Friday, 30 July 2021

ಏಕಮೇವ ರಫಿಯ ಏಕೈಕ ಹಾಡುಗಳು

ಮಹಮ್ಮದ್ ರಫಿ ಅಂದರೆ ಹಿಂದಿ ಚಿತ್ರಸಂಗೀತ ಕ್ಷೇತ್ರದ ಏಕಮೇವಾದ್ವಿತೀಯ ಗಾಯಕರು.  50-60ರ ದಶಕಗಳಲ್ಲಿ  ಬಹುಪಾಲು ಚಿತ್ರಗಳಲ್ಲಿ ಅವರೇ ಮುಖ್ಯ ಗಾಯಕರಾಗಿರುತ್ತಿದ್ದುದು. ಆರಾಧನಾದ ನಂತರ ಪರಿಸ್ಥಿತಿ ಕೊಂಚ ಬದಲಾದರೂ ಅವರ ಜನಪ್ರಿಯತೆ ಕಮ್ಮಿಯೇನೂ ಆಗಲಿಲ್ಲ. ಆ ನಂತರ ಮಾತ್ರವಲ್ಲ, ಮೊದಲು ಕೂಡ ಅವರು ಒಂದೇ ಹಾಡು ಹಾಡಿದ ಚಿತ್ರಗಳೂ ಅನೇಕ ಇವೆ.   ಆಯ್ದ ಹತ್ತು ಚಿತ್ರಗಳಲ್ಲಿ  ಅವರು ಹಾಡಿದ ವೈವಿಧ್ಯಮಯ ಏಕೈಕ ಹಾಡುಗಳು ಇಲ್ಲಿವೆ.

1. ರಾಮಯ್ಯಾ ವಸ್ತಾವಯ್ಯಾ


ರಾಜ್‌ಕಪೂರ್ ಅವರು ಆಗ್ ಚಿತ್ರ ತಯಾರಿಸಿ ಕೈ ಸುಟ್ಟುಕೊಂಡ ಮೇಲೆ ಶಂಕರ್ ಜೈಕಿಶನ್ ಎಂಬ ಹೊಸ ಸಂಗೀತಕಾರರು, ಶೈಲೇಂದ್ರ ಮತ್ತು ಹಸರತ್ ಜೈಪುರಿ ಎಂಬ ಗೀತಕಾರರು ಹಾಗೂ ಮುಕೇಶ್ ಮತ್ತು  ಲತಾ ಮಂಗೇಶ್ಕರ್ ಎಂಬ ಗಾಯಕರನ್ನೊಳಗೊಂಡ ಹೊಸ ತಂಡ ಕಟ್ಟಿಕೊಂಡು ಸಫಲತೆಯ ಹೊಸ ಯಾತ್ರೆ ಆರಂಭಿಸಿದರು. ಆದರೆ ಶಂಕರ್ ಜೈಕಿಶನ್ ಅವರು ಬರಸಾತ್ ಚಿತ್ರಕ್ಕಾಗಿ ಮೊತ್ತಮೊದಲು ಧ್ವನಿ ಮುದ್ರಿಸಿಕೊಂಡದ್ದು ರಫಿ ಹಾಡಿದ ‘ಮೈ ಜಿಂದಗೀ ಮೆಂ ಹರ್ ದಮ್ ರೋತಾ ಹೀ ರಹಾ ಹೂಂ’ ಎಂಬ ಹಾಡು. ರಫಿ ಅವರು ಹಾಡಲು ಬಂದಾಗ ಹೊಸಬರಾಗಿದ್ದ ಶಂಕರ್ ಮತ್ತು ಜೈಕಿಶನ್ ಗೌರವದಿಂದ ಎದ್ದು ನಿಂತು ‘ನಿಮಗೆ ನಾವು ಏನು ತಾನೇ ಹೇಳಿಕೊಡಬಲ್ಲೆವು? ಇದು ಟ್ಯೂನ್, ಇದು ಸಾಹಿತ್ಯ. ನಮ್ಮ ಹಾಡು ಹಾಡಿ ಹಿಟ್ ಮಾಡಿ ಕೊಡಿ’ ಎಂದು ಪ್ರಾರ್ಥಿಸಿದರಂತೆ.  ರಾಜ್ ಚಿತ್ರಗಳಲ್ಲಿ  ಮುಕೇಶ್ ಮತ್ತು ಮನ್ನಾಡೇ ಮುಖ್ಯ ಪುರುಷ ಗಾಯಕರಾಗಿರುತ್ತಿದ್ದರೂ ಪಾಯಸದ ದ್ರಾಕ್ಷಿಯಂತೆ ಆಗಾಗ   ರಫಿ ಹಾಡುಗಳೂ  ಇರುತ್ತಿದ್ದವು. ಬೂಟ್ ಪಾಲಿಶ್, ಅಬ್ ದಿಲ್ಲೀ ದೂರ್ ನಹೀಂ, ಜಾಗ್ತೇ ರಹೋ ಮುಂತಾದ ರಾಜ್ ಚಿತ್ರಗಳಲ್ಲಿ ರಫಿ ಹಾಡುಗಳಿದ್ದವು.  ಸಂಗಂ ಹಾಡಂತೂ ಗೊತ್ತೇ ಇದೆ. ಮೇರಾ ನಾಮ್ ಜೋಕರ್‌ನ ಮೂರನೇ ಭಾಗದಲ್ಲಿ ಹೀರ್ ರಾಂಝಾ ಸನ್ನಿವೇಶಕ್ಕೆ ಒಂದು ಸುಂದರ ರಫಿ ಹಾಡು ಇದ್ದು ಚಿತ್ರೀಕರಣವೂ ಆಗಿತ್ತು.  ಆದರೆ ಥಿಯೇಟರಲ್ಲಿ ಪ್ರದರ್ಶಿತವಾದ ಚಿತ್ರದಲ್ಲಿ ಅದು ಇರಲಿಲ್ಲ. ಆರ್.ಕೆ. ಫಿಲಂಸ್ ಲಾಂಛನದಲ್ಲಿ ರಫಿ ಕೊನೆಯದಾಗಿ ಹಾಡಿದ್ದು 1981ರಲ್ಲಿ ತಯಾರಾದ  ಬೀವಿ ಓ ಬೀವಿ ಚಿತ್ರಕ್ಕಾಗಿ.

ಶ್ರೀ 420 ಚಿತ್ರದ  ಸಂಗೀತ ಕಂಪೋಸ್ ಮಾಡಲೆಂದು ಶಂಕರ್ ಜೈಕಿಶನ್ ಅವರೊಂದಿಗೆ ರಾಜ್‌ಕಪೂರ್ ಖಂಡಾಲಾಗೆ ಹೋಗಿದ್ದಾಗ  ಒಂದು ಜಾನಪದ ಶೈಲಿಯ ಗೀತೆ ಬೇಕೆಂದು ನಿರ್ಧರಿಸಲಾಯಿತಂತೆ. ಹೈದರಾಬಾದಿನಲ್ಲಿ ಕೆಲ ಕಾಲ ವಾಸಿಸಿದ್ದ ಶಂಕರ್ ಅವರಿಗೆ ತೆಲುಗು ಚೆನ್ನಾಗಿ ಬರುತ್ತಿತ್ತು. ಅವರು ಸಹಾಯಕ ದತ್ತಾರಾಮ್ ನುಡಿಸುತ್ತಿದ್ದ ಢೋಲಕ್ ಲಯದಲ್ಲಿ ರಾಮಯ್ಯಾ ವಸ್ತಾವಯ್ಯಾ, ರಾಮಯ್ಯಾ ವಸ್ತಾವಯ್ಯಾ ಎಂದು ಹಾಡತೊಡಗಿದರಂತೆ. ಇದರ ಅರ್ಥ ರಾಮಯ್ಯಾ ಬಾಬಾರಯ್ಯಾ ಎಂದು ಅಲ್ಲಿ ಯಾರಿಗೂ ತಿಳಿಯದಿದ್ದರೂ ಟ್ಯೂನ್ ಕೇಳಿ ಖುಶಿ ಪಟ್ಟ ರಾಜ್‌ಕಪೂರ್ ‘ಅದನ್ನೇ ಮತ್ತೆ ಮತ್ತೆ ಹಾಡುತ್ತಿದ್ದೀರಲ್ಲ. ಮುಂದೇನು?’ ಅಂದರಂತೆ.  ಆಗ ಶೈಲೇಂದ್ರ ‘ಮೈನೆ ದಿಲ್ ತುಝ್ ಕೊ ದಿಯಾ’ ಎಂದು ಮುಂದುವರಿಸಿದರಂತೆ. ರಫಿ ಮುಖ್ಯ ಗಾಯಕರಾಗಿ ಲತಾ ಮತ್ತು ಮುಕೇಶ್ ಕೂಡ ಧ್ವನಿ ಸೇರಿಸಿದ ಈ ಗೀತೆ ಎವರ್ ಗ್ರೀನ್ ಹಿಟ್ ಆಯಿತು.

2. ಮನ್ ಮೊರಾ ಬಾಂವರಾ


ಕಿಶೋರ್ ಕುಮಾರ್ ಅವರಿಗಾಗಿ ರಫಿ ಹಾಡಿದ್ದು ಎಂಬ ನೆಲೆಯಲ್ಲಿ ರಾಗಿಣಿ ಚಿತ್ರದ ಈ ಗೀತೆಗೆ ಹೆಚ್ಚು ಪ್ರಾಮುಖ್ಯ. ಈ ಹಾಡಿನಲ್ಲಿ interlude music ಇಲ್ಲದಿರುವುದು ವಿಶೇಷ. ಶಾಸ್ತ್ರೀಯ ಶೈಲಿಯ ಈ ಗೀತೆಯನ್ನು ರಫಿಯೇ ಹಾಡಬೇಕೆಂದು ಸಂಗೀತ ನಿರ್ದೇಶಕ ಓ.ಪಿ. ನಯ್ಯರ್ ಪಟ್ಟು ಹಿಡಿದರಂತೆ.  ಶರಾರತ್, ಬಾಗೀ ಶಹಜಾದಾ, ಭಾಗಂ ಭಾಗ್, ಪ್ಯಾರ್ ದೀವಾನಾ ಮುಂತಾದ ಚಿತ್ರಗಳಲ್ಲೂ ರಫಿ ಅವರು ಕಿಶೋರ್‌ಗಾಗಿ ಹಾಡಿದ್ದರೂ ಈ ಹಾಡಿನಷ್ಟು ಪ್ರಚಾರ ಆ ಚಿತ್ರಗಳ ಹಾಡುಗಳಿಗೆ ಸಿಗಲಿಲ್ಲ. ತಾನೊಬ್ಬ ಹೀರೊ, ಕೆಲವು ಬಾರಿಯಾದರೂ ಬೇರೆಯವರ ಹಾಡಿದ್ದಕ್ಕೆ ತಾನು ಲಿಪ್ ಸಿಂಕ್ ಮಾಡಬೇಕು ಎಂದು ಕಿಶೋರ್ ಅಭಿಲಾಷೆಯೂ ಆಗಿದ್ದಿರಬಹುದು. ಉಪಕಾರ್ ಚಿತ್ರದ ‘ಕಸಮೆ ವಾದೇ ಪ್ಯಾರ್ ವಫಾ ಸಬ್’ ಹಾಡನ್ನು ಕಿಶೋರ್ ಅವರಿಂದ ಹಾಡಿಸಬೇಕೆಂದು ಕಲ್ಯಾಣಜೀ ಆನಂದಜೀ ಬಯಸಿದ್ದರಂತೆ. ಅದಕ್ಕೆ ಕಿಶೋರ್ ‘ನಾನೇ ಇನ್ನೊಬ್ಬರು ಹಾಡಿದ್ದಕ್ಕೆ ತುಟಿ ಚಲನೆ ಮಾಡುವ ಹೀರೋ.  ಬೇರೊಬ್ಬರಿಗಾಗಿ ಹಾಡುವಂತೆ ನನಗೇಕೆ ಹೇಳುತ್ತೀರಿ’ ಎಂದು ದಬಾಯಿಸಿದರಂತೆ. ಇನ್‍ಕಂ ಟ್ಯಾಕ್ಸ್ ಸಮಸ್ಯೆಯ ಸುಳಿಯಿಂದ ಹೊರಬರಲು ಅಣ್ಣ ಅಶೋಕ್ ಕುಮಾರ್  ನೀಡಿದ ಸಲಹೆಯಂತೆ ಅವರು ಆ ಮೇಲೆ ಹಿನ್ನೆಲೆ ಗಾಯನವನ್ನು ಗಂಭೀರವಾಗಿ ಪರಿಗಣಿಸಿ ಇತಿಹಾಸ ಸೃಷ್ಟಿಸಿದ್ದು.

3. ಕಹಾಂ ಜಾ ರಹಾ ಹೈ



ಬಲರಾಜ್ ಸಹಾನಿ, ನೂತನ್ ಅಭಿನಯದ ಸೀಮಾ ಚಿತ್ರದ ಈ ಹಾಡಿನ ಅರ್ಥಪೂರ್ಣ ಸಾಹಿತ್ಯ ಶೈಲೇಂದ್ರ ಅವರದ್ದು.  ಶಂಕರ ಜೈಕಿಶನ್ ಸಂಗೀತ ಇದೆ. ಗೊತ್ತು ಗುರಿಯಿಲ್ಲದೆ ಪಯಣಿಸುತ್ತಿರುವವರನ್ನು ಎಚ್ಚರಿಸುವಂತಿರುವ ಈ ಹಾಡಿನ ಕೊನೆಯ ಭಾಗದಲ್ಲಿ ‘ತೋಡ್ ಡಾಲೇ’ ಎಂಬಲ್ಲಿ  ಒಡೆಯುವ ರಫಿಯ ಸ್ವರ ವಿಶೇಷ ಪರಿಣಾಮ ಉಂಟುಮಾಡುತ್ತದೆ.  ಕಾಲಿನಿಂದ ಪೆಡಲ್ ಒತ್ತಿ ಗಾಳಿ ಹಾಕುತ್ತಾ ಎರಡೂ ಕೈಗಳಿಂದ ನುಡಿಸುವ ಆರ್ಗನ್‌ನ ಸುಂದರ  ಬಳಕೆ ಈ ಹಾಡಿನಲ್ಲಿದೆ.

4. ವಕ್ತ್ ಸೆ ದಿನ್ ಔರ್ ರಾತ್


ಓ.ಪಿ. ನಯ್ಯರ್ ಸಂಗೀತದ ನಯಾ ದೌರ್  ನಂತರ ಬಿ.ಆರ್. ಚೋಪ್ಡಾ ಅವರ  ಚಿತ್ರಗಳಲ್ಲಿ  ಮಹೇಂದ್ರ ಕಪೂರ್ ಹಾಡತೊಡಗಿ ರಫಿ ಏಕೋ ದೂರವಾದರು. ಈ ವೈಮನಸ್ಸಿಗೆ ನಿರ್ದಿಷ್ಟ ಕಾರಣ ಏನು ಎಂಬುದು  ಸ್ಪಷ್ಟವಿಲ್ಲ. ಆದರೆ ವಕ್ತ್ ಚಿತ್ರದ ಈ ಹಿನ್ನೆಲೆ ಹಾಡಿಗೆ ರಫಿ ಅಲ್ಲದೆ ಇನ್ಯಾರೂ ನ್ಯಾಯ ಒದಗಿಸಲಾರರು ಎಂದು ಸಂಗೀತ ನಿರ್ದೇಶಕ ರವಿಗೆ ಅನ್ನಿಸಿದಾಗ  ‘ಅವರು ಒಪ್ಪಿದರೆ ನನ್ನ ಅಭ್ಯಂತರ ಇಲ್ಲ’ ಎಂದು ಚೋಪ್ಡಾ ಹೇಳಿದರಂತೆ.  ರವಿ ಅವರ ಮೇಲೆ ಅತೀವ ಅಭಿಮಾನವಿದ್ದ ರಫಿ ಯಾವುದೇ ಬಿಗುಮಾನ ಇಲ್ಲದೆ ಹಾಡನ್ನು ಹಾಡಿ ಗೆಲ್ಲಿಸಿಕೊಟ್ಟರು.

5. ಯೇ ಮೇರಾ ಪ್ರೇಮ್ ಪತ್ರ



ಸಂಗಂ ಚಿತ್ರದ ಉಳಿದೆಲ್ಲ ಹಾಡುಗಳು ಒಂದು ತೂಕವಾದರೆ ರಫಿ ಅವರ ಈ ಹಾಡು ಒಂದು ತೂಕ.  ಈ ಪ್ರೇಮಪತ್ರದ ಸಾಲುಗಳನ್ನು ಹಸರತ್ ಜೈಪುರಿ ಅವರು ತಾನು ಪ್ರೀತಿಸುತ್ತಿದ್ದ ನೆರೆಮನೆಯ  ಹುಡುಗಿಯೊಬ್ಬಳನ್ನು ಉದ್ದೇಶಿಸಿ ಬರೆದಿಟ್ಟಿದ್ದರಂತೆ. ರಾಜ್‌ಕಪೂರ್ ಅವರ ಕಣ್ಣಿಗೆ ಇದು ಬಿದ್ದು ಸಂಗನಲ್ಲಿ ಬಳಸಿಕೊಂಡರಂತೆ. ಈ ಹಾಡಿನ ಆರಂಭದಲ್ಲಿ ಇರುವ ಮೆಹರ್ಬಾನ್, ಹಸೀನಾ, ದಿಲರುಬಾ ಮುಂತಾದವು ಪತ್ರ ಬರೆಯುವ ವಿವಿಧ ಶೈಲಿಗಳಾಗಿರಬಹುದೆಂದು ನಾನು ಬಹಳ ಕಾಲ ಅಂದುಕೊಂಡಿದ್ದೆ.  ಅದರ ಅರ್ಥ ‘ಏನೆಂದು ಸಂಬೋಧಿಸಿ ಪತ್ರವನ್ನು ಆರಂಭಿಸಲಿ’ ಎಂದು ಆ ಮೇಲೆ ತಿಳಿಯಿತು. ಗ್ರೂಪ್ ವಯಲಿನ್ಸ್ ಜೊತೆಗೆ ರಷ್ಯನ್ ಶೈಲಿಯ high pitch ಕೋರಸ್ ಮತ್ತು ಚೇಲೋದ ಅತಿಮಂದ್ರ counter melody  ಶಂಕರ್ ಜೈಕಿಶನ್ ಅವರ ಈ ಸಂಗೀತ  ಸಂಯೋಜನೆಯ ಮುಖ್ಯ ಆಕರ್ಷಣೆ. ಆ ವರ್ಷದ ವಾರ್ಷಿಕ ಬಿನಾಕಾ ಗೀತ್‌ಮಾಲಾದಲ್ಲಿ  ಈ ಕ್ಲಾಸ್ ಗೀತೆ ದ್ವಿತೀಯ ಸ್ಥಾನದಲ್ಲೂ, ಮಾಸ್ ಗೀತೆ  ಮೇರೇ ಮನ್ ಕೀ ಗಂಗಾ ಪ್ರಥಮ ಸ್ಥಾನದಲ್ಲೂ ಇದ್ದವು. ಅಂದು ನಾನೂ ಮೇರೇ ಮನ್ ಕೀ ಗಂಗಾ ಹಾಡನ್ನೇ ಹೆಚ್ಚು ಇಷ್ಟ ಪಡುತ್ತಿದ್ದುದು.  ಈಗ ಪ್ರೇಮಪತ್ರ ಇಷ್ಟವಾಗುತ್ತದೆ.

6. ದಿಲ್ ಪುಕಾರೇ



ಎಸ್.ಡಿ. ಬರ್ಮನ್ ಸಂಗೀತ ಇದ್ದ ಜ್ಯೂಯಲ್ ತೀಫ್ ಚಿತ್ರದ ಈ ರಫಿ ಲತಾ ಹಾಡು ಅವರಿಬ್ಬರ ವಿರಸ ಕೊನೆಗೊಂಡ ಬಳಿಕ ಮೊದಲು  ಧ್ವನಿಮುದ್ರಣಗೊಂಡ ಡ್ಯೂಯಟ್ ಎಂದು ಅನೇಕರು ತಪ್ಪಾಗಿ ಉಲ್ಲೇಖಿಸುವುದಿದೆ. ವಾಸ್ತವವಾಗಿ ವಿರಸದ ನಂತರದ ಮೊದಲ ಯುಗಳ ಗೀತೆ ಗಬನ್ ಚಿತ್ರದ ಶಂಕರ್ ಜೈಕಿಶನ್ ಗೀತೆ ತುಮ್ ಬಿನ್ ಸಜನ್ ಬರ್‌ಸೆ ನಯನ್.  ಕಿಶೋರ್ ಕುಮಾರ್ ಅವರು ದೇವಾನಂದ್ ಅವರ ಅಧಿಕೃತ ಧ್ವನಿ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ 1957ರ ನೌ ದೋ ಗ್ಯಾರಹ್ ಮತ್ತು ಪೇಯಿಂಗ್ ಗೆಸ್ಟ್ ನಂತರ 1960ರ ದಶಕದ ಮಧ್ಯ ಭಾಗದ  ವರೆಗೆ ಕಿಶೋರ್ ಕುಮಾರ್ ದೇವ್ ಆನಂದ್‌ಗಾಗಿ ಒಂದು ಹಾಡೂ ಹಾಡಲಿಲ್ಲ!  ಆ ಸಮಯದಲ್ಲಿ ಕೆಲವೊಮ್ಮೆ ಹೇಮಂತ್ ಕುಮಾರ್, ಇನ್ನು ಕೆಲವೊಮ್ಮೆ ದ್ವಿಜೇನ್ ಮುಖರ್ಜಿ ಕೆಲವು ಹಾಡು ಹಾಡಿದ್ದು ಬಿಟ್ಟರೆ ಎಲ್ಲ ದೇವ್ ಹಾಡುಗಳು ರಫಿ ಧ್ವನಿಯಲ್ಲೇ ಇರುತ್ತಿದ್ದವು.  1965ರ ತೀನ್ ದೇವಿಯಾಂ ಚಿತ್ರದಿಂದ ಮತ್ತೆ ಕಿಶೋರ್- ದೇವ್  ನಂಟು ಬೆಸೆಯಿತು. ನಂತರ ಗೈಡ್ ಹಾಗೂ ದುನಿಯಾ ಚಿತ್ರದಲ್ಲಿ ದೇವ್‌ಗಾಗಿ ಒಂದೊಂದು ಕಿಶೋರ್ ಹಾಡು  ಇತ್ತು.  1967ರ ಜ್ಯೂಯಲ್ ತೀಫ್‌ನಲ್ಲಿ  ಅವರೇ ಮುಖ್ಯ ಗಾಯಕರೆನಿಸಿ ರಫಿ ಪಾಲಿಗೆ ಈ ಒಂದು ಯುಗಳ ಗೀತೆ ಮಾತ್ರ ಲಭಿಸಿತು. ಪಹಾಡಿ ರಾಗಾಧಾರಿತವಾಗಿ ವಿಶಿಷ್ಟ ನಡೆಯ ಲಯದೊಂದಿಗೆ ಇದು ಅತ್ಯಂತ ಮಾಧುರ್ಯಪೂರ್ಣವಾಗಿ  ಹೊರಹೊಮ್ಮಿತು. ಇದೇ ಶೈಲಿಯಲ್ಲಿ ಆರಾಧನಾದ ಕೋರಾ ಕಾಗಜ್ ಥಾ ಯೇ ಮನ್ ಮೇರಾ ಮುಂದೆ ಜನ್ಮ ತಾಳಿತು. ಅದೂ ರಫಿ ಲತಾ ಧ್ವನಿಯಲ್ಲೇ ಇರಬೇಕೆಂಬ ಬರ್ಮನ್ ಅಭಿಲಾಷೆ ರಫಿ ವಿದೇಶ ಯಾತ್ರೆಗೆ ತೆರಳಿದ್ದರಿಂದ ಕೈಗೂಡಲಿಲ್ಲ.

7. ಸುಖ್ ಕೆ ಸಬ್ ಸಾಥಿ


ಟ್ರಾಜಿಡಿ ಕಿಂಗ್ ಎಂದೇ ಗುರುತಿಸಲ್ಪಡುತ್ತಿದ್ದ ದಿಲೀಪ್ ಕುಮಾರ್ ಗೋಪಿ ಚಿತ್ರದಲ್ಲಿ ಹಾಸ್ಯಮಿಶ್ರಿತ ಲಘು ಪಾತ್ರದಲ್ಲಿ ಕಾಣಿಸಿಕೊಂಡಾಗ ಮೊದಲ ಬಾರಿಗೆ ಮಹೇಂದ್ರ ಕಪೂರ್ ಅವರ ಧ್ವನಿಯಾದರು. ಈ ಚಿತ್ರದ ಲೌಡ್ ಪಾತ್ರಕ್ಕೆ ಮಹೇಂದ್ರ ಕಪೂರ್ ಅವರ ಗಡುಸು ಧ್ವನಿಯೇ ಸೂಕ್ತ ಎಂದು ಕಲ್ಯಾಣಜೀ ಆನಂದಜೀ ಅವರಿಗೆ  ಅನ್ನಿಸಿತಂತೆ. ಅವರು ಹಾಡಿದ ಜಂಟಲ್ ಮೇನ್, ರಾಮಚಂದ್ರ ಕಹ ಗಯೇ ಸಿಯಾಸೇ ಮತ್ತು ಏಕ್ ಪಡೋಸನ್ ಪೀಛೆ ಪಡ್‌ಗಯಿ ಅಂದಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾದರೂ ಇಂದಿಗೂ ಬೆಲೆ ಕಳೆದುಕೊಳ್ಳದೆ ಉಳಿದುಕೊಂಡಿರುವುದು ರಫಿಯ ಏಕೈಕ ಭಜನೆಯಾದ ಸುಖ್ ಕೇ ಸಬ್ ಸಾಥಿ ಮಾತ್ರ. ಗೋಲಿ ಸೋಡಾದಂತೆ ಒಮ್ಮೆ ನೊರೆಯುಕ್ಕಿಸಿ ಆ ಮೇಲೆ ತಣ್ಣಗಾಗುವವುಗಳನ್ನು ಅಲೋಪೆತಿಕ್ ಹಾಡುಗಳೆಂದೂ, ಕಾಲ ಕಳೆದಂತೆ ಜನಪ್ರಿಯತೆಯನ್ನು ವೃದ್ಧಿಸಿಕೊಳ್ಳುತ್ತಾ ಶಾಶ್ವತವಾಗಿ ಉಳಿಯುವ ಇಂಥವುಗಳನ್ನು ಆಯುರ್ವೇದಿಕ್ ಹಾಡುಗಳೆಂದೂ ಕಲ್ಯಾಣಜೀ ಅವರು ವರ್ಗೀಕರಿಸುವುದಿತ್ತು.

8. ಮೇರಾ ಮನ್ ತೇರಾ ಪ್ಯಾಸಾ


ಶೈಲೇಂದ್ರ ಅವರ ಅಕಾಲಿಕ ನಿಧನದ ನಂತರ ಅವರ ಸ್ಥಾನ ತುಂಬಲು  ಆಗಲೇ ಕೆಲವು ಚಿತ್ರಗಳಿಗೆ ಹಾಡು ಬರೆದಿದ್ದ  ನೀರಜ್ ಅವರನ್ನು ಶಂಕರ್ ಜೈಕಿಶನ್ ಮತ್ತೆ ಚಿತ್ರರಂಗಕ್ಕೆ ಕರೆತಂದರು. ಶೈಲೇಂದ್ರ ಅವರ ಕೊರತೆಯನ್ನು ಅನುಭವಿಸುತ್ತಿದ್ದ ಎಸ್.ಡಿ. ಬರ್ಮನ್ ಕೂಡ ದೇವ್ ಆನಂದ್ ಅಭಿನಯದ ಗ್ಯಾಂಬ್ಲರ್ ಚಿತ್ರದಿಂದ ನೀರಜ್ ಅವರಿಂದಲೇ ಹಾಡು ಬರೆಸತೊಡದರು. ಈ ಚಿತ್ರದ ಉಳಿದೆಲ್ಲ ಹಾಡುಗಳನ್ನು ಕಿಶೋರ್ ಹಾಡಿದರೂ ರಫಿ ಗಾಯನದ ರುಚಿ ಗೊತ್ತಿದ್ದ ಬರ್ಮನ್ ದಾದಾ ಈ ಒಂದು ಹಾಡನ್ನು ಅವರಿಗೆ ಮೀಸಲಿರಿಸಿದರು. ಚಿತ್ರ ಅಂಥ ಯಶಸ್ಸು ಕಾಣದಿದ್ದರೂ ಈ ಹಾಡನ್ನು ಜನ  ಈಗಲೂ ಇಷ್ಟ ಪಡುತ್ತಾರೆ.  ಮುಂದೆಯೂ ಎಸ್.ಡಿ. ಬರ್ಮನ್ ನಿರ್ದೇಶನದಲ್ಲಿ ರಫಿ ಅನೇಕ ಗೀತೆಗಳನ್ನು ಹಾಡಿದರೂ ದೇವ್ ಆನಂದ್‌ಗಾಗಿ ಇದು ಅವರ ಸಂಗೀತವಿದ್ದ ಕೊನೆಯ  ಹಾಡಾಯಿತು. ರಾಜೇಶ್ ರೋಶನ್ ಸಂಗೀತವಿದ್ದ ಮನ್ ಪಸಂದ್ ಚಿತ್ರದ ‘ಲೋಗೊಂ ಕಾ ದಿಲ್ ಅಗರ್ ಹಾಂ ಜೀತ್‌ನಾ ತುಮ್ ಕೊ’ ರಫಿ  ದೇವ್ ಆನಂದ್ ಅವರಿಗಾಗಿ ಹಾಡಿದ ಕೊನೆಯ ಹಾಡು

9. ಆಜ್ ಮೌಸಮ್



1973ರ ಲೋಫರ್ ಚಿತ್ರದ ಈ ಏಕೈಕ ರಫಿ ಹಾಡು ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ. ಹಾಡಿನ ಸಾಹಿತ್ಯ ಲಯದ grooveನೊಂದಿಗೆ ಮಿಳಿತವಾಗದೆ ತೇಲುತ್ತಾ ಸಾಗುವುದು ಇದರ ವೈಶಿಷ್ಟ್ಯ. ವಿಭಿನ್ನ ರೀತಿಯ interlude, ಆಕರ್ಷಕ ಮುರ್ಕಿಗಳು ಹಾಡಿನ ಸೊಬಗನ್ನು ಹೆಚ್ಚಿಸಿವೆ. ಮಿತ್ರರೊಬ್ಬರು ರಫಿ ಈ ಹಾಡನ್ನು ಯಾಕೋ ಕಷ್ಟ ಪಟ್ಟು ಹಾಡಿದ ಹಾಗೆ ಕೇಳಿಸುತ್ತದೆ ಎಂದೊಮ್ಮೆ ಹೇಳಿದ್ದರು. ಹಾಡಿನ ಶ್ರುತಿ ಕೊಂಚ ತಗ್ಗಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ನನಗೂ ಅನ್ನಿಸಿದ್ದಿದೆ. ಲಕ್ಷ್ಮಿ ಪ್ಯಾರೆ ಸಂಗೀತದ  ಈ ಹಾಡು ಮಾನ್ಸೂನ್ ವೆಡ್ಡಿಂಗ್ ಎಂಬ ಆಂಗ್ಲ ಚಿತ್ರದಲ್ಲಿ ಮರುಬಳಕೆಯಾಗಿದೆ.

10. ದರ್ದೆ ದಿಲ್ ದರ್ದೆ ಜಿಗರ್


ಲೈಲಾ ಮಜ್ನೂ ಚಿತ್ರದಲ್ಲಿ ಮೊದಲ ಬಾರಿಗೆ ಋಷಿ ಕಪೂರ್‌ ಧ್ವನಿಯಾದ ರಫಿ ಹಮ್ ಕಿಸೀ ಸೆ ಕಮ್ ನಹೀಂ, ಸರ್‌ಗಮ್, ನಸೀಬ್, ಅಮರ್ ಅಕ್ಬರ್ ಅಂಥೊಣಿ ಮುಂತಾದ ಚಿತ್ರಗಳಲ್ಲಿ ಅವರಿಗಾಗಿ ಅನೇಕ ಹಿಟ್ ಗೀತೆಗಳನ್ನು ಹಾಡಿದರು. ಮಾಮೂಲಿ ಲಕ್ಶ್ಮಿ ಪ್ಯಾರೆ ಶೈಲಿಗೆ ಹೊರತಾದ ಸಂಯೋಜನೆಯುಳ್ಳ 1980ರ ಕರ್ಜ್ ಚಿತ್ರದ ಈ ಹಾಡೂ ಅದೇ ಸಾಲಿಗೆ ಸೇರಿತು. 1980ರ ಜುಲೈ 31ಕ್ಕೆ 55ರ ಹರೆಯದಲ್ಲಿ ರಫಿ ಇಹಲೋಕ ತ್ಯಜಿಸದಿರುತ್ತಿದ್ದರೆ  ಈ ಜೋಡಿಯ ಇನ್ನಷ್ಟು  ಹಾಡುಗಳು ಬರುತ್ತಿದ್ದವೋ ಏನೋ. ಬಾಬ್ಬಿ ಚಿತ್ರದಲ್ಲಿ ಶೈಲೇಂದ್ರ ಸಿಂಗ್ ಬದಲಿಗೆ ರಫಿ    ಮೈ ಶಾಯರ್ ತೋ ನಹೀಂ  ಹಾಡುತ್ತಿದ್ದರೆ ಹೇಗಿರುತ್ತಿತ್ತು ಎಂಬುದು ಕುತೂಹಲದ ಪ್ರಶ್ನೆ! ಡಿಂಪಲ್‌ಗೆ ಲತಾ ಮಂಗೇಷ್ಕರ್ ಹಾಡಬಹುದಾದರೆ ಋಷಿಗೆ ರಫಿ ಯಾಕೆ ಹಾಡಬಾರದಿತ್ತು ಅಲ್ಲವೇ? ರೇಡಿಯೋ ಸಿಲೋನಿನಲ್ಲಿ ಮೊದಲ ಬಾರಿ ಬಾಬ್ಬಿ ಚಿತ್ರದ ಹಾಡುಗಳು ಪ್ರಸಾರವಾದಾಗ ಒಂದಾದರೂ ರಫಿ ಹಾಡು ಇರಬಹುದೇನೋ ಎಂದು ನಾನು ನಿರೀಕ್ಷಿಸಿದ್ದು ಸುಳ್ಳಲ್ಲ.

ಕೆಳಗಿನ ಪಟ್ಟಿಯಿಂದ 10 ಹಾಡುಗಳ ಪೈಕಿ ಬೇಕಿದ್ದುದನ್ನು ಆಯ್ದು ಆಲಿಸಿ.