Saturday, 2 December 2023

ಚಂದ್ರಯಾನ


ನಾನು ಹೇಳುತ್ತಿರುವುದು ಇಸ್ರೋದ ಚಂದ್ರಯಾನದ ಬಗ್ಗೆ ಅಲ್ಲ.  ಇದು ಚಂದ್ರನು ಭೂಮಿಯ ಸುತ್ತ ಕೈಗೊಳ್ಳುತ್ತಿರುವ ಯಾನದ ಬಗ್ಗೆ.  ಚಂದ್ರನ ಬಗ್ಗೆ ಚಂದಿರನೇತಕೆ ತಿರುಗುವನಮ್ಮ ಮತ್ತು ಕೈಗೆ ಸಿಕ್ಕದ ಕಾಲ ಲೇಖನಗಳಲ್ಲಿ ಬಹಳಷ್ಟು ವಿಷಯಗಳನ್ನು ಈಗಾಗಲೇ ತಿಳಿದುಕೊಂಡಿದ್ದೇವೆ. ಸಾಮಾನ್ಯವಾಗಿ ನಾವೆಲ್ಲರೂ ಚಂದ್ರೋದಯವನ್ನು ಹುಣ್ಣಿಮೆಯ ದಿನ ಮಾತ್ರ ಗಮನಿಸುವುದು. ಆ ದಿನ ಚಂದ್ರ ಬಿಂಬ ದೊಡ್ಡದಾಗಿದ್ದು ಆತ ಸಂಜೆಯ ಹೊತ್ತು ಉದಯಿಸುವುದು ಇದಕ್ಕೆ ಮುಖ್ಯ ಕಾರಣ. ಈ ರೀತಿ ಹುಣ್ಣಿಮೆಯ ಚಂದ್ರೋದಯವನ್ನು ಗಮನಿಸುವವರು ಯಾವುದಾದರೂ ಮರವನ್ನೋ, ಕಟ್ಟಡವನ್ನೋ ಗುರುತಿಟ್ಟುಕೊಂಡು ನೋಡಿದರೆ ಪ್ರತೀ ಹುಣ್ಣಿಮೆಯಂದು ಆತ ಪೂರ್ವ ದಿಗಂತದ ಬೇರೆ ಬೇರೆ ಬಿಂದುಗಳಲ್ಲಿ ಉದಯಿಸುವುದು ಗೊತ್ತಾಗುತ್ತದೆ. ಬೆಳಗ್ಗೆ ಬೇಗ ಏಳುವವರಾದರೆ ಮರುದಿನ ಪಶ್ಚಿಮ ದಿಗಂತದಲ್ಲಿ ಆತ ಕಂತುವ ಸ್ಥಾನವೂ ಪ್ರತೀ ಸಲ ಬೇರೆ ಬೇರೆಯಾಗಿರುವುದೂ ಗಮನಕ್ಕೆ ಬರುತ್ತದೆ.  ಸೂರ್ಯನಿಗಿದ್ದಂತೆ ಚಂದ್ರನಿಗೂ ಉತ್ತರಾಯಣ ಮತ್ತು ದಕ್ಷಿಣಾಯನ ಎಂದಿದೆಯೇ ಎಂದು ತಿಳಿಯುವ  ಕುತೂಹಲವೂ ಕೆಲವರಲ್ಲಿ ಮೂಡಬಹುದು. ಈ ಕುರಿತು  ಒಂದಷ್ಟು ವಿಚಾರಗಳನ್ನು ಅರಿಯುವ ಪ್ರಯತ್ನ ಮಾಡೋಣ. 

ಅಂತರ್ಜಾಲದ ಕೃಪೆಯಿಂದ ಸೂರ್ಯ ಚಂದ್ರರು ದಿನಾ ಪೂರ್ವ  ದಿಗಂತದ ಯಾವ ಬಿಂದುವಿನಲ್ಲಿ ಉದಯಿಸುತ್ತಾರೆ ಎಂಬ ಮಾಹಿತಿ ಸುಲಭವಾಗಿ ಸಿಗುತ್ತದೆ.  ಇದನ್ನು azimuth ಎಂಬ ಮಾಪನದ ಮೂಲಕ ಗುರುತಿಸುತ್ತಾರೆ. ಉತ್ತರ ದಿಕ್ಕನ್ನು 0 ಡಿಗ್ರಿ, ಪೂರ್ವವನ್ನು 90 ಡಿಗ್ರಿ, ದಕ್ಷಿಣವನ್ನು  180 ಡಿಗ್ರಿ ಮತ್ತು ಪಶ್ಚಿಮವನ್ನು 270 ಡಿಗ್ರಿ ಎಂದು ಪರಿಗಣಿಸಿ ದಿಗಂತದ  ಯಾವುದೇ ಬಿಂದುವು ಉತ್ತರದ 0 ಡಿಗ್ರಿಯಿಂದ ಎಷ್ಟು ಡಿಗ್ರಿ ಕೋನದಲ್ಲಿದೆ ಎಂಬುದನ್ನು ಆ ಬಿಂದುವಿನ azimuth ಅನ್ನಲಾಗುತ್ತದೆ.  ಈ ಲೆಕ್ಕದ ಪ್ರಕಾರ ಈಶಾನ್ಯದ azimuth 45 ಡಿಗ್ರಿ, ಪೂರ್ವದ azimuth 90 ಡಿಗ್ರಿ, ಆಗ್ನೇಯದ azimuth 135 ಡಿಗ್ರಿ.

ವರ್ಷದ 365 ದಿನಗಳ ಸೂರ್ಯೋದಯ ಮತ್ತು ಚಂದ್ರೋದಯದ azimuth ಬಿಂದುಗಳನ್ನು ಪಟ್ಟಿ ಮಾಡುವುದು ಕಾರ್ಯಸಾಧುವಲ್ಲದ್ದರಿಂದ  ಪ್ರಾತಿನಿಧಿಕವಾಗಿ 2023ರ ಎಲ್ಲ ಹುಣ್ಣಿಮೆ ಮತ್ತು ಅಮಾವಾಸ್ಯೆಗಳ azimuth ದತ್ತಾಂಶವನ್ನು ಕಲೆಹಾಕಿ ಒಂದು ಟೇಬಲ್ ತಯಾರಿಸಿದೆ.
  


ಬಣ್ಣದ ಹಿನ್ನೆಲೆ ಇರುವ ಸಾಲುಗಳು ಹುಣ್ಣಿಮೆ ಮತ್ತು ಬಣ್ಣರಹಿತವಾದವು ಅಮಾವಾಸ್ಯೆಯ ದತ್ತಾಂಶಗಳು. ಇದರಲ್ಲಿ ಆಯಾ ದಿನ ಸೂರ್ಯ ಮತ್ತು  ಚಂದ್ರ ಪೂರ್ವ  ದಿಗಂತದ ಯಾವ ಬಿಂದುವಿನಲ್ಲಿ ಉದಯಿಸಿದರು ಎಂದು ತಿಳಿಯುತ್ತದೆ. 90ಕ್ಕಿಂತ ಕಡಿಮೆ azimuth ಇದ್ದರೆ ಪೂರ್ವದಿಂದ ಎಡಕ್ಕೆ ಅಂದರೆ ಈಶಾನ್ಯದತ್ತ ಹಾಗೂ 90ಕ್ಕಿಂತ ಹೆಚ್ಚಿದ್ದರೆ ಪೂರ್ವದಿಂದ ಬಲಕ್ಕೆ ಆಗ್ನೇಯದತ್ತ ಎಂದರ್ಥ. ಇದರ ಪ್ರಕಾರ ಸೂರ್ಯನು ಜೂನ್ ತಿಂಗಳಲ್ಲಿ ಅತಿ ಹೆಚ್ಚು ಈಶಾನ್ಯದತ್ತ  ಮತ್ತು ದಶಂಬರ ತಿಂಗಳಲ್ಲಿ ಅತಿ ಹೆಚ್ಚು ಆಗ್ನೇಯದತ್ತ ಸರಿದದ್ದು ಗೊತ್ತಾಗುತ್ತದೆ. ಚಂದ್ರನು ಜುಲೈ ತಿಂಗಳಲ್ಲಿ ಅತಿ ಹೆಚ್ಚು ಆಗ್ನೇಯದತ್ತ ಮತ್ತು  ದಶಂಬರದಲ್ಲಿ ಈಶಾನ್ಯದತ್ತ ಸರಿದದ್ದೂ ಗೊತ್ತಾಗುತ್ತದೆ.

ಈ ದತ್ತಾಂಶಗಳನ್ನು ಆಧರಿಸಿ ರಚಿಸಿದ  ಗ್ರಾಫ್ ನೋಡಿದರೆ ಇನ್ನಷ್ಟು ವಿವರಗಳು ಸ್ಪಷ್ಟವಾಗುತ್ತವೆ.



ಇದರಲ್ಲಿ ಕೆಂಪು ಬಣ್ಣದ ಬಿಂದುಗಳನ್ನು ಜೋಡಿಸುವ ಗೆರೆ ಸೂರ್ಯೋದಯದ ಸ್ಥಾನ ಬದಲಾದುದನ್ನೂ ಹಸುರು ಬಣ್ಣದ zig zag ಗೆರೆ ಚಂದ್ರೋದಯದ ಸ್ಥಾನ ಬದಲಾಗುತ್ತಾ ಹೋದುದನ್ನು ತೋರಿಸುತ್ತದೆ. ಹುಣ್ಣಿಮೆ ಚಂದ್ರ ಬಿಳಿಯಲ್ಲೂ ಅಮಾವಾಸ್ಯೆಯ ಚಂದ್ರ ಕಪ್ಪಿನಲ್ಲೂ ಕಾಣಿಸುತ್ತಿದ್ದಾನೆ.

ಹುಣ್ಣಿಮೆಯ ಚಂದ್ರ ಜನವರಿಯಿಂದ ಮಾರ್ಚ್ ವರೆಗೆ ಸೂರ್ಯೋದಯ ಸ್ಥಾನಕ್ಕಿಂತ ಈಶಾನ್ಯದಲ್ಲಿ ಉದಯಿಸಿದ್ದಾನೆ. ಕ್ರಮೇಣ ಸೂರ್ಯ ಚಂದ್ರರ  azimuth  ಅಂತರ ಕಡಿಮೆಯಾಗುತ್ತಾ ಹೋಗಿ  ಎಪ್ರಿಲ್ ತಿಂಗಳಿಂದ  ಸೂರ್ಯೋದಯ ಸ್ಥಾನದ ಆಚೆ ಕಡೆ  ಆಗ್ನೇಯಕ್ಕೆ  ದಾಟಿದ್ದಾನೆ. ಜುಲೈಯಲ್ಲಿ ಅತಿ ಹೆಚ್ಚು ಅಂತರವಿದ್ದು  ಮತ್ತೆ ಕಮ್ಮಿ ಆಗುತ್ತಾ ಸಪ್ಟಂಬರ್ ಆಗುವಾಗ  ವಿರುದ್ಧ ದಿಕ್ಕಿನಲ್ಲಿ  ಸೂರ್ಯೋದಯ ಸ್ಥಾನಕ್ಕಿಂತ ಈಶಾನ್ಯದಲ್ಲಿ ಉದಯಿಸತೊಡಗಿದ್ದಾನೆ. ಅಂದರೆ ಈ ಕಡೆಯಿಂದ  ಆ ಕಡೆಗೆ ದಾಟುವಾಗ ಮಾರ್ಚ್ ಮತ್ತು ಎಪ್ರಿಲ್ ಹಾಗೂ ಅಗಸ್ಟ್ ಮತ್ತು ಸಪ್ಟಂಬರ್ ತಿಂಗಳುಗಳಲ್ಲಿ  ಮಾತ್ರ ಹುಣ್ಣಿಮೆ ಚಂದ್ರ ಸೂರ್ಯೋದಯ ಸ್ಥಾನದ ಆಸುಪಾಸಿನಲ್ಲಿ ಉದಯಿಸಿದ್ದು.

ಕಪ್ಪು ಬಣ್ಣದ ಅಮಾವಾಸ್ಯೆ ಚಂದ್ರನನ್ನು ಗಮನಿಸಿದರೆ ಪ್ರತಿ ಸಲ ಆತ ಸೂರ್ಯೋದಯ ಸ್ಥಾನದ ಸಮೀಪದಲ್ಲೇ ಉದಯಿಸಿದ್ದು ತಿಳಿಯುತ್ತದೆ. ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಜನವರಿಯಿಂದ ಮೇ ವರೆಗೆ ಸೂರ್ಯನಿಗಿಂತ ಒಂದಷ್ಟು ಆಗ್ನೇಯದ ಕಡೆಗೆ ಹಾಗೂ ಮತ್ತೆ ನವಂಬರ್ ವರೆಗೆ ಸೂರ್ಯನಿಗಿಂತ ಈಶಾನ್ಯದ ಕಡೆಗೆ ಜರಗಿದ್ದು ತಿಳಿಯುತ್ತದೆ. ದಶಂಬರದಲ್ಲಿ ಮತ್ತೆ ಸೂರ್ಯನಿಗಿಂತ ಆಗ್ನೇಯದಲ್ಲಿ ಉದಯಿಸುತ್ತಾನೆ.  ಸೂರ್ಯೋದಯ ಸ್ಥಾನದ ಸಮೀಪದಲ್ಲೇ ಉದಯಿಸಿದರೂ ಪ್ರತೀ ಅಮಾವಾಸ್ಯೆಯಂದು azimuthನಲ್ಲಿ ಕೆಲವು ಡಿಗ್ರಿಗಳ ವ್ಯತ್ಯಾಸ ಇರುವುದನ್ನು ನೋಡಬಹುದು. ಒಂದು ವೇಳೆ ಎರಡೂ azimuth ಒಂದೇ ಇದ್ದು ಉದಯ ಸಮಯವೂ ಒಂದೇ ಆಗಿದ್ದರೆ ಆ ಅಮಾವಾಸ್ಯೆಯ  ದಿನ ಸೂರ್ಯಗ್ರಹಣ  ಸಂಭವಿಸುತ್ತದೆ.

ಒಟ್ಟಲ್ಲಿ ಸೂರ್ಯನು ಹುಣ್ಣಿಮೆ ಚಂದ್ರನೊಂದಿಗೆ ‘ನಾನೊಂದು ತೀರ ನೀನೊಂದು ತೀರ’ ಎಂದು ಹಾಗೂ ಅಮಾವಾಸ್ಯೆ ಚಂದ್ರನೊಂದಿಗೆ ’ನೀನೆಲ್ಲೋ ನಾನಲ್ಲೇ’  ಎಂದು ಹೇಳುತ್ತಾ ಉದಯಿಸುವುದು!

ಇದು ಹುಣ್ಣಿಮೆ ಮತ್ತು ಅಮಾವಾಸ್ಯೆ ಚಂದ್ರನ ಬಗ್ಗೆ ಆಯಿತು.  ಆದರೆ ಚಂದ್ರ ದಿನವೂ ಉದಯಿಸುತ್ತಾನಲ್ಲ. ಆ pattern ಹೇಗಿರುತ್ತದೆ ಎಂದು  ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ವರೆಗಿನ ಈ ಚಿತ್ರ ತೋರಿಸುತ್ತದೆ.



ಇಲ್ಲಿ ಹುಣ್ಣಿಮೆಯಂದು ಸೂರ್ಯನಿಂದ ದೂರದ ಸ್ಥಾನದಲ್ಲಿ ಉದಯಿಸಿದ  ಚಂದ್ರನು ಕ್ರಮೇಣ ಆ ಬಿಂದುವಿನತ್ತ ಸಾಗುತ್ತಾ ಅಮಾವಾಸ್ಯೆಯಂದು ಸೂರ್ಯೋದಯ ಸ್ಥಾನಕ್ಕೆ ಅತಿ ಸಮೀಪದಲ್ಲಿ ಉದಯಿಸುವುದನ್ನು ಗುರುತಿಸಬಹುದು. ಮತ್ತೆ ಈ ಬಿಂದುಗಳು ದೂರವಾಗುತ್ತಾ ಹುಣ್ಣಿಮೆಯಂದು ಅತ್ಯಂತ ದೂರದಲ್ಲಿ ಉದಯಿಸುತ್ತಾನೆ.

ಇದು ಒಂದೇ ತಿಂಗಳ ವಿವರಗಳಾದ್ದರಿಂದ ಸೂರ್ಯೋದಯ ಬಿಂದುವಿನಲ್ಲಿ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ. ಆದರೂ ಸೂಕ್ಷ್ಮವಾಗಿ ಗಮನಿಸಿದರೆ ದಶಂಬರದ ಉತ್ತರಾಯಣಾರಂಭದ ನಂತರ  ಆತನ ಉದಯಬಿಂದು ಉತ್ತರದತ್ತ ಚಲಿಸತೊಡಗಿರುವುದು ತಿಳಿಯುತ್ತದೆ.