Monday, 14 January 2013

ಪದ್ಯಾವಳಿಯಿಂದ ಒಂದು ಪದ್ಯ

     ಸುಮಾರು 60ರ ದಶಕದ ಕೊನೆಯವರೆಗೆ  ಹಿಂದಿ ಚಿತ್ರಗಳ ಹಾಡುಗಳು ಬಿಡುಗಡೆಯ ಒಂದೆರಡು ತಿಂಗಳ ಮೊದಲೇ ರೇಡಿಯೊದಲ್ಲಿ ಪ್ರಸಾರವಾಗತೊಡಗಿ ರೇಡಿಯೊ ಸಿಲೊನ್ ನಲ್ಲಿ  ಬರುತ್ತಿದ್ದ ಆ ಚಿತ್ರಗಳ ಜಾಹೀರಾತು ಹಾಗೂ ರೇಡಿಯೊ ಪ್ರೋಗ್ರಾಮ್ ಗಳಿಂದಾಗಿ ಚಿತ್ರಗಳ ಕಥಾ ಸಾರಾಂಶ ಹಾಗೂ ಹಾಡುಗಳು ಎಲ್ಲರಿಗೂ  ಮೊದಲೇ ಕಂಠಪಾಠವಾಗಿರುತ್ತಿದ್ದವು.  ಆದರೆ ಕನ್ನಡ ಚಿತ್ರಗಳ ಹಾಡುಗಳು ರೆಡಿಯೊದಲ್ಲಿ ಪ್ರಸಾರವಾಗುತ್ತಿದ್ದುದು ಚಿತ್ರ ಬಿಡುಗಡೆಯ ಒಂದೆರಡು ತಿಂಗಳ ನಂತರವೇ.  ಹೀಗಾಗಿ ಚಿತ್ರಗಳ ಹಾಡು ಹಾಗೂ ಕಥಾಸಾರಾಂಶಕ್ಕಾಗಿ 10 ಪೈಸೆ ಬೆಲೆಯ ಪದ್ಯಾವಳಿಗಳನ್ನು ಟಿಕೇಟ್ ಕೌಂಟರ್ ಅಥವಾ ಬಿಸ್ಕೆಟ್ ಹಾಗೂ ತಂಪು ಪಾನೀಯ ಮಾರುವ  ಹುಡುಗರಿಂದ ಸಾಮಾನ್ಯವಾಗಿ ಎಲ್ಲರೂ ಪಡೆದುಕೊಳ್ಳುತ್ತಿದ್ದರು.  ಟಿಕೆಟ್ ಕೊಂಡು ಆದಷ್ಟು ಬೇಗ ಥಿಯೇಟರ್ ಒಳಹೊಕ್ಕು ಎದುರಿನವರ ತಲೆ ಅಡ್ಡಬರದಿರುವ ಸೀಟು ಹಿಡಿದು ಪದ್ಯಾವಳಿಯ ಮೇಲೆ ಕಣ್ಣು ಹಾಯಿಸುತ್ತಾ  ಚಿತ್ರ  ಆರಂಭವಾಗುವ ಕ್ಷಣವನ್ನು ಎದುರು ನೋಡುವುದೇ ಒಂದು ಸಂಭ್ರಮ.  ಈ ಪದ್ಯಾವಳಿಗಳಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಕಥಾ ಸಾರಾಂಶವು ನಿರೂಪಿತವಾಗಿ  ಅಂತ್ಯವನ್ನು ಮಾತ್ರ ಗೋಪ್ಯವಾಗಿಡಲಾಗುತ್ತಿತ್ತು.  ಹಾಡುಗಳ ಬಗೆಗಿನ ಎಲ್ಲ ಮಾಹಿತಿಗಳ ಜೊತೆಗೆ  ಸಂಪೂರ್ಣ ತಾಂತ್ರಿಕ ವರ್ಗದ ವಿವರಗಳೂ ಇರುತ್ತಿದ್ದವು.   ಪದ್ಯಾವಳಿಗಳು  ಚಿತ್ರ ನೋಡಿದ ನೆನಪನ್ನು ಎಂದೆಂದಿಗೂ ಉಳಿಸುವುದರೊಂದಿಗೆ  ಮುಂದೆ ರೇಡಿಯೊದಲ್ಲಿ ಹಾಡು ಪ್ರಸಾರವಾಗತೊಡಗಿದಾಗ  ಜೊತೆ ಜೊತೆಗೆ ಹಾಡಿ ಆನಂದಿಸಲೂ ಅನುವು ಮಾಡಿ ಕೊಡುತ್ತಿದ್ದವು.

     ಹಿಂದಿಯ ಸಸುರಾಲ್ ಚಿತ್ರದ ಕನ್ನಡ ಅವತರಣಿಕೆ  ಮನೆ ಅಳಿಯದ ಪದ್ಯಾವಳಿಯ ಕೆಲವು ಪುಟಗಳು  ಇಲ್ಲಿವೆ.  ಹೇಳುವ ಒಗಟನು ಒಡೆದು ಎಂಬ ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ 6 ನಿಮಿಷದ ಹಾಡು ಒಂದು ಕಾಲಕ್ಕೆ ರೇಡಿಯೊದಲ್ಲಿ ದಿನನಿತ್ಯವೆಂಬಂತೆ ಕೇಳಬರುತ್ತಿತ್ತು.   ಆ ಚಿತ್ರದ ಇನ್ನೊಂದು ಜಾನಪದ ಶೈಲಿಯ ವಿಶಿಷ್ಟ double side ಹಾಡು ನಿಲ್ಲೆ ಗೊಲ್ಲರು ಬಾಲೆ ನಿಲ್ಲೆ  ಸಾಹಿತ್ಯದ ಪುಟದೊಡನೆ ಇಲ್ಲಿ ಪ್ರಸ್ತುತಪಡಿಸಿದ್ದೇನೆ.

     ಚಿತ್ರದ ತಾರಾಗಣದಲ್ಲಿ ನಾಯಕಿಯ ಹೆಸರನ್ನು ಗಮನಿಸಿ . ಫೋಟೊವನ್ನೂ ನೋಡಿ.





ನಟವರ ಗಂಗಾಧರ ಖ್ಯಾತಿಯ ಎಸ್.ಕೆ.ಕರೀಂ ಖಾನ್ ರಚಿಸಿದ ಈ ಹಾಡಿನಲ್ಲಿ  ಹೆಣ್ಣೊಬ್ಬಳು ಮೊದಲು ಪ್ರಿಯಕರನ ಮಾತುಗಳಿಗೆ ಸೊಪ್ಪು ಹಾಕದಿದ್ದರೂ ಕೊನೆಗೆ ಆತನ ಪೌರುಷ, ಅಂದ ಚಂದಗಳಿಗೆ  ಮನಸೋತು ಒಲಿಯುವ ಕತೆಯನ್ನು ಗ್ರಾಮ್ಯ ಶಬ್ದಗಳನ್ನು ಬಳಸಿ ಹೇಳಲಾಗಿದೆ. ಹಾಡಿನ ಪ್ರತೀ ಸಾಲಲ್ಲೂ ಅಂತ್ಯಪ್ರಾಸವಿದೆ. ಡೋಲು, ತಮ್ಮಟೆ, ಢೋಲಕ್ ಮುಂತಾದ ತಾಳವಾದ್ಯಗಳನ್ನೊಳಗೊಂಡ ಸುದೀರ್ಘವಾದ prelude ಮತ್ತು interludeಗಳಿವೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರವೇಶದ ಮೊದಲು ಕೊಂಚ ಕಾಲ ಕನ್ನಡದಲ್ಲೂ ಮಿಂಚಿದ ಟಿ.ಆರ್.ಜಯದೇವ್ ಎಂಬ ಗಾಯಕ ಹಾಗೂ ಹಿರಿಯ ಗಾಯಕಿ ಜಿಕ್ಕಿ ಇದನ್ನು ಹಾಡಿದ್ದಾರೆ.  ಪ್ರತಿಭಾವಂತ ಸಂಗೀತ ನಿರ್ದೇಶಕ ಎಂ.ವೆಂಕಟರಾಜು ನಿಧನದ ನಂತರ ಕನ್ನಡಕ್ಕೆ ಪ್ರವೇಶ ಮಾಡಿದ ಅವರ ಗುರು ಟಿ.ಛಲಪತಿ ರಾವ್ ಸಂಗೀತವಿದೆ.

ಪದ್ಯಾವಳಿಯ ಮೇಲೆ ಕಣ್ಣಾಡಿಸುತ್ತಾ ಈ ಸುಂದರ ಹಾಡನ್ನು  ಆಲಿಸಿ.