Wednesday, 15 June 2016

ಕ್ಯಾಸೆಟ್ ಲೋಕ

    


     Flash Memoryಯ ಕ್ರಾಂತಿಯಿಂದಾಗಿ ಹಾಡು-ಸಂಗೀತ ಇತ್ಯಾದಿ smart phone/pen driveಗಳಿಗೆ ವಲಸೆ ಹೋದುದರಿಂದ ಕ್ಯಾಸೆಟ್, CD, DVD ಇತ್ಯಾದಿಗಳು ಈಗಾಗಲೇ ಇತಿಹಾಸ ಸೇರಿ ಅನೇಕರು ತಮ್ಮಲ್ಲಿದ್ದ ಕ್ಯಾಸೆಟ್ಟುಗಳನ್ನು ಅಟ್ಟಕ್ಕೆಸೆದಿದ್ದರೂ ನನ್ನ ಕ್ಯಾಸೆಟ್ ಸಂಗ್ರಹ ಈಗಲೂ ಸುಸ್ಥಿತಿಯಲ್ಲಿದೆ. ಸುಮಾರು 25 ವರ್ಷಗಳ ಕಾಲ ವಿವಿಧ ಮೂಲಗಳಿಂದ ಸಂಗ್ರಹಿಸಿದ ಧ್ವನಿಭಂಡಾರ ಇವುಗಳಲ್ಲಿದೆ. ಗ್ರಾಮೊಫೋನ್, ರೇಡಿಯೊ, ಟಿ.ವಿ.ಗಳಿಂದ ನೇರ ಧ್ವನಿಮುದ್ರಿಸಿದವು, ಬೇರೆ ಕ್ಯಾಸೆಟ್ಟುಗಳಿಂದ ಕಾಪಿ ಮಾಡಿದವುಗಳು, ಪೂರ್ವಮುದ್ರಿತವಾದವು , ಮೈಕ್ರೋಫೋನ್ ಮೂಲಕ live ರೆಕಾರ್ಡ್ ಮಾಡಿದವು ಎಲ್ಲವೂ ಇದರಲ್ಲಿವೆ. ಇವುಗಳಲ್ಲಿ ಹೆಚ್ಚಿನವು ಕನ್ನಡ, ಹಿಂದಿ ಹಳೆಯ ಚಿತ್ರಗೀತೆಗಳು. ಕೆಲವು ಖಾಸಗಿ ಅಮೂಲ್ಯ ಧ್ವನಿಗಳು. ಆ ಕಾಲದಲ್ಲಿ ನಾನು ಎಲ್ಲಿಗೆ ಹೋಗುವುದಿದ್ದರೂ ಜೋಳಿಗೆಯಲ್ಲಿ ಟೇಪ್ ರೆಕಾರ್ಡರ್, ಖಾಲಿ ಕ್ಯಾಸೆಟ್ ಮತ್ತು ಒಂದು ep to ep ಕೇಬಲ್  ಇದ್ದೇ ಇರುತ್ತಿದ್ದವು. ಯಾರಲ್ಲಾದರೂ ನನಗೆ ಬೇಕಿದ್ದ ಹಾಡುಗಳಿವೆ ಎಂದಾದರೆ ಕೂಡಲೇ ನನ್ನ ಕ್ಯಾಸೆಟ್ಟಿಗೆ ವರ್ಗಾಯಿಸಿಕೊಂಡು ಬಿಡುತ್ತಿದ್ದೆ. ಧಾರವಾಡ , ಬೆಂಗಳೂರಿಗೆ ಹೋದಾಗ ಸಮಯ ಸಿಕ್ಕಿದಾಗೆಲ್ಲ two in one ಸಿದ್ಧವಾಗಿಟ್ಟುಕೊಂಡು ಅಲ್ಲಿಯ ವಿವಿಧಭಾರತಿಯಲ್ಲಿ ಹಳೆ ಹಾಡುಗಳಿಗೆ ಹೊಂಚು ಹಾಕುವುದೇ ಕೆಲಸ. ಗುಣಮಟ್ಟ ಚೆನ್ನಾಗಿರುವುದಿಲ್ಲ ಎಂದು ಗೊತ್ತಿದರೂ ಎಷ್ಟೋ ಸಲ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಕ್ಯಾಸೆಟ್ಟುಗಳನ್ನು ಕೊಂಡು ಅವುಗಳಿಂದ ನನಗೆ ಬೇಕಿದ್ದುದನ್ನು ಉತ್ತಮ ಟೇಪಿಗೆ ಭಟ್ಟಿ ಇಳಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಸಿನಿಮಾ ಟಾಕೀಸೊಳಗೆ ಟೇಪ್ ರೆಕಾರ್ಡರ್ ಒಯ್ದು ಚಿತ್ರ ನಡೆಯುತ್ತಿರುವಾದ ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೇನೆ. ನಾನು ಟೇಪ್ ರೆಕಾರ್ಡರ್ ಕೊಂಡ ಹೊಸತರಲ್ಲಿ ನಮ್ಮ ಬಾಡಿಗೆ ಮನೆ ಪಕ್ಕ ಇದ್ದವರಲ್ಲಿ ಕೆಲವು ಹಳೆ ಹಾಡುಗಳ ಗ್ರಾಮೊಫೋನ್ ತಟ್ಟೆಗಳಿದ್ದವು.  ರೆಕಾರ್ಡ್ ಪ್ಲೇಯರನ್ನು ಫಿಲಿಪ್ಸ್ ರೇಡಿಯೊಗೆ ಜೋಡಿಸಿ ಅವರು ಹಾಡುಗಳನ್ನು ಕೇಳುತ್ತಿದ್ದರು.  ಅಲ್ಲಿ ಕೇಬಲ್ ಮೂಲಕ ನೇರ ರೆಕಾರ್ಡಿಂಗ್ ವ್ಯವಸ್ಥೆ ಇಲ್ಲದ್ದರಿಂದ ಅವರ ರೇಡಿಯೊ ಎದುರುಗಡೆ ಟೇಪ್ ರೆಕಾರ್ಡರ್ ಇಟ್ಟು ತುಮ್ಸಾ ನಹೀಂ ದೇಖಾ ಚಿತ್ರದ LPಯಲ್ಲಿದ್ದ ಅಷ್ಟೂ ಹಾಡುಗಳನ್ನು ಧ್ವನಿಮುದ್ರಿಸಿಕೊಂಡಿದ್ದೆ.  ಅವರ ಪತ್ನಿ ಉರಿಸಿದ್ದ ಸೀಮೆ ಎಣ್ಣೆ ಸ್ಟವ್ ಹೊರಡಿಸುತ್ತಿದ್ದ ಹಿಸ್ ಶಬ್ದವೂ ಜೊತೆಗೇ ರೆಕಾರ್ಡ್ ಆಗಿತ್ತು!  ಪೂನಾದಲ್ಲಿರುವ ನಮ್ಮ ಅಣ್ಣನ ಮನೆಯಲ್ಲೂ ಒಂದು ಗ್ರಾಮೊಫೋನ್ ರೆಕಾರ್ಡ್ ಪ್ಲೇಯರ್ ಇತ್ತು.  ಬಾಡಿಗೆಗೆ ಗ್ರಾಮೊಫೋನ್ ರೆಕಾರ್ಡುಗಳನ್ನು ತಂದು ಅದರಲ್ಲಿ ನುಡಿಸಿ ಅನೇಕ ಹಾಡುಗಳನ್ನು ಕ್ಯಾಸೆಟ್ಟಲ್ಲಿ  ಧ್ವನಿಮುದ್ರಿಸಿಕೊಂಡಿದ್ದೆವು. ಈ ರೀತಿ ಗ್ರಾಮೊಫೋನ್ ರೆಕಾರ್ಡುಗಳಿಂದ ನೇರವಾಗಿ ನಮ್ಮ ಟೇಪ್ ರೆಕಾರ್ಡರಲ್ಲಿ ಧ್ವನಿಮುದ್ರಿಸಿದಾಗ pre recorded ಕ್ಯಾಸೆಟ್ಟುಗಳಲ್ಲೂ ಸಿಗದ ಅತ್ಯುತ್ಕೃಷ್ಟ  ಮಟ್ಟದ ರೆಕಾರ್ಡಿಂಗ್ ಲಭ್ಯವಾಗುತ್ತಿತ್ತು.  ಹಿಂದಿನ ಕಪ್ಪು ಬಿಳುಪು ಟಿ.ವಿ. ಹಾಗೂ ರೇಡಿಯೊದಿಂದ ನೇರವಾಗಿ ಮಾಡಿದ ರೆಕಾರ್ಡಿಂಗ್ ಕೂಡ ಬಲು ಉತ್ತಮವಾಗಿರುತ್ತಿತ್ತು.

     ಇನ್ನು ಸಿಗಲಾರದ ಕೆಲವು ಅಮೂಲ್ಯ ಧ್ವನಿಮುದ್ರಣಗಳನ್ನು ಕೆಲವು ಸಲ ಕಣ್ತಪ್ಪಿನಿಂದ, ಕೆಲವೊಮ್ಮೆ ಇನ್ನೇನನ್ನೋ ರೆಕಾರ್ಡ್ ಮಾಡಲು ಕ್ಯಾಸೆಟ್ ಅಗತ್ಯ ಬಿದ್ದುದರಿಂದ ಅಳಿಸಿ ಹಾಕಿ ಆ ಮೇಲೆ ಪಶ್ಚಾತ್ತಾಪ ಪಟ್ಟದ್ದಿದೆ.  ನಾವು  ಕಲಾನಿಕೇತನ ಸಂಗೀತಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ್ದ ಸುಮಾರು ಒಂದು ಗಂಟೆಯ ವೀಣಾ-ವೇಣು ಕಾರ್ಯಕ್ರಮದ ಧ್ವನಿಮುದ್ರಣ ಹಾಗೆ ಅಳಿಸಿಹೋದವುಗಳ ಪೈಕಿ ಒಂದು.  ನಮ್ಮ ತಾಯಿಯವರ ಪಂಚಭಾಷಾ ಹಾಡು, ಈಗಿಲ್ಲದ ನಮ್ಮ ಹಿರಿಯಣ್ಣಂದಿರ ಪೂಜಾಮಂತ್ರಗಳು,  ನಮ್ಮ ಆಫೀಸಿನಲ್ಲಿ ಸಂಜೆ ನಡೆಸುತ್ತಿದ್ದ ದಿನ ನಿತ್ಯದ ‘ಆರ್ಕೆಷ್ಟ್ರಾ’,  ಕ್ಲಬ್ ಡೇ ಸಂದರ್ಭದ ರಸಮಂಜರಿ ಭಾಗಗಳು, ಮಕ್ಕಳು ಚಿಕ್ಕವರಾಗಿದ್ದಾಗ ಆಡಿದ ಮಾತುಗಳು, ಹಾಡಿದ ಹಾಡುಗಳು, ನಮ್ಮೂರಿನ ನದಿಯ ಕಟ್ಟ ಕಟ್ಟಿ ಕೆಲವೇ ದಿನಗಳಲ್ಲಿ ಕಡಿದುಹೋದಾಗ ನಡೆದ ಊರವರ ಬಿಸಿ ಬಿಸಿ ವಾಗ್ವಾದ ಮುಂತಾದವುಗಳು ಇನ್ನೂ ಭದ್ರವಾಗಿವೆ. 

    ಕ್ಯಾಸೆಟ್ಟುಗಳನ್ನು ಇತರರು ಕೇಳಿ ಕೊಂಡೊಯ್ಯುವ ಸಂದರ್ಭ ಬರದಂತೆ ಎಚ್ಚರ ವಹಿಸುತ್ತಿದ್ದೆ.  ಏಕೆಂದರೆ ಪ್ರಸಿದ್ಧ ಶ್ಲೋಕವೊಂದನ್ನು ಕೊಂಚ ಬದಲಾಯಿಸಿ ಕ್ಯಾಸೆಟ್ ಚ ಪುಸ್ತಕಂ ವಿತ್ತಂ ಪರಹಸ್ತಗತಂ ಗತಂ| ಯದಿಚೇತ್ ಪುನರಾಯಾತಮ್ ನಷ್ಟಂ ಭ್ರಷ್ಟಂಚ ಖಂಡಿತಂ || (ಕ್ಯಾಸೆಟ್, ಪುಸ್ತಕ ಮತ್ತು ಧನ ಇನ್ನೊಬ್ಬರ ಕೈಗೆ ಹೋದರೆ ಹೋದಂತೆಯೇ. ಒಂದು ವೇಳೆ ಮರಳಿದರೂ ಮೊದಲಿದ್ದಂತೆ ಇರಲಾರವು. ಮೂಲ ಶ್ಲೋಕದಲ್ಲಿ ಕ್ಯಾಸೆಟ್ ಜಾಗದಲ್ಲಿ ಬೇರೆ ಪದವಿದೆ.)ಎಂದು ನಂಬಿದವನು ನಾನು!  ಅಂಥ ಪ್ರಸಂಗ ಬಂದಾಗ "ನೀವೊಂದು ಖಾಲಿ ಕ್ಯಾಸೆಟ್ ಕೊಡಿ, ಅದರಲ್ಲಿ ಧ್ವನಿಮುದ್ರಿಸಿ ಕೊಡುತ್ತೇನೆ " ಅನ್ನುತ್ತಿದ್ದೆ.  ಇದರಿಂದಾಗಿ ಕೆಲವರು ಅಸಮಾಧಾನಗೊಂಡದ್ದೂ ಇದೆ.

     ಈಗ ಈ ಕ್ಯಾಸೆಟ್ಟುಗಳಲ್ಲಿ ಅಡಗಿ ಕುಳಿತಿರುವ ಬಹುತೇಕ ಧ್ವನಿತರಂಗಗಳು  ಡಿಜಿಟಲೀಕರಣಗೊಂಡು ಕಂಪ್ಯೂಟರಿನುದರ ಸೇರಿದ್ದರೂ ಈಗಲೂ ಒಮ್ಮೊಮ್ಮೆ ಟೇಪ್ ರೆಕಾರ್ಡರಲ್ಲಿ ಇವುಗಳ analog ದನಿಯನ್ನು ಆಲಿಸಿ ಆನಂದಿಸುವುದಿದೆ. ವಾಸ್ತವವಾಗಿ  mp3 ಇತ್ಯಾದಿ ವಿಧಗಳಿಗೆ ಪರಿವರ್ತಿತವಾದ  ಧ್ವನಿಯನ್ನು ಕೇಳುವಾಗ ಮೂಲದಲ್ಲಿದ್ದ ಧ್ವನಿಯ ಒಂದಂಶ ಮಾತ್ರ ನಮ್ಮ ಕಿವಿಗೆ ಬಿದ್ದು ವಿಜ್ಞಾನವು ನಮಗೆ ಮಾಡುವ ‘ಮೋಸ’ಕ್ಕೆ ಬಲಿಯಾಗುತ್ತಿರುತ್ತೇವೆ.  ಏಕೆಂದರೆ  PCM(Pulse Code Modulation)ನಲ್ಲಿ sampling ಮೂಲಕ digital ರೂಪಕ್ಕೆ ಪರಿವರ್ತನೆ ನಡೆಯುತ್ತದೆ. ಸ್ಥೂಲವಾಗಿ ಹೇಳುವುದಾದರೆ sampling ಮಾಡುವಾಗ ಧ್ವನಿಯ ವಾಹಿನಿಯನ್ನು ಅತಿ ಚಿಕ್ಕ ಚಿಕ್ಕ ತುಂಡುಗಳಾಗಿ ವಿಭಾಗಿಸಿ ಉದಾಹರಣೆಗೆ 1ನೇ ತುಂಡು, 33ನೇ ತುಂಡು,  65ನೇ ತುಂಡು ಇತ್ಯಾದಿಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. Sampling rate ಹೆಚ್ಚಾಗಿದ್ದಷ್ಟು ಹತ್ತಿರದ ತುಂಡುಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಧ್ವನಿಯ ಗುಣಮಟ್ಟ ಚೆನ್ನಾಗಿರುತ್ತದೆ.  128 KBPSಗಿಂತ ಕಮ್ಮಿ bit rate ಮತ್ತು 44.1Khzಗಿಂತ ಕಮ್ಮಿ sampling rate  ಇರುವ mp3 ಧ್ವನಿಯಂತೂ ತುಂಬಾ ನೀರಸವಾಗಿರುತ್ತದೆ. ಒಂದರ್ಥದಲ್ಲಿ ಡೇರಿಯವರು ನಮಗೆ ಕೊಡುವ ಕೆನೆ ರಹಿತ toned milk ಇದ್ದಂತೆ.   ಹೀಗಾಗಿ analog ಧ್ವನಿಯ ಸುಖ digitalನಲ್ಲಿ ಎಂದೂ ಸಿಗಲಾರದು.

     ಕ್ಯಾಸೆಟ್ಟುಗಳ ಆಗಮನದಿಂದ ಅನೇಕ ಸ್ಥಳೀಯ ಕಲಾವಿದರು ಮುಂಚೂಣಿಗೆ ಬರುವಂತಾಯಿತು.  ಅದುವರೆಗೆ ಧ್ವನಿಮುದ್ರಣಕ್ಕಾಗಿ ದೂರದ ಮದರಾಸು, ಮುಂಬಯಿಗಳಿಗೆ ಹೋಗಿ ಗ್ರಾಮೊಫೋನ್ ತಟ್ಟೆಗಳನ್ನೇ ಹೊರತರಬೇಕಾಗುತ್ತಿತ್ತು.  ಕ್ಯಾಸೆಟ್ಟುಗಳಲ್ಲದಿದ್ದರೆ ವಿದ್ಯಾಭೂಷಣ, ರಾಜಕುಮಾರ್, ನರಸಿಂಹ ನಾಯಕ್ ಭಕ್ತಿಗೀತೆಗಳು, ನೂರಾರು ಯಕ್ಷಗಾನ ಪ್ರಸಂಗಗಳು ಮನೆ ಮನೆ ತಲುಪುತ್ತಿರಲಿಲ್ಲ. ಆಗ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ  ವಿದ್ಯಾಭೂಷಣರ ಹಾಡುಗಾರಿಕೆಗೂ ನನ್ನ ಟೇಪ್ ರೆಕಾರ್ಡರಿಗೂ ವಿಶೇಷ ನಂಟೊಂದಿದೆ.   ಭಕ್ತಿಸಂಗೀತ ಕ್ಷೇತ್ರದಲ್ಲಿ ಆಗಷ್ಟೇ ಪ್ರವರ್ಧಮಾನಕ್ಕೆ ಬರತೊಡಗಿದ್ದ ಅವರ ಕೆಲವು ಹಾಡುಗಳನ್ನು ಮೊತ್ತ ಮೊದಲ ಬಾರಿಗೆ 1979ರಲ್ಲಿ ನಮ್ಮ ಗುರು ಗೋಪಾಲಕೃಷ್ಣ ಅಯ್ಯರ್ ಅವರ  ಕೊಳಲು ವಾದನದ ಹಿಮ್ಮೇಳದೊಂದಿಗೆ ನನ್ನ ಟೇಪ್ ರೆಕಾರ್ಡರಲ್ಲಿ ಧ್ವನಿ ಮುದ್ರಿಸಿ ಅಯ್ಯರ್ ಅವರ ಭಾವ ಟಿ.ವಿ.ಗೋಪಾಲಕೃಷ್ಣನ್  ಅವರ ಸೂಚನೆ ಮೇರೆಗೆ ಮದರಾಸಿಗೆ ಆಡಿಷನ್ನಿಗೆ ಕಳಿಸಲಾಗಿತ್ತು.  ಇದಕ್ಕಾಗಿ ನನ್ನಲ್ಲಿದ್ದ ಹಸಿರು ಬಣ್ಣದ ಹೊಚ್ಚ ಹೊಸ Sony C90 ಕ್ಯಾಸೆಟ್ ಉಪಯೋಗಿಸಿದ ನೆನಪು ನನ್ನಲ್ಲಿನ್ನೂ ಹಸಿರಾಗಿದೆ.  ಇದಕ್ಕಾಗಿ ನಾವು 1979 ಜನವರಿ 20ರಂದು ಸುಬ್ರಹ್ಮಣ್ಯಕ್ಕೆ ಹೋದ ಘಟನೆ ನನ್ನ ದಿನಚರಿಯಲ್ಲಿ ದಾಖಲಾಗಿದೆ.(ಅದರಲ್ಲಿ ಸುಬ್ರಮ್ಹಣ್ಯ ಎಂದು ತಪ್ಪಾಗಿ ಬರೆದಿದ್ದೆ!)  ಆ ಕ್ಯಾಸೆಟ್ಟನ್ನು ಕೂಡಲೇ ಮದರಾಸಿಗೆ ಕಳಿಸಬೇಕಾಗಿದ್ದರಿಂದ ಇನ್ನೊಂದು ಟೇಪ್ ರೆಕಾರ್ಡರ್ ಹುಡುಕಿ ಕಾಪಿ ಮಾಡಿಟ್ಟುಕೊಳ್ಳುವಷ್ಟು ವ್ಯವಧಾನವಿರಲಿಲ್ಲ.



     ಶಾಲಾ ವಾರ್ಷಿಕೋತ್ಸವಗಳಲ್ಲಿ ಅಧ್ಯಾಪಕರು ಕಲಿಸಿಕೊಟ್ಟ ಹಾಡು, ನೃತ್ಯಗಳ ಬದಲಿಗೆ ಫಿಲ್ಮಿ ಡ್ಯಾನ್ಸುಗಳು   ಕಾಣಿಸಿಕೊಳ್ಳುವಂತಾಗಲು ಕ್ಯಾಸೆಟ್ಟುಗಳೇ ಕಾರಣ. ನುಡಿಸಬೇಕಾದ ಕ್ಯಾಸೆಟ್ಟು ಬದಲಾದಾಗ ಅಥವಾ ಕೆಟ್ಟು ನಡುವಿನಲ್ಲಿ ನಿಂತುಬಿಟ್ಟಾಗ ವೇದಿಕೆಯಲ್ಲಿ ಕಾಣಸಿಗುವ ದೃಶ್ಯ ಆ ನೃತ್ಯಕ್ಕಿಂತ ಹೆಚ್ಚು ಮನರಂಜನೆ ನೀಡುತ್ತಿದ್ದುದುಂಟು! ಈಗಂತೂ ಈ ಫಿಲ್ಮಿ ಡ್ಯಾನ್ಸುಗಳು   "ನಿಮಗೆ ಬೇಕಿದ್ದ ಹಾಡು ತಂದು ಡ್ಯಾನ್ಸ್ ಮಾಡಿ ಮಕ್ಕಳೇ" ಎಂದು ಅಧ್ಯಾಪಕರು ಮಕ್ಕಳಿಗೇ ಆಯ್ಕೆಯ ಸ್ವಾತಂತ್ರ್ಯ ಕೊಡುವ  ಹಂತಕ್ಕೆ ಮುಟ್ಟಿವೆ.

     ಟೇಪ್ ಸಿಕ್ಕಿ ಹಾಕಿಕೊಳ್ಳುವುದು, headಗೆ ಟೇಪಿನ ಅಂಶ ಅಂಟಿಕೊಂಡು ಸರಿಯಾಗಿ ಕೇಳಿಸದಂತಾಗುವುದು, ಇದ್ದಕ್ಕಿದ್ದಂತೆ ಕೀಚ್ ಕೀಚ್ ಎಂಬ ವಿಕಾರ ಧ್ವನಿ ಕೇಳಿಸತೊಡಗುವುದು, ಕ್ಯಾಸೆಟ್ಟಿನ ಉತ್ತರಾರ್ಧದಲ್ಲಿ ವೇಗ ಕಮ್ಮಿಯಾಗುತ್ತಾ ಹೋಗಿ ನಿಂತೇ  ಬಿಡುವುದು, ಟೇಪನ್ನು ಕೈಬೆರಳಿಂದಲೂ ತಿರುಗಿಸಲಾಗದಷ್ಟು ಬಿಗಿಯಾಗುವುದು, ಬೇರೆಡೆ ಧ್ವನಿಮುದ್ರಿತ/ಪೂರ್ವ ಮುದ್ರಿತ ಕ್ಯಾಸೆಟ್ ಆಲಿಸುವಾಗ ವೇಗ ವ್ಯತ್ಯಾಸದಿಂದ ರಸಭಂಗವಾಗುವುದು ಮುಂತಾದವು ಕ್ಯಾಸೆಟ್ ಯುಗದಲ್ಲಿ ಅನುಭವಿಸಬೇಕಾಗುತ್ತಿದ್ದ ಕಿರಿಕಿರಿಗಳು.  ಪೆನ್ಸಿಲ್ ಉಪಯೋಗಿಸಿ ಸಡಿಲುಗೊಂಡ ಟೇಪ್ ಬಿಗಿಗೊಳಿಸುತ್ತಿದ್ದುದಂತೂ ಅಂದಿನ ದಿನಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ದೃಶ್ಯ.  ಇಷ್ಟೆಲ್ಲ ಇದ್ದರೂ ಆ ಯುಗಕ್ಕೆ ಅದರದ್ದೇ ಆದ ಒಂದು ಮುದವಿತ್ತು.

     ಕೆಳಗಿನ ಚಿತ್ರದಲ್ಲಿರುವ ನನ್ನ ಕ್ಯಾಸೆಟ್ ಸಂಗ್ರಹದಲ್ಲಿ ಸೋನಿ ಟೇಪುಗಳದ್ದೇ ಸಿಂಹಪಾಲು ಎಂಬುದನ್ನು ಗಮನಿಸಬಹುದು. ಮೇಲೆ ಹೇಳಿದ ಕ್ಯಾಸೆಟ್ ಕಿರಿಕಿರಿಗಳು ಸೋನಿಯಲ್ಲಿ ಇಲ್ಲವೆನ್ನುವಷ್ಟು ಕಮ್ಮಿ.  ಹಾಗಾಗಿ ನಾನು ಸೋನಿ ಅಭಿಮಾನಿ.  ನನ್ನ ಅಭಿಮಾನಕ್ಕೆ ಪೂರಕವಾಗಿ ರೇಡಿಯೋ ಸಿಲೋನಿನಲ್ಲಿ ಬರುತ್ತಿದ್ದ ಸೋನಿ ಟೇಪ್ ಕುರಿತ ಜಿಂಗಲ್ ಒಂದನ್ನು ಕೇಳಿ.




     ನಾನು ಕಲಾನಿಕೇತನದಲ್ಲಿ ಕೊಳಲು ಕಲಿಯುತ್ತಿದ್ದಾಗ  1978ರಲ್ಲಿ ಆಕಾಶವಾಣಿಯ ಯುವವಾಣಿಯಲ್ಲಿ ಕೆ.ಹರಿಶ್ಚಂದ್ರನ್ ಮೃದಂಗ ಮತ್ತು ಎ.ಆರ್.ಕೃಷ್ಣಮೂರ್ತಿ ವಯಲಿನ್ ಪಕ್ಕವಾದ್ಯದೊಂದಿಗೆ ನುಡಿಸಿದ ಪರಿಧಾನಮಿಚ್ಚಿತೆ ಕೀರ್ತನೆಯನ್ನು ರೇಡಿಯೊದಿಂದ ನೇರವಾಗಿ ಕ್ಯಾಸೆಟ್ಟಲ್ಲಿ ಧ್ವನಿಮುದ್ರಿಸಿಕೊಂಡಿದ್ದೆ.  ಅದರ mp3 ರೂಪ ಇಲ್ಲಿದೆ.  ಆರಂಭದಲ್ಲಿ ಕೆ.ಟಿ.ಕೃಷ್ಣಕಾಂತ್ ಅವರ announcement ಕೇಳಬಹುದು.

 

  

1 comment:

  1. ಕ್ಯಾಸೆಟ್ ಗಳು ಕೆಲವೊಮ್ಮೆ ರೆಕಾರ್ಡರ್ ನಲ್ಲಿ ಸಿಕ್ಕಿ ಹಾಕಿಕೊಂಡಾಗ ಅದನ್ನು ಎಷ್ಟು ಕಾಳಜಿ ವಹಿಸಿದರೂ ಹೊರ ತೆಗೆಯಲು ಬರುತ್ತಿರಲಿಲ್ಲ.ಆಗ ಒಂದೇ ಒಂದು ಕಡೆಯ ಉಪಾಯವೆಂದರೆ ಟೇಪ್ ಕಟ್ ಮಾಡಿ ತೆಗೆಯುವುದು.ಮುಂದೆ ಆ ಕ್ಯಾಸೆಟ್ಟಿನ ಶೆಲ್ಲನ್ನು ಬಿಚ್ಚಿ ಆ ಟೇಪಿನ ಎರಡು ಕೊನೆಗಳನ್ನು ಫೆವಿಬಾಂಡ್ ನಿಂದ ಅಂಟಿಸಿ ಮತ್ತೆ ಆ ಶೆಲ್ಲನ್ನು ಸರಿಯಾಗಿ ಜೋಡಿಸಿದಾಗ ಆಪರೇಷನ್ success ಆದ ಹಾಗೆ ಆಗುತ್ತಿತ್ತು.ಇದನ್ನು ಮಾಡಲು ಮಾತ್ರ ಸ್ವಲ್ಪ ಜಾಣ್ಮೆ ಬೇಕಾಗುತ್ತಿತ್ತು.

    ReplyDelete

Your valuable comments/suggestions are welcome