Saturday, 3 September 2016

ಸಸೇಮಿರಾ

 

ದೀಪ ದೀಪಾಂತರಕ್ಕೆ ಹೋಗಿ
ಎಣ್ಣೆ ಸಮುದ್ರಕ್ಕೆ ಹೋಗಿ
ಬತ್ತಿ ಪರ್ವತಕ್ಕೆ ಹೋಗಿ
ಅಗತ್ಯವಾದ್ರೆ ಇವತ್ತು ಬನ್ನಿ
ಇಲ್ಲವಾದರೆ ನಾಳೆ ಬನ್ನಿ
ರೈಟೋ ರೈಟು ಫೂ...........
(ನೋಡಿ ಎಣ್ಣೆ ಸಮುದ್ರವೂ ಬತ್ತಿ ಪರ್ವತವೂ)


ಎಂದು ಹೇಳಿ ಚಿಮಿಣಿ ದೀಪವಾರಿಸಿದಮೇಲೆ ನಮ್ಮ ಬಾಲ್ಯದ ಕಥಾಕಾಲ ಆರಂಭವಾಗುತ್ತಿತ್ತು. ನಮ್ಮದು ದೊಡ್ಡ  ಕೂಡು ಕುಟುಂಬವಾದ್ದರಿಂದ ಬೇರೆ ಬೇರೆ ಮೂಲಗಳಿಂದ ಬೇರೆ ಬೇರೆ ತರಹದ ಕತೆಗಳನ್ನು ಕೇಳುವ ಸೌಲಭ್ಯ ನಮಗಿತ್ತು.  ನಮ್ಮ ತಂದೆಯವರು ಗಹಗಹಿಸಿ ನಗುವ ರುಂಡಗಳ ಕಥೆ, ಮರದ ಮೇಲೆ ಬೆಳೆಯುವ ಸಿಹಿ ಅಪ್ಪಗಳ ಕಥೆ, ರಾಜ, ಇಲಿ ಮತ್ತು ಟೊಪ್ಪಿಯ ಕಥೆ ಮುಂತಾದವುಗಳನ್ನು ಹೇಳಿದರೆ ತಾಯಿಯವರು  ಕಬ್ಬಿನಮಾಡು, ದೋಸೆಯ ಹೆಂಚು, ಬೆಲ್ಲದ ಗೋಡೆಯ ಮನೆಯೊಳಗೆ ಮರಿ ಇಟ್ಟಿರುವ ಬೆಕ್ಕಿನ ಕಥೆ, ಸಪ್ತಸಾಗರದಾಚೆಯ ದ್ವೀಪದಲ್ಲಿರುವ ಪಚ್ಚೆ ಗಿಳಿಯೊಳಗೆ ಜೀವ ಇರುವ ರಾಕ್ಷಸನ ಕಥೆ, ಗುಬ್ಬಚ್ಚಿಯ ಮೊಟ್ಟೆಗಳನ್ನು ಕದ್ದು ತಿನ್ನುವ ಕಾಗೆಯ ಕಥೆಗಳನ್ನು ಹೇಳುತ್ತಿದ್ದರು.  ನಮ್ಮ ಅಣ್ಣ ಹೇಳುತ್ತಿದ್ದುದು ಖಡ್ಗದ ಒಂದೇ ಏಟಿಗೆ ತೆಂಗಿನ ಕಾಯಿಯನ್ನು ಮೂರು ತುಂಡು ಮಾಡುವ ರಾಜಕುಮಾರನ ಕಥೆ, ಮರದ ಬೀಳಲುಗಳನ್ನು ಹಿಡಿದು ಕಾಡಿನೊಳಗೆ ಸಂಚರಿಸುವ ಸಾಹಸಿಯ  ಕಥೆಗಳನ್ನು. ಅಣ್ಣನ ಮೆಚ್ಚಿನ ಇನ್ನೊಂದು ಕಥೆ ಸಸೇಮಿರಾ. ಉಳಿದೆಲ್ಲ ಕಥೆಗಳ ಅಲ್ಪ ಸ್ವಲ್ಪ ಭಾಗಗಳು ಸ್ಮೃತಿಪಟಲದಲ್ಲಿದ್ದರೂ ಈ ಸಸೇಮಿರಾ ಕಥೆ ನನಗೆ ಪೂರ್ತಿ ಮರೆತೇ ಹೋಗಿತ್ತು. ಕೆಲ ದಿನ ಹಿಂದೆ ಫೇಸ್ ಬುಕ್ ಮಿತ್ರ ಸುದರ್ಶನ ರೆಡ್ಡಿ ಅವರು ಯಾವುದೋ ವಾಕ್ಯದಲ್ಲಿ ಕೆಲವೆಡೆ ಬಿಲ್ ಕುಲ್ ಅಥವಾ ಎಷ್ಟುಮಾತ್ರಕ್ಕೂ ಎಂಬರ್ಥದಲ್ಲಿ ಬಳಸುವ ಸಸೇಮಿರಾ ಶಬ್ದದ ಉಲ್ಲೇಖ ಮಾಡಿದಾಗ ಈ ಕಥೆಯ ಬಗ್ಗೆ ಮತ್ತೆ ಕುತೂಹಲ ಉಂಟಾಯಿತು.  ಬೇರೊಂದು ಪ್ರದೇಶದಲ್ಲಿ ಸಸೇಮಿರಾ ಎಂಬ ಶಬ್ದ ಇದೆ ಅನ್ನುವಾಗ ಅಂತರ್ಜಾಲದಲ್ಲಿ ಇದರ ಬಗ್ಗೆ ಏನಾದರೂ ಸುಳಿವು ಖಂಡಿತ ಇರಬಹುದು ಎಂದೆನಿಸಿ ಜಾಲಾಡಿದಾಗ ಆಶ್ಚರ್ಯ ಕಾದಿತ್ತು.  ಸಸೇಮಿರಾ ಶಬ್ದ ಮಾತ್ರವಲ್ಲ, ಆ ಕಥೆಯ ವಿವಿಧ ರೂಪಗಳ ವಿವರಗಳೂ ಸಿಕ್ಕಿದವು!  ಕೆಲವು ಮೂಲಗಳು ಇದು ಮೂವತ್ತೆರಡು ಗೊಂಬೆಗಳ ಕಥೆಗಳಲ್ಲೊಂದು ಎಂದು ಹೇಳಿದರೆ ಇನ್ನು ಕೆಲವು ಭೋಜ ರಾಜ ಮತ್ತು ಕಾಳಿದಾಸನಿಗೆ ಸಂಬಂಧಿಸಿದ್ದು ಎಂದು ಉಲ್ಲೇಖಿಸಿವೆ. ಪದ್ಯರೂಪದ ಬಾಲರಾಮನ ಸಾಂಗತ್ಯದಲ್ಲೂ ಈ ಕಥೆಯ ಅಂಶ ಕಂಡು ಬಂತು.  ಆದರೆ ನಮ್ಮ ಮನೆಗೆ ಇದು ಯಾವ ಮೂಲದಿಂದ ಬಂದಿತ್ತು ಎಂದು ತಿಳಿದಿಲ್ಲ. ಸಂಸ್ಕೃತದ ಕಥಾಸರಿತ್ಸಾಗರ ಅಥವಾ ಹಿತೋಪದೇಶದಿಂದ ಬಂದಿರುವ ಸಾಧ್ಯತೆ ಇದೆ.
**********



     ಒಂದಾನೊಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ.  ಅವನಿಗೊಬ್ಬಳು ರಾಣಿಯಿದ್ದಳು.  ಒಬ್ಬ ರಾಜ ಕುಮಾರನೂ ಇದ್ದ.  ಆ ರಾಜನ ಆಸ್ಥಾನದಲ್ಲಿ ಬಲು ಬುದ್ಧಿಶಾಲಿಯಾದ ಬ್ರಾಹ್ಮಣನೊಬ್ಬನಿದ್ದ.  ಕಣ್ಣಿಗೆ ಕಾಣಿಸದ ವಿಷಯಗಳನ್ನೂ ಕರಾರುವಾಕ್ಕಾಗಿ ಹೇಳುವ ಅಲೌಕಿಕ ಸಾಮರ್ಥ್ಯ ಅವನಲ್ಲಿತ್ತು.  ತನ್ನ ಈ ವಿದ್ಯೆಯಿಂದ ಅವನು ರಾಜನನ್ನು ರಂಜಿಸಿ ಯಥೇಚ್ಛ ಬಹುಮಾನಗಳನ್ನು ಗಳಿಸುತ್ತಿದ್ದ.  ಹೀಗಿರುವಾಗ ಓರ್ವ ಚಿತ್ರಕಾರನು ಆ ರಾಜನ ಆಸ್ಥಾನಕ್ಕೆ ಬಂದು ತಾನು ಬೇರೆ ಬೇರೆ ದೇಶಗಳಲ್ಲಿ ಚಿತ್ರಿಸಿದ ಅನೇಕ ರಾಜಕುಮಾರಿಯರ ಚಿತ್ರಗಳನ್ನು ತೋರಿಸಿದ.  ರಾಜನಿಗೆ ಆ ಚಿತ್ರಕಾರನ ಮೇಲೆ ಗೌರವ ಮೂಡಿ ಮಹಾರಾಣಿಯ ಚಿತ್ರವೊಂದನ್ನು ರಚಿಸುವಂತೆ ಕೇಳಿಕೊಂಡ.  ಅದಕ್ಕೊಪ್ಪಿದ ಚಿತ್ರಕಾರನು ಕೆಲವೇ ದಿನಗಳಲ್ಲಿ ಮಹಾರಾಣಿಯ ಅತಿ ಸುಂದರ ಚಿತ್ರ ರಚಿಸಿ ರಾಜನಿಗೆ ಅರ್ಪಿಸಿದ.  ಆ ಕಲಾವಿದನ ಕಲೆಯ ಪರಿಚಯ ಎಲ್ಲರಿಗೂ ಆಗಲಿ ಎಂಬ ಉದ್ದೇಶದಿಂದ ರಾಜನು ಆ ಚಿತ್ರವನ್ನು ರಾಜಸಭೆಯಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಿದ.  ಎಲ್ಲರೂ ಆ ಚಿತ್ರವನ್ನು ಮೆಚ್ಚಿ ಹೊಗಳಿದರೂ ಬ್ರಾಹ್ಮಣನು ಮಾತ್ರ ಆ ಚಿತ್ರದಲ್ಲಿ ಏನೋ ಕೊರತೆ ಇರುವುದಾಗಿ ಹೇಳಿದ. ಅದೇನು ಕೊರತೆ ಎಂದು ತಿಳಿಸುವಂತೆ ರಾಜ ಒತ್ತಾಯಿಸಿದಾಗ ರಾಣಿಯ ನಾಭಿ ಪ್ರದೇಶದಲ್ಲಿರುವ ಕಿರು ಮಚ್ಚೆಯೊಂದು ಮೂಡಿ ಬರದೆ ಇರುವುದರಿಂದ ಆ ಚಿತ್ರ ಅಪೂರ್ಣ ಎಂದು ಬ್ರಾಹ್ಮಣ ಹೇಳಿದ.  ರಾಜನು ಇದಕ್ಕೆ ಅಪಾರ್ಥ ಕಲ್ಪಿಸಿ ಆ ಬ್ರಾಹ್ಮಣನನ್ನು ತಕ್ಷಣ ಒಯ್ದು ಶಿರಚ್ಛೇದ ಮಾಡುವಂತೆ ಮಂತ್ರಿಗೆ ಆಜ್ಞಾಪಿಸಿದ.  ಈ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಮಂತ್ರಿಯು ಪರಿಪರಿಯಾಗಿ  ಬೇಡಿಕೊಂಡರೂ ರಾಜ ಹಿಡಿದ ಪಟ್ಟು ಬಿಡಲಿಲ್ಲ.  ಬ್ರಾಹ್ಮಣನ ಅಪೂರ್ವ ಶಕ್ತಿಯ ಪರಿಚಯವಿದ್ದ ಮಂತ್ರಿಯು ಒಂದಲ್ಲ ಒಂದು ದಿನ  ರಾಜನಿಗೆ ತನ್ನ ತಪ್ಪಿನ ಅರಿವಾಗಬಹುದೆಂದೆಣಿಸಿ  ಬ್ರಾಹ್ಮಣನನ್ನೊಯ್ದು ತನ್ನ ಮನೆಯ ನೆಲಮಾಳಿಗೆಯಲ್ಲಿರಿಸಿದ.   ಆಜ್ಞೆಯನ್ನು ಶಿರಸಾವಹಿಸಲಾಗಿದೆ ಎಂದು ರಾಜನಿಗೆ ಹೇಳಿದ.

     ಕೆಲ ಕಾಲದ ನಂತರ ರಾಜಕುಮಾರನು ಕುದುರೆಯೇರಿ ಬೇಟೆಗೆಂದು ಕಾಡಿಗೆ ಹೋದ.  ಒಂದು ಸುಂದರವಾದ ಕೃಷ್ಣಮೃಗವನ್ನು ಬೆನ್ನಟ್ಟುತ್ತಾ ಬಲು ದೂರ ಸಾಗಿದ.  ಮೃಗವು ಕಾಡಿನಲ್ಲಿ ಎಲ್ಲೋ ಮಾಯವಾಯಿತು. ಕುದುರೆಯನ್ನು ಮರಕ್ಕೆ ಕಟ್ಟಿ ದಣಿವಾರಿಸಲೆಂದು ಪಕ್ಕದಲ್ಲಿದ್ದ ಕೊಳದಿಂದ ನೀರು ಕುಡಿಯಲೆಂದು ಎರಡು ಹೆಜ್ಜೆಯಿರಿಸುವಷ್ಟರಲ್ಲಿ ಎದುರಿಗೆ ಭಯಂಕರವಾದ ಹುಲಿಯೊಂದು ಗೋಚರಿಸಿತು. ಹುಲಿಯನ್ನು ಕಂಡು ಬೆದರಿದ ಕುದುರೆಯು ಕಟ್ಟು ಬಿಡಿಸಿಕೊಂಡು ನಗರದತ್ತ ಓಡಿತು. ಭಯವಿಹ್ವಲನಾದ ರಾಜಕುಮಾರನು ರಕ್ಷಣೆಗಾಗಿ ಅಲ್ಲೇ ಇದ್ದ ಮರವೊಂದನ್ನೇರತೊಡಗಿದ. ಆ ಮರದ ಮೇಲೆ ಮೊದಲೇ ಕರಡಿಯೊಂದು ಏರಿ ಕುಳಿತಿತ್ತು. ಅದನ್ನು ಕಂಡ ರಾಜಕುಮಾರನ ಕೈ ಕಾಲುಗಳು ನಡುಗತೊಡಗಿದವು. ಆಗ ಆ ಕರಡಿಯು "ಎಲೈ ರಾಜಕುಮಾರನೇ, ನೀನು ನನ್ನ ರಕ್ಷಣೆ ಕೋರಿ ಬಂದಿದ್ದಿಯಾ.  ಆದ್ದರಿಂದ ನಾನು ನಿನಗೇನೂ ಹಾನಿ ಮಾಡೆನು.  ಧೈರ್ಯವಾಗಿ ಮೇಲೆ ಬಾ" ಎಂದಿತು.  ಮೇಲೆ ಬಂದ ರಾಜಕುಮಾರನನ್ನು ಪಕ್ಕದಲ್ಲಿ ಕೂರಿಸಿಕೊಂಡಿತು.  ತುಂಬಾ ದಣಿದಿದ್ದ ರಾಜಕುಮಾರನಿಗೆ ನಿದ್ರೆ ಆವರಿಸಿದಾಗ ಕರಡಿಯು ಆತನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿತು.  ಆಗ ಕೆಳಗಿದ್ದ ಹುಲಿಯು " ಎಲೈ ಕರಡಿಯೇ,  ವನ್ಯಜೀವಿಗಳ ಶತ್ರುವಾದ ಮಾನವನೋರ್ವನಿಗೆ ಏಕೆ ರಕ್ಷಣೆ ಕೊಟ್ಟಿರುವೆ. ಇಂದಲ್ಲ ನಾಳೆ ಅವನು ತನ್ನ ಸೈನ್ಯದೊಂದಿಗೆ ಬಂದು ನಮ್ಮಿಬ್ಬರನ್ನೂ ಕೊಲ್ಲದೆ ಇರಲಾರ.  ನೀನು ಆತನನ್ನು ಕೆಳಗೆ ತಳ್ಳು.  ನಾನು ನನ್ನ ಹಸಿವೆಯನ್ನು ನೀಗಿಸಿಕೊಂಡು ನನ್ನ ಮನೆಗೆ ಹೋಗುತ್ತೇನೆ.  ನೀನೂ ಸುಖವಾಗಿ ನಿನ್ನ ಕುಟುಂಬದೊಂದಿಗೆ ಜೀವಿಸಬಹುದು" ಎಂದಿತು. ಆಗ ಕರಡಿಯು " ರಕ್ಷಣೆ ಕೋರಿ ಬಂದ ಯಾರಿಗೇ ಆಗಲಿ ಮೋಸ ಮಾಡುವುದು ತರವಲ್ಲ.  ನೀನು ಸುಮ್ಮನೆ ಇಲ್ಲಿಂದ ಹೊರಟು ಹೋಗು" ಎಂದಿತು. ಕೊಂಚ ಹೊತ್ತಿನಲ್ಲಿ ರಾಜಕುಮಾರನಿಗೆ ಎಚ್ಚರವಾಯಿತು.  ಆಗ ಕರಡಿಯು" ಈಗ ನಾನು ವಿಶ್ರಾಂತಿ ಪಡೆಯುತ್ತೇನೆ.  ನೀನು ಕಾವಲಿರು" ಎಂದು ಹೇಳಿ ಕೊಂಬೆಯೊಂದರ ಮೇಲೆ ನಿದ್ರಿಸಿತು.  ಅಲ್ಲೇ ಅಡ್ಡಾಡಿಕೊಂಡಿದ್ದ ಹುಲಿಯು ಇದನ್ನು ಗಮನಿಸಿ " ಎಲೈ ಮನುಜನೇ,  ನಿನ್ನ ರಕ್ಷಕನೆಂದು ನೀನು ತಿಳಿದುಕೊಂಡಿರುವುದು ಹರಿತವಾದ ನಖಗಳುಳ್ಳ ಕ್ರೂರ ಮೃಗ.  ನಿದ್ರೆಯಿಂದ ಎಚ್ಚರವಾದೊಡನೆ ಅದು ನಿನ್ನನ್ನು ಭಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ.  ನಾನು ಹೇಳಿದಂತೆ ಮಾಡು.  ಅದನ್ನು ಕೆಳಗೆ ತಳ್ಳಿ ಬಿಡು. ಹೊಟ್ಟೆ ತುಂಬಿಸಿಕೊಂಡು ನಾನು ಹೊರಟು ಹೋಗುತ್ತೇನೆ.  ನೀನೂ ಸುಖವಾಗಿ ಊರು ಸೇರಬಹುದು" ಎಂದಿತು. ರಾಜಕುಮಾರನಿಗೆ ಇದು ಹೌದೆನ್ನಿಸಿತು.  ಕಾಲಿನಿಂದ ಕರಡಿಯನ್ನು ತಳ್ಳಿ ಬಿಟ್ಟ.  ಆದರೆ ಕರಡಿಯು ಟೊಂಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡೇ ಮಲಗಿದ್ದುದರಿಂದ ಕೆಳಗೆ ಬೀಳಲಿಲ್ಲ.  ಇದನ್ನು ಕಂಡ ರಾಜಕುಮಾರನ ಜಂಘಾಬಲವೇ ಉಡುಗಿ ಹೋಯಿತು.  ಕರಡಿಯು ತನ್ನನ್ನು ಸುಮ್ಮನೆ ಬಿಡಲಾರದು ಅಂದುಕೊಂಡ.  ಆದರೆ ಕರಡಿಯು"ಹುಲು ಮಾನವನೇ,  ನೀನು ಮಿತ್ರದ್ರೋಹಗೈದರೂ ಶರಣುಕೋರಿ ಬಂದ ನಿನಗೆ ನಾನೇನೂ ಕೇಡುಂಟುಮಾಡೆನು.  ಆದರೆ ಮಾಡಿದುದರ ಫಲವನ್ನುಣ್ಣಲೇ ಬೇಕು.  ಹೀಗಾಗಿ ಇನ್ನು ಮುಂದೆ  ಸಸೇಮಿರಾ ಎಂದು ಉಚ್ಚರಿಸುತ್ತಾ ನೀನು ಊರೂರು ಅಲೆಯುವಂತಾಗಲಿ ಎಂದು ನಿನ್ನನ್ನು ಶಪಿಸುತ್ತೇನೆ. ಈ ಅಕ್ಷರಗಳ ರಹಸ್ಯವನ್ನು ಯಾರಾದರೂ ಭೇದಿಸಿದಾಗಲೇ ನಿನಗೆ ಇದರಿಂದ ಮುಕ್ತಿ" ಎಂದು ಹೇಳಿ ಚಿಕ್ಕ ಟೊಂಗೆಯೊಂದರಿಂದ ಆತನ ನಾಲಗೆಯ ಮೇಲೆ ಸಸೇಮಿರಾ ಎಂದು ಬರೆದು  ಮರದಿಂದಿಳಿದು ಹೊರಟು ಹೋಯಿತು.  ತಡ ರಾತ್ರಿಯಾಗಿದ್ದುದರಿಂದ ಹುಲಿ ಮೊದಲೇ ಹೊರಟು ಹೋಗಿತ್ತು.  ದಿಕ್ಕುಗಾಣದ ರಾಜಕುಮಾರನೂ ಮರದಿಂದಿಳಿದು  ಸಸೇಮಿರಾ ಸಸೇಮಿರಾ ಎನ್ನುತ್ತಾ ಊರೂರು ತಿರುಗತೊಡಗಿದನು.  ಯಾರು ಏನು ಕೇಳಿದರೂ ಸಸೇಮಿರಾ ಎಂದಷ್ಟೇ ಅನ್ನುತ್ತಿದ್ದನು.

     ಇತ್ತ ಕುದುರೆಯೊಂದೇ ಹಿಂತಿರುಗಿದುದರಿಂದ ಅರಮನೆಯಲ್ಲಿ  ದುಃಖದ ಛಾಯೆ ಆವರಿಸಿತು.  ರಾಜಕುಮಾರನನ್ನು ಹುಡುಕಲು ನಾಲ್ಕೂ ದಿಕ್ಕುಗಳಿಗೆ ಭಟರನ್ನು ಅಟ್ಟಲಾಯಿತು.  ಬಹಳ ಹುಡುಕಾಡಿದ ಮೇಲೆ ಸಸೇಮಿರಾ ಅನ್ನುತ್ತಾ  ಓಡಾಡುತ್ತಿದ್ದ ರಾಜಕುಮಾರ ಯಾವುದೋ ಹಳ್ಳಿಯಲ್ಲಿ ಸಿಕ್ಕಿದ.  ಆತನನ್ನು ಅರಮನೆಗೆ ಕರೆತರಲಾಯಿತು.  ಆದರೇನು ಪ್ರಯೋಜನ.  ಆತನಿಗೆ ತಾನು ಯಾರೆಂಬುದೇ ಗೊತ್ತಿರಲಿಲ್ಲ.  ಸಸೇಮಿರಾ ಎಂಬುದನ್ನು ಬಿಟ್ಟರೆ ಬೇರೆ ಮಾತೂ ಹೊರಡುತ್ತಿರಲಿಲ್ಲ.  ರಾಜಕುಮಾರನನ್ನು ಪೂರ್ವಸ್ಥಿತಿಗೆ ತಂದವರಿಗೆ ಅರ್ಧ ರಾಜ್ಯ ಕೊಡುವುದಾಗಿ ರಾಜ ಡಂಗುರ ಹೊಡೆಸಿದ. ಮಂತ್ರಿಯ ಮನೆಯಲ್ಲಿದ್ದ ಬ್ರಾಹ್ಮಣನಿಗೂ ಈ ವಿಷಯ ತಿಳಿಯಿತು.  ತಾನು ಇದನ್ನು ಸರಿಪಡಿಸುವುದಾಗಿ ಹೇಳಿದ.  ಆದರೆ ಬ್ರಾಹ್ಮಣ ತನ್ನ ಮನೆಯಲ್ಲಿದ್ದಾನೆ ಎಂದು ಮಂತ್ರಿ ರಾಜನಲ್ಲಿ ಹೇಳುವಂತಿರಲಿಲ್ಲ.  ಹೀಗಾಗಿ ಎಂತಹ ಸಮಸ್ಯೆಗಳಿಗೂ ಸಮಾಧಾನ ಹುಡುಕುವ ಸಾಮರ್ಥ್ಯ ಉಳ್ಳ ಸ್ತ್ರೀಯೋರ್ವಳು ತನ್ನ ಮನೆಯಲ್ಲಿರುವಳೆಂದೂ,  ಆಕೆ ನಿಶ್ಚಿತವಾಗಿಯೂ ರಾಜಕುಮಾರನನ್ನು ಗುಣಪಡಿಸಬಲ್ಲಳೆಂದೂ ರಾಜನಿಗೆ ಹೇಳಿದ.  ಆಕೆ ಪುರುಷರ ಮುಂದೆ  ಕಾಣಿಸಿಕೊಳ್ಳುವುದಿಲ್ಲವಾದ್ದರಿಂದ ತೆರೆಯ ಹಿಂದೆ ಇರುತ್ತಾಳೆಂಬ ಷರತ್ತನ್ನೂ ವಿಧಿಸಿದ.  ಒಪ್ಪಿದ ರಾಜನು ಸಸೇಮಿರಾ ಸಸೇಮಿರಾ ಅನ್ನುತ್ತಿದ್ದ ರಾಜಕುಮಾರನನ್ನು ಕರೆದುಕೊಂಡು ಮಂತ್ರಿಯ ಮನೆಗೆ ಹೋದ.  ತೆರೆಯ ಹಿಂದಿದ್ದ ಬ್ರಾಹ್ಮಣನು ಸ್ತ್ರೀ ಕಂಠದಲ್ಲಿ  "ದ್ಭಾವ ತೋರಿ ಆಶ್ರಯ ನೀಡಿ ಗೆಲ್ಲ ಮೇಲೆ ಮಲಗಿದವನನ್ನು ವಂಚಿಸುವುದರಲ್ಲಿ ಯಾವ ಪೌರುಷವೂ ಇಲ್ಲ." ಎಂದು ಹೇಳಿದ.  ಆಗ ರಾಜಕುಮಾರನು ಮೊದಲ ಅಕ್ಷರವನ್ನು ತ್ಯಜಿಸಿ ಸಸೇಮಿರಾ ಬದಲಿಗೆ ಸೇಮಿರಾ ಸೇಮಿರಾ ಎಂದು ಹೇಳತೊಡಗಿದ.  ಬ್ರಾಹ್ಮಣನು "ಸೇತುವಿಗೆ ಹೋಗು, ಗಂಗಾ ಸಾಗರ ಸಂಗಮದಲ್ಲಿ ಸ್ನಾನ ಮಾಡು.  ಬ್ರಹ್ಮಹತ್ಯೆಯಂಥ ಮಹಾ ಪಾಪಗಳು ನಾಶ ಆದಾವು.  ಆದರೆ ಮಿತ್ರದ್ರೋಹದ ದೋಷ ನಿವಾರಣೆ ಆಗದು" ಅಂದ.  ಕೂಡಲೇ ರಾಜಕುಮಾರನು ಎರಡು ಅಕ್ಷರಗಳನ್ನು ಬಿಟ್ಟು ಮಿರಾ ಮಿರಾ  ಅನ್ನತೊಡಗಿದ.  ಮುಂದೆ "ಮಿತ್ರದ್ರೋಹಿ, ಕೃತಘ್ನ ಮತ್ತು ವಿಶ್ವಾಸಘಾತಕ ಈ ಮೂವರಿಗೂ ರೌರವ ನರಕ ಕಟ್ಟಿಟ್ಟದ್ದು" ಎಂದು ಬ್ರಾಹ್ಮಣ ಹೇಳಿದೊಡನೆ ರಾಜಕುಮಾರ ರಾ ರಾ ಅನ್ನತೊಡಗಿದ.  ಕೊನೆಗೆ ಬ್ರಾಹ್ಮಣನು "ರಾಜನೆ,  ನಿನ್ನ ಪುತ್ರನ ಒಳಿತನ್ನು ಬಯಸುವಿಯಾದರೆ ಸತ್ಕಾರ್ಯಗಳನ್ನು ಮಾಡು, ಬ್ರಾಹ್ಮಣರನ್ನು ಗೌರವಿಸು,  ದೇವತೆಗಳನ್ನು ಆರಾಧಿಸು" ಎಂದೊಡನೆ ರಾಜಕುಮಾರನು ಮತ್ತೆ ಮೊದಲಿನಂತಾದ.  ಆಗ ಮಂತ್ರಿಯು ತೆರೆಯನ್ನು ಸರಿಸಿದಾಗ ಬ್ರಾಹ್ಮಣನು ಹೊರಗೆ ಬಂದು ರಾಜನಿಗೆ ವಂದಿಸಿದ.  "ನಿನಗೆ ಇದೆಲ್ಲ ಹೇಗೆ ಗೊತ್ತಾಯಿತು" ಎಂದು ರಾಜ ಕೇಳಿದಾಗ "ರಾಣಿಯ ಮಚ್ಚೆಯ ಬಗ್ಗೆ ಹೇಗೆ ಗೊತ್ತಾಯಿತೋ ಅದೇ ಶಕ್ತಿಯಿಂದ ನಿನ್ನ  ರಾಜಕುಮಾರನ  ಕುಕಾರ್ಯದ ಬಗ್ಗೆಯೂ ಗೊತ್ತಾಯಿತು" ಅಂದ.  ರಾಜನಿಗೆ ತನ್ನ ತಪ್ಪಿನ ಅರಿವಾಯಿತು.  ಮತ್ತೆ ಬ್ರಾಹ್ಮಣನನ್ನು ಸಕಲ ಮರ್ಯಾದೆಗಳೊಂದಿಗೆ ಆಸ್ಥಾನಕ್ಕೆ ಕರೆಸಿಕೊಂಡ.  ಸುಖ ಸಮೃದ್ಧಿಗಳನ್ನು ಹೊಂದಿ ಅನೇಕ ವರ್ಷಗಳ ಕಾಲ ರಾಜ್ಯವಾಳಿದ.
**********

ನಮ್ಮಣ್ಣ ಹೇಳುತ್ತಿದ್ದ ಸಸೇಮಿರಾ ಕಥೆ ಹೀಗಿತ್ತು.  ಕೇಳಿದ ನಿಮಗೆ ಸಿಪ್ಪೆ.  ಹೇಳಿದ ನನಗೆ ಬಾಳೆಹಣ್ಣು!
-------

ಶ್ರೀವತ್ಸ ಜೋಷಿ 11-9-2016ರ ವಿಶ್ವವಾಣಿ ಪತ್ರಿಕೆಯ ತಿಳಿರುತೋರಣ ಅಂಕಣದಲ್ಲಿ  ಇದನ್ನು ಅಳವಡಿಸಿಕೊಂಡಿದ್ದು ಅವರ ಧ್ವನಿಯಲ್ಲಿರುವ  ಕಥೆಯ ಶ್ರಾವ್ಯ ರೂಪ ಇಲ್ಲಿ ಆಲಿಸಬಹುದು.