ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಆತನ ನೆರಳು ಭೂಮಿಯ ಮೇಲೆ ಬಿದ್ದರೆ ಸೂರ್ಯಗ್ರಹಣವೆಂದೂ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದರೆ ಚಂದ್ರಗ್ರಹಣವೆಂದೂ ನಾವು ಶಾಲೆಗಳಲ್ಲಿ ಕಲಿತಿರುತ್ತೇವೆ. ಆದರೆ ಪ್ರತೀ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಅಥವಾ ವರ್ಷದ ನಿರ್ದಿಷ್ಟ ದಿನಗಳಂದು ಏಕೆ ಗ್ರಹಣ ಸಂಭವಿಸುವುದಿಲ್ಲ, ಎಲ್ಲ ಗ್ರಹಣಗಳು ಏಕರೂಪವಾಗಿರದೆ ವಿಭಿನ್ನವಾಗಿ ಏಕಿರುತ್ತವೆ ಮುಂತಾದ ವಿಚಾರಗಳ ಬಗ್ಗೆ ನಾವು ಆಸಕ್ತಿ ವಹಿಸುವುದು ಕಮ್ಮಿ.
ವಿವಿಧ ರೀತಿಯ ಸೂರ್ಯಗ್ರಹಣಗಳು
ಅಂಡಾಕಾರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವ ಚಂದ್ರನು ಭೂಮಿಗೆ ಅತಿ ಸಮೀಪದಲ್ಲಿ ಅಂದರೆ Perigeeಯಲ್ಲಿ ಇದ್ದಾಗ ಸೂರ್ಯಗ್ರಹಣ ಸಂಭವಿಸಿದರೆ ಚಂದ್ರ ಭೂಮಿಯ ಮೇಲೆ ಉಂಟುಮಾಡುವ ದಟ್ಟ ನೆರಳಿನ (Umbra) ಭಾಗದಲ್ಲಿರುವವರಿಗೆ ಖಗ್ರಾಸ ಸೂರ್ಯಗ್ರಹಣ (Total Eclipse) ಉಂಟಾಗುತ್ತದೆ. ಚಂದ್ರನು ಭೂಮಿಗಿಂತ ಅತಿ ದೂರದಲ್ಲಿರುವ ಅಂದರೆ Apojeeಯಲ್ಲಿ ಇದ್ದಾಗ ದಟ್ಟ ನೆರಳಿನ ಭಾಗದಲ್ಲಿರುವವರಿಗೆ ಕಂಕಣ ಸೂರ್ಯಗ್ರಹಣ (Annular Eclipse) ಉಂಟಾಗುತ್ತದೆ. ಈ ಎರಡು ಸಂದರ್ಭಗಳಲ್ಲೂ ವಿರಳ ನೆರಳಿನ (Penumbra) ಭಾಗದಲ್ಲಿರುವವರಿಗೆ ಖಂಡಗ್ರಾಸ ಗ್ರಹಣ (Partial Eclipse) ಉಂಟಾಗುತ್ತದೆ.
ಚಂದ್ರ ಭೂಮಿಗಿಂತ ನಾಲ್ಕು ಪಾಲು ಚಿಕ್ಕವನಾಗಿರುವುದರಿಂದ ಆತ ಸೃಷ್ಟಿಸುವ ನೆರಳೂ ಚಿಕ್ಕದಾಗಿದ್ದು ಭೂಮಿಯ ಸೀಮಿತ ಭಾಗದ ಮೇಲಷ್ಟೇ ಬೀಳುವುದರಿಂದ ಆ ಪ್ರದೇಶಗಳಲ್ಲಿ ಮಾತ್ರ ಸೂರ್ಯಗ್ರಹಣ ಸಂಭವಿಸುತ್ತದೆ ಮತ್ತು ಒಂದೊಂದು ಕಡೆ ಒಂದೊಂದು ರೀತಿ ಕಾಣಿಸುತ್ತದೆ.
ವಿವಿಧ ರೀತಿಯ ಚಂದ್ರಗ್ರಹಣಗಳು
ಚಂದ್ರನ ಪೂರ್ತಿ ಭಾಗದ ಮೇಲೆ ಭೂಮಿಯ ದಟ್ಟ ನೆರಳು (Umbra) ಬಿದ್ದಾಗ ಖಗ್ರಾಸ ಚಂದ್ರಗ್ರಹಣ, ಸ್ವಲ್ಪ ಭಾಗದ ಮೇಲೆ ಮಾತ್ರ ದಟ್ಟ ನೆರಳು ಬಿದ್ದಾಗ ಖಂಡಗ್ರಾಸ ಗ್ರಹಣ ((Partial Eclipse) ಉಂಟಾಗುತ್ತದೆ. ಚಂದ್ರನ ಸ್ವಲ್ಪ ಅಥವಾ ಪೂರ್ತಿ ಭಾಗದ ಮೇಲೆ ಭೂಮಿಯ ವಿರಳ ನೆರಳಷ್ಟೇ (Penumbra) ಬಿದ್ದರೆ ಛಾಯಾಕಲ್ಪ (Penumbral Eclipse) ಉಂಟಾಗುತ್ತದೆ. ಛಾಯಾಕಲ್ಪಕ್ಕೆ ಸಾಂಪ್ರದಾಯಿಕ ಮಹತ್ವ ಇಲ್ಲದಿದ್ದು ಹೆಚ್ಚಾಗಿ ಇದು ಗಮನಕ್ಕೂ ಬರುವುದಿಲ್ಲ.
ಚಂದ್ರನಿಗಿಂತ ನಾಲ್ಕು ಪಾಲು ದೊಡ್ಡದಾದ ಭೂಮಿಯು ಸೃಷ್ಟಿಸುವ ನೆರಳು ಚಂದ್ರನ ಹೆಚ್ಚಿನ ಭಾಗವನ್ನು ಆವರಿಸುವಷ್ಟು ದೊಡ್ಡದಾಗಿರುವುದರಿಂದ ಮತ್ತು ಚಂದ್ರನು ಭೂಮಿಗೆ ಹತ್ತಿರದಲ್ಲಿರುವುದರಿಂದ ಚಂದ್ರಗ್ರಹಣವು ಭೂಮಿಯ ಒಂದು ಪಾರ್ಶ್ವದ ಎಲ್ಲ ಪ್ರದೇಶಗಳಲ್ಲಿ ಏಕಪ್ರಕಾರವಾಗಿ ಕಾಣಿಸುತ್ತದೆ.
ಚಂದ್ರನಿಗಿಂತ ನಾಲ್ಕು ಪಾಲು ದೊಡ್ಡದಾದ ಭೂಮಿಯು ಸೃಷ್ಟಿಸುವ ನೆರಳು ಚಂದ್ರನ ಹೆಚ್ಚಿನ ಭಾಗವನ್ನು ಆವರಿಸುವಷ್ಟು ದೊಡ್ಡದಾಗಿರುವುದರಿಂದ ಮತ್ತು ಚಂದ್ರನು ಭೂಮಿಗೆ ಹತ್ತಿರದಲ್ಲಿರುವುದರಿಂದ ಚಂದ್ರಗ್ರಹಣವು ಭೂಮಿಯ ಒಂದು ಪಾರ್ಶ್ವದ ಎಲ್ಲ ಪ್ರದೇಶಗಳಲ್ಲಿ ಏಕಪ್ರಕಾರವಾಗಿ ಕಾಣಿಸುತ್ತದೆ.
ಭೂಮಿಯು ಸೂರ್ಯನ ಸುತ್ತ ಸುತ್ತುವ ಕಕ್ಷೆಯ ತಳ(ecliptic) ಮತ್ತು ಚಂದ್ರನು ಭೂಮಿಯ ಸುತ್ತ ಸುತ್ತುವ ಕಕ್ಷೆಯ ತಳಗಳ ಮಧ್ಯೆ ಸುಮಾರು 5.14 ಡಿಗ್ರಿಗಳ ಕೋನವಿರುವುದೇ ಪ್ರತೀ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಗ್ರಹಣ ಸಂಭವಿಸದಿರುವುದಕ್ಕೆ ಕಾರಣ. ಈ ಎರಡು ತಳಗಳು ಒಂದನ್ನೊಂದು ಛೇದಿಸುವ ಎರಡು ಸ್ಥಾನಗಳನ್ನು nodes ಎಂದು ಕರೆಯುತ್ತಾರೆ. ಚಂದ್ರನ ಸಮೇತ ಭೂಮಿಯು ಸೂರ್ಯನನ್ನು ಸುತ್ತುವಾಗ ವರ್ಷಕ್ಕೆ ಎರಡು ಸಲ ಈ nodeಗಳು ಸೂರ್ಯನ ಎರಡು ಪಾರ್ಶ್ವಗಳಲ್ಲಿ ತಲಾ ಸುಮಾರು 35 ದಿನಗಳಷ್ಟು ಕಾಲ ಭೂಮಿ ಮತ್ತು ಸೂರ್ಯನೊಂದಿಗೆ ಸರಳ ರೇಖೆಯಲ್ಲಿರುತ್ತವೆ. ಆ ಸಮಯದಲ್ಲಿ ಬರುವ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಚಂದ್ರನೂ ಆ ಸರಳ ರೇಖೆಯಲ್ಲಿ ಸೇರಿ ಗ್ರಹಣಗಳುಂಟಾಗುತ್ತವೆ. ಈ ಸಮಯವನ್ನು ಗ್ರಹಣ ಋತು( eclipse season) ಎನ್ನುತ್ತಾರೆ. ಇಂಥ ಒಂದು ಗ್ರಹಣ ಋತುವಿನಲ್ಲಿ ಕಮ್ಮಿ ಎಂದರೆ 15 ದಿನಗಳ ಅಂತರದಲ್ಲಿ ಒಂದು ಚಂದ್ರಗ್ರಹಣ ಮತ್ತು ಒಂದು ಸೂರ್ಯಗ್ರಹಣ ಸಂಭವಿಸಿಯೇ ತೀರುತ್ತವೆ. ಗ್ರಹಣ ಋತುವಿನ ಆರಂಭದಲ್ಲೇ ಒಂದು ಗ್ರಹಣ ಸಂಭವಿಸಿದರೆ ಮಧ್ಯದಲ್ಲಿ ಒಂದು ಮತ್ತು ಕೊನೆಯಲ್ಲಿ ಇನ್ನೊಂದು ಹೀಗೆ ಮೂರು ಗ್ರಹಣಗಳೂ ಸಂಭವಿಸಬಹುದು. ಅವು ಎರಡು ಚಂದ್ರಗ್ರಹಣ ಮತ್ತು ಒಂದು ಸೂರ್ಯಗ್ರಹಣ ಅಥವಾ ಎರಡು ಸೂರ್ಯಗ್ರಹಣ ಮತ್ತು ಒಂದು ಚಂದ್ರಗ್ರಹಣ ಆಗಿರಬಹುದು. ಇದೇ ವಿದ್ಯಮಾನ ವರ್ಷದ ಎರಡನೇ ಗ್ರಹಣಋತುವಿನಲ್ಲೂ ಸಂಭವಿಸುತ್ತದೆ. ಅಂದರೆ ವರ್ಷಕ್ಕೆ ಕಮ್ಮಿ ಎಂದರೆ ತಲಾ ಎರಡು ಮತ್ತು ಜಾಸ್ತಿ ಎಂದರೆ ತಲಾ ನಾಲ್ಕು ಸೂರ್ಯ ಮತ್ತು ಚಂದ್ರಗ್ರಹಣಗಳು ಸಂಭವಿಸಬಹುದು. ಒಟ್ಟಿನಲ್ಲಿ ವರ್ಷಕ್ಕೆ ಕಮ್ಮಿ ಎಂದರೆ ನಾಲ್ಕು ಮತ್ತು ಹೆಚ್ಚು ಎಂದರೆ ಆರು ಗ್ರಹಣಗಳು ಸಂಭವಿಸುತ್ತವೆ. ಆದರೆ ಗ್ರಹಣ ಋತು ಅರ್ಧ ವರ್ಷಕ್ಕಿಂತ 10 ದಿನ ಮೊದಲೇ ಮರುಕಳಿಸುವುದರಿಂದ ಕೆಲವು ಸಲ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮೂರು ಗ್ರಹಣ ಋತುಗಳು ಬಂದು ಗ್ರಹಣಗಳ ಒಟ್ಟು ಸಂಖ್ಯೆ ಹೆಚ್ಚಾಗಬಹುದು. ಗ್ರಹಣ ಋತುವಿನ ಆರಂಭದಲ್ಲಿ ಸಂಭವಿಸುವ ಗ್ರಹಣಗಳು ಖಂಡಗ್ರಾಸವಾಗಿರುತ್ತವೆ. ಮಧ್ಯಭಾಗದಲ್ಲಿ ಸಂಭವಿಸುವಂಥವು ಖಗ್ರಾಸವಾಗಿರುವ ಸಾಧ್ಯತೆ ಹೆಚ್ಚು. ಅಂತೂ ಕಷ್ಟಗಳು ಬಂದರೆ ಬೆನ್ನು ಬೆನ್ನಿಗೆ ಬರುತ್ತವೆ ಅಂದಂತೆ ಗ್ರಹಣಗಳೂ ಬೆನ್ನು ಬೆನ್ನಿಗೆ ಬರುತ್ತವೆ ಎನ್ನುವುದು ನಿಜ. ಭೂಮಿಯ ಮತ್ತು ಚಂದ್ರನ ಕಕ್ಷೆಗಳು ಛೇದಿಸುವ ಸ್ಥಾನಗಳು ಸ್ಥಿರವಾಗಿರದೆ ನಿಧಾನವಾಗಿ ಚಂದ್ರನ ಪರಿಭ್ರಮಣದ ವಿರುದ್ಧ ದಿಕ್ಕಿನಲ್ಲಿ ಚಲಿಸುವುದರಿಂದ ಗ್ರಹಣ ಋತುಗಳು ವರ್ಷದ ನಿರ್ದಿಷ್ಟ ಕಾಲದಲ್ಲಿ ಇರದೆ ಪ್ರತಿ ಸಲ ಸುಮಾರು 10 ದಿನಗಳಷ್ಟು ಮುಂಚೆ ಆರಂಭವಾಗುತ್ತವೆ. 18 ವರ್ಷ 11 ದಿನ 8 ಗಂಟೆಗಳಲ್ಲಿ ಆ ಬಿಂದುಗಳು ಮತ್ತೆ ಮೊದಲಿದ್ದ ಸ್ಥಾನಕ್ಕೆ ಮರಳುವುದರಿಂದ ಗ್ರಹಣಗಳ ಪುನರಾವರ್ತನೆಯಾಗುತ್ತದೆ. ಆದರೆ 8 ಗಂಟೆಗಳ ಕಾರಣದಿಂದ ಕಾಣಿಸುವ ಸ್ಥಾನ ವ್ಯತ್ಯಾಸವಾಗಬಹುದು. ಈ 18 ಚಿಲ್ಲರೆ ವರ್ಷಗಳ ಅವಧಿಯನ್ನು Saros Cycle ಅನ್ನುತ್ತಾರೆ.
ರಾಹು ಮತ್ತು ಕೇತು
ಚಂದ್ರನ ಕಕ್ಷೆಯ ತಳವು ಭೂಮಿಯ ಕಕ್ಷೆಯ ತಳವನ್ನು ಛೇದಿಸಿ ದಕ್ಷಿಣದಿಂದ ಉತ್ತರದತ್ತ ಸಾಗುವ ಬಿಂದುವನ್ನು ಪಾಶ್ಚಾತ್ಯರು North Node ಅಥವಾ Ascending Node ಅನ್ನುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಅದನ್ನು ರಾಹು ಎಂದು ಗುರುತಿಸುತ್ತಾರೆ. ಮತ್ತೆ ಚಂದ್ರನ ಕಕ್ಷೆಯ ತಳವು ಭೂಮಿಯ ಕಕ್ಷೆಯ ತಳವನ್ನು ಛೇದಿಸಿ ದಕ್ಷಿಣದತ್ತ ಸಾಗುವ ಬಿಂದು South Node ಅಥವಾ Descending Node ಕೇತು ಎನ್ನಿಸಿಕೊಳ್ಳುತ್ತದೆ.
ಸೂರ್ಯ ಮತ್ತು ಚಂದ್ರ ಪೂರ್ವ ದಿಗಂತದಲ್ಲಿ ಉದಯಿಸುವ ಸ್ಥಾನಗಳನ್ನು ತಿಂಗಳಿಗೊಮ್ಮೆ ಒಂದು ವರ್ಷ ಕಾಲ ಗುರುತಿಸುತ್ತಾ ಹೋದರೆ ಅವರಿಬ್ಬರ ಕಕ್ಷೆಗಳು ಬದಲಾಗುತ್ತಾ ಹೋಗಿ ಸುಮಾರು ಆರು ತಿಂಗಳಿಗೊಮ್ಮೆ ಅವು ಒಂದನ್ನೊಂದು ಛೇದಿಸುವುದನ್ನು ಗಮನಿಸಬಹುದು. ನಾನು ಸಂಗ್ರಹಿಸಿದ 2019ರ ಇಂಥ ದತ್ತಾಂಶವನ್ನು ಕ್ರೋಢೀಕರಿಸಿ ಸೂರ್ಯ ಚಂದ್ರರ ಪಥಗಳ ಗ್ರಾಫ್ ತಯಾರಿಸಿದಾಗ ಜನವರಿ, ಜುಲೈ ಮತ್ತು ಡಿಸೆಂಬರಲ್ಲಿ ಅವು ಒಂದನ್ನೊಂದು ಛೇದಿಸಿದ್ದು ಕಂಡುಬರುತ್ತದೆ. ಪರಸ್ಪರ ಪಥಗಳು ಛೇದಿಸಿದ ಬಿಂದುಗಳೇ ನೋಡ್‌ಗಳು. ಅವುಗಳ ಆಚೀಚಿನ ಸುಮಾರು 35 ದಿನಗಳೇ ಗ್ರಹಣ ಋತುಗಳು. 2019ರ ಒಂದು ಋತು ಜನವರಿಯ ಮೊದಲ ಭಾಗದಲ್ಲೇ ಬಂದದ್ದರಿಂದ ಮೂರು ಋತುಗಳಲ್ಲಿ 5 ಗ್ರಹಣ ಸಂಭವಿಸಿದ್ದನ್ನು ಕಾಣಬಹುದು.
ದೃಕ್‌ಗಣಿತವನ್ನು ಬಳಸುವ ಪಂಚಾಂಗಕರ್ತರು ಮತ್ತು ಆಧುನಿಕ ಪರಿಕರಗಳನ್ನುಪಯೋಗಿಸುವ ವಿಜ್ಞಾನಿಗಳು ಸಿದ್ಧ ಪಡಿಸುವ ಗ್ರಹಣಗಳ ವೇಳಾಪಟ್ಟಿ ಶತ ಪ್ರತಿಶತ ಒಂದಕ್ಕೊಂದು ತಾಳೆಯಾಗುವುದು ಅಚ್ಚರಿಯ ವಿಷಯ. ಭಾರತೀಯರಿಗಿಂತಲೂ ಮೊದಲು ಗ್ರೀಕ್ ಖಗೋಳಶಾಸ್ತ್ರಜ್ಞರು ಮತ್ತು ಬೆಬಿಲೋನಿಯನ್ನರು ಗ್ರಹಣಗಳ ನಿಶ್ಚಿತ ಮರುಕಳಿಸುವಿಕೆಯನ್ನು ಗುರುತಿಸಿ ಮುಂಬರುವ ಗ್ರಹಣಗಳ ನಿಖರ ಮುನ್ಸೂಚನೆ ಕೊಡಬಲ್ಲವರಾಗಿದ್ದರಂತೆ.
ಗ್ರಹಣಗಳೆಂದರೇನೆಂದು ಗೊತ್ತಿರದಿದ್ದ ಕಾಲದಲ್ಲಿ ಅವ್ಯಕ್ತ ಭಯದಿಂದಾಗಿ ಹುಟ್ಟಿಕೊಂಡ ಕೆಲವು ಆಚಾರ ವಿಚಾರಗಳು ಈಗಿನ ಕಾಲದಲ್ಲಿ ಎಷ್ಟು ಪ್ರಸ್ತುತ ಎಂಬುದು ಯೋಚಿಸಬೇಕಾದ ವಿಚಾರ. ರಾಹು ಕೇತುಗಳು ಸೂರ್ಯ ಚಂದ್ರರನ್ನು ಕಬಳಿಸಿದಾಗ ಗ್ರಹಣಗಳುಂಟಾಗುತ್ತವೆ ಎಂದುಕೊಂಡಿದ್ದ ಕಾಲ ಒಂದಿತ್ತು. ಗ್ರಹಣ ಸಮಯದಲ್ಲಿ ರಾಹು ಕೇತುಗಳನ್ನು ಬೆದರಿಸಲು ಆಕಾಶದತ್ತ ಕೋವಿಯಿಂದ ಗುಂಡು ಹಾರಿಸುವ ಕ್ರಮವೂ ಇತ್ತು! ಆದರೆ ಅದು ಆಕಾಶಕಾಯಗಳ ಆಟ ಎಂದು ಈಗ ಎಲ್ಲರಿಗೂ ಗೊತ್ತಿದೆ. ಆದರೂ ಗ್ರಹಣಗಳ ಕುರಿತು ಕೆಲವು ಮಿಥ್ಯೆಗಳು ಜನಮಾನಸದಲ್ಲಿ ಇನ್ನೂ ಉಳಿದಿವೆ. ಟೀವಿಯ ಭಯೋತ್ಪಾದಕ ಜ್ಯೋತಿಷಿಗಳ ಕುಮ್ಮಕ್ಕೂ ಇದಕ್ಕಿದೆ. ಸೂರ್ಯನನ್ನು ಬರಿಗಣ್ಣಿನಿಂದ ನೇರವಾಗಿ ನೋಡಬಾರದು ಎಂಬುದೊಂದನ್ನು ಬಿಟ್ಟರೆ ಗ್ರಹಣಗಳು ಯಾರಿಗೂ ಕೇಡು ಉಂಟುಮಾಡಲಾರವು.
ಮುಂದಿನ 10 ವರ್ಷಗಳಲ್ಲಿ ಈ ಭಾಗದಲ್ಲಿ ಕಾಣಿಸಲಿರುವ ಗ್ರಹಣಗಳು. ಕಂಕಣ ಸೂರ್ಯಗ್ರಹಣಕ್ಕೆ 2064ರ ವರೆಗೆ ಕಾಯಬೇಕು.
ಗ್ರಹಣಗಳೆಂದರೇನೆಂದು ಗೊತ್ತಿರದಿದ್ದ ಕಾಲದಲ್ಲಿ ಅವ್ಯಕ್ತ ಭಯದಿಂದಾಗಿ ಹುಟ್ಟಿಕೊಂಡ ಕೆಲವು ಆಚಾರ ವಿಚಾರಗಳು ಈಗಿನ ಕಾಲದಲ್ಲಿ ಎಷ್ಟು ಪ್ರಸ್ತುತ ಎಂಬುದು ಯೋಚಿಸಬೇಕಾದ ವಿಚಾರ. ರಾಹು ಕೇತುಗಳು ಸೂರ್ಯ ಚಂದ್ರರನ್ನು ಕಬಳಿಸಿದಾಗ ಗ್ರಹಣಗಳುಂಟಾಗುತ್ತವೆ ಎಂದುಕೊಂಡಿದ್ದ ಕಾಲ ಒಂದಿತ್ತು. ಗ್ರಹಣ ಸಮಯದಲ್ಲಿ ರಾಹು ಕೇತುಗಳನ್ನು ಬೆದರಿಸಲು ಆಕಾಶದತ್ತ ಕೋವಿಯಿಂದ ಗುಂಡು ಹಾರಿಸುವ ಕ್ರಮವೂ ಇತ್ತು! ಆದರೆ ಅದು ಆಕಾಶಕಾಯಗಳ ಆಟ ಎಂದು ಈಗ ಎಲ್ಲರಿಗೂ ಗೊತ್ತಿದೆ. ಆದರೂ ಗ್ರಹಣಗಳ ಕುರಿತು ಕೆಲವು ಮಿಥ್ಯೆಗಳು ಜನಮಾನಸದಲ್ಲಿ ಇನ್ನೂ ಉಳಿದಿವೆ. ಟೀವಿಯ ಭಯೋತ್ಪಾದಕ ಜ್ಯೋತಿಷಿಗಳ ಕುಮ್ಮಕ್ಕೂ ಇದಕ್ಕಿದೆ. ಸೂರ್ಯನನ್ನು ಬರಿಗಣ್ಣಿನಿಂದ ನೇರವಾಗಿ ನೋಡಬಾರದು ಎಂಬುದೊಂದನ್ನು ಬಿಟ್ಟರೆ ಗ್ರಹಣಗಳು ಯಾರಿಗೂ ಕೇಡು ಉಂಟುಮಾಡಲಾರವು.
ಮುಂದಿನ 10 ವರ್ಷಗಳಲ್ಲಿ ಈ ಭಾಗದಲ್ಲಿ ಕಾಣಿಸಲಿರುವ ಗ್ರಹಣಗಳು. ಕಂಕಣ ಸೂರ್ಯಗ್ರಹಣಕ್ಕೆ 2064ರ ವರೆಗೆ ಕಾಯಬೇಕು.