Tuesday 12 July 2016

ಪಿ.ಬಿ. ಎಂಬ ಕಂಠಕೆ ಬೇರಾರು ಸಾಟಿಯೇ


     ಇಂದು ಮಿತ್ರರೋರ್ವರು ನಿಮ್ಮಲ್ಲಿ ತಾರೆ ಸಾವಿರ ಎಂಬ ತಾಯಿಯನ್ನು ಕುರಿತ ಹಾಡು ಇದೆಯೇ ಎಂದು ವಿಚಾರಿಸಿದರು. ನನ್ನಲ್ಲಿ ಇಲ್ಲ, ನೆಟ್ಟಲ್ಲಿ ಹುಡುಕಿದರೆ ಸಿಗಬಹುದು ಎಂದೆ.  ಆದರೆ ನೆಟ್ಟಲ್ಲೂ ಸುಲಭದಲ್ಲಿ ಸಿಗಲಿಲ್ಲ.  ಆದರೂ ಪಟ್ಟು ಬಿಡದೆ ಜಾಲಾಡಿದಾಗ ಎಲೆಮರೆಯಲ್ಲಿ ಹಾಯಾಗಿದ್ದ ಹಣ್ಣಿನಂತೆ ಒಂದು ಕಡೆ ಸಿಕ್ಕಿಯೇ ಬಿಟ್ಟಿತು.  ಅದನ್ನು ಇಳಿಸಿಕೊಂಡು ಪರಿಷ್ಕರಿಸಿ ಆಲಿಸಿದಾಗ ಅದರಲ್ಲಿನ ಸತ್ಯಂ ಅವರ ಸಂಗೀತ, ಜಯಗೋಪಾಲ್ ಅವರ ಸಾಹಿತ್ಯ ಮತ್ತು ಪಿ.ಬಿ.ಎಸ್   ಧ್ವನಿ ಮಾಧುರ್ಯ ಆಹಾ! ಅನ್ನುವಂತೆ ಮಾಡಿದವು. ಜಯಗೋಪಾಲ್ ಅವರು ತಮ್ಮ ತಾಯಿ ನಿಧನರಾದ ಸಂದರ್ಭದಲ್ಲಿ ರಚಿಸಿದ್ದ ಈ ಕವಿತೆಯನ್ನು ನಂತರ   1968ರಲ್ಲಿ ಬಿಡುಗಡೆಯಾದ ಮಮತೆ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಯಿತಂತೆ. ನಾನೂ ಅನೇಕ ವರ್ಷಗಳಿಂದ ಕೇಳಿರದಿದ್ದ, ಹಳೆಯ ರೇಡಿಯೋ ದಿನಗಳನ್ನು ನೆನಪಿಸಿದ, ಯಮನ್ ಕಲ್ಯಾಣ್ ರಾಗ ಛಾಯೆಯ ಈ ಹಾಡನ್ನು ನಿಮ್ಮೊಡನೆಯೂ ಯಾಕೆ ಹಂಚಿಕೊಳ್ಳಬಾರದು ಎನಿಸಿ ಕಾರ್ಯಪ್ರವೃತ್ತನಾದೆ.  ಆಲಿಸಿ, ಆನಂದಿಸಿ.  ಆಲಿಸಿದಾಗ ಸತ್ಯಂ ಅವರದೇ ಸಂಗೀತ ನಿರ್ದೇಶನದಲ್ಲಿ ಪಿ.ಬಿ.ಎಸ್ ಮತ್ತು ರಾಜ್ ಒಟ್ಟಿಗೆ ಹಾಡಿದ್ದ ಕೆರಳಿದ ಸಿಂಹ ಚಿತ್ರದ ಅಮ್ಮಾ ನೀನು ನಮಗಾಗಿ ಹಾಡು ನೆನಪಾಗುತ್ತದೆಯೇ ನೋಡಿ.   ಮಿತ ವಾಲ್ಯೂಮ್ ಇಟ್ಟುಕೊಂಡು ಹೆಡ್ ಫೋನ್ ಬಳಸಿದರೆ  ಶ್ರವಣ ಸುಖ  ಹೆಚ್ಚು.


     ತಮಗೆ ಅನುಕೂಲವಾದ ಎರಡೂವರೆ ಕಟ್ಟೆಯ ಶ್ರುತಿಯಲ್ಲಿ ಪಿ.ಬಿ.ಶ್ರೀನಿವಾಸ್ ಅವರು ಈ ಹಾಡನ್ನು ಬಲು  ಸುಲಲಿತವಾಗಿ ಹಾಡಿದ್ದಾರೆ.  ಹಾಗಾಗಿ ಕೇಳಲು ತುಂಬಾ ಹಿತವೆನಿಸುತ್ತದೆ.   ಗಾಯಕರು ಕಷ್ಟ ಪಟ್ಟು ಹಾಡಿದ್ದಾರೆ ಎನಿಸುವ ಹಾಡುಗಳನ್ನು ಆಲಿಸುವಾಗ ಇಂತಹ ಅನುಭವ ಆಗುವುದಿಲ್ಲ.  ಪಿ.ಬಿ.ಎಸ್ ಅವರ ವಿಶೇಷತೆಯಾದ ಪ್ರಯತ್ನಪೂರ್ವಕವಾಗಿ ತುರುಕಿದವು ಎನ್ನಿಸದ  ಸುಂದರವಾದ ಮುರ್ಕಿಗಳು ಅಥವಾ ಕಿರು ತಿರುವುಗಳು ಈ ಹಾಡಲ್ಲೂ ಅಲ್ಲಲ್ಲಿ ಇವೆ.   ಮಾತೇ......  , ದೇವತೇ........ ಮುಂತಾದಲ್ಲಿ ಪಂಚಮದಲ್ಲಿ ದೀರ್ಘ ಕಾಲ ನಿಲ್ಲುವ noteಗಳ ಶ್ರುತಿ ಶುದ್ಧತೆ ಅಪ್ರತಿಮ.  70 ರ ದಶಕದ ನಂತರ ಹೆಚ್ಚು ಚಾಲ್ತಿಗೆ ಬಂದ ಅನವಶ್ಯಕ vibrato (ಸ್ವರ ನಡುಗಿಸುವುದು) ಇಲ್ಲಿಲ್ಲ.  ಸಿತಾರ್, ಗ್ರೂಪ್ ವಯಲಿನ್ಸ್, ಡಬಲ್ ಬೇಸ್, ಚೇಲೊ ಮತ್ತು ತನಗೆ ಅತಿ ಪ್ರಿಯವಾದ ಢೋಲಕ್ ಬಳಸಿದ ಸತ್ಯಂ ಅವರ ಸಂಗೀತ ಹಾಡಿನ ಭಾವನೆಗೆ ಸರಿ ಹೊಂದುತ್ತದೆ.  ಶಂಕರ್ ಜೈಕಿಶನ್  ಅಭಿಮಾನಿಗಳಾದ ಸತ್ಯಂ ಅವರಂತೆಯೇ counter melody ಅಂದರೆ ಕೆಲವು ವಾದ್ಯಗಳು ಒಂದು tune ನುಡಿಸುವಾಗ ಹಿಂದಿನಿಂದ ಮಂದ್ರ ಸ್ಥಾಯಿಯಲ್ಲಿ ಚೇಲೋದಂತಹ  ವಾದ್ಯಗಳು ಅದಕ್ಕೆ ಪೂರಕವಾದ  ಬೇರೆಯೇ tune ನುಡಿಸುವ ತಂತ್ರವನ್ನು interludeಗಳಲ್ಲಿ ಬಳಸಿದ್ದಾರೆ. ಅವಳೇ ನಮ್ಮ ಮತ್ತು ಮರೆಯುವರೇ ಆ ಎಂಬಲ್ಲಿ ಜಂಗ್ಲಿಎಹೆಸಾನ್ ತೇರಾ ಹೋಗಾ ಮುಝ್ ಪರ್ ನಲ್ಲಿ ಇದ್ದಂತೆ ತೀವ್ರ ಮಧ್ಯಮದಿಂದ ಶುದ್ಧ ಮಧ್ಯಮಕ್ಕೆ ನಯವಾಗಿ ಬದಲಾಗುವ ಜಾರುಗಮಕವನ್ನೂ ಬಳಸಿದ್ದಾರೆ. ಇನ್ನು ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯದ ಬಗ್ಗೆ ಎರಡು ಮಾತೇ ಇಲ್ಲ.  ತಾಯಿಯ ಮಮತೆಯನ್ನು ಸರಳ ಶಬ್ದಗಳಲ್ಲಿ ಅಂತ್ಯಪ್ರಾಸದ ಬಂಧ ಇಟ್ಟುಕೊಂಡು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ತಾಯಿಗೆ ಮಿಗಿಲಾದ ದೇವರಿಲ್ಲ ಎಂಬುದು ಅವರ ಮನದಾಳದ ಭಾವನೆಯಾಗಿರಬಹುದು. ಒಟ್ಟಿನಲ್ಲಿ ಹೇಳುವುದಾದರೆ ಸಾಹಿತ್ಯ, ಗಾಯನ, ವಾದನ ಎಲ್ಲವೂ ಸೇರಿ ಚೇತೋಹಾರಿ ಅನುಭವ ನೀಡುವ ರಚನೆ ಇದು.

ಚಿತ್ರ : ಮಮತೆ
ಗಾಯಕ : ಪಿ.ಬಿ.ಶ್ರೀನಿವಾಸ್
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಸತ್ಯಂ

ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೆ

ತಾಯಿ ಎಂಬ ದೈವಕೆ ಬೇರಾರು ಸಾಟಿಯೆ
ಬೇರಾರು ಸಾಟಿಯೆ

ನವಮಾಸ ಧರಿಸಿ ಹಾಲನು ಉಣಿಸಿ ಬೆಳೆಸಿದಳಾ ಮಾತೆ
ಕಣ್ಣೀರ ಒರೆಸಿ ನೋವನು ಮರೆಸಿ ನಗಿಸಿದಾ ದೇವತೆ
ಅವಳೇ ನಮ್ಮ ಜೀವದಾತೆ

ಮಮತೆಯ ಮಡಿಲು ಕರುಣೆಯ ಕಡಲು ತೋರಿದಳು ಪ್ರೀತಿಯ
ಹಗಲು ಇರುಳು ಮನದಲೆ ಇಹಳು ಬೆಳಗುತೆ ಜ್ಯೋತಿಯ
ಮರೆಯುವರೇ ಆ ಪ್ರೇಮನಿಧಿಯ

5 comments:

  1. Chidambar Kakathkar.. Fantastic is the word. While browsing for something came across this. You kindled a long lost memory.. What a fabulous song. Heard long back in my childhood. And your writing.. wah no words. I have become a fan!

    ReplyDelete
  2. ಧನ್ಯವಾದ. ನಿಮ್ಮ ವಿರಾಮದ ವೇಳೆಯಲ್ಲಿ ಇನ್ನುಳಿದ postಗಳನ್ನೂ ಒಂದೊಂದಾಗಿ ನೋಡಿ. ನಿಮಗೆ ಇಷ್ಟವಾಗಬಹುದು.

    ReplyDelete
    Replies
    1. ಖಂಡಿತವಾಗಿಯೂ ಓದುತ್ತೇನೆ.

      Delete
  3. ಈ ಹಾಡಿನ mp3 ಯನ್ನು ಡೌನ್ ಲೋಡ್ ಮಾಡಲು ಸಾಧ್ಯವೇ? ನನಗೆ ಬೇಕಾಗಿತ್ತು.

    ReplyDelete
  4. ಈ ಗೀತೆಯ ಕುರಿತು ನಾನು ನಿರೂಪಿಸಿರುವ ಆರ್.ಎನ್.ಜಯಗೋಪಾಲ್ ಅವರ ಆತ್ಮಕಥೆ 'ಪಲ್ಲವಿ ಅನುಪಲ್ಲವಿ'ಯಲ್ಲಿ ಅನೇಕ ಕುತೂಹಲಕರ ಮಾಹಿತಿಗಳಿವೆ. ತಮ್ಮ ತಾಯಿ ರತ್ನಬಾಯಿ ಕ್ಯಾನ್ಸರ್‍ನಿಂದ ಚಿಕಿತ್ಸೆ ಪಡೆಯುತ್ತಿದ್ದಾಗ ಜಯಗೋಪಾಲ್ ಇದನ್ನು ರಚಿಸಿದ್ದರು ಮೂಲ ಕವಿತೆಯಲ್ಲಿ ಇನ್ನೂ ಎರಡು ಚರಣಗಳಿವೆ ಅವು ಬಹುಮಟ್ಟಿಗೆ ವೈಯಕ್ತಿಕವಾಗಿವೆ. ಇದನ್ನು ಮೆಚ್ಚಿ ಬಳಿಸಿದವರು ವೈ.ಆರ್.ಸ್ವಾಮಿ. ಈ ಗೀತೆಯಲ್ಲಿ ಇರುವ ಮಗು ಅವರ ಮಗಳು ಸುನಿತಾ. ಮುಂದೆ ಸುನಿತಾ ನಾಯಕಿಯಾಗಿ ಕೂಡ ಕೆಲವು ಚಿತ್ರಗಳಲ್ಲಿ ಅಭಿನಯಿಸಿದರು. ಅಪರಾಧಿ ಅವುಗಳಲ್ಲಿ ಮುಖ್ಯವಾದದ್ದು.

    Shridhar Murthy (FB)

    ReplyDelete

Your valuable comments/suggestions are welcome