Wednesday, 14 August 2019

ಚಂದಿರನೇತಕೆ ತಿರುಗುವನಮ್ಮಾ



ಕೆಲವೊಮ್ಮೆ ನಮಗೆ ತೀರಾ ಪರಿಚಿತರಾದ  ವ್ಯಕ್ತಿಯೊಬ್ಬರನ್ನು ಬೇರೆ ಊರಿನ ಯಾವುದಾದರೂ ಸಮಾರಂಭದಲ್ಲಿ ಕಂಡಾಗ ಅವರ ಗುರುತೇ ಸಿಗದಂತಾಗುವುದಿದೆ.  ನಮ್ಮ ಮನಸ್ಸು  ನಿತ್ಯದ ಪರಿಸರಕ್ಕೆ ಮಾತ್ರ ಅವರನ್ನು map ಮಾಡಿಕೊಂಡಿರುವುದು ಇದಕ್ಕೆ ಕಾರಣವಾಗಿರುತ್ತದೆ.  ಕೆಲವು ಸಲ ಅವರು ವಾಡಿಕೆಗಿಂತ ಬೇರೆ ದಿರಿಸು ಧರಿಸಿರುವುದೂ  ಗೊಂದಲ ಮೂಡಿಸುತ್ತದೆ.  ನನಗೂ ಹಾಗೆಯೇ ಆಯಿತು.  ಅಮೇರಿಕದ ಸ್ಯಾನ್ ಹೋಸೆಯಲ್ಲಿರುವ ಮಗಳ ಮನೆಯಲ್ಲಿ ಕೆಲವು ದಿನಗಳ ವಾಸ್ತವ್ಯಕ್ಕೆಂದು ಬಂದು ಸಂಜೆಯ ಹೊತ್ತು ಸ್ಯಾನ್ ಫ್ರಾನ್‌ಸಿಸ್ಕೊ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸಾಗುತ್ತಿರುವಾಗ ಎದುರಿಗೆ ಆಗಸದಲ್ಲಿ ಫಳಫಳನೆ ಹೊಳೆಯುತ್ತಿದ್ದ  ಹುಣ್ಣಿಮೆ ಚಂದ್ರನ ಗುರುತೇ ನನಗೆ ಸಿಗಲಿಲ್ಲ! ಸೂಕ್ಷ್ಮವಾಗಿ ಗಮನಿಸಿದಾಗ ಆತನಿಗೆ ಶಶಿ ಅಥವಾ ಶಶಾಂಕನೆಂಬ ಹೆಸರು ಬರಲು ಕಾರಣವಾದ ಮೊಲದ ಆಕೃತಿ ಸುಮಾರು 90 ಡಿಗ್ರಿ ಬಲಕ್ಕೆ ತಿರುಗಿ ನನ್ನ ಕಣ್ಣುಗಳಿಗೆ ಮೋಸ ಮಾಡಿದ್ದು ಅರಿವಾಯಿತು. ಕವಿ ನಿ. ರೇ. ಹಿರೇಮಠ ಅವರ ಚಂದಿರನೇತಕೆ ಓಡುವನಮ್ಮಾ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ಚಂದಿರನೇತಕೆ ತಿರುಗುವನಮ್ಮಾ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ ತಗಲಲಿಲ್ಲ.  ಆದರೆ ಚಂದ್ರ ಭೂಗೋಳದ ಬೇರೆ ಬೇರೆ ಭಾಗಗಳಿಂದ ನೋಡಿದಾಗ ಬೇರೆ ಬೇರೆ ರೀತಿ ಕಾಣಿಸುತ್ತಾನೆ ಎಂದು ನಮಗೆ ಶಾಲೆಯಲ್ಲಿ ಕಲಿಸಿರಲಿಲ್ಲ.  ನಾನು ಎಲ್ಲೂ ಓದಿರಲೂ ಇಲ್ಲ.  ಈ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದರೂ ಸ್ಪಷ್ಟ ಮಾಹಿತಿ ಎಲ್ಲೂ ಸಿಗಲಿಲ್ಲ.  ಆದರೂ ಅಲ್ಲಿ ಇಲ್ಲಿ ಸಿಕ್ಕಿದಷ್ಟನ್ನು ಒಂದುಗೂಡಿಸಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.


ಮೇಲಿನ ಚಿತ್ರವನ್ನು ನೋಡಿದರೆ ಭೂಮಧ್ಯ ರೇಖೆಯ ಗುಂಟ  ಭೂಮಿಯನ್ನು ಸುತ್ತುವ ಚಂದ್ರನಲ್ಲಿರುವ ಮೊಲದ ಆಕೃತಿ ಹುಣ್ಣಿಮೆಯಂದು ಉತ್ತರ ಗೋಲಾರ್ಧದಲ್ಲಿ ಇರುವವರಿಗೆ 90 ಡಿಗ್ರಿ ಬಲಕ್ಕೆ ತಿರುಗಿದಂತೆಯೂ ದಕ್ಷಿಣ ಗೋಲಾರ್ಧದಲ್ಲಿರುವವರಿಗೆ 90 ಡಿಗ್ರಿ ಎಡಕ್ಕೆ ತಿರುಗಿದಂತೆಯೂ ಕಾಣಿಸುವುದನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಬಹುದು. ಇವೆರಡರ ಮಧ್ಯೆ ಭೂಮಧ್ಯರೇಖೆಗೆ ಸಮೀಪ ಇರುವ ಭಾರತದಂಥ ದೇಶಗಳಲ್ಲಿ ಸಹಜವಾಗಿಯೇ  ನೇರವಾಗಿ ಕುಳಿತ ಮೊಲದ ಆಕೃತಿ  ಕಾಣುತ್ತದೆ. ಕೆಳಗಿನ ಚಿತ್ರ ಇದನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ.



ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ಅರ್ಧ ಚಂದ್ರ ಬಿಂಬ ಕಾಣಿಸುವ ರೀತಿಯಲ್ಲೂ ಉತ್ತರ ಗೋಲಾರ್ಧ ಮತ್ತು ದಕ್ಷಿಣ ಗೋಲಾರ್ಧಕ್ಕೆ ವ್ಯತ್ಯಾಸವಿರುತ್ತದೆ. ಉತ್ತರ ಗೋಲಾರ್ಧದವರು ಭೂಮಧ್ಯ ರೇಖೆ ಕಡೆ ಅಂದರೆ ದಕ್ಷಿಣಕ್ಕೆ ಮುಖ ಮಾಡಿದರೆ ಪೂರ್ವ ಎಡಕ್ಕಿರುತ್ತದಲ್ಲವೇ. ಹೀಗಾಗಿ ಭೂಮಧ್ಯರೇಖೆಯ ಮೇಲಿರುವ ಶುಕ್ಲ ಪಕ್ಷದ ಚಂದ್ರ ಬಿಂಬ D ಆಕಾರದಲ್ಲಿ ಕಾಣಿಸತೊಡಗಿ ಹುಣ್ಣಿಮೆಯ ದಿನ O ಆಗಿ ನಂತರ C ಆಕಾರ ತಾಳಿ ಕ್ಷೀಣಿಸುತ್ತಾ ಹೋಗುತ್ತದೆ. (DOC)


ತದ್ವಿರುದ್ಧವಾಗಿ ದಕ್ಷಿಣ ಗೋಲಾರ್ಧದವರು ಭೂಮಧ್ಯ ರೇಖೆಯ ಮೇಲಿರುವ ಚಂದ್ರನ ಕಡೆ ಅಂದರೆ ಉತ್ತರಕ್ಕೆ ಮುಖ ಮಾಡಿದಾಗ ಪೂರ್ವ ಬಲಕ್ಕೆ ಇರುತ್ತದೆ.  ಹೀಗಾಗಿ ಅಲ್ಲಿ ಶುಕ್ಲ ಪಕ್ಷದ ಚಂದ್ರ C ಆಕಾರದಲ್ಲಿ ವೃದ್ಧಿಸುತ್ತಾ ಹೋಗಿ ಹುಣ್ಣಿಮೆಯಂದು O ಆಗಿ  ಆಮೇಲೆ D ಆಕಾರದಲ್ಲಿ ಕ್ಷೀಣಿಸುತ್ತಾ ಸಾಗುತ್ತಾನೆ. (COD)


ಚಂದ್ರ ಈ ರೀತಿ ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿ ಗೋಚರಿಸುವುದರಿಂದ ಅವರವರಿಗೆ ಕಾಣಿಸಿದಂತೆ ಆತನನ್ನು ಅಭಿವ್ಯಕ್ತಿಸುವುದು ಸಹಜ.  ನಮ್ಮಲ್ಲಿ ನೆಟ್ಟಗೆ ಕುಳಿತ ಮೊಲದ ಆಕೃತಿಯನ್ನು ಹೊಂದಿದ ಚಂದ್ರ ಜನಮಾನಸದಲ್ಲಿ ನೆಲೆಯಾಗಿದ್ದರೆ ಭೂಗೋಳದ ಉತ್ತರ ಭಾಗದಲ್ಲಿರುವ ಅಮೇರಿಕ ಮುಂತಾದೆಡೆ ಚಂದ್ರನೆಂದರೆ ಮುಖ ಮೇಲೆ ಮಾಡಿದಂತಿರುವ ಮೊಲವುಳ್ಳ ಆಕೃತಿಯುಳ್ಳ ಗೋಳ. NASA ಸಂಸ್ಥೆಯ  ಚಿತ್ರಗಳಲ್ಲಿ, ಮಾಡೆಲ್‌ಗಳಲ್ಲಿ ಇಂಥ ಚಂದ್ರನೇ ಕಾಣಿಸಿಕೊಳ್ಳುವುದನ್ನು ಗಮನಿಸಬಹುದು.  ಅಮೇರಿಕದ ಮಕ್ಕಳ ಪುಸ್ತಕವೊಂದರಲ್ಲೂ ಇಂಥ ಚಂದ್ರನ ಚಿತ್ರವೇ ನನಗೆ ಕಾಣಿಸಿತು.

 

ನಮ್ಮ ಚಂದಮಾಮದೊಳಗಿನ ಚಂದಮಾಮ ಕಾಣಿಸಿಕೊಳ್ಳುವುದು ಹೀಗೆ.



ಚಂದ್ರನ ಮೈ ಮೇಲೆ  ಶಶ ಅಂದರೆ ಮೊಲದ ಆಕೃತಿಯನ್ನು ಗುರುತಿಸಿ ನಮ್ಮಲ್ಲಿ ಪುರಾತನ ಕಾಲದಿಂದಲೂ  ಶಶದ ಚಿಹ್ನೆಯುಳ್ಳವನು ಎಂಬರ್ಥದಲ್ಲಿ ಶಶಾಂಕ ಹಾಗೂ ಶಶವನ್ನು ಹೊಂದಿದವನು ಎಂಬರ್ಥದಲ್ಲಿ ಶಶಿ ಎಂದು ಆತನನ್ನು ಕರೆಯಲಾಗುತ್ತದೆ.  ಶಶವನ್ನು ಹೊಂದಿದ ಶಶಿಯನ್ನು ಧರಿಸಿದ ಈಶ್ವರ ಶಶಿಧರ ಅಥವಾ ಶಶಿಶೇಖರ.

ಜಾತಕ ಕಥೆಯೊಂದರ ಪ್ರಕಾರ ಒಮ್ಮೆ ಬೋಧಿಸತ್ವನು ಮೊಲವಾಗಿ ಜನ್ಮ ತಾಳಿದ್ದನು.  ಆ ಮೊಲಕ್ಕೆ ಒಂದು ಮಂಗ, ಒಂದು ನರಿ ಮತ್ತು ಒಂದು ನೀರು ನಾಯಿ ಸ್ನೇಹಿತರಾಗಿದ್ದವು.  ಒಮ್ಮೆ ಅವೆಲ್ಲವೂ ತಮ್ಮ ಪ್ರಿಯ ಆಹಾರವನ್ನು ಯಾಚಕರಿಗೆ ದಾನ ಮಾಡಿ ಪುಣ್ಯ ಸಂಪಾದಿಸಬೇಕೆಂದು ಯೋಚಿಸಿದವು.  ಅದರಂತೆ ಮಂಗ ಕೆಲವು ಮಾವಿನ ಹಣ್ಣುಗಳನ್ನು, ನರಿ ಒಂದು ಹಲ್ಲಿ ಮತ್ತು ಎಲ್ಲಿಂದಲೋ ಕದ್ದ ಒಂದು ಗಡಿಗೆ ಮೊಸರನ್ನು ಮತ್ತು ನೀರುನಾಯಿ ಕೆಲವು ಮೀನುಗಳನ್ನು ಸಿದ್ಧಪಡಿಸಿ ತಂದವು.  ಆದರೆ ತನ್ನ ಆಹಾರವಾದ ಹಸಿರು ಹುಲ್ಲು ಭಿಕ್ಷೆ ನೀಡಲು ಯೋಗ್ಯವಾಗಲಾರದೆಂದು ಯೋಚಿಸಿ ತನ್ನ ಮಾಂಸವನ್ನೇ ಸಮರ್ಪಿಸಲು ನಿರ್ಧರಿಸಿತು. ಪರೀಕ್ಷಿಸಲೋಸುಗ ಇಂದ್ರ ಸನ್ಯಾಸಿಯ ವೇಷ ಧರಿಸಿ ಮೊಲವಿದ್ದಲ್ಲಿಗೆ ಬಂದ.  ಧೃಢ ನಿರ್ಧಾರ ತಾಳಿದ್ದ ಮೊಲ ತನ್ನ ಮಾಂಸವನ್ನು ಭಿಕ್ಷೆಯಾಗಿ ಸ್ವೀಕರಿರುವಂತೆ ಸನ್ಯಾಸಿಗೆ ಹೇಳಿ ಚಿತೆ ಸಿದ್ಧಪಡಿಸಿ ಧಗಧಗ ಉರಿಯುತ್ತಿದ್ದ ಉರಿಗೆ ಹಾರಿತು. ಇಂದ್ರನ ಕೃಪೆಯಿಂದ ಚಿತೆಯ ಉರಿ ಮಂಜಿನಂತೆ ತಣ್ಣಗಾಯಿತು.  ಮೊಲದ ಬಲಿದಾನದ ಕಥೆ ಯುಗ ಯುಗಗಳ ವರೆಗೆ ಎಲ್ಲರಿಗೂ ನೆನಪಿನಲ್ಲುಳಿಯುವ ಸಲುವಾಗಿ  ಇಂದ್ರ ಚಂದ್ರನ ಮೇಲೆ ಮೊಲದ ಆಕಾರವೊಂದನ್ನು ಕೆತ್ತಿದ. ಮೊಲದ ಬಲಿದಾನದ ಕಥೆಯನ್ನು ಸಾರುವ ಆಂಧ್ರಪ್ರದೇಶದ ಉಬ್ಬು ಶಿಲ್ಪವೊಂದರ ಚಿತ್ರ ಇಲ್ಲಿದೆ.




ಜಪಾನ್ ಹಾಗೂ ಚೀನಾ ದೇಶದವರೂ ಆತನಲ್ಲಿ ಮೊಲವನ್ನೇ ಕಾಣುತ್ತಾರಂತೆ. ಜಪಾನೀಯರ ಪ್ರಕಾರ ಚಂದ್ರನಲ್ಲಿರುವ ಮೊಲ ಮೋಚಿ ಎಂಬ ಕೇಕ್ ತಯಾರಿಸಲು  ಅಕ್ಕಿ ಕುಟ್ಟುತ್ತಿರುತ್ತದೆ. ಶರತ್ಕಾಲದಲ್ಲಿ ಆಚರಿಸಲ್ಪಡುವ ಸಾಂಪ್ರದಾಯಿಕ ಚಂದ್ರೋತ್ಸವದಲ್ಲಿ ಅವರು ಮೊಲದಾಕೃತಿಯ ಸಿಹಿ ತಿಂಡಿ ತಯಾರಿಸುವುದಿದೆಯಂತೆ.  ಚೀನೀಯರ ನಂಬಿಕೆಯಂತೆ  ಅಮೃತದ ಗುಟುಕೊಂದನ್ನು ಕದ್ದು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಂದ್ರಲೋಕಕ್ಕೆ ಪಲಾಯನ ಮಾಡಿ ಬಂದ ಹೆಂಗಸೊಬ್ಬಳಿಗಾಗಿ ಆ ಮೊಲ ಗಿಡಮೂಲಿಕೆಗಳನ್ನು ಕುಟ್ಟುತ್ತಿದೆ. ಸಾವಿರಾರು ವರ್ಷ ಕಳೆದರೂ ಭೂಮಿಗೆ ಬರಲೊಲ್ಲದ ಆ ಹೆಂಗಸು ಮೊಲದೊಂದಿಗೆ ಅಲ್ಲೇ ಇರಲು ಬಯಸಿದ್ದಾಳಂತೆ. ಪೆರು ದೇಶದವರಿಗೆ ಚಂದ್ರನಲ್ಲಿ ಕಾಣಿಸುವುದು ಹಗ್ಗದ ಮೂಲಕ ಮೇಲೇರಿ ಹೋದ ಒಂದು ನರಿ. ನರಿಯೊಡನೆ ಚಂದ್ರನನ್ನೇರಲು ಹೋದ ಮೋಲ್ ಎಂಬ ಜಾತಿಯ ಇಲಿಯೊಂದು ಹಗ್ಗದಿಂದ ಜಾರಿ ಕೆಳಗೆ ಬಿತ್ತಂತೆ. ಹೀಗಾಗಿ ಇತರರ ಮೂದಲಿಕೆಯಿಂದ ತಪ್ಪಿಸಲು ಆ ಜಾತಿಯ ಇಲಿಗಳು ಇಂದಿಗೂ ಬಿಲ ಬಿಟ್ಟು ಹೊರಗೆ ಬರುವುದಿಲ್ಲವಂತೆ.  ಕೆಲವು ಅಮೇರಿಕನ್ ಮೂಲ ನಿವಾಸಿಗಳ ಪ್ರಕಾರ ಚಂದ್ರನಲ್ಲಿ ವಾಸವಾಗಿರುವ ತುಂಟ ಪ್ರಾಣಿಯೊಂದು ಆತನ ವೃದ್ಧಿ ಮತ್ತು ಕ್ಷಯಗಳಿಗೆ ಕಾರಣ. ಇನ್ನೊಂದು ಅಮೇರಿಕನ್ ಕತೆ ಪ್ರಕಾರ ಅಲ್ಲಿರುವ ಓರ್ವ ಹೆಂಗಸು ಚಂದ್ರನಿಗಾಗಿ ಹಣೆಪಟ್ಟಿಯನ್ನು ನೇಯ್ದಾಗ ಆತ ವೃದ್ಧಿಸುತ್ತಾನೆ.  ಆದರೆ ಆಕೆಯ ಬೆಕ್ಕು ಆ ನೇಯ್ಗೆಯನ್ನು ಬಿಡಿಸಿದಾಗ ಆತ ಮತ್ತೆ  ಕ್ಷೀಣಿಸತೊಡಗುತ್ತಾನೆ.

ಸೂರ್ಯ ಮತ್ತು ಭೂಮಿಯ ನಡುವೆ ನೇರವಾಗಿ ಚಂದ್ರ ಬಂದಾಗ ಚಂದ್ರಗ್ರಹಣ, ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುವುದು, ಭೂಮಿ ಸೂರ್ಯನನ್ನು ಸುತ್ತುವ ಕಕ್ಷೆ ಮತ್ತು ಚಂದ್ರ ಭೂಮಿಯನ್ನು ಸುತ್ತುವ ಕಕ್ಷೆಯ ಪಾತಳಿಗಳ ನಡುವೆ 5 ಡಿಗ್ರಿ ಕೋನ ಇರುವುದರಿಂದ ಪ್ರತೀ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಗ್ರಹಣ ಸಂಭವಿಸದಿರುವುದು, ಚಂದ್ರ ತನ್ನ ಸುತ್ತ ಒಂದು ಸುತ್ತು ತಿರುಗುವ ಅವಧಿ(ಚಂದ್ರನ ದಿನ) ಮತ್ತು ಆತ ಭೂಮಿಯ ಸುತ್ತ ಸುತ್ತುವ ಅವಧಿ(ಚಂದ್ರನ ವರ್ಷ) ಒಂದೇ ಅಂದರೆ 27.3 ದಿನ ಆಗಿರುವುದರಿಂದ ನಾವು ಯಾವಾಗಲೂ ಆತನ ಒಂದೇ ಪಾರ್ಶ್ವವನ್ನು ನೋಡುತ್ತಿರುವುದು,  ಚಂದ್ರ ಭೂಮಿಯನ್ನು ಸುತ್ತುತ್ತಿರಬೇಕಾದರೆ ಭೂಮಿಯೂ ಸೂರ್ಯನ ಸುತ್ತ ತನ್ನ ಪ್ರಯಾಣದಲ್ಲಿ ಸ್ವಲ್ಪ ಮುಂದೆ ಹೋಗಿರುವುದರಿಂದ ಚಂದ್ರನ ಪರಿಭ್ರಮಣ ತುಸು ದೀರ್ಘವಾಗಿ 29.5 ದಿನಗಳು ತಗಲುವುದು, ಈ 29.5 ದಿನಗಳನ್ನು 30 ತಿಥಿಗಳಾಗಿ ವಿಭಜಿಸಿ ಚಾಂದ್ರಮಾನ ತಿಂಗಳುಗಳ ಪರಿಕಲ್ಪನೆ ಆಗಿರುವುದು, ಸುಮಾರು 354 ದಿನಗಳ ಚಾಂದ್ರಮಾನ ವರ್ಷವನ್ನು 365.25 ದಿನಗಳ ಸೌರ ವರ್ಷದೊಡನೆ ತಾಳೆ ಮಾಡಲು ಅಧಿಕ ಮಾಸ ಮತ್ತು ಬಲು ಅಪರೂಪಕ್ಕೊಮ್ಮೆ  ಕ್ಷಯ(ಕ್ಷೀಣ) ಮಾಸಗಳ ವ್ಯವಸ್ಥೆ ಇರುವುದು - ಇವೆಲ್ಲ ಗೊತ್ತಿರುವ ವಿಚಾರಗಳೇ.

ಚಂದ್ರನ ಮುಖಪಲ್ಲಟದ ಕುರಿತಾದ ಮಾಹಿತಿಯ ಹುಡುಕಾಟದಲ್ಲಿ ನನ್ನ ಬಹುಕಾಲದ ಒಂದು ಜಿಜ್ಞಾಸೆಗೂ ಉತ್ತರ ಸಿಕ್ಕಿತು. ದಕ್ಷಿಣಾಯನ ಮತ್ತು ಉತ್ತರಾಯಣಗಳಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುವ ಬಿಂದು ಬದಲಾಗುತ್ತಾ ಹೋಗುವ ವಿಚಾರ ಸರ್ವ ವಿದಿತ. ಇದೇ ರೀತಿ ಚಂದ್ರನೂ ತಾನು ಪೂರ್ವ ದಿಗಂತದಲ್ಲಿ ಉದಯಿಸುವ ಬಿಂದುಗಳನ್ನು ಬದಲಾಯಿಸುತ್ತಾನೆಯೇ  ಎಂಬ ಪ್ರಶ್ನೆಗೆ ಎಲ್ಲೂ ನನಗೆ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ. ದಿನ ನಿತ್ಯ ಚಂದ್ರೋದಯವನ್ನು ವೀಕ್ಷಿಸುವುದು ಕಾರ್ಯಸಾಧ್ಯವಲ್ಲದಿದ್ದರೂ ಹುಣ್ಣಿಮೆಗಳ ದಿನವಾದರೂ ಯಾವುದಾದರೂ ಸ್ಥಿರ ವಸ್ತುವಿನೊಂದಿಗೆ ಚಂದ್ರೋದಯ ಸ್ಥಾನವನ್ನು ಹೋಲಿಸಿ ನೋಡಬೇಕೆಂಬ ನನ್ನ ಪ್ರಯತ್ನವೂ ಸಫಲವಾಗಿರಲಿಲ್ಲ. ಈಗ ಅಂತರ್ಜಾಲದಲ್ಲಿ ಸಿಕ್ಕಿದ ದತ್ತಾಂಶಗಳನ್ನು ಕ್ರೋಢೀಕರಿಸಿ ನಾನು ತಯಾರಿಸಿದ ತಖ್ತೆ ಒಂದು ವರ್ಷದ ಹುಣ್ಣಿಮೆಚಂದ್ರ ಮತ್ತು ಅಂದಿನ ಸೂರ್ಯರ ಉದಯದ ಕರಾರುವಾಕ್ಕಾದ ದಿಕ್ಕುಗಳನ್ನು ತೋರಿಸಿ ಈ ವಿಷಯದ ಮೇಲೆ ಬಿಸಿಲು ಮತ್ತು ಬೆಳದಿಂಗಳೆರಡನ್ನೂ ಚೆಲ್ಲುತ್ತದೆ!


ದಿಕ್ಸೂಚಿಯಲ್ಲಿ ಉತ್ತರ ದಿಕ್ಕನ್ನು 0, ಪೂರ್ವ, ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳನ್ನು ಕ್ರಮವಾಗಿ 90, 180 ಮತ್ತು 270 ಡಿಗ್ರಿಗಳಾಗಿ ಗುರುತಿಸಲಾಗುತ್ತದೆ.  ಅದರಂತೆ ಕೆಳಗಿನ ತಖ್ತೆಯಲ್ಲಿ 90ಕ್ಕಿಂತ ಜಾಸ್ತಿ ಇರುವ ಕೋನವನ್ನು ಶುದ್ಧ ಪೂರ್ವಕ್ಕಿಂತ ದಕ್ಷಿಣದತ್ತ ಎಂದೂ 90ಕ್ಕಿಂತ ಕಮ್ಮಿ ಇರುವ ಕೋನವನ್ನು ಉತ್ತರದತ್ತ ಎಂದೂ ತಿಳಿಯಬೇಕು.



2000 ಇಸವಿಗೆ ಸಂಬಂಧಿಸಿದ ಈ ತಖ್ತೆಯ ಪ್ರಕಾರ ಪೂರ್ವ ದಿಗಂತದಲ್ಲಿ ಹುಣ್ಣಿಮೆ ಚಂದ್ರನ ಉದಯದ ಬಿಂದು ಡಿಸೆಂಬರ್ ತಿಂಗಳ ಹುಣ್ಣಿಮೆಯಂದು ಅತ್ಯಂತ ಹೆಚ್ಚು ಉತ್ತರದ ಕಡೆಗಿದ್ದು ಕ್ರಮೇಣ ಪೂರ್ವದತ್ತ ಸಾಗುತ್ತಾ ಜುಲೈ ತಿಂಗಳಲ್ಲಿ ಅತ್ಯಂತ ಹೆಚ್ಚು ದಕ್ಷಿಣಕ್ಕಿರುತ್ತದೆ.  ಇದಕ್ಕೆ ತದ್ವಿರುದ್ಧವಾಗಿ ಸೂರ್ಯ ಡಿಸೆಂಬರ್ ಹುಣ್ಣಿಮೆಯಂದು ಅತ್ಯಂತ ಹೆಚ್ಚು ದಕ್ಷಿಣದ ಕಡೆಗಿರುವ ಬಿಂದುವಿನಲ್ಲಿ ಉದಯಿಸಿ ಜುಲೈ ಹುಣ್ಣಿಮೆಯಂದು ಅತಿ ಹೆಚ್ಚು ಉತ್ತರದತ್ತ ಸಾಗಿರುತ್ತಾನೆ. ಸೂರ್ಯನಿಗೆ ಉತ್ತರಾಯಣವಾದರೆ ಚಂದ್ರನಿಗೆ ದಕ್ಷಿಣಾಯನ, ಚಂದ್ರನ ಉತ್ತರಾಯಣ ಕಾಲದಲ್ಲಿ ಸೂರ್ಯನಿಗೆ ದಕ್ಷಿಣಾಯನ! ಈ ಮಧ್ಯೆ ಅಕ್ಟೋಬರ್ ಒಂದರ ಹುಣ್ಣಿಮೆಯಂದು ಇಬ್ಬರೂ ಶುದ್ಧ ಪೂರ್ವಕ್ಕೆ ಅತೀ ಹೆಚ್ಚು ಸಮೀಪದಲ್ಲಿ ಉದಯಿಸುತ್ತಾರೆ. ಅಂದರೆ ‘ನಾನೊಂದು ತೀರ ನೀನೊಂದು ತೀರ’ ಎಂದು ಹಾಡಿಕೊಳ್ಳುತ್ತಾ ಸೂರ್ಯ ಚಂದ್ರರು ಜೂಟಾಟ ಆಡುತ್ತಿರುತ್ತಾರೆ!  ಇನ್ನೊಂದು ವರ್ಷದ ಅದೇ ಹುಣ್ಣಿಮೆಗಳಂದು ಸೂರ್ಯ ಚಂದ್ರರು ದಿಗಂತದ ಅದೇ ಬಿಂದುವಿನಲ್ಲಿ ಉದಯಿಸುತ್ತಾರೆಂದೇನೂ ಇಲ್ಲ.  ಇದು ಬದಲಾಗುತ್ತಲೇ ಇರುತ್ತದೆ. ಆದರೆ ಒಟ್ಟಾರೆ pattern  ಇದೇ ಇರುತ್ತದೆ.  2020 ಇಸವಿಯ ಎಪ್ರಿಲ್ 8ರ ಹುಣ್ಣಿಮೆಯಂದು ಚಂದ್ರ ಭೂಮಿಗೆ ಅತಿ ಸಮೀಪವಾಗಿದ್ದು  ಆತ ಸೂಪರ್ ಮೂನ್ ಆಗಿ ಕಾಣಿಸುವುದಕ್ಕೂ ಆತ ಉದಯಿಸುವ ಬಿಂದುವಿಗೂ ಯಾವ ಸಂಬಂಧವೂ ಇಲ್ಲದಿರುವುದನ್ನೂ ಗಮನಿಸಬಹುದು.

ತಖ್ತೆ ತಯಾರಿಸಲು ನಾನು ಆಯ್ದುಕೊಂಡ 2020 ಇಸವಿಯ ಅಕ್ಟೋಬರ್ ತಿಂಗಳಲ್ಲಿ ಸಂಯೋಗವಶಾತ್ ಎರಡು ಹುಣ್ಣಿಮೆಗಳಿದ್ದು ಪಾಶ್ಚಾತ್ಯ ಕಲ್ಪನೆಯಂತೆ  31ರ ಎರಡನೇ ಹುಣ್ಣಿಮೆಯಂದು ಕಾಣಿಸುವ ಚಂದ್ರ ಬ್ಲೂ ಮೂನ್ ಅನ್ನಿಸಿಕೊಳ್ಳುತ್ತಾನೆ.  ಎಂದಾದರೊಮ್ಮೆ ಸಂಭವಿಸುವ ಅನ್ನುವುದಕ್ಕೆ ಪರ್ಯಾಯವಾಗಿರುವ once in a bluemoon ಎಂಬ ನುಡಿಗಟ್ಟಿಗೆ ಇದು ಸೀಮಿತವಷ್ಟೇ ಹೊರತು ಭೌಗೋಳಿಕವಾಗಿ ಇದಕ್ಕೆ ಯಾವ ಮಹತ್ವವೂ ಇಲ್ಲ ಮತ್ತು ಆ ದಿನ ಚಂದ್ರ ನೀಲಿಯಾಗಿ ಕಾಣಿಸುವುದೂ ಇಲ್ಲ. ಮೇಲಿನ ತಖ್ತೆ ಪ್ರಕಾರ ಅಂದು ಆತ ಭೂಮಿಗಿಂತ ಅತಿ ಹೆಚ್ಚು ದೂರದಲ್ಲಿರುವುದರಿಂದ ಚಿಕ್ಕದಾಗಿ ಕಾಣಿಸುತ್ತಾನೆ.

ಇತರ ಆಕಾಶಕಾಯಗಳಿಗೆ ಇದ್ದಂತೆ ಚಂದ್ರನಿಗೂ ಹಗಲು ರಾತ್ರಿಗಳಿವೆಯೇ ಎಂದು ನಾವು ಯೋಚಿಸುವುದೇ ಇಲ್ಲ. ಆತನೂ ತನ್ನ ಅಕ್ಷದಲ್ಲಿ ಸುತ್ತುತ್ತಿರುವುದರಿಂದ ಅವನಿಗೂ ಹಗಲು ರಾತ್ರಿಗಳು ಇರಲೇ ಬೇಕು. ಚಂದ್ರನ ಮೇಲೆ  ನಮಗೆ ಕಾಣಿಸುವ ಮೊಲದಾಕಾರದ ಮುಖದ ಕಡೆ ಉತ್ತರ ಧ್ರುವ ಮತ್ತು ಹಿಂದುಗಡೆ ದಕ್ಷಿಣಧ್ರುವಗಳನ್ನು ಜೋಡಿಸುವ  ತನ್ನ  ಅಕ್ಷದಲ್ಲಿ ಸುತ್ತಲು (ಹಾಗೂ ಭೂಮಿಗೆ ಒಂದು ಸುತ್ತು ಬರಲು ಕೂಡ) ಆತನಿಗೆ ಸುಮಾರು 28 ದಿನಗಳು ಬೇಕಾಗುವುದರಿಂದ ಆತನ ಯಾವುದೇ ಒಂದು ಪಾರ್ಶ್ವದ ಹಗಲಿನ ಮತ್ತು ರಾತ್ರಿಯ ತಲಾ ಅವಧಿ ಭೂಮಿಯ 14 ದಿನಗಳು. ನಮಗೆದುರಾಗಿರುವ ಚಂದ್ರನ ಭಾಗಕ್ಕೆ ಶುಕ್ಲ ಪಕ್ಷದ ಅಷ್ಟಮಿಯಂದು ಬೆಳಗಿನ ಜಾವ, ಹುಣ್ಣಿಮೆಯಂದು ನಡು ಮಧ್ಯಾಹ್ನ ಮತ್ತು ಬಹುಳ ಸಪ್ತಮಿಯಂದು ಸಂಜೆ. ಅಮಾವಾಸ್ಯೆಯಂದು ಮಧ್ಯರಾತ್ರೆ.



ಈಗ ಕೊನೆಯಲ್ಲೊಂದು ಪ್ರಶ್ನೆ.  ಅಮಾವಾಸ್ಯೆಯಂದು ಚಂದ್ರನನ್ನು ನೋಡಲು ಸಾಧ್ಯವೇ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ಏನನ್ನುತ್ತೀರಿ.  ಇದೆಂಥ ಬಾಲಿಶ ಪ್ರಶ್ನೆ ಎಂದು ಮರು ಪ್ರಶ್ನೆ ಎಸೆಯುತ್ತೀರಾ. ನೀವೆಂದಾದರೂ ಸೂರ್ಯಗ್ರಹಣ ನೋಡಿದ್ದೀರಾ.  ಅಂದು ಸೂರ್ಯನನ್ನು ಮರೆಮಾಚಿದ ಕಪ್ಪಾದ ಭಾಗ ಚಂದ್ರನೇ ಹೊರತು ಚಂದ್ರನ ನೆರಳು ಅಲ್ಲ ಅಲ್ಲವೇ.  ಅಂದು ಅಮಾವಾಸ್ಯೆಯೇ ಆಗಿತ್ತು ತಾನೇ!