ನಾಮಗಳಾದ ‘ವಿಘ್ನೇಶಾಯ ನಮಃ, ವಿಶ್ವವರದಾಯ ನಮಃ, ಜಗತ್ಪ್ರಭವೇ ನಮಃ, ಹಿರಣ್ಯರೂಪಾಯ ನಮಃ ....’ ಇತ್ಯಾದಿ ಚಿಕ್ಕ ಮಕ್ಕಳಾದ ನಮಗೂ ಉದ್ದೇಶಪೂರ್ವಕವಾಗಿ ಕಲಿಯದೆಯೇ ಕಂಠಪಾಠವಾಗಿರುತ್ತಿದ್ದವು.
ವಿಸರ್ಜನೆಗೆ ನಿಗದಿಯಾದ ದಿನ ಅಪರಾಹ್ನ ಭೋಜನದ ನಂತರ ಬಾಜಾ ಬಜಂತ್ರಿಗಳೊಡನೆ ಗಣಪನನ್ನು ತೋಟದ ದಾರಿಯಾಗಿ ನದಿ ತೀರಕ್ಕೊಯ್ದು ಮೊದಲೇ ಸಿದ್ಧವಾಗಿರಿಸುತ್ತಿದ್ದ ಬಾಳೆ ದಿಂಡಿನ ತೆಪ್ಪದ ಮೇಲೆ ಕೂರಿಸಿ ನದಿಯಲ್ಲಿ ತೇಲಿಬಿಡುವುದೂ ನಮ್ಮಲ್ಲಿದ್ದ ವಿಶಿಷ್ಟ ಪದ್ಧತಿ. ಅಷ್ಟು ದಿನ ಮನೆಯಲ್ಲಿದ್ದ ಆತನೊಡನೆ ಭಾವನಾತ್ಮಕ ಸಂಬಂಧ ಬೆಳೆದಿರುತ್ತಿದ್ದುದರಿಂದ ಆತನನ್ನು ಈ ರೀತಿ ನದಿಯಲ್ಲಿ ತೇಲಿ ಬಿಡಬಾರದೆಂದು ಅರಿವು ಮೂಡದ ಪುಟ್ಟ ಮಕ್ಕಳು ಅಳುವುದೂ ಇತ್ತು. ಆತನನ್ನು ಮರದ ಮಣೆಯಿಂದ ಬೇರ್ಪಡಿಸಿ, ತಲೆಯ ಮೇಲಿನ ಕಿರೀಟವನ್ನು ತೆಗೆದಿರಿಸಿ ತೆಪ್ಪದ ಮೇಲೆ ಕೂರಿಸಿದ ಮೇಲೆ ಪೂಜೆಯ ಸಮಯ ಆತನಿಗೆ ತೊಡಿಸಿದ್ದ ಜನಿವಾರವನ್ನು ಅಲ್ಲಿರುವ ಇನ್ನೂ ಉಪನಯನವಾಗದಿರುವ ಬಾಲಕರ ಪೈಕಿ ಯಾರಾದರೊಬ್ಬರಿಗೆ ಪ್ರಸಾದ ರೂಪವಾಗಿ ನೀಡುವ ಪರಿಪಾಠ ಇತ್ತು. ತೆಪ್ಪದ ಮೇಲೆ ಕೂತ ಗಣಪ ನದಿಯ ಗುಂಟ ಸಾಗುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಪ್ರಾಣಿ ಪಕ್ಷಿಗಳು ಅಪವಿತ್ರಗೊಳಿಸುವ ಅಪಾಯವಿರುವುದರಿಂದ ಆತನನ್ನು ಕಣ್ಣ ನೋಟ ಮೀರಿದ ದೂರದ ವರೆಗೆ ಈ ರೀತಿ ಸಾಗಲು ಬಿಡುವಂತಿರಲಿಲ್ಲ. ನೀರಿನ ಹೊಯ್ಲಿಗೆ ಸ್ವಲ್ಪ ಅಲ್ಲಾಡಿದರೂ ನೀರಲ್ಲಿ ಮುಳುಗುವಂತೆ ಆತನನ್ನು ತೆಪ್ಪದ ಮೇಲೆ ಕೂರಿಸಲಾಗುತ್ತಿತ್ತಾದರೂ ಅನಿವಾರ್ಯ ಪ್ರಸಂಗಗಳಲ್ಲಿ ನದಿ ಮಧ್ಯಕ್ಕೆ ಹೋಗಿ ಪ್ರಯತ್ನ ಪೂರ್ವಕವಾಗಿ ಆತನನ್ನು ಜಲಾಧಿವಾಸಗೊಳಿಸಲು ಸಾಹಸಿ ಯುವಕರು ಸಿದ್ಧವಾಗಿರುತ್ತಿದ್ದರು. ಆತ ನೀರಲ್ಲಿ ಮುಳುಗುತ್ತಲೇ ಅಲ್ಲಿದ್ದವರೆಲ್ಲ ‘ಮೋರೆಯಾ ಮೋರೆಯಾ..’ ಎಂದು ಸಾಮೂಹಿಕವಾಗಿ ಉದ್ಘೋಷಿಸಿ ಭಾರವಾದ ಮನಸ್ಸಿನೊಂದಿಗೆ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಶಂಖವನ್ನೋ, ಜಾಗಟೆಯನ್ನೋ, ತೆಗೆದಿರಿಸಿದ ಮರದ ಕಿರೀಟವನ್ನೋ ಹೊಳೆ ಬದಿಯಲ್ಲೇ ಮರೆತು ಬಿಡುವುದು ಅಪರೂಪವೇನೂ ಆಗಿರಲಿಲ್ಲ. ಮನೆಗೆ ಮರಳಿದೊಡನೆ ಎಲ್ಲರಿಗೂ ಪಂಚಕಜ್ಜಾಯ ವಿತರಣೆಯೊಂದಿಗೆ ಆ ವರ್ಷದ ಚೌತಿಯ ಸಂಭ್ರಮ ಸಂಪನ್ನವಾಗುತ್ತಿತ್ತು. ಮಂಟಪವನ್ನು ಕಳಚಿದ ಮೇಲೆ ಅದಕ್ಕೆ ಹಚ್ಚಿದ್ದ ಬಣ್ಣದ ಕಾಗದಗಳನ್ನು ಕಿತ್ತು ಪುಸ್ತಕಗಳ ಮಧ್ಯೆ ಇರಿಸಿಕೊಂಡು ಅನೇಕ ದಿನಗಳ ವರೆಗೆ ಚೌತಿಯ ನೆನಪನ್ನು ಹಸಿರಾಗಿರಿಸುತ್ತಿದ್ದೆವು. ಹೊಗೆಯಟ್ಟದ ಡಬ್ಬಿಗಳಲ್ಲಿ ಅನೇಕ ದಿನಗಳ ವರೆಗೆ ಅವಿತಿರುತ್ತಿದ್ದ ಚಕ್ಕುಲಿ, ಮೋದಕ, ಪಂಚ ಕಜ್ಜಾಯದ ಉಂಡೆಗಳು ಆ ನೆನಪನ್ನು ಇನ್ನಷ್ಟು ಹಸಿರಾಗಿರಿಸಲು ಸಹಾಯ ಮಾಡುತ್ತಿದ್ದವು!
ಗಣಪನನ್ನು ತೆಪ್ಪದಲ್ಲಿ ಕೂರಿಸಿ ಬೀಳ್ಕೊಡುವ ದೃಶ್ಯವನ್ನು ಇಲ್ಲಿ ನೋಡಬಹುದು.