Wednesday, 15 January 2025

ಸಂಕ್ರಾಂತಿ, ಕರ್ಕ ಮತ್ತು ಮಕರ ವೃತ್ತ ವೃತ್ತಾಂತ


ಸಂಕ್ರಾಂತಿ ಏಕೆ ಮುಂದೆ ಸಾಗುತ್ತಿದೆ?
ಪಂಚಾಂಗ ರಚನೆ ಆರಂಭವಾದ ಕ್ರಿಸ್ತಶಕದ ಮೊದಲ ಶತಮಾನಗಳ ಕಾಲದಲ್ಲಿ ಉತ್ತರಾಯಣ ಆರಂಭ ಮತ್ತು ಮಕರ ಸಂಕ್ರಾಂತಿ ಡಿಸೆಂಬರ್ 22 ರಂದೇ ಇರುತ್ತಿತ್ತು. ಹೀಗಾಗಿ ಮಕರ ಸಂಕ್ರಾಂತಿ ಅಂದರೆ ಉತ್ತರಾಯಣಾರಂಭ ಎಂಬ ಭಾವನೆ ಜನಮಾನಸದಲ್ಲಿ ಬೇರೂರಿದೆ. ಆದರೆ ವಾಸ್ತವ ಸ್ಥಿತಿ ಹೀಗಿಲ್ಲ. ಭೂಮಿಯಿಂದ ನೋಡಿದಂತೆ ಸೂರ್ಯನ ಸಮೀಪವಿರುವ ನಕ್ಷತ್ರದ ಆಧಾರದ ಮೇಲೆ ರಾಶಿ ಮತ್ತು ಸೂರ್ಯನ ಸುತ್ತ ಭೂಮಿಯ ಚಲನೆಯಿಂದ ಉತ್ತರಾಯಣ ದಕ್ಷಿಣಾಯನ ಕಲ್ಪನೆ ಇರುವುದರಿಂದ ಮಕರ ಸಂಕ್ರಾಂತಿ ಮತ್ತು ಉತ್ತರಾಯಣಾರಂಭಕ್ಕೆ ನೇರ ಸಂಬಂಧ ಇಲ್ಲ. ಹೀಗಾಗಿ ಉತ್ತರಾಯಣಾರಂಭ ಈಗಲೂ ಡಿಸೆಂಬರ್ 22ಕ್ಕೇ ಇದ್ದರೂ ಮಕರ ಸಂಕ್ರಾಂತಿ ಮುಂದೆ ಸಾಗುತ್ತಾ ಈಗ ಜನವರಿ 14ಕ್ಕೆ ತಲುಪಿದೆ. ಹೀಗೇಕಾಗುತ್ತದೆ ಎಂದು ತಿಳಿಯಬೇಕಾದರೆ ಭೂಮಿಯ ವಿವಿಧ ಚಲನೆಗಳ ಬಗ್ಗೆ ಅರಿಯಬೇಕು.


ಭೂಮಿಗೆ ಸೂರ್ಯನ ಸುತ್ತ ವರ್ಷಕ್ಕೊಮ್ಮೆ ಸುತ್ತುವ ಚಲನೆ, ತನ್ನ ಅಕ್ಷದಲ್ಲಿ ದಿನಕ್ಕೊಮ್ಮೆ ತಿರುಗುವ ಚಲನೆ ಅಲ್ಲದೆ 26000 ವರ್ಷ ಸಮಯ ತೆಗೆದುಕೊಳ್ಳುವ ಇನ್ನೊಂದು ಚಲನೆಯೂ ಇದೆ. ಅದೇ ತಿರುಗುತ್ತಿರುವ ಬುಗರಿಯ ತಲೆಯು ಸ್ವಲ್ಪ ಓಲಾಡುವಂತೆ ಭೂಮಿಯು ಓಲಾಡುವ (wobbling) ಚಲನೆ. ಈ ಕಾರಣದಿಂದ ಮನುಷ್ಯನು ಭೂಮಿಯಿಂದ ನಿಂತು ನೋಡುವ ಸ್ಥಾನದಲ್ಲಿ ಅಲ್ಪ ಬದಲಾವಣೆ ಆಗಿ ಸೂರ್ಯನ ಜತೆ ಇರುವಂತೆ ಕಾಣುವ ಸಹಸ್ರಾರು ಜ್ಯೋತಿರ್ವರ್ಷಗಳಷ್ಟು ದೂರ ಇರುವ ನಕ್ಷತ್ರ ಗುರುತಿಸುವುದರಲ್ಲಿ ಕಾಲಕ್ರಮೇಣ ವ್ಯತ್ಯಾಸ ಉಂಟಾಗುತ್ತದೆ. ಹೀಗಾಗಿಯೇ ಸೂರ್‍ಯನು ನಿರ್ದಿಷ್ಟ ರಾಶಿಯನ್ನು ಪ್ರವೇಶಿಸುವ ಕಾಲ ಸುಮಾರು 70 ವರ್ಷಕ್ಕೆ ಒಂದು ದಿನ ಮುಂದೆ ಹೋಗುತ್ತದೆ. ಆದರೆ ನಕ್ಷತ್ರಗಳಿರುವ ದೂರಕ್ಕೆ ಹೋಲಿಸಿದರೆ ಭೂಮಿ ಮತ್ತು ಸೂರ್ಯನ ನಡುವಿನ ದೂರ ನಗಣ್ಯ ಆದುದರಿಂದ ಭೂಮಿಯಿಂದ ಸೂರ್ಯನ ಚಲನೆಯನ್ನು ಗಮನಿಸುವಲ್ಲಿ ಈ ಓಲಾಡುವಿಕೆಯ ಪರಿಣಾಮವೂ ನಗಣ್ಯ. ಹೀಗಾಗಿ ಉತ್ತರಾಯಣ ಮತ್ತು ದಕ್ಷಿಣಾಯನ ಆರಂಭದ ದಿನಗಳಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಮೊಬೈಲಲ್ಲಿ ವೀಡಿಯೋ ಮಾಡುವಾಗ ಕೈ ಅಲ್ಲಾಡಿದರೆ ಹತ್ತಿರದ ವಸ್ತುಗಳ ಮೇಲೆ ಅಷ್ಟೇನೂ ಪರಿಣಾಮ ಆಗದಿದ್ದರೂ ದೂರದ ವಸ್ತುಗಳು ಹೆಚ್ಚು ಅತ್ತಿತ್ತ ಸರಿದಂತಾಗುವುದನ್ನು ನಾವು ಗಮನಿಸಿರುತ್ತೇವೆ.


ಈ ಕಾರಣದಿಂದಾಗಿ ಸುಮಾರು ಮೂರು ಮೂರೂವರೆ ಸಾವಿರ ವರ್ಷಗಳ ಹಿಂದೆ ವೇದಾಂಗ ಜ್ಯೋತಿಷ್ಯದ ಕಾಲದಲ್ಲಿ ಧನಿಷ್ಠೆಯನ್ನು ಸೂರ್ಯ ಪ್ರವೇಶಿಸುತ್ತಿದ್ದಾಗ (ಮಕರ ರಾಶಿಯ ಕೊನೆಯ ಹಂತದಲ್ಲಿ) ಘಟಿಸುತ್ತಿದ್ದ ಉತ್ತರಾಯಣಾರಂಭ ಬಹುಕಾಲಾಂತರದಲ್ಲಿ ವರಾಹಮಿಹಿರಾಚಾರ್ಯರ ಕಾಲದಲ್ಲಿ ಉತ್ತರಾಷಾಢದ ಎರಡನೆಯ ಪಾದದಲ್ಲಿ ಕಾಲಿಟ್ಟಾಗ (ಮಕರ ರಾಶಿಯ ಆರಂಭದ ಹಂತದಲ್ಲಿ) ಘಟಿಸುತ್ತಿತ್ತು. ಈಗ ಉತ್ತರಾಯಣ ಆರಂಭವಾಗುವಾಗ ಸೂರ್ಯ ಇನ್ನೂ ಮೂಲಾ ನಕ್ಷತ್ರದ 3ನೆಯ ಪಾದದಲ್ಲಿ ಅಂದರೆ ಧನು ರಾಶಿಯಲ್ಲಿ ಇರುತ್ತಾನೆ.

ವೆಬ್ ಪಂಚಾಂಗಗಳಲ್ಲಿ ಹಿಮ್ಮುಖವಾಗಿ ಚಲಿಸಿದಾಗ ಕ್ರಿಸ್ತ ಶಕ 299ರಿಂದ ಕ್ರಿಸ್ತ ಶಕ 345ರ ವರೆಗೆ ಡಿಸೆಂಬರ್ 22ರಂದೇ ಮಕರ ಸಂಕ್ರಾಂತಿ ಇತ್ತು ಎಂಬ ಮಾಹಿತಿ ದೊರಕುತ್ತದೆ. ಅದು ಮುಂದೆ ಮುಂದೆ ಸಾಗುತ್ತಾ ಈಗ ಜನವರಿ 14ಕ್ಕೆ ತಲುಪಿದ್ದು ವರ್ಷಗಳು ಉರುಳಿದಂತೆ ಇನ್ನೂ ಮುಂದೆ ಸಾಗುತ್ತಾ ಮಕರ ಸಂಕ್ರಾಂತಿಯ ದಿನ ದಕ್ಷಿಣಾಯನ ಆರಂಭವಾಗುವ ಸಮಯವೂ ಬರುತ್ತದೆ! ಭೂಮಿಯ ಓಲಾಡುವಿಕೆಯನ್ನು ಅನುಸರಿಸಿ ಈ ಚಕ್ರ ಸಾಗುತ್ತಲೇ ಇರುತ್ತದೆ. ಜನಸಾಮಾನ್ಯರ ನಂಬಿಕೆಗೆ ಇಂಬು.
ಮಕರ ಸಂಕ್ರಾಂತಿಯಂದೇ ಉತ್ತರಾಯಣಾರಂಭ ಎಂದು ಭಾವಿಸುವ ಜನಸಾಮಾನ್ಯರ ತಪ್ಪು ನಂಬಿಕೆಗೆ ಇಂಬು ಕೊಡುವಂತೆ ಸೂರ್ಯನ ಮಕರ/ಕರ್ಕ ರಾಶಿ ಪ್ರವೇಶವು ಉತ್ತರ/ದಕ್ಷಿಣ ಆಯನಾರಂಭದೊಂದಿಗಿನ ಸಂಬಂಧ ಕಳೆದುಕೊಂಡು ಶತಮಾನಗಳೇ ಕಳೆದರೂ ಈಗಲೂ ಸೂರ್ಯನ ನೇರ ಕಿರಣಗಳು ಬೀಳುವ ಅತ್ಯಂತ ದಕ್ಷಿಣದ ಭಾಗವನ್ನು(23 ಡಿಗ್ರಿ 27' ದಕ್ಷಿಣ ಅಕ್ಷಾಂಶ) ಮಕರ ಸಂಕ್ರಾಂತಿ ವೃತ್ತ ಅಥವಾ ಮಕರ ವೃತ್ತ ಮತ್ತು ಅಂತಹ ಉತ್ತರದ ಭಾಗವನ್ನು (23 ಡಿಗ್ರಿ 27' ಉತ್ತರ ಅಕ್ಷಾಂಶ) ಕರ್ಕಾಟಕ ಸಂಕ್ರಾಂತಿ ವೃತ್ತ ಅಥವಾ ಕರ್ಕ ವೃತ್ತವೆಂದು ಭೂಪಟಗಳಲ್ಲಿ ಈಗಲೂ ಗುರುತಿಸಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯವಾಗಿಯೂ ಇವು ಕ್ರಮವಾಗಿ Tropic of Capricorn (ಮಕರದ ಸಂವಾದಿ) ಮತ್ತು Tropic of Cancer (ಕರ್ಕದ ಸಂವಾದಿ) ಎಂದೇ ಈಗಲೂ ಗುರುತಿಸಲ್ಪಡುವುದು.

ವಾಸ್ತವವಾಗಿ ಈಗ ಸೂರ್ಯನು ಅತ್ಯಂತ ದಕ್ಷಿಣ ಭಾಗದಲ್ಲಿ ನೇರ ಕಿರಣಗಳನ್ನು ಬೀರುವಾಗ ಆತ ಧನು ರಾಶಿಯಲ್ಲಿರುವುದರಿಂದ ಅದನ್ನು ಧನುರ್‌ವೃತ್ತ (Tropic of Saggitarious) ಎಂದೂ, ಅತ್ಯಂತ ಉತ್ತರ ಭಾಗದಲ್ಲಿ ನೇರ ಕಿರಣಗಳನ್ನು ಬೀರುವಾಗ ಮಿಥುನ ರಾಶಿಯಲ್ಲಿರುವುದರಿಂದ ಮಿಥುನ ವೃತ್ತ (Tropic of Gemini) ಎಂದೂ ತಿಳಿದುಕೊಳ್ಳಬೇಕಾಗುತ್ತದೆ!