Friday, 4 February 2022

ಟಾಕೀಸ್ ಟಾಕ್


ಎಲ್ಲೆಡೆಯಂತೆ ಮಂಗಳೂರಿನಲ್ಲೂ ಹಳೆ ಸಿನಿಮಾ ಮಂದಿರಗಳು ಒಂದೊಂದಾಗಿ ಮುಚ್ಚುತ್ತಿವೆ.  ಇತ್ತೀಚೆಗೆ ಮಂಗಳೂರಿನ ಜ್ಯೋತಿ ಚಿತ್ರಮಂದಿರ ಧರಾಶಾಯಿಯಾದದ್ದು ದೊಡ್ಡ ಸುದ್ದಿಯಾಯಿತು. ನಾನು ಆ ಚಿತ್ರಮಂದಿರದಲ್ಲಿ ಸ್ವರ್ಣಗೌರಿ, ಕೃಷ್ಣಾರ್ಜುನ ಯುದ್ಧ, ಮುರಿಯದ ಮನೆ, ರೌಡಿ ರಂಗಣ್ಣ, ತುಂಬಿದ ಕೊಡ, ಸೂರಜ್, ಬಿಸತ್ತಿ ಬಾಬು,  ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಕೋಟಿ ಚೆನ್ನಯ, ಎಡಕಲ್ಲುಗುಡ್ಡದ ಮೇಲೆ,   ಗಂಧದ ಗುಡಿ, ಬಂಗಾರದ ಪಂಜರ, ಬೂತಯ್ಯನ   ಮಗ ಅಯ್ಯು, ಉಪಾಸನೆ,    ಬಯ್ಯ ಮಲ್ಲಿಗೆ, ಚಿರಂಜೀವಿ,    ಬಯಲುದಾರಿ, ವಿಜಯವಾಣಿ, ನಾನಿನ್ನ ಮರೆಯಲಾರೆ,   ಬಬ್ರುವಾಹನ, ನಾಗರಹಾವು, ಎರಡು ಕನಸು, ಶ್ರೀನಿವಾಸ ಕಲ್ಯಾಣ ಇತ್ಯಾದಿ ಚಿತ್ರಗಳನ್ನು ನೋಡಿದ್ದರೂ 1978ರ ನಂತರ ಅಲ್ಲಿಗೆ ಒಮ್ಮೆಯೂ ಹೋಗದಿದ್ದ  ನನಗೆ ಈಗ ಅದೇಕೆ ಮುಚ್ಚಿತು ಎಂದು ಕೇಳುವ ಹಕ್ಕಿಲ್ಲ!


1926ರಲ್ಲಿ ಹಿಂದುಸ್ಥಾನ್ ಸಿನೆಮಾ ಎಂಬ ಹೆಸರಲ್ಲಿ ಆರಂಭಗೊಂಡು ಮೂಕಿ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದು ಆಮೇಲೆ 1936ರಲ್ಲಿ ಹೊಸ ನಾಮಧೇಯ  ಹೊಂದಿ ಕರಾವಳಿ ಭಾಗದ ಮೊತ್ತ ಮೊದಲ ಸಿನಿಮಾ ಟಾಕೀಸು ಎನ್ನಿಸಿಕೊಂಡಿದ್ದ ನ್ಯೂಚಿತ್ರಾ ಕೆಲ ಕಾಲ ಹಿಂದೆ  ಫರ್ನಿಚರ್ ಮಾರ್ಟ್ ಆಗಿ ಪರಿವರ್ತನೆ ಹೊಂದಿತು. ಹಳೆ ಚಂದಮಾಮಗಳಲ್ಲಿರುವ ಅನೇಕ ಸಿನಿಮಾ ಜಾಹೀರಾತುಗಳಲ್ಲಿ ಈ ಟಾಕೀಸಿನ ಹೆಸರು ಕಾಣಸಿಗುತ್ತದೆ.   ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳನ್ನೇ ಪ್ರದರ್ಶಿಸುತ್ತಿದ್ದ ಅದು ನನ್ನ ಮೆಚ್ಚಿನ ಟಾಕೀಸೇನೂ ಆಗಿರಲಿಲ್ಲ.  ಆದರೂ ದೂರದ ದಾರಿ ಬದಿಯ ಬೃಹತ್ ಪುರಾತನ ಮರವೊಂದು ಫರ್ನಿಚರಿಗಾಗಿ ಧರೆಗುರುಳಿದಂತೆ ನನಗನ್ನಿಸಿತು.  ಅಲ್ಲಿದ್ದ ಅತ್ಯಂತ ಪುರಾತನ ಸೆಂಚುರಿ ಪ್ರಾಜೆಕ್ಟರ್ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯ ಸೇರಿ ಈ ಭಾಗದ ಪ್ರಥಮ  ಟಾಕೀಸಿನ ನೆನಪು ಶಾಶ್ವತವಾಗಿ ಉಳಿಯುವಂತಾಗಿರುವುದು ಸ್ತ್ಯುತ್ಯರ್ಹ.


ನಾನು ಅನೇಕ ಮೆಚ್ಚಿನ ಚಿತ್ರಗಳನ್ನು ನೋಡಿದ್ದ ಅಮೃತ್ ಸಿನಿಮಾ ಇದ್ದ ಜಾಗದಲ್ಲಿ ಬೃಹತ್ ವಸತಿ ಸಂಕೀರ್ಣವೊಂದು ತಲೆಯೆತ್ತಿ ವರ್ಷಗಳೇ ಆದವು.  ಹಿಂದಿ ಚಿತ್ರಗಳಿಗಾಗಿ ನಂ 1 ಆಯ್ಕೆಯಾಗಿದ್ದ ಸೆಂಟ್ರಲ್ ಟಾಕೀಸ್ ಇತಿಹಾಸ ಸೇರಿದೆ.  ಮಂಗಳೂರಿನ ಪ್ರಥಮ  ಹವಾನಿಯಂತ್ರಿತ ಥಿಯೇಟರ್ ಪ್ಲಾಟಿನಮ್  ಕೂಡ ಈಗ  ಪ್ರದರ್ಶನ ಸ್ಥಗಿತಗೊಳಿಸಿದೆ.  ಈ  ಥಿಯೇಟರ್ 17-5-1974ರಂದು ಹಿಂದಿ ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡು ಪ್ರಥಮ ಚಿತ್ರವಾಗಿ ಕನ್ನಡ ರಾಜ್‌ಕುಮಾರ್ ಅಭಿನಯದ ಎರಡು ಕನಸು ಪ್ರದರ್ಶಿತವಾಗಿತ್ತು .  ಪ್ರಥಮ ದಿನದ ಪ್ರಥಮ ದೇಖಾವೆಯಲ್ಲಿ ಆ ಚಿತ್ರವನ್ನು ನಮ್ಮ ಆಫೀಸಿನ ಮಿತ್ರ ಗಡಣದೊಂದಿಗೆ  ನಾನೂ ನೋಡಿದ್ದೆ. ವಾಡಿಕೆಗಿಂತ ಭಿನ್ನವಾಗಿ ಅಲ್ಲಿಯ ಬಾಲ್ಕನಿಯಲ್ಲಿ ಮುಂದಿನ ಸೀಟುಗಳಿಗೆ  ಹಿಂಬದಿಯವುಗಳಿಗಿಂತ ಹೆಚ್ಚಿನ ದರ ಇದ್ದುದು ನಮಗೆಲ್ಲ ಅಚ್ಚರಿಯ ವಿಷಯವಾಗಿತ್ತು.  ಹೊಸ ಥಿಯೇಟರಿನ ಪ್ರಥಮ ಚಿತ್ರ ಎಂದು ಬಂದಿದ್ದ ಎಂದೂ ಕನ್ನಡ ಸಿನಿಮಾ ನೋಡದಿದ್ದ  ಕೆಲವು ಪಡ್ಡೆ ಹುಡುಗರು ಇಂದು ಎನಗೆ ಗೋವಿಂದ ಹಾಡು ಬಂದಾಗ ಗೊಣಗುತ್ತಾ ಎದ್ದು ಹೊರಗೆ ಹೋಗಿದ್ದರು!


ಇತ್ತೀಚಿನ ವರ್ಷಗಳಲ್ಲಿ ಟಿ.ವಿಯ ಪ್ರಭಾವದಿಂದ ಮನೆಯ ಡ್ರಾಯಿಂಗ್ ರೂಮ್, ಆ ಮೇಲೆ ಅಂತರ್ಜಾಲ ಮತ್ತು ಸ್ಮಾರ್ಟ್ ಫೋನುಗಳಿಂದಾಗಿ ಅಂಗೈಯೇ ಸಿನಿಮಾ ಮಂದಿರವಾಗಿ ಪರಿವರ್ತನೆ ಹೊಂದಿವೆ. ಹೊಸ ಪೀಳಿಗೆಯವರು ಆಗಾಗ ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡುತ್ತಾರಾದರೂ  ನಾನೂ ಸೇರಿದಂತೆ ಅನೇಕರು ಟಾಕೀಸುಗಳಲ್ಲಿ ಸಿನಿಮಾ ನೋಡದೆ ದಶಕಗಳೇ ಕಳೆದಿವೆ. ಆದರೆ   ಸುಮಾರು 1945ರಿಂದ 1970ರ ಮಧ್ಯೆ  ಜನಿಸಿದವರೆಲ್ಲರೂ ಬಾಲ್ಯದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂರುವ ಕನಸು ಮತ್ತು ಯೌವನದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂತು ಕನಸು ಕಂಡವರೇ.  ಹೆಚ್ಚಿನವರು ತಾನೂ ಹೀರೋ/ಹಿರೋಯಿನ್‌ನಂತೆ ಕಾಣಿಸಬೇಕು,  ಅಂತಹ ಬಟ್ಟೆಗಳನ್ನೇ ಧರಿಸಬೇಕು ಎಂಬಿತ್ಯಾದಿ ಕನಸು ಕಂಡರೆ ನಾನು ಮಾತ್ರ ಸಿನಿಮಾಗಳಲ್ಲಿ ಆಗಾಗ ಕಾಣಿಸುವ ವಾದ್ಯಗಳನ್ನು ನಾನೂ ಅವರಂತೆ ನುಡಿಸಬೇಕು ಎಂದು ಕನಸು ಕಾಣುತ್ತಿದ್ದೆ.  ಅದರಲ್ಲೂ ನಾಯಕನು ಕೊಳಲೊಂದನ್ನು ತುಟಿಗೆ ತಾಗಿಸಿದೊಡನೆ ಅದರಿಂದ ಮಧುರ ನಾದದ ಅಲೆಗಳು ಹೊರಟು ಸುತ್ತಲಿನವರನ್ನು ಆಕರ್ಷಿಸುವುದು,  ನಾಯಕಿಯು ಆ ನಾದಕ್ಕೆ ಮರುಳಾಗುವುದು ನನ್ನನ್ನೂ ಮರುಳು ಮಾಡುತ್ತಿತ್ತು!

ನನಗೆ ಅರಿವು ಮೂಡುವುದಕ್ಕೂ ಮುನ್ನ ನಾನು ಮನೆ ಮಂದಿಯೊಡನೆ ನೋಡಿದ ಮೊದಲ ಸಿನಿಮಾ ಜಗನ್ಮೋಹಿನಿ ಆಗಿರಬಹುದು.  ಏನೂ ಅರ್ಥವಾಗದಿದ್ದರೂ ಅದರೊಳಗಿನ ಜನರೆಲ್ಲ ಬೂದಿ ರಾಶಿಯ ಮೇಲೇಕೆ ಓಡಾಡುತ್ತಾರೆ ಎಂದು ನನಗನ್ನಿಸಿದ್ದು ನೆನಪಿದೆ.  ಕಪ್ಪು ಬಿಳುಪಿನ ಆ ಸಿನಿಮಾದಲ್ಲಿನ ನೆಲ, ಬೆಟ್ಟ, ಗುಡ್ಡಗಳೆಲ್ಲ ನನಗೆ ಹಾಗೆ ಕಂಡಿರಬಹುದು.  ಆ  ಮೇಲೆ ಅಣ್ಣಂದಿರೊಡನೆ ಕಾರ್ಕಳ ಸಮೀಪದ ಅಕ್ಕನ ಮನೆಗೆ ಹೋಗುವಾಗ ಅಲ್ಲಿಯ ಜೈಹಿಂದ್ ಟಾಕೀಸಿನಲ್ಲಿ ವರ್ಷಕ್ಕೊಂದು ಸಿನಿಮಾ ನೋಡುವ ಅವಕಾಶ ಸಿಗುತ್ತಿತ್ತು. ಅಲ್ಲಿ ಮೊತ್ತ ಮೊದಲು ಬರ್‌ಸಾತ್ ಕೀ ರಾತ್  ನೋಡಿದ್ದು ನೆನಪಿದೆ. ಆ ಸಿನಿಮಾ ಏನೇನೂ ಅರ್ಥವಾಗದಿದ್ದರೂ ಅದರಲ್ಲಿ ಟೊಪ್ಪಿ ಧರಿಸಿದ ಕೆಲವರು ತಲೆ ಅಲ್ಲಾಡಿಸುತ್ತಾ ತಬಲಾ ನುಡಿಸುತ್ತಿದ್ದುದು, ಪರದೆ ತುಂಬಾ ತುಂಬಿಕೊಂಡ ದಪ್ಪ ಮುಖದವನೊಬ್ಬ ಮೈಕ್ ಎದುರು ಹಾಡು ಹಾಡಿದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.  ಬಹುಶಃ ಅವು ಆ ಚಿತ್ರದ ನ ತೊ ಕಾರವಾಂ ಕೀ ತಲಾಶ್ ಹೈ ಕವ್ವಾಲಿ ಮತ್ತು ಜಿಂದಗೀ ಭರ್ ನಹೀಂ ಭೂಲೇಗಿ ಹಾಡಿನ ಕ್ಲೋಸ್ ಅಪ್ ದೃಶ್ಯಗಳಿರಬಹುದು.  ಮುಂದೆ  ಕಿತ್ತೂರು ಚೆನ್ನಮ್ಮ, ಜೇನುಗೂಡು, ಕನ್ಯಾರತ್ನ ಮುಂತಾದ ಒಳ್ಳೊಳ್ಳೆಯ ಚಿತ್ರಗಳನ್ನು ಅಲ್ಲಿ ನೋಡುವ ಅವಕಾಶ ಸಿಕ್ಕಿತ್ತು.  ಕನ್ಯಾರತ್ನ ಚಿತ್ರವನ್ನು ಒಂದೇ ದಿನ ಎರಡು ಬಾರಿ ನೋಡಿದ್ದೆ! ಆಗ ನಾನಿನ್ನೂ ಆರನೇ ಕ್ಲಾಸ್. ಆ ಸಲ ಅಕ್ಕನ ಮನೆಗೆ ಹೋಗಿದ್ದಾಗ ಯಾವುದೋ ಕಾರಣದಿಂದ ಅಣ್ಣನಿಗೆ ನನ್ನೊಂದಿಗೆ ಸಿನಿಮಾಗೆ ಬರಲು  ಸಾಧ್ಯವಾಗದೆ  ಕಸಿನ್ ಒಬ್ಬರೊಡನೆ   ಆ ಚಿತ್ರ ನೋಡಿ ಕಾರ್ಕಳದಲ್ಲಿ ಯಾರದೋ ಮನೆಯಲ್ಲಿ halt ಮಾಡುವ ಪ್ರಸಂಗ ಬಂದೊದಗಿತು.  ಆದರೆ  ನಾವು ಪ್ರಥಮ ದೇಖಾವೆಯಲ್ಲಿ ಆ ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ   ಹೊರಗಡೆ ಅಣ್ಣ ಮತ್ತು ಭಾವ ಹಾಜರ್!  ನಾನು ಇನ್ನೊಬ್ಬರ ಮನೆಯಲ್ಲಿ halt ಮಾಡುವುದು ಇಷ್ಟವಾಗದೆ ಅಕ್ಕ ಅವರನ್ನು ಕಳಿಸಿದ್ದರಂತೆ.  ಅವರಿಬ್ಬರೊಡನೆ ಮತ್ತೆ ಆ ಚಿತ್ರದ 2nd show  ನೋಡಿ ರಾತ್ರೆಯೇ ಅಕ್ಕನ ಮನೆ ಸೇರಿದೆವು. ಹೀಗೆ ಅನೇಕ ನೆನಪುಗಳಿಗೆ ಸಾಕ್ಷಿಯಾಗಿದ್ದ ಕಾರ್ಕಳದ ಜೈಹಿಂದ್ ಟಾಕೀಸ್ ಇತಿಹಾಸದ ಪುಟ ಸೇರಿ ವರ್ಷಗಳೇ ಕಳೆದಿವೆ.  ಕೆಲವು ವರ್ಷಗಳ ನಂತರ ಒಮ್ಮೆ ಅಣ್ಣನೊಡನೆ ಮಂಗಳೂರಿಗೆ ಹೋಗಿದ್ದಾಗ ಇದೇ ರೀತಿಯ ಅನುಭವ ಮರುಕಳಿಸಿತ್ತು.  ಅಲ್ಲಿಯ ಸೆಂಟ್ರಲ್  ಟಾಕೀಸಿನಲ್ಲಿ ಅಂದು ಆರಾಧನಾ ಬಿಡುಗಡೆಗೊಂಡಿತ್ತು.  ಗೇಟು ತೆರೆಯುವುದನ್ನೇ ಕಾದು ಕೂಡಲೇ ಒಳನುಗ್ಗಿ ಕ್ಯೂನಲ್ಲಿ ಸೇರಿಕೊಂಡದ್ದೂ ಆಯಿತು.  ಹೇಗೂ ಒಬ್ಬರಿಗೆ ಎರಡು ಟಿಕೇಟು ಕೊಡುತ್ತಾರಲ್ಲ ಎಂದು ಅಣ್ಣನನ್ನು ಕ್ಯೂನಲ್ಲಿ ನಿಲ್ಲಿಸಿ ನಾನು ಆರಾಧನಾದ lobby cards ನೋಡುತ್ತಾ ಮೈ ಮರೆತೆ. ಆದರೆ ಅಂದು ಚಿತ್ರದ ಪ್ರಥಮ ದಿನವಾದ್ದರಿಂದ ಒಬ್ಬರಿಗೆ ಒಂದೇ ಟಿಕೇಟು ಕೊಟ್ಟರು.  ಕ್ಯೂನಲ್ಲಿ ನಿಲ್ಲದ್ದಕ್ಕೆ ನನಗೆ ಒಮ್ಮೆ ಬೈದ ಅಣ್ಣ  ಟಿಕೆಟು ನನಗೆ ಕೊಟ್ಟು ಸಮೀಪದ ಇನ್ನೊಂದು ಟಾಕೀಸಿನಲ್ಲಿ ಬೇರೆ ಯಾವುದೋ ಚಿತ್ರ ನೋಡಿದರು.  ನಾನು ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ ಅವರು ಮತ್ತು ಆರಾಧನಾ ನೋಡಲೆಂದೇ ಬಂದ ಇನ್ನೊಬ್ಬ ಸೋದರ ಸಂಬಂಧಿ ಜೊತೆಯಲ್ಲಿ ಬರುವುದು ಕಾಣಿಸಿತು.   ಸೋದರ ಸಂಬಂಧಿಯ ಒತ್ತಾಯದ ಮೇಲೆ ಈ ಸಲ  ಮೂವರೂ ಕ್ಯೂನಲ್ಲಿ ನಿಂತು ಟಿಕೆಟು ಪಡೆದು ಮತ್ತೆ ಆರಾಧನಾ ನೋಡಿದೆ.  ಈಗ ಹಾಡುಗಳನ್ನು ಹೊರತುಪಡಿಸಿದರೆ ಆರಾಧನಾ ಬರೀ ಬೋರ್ ಅನ್ನಿಸುತ್ತಿದ್ದರೂ ಅಂದು  ಎರಡು ಸಲ ನೋಡಿದಾಗಲೂ ಬಲು ಆಪ್ಯಾಯಮಾನವೆನ್ನಿಸಿತ್ತು.


ಆರನೇ ತರಗತಿಯಲ್ಲಿರುವಾಗ ಬೆಳ್ತಂಗಡಿಯ ಮರುಳ ಸಿದ್ದೇಶ್ವರ ಎಂಬ ಟೂರಿಂಗ್ ಟಾಕೀಸಿನಲ್ಲಿಯೂ ಮಹಿಷಾಸುರ ಮರ್ದಿನಿ ಮತ್ತು ತೆಲುಗಿನಿಂದ ಡಬ್ ಆದ ಮೋಹಿನಿ ರುಕ್ಮಾಂಗದ ಎಂಬ ಚಿತ್ರಗಳನ್ನು ನೋಡಿದ್ದೆ.  ನಮ್ಮನ್ನು ಕರೆದೊಯ್ದಿದ್ದ ಸಹಪಾಠಿ  ಮುಂದಿನ ದೇಖಾವೆ ಆರಂಭವಾಗುವವರೆಗೆ ಕಾದು ನಮ್ಮನ್ನು ಟೆಂಟಿನ ಹಿಂಬದಿಗೆ ಕರೆದೊಯ್ದು ಅಲ್ಲಿ  ಕಾಣಿಸುತ್ತಿದ್ದ ಪರದೆಯ ಹಿಂಭಾಗದಲ್ಲಿ free ಉಲ್ಟಾ ಸಿನಿಮಾ ತೋರಿಸಿದ್ದ!  ರಾತ್ರಿ ಆ ಸಹಪಾಠಿಯ ಮನೆಯಲ್ಲೇ ಉಳಿದಿದ್ದೆವು. ಈ ಮರುಳ ಸಿದ್ದೇಶ್ವರ ಟೂರಿಂಗ್ ಟಾಕೀಸನ್ನು ಬೆಳ್ತಂಗಡಿಯ ಉದ್ಯಮಿಯೋರ್ವರು ಖರೀದಿಸಿ ಸ್ಥಾಪಿಸಿದ ಭಾರತ್ ಟಾಕೀಸ್ ಈಗಲೂ ಅಲ್ಲಿದೆ. 

ಮನೆಗೆ ರೇಡಿಯೋ ಬಂದ ಮೇಲೆ ಸಿನಿಮಾ ಜಾಹೀರಾತು ಮತ್ತು ಹಾಡುಗಳನ್ನು ಕೇಳುತ್ತಾ ಸಿನಿಮಾ ಟಾಕೀಸಿನ ಕನಸುಗಳು ಜಾಸ್ತಿಯಾಗತೊಡಗಿದ್ದವು. ನಮ್ಮಣ್ಣ ವಾರ್ಷಿಕ ಖರೀದಿಗಾಗಿ ಮಂಗಳೂರಿಗೆ ಹೋಗುವಾಗ ಜೊತೆಗಾರನ ನೆಲೆಯಲ್ಲಿ ನನ್ನನ್ನೂ ಕರೆದೊಯ್ಯುತ್ತಿದ್ದರು. ಅಂಥ ಭೇಟಿಗಳಲ್ಲಿ ಕನಿಷ್ಠ ಒಂದು ಸಿನಿಮಾ ನೋಡಿಯೇ ನೋಡುತ್ತಿದ್ದೆವು. ಕೆಲವೊಮ್ಮೆ ಒಂದು ಥಿಯೇಟರಿನಲ್ಲಿ ಮ್ಯಾಟಿನಿ ಮತ್ತು ಇನ್ನೊಂದರಲ್ಲಿ ಮೊದಲ ದೇಖಾವೆ ನೋಡುವುದೂ ಇತ್ತು. ಕೆಲವು ಸಲ ನಾನು ಹೋಗದಿದ್ದರೂ ಅವರು ನೋಡಿದ ಸಿನಿಮಾದ ಪದ್ಯಾವಳಿ ತಪ್ಪದೆ ತರುತ್ತಿದ್ದರು.  ಅದನ್ನು ನೋಡಿ ನಾನೆ ಸ್ವತಃ ಸಿನಿಮಾ ನೋಡಿದಷ್ಟು ಖುಶಿಪಡುತ್ತಿದ್ದೆ. ಜಾತ್ರೆಯಲ್ಲಿ ಕೊಳ್ಳಲು ಸಿಗುತ್ತಿದ್ದ ಬಯೋಸ್ಕೋಪ್‌ನಲ್ಲಿ  ಹಳೆ ಫಿಲ್ಮಿನ ತುಂಡುಗಳನ್ನು ನೋಡಿ  ನಿಜವಾದ ಸಿನಿಮಾ ನೋಡಿದಂತೆ ಆನಂದಿಸುತ್ತಿದ್ದೆ.  ಟಾರ್ಚ್ ಉಪಯೋಗಿಸಿದರೆ ಬ್ಯಾಟರಿ ಮುಗಿಯುತ್ತದೆಂಬ ಭಯದಿಂದ    ಕಿಟಿಕಿಯಿಂದ ಒಳನುಗ್ಗುತ್ತಿದ್ದ ಬಿಸಿಲುಕೋಲಿನ ಎದುರು ಆ ಫಿಲ್ಮ್ ತುಂಡುಗಳನ್ನು ಹಿಡಿದು ಪೀನಮಸೂರವೊಂದರ ಮೂಲಕ ಗೋಡೆಯ ಮೇಲೆ ದೊಡ್ಡ ಚಿತ್ರ ಮೂಡಿಸುವ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದೆ.


ಹೈಸ್ಕೂಲ್ ವಿಧ್ಯಾಭ್ಯಾಸಕ್ಕಾಗಿ ಉಜಿರೆ ಹಾಸ್ಟೆಲ್ ಸೇರಿದ್ದಾಗ ಬೆಳ್ತಂಗಡಿ ಟಾಕೀಸಿಗೆ ಬಂದ ಸಂತ ತುಕಾರಾಂ ಚಿತ್ರ ನೋಡಲು ವಾರ್ಡನ್ ವಿಶೇಷ ಅನುಮತಿ ನೀಡಿದ್ದರು. ನಂತರ ನಾವು ಕೆಲವು ಮಿತ್ರರು  ಅವರ ಕಣ್ಣು ತಪ್ಪಿಸಿ ಜಂಗ್ಲಿ, ಸುಬ್ಬಾಶಾಸ್ತ್ರಿ, ಪೂರ್ಣಿಮಾ, ತೂಗುದೀಪ ಮುಂತಾದ ಚಿತ್ರಗಳನ್ನು ಅಲ್ಲಿ ನೋಡಿದ್ದಿದೆ.  ಇದಕ್ಕಾಗಿ ರೂಮಿನ ಬಾಗಿಲನ್ನು ಒಳಗಿನಿಂದ ಬಂದು ಮಾಡಿಕೊಂಡು ಸರಳು ಕೀಳಲು ಬರುತ್ತಿದ್ದ ಒಂದು ಕಿಟಿಕಿಯ ಮೂಲಕ ಹೊರಬಿದ್ದು ಬಸ್ಸಿನಲ್ಲಿ ಬೆಳ್ತಂಗಡಿಗೆ ಹೋಗುತ್ತಿದ್ದೆವು. ಸಿನಿಮಾ ಮುಗಿದ ಮೇಲೆ ಮಧ್ಯರಾತ್ರೆ ಸಿಕ್ಕಿದ ವಾಹನದಲ್ಲಿ ಉಜಿರೆಗೆ ಬಂದು ಮತ್ತೆ ಅದೇ ದಾರಿಯ ಮೂಲಕ ಒಳಸೇರಿ ಏನೂ ಅರಿಯದವರಂತೆ ಮಲಗಿ ಬಿಡುತ್ತಿದ್ದೆವು.


1973ರಲ್ಲಿ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರೆತು ಮಂಗಳೂರು ಸೇರಿದ ಮೇಲೆ ಹಸಿದವನಿಗೆ ಮೃಷ್ಟಾನ್ನ ಬಡಿಸಿದಂತಾಯಿತು. ಆಗ ವಾರಾಂತ್ಯದಲ್ಲಿ   ಹಳೆ ಚಿತ್ರಗಳ ಇಳಿಸಿದ ದರದ ಬೆಳಗಿನ ದೇಖಾವೆಗಳಿರುತ್ತಿದ್ದವು. ಇವುಗಳ ವಿವರ ಇರುತ್ತಿದ್ದ ಶುಕ್ರವಾರದ ಪತ್ರಿಕೆ  ಈ ಮೃಷ್ಟಾನ್ನ ಭೋಜನಕ್ಕೆ ಆಹ್ವಾನಪತ್ರಿಕೆಯಾಗಿರುತ್ತಿತ್ತು. ಕೆಲವು ಹಳೆ ಚಿತ್ರಗಳ ಹೊಸ ಪ್ರಿಂಟುಗಳೂ regular ದೇಖಾವೆಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು.  ಅತ್ಯುತ್ತಮ ಧ್ವನಿ ವ್ಯವಸ್ಥೆಯ ಕಾರಣದಿಂದ  ನನ್ನ ಮೆಚ್ಚಿನದಾಗಿದ್ದ ರೂಪವಾಣಿ ಟಾಕೀಸಿನಲ್ಲಿ ಮುಂಬರುವ ಬೆಳಗಿನ ದೇಖಾವೆಯ ಪೋಸ್ಟರನ್ನು ಒಂದು ವಾರ ಮುಂಚಿತವಾಗಿಯೇ ಒಂದು ನಿರ್ದಿಷ್ಟ  ಜಾಗದಲ್ಲಿ ಹಚ್ಚಿಡುತ್ತಿದ್ದರು. ಅದು ನನ್ನ ಮೆಚ್ಚಿನ ಚಿತ್ರವಾಗಿದ್ದರೆ ಆ ಒಂದು ವಾರದ ಕಾಯುವಿಕೆ ಬಲು ರೋಮಾಂಚಕವಾಗಿರುತ್ತಿತ್ತು.   ಆಗ ಬಾಲ್ಕನಿಗೆ regular ದರ 5 ರೂಪಾಯಿ ಮತ್ತು ಇಳಿಸಿದ ದರ 2 ರೂಪಾಯಿ ಇತ್ತು. ಆ ವರ್ಷ ನಾನು ಮೇ ತಿಂಗಳಿಂದ ಡಿಸೆಂಬರ್ ವರೆಗೆ  ಅಲ್ಲಿ ತನಕ  ಕನಸಿನಲ್ಲಿ ಕಾಣುತ್ತಿದ್ದ 56  ಸಿನಿಮಾಗಳನ್ನು ನೋಡಿದೆ!  ಈ trend ಮುಂದುವರಿದು 1974ರಲ್ಲಿ  69  ಮತ್ತು  1975ರಲ್ಲಿ  63  ಬಾರಿ ಟಾಕೀಸುಗಳಿಗೆ ಹಾಜರಿ ಹಾಕಿದೆ!! ಆಗ ನಾನು ನೋಡಿದ ಚಿತ್ರಗಳ ಲಿಖಿತ ದಾಖಲೆ ಇರಿಸುತ್ತಿದ್ದುದರಿಂದ ಈ ನಿಖರ ಅಂಕಿ ಅಂಶಗಳನ್ನು ಒದಗಿಸಲು ಸಾಧ್ಯವಾಯಿತು.  ಆಗ ನನ್ನ ಮೆಚ್ಚಿನ ಗಾಯಕರಾದ  ರಫಿ ಹಿನ್ನೆಲೆಗೆ ಸರಿದಿದ್ದರು. ಕೆಲವೇ ಸಮಯದಲ್ಲಿ ಪಿ.ಬಿ.ಶ್ರೀನಿವಾಸ್ ಕೂಡ ಅದೇ ಹಾದಿ ಹಿಡಿಯಬೇಕಾಯಿತು.  ಅವರ ಹಾಡುಗಳಿಲ್ಲ ಎಂಬ ಕಾರಣಕ್ಕಾಗಿ ನಾನು ಅನೇಕ ಹೊಸ ಚಿತ್ರಗಳನ್ನು ನೋಡುತ್ತಿರಲಿಲ್ಲ.  ಇಲ್ಲದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತಿತ್ತು.  ಮುಂದೆ ಜೂನಿಯರ್ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿ ತರಬೇತಿಗಾಗಿ ಬೆಂಗಳೂರಿಗೆ ಹೋದಾಗ ಅಲ್ಲಿಯ ಪರಿಮಳ, ಪ್ರದೀಪ್ ಮುಂತಾದ ಟಾಕೀಸುಗಳಲ್ಲಿಯೂ ಬಹಳ ಸಮಯದಿಂದ ನೋಡಲು ಕಾತರಿಸುತ್ತಿದ್ದ ಅನೇಕ ಹಳೆ ಚಿತ್ರಗಳು ನೋಡಲು ಸಿಕ್ಕಿದವು.  ಒಮ್ಮೆ ಪ್ರದೀಪ್ ಟಾಕೀಸಿನಲ್ಲಿ ಧೂಲ್ ಕಾ ಫೂಲ್ ಚಿತ್ರ ನೋಡಲು ಹೋದಾಗ ದೊಡ್ಡ ಕ್ಯೂ ಇದ್ದರೂ ಸುಲಭವಾಗಿ ಟಿಕೇಟು ಸಿಕ್ಕಿದ ಖುಶಿಯಲ್ಲಿ ಕೊಟ್ಟ ದೊಡ್ಡ ನೋಟಿಗೆ ಬಾಕಿ ಚಿಲ್ಲರೆ ಪಡೆಯುವುದನ್ನು ಮರೆತು ಮುಂದೆ ಸಾಗಿದ್ದೆ.  ಮತ್ತೆ ಹಿಂದೆ ಬಂದು ಕ್ಯೂ ಒಳಗೆ ತೂರಿ ಕೌಂಟರಿನವನೊಡನೆ ವಿಚಾರಿಸಲು ಪ್ರಯತ್ನಿಸಿದಾಗ ಆತ ಸಿಟ್ಟುಗೊಂಡು  ಇಂಟರ್‌ವಲ್ ಹೊತ್ತಿಗೆ ಬರಬೇಕೆಂದೂ ಕೊನೆಯಲ್ಲಿ ಎಣಿಸಿ ತಾಳೆ ಮಾಡುವಾಗ ಹೆಚ್ಚುವರಿ ದುಡ್ಡು ಉಳಿದರೆ ಕೊಡುವುದಾಗಿಯೂ ತಿಳಿಸಿದ.  ಇಂಟರ್‌ವಲ್‌ನಲ್ಲಿ ಹೋಗಿ ವಿಚಾರಿಸಿದಾಗ ಹೇಳಿದಂತೆಯೇ ಚಿಲ್ಲರೆ ದುಡ್ಡಿನ ಅಷ್ಟು  ರಾಶಿ ಕೊಟ್ಟ.  ಎಣಿಸುವ ಗೋಜಿಗೆ ಹೋಗದೆ ಕಿಸೆಗೆ ಹಾಕಿದೆ.  ಒಂದೆರಡು ಮಾರ್ನಿಂಗ್ ಶೋಗಳಲ್ಲಿ ಅರ್ಧ ಸಿನಿಮಾ ಆಗುವಾಗ ಪ್ರಾಜೆಕ್ಟರ್ ಕೈ ಕೊಟ್ಟು ಮುಂದಿನ ವಾರದ ಸಿನಿಮಾಗೆ  ಪಾಸ್ ಪಡೆದದ್ದೂ ಇದೆ. 

ಟಾಕೀಸುಗಳಲ್ಲಿ ಪೇವ್‌ಮೆಂಟ್   ಎದುರಿನ ಹಿಂಬದಿಯ ಕೊನೇ ಸಾಲಿನ  ಸೀಟು ಯಾವಾಗಲೂ ನನ್ನ ಆದ್ಯತೆಯಾಗಿರುತ್ತಿತ್ತು. ಏಕೆಂದರೆ ಅಲ್ಲಿ  ಮುಂದೆ ಕೂತವರ ತಲೆ ಅಡ್ಡಬರುವ ಸಮಸ್ಯೆ ಇರುತ್ತಿರಲಿಲ್ಲ. ತೆರೆಯ ಹಿಂದಿನಿಂದ ಕೇಳಿಬರುವ ಅಚ್ಚ ಹೊಸ ಚಿತ್ರಗೀತೆಗಳನ್ನು ಕೇಳುತ್ತಾ ತೆರೆಯ ಮೇಲೆ Welcome ಸ್ಲೈಡ್ ಬೀಳುವುದನ್ನು ಕಾಯುವುದು ಹಿತಕರವಾದ ಅನುಭವವಾಗಿರುತ್ತಿತ್ತು. ಕೆಲವು ಟಾಕೀಸುಗಳಲ್ಲಿ ದೀಪಗಳು ಆರಿ ತೆರೆಯೆ ಮೇಲೆ ಚಿತ್ರಮೂಡಲು ಆರಂಭಿಸುವ ಹೊತ್ತಲ್ಲಿ ಒಂದು ನಿರ್ದಿಷ್ಟ ಗೀತೆ ಅಥವಾ ಟ್ಯೂನ್ ಕೇಳಿಬರುತ್ತಿತ್ತು.    ಜಾಹೀರಾತಿನ slides ಮತ್ತು ಕಿರುಚಿತ್ರಗಳ ನಂತರ ಮುಂಬರುವ ಚಿತ್ರಗಳ ಟ್ರೈಲರ್ ತೋರಿಸುತ್ತಿದ್ದರು.  ಅವುಗಳನ್ನು ಅನೇಕ ಸಲ ನೋಡಿ ಸಿನಿಮಾ ಬರುವುದಕ್ಕೆ ಮೊದಲೇ ಕೆಲವು ಡಯಲಾಗುಗಳು ನಮಗೆ ಕಂಠಪಾಠವಾಗಿರುತ್ತಿದ್ದವು. ಕೆಲವು ಸಲ ಟ್ರೈಲರಲ್ಲಿ ಇದ್ದ ದೃಶ್ಯ ಸಿನಿಮಾದಲ್ಲಿ ಇಲ್ಲದಿರುವುದೂ ಇತ್ತು. ಸಾಮಾನ್ಯವಾಗಿ ಟ್ರೈಲರ್‍ಗಳ ಗುಣಮಟ್ಟ ಕಳಪೆಯಾಗಿರುತ್ತಿತ್ತು. ಅಂದಿನ ದಿನಗಳಲ್ಲಿ ಸಿನಿಮಾ ಆರಂಭದ ಮೊದಲು ವಾರ್ತಾ ಇಲಾಖೆಯ ನ್ಯೂಸ್ ರೀಲ್ ಪ್ರದರ್ಶನ ಕಡ್ಡಾಯವಾಗಿತ್ತು.  ಕೆಲವು ನ್ಯೂಸ್ ರೀಲುಗಳು ಅತಿ ದೀರ್ಘವಾಗಿ ಬೋರ್ ಹೊಡೆಸುವಂತಿರುತ್ತಿದ್ದವು.  ಆಗ ಪ್ರೇಕ್ಷಕರ ಸಿಳ್ಳೆಗಳಿಗೆ ಮಣಿದು ಅದನ್ನು ಅಲ್ಲಿಗೇ ಮೊಟಕುಗೊಳಿಸಿ ಮುಖ್ಯ ಚಿತ್ರ ಆರಂಭಿಸಿದಾಗ ನನಗೂ ಖುಶಿ ಆಗುತ್ತಿತ್ತು. ಕೆಲವು ಇಂಗ್ಲಿಷ್ ಸಿನಿಮಾಗಳ ಅವಧಿ ತುಂಬಾ ಕಮ್ಮಿ ಇರುತ್ತಿದ್ದುದರಿಂದ ಜಾಹೀರಾತು , ಟ್ರೈಲರ್ ಮತ್ತು ನ್ಯೂಸ್ ರೀಲು ಇತ್ಯಾದಿಗಳಗಳ ನಂತರ ಕಾರ್ಟೂನ್ ಚಿತ್ರ ತೋರಿಸುತ್ತಿದ್ದರು.  ಅಷ್ಟರಲ್ಲಿ ಇಂಟರ್‌ವಲ್ ಆಗುತ್ತಿತ್ತು. ಸಿನಿಮಾ ಶುರುವಾದ ಮೇಲೆ ಆಗಾಗ ಹಿಂದೆ ತಿರುಗಿ ಯಾವ ಕಂಡಿಯ ಮೂಲಕ ಪ್ರಾಜೆಕ್ಟರ್ ಬೆಳಕು ಬರುತ್ತಿದೆ ಎಂದೂ ನಾನು ನೋಡುವುದಿತ್ತು.   ನಾವು ಮುಂಗಡ ಬುಕಿಂಗ್ ಮಾಡಿದ ದಿನ ಟಾಕೀಸು ತುಂಬು ತುಳುಕುತ್ತಿದ್ದರೆ, ಬುಕಿಂಗ್ ಮಾಡದ ದಿನ ಖಾಲಿಯಾಗಿದ್ದರೆ ಖುಶಿ ಆಗುತ್ತಿತ್ತು.  ಸಿನಿಮಾ ನೋಡುವಾಗ ಕೆಲವೊಮ್ಮೆ ಅತೀ ಬಾಯಾರಿಕೆಯಾಗುವುದಿತ್ತು.  ಆಗ ಸಿನಿಮಾದಲ್ಲಿ ತಿಳಿ ನೀರ ತೊರೆ ಕಂಡರೆ ಅಥವಾ ಪಾತ್ರವೊಂದು ತಂಪು ಪಾನೀಯ ಕುಡಿಯುವ  ದೃಶ್ಯ ಬಂದರೆ ಬಾಯಾರಿಕೆ ಮತ್ತೂ ಹೆಚ್ಚಾಗುತ್ತಿತ್ತು! 

ಅಂದಿನ ಸಿನಿಮಾಗಳಲ್ಲಿ  ಆಪ್ಟಿಕಲ್ track ಮೂಲಕ ಪುನರುತ್ಪತ್ತಿಯಾಗುತ್ತಿದ್ದ ಆಡಿಯೊ  ಇರುತ್ತಿದ್ದುದರಿಂದ ಟಾಕೀಸುಗಳು ಮಾತ್ರವಲ್ಲ, ಟೆಂಟ್ ಸಿನಿಮಾಗಳಲ್ಲೂ ಸುಸ್ಪಷ್ಟ ಶ್ರೀಮಂತ ಧ್ವನಿ ಕೇಳಿಸುತ್ತಿತ್ತು. ಮೊದಲೇ ರೇಡಿಯೋದಲ್ಲಿ, ಧ್ವನಿವರ್ಧಕಗಳಲ್ಲಿ ಹಾಡುಗಳನ್ನು ಕೇಳಿರುತ್ತಿದ್ದರೂ ಸಿನಿಮಾದ ಭಾಗವಾಗಿ  ಅವುಗಳನ್ನು ಕೇಳುವುದು ಅನನ್ಯ ಅನುಭವ ನೀಡುತ್ತಿತ್ತು.  ಈಗಿನ ಡಿ.ಟಿ.ಎಸ್ , Dolby ಮುಂತಾದ ಯಾವ  ತಂತ್ರಜ್ಞಾನವೂ ಅದನ್ನು ಸರಿಗಟ್ಟಲಾರದು.  ಮೂರು ಗಂಟೆಗಳ ಕಾಲ ಹೊರಗಿನ ಪ್ರಪಂಚವನ್ನು ಮರೆಸಿ ನಮ್ಮನ್ನು ಕನಸಿನ ಲೋಕಕ್ಕೆ ಒಯ್ಯುತ್ತಿದ್ದ ಆ ಸಿನಿಮಾಗಳು ಅಂದಿನ ಆ  ಟಾಕೀಸುಗಳು ಇನ್ನು ಕನಸು ಮಾತ್ರ.


11-2-2018