1957ರಲ್ಲಿ ಬಂದ ಆರ್ ನಾಗೇಂದ್ರ ರಾಯರ ನಿರ್ಮಾಣದ ಮೊದಲ ಚಿತ್ರ ಪ್ರೇಮದ ಪುತ್ರಿಗಾಗಿ ರಘುನಾಥ ಪಾಣಿಗ್ರಾಹಿ ಹಾಡಿದ ಪ್ರೇಮವೆ ದೈವ ಎಂಬ ಮಧುರ ಗೀತೆಯೊಂದು ಸಾಹಿತ್ಯದೊಂದಿಗೆ ಇಲ್ಲಿದೆ. ಆ ಸಮಯಕ್ಕೆ ದೊಡ್ಡ ಆರ್ಕೆಷ್ಟ್ರಾ ಉಪಯೋಗ ಆರಂಭವಾಗಿತ್ತಾದರೂ ಈ ಹಾಡಿನಲ್ಲಿ ಹಾರ್ಮೋನಿಯಮ್ ಮತ್ತು ತಬ್ಲಾ ಮಾತ್ರ ಬಳಸಲಾಗಿರುವುದನ್ನು ಗಮನಿಸಬಹುದು. ಈ ಚಿತ್ರದ ಸಂಗೀತ ನಿರ್ದೇಶಕರು ಪದ್ಮನಾಭ ಶಾಸ್ತ್ರಿ. ಆರ್ ಎನ್ ಜಯಗೋಪಾಲ್ ಈ ಚಿತ್ರದ ಮೂಲಕವೇ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಆದರೆ ಈ ಹಾಡಿನ ಸಾಹಿತ್ಯ ಅವರದ್ದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಇದೇ ಚಿತ್ರದ ಪಿ ಲೀಲಾ ಹಾಡಿರುವ ತ್ರಿಭುವನ ಜನನಿ ಜಗನ್ಮೋಹಿನಿ ಅವರೇ ಬರೆದದ್ದು.

ಪ್ರೇಮವೇ ದೈವ
ಪ್ರೇಮವೆ ಧರ್ಮ ಪ್ರೇಮವೆ ಕರ್ಮ
ಪ್ರೇಮವೇ ದೈವ ಹೇ ಜೀವ
ಪ್ರೇಮವೇ ದೈವ
ಪ್ರೇಮದ ಪಥವ ಶೋಧಿಸು ಜೀವ
ಪ್ರೇಮದಿ ಪೂಜಿಸೆ ದೇವನು ಒಲಿವ
ಪ್ರೇಮವೇ ದೈವ ಹೇ ಜೀವ
ಪ್ರೇಮವೇ ದೈವ
ಜನನಿಯ ಪ್ರೇಮ ಜನಕನ ಪ್ರೇಮ
ತನುಜನ ಪಾಲಿಪ ನೇಮ
ಮಾನವ ಕೋಟಿಯ ಕಾಯುವ ಮರ್ಮ
ಸನಾತನವು ಈ ಪ್ರೇಮ
ಜಾತಿ ಮತಗಳ ಗಣಿಸದು ಪ್ರೇಮ
ನೀತಿಯ ಮಾರ್ಗವಿದೇ ಪ್ರೇಮ
ಸತ್ಯದ ಸಾಧನ ನಿರ್ಮಲ ಪ್ರೇಮ
ಸತ್ಯ ಸ್ವರೂಪನು ಆ ಪರಮಾತ್ಮ
ಪ್ರೇಮವೇ ದೈವ ಹೇ ಜೀವ
ಪ್ರೇಮವೇ ದೈವ