Wednesday, 20 July 2016

ಕಾಲಗಳಲಿ ಅವಳು ವಸಂತ

    
     ಮಾಧುರ್ಯ ಎಲ್ಲಿದ್ದರೂ ಭಾಷಾ ತಾರತಮ್ಯವಿಲ್ಲದೆ ಮೆಚ್ಚುವವನು ನಾನು.  ಪಿ.ಬಿ.ಶ್ರೀನಿವಾಸ್ ಹಾಡಿರುವ ತಮಿಳು ಹಾಡುಗಳ ಪೈಕಿ ನನಗೆ  ಅತಿ ಪ್ರಿಯವಾದದ್ದು  ಪಾವ ಮನ್ನಿಪ್ಪು ಚಿತ್ರದ ಕಾಲಂಗಳಿಲ್ ಅವಳ್ ವಸಂತಂ.  ತೆಲುಗು ಎಂದರೆ ಘಂಟಸಾಲ ಇದ್ದ ಹಾಗೆ ತಮಿಳು ಎಂದರೆ ಟಿ.ಎಮ್.ಸೌಂದರರಾಜನ್ ಎಂದು ಆಗತೊಡಗಿದ್ದ ಕಾಲದಲ್ಲಿ ಪಿ.ಬಿ.ಶ್ರೀನಿವಾಸ್ ಅವರಿಗೆ ತಮಿಳು ಸಿನಿಮಾ ರಂಗದಲ್ಲಿಯೂ ತನ್ನದೇ ಒಂದು ಸ್ಥಾನ ಕಲ್ಪಿಸಿಕೊಳ್ಳಲು ಹೆಬ್ಬಾಗಿಲು ತೆರೆದು ಕೊಟ್ಟ ಅಂದಿಗೂ ಇಂದಿಗೂ ಸೂಪರ್ ಹಿಟ್  ಆಗಿಯೇ ಉಳಿದಿರುವ  ಹಾಡಿದು.  ಪಾವ ಮನ್ನಿಪ್ಪು ಚಿತ್ರದ ಸಂಗೀತ ನಿರ್ದೇಶಕರಾದ ವಿಶ್ವನಾಥನ್- ರಾಮಮೂರ್ತಿ  ಅವರಿಗೆ ಪಿ.ಬಿ.ಎಸ್ ಕಂಠಸಿರಿ ಬಲು ಅಚ್ಚು ಮೆಚ್ಚು.  ಆ ಚಿತ್ರದ ನಿರ್ಮಾಣದಲ್ಲಿ ವಿಶ್ವನಾಥನ್  ಪಾಲೂ ಇದ್ದುದರಿಂದ ಈ ಒಂದು ಹಾಡಿಗೆ  ಪಿ.ಬಿ.ಎಸ್ ಧ್ವನಿಯನ್ನು ಉಪಯೋಗಿಸಲು ಅವರಿಗೆ ಸಾಧ್ಯವಾಯಿತು ಅನ್ನಲಾಗಿದೆ.  ಇದು ಆ ಚಿತ್ರದ ಅತ್ಯಂತ ಜನಪ್ರಿಯ ಹಾಡಾಗಿ ದಾಖಲೆ ಬರೆದ ಮೇಲೆ ವಿಶ್ವನಾಥನ್-ರಾಮಮೂರ್ತಿ ಮಾತ್ರವಲ್ಲದೆ ಇತರ ಸಂಗೀತ ನಿರ್ದೇಶರೂ ಅನೇಕ ತಮಿಳು ಚಿತ್ರಗಳಲ್ಲಿ  ಪಿ.ಬಿ.ಎಸ್ ಅವರ ಪ್ರತಿಭೆಯನ್ನು ಬಳಸಿಕೊಂಡರು.  ಈ ಹಾಡಿನ ಸ್ಪೂರ್ತಿಯಿಂದ ಕಾಲಂಗಳಿಲ್ ಅವಳ್ ವಸಂತಂ ಎಂಬ ಹೆಸರಿನ ಒಂದು ಚಿತ್ರವೂ 70ರ ದಶಕದಲ್ಲಿ ಬಂತು.


     ತಮಿಳು ಚಿತ್ರರಂಗದ ಶ್ರೇಷ್ಠ ಗೀತ ರಚನೆಕಾರ ಕಣ್ಣದಾಸನ್ ಅವರ ಈ ಗೀತೆಯಲ್ಲಿ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ವಿವಿಧ ಉಪಮೆಗಳಿಂದ ಬಣ್ಣಿಸುವ ಸುಂದರ ಚಿತ್ರಣವಿದೆ.  ಪ್ರತೀ ಸಾಲಲ್ಲಿಯೂ ಅವಳ್ ಎಂಬ ಶಬ್ದ ಇರುವುದು ಈ ಹಾಡಿನ ಒಂದು ವಿಶೇಷ.  ಹರಿಕಾಂಭೋಜಿ ರಾಗಾಧಾರಿತ ಈ ಹಾಡಿನ prelude ಮತ್ತು interludeನಲ್ಲಿ ಮೌತ್ ಆರ್ಗನ್‌, ಗಿಟಾರ್ ಮತ್ತು ಡಬಲ್ ಬೇಸ್‌ ಗಳ ಬಳಕೆ  ಬಲು ಆಕರ್ಷಕ. ಪೂರಕವಾಗಿ ಕೊಳಲು ಮತ್ತು ಕ್ಲಾರಿನೆಟ್ ಕೂಡ ಇವೆ.  ಹಾಡಿನ ಭಾಗಕ್ಕೆ  ಢೋಲಕ್ ನಲ್ಲಿ ಯಾವುದೇ ಉರುಳಿಕೆ, ತಿಕಡಂಬಾಜಿಗಳಿಲ್ಲದ ಸರಳ ದತ್ತು ಠೇಕಾ ಬಳಸಲಾಗಿದೆ. ಶಂಕರ್ ಜೈಕಿಶನ್ ಅವರ ಸಹಾಯಕರಾಗಿದ್ದ ದತ್ತಾರಾಮ್ ಈ ಸರಳ ನಡೆಯನ್ನು ಪ್ರಚುರ ಪಡಿಸಿದ್ದರಿಂದ ಇದು ದತ್ತು ಠೇಕಾ ಎಂದೇ ಪ್ರಸಿದ್ಧ.  ಮೊದಲನೇ ಚರಣದಲ್ಲಿ ತಾಲಾಟ್ಟ್(ಜೋಗುಳ) ಪದದ ನಂತರ ಬರುವ ಗಾ ಮಾ ಪಾ, ಸ ನೀ ದಾ ಪಾ  ಮಾ ನೀ ದಾ ಪಾ ಮ ಗಾ ಮ ಪಾ|| ಸ ರಿ ನಿ ಸ ಮಾ   ಮ ಪ ಗ ಮ ದಾ  ದ ನಿ ಪ ದ ಸಾ  ನಿ ದ ಮ ದ ಪಾ  ಎಂಬ ಸ್ವರ ಸಂಚಾರದ ಆಲಾಪ ಈ ಹಾಡಿನ ಟ್ರಂಪ್ ಕಾರ್ಡ್ ಅನ್ನಬಹುದು. ಪ್ರತಿ ಸಾಲಿನಲ್ಲಿರುವ  ಒಂದರಂತೆ ಇನ್ನೊಂದಿರದ ಸಂಗತಿಗಳು ಕೇಳಲು ಎಷ್ಟು ಆಪ್ಯಾಯಮಾನವೋ ಅನುಕರಿಸಲು ಅಷ್ಟೇ ಕಠಿಣ.  ಪಿ.ಬಿ.ಎಸ್. ಧ್ವನಿಯ ಮಾಧುರ್ಯವನ್ನಂತೂ ಕೇಳಿಯೇ ಅನುಭವಿಸಬೇಕು.  ಇನ್ನೇಕೆ ತಡ. ಇಲ್ಲಿದೆ ನೋಡಿ ಆ ಹಾಡು.  ಜೊತೆಗೆ ದನಿ ಸೇರಿಸಲು ತಮಿಳು ಸಾಹಿತ್ಯವೂ ಇದೆ. ಪಕ್ಕದಲ್ಲಿಯೇ ಕನ್ನಡದ ಕನ್ನಡಿಯ ಪ್ರತಿಬಿಂಬವೂ ಇದೆ. ಇದೆ. ಕನ್ನಡದಲ್ಲಿ ಹಾಡಿನ ಓಘಕ್ಕೆ ಹೊಂದಿಕೊಳ್ಳಲು  ತಿಂಗಳು, ಹಕ್ಕಿ ಮುಂತಾದ ಕೆಲ ಉಪಮೆಗಳಲ್ಲಿ ಬದಲಾವಣೆ ಮಾಡಲಾಗಿದೆ.




.

     

Tuesday, 12 July 2016

ಪಿ.ಬಿ. ಎಂಬ ಕಂಠಕೆ ಬೇರಾರು ಸಾಟಿಯೇ


     ಇಂದು ಮಿತ್ರರೋರ್ವರು ನಿಮ್ಮಲ್ಲಿ ತಾರೆ ಸಾವಿರ ಎಂಬ ತಾಯಿಯನ್ನು ಕುರಿತ ಹಾಡು ಇದೆಯೇ ಎಂದು ವಿಚಾರಿಸಿದರು. ನನ್ನಲ್ಲಿ ಇಲ್ಲ, ನೆಟ್ಟಲ್ಲಿ ಹುಡುಕಿದರೆ ಸಿಗಬಹುದು ಎಂದೆ.  ಆದರೆ ನೆಟ್ಟಲ್ಲೂ ಸುಲಭದಲ್ಲಿ ಸಿಗಲಿಲ್ಲ.  ಆದರೂ ಪಟ್ಟು ಬಿಡದೆ ಜಾಲಾಡಿದಾಗ ಎಲೆಮರೆಯಲ್ಲಿ ಹಾಯಾಗಿದ್ದ ಹಣ್ಣಿನಂತೆ ಒಂದು ಕಡೆ ಸಿಕ್ಕಿಯೇ ಬಿಟ್ಟಿತು.  ಅದನ್ನು ಇಳಿಸಿಕೊಂಡು ಪರಿಷ್ಕರಿಸಿ ಆಲಿಸಿದಾಗ ಅದರಲ್ಲಿನ ಸತ್ಯಂ ಅವರ ಸಂಗೀತ, ಜಯಗೋಪಾಲ್ ಅವರ ಸಾಹಿತ್ಯ ಮತ್ತು ಪಿ.ಬಿ.ಎಸ್   ಧ್ವನಿ ಮಾಧುರ್ಯ ಆಹಾ! ಅನ್ನುವಂತೆ ಮಾಡಿದವು. ಜಯಗೋಪಾಲ್ ಅವರು ತಮ್ಮ ತಾಯಿ ನಿಧನರಾದ ಸಂದರ್ಭದಲ್ಲಿ ರಚಿಸಿದ್ದ ಈ ಕವಿತೆಯನ್ನು ನಂತರ   1968ರಲ್ಲಿ ಬಿಡುಗಡೆಯಾದ ಮಮತೆ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಯಿತಂತೆ. ನಾನೂ ಅನೇಕ ವರ್ಷಗಳಿಂದ ಕೇಳಿರದಿದ್ದ, ಹಳೆಯ ರೇಡಿಯೋ ದಿನಗಳನ್ನು ನೆನಪಿಸಿದ, ಯಮನ್ ಕಲ್ಯಾಣ್ ರಾಗ ಛಾಯೆಯ ಈ ಹಾಡನ್ನು ನಿಮ್ಮೊಡನೆಯೂ ಯಾಕೆ ಹಂಚಿಕೊಳ್ಳಬಾರದು ಎನಿಸಿ ಕಾರ್ಯಪ್ರವೃತ್ತನಾದೆ.  ಆಲಿಸಿ, ಆನಂದಿಸಿ.  ಆಲಿಸಿದಾಗ ಸತ್ಯಂ ಅವರದೇ ಸಂಗೀತ ನಿರ್ದೇಶನದಲ್ಲಿ ಪಿ.ಬಿ.ಎಸ್ ಮತ್ತು ರಾಜ್ ಒಟ್ಟಿಗೆ ಹಾಡಿದ್ದ ಕೆರಳಿದ ಸಿಂಹ ಚಿತ್ರದ ಅಮ್ಮಾ ನೀನು ನಮಗಾಗಿ ಹಾಡು ನೆನಪಾಗುತ್ತದೆಯೇ ನೋಡಿ.   ಮಿತ ವಾಲ್ಯೂಮ್ ಇಟ್ಟುಕೊಂಡು ಹೆಡ್ ಫೋನ್ ಬಳಸಿದರೆ  ಶ್ರವಣ ಸುಖ  ಹೆಚ್ಚು.


     ತಮಗೆ ಅನುಕೂಲವಾದ ಎರಡೂವರೆ ಕಟ್ಟೆಯ ಶ್ರುತಿಯಲ್ಲಿ ಪಿ.ಬಿ.ಶ್ರೀನಿವಾಸ್ ಅವರು ಈ ಹಾಡನ್ನು ಬಲು  ಸುಲಲಿತವಾಗಿ ಹಾಡಿದ್ದಾರೆ.  ಹಾಗಾಗಿ ಕೇಳಲು ತುಂಬಾ ಹಿತವೆನಿಸುತ್ತದೆ.   ಗಾಯಕರು ಕಷ್ಟ ಪಟ್ಟು ಹಾಡಿದ್ದಾರೆ ಎನಿಸುವ ಹಾಡುಗಳನ್ನು ಆಲಿಸುವಾಗ ಇಂತಹ ಅನುಭವ ಆಗುವುದಿಲ್ಲ.  ಪಿ.ಬಿ.ಎಸ್ ಅವರ ವಿಶೇಷತೆಯಾದ ಪ್ರಯತ್ನಪೂರ್ವಕವಾಗಿ ತುರುಕಿದವು ಎನ್ನಿಸದ  ಸುಂದರವಾದ ಮುರ್ಕಿಗಳು ಅಥವಾ ಕಿರು ತಿರುವುಗಳು ಈ ಹಾಡಲ್ಲೂ ಅಲ್ಲಲ್ಲಿ ಇವೆ.   ಮಾತೇ......  , ದೇವತೇ........ ಮುಂತಾದಲ್ಲಿ ಪಂಚಮದಲ್ಲಿ ದೀರ್ಘ ಕಾಲ ನಿಲ್ಲುವ noteಗಳ ಶ್ರುತಿ ಶುದ್ಧತೆ ಅಪ್ರತಿಮ.  70 ರ ದಶಕದ ನಂತರ ಹೆಚ್ಚು ಚಾಲ್ತಿಗೆ ಬಂದ ಅನವಶ್ಯಕ vibrato (ಸ್ವರ ನಡುಗಿಸುವುದು) ಇಲ್ಲಿಲ್ಲ.  ಸಿತಾರ್, ಗ್ರೂಪ್ ವಯಲಿನ್ಸ್, ಡಬಲ್ ಬೇಸ್, ಚೇಲೊ ಮತ್ತು ತನಗೆ ಅತಿ ಪ್ರಿಯವಾದ ಢೋಲಕ್ ಬಳಸಿದ ಸತ್ಯಂ ಅವರ ಸಂಗೀತ ಹಾಡಿನ ಭಾವನೆಗೆ ಸರಿ ಹೊಂದುತ್ತದೆ.  ಶಂಕರ್ ಜೈಕಿಶನ್  ಅಭಿಮಾನಿಗಳಾದ ಸತ್ಯಂ ಅವರಂತೆಯೇ counter melody ಅಂದರೆ ಕೆಲವು ವಾದ್ಯಗಳು ಒಂದು tune ನುಡಿಸುವಾಗ ಹಿಂದಿನಿಂದ ಮಂದ್ರ ಸ್ಥಾಯಿಯಲ್ಲಿ ಚೇಲೋದಂತಹ  ವಾದ್ಯಗಳು ಅದಕ್ಕೆ ಪೂರಕವಾದ  ಬೇರೆಯೇ tune ನುಡಿಸುವ ತಂತ್ರವನ್ನು interludeಗಳಲ್ಲಿ ಬಳಸಿದ್ದಾರೆ. ಅವಳೇ ನಮ್ಮ ಮತ್ತು ಮರೆಯುವರೇ ಆ ಎಂಬಲ್ಲಿ ಜಂಗ್ಲಿಎಹೆಸಾನ್ ತೇರಾ ಹೋಗಾ ಮುಝ್ ಪರ್ ನಲ್ಲಿ ಇದ್ದಂತೆ ತೀವ್ರ ಮಧ್ಯಮದಿಂದ ಶುದ್ಧ ಮಧ್ಯಮಕ್ಕೆ ನಯವಾಗಿ ಬದಲಾಗುವ ಜಾರುಗಮಕವನ್ನೂ ಬಳಸಿದ್ದಾರೆ. ಇನ್ನು ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯದ ಬಗ್ಗೆ ಎರಡು ಮಾತೇ ಇಲ್ಲ.  ತಾಯಿಯ ಮಮತೆಯನ್ನು ಸರಳ ಶಬ್ದಗಳಲ್ಲಿ ಅಂತ್ಯಪ್ರಾಸದ ಬಂಧ ಇಟ್ಟುಕೊಂಡು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ತಾಯಿಗೆ ಮಿಗಿಲಾದ ದೇವರಿಲ್ಲ ಎಂಬುದು ಅವರ ಮನದಾಳದ ಭಾವನೆಯಾಗಿರಬಹುದು. ಒಟ್ಟಿನಲ್ಲಿ ಹೇಳುವುದಾದರೆ ಸಾಹಿತ್ಯ, ಗಾಯನ, ವಾದನ ಎಲ್ಲವೂ ಸೇರಿ ಚೇತೋಹಾರಿ ಅನುಭವ ನೀಡುವ ರಚನೆ ಇದು.

ಚಿತ್ರ : ಮಮತೆ
ಗಾಯಕ : ಪಿ.ಬಿ.ಶ್ರೀನಿವಾಸ್
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಸತ್ಯಂ

ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೆ

ತಾಯಿ ಎಂಬ ದೈವಕೆ ಬೇರಾರು ಸಾಟಿಯೆ
ಬೇರಾರು ಸಾಟಿಯೆ

ನವಮಾಸ ಧರಿಸಿ ಹಾಲನು ಉಣಿಸಿ ಬೆಳೆಸಿದಳಾ ಮಾತೆ
ಕಣ್ಣೀರ ಒರೆಸಿ ನೋವನು ಮರೆಸಿ ನಗಿಸಿದಾ ದೇವತೆ
ಅವಳೇ ನಮ್ಮ ಜೀವದಾತೆ

ಮಮತೆಯ ಮಡಿಲು ಕರುಣೆಯ ಕಡಲು ತೋರಿದಳು ಪ್ರೀತಿಯ
ಹಗಲು ಇರುಳು ಮನದಲೆ ಇಹಳು ಬೆಳಗುತೆ ಜ್ಯೋತಿಯ
ಮರೆಯುವರೇ ಆ ಪ್ರೇಮನಿಧಿಯ

Saturday, 9 July 2016

ಶಾಸ್ತ್ರೀಯ ಸೌರಭದ ಸುಮಗಳು


ಹಿಂದಿನಿಂದಲೂ ಶಾಸ್ತ್ರೀಯ ಸೌರಭದ  ಸಿನಿಮಾ ಸಂಗೀತ ಸುಮಗಳು ಅರಳುತ್ತಲೇ ಬಂದಿವೆ.  ಈಗಲೂ ಆಗೊಮ್ಮೆ ಈಗೊಮ್ಮೆ ಅರಳುತ್ತಿವೆ.  ಸಾಂಪ್ರದಾಯಿಕ ಕಚೇರಿಗಳಲ್ಲಿ ಗಂಟೆಗಟ್ಟಲೆ ಆಲಿಸಿದಾಗ ಸಿಗುವ ಅನುಭವವನ್ನು ಬರೇ 3 ನಿಮಿಷ ಹೆಚ್ಚೆಂದರೆ 6 ನಿಮಿಷಗಳಲ್ಲಿ ಕಟ್ಟಿ ಕೊಡುವುದು ಇವುಗಳ ಹೆಚ್ಚುಗಾರಿಕೆ. ಒಂದು ಪ್ರಸಿದ್ಧ ಕೀರ್ತನೆಯನ್ನೇ ಬಳಸಿಕೊಂಡರೂ ಕೇಳಿದಾಕ್ಷಣ ಇದು ಸಿನಿಮಾದ್ದೇ ಎಂದು ಥಟ್ಟನೆ ಯಾರಿಗಾದರೂ ತಿಳಿಯುವಂತಿರುವುದೂ ಇವುಗಳ ಇನ್ನೊಂದು ವೈಶಿಷ್ಟ್ಯ.  ಧ್ವನಿ ಹಾಗೂ ವಾದ್ಯಗಳ ಸೂಕ್ತ ಸಮತೋಲನ ಸಾಧಿಸುವ  ಧ್ವನಿಮುದ್ರಣ ತಜ್ಞರ   ಕೈ ಚಳಕ  ಇದಕ್ಕೆ ಕಾರಣ.  ನೂರಾರು ಸಂಖ್ಯೆಯ ಇಂತಹ ಹಾಡುಗಳ ಪೈಕಿ ಕೆಲವನ್ನು ಆಯ್ದುಕೊಳ್ಳುವುದು ಬಲು  ಕಠಿಣ ಕಾರ್ಯ.  ಆದರೂ ನನಗೆ ವೈಯಕ್ತಿಕವಾಗಿ  ಬಲು ಇಷ್ಟವಾದ ಅಂತಹ  ಕೆಲವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.

1. ತ್ರಿಭುವನ ಜನನಿ ಜಗನ್ಮೋಹಿನಿ.


ಇದು ಪ್ರೇಮದ ಪುತ್ರಿ ಚಿತ್ರಕ್ಕಾಗಿ ಆರ್.ಎನ್.ಜಯಗೋಪಾಲ್ ರಚಿಸಿ ಪದ್ಮನಾಭ ಶಾಸ್ತ್ರಿಗಳ ಸಂಗೀತ ನಿರ್ದೇಶನದಲ್ಲಿ ಪಿ.ಲೀಲ ಹಾಡಿದ ಮೋಹನ ರಾಗದ ಹಾಡು.  ಶಾಸ್ತ್ರೀಯ ರಾಗಾಧಾರಿತ  ಮೊದಲ ಬಲು ಜನಪ್ರಿಯ ಕನ್ನಡ ಸಿನಿಮಾ ಗೀತೆ ಇದೆಂದರೆ ತಪ್ಪಾಗಲಾರದು. ವಯಲಿನ್, ಕ್ಲಾರಿನೆಟ್, ಮೃದಂಗ, ಮೋರ್‌ಸಿಂಗ್ ಒಳಗೊಂಡ ಹಿಮ್ಮೇಳ ಹಾಡಿಗೆ  ಒಳ್ಳೆಯ ಉಠಾವ್ ಒದಗಿಸಿದೆ.



2. ಭಾಮೆಯ ನೋಡಲು ತಾ ಬಂದ


ಇದು ಎಲ್ಲ ಹಾಡುಗಳೂ ಒಂದಕ್ಕಿಂತ ಒಂದು ಮಿಗಿಲೆನ್ನಿಸುವಂತಿದ್ದ ಸ್ಕೂಲ್ ಮಾಸ್ಟರ್ ಚಿತ್ರದ್ದು. ಕನ್ನಡ ಚಿತ್ರಗಳಲ್ಲಿ ಅತಿ ಹೆಚ್ಚು ಶಾಸ್ತ್ರೀಯ ರಾಗಾಧಾರಿತ ಗೀತೆಗಳನ್ನು ನೀಡಿದವರು ಎನ್ನಬಹುದಾದ ಟಿ.ಜಿ. ಲಿಂಗಪ್ಪ ಅವರ ಸಂಗೀತ ನಿರ್ದೇಶನದಲ್ಲಿ ಸೂಲಮಂಗಲಂ ರಾಜಲಕ್ಷ್ಮಿ ಹಾಡಿದ್ದಾರೆ.  3 ನಿಮಿಷದ ಕಿರು ಅವಧಿಯಲ್ಲೇ ನೆರವಲ್, ಆಲಾಪ ಎಲ್ಲವೂ ಒಳಗೊಂಡಿರುವ  ಹಿಂದೋಳ ರಾಗದ ಈ ಕೃತಿಯನ್ನು ರಚಿಸಿದವರು ಪಂತುಲು ಅವರ ಮೆಚ್ಚಿನ ಕಣಗಾಲ್ ಪ್ರಭಾಕರ ಶಾಸ್ತ್ರಿ.  ಇವರು ಪುಟ್ಟಣ್ಣ ಕಣಗಾಲ್ ಅವರ ಹಿರಿಯ ಸೋದರ ಎಂದು ಅನೇಕರಿಗೆ ಗೊತ್ತಿರಬಹುದು.


3. ಸಿಂಗಾರವೇಲನೆ ದೇವ


ಕೊಂಜುಂ ಸಲಂಗೈ ಚಿತ್ರದ ಭೀಮ್ ಪಲಾಸ್ ಅಥವಾ ಅಭೇರಿ ರಾಗದ ಈ ಹಾಡು ಎಷ್ಟು ಪ್ರಸಿದ್ಧ ಎಂದರೆ ಇದನ್ನು ಹಾಡಿದ ಎಸ್. ಜಾನಕಿ ಅವರ ಹೆಸರಲ್ಲಿರುವ ಎಸ್ ಅಂದರೆ ಸಿಂಗಾರವೇಲನೆ  ಎಂದುಕೊಂಡು ಅವರನ್ನು ಸಿಂಗಾರವೇಲನೆ ಜಾನಕಿ ಎಂದು ಕರೆಯುವವರೂ  ಇದ್ದರಂತೆ!  ಕಾರೈಕುರಿಚಿ ಅರುಣಾಚಲಂ ಅವರ ನಾದಸ್ವರದೊಡನೆ ಜುಗಲ್‍ಬಂದಿಯ ರೂಪದ ಇದನ್ನು ಹಾಡಲು ಆಗಿನ ಪ್ರಸಿದ್ಧ ಗಾಯಕಿಯರಾರೂ ಮುಂದೆ ಬರಲಿಲ್ಲವಂತೆ.  ಆಗಷ್ಟೆ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಜಾನಕಿ ಇದನ್ನು ಸವಾಲಾಗಿ ಸ್ವೀಕರಿಸಿ ಸ್ತ್ರೀ ಕಂಠಕ್ಕೆ ಅನುಕೂಲವಲ್ಲದ ಎರಡೂವರೆ ಕಟ್ಟೆ ಶ್ರುತಿಯ ಈ ಹಾಡನ್ನು ಧೈರ್ಯದಿಂದ ಹಾಡಿದರು, ಹಾಡಿ ಗೆದ್ದರು.  ಗಾನ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಈ ಹಾಡಿನ ಆರಂಭದ ಸಂಭಾಷಣೆಯ ತುಣುಕುಗಳೂ ಹಾಡಿನಷ್ಟೇ ಪ್ರಸಿದ್ಧ.  ಅದರ ಪಾಡ್ ಶಾಂತಾ ಪಾಡ್ ಎಂಬ ಸಾಲಿನ ಹೊರತಾಗಿ ಈ ಹಾಡನ್ನು ಕೇಳಿದರೂ ಕೇಳಿದಂತೆ ಆಗುವುದಿಲ್ಲ.  ಆಗ ವಿವಿಧಭಾರತಿಯ ಮಧುರ್‍ ಗೀತಂ ಎಂಬ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಎಲ್ಲ ಭಾಷೆಗಳ ಹಾಡುಗಳೂ  ಪ್ರಸಾರವಾಗುತ್ತಿದ್ದುದರಿಂದ ಕನ್ನಡವಲ್ಲದೇ ತಮಿಳು, ತೆಲುಗು, ಮಲಯಾಳಂನ ಪ್ರಸಿದ್ಧ ಹಾಡುಗಳೂ ಕಿವಿಗೆ ಬೀಳುತ್ತಿದ್ದವು.


4. ಆಡಿ ಪಾಡಿ ಒಡನಾಡಿ
 

ಸತಿ ಶಕ್ತಿ ಚಿತ್ರದ ಕಾಪಿ ರಾಗಾಧಾರಿತವಾದ ಇದು ಇತ್ತೀಚೆಗೆ ಹೆಚ್ಚು ಕೇಳಿಬರದ ಹಾಡು. ಅಂದಿನ ದಿನಗಳಲ್ಲಿ ಆಕಾಶವಾಣಿ ಬೆಂಗಳೂರಿನಿಂದ ಆಗಾಗ ಪ್ರಸಾರವಾಗುತ್ತಿತ್ತು. ಘಂಟಸಾಲ ಮತ್ತು ಪಿ.ಲೀಲ ಧ್ವನಿಯಲ್ಲಿದೆ.  ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ರಚನೆಗೆ ಸಂಗೀತ ಟಿ.ಜಿ.ಲಿಂಗಪ್ಪ ಅವರದು. ಪಲ್ಲವಿಯ ಆರಂಭದ ಭಾಗದಲ್ಲಿ  4 ಮಾತ್ರೆಗಳಿಗೆ ಎರಡೇ ಅಕ್ಷರಗಳನ್ನು ಬಳಸಿ ಉಂಟಾದ pause ಕೇಳುಗರಿಗೆ ಒಂದು ವಿಶಿಷ್ಟ ಅನುಭವ ನೀಡುತ್ತದೆ.  ಮೊದಲ ಚರಣದಲ್ಲಿ ಲೀಲ ಹಾಡಿದ ಚಿಟ್ಟೆ ಸ್ವರಗಳಿಗೆ ಘಂಟಸಾಲ ಸಾಹಿತ್ಯ ರೂಪ ಕೊಟ್ಟರೆ ಎರಡನೆ ಚರಣದಲ್ಲಿ ಅವರ ಸ್ವರಗಳಿಗೆ ಲೀಲ ಸಾಹಿತ್ಯ ಹಾಡುತ್ತಾರೆ. 



 5. ಇಂದು ಎನಗೆ ಗೋವಿಂದ


ಎಲ್ಲರಿಗೂ ಜಾನಕಿಯವರು ಎರಡು ಕನಸು ಚಿತ್ರದಲ್ಲಿ ಇದನ್ನು ಹಾಡಿದ್ದೇ ಗೊತ್ತಿರುವುದು.  ಆದರೆ ಅದಕ್ಕೂ ಕೆಲ ವರ್ಷ ಮೊದಲು ಮಂತ್ರಾಲಯ ಮಹಾತ್ಮೆ ಚಿತ್ರಕ್ಕಾಗಿ ಪಿ. ಬಿ. ಶ್ರೀನಿವಾಸ್ ಇದನ್ನು ಅಷ್ಟೇ ಸೊಗಸಾಗಿ ಹಾಡಿದ್ದರು. ಎರಡೂ ವರ್ಷನ್ ಆಲಿಸಿದಾಗ ನಿನ್ನಯ ಪದ ಹಾಡಿದುದರಲ್ಲಿ ಕೊಂಚ ವ್ಯತ್ಯಾಸ ಗೋಚರಿಸುತ್ತದೆ.  ಆರಂಭ ಭೈರವಿ ರಾಗದಲ್ಲಿದ್ದು  ಕೊನೆಯ ಚರಣ ರಂಜನಿಯಲ್ಲಿದೆ.  ಹಾಡಿನ ಮೂಡಿಗೆ ಸರಿಹೊಂದುವ ರಾಜನ್ ನಾಗೇಂದ್ರ ಅವರ ಸಂಗೀತ ಸಂಯೋಜನೆ ಬಲು ಆಕರ್ಷಣೀಯ. ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳು ಸ್ವತ: ವೈಣಿಕರಾಗಿದ್ದುದರಿಂದ  ಹಾಡಿನ ನಡುವೆ ವೀಣೆಯ ಝೇಂಕಾರ ಇದೆ. ಮುಕುಂದನನ್ನು ಕುರಿತದಾದ್ದರಿಂದ ಕೊಳಲ ಉಲಿಯೂ ಇದೆ.  ಜಾನಕಿ ಹಾಡಿರುವುದನ್ನು ಇಲ್ಲಿ ಆಲಿಸಬಹುದು.


 
6. ಕುಹೂ ಕುಹೂ ಬೋಲೆ ಕೊಯಲಿಯಾ


ಲತಾ ರಫಿ ಧ್ವನಿಯಲ್ಲಿರುವ ಸುವರ್ಣ ಸುಂದರಿ ಚಿತ್ರದ  ಇದು ಹಿಂದಿಯಲ್ಲಿ ಶಾಸ್ತ್ರೀಯ ಹಾಡುಗಳ ರಾಣಿ ಎಂದೇ ಪ್ರಖ್ಯಾತ.  ಸ್ಪರ್ಧೆಗಳಲ್ಲಿ ಹಾಡುವವರಿಗಂತೂ ಇದು ಬಲು ಅಚ್ಚು ಮೆಚ್ಚು.  ಇದು ರಾಗಮಾಲಿಕೆಯಲ್ಲಿದ್ದು  ಸೋಹನಿ ಅರ್ಥಾತ್ ಹಂಸಾನಂದಿ, ಬಹಾರ್, ಜೋನ್‍ಪುರಿ ಹಾಗೂ ಯಮನ್ ರಾಗಗಳನ್ನು ಬಳಸಿಕೊಳ್ಳಲಾಗಿದೆ.   ಪ್ರತಿ ಚರಣಗಳ ನಡುವೆ ಸೋಹನಿಯ ಪಲ್ಲವಿ ಕಾಣಿಸಿಕೊಳ್ಳುತ್ತದೆ.  ಧಾವಂತದೊಂದಿಗೇ ಆರಂಭವಾಗುವ ಇದು ಮೂರನೇ ಚರಣದ ವರೆಗೂ ಮಧ್ಯ ತಾರ ಸಪ್ತಕಗಳಲ್ಲೇ ಅದೇ ಗತಿಯಲ್ಲಿ ಸಾಗಿ ಕೊನೆಯ ಯಮನ್ ಚರಣಕ್ಕಾಗುವಾಗ ಕೊಂಚ ಮಂದ್ರವನ್ನೂ ಸ್ಪರ್ಶಿಸುತ್ತದೆ, ಸಮಾಧಾನಗೊಂಡಂತೆಯೂ ಭಾಸವಾಗುತ್ತದೆ.  ವಾಸ್ತವವಾಗಿ ಇದು ಮೊದಲು ತೆಲುಗು ಸುವರ್ಣ ಸುಂದರಿಗಾಗಿ ಹಾಯಿ ಹಾಯಿಗಾ ಆಮನಿ ಸಾಗೆ ಎಂದು ಘಂಟಸಾಲ ಮತ್ತು ಜಿಕ್ಕಿ ಸ್ವರಗಳಲ್ಲಿ  ಆದಿನಾರಾಯಣ ರಾವ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡು.  ಆ ಚಿತ್ರ ಹಿಂದಿಯಲ್ಲೂ ನಿರ್ಮಾಣವಾದಾಗ ಆದಿನಾರಾಯಣ ರಾವ್ ಅವರೇ ಸಂಗೀತ ನಿರ್ದೇಶಕರಾಗಿದ್ದರು ಮತ್ತು ಎಲ್ಲ ಹಾಡುಗಳಿಗೂ  ತೆಲುಗಿನಲ್ಲಿ  ಬಳಸಿದ ಧಾಟಿಗಳನ್ನೇ ಉಳಿಸಿಕೊಳ್ಳಲಾಗಿತ್ತು.



7. ಓಂ ನಮೋ ನಾರಾಯಣ


ಪಿ. ಕಾಳಿಂಗ ರಾವ್ ಅಂದರೆ ಭಾವಗೀತೆ ಮತ್ತು ಜಾನಪದ ಗೀತೆಗಳಿಗಷ್ಟೇ ಸೀಮಿತ ಅಂದುಕೊಂಡವರನ್ನು ಅಚ್ಚರಿಯಲ್ಲಿ ಕೆಡಹುವ ಕೈವಾರ ಮಹಾತ್ಮೆ ಚಿತ್ರದ ಹಾಡಿದು.  ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದ್ಲ್ಲೂ ತನ್ನ ಪ್ರೌಢಿಮೆ ಎಷ್ಟಿದೆಯೆಂದು ಈ ಹಾಡಿನ ಮೂಲಕ ಅವರು ಜಗಜ್ಜಾಹೀರುಗೊಳಿಸಿದ್ದಾರೆ.  ಮೋಹನ ರಾಗದಲ್ಲಿ ಆರಂಭಗೊಂಡು  ಪಂತುವರಾಳಿಯಲ್ಲಿ ಸಾಗಿ   ದರ್ಬಾರಿ ಕಾನಡಾದಲ್ಲಿ ಸಮಾಪ್ತವಾಗುವ ಈ ಹಾಡಿನ ಮಧ್ಯಭಾಗದಲ್ಲಿ  ಅವರ ಶಾಸ್ತ್ರೀಯ ಪ್ರತಿಭೆ ತೆರೆದುಕೊಳ್ಳುತ್ತದೆ.  ಇಷ್ಟು ವಿದ್ವತ್ತಿದ್ದರೂ ಶಾಸ್ತ್ರೀಯ ಸಂಗೀತ  ಕ್ಷೇತ್ರದಲ್ಲಿ ಅವರು ಮುಂದುವರೆಯದಿರಲು  ಕಾರಣವೇನೆಂದು ತಿಳಿದಿಲ್ಲ.  ಬಹುಶಃ ಈಗಾಗಲೇ ಅತಿರಥ ಮಹಾರಥರಿರುವ ಕ್ಷೇತ್ರದಲ್ಲಿ ಹತ್ತರೊಡನೆ ಹನ್ನೊಂದಾಗುವುದಕ್ಕಿಂತ ಯಾರೂ ಸಾಗಿರದ  ಹಾದಿ ತುಳಿಯುವುದು ಮೇಲೆಂದು ಅದುವರೆಗೆ ಅಸಡ್ಡೆಗೊಳಗಾಗಿದ್ದ ಜಾನಪದ-ಭಾವಗೀತೆಗಳ ಕ್ಷೇತ್ರವನ್ನೇ ಆಯ್ದುಕೊಂಡಿರಬಹುದು.



8. ಸಾಂವರೇ ಸಾಂವರೇ


ಅನುರಾಧಾ ಚಿತ್ರಕ್ಕಾಗಿ ಸಿತಾರ್ ಮಾಂತ್ರಿಕ  ಪಂಡಿತ್ ರವಿಶಂಕರ್ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿದ ಗೀತೆ ಇದು.  ಹೆಚ್ಚು ಕಸರತ್ತು-ತಿಕಡಂಬಾಜಿಗಳಿರದ  ಈ ಸರಳ ಆದರೆ ಅಷ್ಟೇ ಚಿತ್ತಾಕರ್ಷಕವಾದ ಹಾಡು ಸಿಂಧೂಭೈರವಿ ರಾಗದಲ್ಲಿದೆ.  ಕೊನೆ ಭಾಗದಲ್ಲಿರುವ ಕಿರು ಆಲಾಪ್ ಬಲು ಆಕರ್ಷಕ.  70ರ ದಶಕದಲ್ಲಿ ಮತ್ತೆ ಅವರು ಮೀರಾ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದರೂ ಇಂತಹ ಜಾದೂ ಮಾಡಲಾಗಲಿಲ್ಲ.



9. ಮೃಗನಯನಾ ರಸಿಕ ಮೋಹಿನಿ


ಉಳಿದೆಲ್ಲ ಸಿನಿಮಾ ಹಾಡುಗಳ ಮಧ್ಯೆ ಈ ಮರಾಠಿ ನಾಟ್ಯಗೀತೆಯದ್ದು  guest appearance. ಸಂಶಯ ಕಲ್ಲೋಳ್ ನಾಟಕಕ್ಕಾಗಿ ಪಂಡಿತ್ ವಸಂತ ರಾವ್ ದೇಶ್‌ಪಾಂಡೆ ಅವರು ಹಾಡಿದ ದರ್ಬಾರಿ ಕಾನಡಾ ರಾಗದ ಈ  ನಾಟ್ಯಗೀತೆ  ನನ್ನ ಮಟ್ಟಿಗಂತೂ ಆ ಪ್ರಕಾರದಲ್ಲೇ ಅತ್ಯಂತ ಶ್ರೇಷ್ಠವಾದದ್ದು.  ಕೇವಲ ಹಾರ್ಮೋನಿಯಮ್ ಮತ್ತು ತಬ್ಲಾ ಹಿಮ್ಮೇಳ. ಐದೇ ಸಾಲುಗಳ ಸಾಹಿತ್ಯ. ದೇಶಪಾಂಡೆಯವರ ಅಲೌಕಿಕ ಧ್ವನಿಮಾಧುರ್ಯ ಉಳಿದದ್ದನ್ನೆಲ್ಲ ನೋಡಿಕೊಳ್ಳುತ್ತದೆ.  ಸುಲಲಿತವಾಗಿ ಹೊರಹೊಮ್ಮುವ ಅವರ ತಾನ್‌ಗಳು ನಮ್ಮನ್ನೆಲ್ಲೋ ಕಳೆದುಹೋಗುವಂತೆ ಮಾಡುತ್ತವೆ.  ಒಮ್ಮೆ ಆಲಿಸತೊಡಗಿದರೆ ಪೂರ್ತಿ ಮುಗಿಯುವವರೆಗೆ  ಚಿತ್ತ ಅತ್ತಿತ್ತ ಹೋಗದಂತೆ ಕಟ್ಟಿ ಹಾಕುತ್ತವೆ.



10. ಶಿವ ಶಂಕರಿ


ಕನ್ನಡ-ತೆಲುಗು ಹಾಡುಗಳ ಪೈಕಿ ಇದನ್ನು ಮೀರಿಸುವ ಶಾಸ್ತ್ರೀಯ ರಾಗಾಧಾರಿತ ಗೀತೆ ಇದುವರೆಗೆ ಬಂದಿಲ್ಲ ಎಂದು ನನ್ನ ಅಭಿಪ್ರಾಯ. ಇದೂ ದರ್ಬಾರಿ ಕಾನಡಾ ರಾಗದಲ್ಲಿದ್ದು ಪೆಂಡ್ಯಾಲ ನಾಗೇಶ್ವರ ರಾವ್ ನಿರ್ದೇಶನದಲ್ಲಿ ಜಗದೇಕವೀರನ ಕಥೆ ಚಿತ್ರಕ್ಕಾಗಿ ಘಂಟಸಾಲ ಹಾಡಿರುವುದು. ಈ ಚಿತ್ರ ತೆಲುಗಿನ ಜಗದೇಕವೀರುನಿ ಕಥಾ ಚಿತ್ರದ ಕನ್ನಡಕ್ಕೆ ಡಬ್ ಮಾಡಿದ ಅವತರಣಿಕೆ.  ಈ ಹಾಡಿಗೆ ಮೇಲಿನ ಮೃಗನಯನಾ ರಸಿಕ ಮೋಹಿನಿ ಸ್ಪೂರ್ತಿ ಆಗಿರಬಹುದೇನೋ ಎಂಬ ಒಂದು ಸಂಶಯ ನನಗಿದೆ.  ಅದೇ ರಾಗ, ಅದೇ ಸರಳ ಹಿಮ್ಮೇಳ,  ಆರು ನಿಮಿಷಗಳ ಹಾಡಿಗೆ ಇಲ್ಲೂ ಐದೇ  ಸಾಲುಗಳ ಸಾಹಿತ್ಯ.  ಅಲ್ಲಿ ತಾನ್‍ ಗಳು ಮಾತ್ರವಿದ್ದರೆ ಇಲ್ಲಿ ಸ್ವರ ಪ್ರಸ್ತಾರವೂ ಇದೆ. ಮೂರನೇ ಕಾಲದಲ್ಲೂ  ಘಂಟಸಾಲ ಅವರ ನಿರ್ವಹಣೆ ಮತ್ತು ನಿಖರತೆ ಅತ್ಯದ್ಭುತ. ನಡುವೆ ಒಂದೆರಡು ಕಡೆ ಅದೇ ವೇಗದಲ್ಲಿ ಸ್ವರ ಸೇರಿಸಿದ ಕೋರಸ್‌ನವರೂ ಶಾಸ್ತ್ರೀಯ ಸಂಗೀತದಲ್ಲಿ ಪಳಗಿದವರೇ ಇರಬಹುದು.  ಈ ರೀತಿ ಸಾಗುತ್ತಾ ಸಾಗುತ್ತಾ ಕೊನೆಯ ಭಾಗದಲ್ಲಿ climax ತಲುಪಿದಾಗ ಕೇಳುಗರಿಗೆ ತಿರುಗಣೆಯ ಇಳಿಜಾರಿನಲ್ಲಿ ವೇಗವಾಗಿ ಜಾರುತ್ತಾ ಧೊಪ್ಪನೆ ನೀರ ಒಳಗೆ ಬಿದ್ದಂತಾಗುತ್ತದೆ.  ಇನ್ನು ಹಾಡು ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ಶಿವಶಂಕರಿ ಎಂಬ ಸಾಲು ಶಾಂತವಾಗಿ ಮೂಡಿಬಂದಾಗ ಎದ್ದು ಟವೆಲಿನಲ್ಲಿ ಮೈ ಒರಸಿಕೊಂಡ ಅನುಭವ!  ಈ ಹಾಡಿನಲ್ಲಿ ಇನ್ನೊಂದು ರಹಸ್ಯವಿದೆ.  ಹಾಡಿನ ಅಲ್ಪ ಭಾಗವನ್ನಷ್ಟೇ ಆವರಿಸಿರುವ ಸಾಹಿತ್ಯದ 5 ಸಾಲುಗಳಲ್ಲಿ ಮೊದಲಿನ ಶಿವ ಶಂಕರಿ ಶಿವಾನಂದ ಲಹರಿ, ಚಂದ್ರಕಳಾಧರಿ ಈಶ್ವರಿ ಸಾಲುಗಳು ತೆಲುಗು, ಕನ್ನಡ ಎರಡರಲ್ಲೂ ಸಲ್ಲುವಂಥವು.  ಮುಂದಿನ ಕರುಣಾಮೃತವನು ಸುರಿಸೆಯೇನಮ್ಮ, ಮನಸು ಕರಗದೇ ಮಹಿಮೆ ತೋರು ನೀ, ದೀನಪಾಲನವ ಗೈ ಎಲೌ ಇಲ್ಲಿ ಮಾತ್ರ ವ್ಯತ್ಯಾಸ.  ಹೀಗಾಗಿ ಈ ಮೂರು ಸಾಲುಗಳನ್ನು ಮಾತ್ರ ಕನ್ನಡದಲ್ಲಿ ಧ್ವನಿಮುದ್ರಿಸಿ  ಉಳಿದಂತೆ ತೆಲುಗುಹಾಡನ್ನೇ ಉಳಿಸಿಕೊಂಡು ಇವುಗಳನ್ನು ನಾಜೂಕಾಗಿ ಸೂಕ್ತ ಜಾಗದಲ್ಲಿ ಸೇರಿಸಲಾಗಿದೆ. ಹೆಡ್ ಫೋನಿನಲ್ಲಿ ಆಲಿಸುತ್ತಾ ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು ಗುರುತಿಸಬಹುದು.  ಈಗಿನ ಕಟ್ ಅಂಡ್ ಪೇಸ್ಟ್ ಸೌಲಭ್ಯ ಇಲ್ಲದಿದ್ದ ಆ ಕಾಲದಲ್ಲಿ ಇದನ್ನು ಸಾಧಿಸಿದ ಅಂದಿನ ರೆಕಾರ್ಡಿಸ್ಟ್ ಮತ್ತು ಮಿಕ್ಸಿಂಗ್ ತಂತ್ರಜ್ಞರಿಗೆ ನಾವು ಭಲೇ ಎನ್ನಲೇ ಬೇಕು. ತೆಲುಗಿನ ಜಗದೇಕ ವೀರುನಿ ಕಥ ತಮಿಳು ಭಾಷೆಗೂ ಜಗತಾಲ ಪ್ರತಾಪನ್ ಎಂಬ ಹೆಸರಲ್ಲಿ ಡಬ್ ಆಗಿತ್ತು.  ಅದರಲ್ಲಿ ಶಿವಶಂಕರಿ ಹಾಡನ್ನು ನಮಗೆಲ್ಲ ರಾಮನ ಅವತಾರ ಮೂಲಕ ಚಿರ ಪರಿಚಿತರಾಗಿರುವ ಶೀರ್ಕಾಳಿ ಗೋವಿಂದರಾಜನ್ ಹಾಡಿದ್ದರು.  ಹೋಲಿಕೆಗಾಗಿ ಅದನ್ನು ಕೇಳ ಬಯಸುವವರು ಇಲ್ಲಿ ಕ್ಲಿಕ್ಕಿಸಿ.



ಸಂಖ್ಯೆಯನ್ನು ಸೀಮಿತಗೊಳಿಸಲು ಇವಿಷ್ಟೇ ಹಾಡುಗಳನ್ನು ಆಯ್ಕೆ ಮಾಡಿಕೊಂಡದ್ದೇ ಹೊರತು ಆರಾಧಿಸುವೆ ಮದನಾರಿನಾದಮಯ, ಎಲ್ಲೆಲ್ಲೂ ಸಂಗೀತವೇ, ಕಣಕಣದೇ ಶಾರದೆ ಮುಂತಾದವು ಹಾಗೂ ಶಂಕರಾಭರಣಮ್, ಸಾಗರ ಸಂಗಮಂನಂತಹ ಇನ್ನೆಷ್ಟೋ ಚಿತ್ರಗಳ ಶಾಸ್ತ್ರೀಯ ಸಂಗೀತಾಧಾರಿತ ಹಾಡುಗಳು ಇವುಗಳಿಗಿಂತ ಯಾವ ರೀತಿಯಲ್ಲೂ ಕಮ್ಮಿಯಲ್ಲ.