ಕೋಪವೇಕೆ ಕೋಪವೇಕೆ ಅಜ್ಜಿ
ಈ ತಾಪವೇಕೆ ಮನಸಿಗೆ ಅಜ್ಜಿ
ಬಿಡು ನಿನ್ನ ಕೋಪ ತಾಳು ಶಾಂತ ರೂಪ
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ....
ಅನೇಕರು ಈ ಹಾಡು ಕೇಳಿಯೇ ಇರಲಿಕ್ಕಿಲ್ಲ. ಕೆಲವರು ಬಹಳ ಹಿಂದೆ ಕೇಳಿ ಈಗ ಮರೆತಿರಬಹುದು. ಬೆಂಗಳೂರು ವಿವಿಧಭಾರತಿ ಮತ್ತು FM Rainbow ನಿಯಮಿತವಾಗಿ ಆಲಿಸುವವರು ಆಗೊಮ್ಮೆ ಈಗೊಮ್ಮೆ ಇತ್ತೀಚಿನ ದಿನಗಳಲ್ಲೂ ಕೇಳಿರಬಹುದು. ಹಾಗೆ ಕೇಳಿದವರಿಗೆ ಹಿಂದಿಯಲ್ಲಿ ದಾದಿಯಮ್ಮಾ ದಾದಿಯಮ್ಮಾ ಮಾನ್ ಜಾವೊ ಎಂಬ ಹಾಡೂ ಸುಮಾರಾಗಿ ಇದೇ ರೀತಿ ಇದೆಯಲ್ಲ ಎಂದು ಅನ್ನಿಸಿರಬಹುದು. ಅವರ ಅನಿಸಿಕೆ ಸರಿ. ತೆಲುಗು ಶಾಂತಿನಿವಾಸಂ ಆಧರಿಸಿ ಹಿಂದಿಯಲ್ಲಿ ಘರಾನಾ ಆಗಿದ್ದ ಚಿತ್ರವನ್ನು ಆರ್. ನಾಗೇಂದ್ರ ರಾಯರು ಪತಿಯೇ ದೈವ ಎಂಬ ಹೆಸರಲ್ಲಿ ನಿರ್ಮಿಸಿದಾಗ ಅಲ್ಲಿಯ ದಾದಿಯಮ್ಮಾ ಇಲ್ಲಿಯ ಅಜ್ಜಿ ಆದಳು. ಆರ್. ಎನ್. ಜಯಗೋಪಾಲ್ ಅವರು ಕನ್ನಡ ಜಾಯಮಾನಕ್ಕೆ ಹೊಂದುವಂತೆ ರಚಿಸಿದ ಸುಂದರ ಗೀತೆಗೆ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಹಿಂದಿಯ ಧಾಟಿ ಬಳಸದೆ ಸ್ವತಂತ್ರವಾಗಿ ರಾಗ ಸಂಯೋಜನೆ ಮಾಡಿ ಸ್ವಂತಿಕೆ ಮೆರೆದರು. ಬೆಂಗಳೂರು ಲತಾ ಮತ್ತು ಅಂಜಲಿ ಸೊಗಸಾಗಿ ಹಾಡಿದರು.
ಒಂದು ಭಾಷೆಯಲ್ಲಿ ಯಶಸ್ಸು ಕಂಡ ಚಿತ್ರಗಳು ಇತರ ಭಾಷೆಗಳಲ್ಲೂ ಬರುವುದು ಆಗಲೂ ಇತ್ತು ಈಗಲೂ ಇದೆ. 60ರ ದಶಕದ ಆರಂಭದ ವರೆಗೆ ಅನೇಕ ಚಿತ್ರಗಳು ನೇರವಾಗಿ ಕನ್ನಡಕ್ಕೆ ಡಬ್ ಆಗುತ್ತಿದ್ದವು. ವೀರ ಜಬಕ್, ಜಿಂಬೋ ನಗರ ಪ್ರವೇಶ, ಮೋಹಿನಿ ರುಕ್ಮಾಂಗದ, ಮಾಯಾ ಬಜಾರ್, ಜಗದೇಕವೀರನ ಕಥೆ, ಸಂಪೂರ್ಣ ರಾಮಾಯಣ ಮುಂತಾದವುಗಳನ್ನು ಈ ರೀತಿ ಡಬ್ ಆಗಿ ಬಂದ ಚಿತ್ರಗಳಿಗೆ ಉದಾಹರಣೆಯಾಗಿ ನೆನಪು ಮಾಡಿಕೊಳ್ಳಬಹುದು. ಇವುಗಳಲ್ಲಿ ಹಾಡುಗಳು ಮೂಲ ಚಿತ್ರದ ಟ್ಯೂನನ್ನೇ ಹೊಂದಿದ್ದು ಭಾಷೆ ಮಾತ್ರ ಕನ್ನಡ ಆಗಿರುತ್ತಿತ್ತು. ಆದರೆ ನಟ ನಟಿಯರ ತುಟಿ ಚಲನೆಗೆ ಹೊಂದಿಕೊಳ್ಳುವಂತೆ ಮಾಡಲು ಕನ್ನಡ ಭಾಷಾ ಶುದ್ಧತೆಯೊಡನೆ ಒಂದಷ್ಟು ರಾಜಿ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೂ ಈ ರೀತಿ ಡಬ್ ಆದ ಚಿತ್ರಗಳ ಅದೆಷ್ಟೋ ಹಾಡುಗಳು ತುಂಬಾ ಜನಪ್ರಿಯವಾಗುತ್ತಿದ್ದವು. ಮಾಯಾ ಬಜಾರಿನ ವಿವಾಹ ಭೋಜನವಿದು, ಸಂಪೂರ್ಣ ರಾಮಾಯಣದ ಪ್ರಿಯ ಜೀವನದ ಪರ್ಣಕುಟಿಯೊಳ್ ಹಾಡುಗಳನ್ನು ಈ ನಿಟ್ಟಿನಲ್ಲಿ ಉಲ್ಲೇಖಿಸಬಹುದು. ಮುಂದೆ ಕನ್ನಡನಾಡಿನಲ್ಲಿ ಡಬ್ಬಿಂಗ್ ವಿರೋಧಿ ಅಲೆ ಪ್ರಬಲವಾದಾಗ ಈ ಪರಿಪಾಠ ನಿಂತು ಹೋಗಿ ರೀ ಮೇಕ್ ಯುಗ ಆರಂಭವಾಯಿತು. ಇದರಲ್ಲಿ ಕಥಾ ಹಂದರ ಮಾತ್ರ ಮೂಲ ಚಿತ್ರದ್ದಿದ್ದು ತಾಂತ್ರಿಕ ವರ್ಗ, ನಟ ನಟಿಯರು ಬೇರೆಯೇ ಆಗಿರುತ್ತಿದ್ದರು. ಹಾಡುಗಳ ಸನ್ನಿವೇಶಗಳು ಮಾತ್ರ ಬಹುತೇಕ ಮೂಲ ಚಿತ್ರದಲ್ಲಿದ್ದಂತೆಯೇ ಇರುತ್ತಿದ್ದವು. ಆದರೆ ಹೆಚ್ಚಿನ ಸಂಗೀತ ನಿರ್ದೇಶಕರು ಮೂಲ ಧಾಟಿಯನ್ನು ನಕಲು ಮಾಡದೆ ತಮ್ಮ ರಾಗಸಂಯೋಜನೆಯ ನೈಪುಣ್ಯ ತೋರಿಸುವಲ್ಲಿ ಸಫಲರಾಗುತ್ತಿದ್ದರು. ಅನೇಕ ಸಲ ಕನ್ನಡ ಹಾಡುಗಳು ಮೂಲ ಭಾಷೆಯ ಹಾಡನ್ನು ಮೀರಿಸಿವೆ ಅನ್ನಿಸಿದರೆ ಕೆಲವೊಂದು ಸಪ್ಪೆ ಅನ್ನಿಸಿದ್ದೂ ಇದೆ. ಹೋಲಿಕೆಗಾಗಿ ಈ ಕೆಲವು ಹಾಡುಗಳನ್ನು ಗಮನಿಸಬಹುದು.
ಈ ವಿಚಾರಗಳೆಲ್ಲ ನೆನಪಾಗಲು ಕಾರಣವಾದ ಪತಿಯೇ ದೈವ ಚಿತ್ರದ ಅಜ್ಜಿಯ ಕೋಪದ ಹಾಡು ಅನೇಕ ವರ್ಷಗಳ ನಂತರ ಕೇಳಲು ಸಿಕ್ಕಿತು. ಆ ಚಿತ್ರದ ವೀಡಿಯೊ ಲಭ್ಯ ಇಲ್ಲದೆ ಇರುವುದರಿಂದ ಹಿಂದಿಯ ದಾದಿಯಮ್ಮಾ ಹಾಡಿನ ಮೇಲೆ ಇದನ್ನು superimpose ಮಾಡುವ ಯೋಚನೆ ಮೂಡಿತು. ಕಾರ್ಯಗತವೂ ಆಯಿತು. ಪರಿಣಾಮ ನಿಮ್ಮ ಮುಂದಿದೆ. ನೋಡಿ. ಅಭಿಪ್ರಾಯ ತಿಳಿಸಿ. ಪಕ್ಕದಲ್ಲೇ original ಹಿಂದಿ ವಿಡಿಯೊ ಕೂಡ ಇದೆ.
ಇದು ವೀಡಿಯೊ ರಹಿತ ಹಾಡು ಬಯಸುವವರಿಗಾಗಿ