ಈ ಹಾಡು ಧ್ವನಿ ಮುದ್ರಣಗೊಂಡದ್ದು ಆಕಾಶವಾಣಿ ಮದರಾಸು ಕೇಂದ್ರದಲ್ಲಿ. ಹಾಡಿದವರು Madras AIR Choral Group ನವರು. ಸಂಗೀತ ನೀಡಿದವರು ಆಂಧ್ರದಲ್ಲಿ ಹುಟ್ಟಿ, ತಮಿಳುನಾಡಲ್ಲಿ ಬೆಳೆದು, ಮಲಯಾಳಂ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಪ್ರಸಿದ್ಧರಾದ ಎಂ. ಬಿ. ಶ್ರೀನಿವಾಸನ್. ಆದರೂ ನಮ್ಮ ಆರ್. ಎನ್. ಜಯಗೋಪಾಲ್ ಬರೆದ ಈ ಹಾಡು ಅಂದೂ, ಇಂದೂ, ಎಂದೆಂದೂ ನಮ್ಮದು.
ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಗಣರಾಜ್ಯೋತ್ಸವ ಮೊದಲಾದ ಸಂದರ್ಭಗಳಲ್ಲಿ ಕನ್ನಡನಾಡಿನ ಆಕಾಶವಾಣಿ ಕೇಂದ್ರಗಳಲ್ಲಿ ಬೆಳಗಾಗುತ್ತಿದ್ದುದೇ ಈ ಹಾಡಿನ ಮೂಲಕ. ಕೇಳಿದೊಡನೆ ಪರಿಶುದ್ಧ ತಿಳಿನೀರ ತೊರೆಯಲ್ಲಿ ಕಾಲಾಡಿಸಿದಂಥ ಅನುಭವ ನೀಡುವ ಇದು ಉಳಿದೆಲ್ಲ ಹಾಡುಗಳಿಗಿಂತ ಭಿನ್ನ. ಸರಳ ಪದಗಳನ್ನೇ ಬಳಸಿದ ಸಾಹಿತ್ಯ, ವೈಶಿಷ್ಟ್ಯಪೂರ್ಣ ರಾಗ ಸಂಯೋಜನೆ, ಗಿಟಾರ್, ವೀಣೆ, ಕೊಳಲು ಹಾಗೂ ತಬ್ಲಾ ಇವಿಷ್ಟನ್ನೇ ಒಳಗೊಂಡ ಹಿತ ಮಿತವಾದ ವಾದ್ಯವೃಂದ, ಹೆಸರು ತಿಳಿಯದ (ಬಹುಶಃ ಕನ್ನಡವೂ ತಿಳಿಯದ) ಗಾಯಕ ಗಾಯಕಿಯರ ಶ್ರೀಮಂತ ಧ್ವನಿ, ಹುಟ್ಟು ಕನ್ನಡಿಗರನ್ನೂ ನಾಚಿಸುವಂತಹ ಸುಸ್ಪಷ್ಟ ಉಚ್ಚಾರ (ವಿಶೇಷವಾಗಿ ವಿಜ್ಞಾನ, ಅಜ್ಞಾನಗಳಲ್ಲಿನ ಜ್ಞ ಅಕ್ಷರ), ಉತ್ಕೃಷ್ಟ ಗುಣಮಟ್ಟದ ಧ್ವನಿಮುದ್ರಣ ಪ್ರಾಯಶಃ ಇದನ್ನು ಗುಂಪಿನಿಂದ ಹೊರಗೆ ನಿಲ್ಲಿಸುತ್ತವೆ.
ಇದರ ಅನೇಕ ಪ್ರತಿರೂಪಗಳು ಲಭ್ಯವಿದ್ದರೂ ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಮೂಲ ಹಾಡು ಬೇಕೆಂದು ಬಹು ಕಾಲ ಬಹಳ ಪ್ರಯತ್ನಿಸಿ ಕೊನೆಗೆ ಮಂಗಳೂರು ಆಕಾಶವಾಣಿಯಿಂದ ಪಡೆಯುವಲ್ಲಿ ಯಶಸ್ವಿಯೂ ಆದೆ. 2009 ಅಂದರೆ ಅಂತರ್ಜಾಲ ಜನಸಾಮಾನ್ಯರಿಗೆ ತೆರೆದುಕೊಳ್ಳುತ್ತಿದ್ದು ನಾನು ಆಡಿಯೊ, ವಿಡಿಯೊಗಳಲ್ಲಿ ಕೈಯಾಡಿಸತೊಡಗಿದ್ದ ಕಾಲ. ಲಭ್ಯವಿದ್ದ ತಂತ್ರಾಂಶಗಳನ್ನು ಬಳಸಿಕೊಂಡು ಸಿಂಗ್ ಅಲೋಂಗ್ ಸಾಹಿತ್ಯದೊಡನೆ ಈ ಹಾಡಿನ ಒಂದು ಸರಳ ವೀಡಿಯೊ ತಯಾರಿಸುವಲ್ಲಿ ಸಫಲನಾಗಿ youtubeಗೆ ಏರಿಸಿಯೂ ಬಿಟ್ಟೆ. ಚಲನಚಿತ್ರ ಗೀತೆಗಳಂತೆ ದಿಢೀರ್ ಜನಪ್ರಿಯತೆ ಗಳಿಸದಿದ್ದರೂ ಕ್ರಮೇಣ ಜನ ಗಮನಿಸಿದರು, ಮೆಚ್ಚಿದರು. ಇಷ್ಟು ವರ್ಷಗಳಲ್ಲಿ 11 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಎಂದು ಯೂಟ್ಯೂಬ್ ದಾಖಲೆ ಹೇಳುತ್ತದೆ. ಅನೇಕರ ಪ್ರತಿಕ್ರಿಯೆಗಳೂ ದಾಖಲಾಗಿವೆ. ಇಷ್ಟು ವರ್ಷಗಳ ನಂತರವೂ ಹೊಸ ಪ್ರತಿಕ್ರಿಯೆಗಳು ಬರುತ್ತಲೇ ಇರುತ್ತವೆ.
ಈಗ ಆ ಪರಿಶುದ್ಧ ಹಾಡಿನ ಪರಿಶುದ್ಧ ಮೂಲ ಆವೃತ್ತಿಯನ್ನೊಳಗೊಂಡ ಅದೇ ಸಿಂಗ್ ಅಲೋಂಗ್ ವೀಡಿಯೊ ನಿಮಗಾಗಿ ಇಲ್ಲಿದೆ. ಆಲಿಸಿ, ಹಾಡಿ, ಮನೆಯಲ್ಲಿ ಮಕ್ಕಳಿದ್ದರೆ ಅವರಿಗೂ ಕಲಿಸಿ.
ಈ ಮಣ್ಣು ನಮ್ಮದು ಈ ಗಾಳಿ ನಮ್ಮದು
ಕಲಕಲನೆ ಹರಿಯುತಿಹ ನೀರು ನಮ್ಮದು
ಕಣಕಣದಲು ಭಾರತೀಯ ರಕ್ತ ನಮ್ಮದು
ನಮ್ಮ ಕಾಯ್ವ ಹಿಮಾಲಯವೆ ತಂದೆ ಸಮಾನ
ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ
ಈ ದೇಶದ ಜನರೆಲ್ಲರೂ ಸೋದರ ಸಮಾನ,
ಈ ನಾಡಿನ ಹೃದಯವದು ದೈವ ಸನ್ನಿಧಾನ
ಅಜಂತ ಎಲ್ಲೋರ ಹಳೆಬೀಡು ಬೇಲೂರ
ಶಿಲೆಗಳಿವು ಕಲೆಯ ಆಗರ
ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಧರ್ಮಗಳ
ಮಹಾಸಾಗರ
ನಡೆದು ಹೋದ ಚರಿತೆಯು
ನಾಳೆ ಎನುವ ಕವಿತೆಯು
ಈ ನಾಡ ಮಣ್ಣಿನಲ್ಲಿದೆ ಜೀವನ ಸಾರ ಜೀವನ ಸಾರ
ತಂಗಾಳಿಗೆ ತಲೆಯ ತೂಗೊ ಪೈರಿನ ಹಾಡು
ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು
ವಿಜ್ಞಾನವು ಅಜ್ಞಾನವ ಗೆಲ್ಲುವ ಪಾಡು
ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು