Monday, 31 October 2011

ಜಿಗಿ ಜಿಗಿಯುವ ಹಾಡು

     ಗಾಳಿಪಟದ ಬಗ್ಗೆ ಯಾವುದಾದರೂ ಹಾಡು ಗೊತ್ತೇ ಎಂದು ಕೇಳಿದರೆ ಆಪ್ತ ಮಿತ್ರಪಟ ಪಟ ಗಾಳಿಪಟ ಅಥವಾ ಗಾಳಿಪಟ ಚಿತ್ರದ ಟೈಟಲ್ ಹಾಡು ಹೆಚ್ಚಿನವರಿಗೆ ನೆನಪಾಗಬಹುದು.  ಆದರೆ  60ರ ದಶಕದಲ್ಲಿ ಬಂದ ಜೇನುಗೂಡು ಚಿತ್ರದ ಜಿಗಿಜಿಗಿಯುತ ನಲಿ ಹಾಡು ನೆನಪು ಮಾಡಿಕೊಳ್ಳುವವರು ಕೆಲವರಷ್ಟೇ ಇರಬಹುದು.  ಅಷ್ಟೊಂದು ಹೆಸರು ಕೇಳಿ ಬರದ ಜೆ.ವಿ.ರಾಘವುಲು ಹಾಗೂ ಕ್ಯಾಬರೆ ಗಾಯಕಿ ಎಂದೇ ಸಾಮಾನ್ಯವಾಗಿ ಗುರುತಿಸಿಕೊಳ್ಳುವ ಎಲ್.ಆರ್.ಈಶ್ವರಿ  ಹಾಡಿದ ಈ ಹಾಡು ಅಂದು ಪ್ರತಿಯೊಬ್ಬರ ನಾಲಗೆಯಲ್ಲಿ ನಲಿದಾಡುತ್ತಿತ್ತು.  ಕನ್ನಡದಲ್ಲಿ ಜೇನುಗೂಡು, ಮುರಿಯದ ಮನೆ ಹಾಗೂ ವಾತ್ಸಲ್ಯ ಈ ಮೂರು ಚಿತ್ರಗಳಿಗೆ ಮಾತ್ರ ಮಧುರ ಸಂಗೀತ ನೀಡಿದ ವಿಜಯಾ ಕೃಷ್ಣಮೂರ್ತಿ ಅವರ ಮಾಸ್ಟರ್ ಪೀಸ್ ಇದು.  ಮಹಿಳೆ ಇರಬಹುದೇನೊ ಎಂದು ಸಂಶಯ ಮೂಡಿಸುವ ಹೆಸರಿನ ಇವರು ವಿಜಯಾ ಸ್ಟುಡಿಯೋದ ಕಾಯಂ ಮ್ಯೂಸಿಕ್ ಎರೇಂಜರ್ ಆಗಿದ್ದುದರಿಂದ  ವಿಜಯಾ ಪದವನ್ನು ತಮ್ಮ ಹೆಸರಿಗೆ ಪ್ರಿ ಫಿಕ್ಸ್ ಮಾಡಿಕೊಂಡಿದ್ದರಂತೆ.

     ಮುಖ್ಯವಾಗಿ ಎಕಾರ್ಡಿಯನ್, ಕೊಳಲು-ಕ್ಲಾರಿಯೊನೆಟ್ , ಬೇಸ್ ಗಿಟಾರ್ ಹಾಗೂ ಢೋಲಕ್ ಬಳಕೆಯಾಗಿರುವ ಈ ಹಾಡಿನ ವೇಗ ಹಾಗೂ ಅಚ್ಚುಕಟ್ಟುತನ ಬೆರಗು ಮೂಡಿಸುತ್ತದೆ. Accordian ನ bellows  ಒತ್ತುವಿಕೆ ಹಾಗೂ ಬೆರಳುಗಾರಿಕೆಗಳ ಚಮತ್ಕಾರ ಇಷ್ಟೊಂದು ಪರಿಣಾಮಕಾರಿಯಾಗಿ ಇನ್ಯಾವ ಹಾಡಿನಲ್ಲೂ ಬಂದಿರಲಾರದು. ಈಗಿನಂತೆ ಕಟ್ & ಪೇಸ್ಟ್ ಸೌಲಭ್ಯ ಇಲ್ಲದ ಕೇವಲ ಲೈವ್ ರೆಕಾರ್ಡಿಂಗ್ ನಡೆಯುತ್ತಿದ್ದ ಆ ಕಾಲದಲ್ಲಿ ನಮಗೆ ಹೆಸರೇ ಗೊತ್ತಿಲ್ಲದ ಆ ಕಲಾವಿದರ ಬೆರಳುಗಳು ವಾದ್ಯಗಳ ಮೆಲೆ  ಹೇಗೆ ಜಿಗಿ ಜಿಗಿಯುತ್ತ ನಲಿದಿದ್ದವೋ ಏನೋ.

    ಜೇನುಗೂಡು ಹಿಂದಿಯ ಭಾಭಿ  ಚಿತ್ರದ  ಕನ್ನಡ ಅವತರಣಿಕೆ. ಆ ಚಿತ್ರದ  ಚಲಿ ಚಲಿರೆ ಪತಂಗ್ ಮೆರಿ ಚಲಿರೆ ಹಾಡಿಗಿಂತಲೂ  ಈ ಹಾಡು ಹೆಚ್ಚು ಆಕರ್ಷಕ.

    ಆಕಾಶವಾಣಿಯಲ್ಲಿ ಅಪರೂಪಕ್ಕೊಮ್ಮೆ   ಪ್ರಸಾರವಾಗುವ ಈ ಹಾಡಿನ ಧ್ವನಿಮುದ್ರಿಕೆಯಲ್ಲಿ ಎರಡು ಚರಣಗಳು ಮಾತ್ರ ಇವೆ.  ಆದರೆ ಅಂದಿನ ದಿನಗಳಲ್ಲಿ ಹಿಂದಿಯಲ್ಲಿ ಸಾಮಾನ್ಯವಾಗಿದ್ದಂತೆ ಈ ಕನ್ನಡ ಹಾಡಿಗೂ ಚಲನ ಚಿತ್ರದಲ್ಲಿ  ಮೂರು ಚರಣಗಳಿದ್ದುದು ವಿಶೇಷ.  ಯೂ ಟ್ಯೂಬ್ ನಲ್ಲಿ ಹುಡುಕಿದರೆ ಈ ಹಾಡಿನ ವಿಡಿಯೊ ಕೂಡ ಸಿಗುತ್ತದೆ.  ಆದರೆ ದುರದೃಷ್ಟವಶಾತ್ ಈ ಹಾಡಿನ ಭಾಗ ಬಹಳಷ್ಟು  ಕ್ಷತಿಗೊಂಡಿರುವುದರಿಂದ  ರಸಭಂಗವಾಗುವ ಸಾಧ್ಯತೆಯೆ ಹೆಚ್ಚು.

     ಮೂರೂ ಚರಣಗಳ ಸಮೇತ ಬೇರೆಲ್ಲೂ ಸಿಗದ ಪೂರ್ತಿ  ಹಾಡು ಪದ್ಯಾವಳಿಯ ಪುಟದೊಡನೆ ಇಲ್ಲಿದೆ.