ಕವನ

ಜನಪ್ರಿಯ ಗೀತೆಗಳ ಧಾಟಿಯಲ್ಲಿ ನಾನು ರಚಿಸಿದ ಹಾಡುಗಳಲ್ಲಿ ಕೆಲವು .   ಬಂಧು ಮಿತ್ರರ ಬಳಗದಲ್ಲಿ  ಜನಪ್ರಿಯ.   

ಏಕದಂತನೆ ಲಂಬೋದರನೆ

          

 

ಏಕದಂತನೆ ಲಂಬೋದರನೆ ಪಾಶಾಂಕುಶಧರನೆ
ಮೂಷಿಕವಾಹನ ವಿಘ್ನವಿನಾಶಕ ಓ ವಿಘ್ನೇಶ್ವರನೆ
ಓ... ಸ್ತುತಿಸುವೆ ನಿನ್ನನು ದೇವ
ಓ... ಜಗದಲಿ ಎಲ್ಲರ ಕಾವ

ಕಾರ್ಯಾರಂಭದಿ ಎಲ್ಲರೂ ನಿನ್ನನು ಸ್ತುತಿಸುವರು
ಓ... ನಿನ್ನಯ ಅಭಯವ ಪಡೆದೇ ಮುಂದಕೆ ಸಾಗುವರು
ಚೌತಿಯ ಸಮಯದಿ ಮಣ್ಣಿನ ಮೂರ್ತಿಯ ಮಾಡುವರು
ಓ... ವೈಭವದಿಂದಲಿ ಭಕ್ತರು ನಿನ್ನನು ಪೂಜಿಪರು
ಓ ವಿಘ್ನೇಶಾ...
ಓ ವಿಘ್ನೇಶಾ ತವ ಕೃಪೆಯ  ಕರುಣಿಸಿ  ಕಾಯು ನೀ ಈ ದೀನರನು
ಏಕದಂತನೆ

ಮೋದಕ ಚಕ್ಕುಲಿ ಕಡಬುಗಳೆಲ್ಲವ ನೀತಿಂದೆ
ಓ... ಹೊಟ್ಟೆಗೆ ಹಾವನು ನೀ ಬಿಗಿದಿರುವೆ ಅದಕೆಂದೆ
ಕೈಗಳು ನಾಲ್ಕು ಆನೆಯ ಮೊಗವು ನಿನಗಿಹುದು
ಓ... ಶೂರ್ಪಕರ್ಣನೆ ದಂತವು ಒಂದೇ ಉಳಿದಿಹುದು
ಲಂಬೋದರನೇ...
ಲಂಬೋದರನೇ ಇಹ ಲೋಕದಿ ನಮಗೆ  ಈಯು ನೀ ಸದ್ಬುದ್ಧಿಯನು
ಏಕ ದಂತನೆ




                                          

ನಮ್ಮ ಊರ ಬಸ್ಸು

ನಮ್ಮೂರಿಗೆ ಬರಬಹುದಾದ ಕಾಲ್ಪನಿಕ ಬಸ್ಸನ್ನು ಮನದಲ್ಲಿರಿಸಿ 1972 ರಲ್ಲಿ ಬರೆದ ಹಾಡು.  ಆದರೆ ನಮ್ಮ ಊರು ಕಲ್ಮಂಜ ಗ್ರಾಮಕ್ಕೆ ಈ 21ನೇ ಶತಮಾನದಲ್ಲೂ ಬಸ್ಸೇ ಇಲ್ಲ!


ಅದೋ ಅಲ್ಲಿ ನಮ್ಮ ಊರ ಬಸ್ಸು ಬಂತು ನೋಡಿ
ನಿಮಗೂ ಸಹ ಹೋಗಬೇಕೆ ಬೇಗ ಬೇಗ ಓಡಿ

ಮೈ ಕೆಂಪು ಕೆಂಪು ಒಳ ಬಣ್ಣ ಹಸಿರು
ಜನರಿಂದ ತುಂಬಿಹುದು ಆ ಬಸ್ಸಿನ ಬಸಿರು
ಆದರೂ ನಾವು ಹತ್ತುವೆವು ಹೇಗಾದರೂ ನಿಲ್ಲುವೆವು
ಅಂತೂ ಇಂತು ಪೇಟೆವರೆಗೆ ನಾವು ಹೋಗಿ ಬಿಡುವೆವು

ಇದು ಒಂದೇ ಬಸ್ಸು ಈ ಊರಿಗೆಲ್ಲ
ಅದರಲ್ಲೆ ಹೋಗಬೇಕು ಊರ ಜನರು ಎಲ್ಲ
ಅರ್ಜಿ ನಾವು ಬರೆವೆವು ಸ್ಟ್ರೈಕು ನಾವು ಮಾಡುವೆವು
ನಮ್ಮೂರಿಗೆ ಇನ್ನೂ ಕೆಲವು ಬಸ್ಸು ಬೇಕು ಎನುವೆವು

ಅದರೊಳಗಿನ ಗತಿಯನು ನೋಡಿದವರು ಎಲ್ಲ
ಹೇಳುತಿಹರು ಇದರ ವಿಷಯ ದೇವನೊಬ್ಬ ಬಲ್ಲ
ಸೀಟು ಎಲ್ಲ ಹರಿದಿದೆ ಬಣ್ಣ ಎಲ್ಲ ಹೋಗಿದೆ
ಅದರ ಶಬ್ದ ಕೇಳಿದರೆ ಏನೂ ತಿಳಿಯದಾಗಿದೆ 












ಸುಮಾರು 1974 ರ ವೇಳೆಯ ಒಂದು  romantic mood.

ನೀ ಎನ್ನ ಸನಿಹದಲಿರಲು



ನೀ ಎನ್ನ ಸನಿಹದಲಿರಲು ಇನ್ನೇನು ಬೇಕೆನಗೆ
ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ

ನಿನ್ನನ್ನು ಕಂಡ ದಿನ ಅಂದೆ ನಾನು ಮನಸೋತೆ
ಪ್ರೇಮದ ವೀಣೆಯಲಿ ಮೂಡಿತೊಂದು ಹೊಸ ಗೀತೆ
ದೇವನೇ ಕಳಿಸಿದನೇನು ನಿನ್ನನ್ನು  ಈ ಧರೆಗೆ
ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ

ಈ ಬಾಳ ಹಂದರದಿ ಬಳ್ಳಿಯಂತೆ ಹರಡಿರುವೆ
ನೀ ಎನ್ನ ಜೀವನದ ಜ್ಯೋತಿಯಾಗಿ ಬೆಳಗಿರುವೆ
ತಂಗಾಳಿ ಬೀಸುವ ತೆರದಿ ಓಡೋಡಿ ಬಾ ಬಳಿಗೆ
ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ

ನನ್ನಾಸೆ ಬಳ್ಳಿಯಲಿ ಅರಳಿ ನಿಂತ ಹೂ ನೀನು
ನನ್ನಲ್ಲಿ ಬೆರೆತಿರುವೆ ಸೇರಿದಂತೆ ಹಾಲ್ಜೇನು
ಎಂದೆಂದು ಅಳಿಯದೆ ಇರಲಿ ಒಲವಿನ  ಬೆಸುಗೆ
ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ
                      
                                       

         

        ಅಳುತ್ತಿರುವ ಮಗುವನ್ನು ತೊಟ್ಟಿಲಲ್ಲಿ ತೂಗುತ್ತಿರುವ ಅಣ್ಣನೋ ಅಕ್ಕನೋ ಹಾಡುವ ಹಾಡು !


baby.jpg

ಕಂದನ ಅಳು



ಅಳಬೇಡ ಕಂದ ನೀ ಸುಮ್ಮನೆ
ನೀ ಅತ್ತು ನನ್ನನ್ನು ಕಾಡಬೇಡ
ನಿನ್ನನ್ನು ತೂಗಿ ನನ್ನ ಕೈ ಸೋತಿದೆ
ನಿನ್ನ ಹಳೆ  ರಾಗವನ್ನು ಹಾಡಬೇಡ


ನಿನಗಾಗಿ ನಾನೊಂದು ಗೀತೆ ಹಾಡುವೆ
ಅದಕೇಳಿ ಕಂದಾ ನೀ ನಿದ್ದೆ ಮಾಡುವೆ
ನೀ ನಿದ್ದೆ ಮಾಡದಿರೆ ನಾ ಹೋಗುವೆ
ಬೇಗ ಹೋಗಿ ಅಮ್ಮನನ್ನು ನಾ ಕರೆಯುವೆ
ಅಮ್ಮನನ್ನು ನೋಡಿ ನೀ ಸುಮ್ಮನಾಗುವೆ


ದನ ಬಂದು ನಿನಗಾಗಿ ಹಾಲು ಕೊಡುವುದು
ಆ ಹಾಲು ಕುಡಿದು ನಿನಗೆ ಶಕ್ತಿ ಬರುವುದು
ನೀನೆಂದೂ ಈ ರೀತಿ ಅಳಬಾರದು
ಅತ್ತು ಅತ್ತು ನಮ್ಮನ್ನು ಅಳಿಸಬಾರದು
ಆಗ ಒಳ್ಳೆ ಕಂದ ಎಂಬ ಕೀರ್ತಿ ಬರುವುದು

                                         
                                                                              


school.jpg

ಶಾಲೆಗೆ ಹೋಗುವ



ಶಾಲೆಗೆ ಹೋಗುವ ಬನ್ನಿರಿ ಬೇಗನೆ ಗೆಳೆಯರೆ ನಾವೆಲ್ಲ
ಪಾಠವನೋದಿ ಆಟವನಾಡಿ ನಲಿಯುವ ನಾವೆಲ್ಲ
ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ


ಎಲ್ಲ ಮಕ್ಕಳು ಜತೆಯಾಗಿ ಹಾಡನು ಹಾಡೋಣ
ಕೂಡಿ ನಾವಾಡೋಣ ಕೂಡಿ ನಲಿಯೋಣ
ಆಡುತ ಹಾಡುತ ಸಂತಸದಿಂದ ಪಾಠವ ಕಲಿಯೋಣ
ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ


ಗುರುಗಳು ಹೇಳುವ ಮಾತನ್ನು ಧ್ಯಾನದಿ ಕೇಳೋಣ
ಅದರಂತೆ ನಡೆಯೋಣ ಪ್ರಗತಿಯ ಹೊಂದೋಣ
ನಾವೆಲ್ಲರೂ ವಿದ್ಯಾಬುದ್ಧಿಯ ಗಳಿಸುತ ಮೆರೆಯೋಣ
ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ


ಆಡೋಣ ಆಟವನು ಆಟದ ಸಮಯದಲಿ
ಓದೋಣ ಪಾಠವನು ಪಾಠದ ಸಮಯದಲಿ
ಕಾಲದ ಬೆಲೆಯನು ಅರಿಯುತ ನಾವು ಮುಂದಕೆ ಸಾಗೋಣ
ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ

                                           
                     

farmer.jpg

   ನೇಗಿಲ ಯೋಗಿ






ರೈತನಿಂದಲೆ ಎಲ್ಲ ಜನರು ಅನ್ನವನುಣುತಿಹರು
ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು


ಅವನ ದುಡಿಮೆಯೊಂದೇ ಜನರ ಬಾಳ ಆಧಾರ
ಮರೆಯಬೇಡಿ ಎಂದೂ ನೀವು ಅವನ ಉಪಕಾರ
ಅವನ ಸೇವೆಯ ಮರೆತವರೆಲ್ಲ ದ್ರೋಹಿಗಳಾಗುವರು
ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು


ಅವನು ನಡೆಸೆ ನೇಗಿಲನ್ನು ಭೂಮಿ ನಗುವುದು
ಅವನ ಶ್ರಮದ ಪ್ರತಿಫಲ ದೊರಕಿ ಜಗವು ಉಳಿವುದು
ರೈತನ ತ್ಯಾಗದ ಕಾರಣದಿಂದಲೆ ಎಲ್ಲರು ಬದುಕುವರು
ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು


ಸುಳ್ಳು ಕಪಟ ಮೋಸ ಒಂದೂ ಅವನು ಅರಿಯನು
ಭೂಮಿ ತಾಯ ಸೇವೆಯೆ ತನ್ನ ಪೂಜೆ ಎನುವನು
ರೈತನಂತೆಯೆ ಸೇವೆಯ ಮಾಡುವ ಬೇರಿನ್ಯಾರಿಹರು
ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು



 
          


pbs.jpg
ಪಿ.ಬಿ.ಶ್ರೀನಿವಾಸ್ ಅವರು ಕನ್ನಡದ ಮುಖ್ಯ ಗಾಯಕರಾಗಿದ್ದರೂ ತಮಿಳಲ್ಲಿಯೂ  ಬಹಳಷ್ಟು  ಮಧುರ ಗೀತೆಗಳನ್ನು ಹಾಡಿದ್ದಾರೆ.  ಹಿಂದಿಯಲ್ಲಿ ‘ದಿಲ್ ಏಕ್ ಮಂದಿರ್ ’ ಆಗಿ ಬಂದ ‘ನೆಂಜಿಲ್ ಒರು ಆಲಯಂ’ ಚಿತ್ರದ ನನ್ನ ಅತ್ಯಂತ ಮೆಚ್ಚಿನ ಗೀತೆಗಳಲ್ಲೊಂದಾದ ‘ನಿನೈಪದೆಲ್ಲಾಂ ನಡಂದುವಿಟ್ಟಾಲ್ ’ ನ ಭಾವಾನುವಾದದ ಪ್ರಯತ್ನವೊಂದು ಇಲ್ಲಿದೆ.   ಹಿಂದಿಯಲ್ಲಿ ಈ ಹಾಡು ‘ಯಾದ್ ನ ಜಾಯೆ ಬೀತೆ ದಿನೊಂಕೀ’  ರೂಪದಲ್ಲಿತ್ತು.  ಬಹಳ ವರ್ಷಗಳ ನಂತರ ಈ ಚಿತ್ರ ‘ಕುಂಕುಮ ರಕ್ಷೆ’ ಎಂಬ ಹೆಸರಲ್ಲಿ ಕನ್ನಡದಲ್ಲೂ ಬಂದಿತ್ತು.  ಆದರೆ ಚಿತ್ರವಾಗಲೀ ಹಾಡುಗಳಾಗಲೀ ಅಷ್ಟೇನೂ ಸುದ್ದಿ ಮಾಡಿದಂತಿಲ್ಲ.

ನೆನೆದುದೆಲ್ಲ ನಡೆದು ಬಿಡೆ

ನೆನೆದುದೆಲ್ಲ ನಡೆದು ಬಿಡೆ ವಿಧಿಯೆಂಬುದು ಎಲ್ಲಿ
ನಡೆದುದನೆ ನೆನೆಸಿದೊಡೆ ನೆಮ್ಮದಿಯು ಎಲ್ಲಿ
ಮುಗಿದ ಕತೆ ಇನ್ನಿಹುದೇ ಕಾಲನ ಪುಟಗಳಲಿ
ನಡೆದ ಕತೆ ಅಳಿಯುವುದೇ ಮನುಜನ ಬಾಳಿನಲಿ


ಸಾವಿರ ಬಾಗಿಲ ಹೃದಯ
ಅದು ಸಾವಿರ ಕನಸಿನ ನಿಲಯ
ಯಾರೋ ಬರುವರು ಯಾರೋ ಇರುವರು
ಯಾರಲಿ ಹೇಳಲಿ ಈ ವ್ಯಥೆಯ
ಕನಸೊಂದೇ ಎದೆಯೊಳಿರೇ ಶೋಕವು ಇರದೆಂದೂ
ಒಂದಿರಲು ಒಂದು ಬರೆ ಶಾಂತಿಯು ಸಿಗದೆಂದೂ


ಬಾಳಿನ ಮೂಲವದೆಲ್ಲೋ
ಅದು ಮುಗಿಯುವ ತಾಣವದೆಲ್ಲೋ
ಇದು ತಾ ದಾರಿಯು ಇದು ತಾ ಪಯಣವು
ಎಂಬುದನರಿತವರಿಹರೆಲ್ಲೋ
ದಾರಿಯದು ಕವಲೊಡೆಯೆ ಪಯಣವು ಮುಗಿಯುವುದೇ
ಈ ನಿಜವ ಅರಿಯದಿರೆ ಗುರಿಯದು ಸಿಗಲಹುದೇ

 ಶ್ಯಾಮ ನಿನ್ನ ಕೊಳಲ ಕರೆ
(ಶ್ಯಾಮ್ ತೇರಿ ಬಂಸಿ ಪುಕಾರೆ ರಾಧಾ ನಾಮ್ ಭಾವಾನುವಾದ)

ಶ್ಯಾಮ ನಿನ್ನ ಕೊಳಲ ಕರೆ ರಾಧೆಗಾಗಿದೆ
ಆದರೇಕೋ ಮೀರಾ ಹೆಸರು ನಿನ್ನ ಜತೆಗಿದೆ
ಎಲ್ಲ ಕೇಳಿ ನಲಿಯಲೆಂದೆ ಕೊಳಲು ಉಲಿದಿದೆ
ರಾಧಾ ಮೀರಾ ಎಂಬ ಭೇದ ಅವನಿಗೆಲ್ಲಿದೆ

ಓ.......
ಯಮುನಾತಟ ವಟವೃಕ್ಷದ ನೆರಳು ಕೊಳಲ ಗಾನ
ಯಾರ ತಾನೆ ಸೆಳೆಯದಿರದು ಈ ಮಧುರ ವಿತಾನ
ಎಲ್ಲರ ಮನ ಮರುಳಾಗಿದೆ ವೃಂದಾವನದೆ
ಆದರೇಕೋ ಮೀರಾ ಹೆಸರು ನಿನ್ನ ಜತೆಗಿದೆ
ಎಲ್ಲ ಕೇಳಿ ನಲಿಯಲೆಂದೆ ಕೊಳಲು ಉಲಿದಿದೆ
ರಾಧಾ ಮೀರಾ ಎಂಬ ಭೇದ ಅವನಿಗೆಲ್ಲಿದೆ

ಓ....
ಬಲ್ಲರಾರು ಕೊಳಲ ದನಿಯು ಕರೆಯುತಿಹುದು ಯಾರನು
ಯಾರ ಹೃದಯ ಮಿಡಿಯುವುದೋ ಅವರಿಗಾಗೆ ಶ್ಯಾಮನು
ಕೊಳಲ ದನಿಗೆ ಮರುಳಾಗದ ಮನವು ಎಲ್ಲಿದೆ
ರಾಧಾ ಮೀರಾ ಎಂಬ ಭೇದ ಅವನಿಗೆಲ್ಲಿದೆ
ಶ್ಯಾಮ ನಿನ್ನ ಕೊಳಲ ಕರೆ ರಾಧೆಗಾಗಿದೆ
ಆದರೇಕೋ ಮೀರಾ ಹೆಸರು ನಿನ್ನ ಜತೆಗಿದೆ
ರಾಧಾ ಮೀರಾ ಎಂಬ ಭೇದ ಅವನಿಗೆಲ್ಲಿದೆ


         

1969ರ ಸುಮಾರಿನಲ್ಲಿ ನಾನು ಬರೆದಿದ್ದ ಪ್ರಥಮ ಹಾಡು ಇದು.

   ನನ್ನ ಹಾಡು

ಓ... ನನ್ನ ಹಾಡನು ಕೇಳಿರಿ
ಕೇಳಿ ಸಂತಸ ಗೊಳ್ಳಿರಿ
ನೀವು ಒಮ್ಮೆ ನಕ್ಕರೆ
ಅದುವೆ ನನಗೆ ಸಕ್ಕರೆ

ನನ್ನ ಹಾಡಲಿ ವಿಷಯವಿಲ್ಲ
ಅದರಲೇನೂ ಸಾರವಿಲ್ಲ
ಅಂತೂ ನೀವು ಕೇಳಿ ನೋಡಿ
ನನ್ನ ಹಾಡಿನ ರೀತಿ ನೋಡಿ

ಏಕೆ ನಾನು ಹಾಡು ಹೇಳುವೆ
ಎಂದು ನಿಮಗೆ ತಿಳಿಯಬೇಡವೆ
ನಿಮ್ಮ ಸಂತಸ ನನಗೆ ಇಷ್ಟ
ಅದಕೆ ನಾನು ಪಡುವೆ ಕಷ್ಟ

ಸಂತಸದಿ ನಾ ಹಾಡು ಹೇಳುವೆ
ನಿಮ್ಮ ಮುಖದ ಭಾವ ನೋಡುವೆ
ನಿಮ್ಮ ಮೊಗವು ಅರಳಿದಾಗ
ಸಾರ್ಥಕವು ನನ್ನ ಶ್ರಮವದೀಗ 

   
       





No comments:

Post a Comment

Your valuable comments/suggestions are welcome