ಚಿತ್ರ ಸಂಚಯ

ಇದು ಚಂದ್ರ ಗ್ರಹಣದ ಚಿತ್ರವಲ್ಲ.
ಇಂದು ಕೃಷ್ಣ ಪಕ್ಷ ತ್ರಯೋದಶಿಯ ಚಂದ್ರ ಬೆಳಗ್ಗೆ 6ರ ಹೊತ್ತಿಗೆ ಪೂರ್ವ ದಿಗಂತದಲ್ಲಿ ನನ್ನ Sony Handycam ಕಣ್ಣಿಗೆ ಕಾಣಿಸಿದ್ದು ಹೀಗೆ. ವಾಸ್ತವವಾಗಿ ಇಂದು ಚಂದ್ರನ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುವ ಸುಮಾರು 7% ಭಾಗ ಮಾತ್ರ ನಮಗೆ ಕಾಣಿಸುವುದು. ಉಳಿದ ಭಾಗ ಕೂಡ ಮಸುಕಾಗಿ ಕಾಣಿಸಲು ಕಾರಣ ಭೂಮಿಯಿಂದ ಪ್ರತಿಫಲಿತವಾಗಿ ಆತನ ಮೇಲೆ ಬಿದ್ದ ಸೂರ್ಯನ ಬೆಳಕು. ಇದನ್ನು ‘ಭೂಮಿದಿಂಗಳು’ ಅನ್ನಬಹುದೇನೋ. ಇದು ಚಂದ್ರನಿಂದ ಸೂರ್ಯನ ಬೆಳಕು ಪ್ರತಿಫಲಿತವಾಗಿ ಭೂಮಿಯ ಮೇಲೆ ಬೆಳದಿಂಗಳು ಬಿದ್ದಂತೆ. ನಮಗೆ ಅಮಾವಾಸ್ಯೆ ಇದ್ದಂದು ಚಂದ್ರನಿಗೆ ಭೂಮಿ ಹುಣ್ಣಿಮೆ. ಏಕೆಂದರೆ ಅಂದು ಆತ ಭೂಮಿಯನ್ನು ಸೂರ್ಯ ಪೂರ್ತಿ ಬೆಳಗಿದ ಭಾಗದ ಎದುರು ಇರುತ್ತಾನೆ. ನಮ್ಮ ಹುಣ್ಣಿಮೆಯಂದು ಆತನಿಗೆ ಭೂಮಿ ಅಮಾವಾಸ್ಯೆ. ಆತ ಅಂದು ಇರುವುದು ಭೂಮಿಯನ್ನು ಕತ್ತಲಾವರಿಸಿದ ಭಾಗದೆದುರು.

ಅಂದ ಹಾಗೆ ಇದು ಅಪರೂಪದ ವಿದ್ಯಮಾನವೇನೂ ಅಲ್ಲ. ಬೆಳಗ್ಗೆ, ಸಂಜೆ ಆಂಶಿಕ ಚಂದ್ರ ಕಾಣಿಸುವಂದು ಹೀಗೆಯೇ ಇರುತ್ತದೆ. ಯಾರೂ ಗಮನಿಸಲು ಹೋಗುವುದಿಲ್ಲ ಅಷ್ಟೇ. ಇಂದು ಬೆಳಗಿನ ಜಾವ ಹಾಲು ತರುವಾಗ ಈ ದೃಶ್ಯ ಹೆಚ್ಚು ಸ್ಪಷ್ಟವಾಗಿ ಗೋಚರಿಸಿದ್ದರಿಂದ ಮನೆಗೆ ಬಂದೊಡನೆ ಕ್ಯಾಮರಾದಲ್ಲಿ ಸೆರೆ ಹಿಡಿದು ಇಲ್ಲಿ ದಾಖಲಿಸಿದೆ.





ಗಡಗಡೆ

ಬಾವಿಯಿಂದ ನೀರೆಳೆಯಲು ಸಾಮಾನ್ಯವಾಗಿ ಕಬ್ಬಿಣದ ರಾಟೆಯನ್ನೇ ಬಳಸುವುದಾದರೂ ಕೆಲವು ಕಡೆ ಮರದ ಗಡಗಡೆಗಳೂ ಬಳಕೆಯಲ್ಲಿದ್ದವು.  ಮಂಗಳೂರಿನ ಮನೆಯೊಂದರಲ್ಲಿ ಈ ಗಡಗಡೆ  ಕಂಡು ಬಂತು.  ಇಂತಹ ಗಡಗಡೆಯೊಂದಿಗೆ ತಳಕು ಹಾಕಿಕೊಂಡ ನನ್ನ ನೆನಪೊಂದು ಹೀಗಿದೆ.

ಹೊಸದಾಗಿ ಪ್ಲಾಸ್ಟಿಕ್ಕು ಬಕೆಟು ಕೊಂಡಿದ್ದೆ
ಗಡಗಡೆಯ ಬಾವಿಯಲಿ ಕೆಳಗೆ ಇಳಿಸಿದ್ದೆ
ಮೇಲಕೆಳೆಯಲು ಬಹಳ ಹಗುರವೆನಿಸಿತ್ತು
ಬಕೆಟು ತಳದಲೆ ಉಳಿದು ಕೊಕ್ಕೆ ಬಂದಿತ್ತು

ಇದು ದೂರವಾಣಿ ಇಲಾಖೆಯಲ್ಲಿ ನನಗೆ ನೌಕರಿ ಸಿಕ್ಕಿ ಮಂಗಳೂರಲ್ಲಿ ಬಾಡಿಗೆ ರೂಮು ಹಿಡಿದಾಗ ನಡೆದ ಸತ್ಯ ಘಟನೆ. ನೀರಿಗಾಗಿ ಅಲ್ಲಿ ಇಂಥದ್ದೆ ಗಡಗಡೆ ಇದ್ದ ಬಾವಿ ಒಂದಿತ್ತು. ಇನ್ನೂ ಮೊದಲ ಸಂಬಳ ದೊರಕಿರಲಿಲ್ಲ. ಅವರಿವರಿಂದ ಸ್ವಲ್ಪ ಕೈಗಡ ಪಡೆದು ಅಗತ್ಯ ವಸ್ತುಗಳ ಜೊತೆಗೆ ಒಂದು ಪ್ಲಾಸ್ಟಿಕ್ ಬಕೆಟನ್ನೂ ಖರೀದಿಸಿದ್ದೆ. ಉಜಿರೆ ಹಾಸ್ಟೆಲಲ್ಲಿರುವಾಗ ಬಕೆಟಿಗೆ ಹಗ್ಗ ಕಟ್ಟಿ ರಾಟೆಯ ಬಾವಿಯಿಂದ ನೀರು ಸೇದಿ ಅಭ್ಯಾಸ ಇತ್ತು. ಈ ಗಡಗಡೆಯ ಹೊಸ ಅನುಭವ ಪಡೆಯುವ ಉತ್ಸಾಹದಿಂದ ಹೊಸ ಬಕೆಟಿನ ಹ್ಯಾಂಡಲ್ಲಿಗೆ ಹಗ್ಗ ಬಿಗಿದು ಬಾವಿಗಿಳಿಸಿ ನೀರು ತುಂಬಿದೊಡನೆ ಮೇಲಕ್ಕೆಳೆದಾಗ ತುಂಬಾ ಹಗುರ ಎನ್ನಿಸಿತು. ಇದು ಗಡಗಡೆಯ ಪ್ರಭಾವ ಇರಬೇಕು ಎಂದುಕೊಂಡು ನೋಡಿದರೆ ಕಳಚಿಕೊಂಡ ಹ್ಯಾಂಡಲ್ ಮಾತ್ರ ಹಗ್ಗದೊಡನೆ ಬಂದು ಬಕೆಟ್ ಬಾವಿಯಲ್ಲೇ ಉಳಿದಿತ್ತು! ಪ್ಲಾಸ್ಟಿಕ್ ಬಕೆಟ್ಟಿನ ಹ್ಯಾಂಡಲ್ ಎರಡು ರಂಧ್ರಗಳಿಗೆ ಹಾಗೆಯೇ ಸಿಕ್ಕಿಸಲ್ಪಟ್ಟಿರುತ್ತದೆ ಎಂದು ಗಮನಿಸದೆ ಮೆಟಲ್ ಬಕೆಟಿನಂತೆಯೇ ಇದು ಕೂಡ ಭದ್ರ ಎಂದು ತಿಳಿದದ್ದು ನನ್ನ ತಪ್ಪಾಗಿತ್ತು.

ಈ ಘಟನೆ ಆ ದಿನದ ನನ್ನ ಡೈರಿಯಲ್ಲಿ ಹೀಗೆ ದಾಖಲಾಗಿದೆ.



ಹಸುಗಳ ಕೊರಳಿನ ಗಂಟೆ - ಬಿದಿರಿನ ಮೊಂಟೆ  
ಬಿದಿರಿನ ಗಂಟೊಂದನ್ನು ವಿಶಿಷ್ಟ ಆಕಾರದಲ್ಲಿ ಕತ್ತರಿಸಿ ಮರದ ಎರಡು ತುಂಡುಗಳಿಗೆ ರಂಧ್ರ ಕೊರೆದು ಹಗ್ಗದಲ್ಲಿ ಎರಡೂ ಬದಿಗೆ ಅಳವಡಿಸಿದರೆ ಮೊಂಟೆ ಸಿದ್ಧ. ಇದನ್ನು ಧರಿಸಿದ ಹಸುಗಳು ಕೊರಳು ಅಲ್ಲಾಡಿಸಿದಾಗ ಮರದ ತುಂಡುಗಳು ಬಿದಿರಿಗೆ ತಾಗಿ ಇಂಪಾದ ಧ್ವನಿ ಹೊರಡುತ್ತದೆ. ಹಿಂದಿನ ಕಾಲದಲ್ಲಿ ಹಳ್ಳಿಗಳ ಪ್ರತಿ ಮನೆಯಲ್ಲಿ ಸಾಕಷ್ಟು ಗೋವುಗಳು ಇರುತ್ತಿದ್ದು ಅವುಗಳನ್ನು ಕಾಯಲು ಗೋವಳರೂ ಇರುತ್ತಿದ್ದರು. ಆ ಗೋವಳರಿಗೆ ತಮ್ಮ ಎಲ್ಲ ಹಸುಗಳ ಕೊರಳ ಮೊಂಟೆಗಳ ಧ್ವನಿಯ ಪರಿಚಯ ಇರುತ್ತಿತ್ತು. ಹೀಗಾಗಿ ಅವುಗಳನ್ನು ಸ್ವಚ್ಛಂದವಾಗಿ ಮೇಯಲು ಬಿಟ್ಟು ಅವರಿಗೆ ಮರದಡಿಯಲ್ಲಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿತ್ತು. ಯಾವುದಾದರೂ ಮೊಂಟೆಯ ಧ್ವನಿ ಕೇಳದಿದ್ದರೆ ಯಾವ ಹಸು ತಪ್ಪಿಸಿಕೊಂಡಿದೆ ಎಂದು ಅವರಿಗೆ ತಿಳಿಯುತ್ತಿತ್ತು. ಒಂಟಿ ಹಸುಗಳು ಮೇಯಲು ಹೋದಾಗ ಇದರ ಧ್ವನಿಯಿಂದ ದುಷ್ಟ ಮೃಗಗಳು ಬೆದರಿ ಸಮೀಪ ಬರಲಾರವು ಎಂಬ ನಂಬಿಕೆಯೂ ಇದ್ದಿರಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲ ಆಸುಪಾಸಿನವರು ತಮ್ಮ ಹಸುಗಳಿಗೆ ಅಸೌಖ್ಯವೇನಾದರೂ ಉಂಟಾದರೆ ಶಿಬಾಜೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೊಂಟೆಯೊಂದನ್ನು ಸಮರ್ಪಿಸುತ್ತೇವೆ ಎಂದು ಹರಕೆ ಹೊರುವ ಸಂಪ್ರದಾಯ ಇದೆ. ಹೀಗಾಗಿ ಅಲ್ಲಿಗೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ ಎಂಬ ಹೆಸರೂ ಇದೆ.
 

ಸುಧಾರಿತ ಕಲ್ಪಕರಟ ಫೇನಕಧಾರಕ 

ತೆಂಗಿನ ಗೆರಟೆ ಮತ್ತು ಹಳೆ ಬಾಟ್ಲಿಯ ಮುಚ್ಚಳ ಉಪಯೋಗಿಸಿ ತಯಾರಿಸಿದ Soap Holder.
ಇದರಲ್ಲಿ ಸೋಪಿನ ಅತ್ಯಲ್ಪ ಭಾಗ ಮಾತ್ರ ಧಾರಕದೊಂದಿಗೆ ಸಂಪರ್ಕಕ್ಕೆ ಬರುವುದರಿಂದ ಸೋಪು ಶುಷ್ಕವಾಗಿ ಉಳಿದು ಹೆಚ್ಚು ಬಾಳಿಕೆ ಬರುತ್ತದೆ. ನೀರು ಕೆಳಗಿಳಿದು ಪ್ಲಾಸ್ಟಿಕ್ ಮುಚ್ಚಳದಲ್ಲಿ ಕೊರೆದಿರುವ ರಂಧ್ರಗಳ ಮೂಲಕ ಹೊರ ಹೋಗುತ್ತದೆ.





ಮಂಗಳೂರಿನ ಅವಿಭಾಜ್ಯ ಅಂಗಗಳಾಗಿದ್ದು ಈಗ ನಿರ್ನಾಮವಾಗಿರುವ ಕ್ಲಾಕ್ ಟವರ್ ಮತ್ತು ಹೊಸತಕ್ಕೆ ದಾರಿ ಮಾಡಿಕೊಟ್ಟು ಇತ್ತೀಚೆಗೆ ಹಿನ್ನೆಲೆಗೆ ಸರಿದಿರುವ ಲಾಂಬ್ರೆಟ್ಟಾ ರಿಕ್ಷಾ.


ಕೆಡವಲ್ಪಟ್ಟ ಜಾಗದಲ್ಲೊಂದು ಕಾಲ್ಪನಿಕ ಗೋಪುರ



ಭ್ರಮೆ
ತಿರುವಿನಲ್ಲಿರುವ ಮರ, ರಸ್ತೆ ಹೊಂಡದಂತಹ ಯಾವುದೇ land mark ಚಿತ್ರದಲ್ಲಿ ತೋರಿಸಿರುವಂತೆ A ಮತ್ತು B ಗಳಿಂದ ಸಮಾನ ದೂರದಲ್ಲಿದ್ದರೂ A ಯಿಂದ B ಕಡೆಗೆ ಸಾಗುವಾಗ B ಗೆ ಸಮೀಪದಲ್ಲಿರುವಂತೆಯೂ B ಯಿಂದ A ಕಡೆಗೆ ಸಾಗುವಾಗ A ಗೆ ಸಮೀಪದಲ್ಲಿರುವಂತೆಯೂ ಭ್ರಮೆಯುಂಟಾಗುವುದನ್ನು ಗಮನಿಸಿದ್ದೀರಾ? ಇಲ್ಲವಾದರೆ ಮುಂದಿನ ಸಲ ಗಮನಿಸಿ !




ಕಾಲೇಜಲ್ಲಿ ಕಲಿತ 'ಪುಳುತ್ರು'
ಕಾಲೇಜಲ್ಲಿ ಕಲಿತ B.Scಯ ಯಾವೊಂದು ಅಂಶವೂ ನಿಜ ಜೀವನದಲ್ಲಿ ಇದುವರೆಗೆ ಉಪಯೋಗಕ್ಕೆ ಬರದಿದ್ದರೂ ಮನಸ್ಸಿಲ್ಲದ ಮನಸ್ಸಿಂದ ಸೇರಿದ ಕಡ್ಡಾಯ NCC ಯ ಮಲಯಾಳಿ instructor ಒಬ್ಬರು ಕಲಿಸಿಕೊಟ್ಟ ದಾರವೊಂದಕ್ಕೆ ಭಾರವಾದ ವಸ್ತುವೊಂದನ್ನು ಕಟ್ಟಿ ರೈಫಲ್ ನಳಿಗೆಯ ಮೂಲಕ ಹಾಯಿಸಿ ಶುಚಿಗೊಳಿಸುವ 'ಪುಳುತ್ರು' ವಿಧಾನ ಈಗಲೂ ನಮ್ಮ ಬಚ್ಚಲೊಲೆಯ ಚಿಮಿಣಿಯಲ್ಲಿ ಕಟ್ಟಿಕೊಂಡ ಕಿಟ್ಟವನ್ನು ಹೋಗಲಾಡಿಸಲು ನೆರವಾಗುತ್ತಿದೆ. ಈ ಪುಳುತ್ರು ಅಂದರೆ pull through ಎಂದು ಜ್ಞಾನೋದಯವಾಗಲು ಬಹುಕಾಲ ತಗಲಿತ್ತು!



ಜನಮನದಿಂದ ಮರೆಯಾಗುತ್ತಿರುವ ಅಡಿಕೆ ಹಾಳೆಯ ಮುಟ್ಟಳೆ, ಬಿದಿರ ಸಿಬಿರಿನ ಗೆರಸೆ ಮತ್ತು ಒಲಿಯ ಚಾಪೆ ಉಜಿರೆಯ ಅಂಗಡಿಯೊಂದರಲ್ಲಿ ಕಾಣಸಿಕ್ಕಿದವು.



ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತೋದ್ಯಾನದಲ್ಲಿ(ಹೂವಿನ ಕೊಪ್ಪಲು) ಚಿಕ್ಕಂದಿನಿಂದಲೂ ನಮಗೆ ಆಕರ್ಷಣೆಯ ಕೇಂದ್ರವಾಗಿದ್ದ ದಫೇದಾರ್ರು ಮತ್ತು ಅಂಚೆಯ ಅಣ್ಣ.





ಐಸಾ ಭೀ ಹೋತಾ ಹೈ !
ನಾನು ದಶಕಗಳ ಹಿಂದಿನಿಂದ ರೇಡಿಯೊ ಸಿಲೋನಿನ ಕೇಳುಗನಾಗಿದ್ದರೂ ಇದುವರೆಗೂ ಅಲ್ಲಿಗೆ ಒಂದೇ ಒಂದು ಫರ್ಮಾಯಿಶ್ ಕಳುಹಿಸಿದ್ದಿಲ್ಲ. ಇತ್ತೀಚೆಗೆ ಔಪಚಾರಿಕವಾಗಿ ಅಲ್ಲದಿದ್ದರೂ ಉದ್ಘೋಷಕರ ಖಾಸಗಿ ಮೊಬೈಲಿಗೆ SMS ಮೂಲಕ ಕೋರಿಕೆ ಸಲ್ಲಿಸುವ ಪರಿಪಾಠ ಬೆಳೆದಿದ್ದರೂ ಅದನ್ನೂ ಮಾಡಿದವನಲ್ಲ. 60ರ ದಶಕದಲ್ಲಿ ಒಂದೆರಡು ಸಲ ರೇಡಿಯೋದಲ್ಲಿ ಕೇಳಿದ್ದ, "ಜಬ್ ಜಬ್ ಫೂಲ್ ಖಿಲೆ" ಚಿತ್ರಕ್ಕಾಗಿ ರಚಿಸಲ್ಪಟ್ಟು ಬಳಸಲ್ಪಡದ "ಮೈ ಜೊ ಚಲಿ ಹಿಂದುಸ್ತಾನ್ ಸೆ ತೊ ಜಾ ಪಹುಂಚಿ ಅಮೆರಿಕಾ" ಎಂಬ ಹಾಡೊಂದರ ಬಗ್ಗೆ ಕೆಲ ದಿನಗಳ ಹಿಂದೆ face book ನಲ್ಲಿ ಬರೆದಿದ್ದೆ. ಅದನ್ನು ಗಮನಿಸಿದ ರೇಡಿಯೊ ಸಿಲೋನಿನ (ಈಗ Srilanka Broadcasting Corporation) ಹಿರಿಯ ಉದ್ಘೋಷಕಿ ಪದ್ಮಿನಿ ಪಿರೇರಾ ಇಂದು ಬೆಳಿಗ್ಗೆ ವಿಶೇಷ ಉಲ್ಲೇಖದೊಂದಿಗೆ ಆ ಹಾಡನ್ನು "ಆಪ್ ಕೀ ಪಸಂದ್" ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿ ಅಚ್ಚರಿಗೊಳಿಸಿದರು. ಇನ್ನು ಎಲ್ಲರೂ face book ಮೂಲಕ ಫರ್ಮಾಯಿಶ್ ಕಳಿಸಲು ಶುರು ಮಾಡಿದರೆ ಕಷ್ಟ ಎಂಬ ಕಾರಣಕ್ಕೋ ಏನೋ ನನ್ನ ಹೆಸರನ್ನು ಉಲ್ಲೇಖಿಸದೆ "ಓರ್ವ ಮಹಾಶಯ" ಎಂದಷ್ಟೇ ಹೇಳಿದ್ದಾರೆ!(ಅಥವಾ ಅಷ್ಟೊಂದು computer savvy ಅಲ್ಲದ ಅವರಿಗೆ ಮತ್ತೆ ಆ ಪೋಸ್ಟನ್ನು screen ಮೇಲೆ ತಂದು ಹೆಸರು ನೋಡಲು ಸಾಧ್ಯವಾಗದೆ ಇರುವ ಸಂಭವವೂ ಇದೆ).


ಮತ್ತೆ ಅದೇ ಹಾಡು
ಕಳೆದ ಶನಿವಾರ ನನ್ನ ಬಗ್ಗೆ ಅಜ್ಞಾತ ಉಲ್ಲೇಖದೊಂದಿಗೆ ಪ್ರಸಾರವಾಗಿದ್ದ "ಜಬ್ ಜಬ್ ಫೂಲ್ ಖಿಲೆ" ಚಿತ್ರದ ಅದೇ ಹಾಡು ರೇಡಿಯೊ ಸಿಲೊನ್ ನಲ್ಲಿ ಇಂದು ಮತ್ತೆ ಪ್ರಸಾರವಾಗಿದೆ. ಈ ಸಲ ನನ್ನ ಹೆಸರಿನೊಂದಿಗೆ.
ನಿವೃತ್ತಿ ಹೊಂದಿಯೂ ಅಲ್ಲೇ ತಾತ್ಕಾಲಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಪದ್ಮಿನಿ ಪಿರೇರಾ ಅವರ ಸುದೀರ್ಘ ವಿವರಣೆಯ ಭಾವಾನುವಾದ ಇಲ್ಲಿದೆ.
======
ಸಮಯ ಬೆಳಗ್ಗಿನ 8 ಗಂಟೆ 30 ಸೆಕೆಂಡು. ಇದು Srilanka Broadcasting Corporation ನ ವಿದೇಶ ವಿಭಾಗ. ಈಗ ಪ್ರಸ್ತುತವಿದೆ ಆಪ್ ಕೀ ಪಸಂದ್ ಕಾರ್ಯಕ್ರಮ. ಕಳೆದ ಶನಿವಾರದ ಇದೇ ಕಾರ್ಯಕ್ರಮದಲ್ಲಿ ಜಬ್ ಜಬ್ ಫೂಲ್ ಖಿಲೆ ಚಿತ್ರದ ಒಂದು ಹಾಡು ಪ್ರಸಾರವಾಗಿತ್ತು. ಈ ಹಾಡಿನ ಪ್ರಸ್ತಾಪ ಮಾಡಿದವರು ಅನೇಕ ವರ್ಷಗಳ ನಂತರ ಈ ಹಾಡು ಕೇಳಲು ಸಿಕ್ಕಿತು ಎಂದಿದ್ದಾರೆ. ನಾನೂ ಈ ಹಾಡನ್ನು ಕಾರ್ಯಕ್ರಮದಲ್ಲಿ ಅಳವಡಿಸಿದ್ದು ಮೊದಲಬಾರಿ. ಇಂತಹ ಅನೇಕ ಹಾಡುಗಳು ನಮ್ಮ ಗಮನಕ್ಕೆ ಬಾರದೆ ಹೋಗುತ್ತವೆ ಮತ್ತು ಅವುಗಳ ಬಗ್ಗೆ ಯೋಚಿಸುವ ವ್ಯವಧಾನವೂ ಇರುವುದಿಲ್ಲ. ಯಾರಾದರು ನೆನಪಿಸಿದಾಗ ಮಾತ್ರ ನಮ್ಮ ಗಮನ ಅತ್ತ ಹೋಗುತ್ತದೆ. ಜಬ್ ಜಬ್ ಫೂಲ್ ಖಿಲೆ ಚಿತ್ರದ ಈ ಹಾಡೂ ಅಂತಹುದೇ. ಕಳೆದ ವಾರ ಈ ಗೀತೆಯನ್ನು ಪ್ರಸಾರ ಮಾಡಿದಾಗ face book ಮೂಲಕ ಅದನ್ನು ಸೂಚಿಸಿದವರ ಹೆಸರನ್ನು ನಾನು ಹೇಳಿರಲಿಲ್ಲ. ಹೀಗಾಗಿ ಅವರ ಹೆಸರನ್ನು ಉಲ್ಲೇಖಿಸಿ ಮತ್ತೆ ಆ ಹಾಡನ್ನು ಕೇಳಿಸಬೇಕೆಂದು ಯೋಚಿಸಿದ್ದೇನೆ. ಈ ನೆವದಿಂದ ಮತ್ತೆ ಆ ಹಾಡು ನನಗೆ ಮತ್ತು ನಿಮಗೆಲ್ಲ ಕೇಳಲು ಸಿಗಲಿದೆ. ಚಿದಂಬರ ಕಾಕತ್ಕರ್ ಅವರೇ ಈ ಹಾಡಿನ ಬಗ್ಗೆ ಉಲ್ಲೇಖ ಮಾಡಿದವರು. ಈ ಹಾಡನ್ನು ಮತ್ತೆ ಕೇಳಿಸುವುದರ ಮೂಲಕ ಅವರಿಗೆ ಆಭಾರ ವ್ಯಕ್ತಪಡಿಸಬಯಸುತ್ತೇನೆ.

(ಹಾಡು ಮೂಡಿ ಬರುವುದು....)
ಮೈ ಜೊ ಚಲಿ ಹಿಂದುಸ್ತಾನ್ ಸೆ ತೊ ಜಾ ಪಹುಂಚಿ ಅಮೇರಿಕಾ
ಅಮೇರಿಕಾ ಮೆ ಬಾತ್ ಚೀತ್ ಕಾ ಎಕ್ ಅಂದಾಜ್ ನಯಾ ಸೀಖಾ
-----
-----
ಅಪ್ ನೆ ದೇಶ್ ಕೆ ಸಾಮನೆ ಮುಝೆ
ರಂಗ್ ಲಗಾ ಸಬ್ ಕಾ ಫೀಕಾ
ದುನಿಯಾ ಹೈ ದುಲ್ಹನ್ ತೊ
ಭಾರತ್ ದುಲ್ಹನ್ ಕಾ ಟೀಕಾ
-----------------
ಇದುವರೆಗೆ ಜಬ್ ಜಬ್ ಫೂಲ್ ಖಿಲೆ ಚಿತ್ರದ ಹಾಡು ಕೇಳಿದಿರಿ.
ವಿಶೇಷವಾಗಿ ಚಿದಂಬರ ಕಾಕತ್ಕರ್ ಅವರಿಗೆ ಮತ್ತೆ ಆಭಾರ ವ್ಯಕ್ತಪಡಿಸಬಯಸುತ್ತೇನೆ. ಅವರು 20-25 ವರ್ಷಗಳ ನಂತರ ಈ ಹಾಡು ಕೇಳಲು ಸಿಕ್ಕಿತು ಎಂದು ಹೇಳಿದ್ದಾರೆ. ಇನ್ನು ಈ ಹಾಡು ತಿಂಗಳಿಗೆ 20-25 ಸಲ ಕೇಳಿಬರುವ ಸಾಧ್ಯತೆಯೂ ಇದೆ ಏಕೆಂದರೆ ಅದನ್ನು 78 rpm ರೆಕಾರ್ಡಿನಿಂದ ಕಂಪ್ಯೂಟರಿಗೆ ಕಾಪಿ ಮಾಡಿದ್ದೇನೆ.

ತೆಂಗಿನ ಗೆರಟೆಯಲ್ಲಿ ಡಬಲ್ ಡೆಕರ್ ಸೋಪು
ಸ್ನಾನದ ಸೋಪು ಬಳಸಿ ಬಳಸಿ ಕೈಗೆ ಸಿಗದಷ್ಟು ಚಿಕ್ಕದಾದ ಮೇಲೆ ಅನೇಕರು ಅದನ್ನು ಅಲ್ಲಿ ಇಲ್ಲಿ ಬಿಸುಟು ಹೊಸ ಸೋಪು ಬಳಸತೊಡಗುತ್ತಾರೆ. ಇನ್ನು ಕೆಲವರು ಈ ಚೂರನ್ನು ನೀರಲ್ಲಿ ಕರಗಿಸಿ ಬಟ್ಟೆ ಒಗೆಯಲು ಉಪಯೋಗಿಸುವುದೂ ಇದೆ. ಮಾರುಕಟ್ಟೆಯಲ್ಲಿ ದೊರಕುವ ಸೋಪ್ ಸೇವರ್‍ನ ಸಹಾಯ ಪಡೆಯುವವರೂ ಕೆಲವರಿದ್ದಾರೆ. ನಮ್ಮಲ್ಲಿ ಹಿರಿಯರ ಕಾಲದಿಂದಲೂ ಇಂತಹ ಸೋಪು ಚೂರನ್ನು ಹೊಸ ಸೋಪಿನ ಮೇಲ್ಮೈಗೆ ಅಳವಡಿಸಿ ಕೊಂಚವೂ ವ್ಯರ್ಥವಾಗದಂತೆ ಬಳಸುವ ಪರಿಪಾಠವಿದೆ. ಅಂಟಿಸುವ ಮೊದಲು ಸೋಪು ಚೂರಿಗೆ ಉಗುರಿನಿಂದ ನಾಲ್ಕಾರು ಅಡ್ಡ ನೀಟ ಗೆರೆ ಎಳೆದುಕೊಂಡರೆ ಬೇರ್ಪಡುವ ಸಾಧ್ಯತೆ ಇರುವುದಿಲ್ಲ.



ಜಗವನ್ನೆಲ್ಲ ಜಗಮಗಿಸುತ್ತಿದ್ದ ಗತಕಾಲದ ಗ್ಯಾಸ್ ಲೈಟ್ ಗಳು




ಗುಂಡಿ ದೇವಸ್ಥಾನದ ಭಂಡಿಯ ಪಲ್ಲಕ್ಕಿ ಹೊರುವ ಬೊಂಬೆಗಳು
ಉತ್ಸವದ ದಿನ ಧೋತರ ಉಡಿಸಿ ಶಾಲು ಹೊದಿಸಿ ಈ ಮರದ ಬೊಂಬೆಗಳನ್ನು ಸಿಂಗರಿಸುವ ವಿಶಿಷ್ಟ ಪರಂಪರೆಯೊಂದು ಮುಂಡಾಜೆಯ ಗುಂಡಿ ಲಕ್ಷ್ಮಿನಾರಾಯಣ ದೇವಳದಲ್ಲಿದೆ.  ಈ ಬೊಂಬೆಗಳ ಹೆಗಲ ಮೇಲೆ ದೇವರ ಪಲ್ಲಕ್ಕಿಯನ್ನಿರಿಸಿ ಬಂಡಿಯನ್ನು ಎಳೆಯಲಾಗುತ್ತದೆ.










 








4 comments:

  1. "ವಿರಾಮದ ವೇಳೆಗಾಗಿ" ನಿಮ್ಮ ಜಾಲತಾಣ (ಗೆಳೆಯರು ಲಿಂಕ್ ಕಳುಹಿಸಿದ್ದರು) ಇದೀಗ ನೋಡಿದೆ. ತುಂಬ ಸಂತೋಷವಾಯಿತು. ನಿಮ್ಮ ಈ ಪ್ರಯತ್ನಕ್ಕೆ ಅಭಿನಂದನೆಗಳು.

    ಧನ್ಯವಾದಗಳು ಮತ್ತು ಶುಭಮಸ್ತು.

    ಮಂಜುನಾಥ ಅಜ್ಜಂಪುರ,
    (WhatsApp 8762558050)
    {Mobile: 9901055998}
    (Email : )

    ಗೌರವ ಸಂಪಾದಕರು :
    "ವಾಯ್ಸ್ ಆಫ್ ಇಂಡಿಯಾ" ಸಾಹಿತ್ಯ ಸರಣಿ
    ಮತ್ತು ಅರುಣ್ ಶೌರಿ ಸಾಹಿತ್ಯ ಸರಣಿ,
    ಸೇವಾಸೌಧ 3ನೆಯ ಮಹಡಿ,
    ರಾಷ್ಟ್ರೋತ್ಥಾನ ಪರಿಷತ್, ಕೇಶವಶಿಲ್ಪ,
    ಕೆಂಪೇಗೌಡ ನಗರ,
    ಬೆಂಗಳೂರು 560019.

    ReplyDelete
    Replies
    1. ತಮ್ಮ ಮೌಲ್ಯಯುತ ಅಭಿಪ್ರಾಯಕ್ಕೆ ಧನ್ಯವಾದಗಳು.

      ಚಿದಂಬರ ಕಾಕತ್ಕರ್

      Delete

Your valuable comments/suggestions are welcome