Saturday, 22 June 2024

ಜೇನಹಾಡುಗಳ ಜೇನುಗೂಡು



ಎಲ್ಲ ಹಾಡುಗಳು ಸುಮಧುರವಾಗಿರುವ ಸದಭಿರುಚಿಯ ಕನ್ನಡ ಚಿತ್ರಕ್ಕೊಂದು ಉದಾಹರಣೆ ಕೊಡಿ ಎಂದು ಯಾರಾದರೂ ಕೇಳಿದರೆ 1963ರಲ್ಲಿ ಬಿಡುಗಡೆಯಾದ ಜೇನುಗೂಡು ಎಂದು ಥಟ್ಟಂತ ಹೇಳಬಹುದು.  ಹಾಗಂತ ಇದು ಮೂಲ ಕನ್ನಡ ಚಿತ್ರವಲ್ಲ.  ಬಂಗಾಲಿ ಭಾಷೆಯ ಬಂಗ ಕೋರ ಎಂಬ ಸಿನಿಮಾದ ಈ ಕಥೆಯನ್ನಾಧರಿಸಿ 1956ರಲ್ಲಿ  ತಮಿಳು ಭಾಷೆಯ ಕುಲದೈವಂ, 1957ರಲ್ಲಿ ಹಿಂದಿಯ ಭಾಭಿ ಹಾಗೂ  1960ರಲ್ಲಿ ತೆಲುಗಿನ ಕುಲದೈವಂ ಚಿತ್ರಗಳು ತಯಾರಾಗಿ ಜಯಭೇರಿ ಬಾರಿಸಿದ್ದವು.  ಆದರೆ ರೀಮೇಕ್ ಎಂಬ ಭಾವನೆ ಒಂದಿನಿತೂ ಬಾರದಂತೆ ಕನ್ನಡೀಕರಣಗೊಂಡದ್ದು Y.R.ಸ್ವಾಮಿ ನಿರ್ದೇಶನದ ಜೇನುಗೂಡು ಚಿತ್ರದ ಹೆಗ್ಗಳಿಕೆ.  ಇದು ನಾಯಕ ನಾಯಕಿ ಡ್ಯುಯೆಟ್ ಹಾಡುತ್ತಾ ಮರ ಸುತ್ತುವ ಶೈಲಿಯ ಚಿತ್ರವಲ್ಲ.  ಮಧ್ಯವಯಸ್ಸಿನ ರಘು ಎಂಬ ಗೃಹಸ್ಥನ ಪಾತ್ರ ವಹಿಸಿದ್ದ ಕೆ.ಎಸ್. ಅಶ್ವಥ್ ನಿಜ ಅರ್ಥದಲ್ಲಿ ಈ ಸಿನಿಮಾದ ಹೀರೊ.  ಅಶ್ವಥ್ ಅವರು ಅತ್ಯಂತ ಶ್ರೇಷ್ಠ ನಿರ್ವಹಣೆ ತೋರಿದ್ದು  ನಾಗರಹಾವು ಚಿತ್ರದ ಚಾಮಯ್ಯ ಮೇಸ್ಟ್ರ ಪಾತ್ರದಲ್ಲಿ ಎಂದು ಅನೇಕರು ಹೇಳುವುದಿದೆ. ಆದರೆ ನನ್ನ ಪ್ರಕಾರ ಜೇನುಗೂಡಿನಲ್ಲಿ ಅವರು ನಿರ್ವಹಿಸಿದ ಪಾತ್ರಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ.  ರಘುವಿನ ಪತ್ನಿ ಶಾಂತಾ ಆಗಿ ಪಂಢರಿಬಾಯಿ ಅವರ ಅಭಿನಯವೂ ಅತ್ಯುತ್ತಮ.  ತಮಿಳಿನ ಕುಲದೈವಂ ಮತ್ತು ಹಿಂದಿಯ ಭಾಭಿಯಲ್ಲಿ ಈ ಪಾತ್ರವನ್ನು  ಅವರೇ ನಿರ್ವಹಿಸಿದ್ದು ವಿಶೇಷ.  ಇನ್ನುಳಿದ ಕಲಾವಿದರೆಲ್ಲರೂ ಪಾತ್ರಗಳಿಗೆ ತಕ್ಕಂತೆ ಉತ್ತಮವಾಗಿಯೇ ಅಭಿನಯಿಸಿದ್ದಾರೆ.  ತಮಿಳು ಕುಲದೈವಂ ಚಿತ್ರದಲ್ಲಿ ಆರ್.ಸುದರ್ಶನಂ ಅವರ ಸಂಗೀತ ನಿರ್ದೇಶನದಲ್ಲಿ  ವಿಂಟೇಜ್ ಶೈಲಿಯ ಹಾಡುಗಳಿದ್ದವು.  ಆದರೆ ಹಿಂದಿಯ ಭಾಭಿಯಲ್ಲಿ ಅದುವರೆಗೆ ಪೌರಾಣಿಕ ಚಿತ್ರಗಳಿಗೆ ಸೀಮಿತವಾಗಿದ್ದ ಚಿತ್ರಗುಪ್ತ ಅವರು ನೀಡಿದ ಸಂಗೀತ ಸೂಪರ್ ಹಿಟ್ ಆಗಿ ಅವರನ್ನು ಸಂಗೀತ ನಿರ್ದೇಶಕರ ಮೊದಲ ಸಾಲಿನಲ್ಲಿ ತಂದು ನಿಲ್ಲಿಸಿತ್ತು.  ಚಲ್ ಉಡ್ ಜಾರೇ ಪಂಛಿ, ಚಲಿ ಚಲಿರೆ ಪತಂಗ್ ಮೇರಿ ಚಲಿರೆ, ಛುಪಾಕರ್ ಮೇರಿ ಆಂಖೊಂ ಕೊ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಮುಂದೆ ಈ ಚಿತ್ರ ತೆಲುಗಿನಲ್ಲಿ ತಯಾರಾದಾಗ ಸಂಗೀತ ನಿರ್ದೇಶಕ ಮಾಸ್ಟರ್ ವೇಣು ಅವರು ಚಲ್ ಉಡ್ ಜಾರೇ ಪಂಛಿ ಮತ್ತು ಚಲಿ ಚಲಿ ರೆ ಪತಂಗ್ ಹಾಡುಗಳ ಧಾಟಿಗಳನ್ನು ಯಥಾವತ್ ಬಳಸಿಕೊಂಡರು.  ಆದರೆ ಜೇನುಗೂಡು ಚಿತ್ರಕ್ಕೆ ಸಂಗೀತ ಸಂಯೋಜಿಸಿದ ವಿಜಯಾ ಕೃಷ್ಣಮೂರ್ತಿ ಅವರು ತಮಿಳು, ಹಿಂದಿ, ತೆಲುಗು ಅವತರಣಿಕೆಗಳ ಯಾವ ಧಾಟಿಯನ್ನೂ ಬಳಸದೆ ಸ್ವಂತಿಕೆ ಮೆರೆದು ಇಡೀ ಆಲ್ಬಂ ಜನಪ್ರಿಯತೆಯ ತುತ್ತತುದಿಗೇರುವಂತೆ ಮಾಡಿ ಗೆದ್ದರು. ಇವರು ವಿಜಯಾ ಸ್ಟುಡಿಯೋದ ಕಾಯಂ ಮ್ಯೂಸಿಕ್ ಎರೇಂಜರ್ ಆಗಿದ್ದುದರಿಂದ  ವಿಜಯಾ ಪದವನ್ನು ತಮ್ಮ ಹೆಸರಿಗೆ ಪ್ರಿ ಫಿಕ್ಸ್ ಮಾಡಿಕೊಂಡಿದ್ದರಂತೆ.  ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ.  ಆ ಮೇಲೆ ಮುರಿಯದ ಮನೆ , ವಾತ್ಸಲ್ಯ ಚಿತ್ರಗಳಲ್ಲೂ ಉತ್ತಮ ಹಾಡುಗಳನ್ನು ನೀಡಿದರು.

 ವಿಜಯಾ ಕೃಷ್ಣಮೂರ್ತಿ

ಆ ಕಾಲದಲ್ಲಿ ನನಗೆ ರೇಡಿಯೊದಲ್ಲಿ ಹಾಡುಗಳನ್ನು ಕೇಳುತ್ತಾ ಸಿನಿಮಾಗಳನ್ನು ಕನಸಿನ ಲೋಕದಲ್ಲಿ ಕಾಣುವ ಅವಕಾಶ ಮಾತ್ರ ಸಿಗುತ್ತಿದ್ದುದು.  ಆದರೆ ಬೇಸಿಗೆ ರಜೆಯಲ್ಲಿ ಕಾರ್ಕಳದ ಸಮೀಪವಿದ್ದ ಅಕ್ಕಂದಿರ ಮನೆಗಳಿಗೆ ಹೋಗುವಾಗ ಅಲ್ಲಿಯ ಜೈಹಿಂದ್ ಟಾಕೀಸಿನಲ್ಲಿ ಒಮ್ಮೊಮ್ಮೆ ಸಿನಿಮಾ ನೋಡುವುದಿತ್ತು.  ಬರಸಾತ್ ಕೀ ರಾತ್, ಕಿತ್ತೂರು ಚೆನ್ನಮ್ಮ, ಕನ್ಯಾರತ್ನ ಮುಂತಾದ ಚಿತ್ರಗಳನ್ನು ಅಲ್ಲಿ ನೋಡಿದ್ದೆ.  ಈ ಚಿತ್ರವನ್ನೂ ಜೈಹಿಂದ್ ಟಾಕೀಸಿನಲ್ಲಿಯೇ ನೋಡುವ ಅವಕಾಶ ನನಗೆ ಒದಗಿ ಬಂತು.  ಆದರೆ ಅಕ್ಕಂದಿರ ಮನೆಗೆ ಹೋಗುವಾಗ ಅಲ್ಲ.  ನಮ್ಮ ಅಣ್ಣ ಕಾರ್ಕಳದಿಂದ ಕಲ್ಲುಕಂಬಗಳನ್ನು  ತಂದು ಊರಿನಲ್ಲಿ ಅಗತ್ಯವಿದ್ದವರಿಗೆ ಸರಬರಾಜು ಮಾಡುವ ವ್ಯವಹಾರವನ್ನು ಕೆಲಕಾಲ ನಡೆಸಿದ್ದರು. ಆ ಒಂದು ಸಲ ಶಾಲೆಗೆ ರಜೆ ಇದ್ದುದರಿಂದ ನನ್ನನ್ನೂ ಜೊತೆಗೆ ಕರಕೊಂಡು  ಹೋಗಿದ್ದರು.  ಮುನ್ನಾದಿನ ಸಂಜೆಯೊಳಗೆ ಕಾರ್ಕಳ ತಲುಪಿ ಪರಿಚಯದವರ ಅಂಗಡಿಯಲ್ಲಿ ಕೂತಿದ್ದಾಗ  ಜೇನುಗೂಡು ಚಿತ್ರದ ಪೋಸ್ಟರುಗಳನ್ನು ಹಚ್ಚಿಕೊಂಡ  ಪ್ರಚಾರದ ಎತ್ತಿನ ಗಾಡಿ ಎದುರಿಂದ ಹಾದು ಹೋಯಿತು. ಆ ಕಾಲದಲ್ಲಿ ಸಣ್ಣ ಪಟ್ಟಣಗಳ ಟಾಕೀಸುಗಳಲ್ಲಿ  ಚಿತ್ರ ಬದಲಾದುದನ್ನು ಜನರಿಗೆ ತಿಳಿಯಪಡಿಸುವ ವಿಧಾನ ಇದೇ ಆಗಿತ್ತು.  ಅಂಗಡಿಗೆ ಬಂದು ಹೋಗುವವರೆಲ್ಲರೂ ಜೇನುಗೂಡಿನ ಬಗ್ಗೆಯೇ ಮಾತನಾಡುತ್ತಿದ್ದರು. ನೋಡಲೇ ಬೇಕಾದ ಚಿತ್ರವೆಂದು ಅಂಗಡಿಯವರೂ ಶಿಫಾರಸು ಮಾಡಿದರು. ಈ ಶಿಫಾರಸು ಇಲ್ಲದಿದ್ದರೂ ನಾವು ಅದನ್ನು ನೋಡದೆ ಏನೂ ಇರುತ್ತಿರಲಿಲ್ಲವೆನ್ನಿ.  ಅಂತೂ ಜೈಹಿಂದ್ ಟಾಕೀಸಿಗೆ ಭೇಟಿ ನೀಡಿ ಜೇನುಗೂಡಿನ ಜೇನಸವಿಯನ್ನು ಹೀರಿದೆವು. ಎಂದಿನಂತೆ ಪದ್ಯಾವಳಿ ಖರೀದಿಸುವುದನ್ನು ಮರೆಯಲಿಲ್ಲ.  ರಾತ್ರೆ ಆ ಅಂಗಡಿಯವರ ಮನೆಯಲ್ಲೇ ಹಾಲ್ಟ್ ಮಾಡಿ ಮರುದಿನ ಕಲ್ಲಿನ ಲೋಡು ತುಂಬಿದ ಲಾರಿಯಲ್ಲಿ ಊರಿಗೆ ಹಿಂತಿರುಗಿದೆವು. ಈ ಕಾರ್ಕಳ ಯಾತ್ರೆಯಲ್ಲಿ ನಮ್ಮಣ್ಣ ನನಗೆ ನೀಲಿ ಬಣ್ಣದ ಕ್ಯಾನ್‌ವಾಸ್ ಶೂಗಳನ್ನು ಕೊಡಿಸಿದ್ದರು. ಚಪ್ಪಲಿ ಧರಿಸುವುದೇ ಅಪರೂಪವಾಗಿದ್ದ ಆ ಕಾಲದಲ್ಲಿ ಶೂ ಸಿಕ್ಕಿದ್ದಕ್ಕೆ ನಾನು ಬಹಳ ಸಂಭ್ರಮ ಪಟ್ಟಿದ್ದೆ.



ಇಷ್ಟೆಲ್ಲ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ಆ ಚಿತ್ರದ ಹಾಡುಗಳನ್ನು ಈಗ ಒಂದೊಂದಾಗಿ ಆಲಿಸೋಣ. ಒಂದು ಹಾಡನ್ನು ಸೋರಟ್ ಅಶ್ವಥ್ ಹಾಗೂ ಇನ್ನುಳಿದ ಹಾಡುಗಳನ್ನು ಕು.ರ.ಸೀ ರಚಿಸಿದ್ದಾರೆ.  ಕಥೆ ಇತ್ಯಾದಿ ಇತರ ವಿವರಗಳೆಲ್ಲವೂ ಪದ್ಯಾವಳಿಯಲ್ಲಿ ಲಭ್ಯವಿರುವುದರಿಂದ ನಾನು  ಇಲ್ಲಿ ಹೇಳಹೋಗುವುದಿಲ್ಲ. ಮೊದಲು ಅದರ ಮೇಲೊಮ್ಮೆ ಕ್ಲಿಕ್ಕಿಸಿ scroll ಮಾಡುತ್ತಾ ಕಣ್ಣಾಡಿಸಿ.  ಆ ಮೇಲೆ ಒಂದೊಂದೇ ಹಾಡಿನ ಸಾಹಿತ್ಯ ನೋಡುತ್ತಾ  ಆಲಿಸಿದರೆ ಖುಶಿ ದ್ವಿಗುಣಗೊಂಡೀತು.

ಪದ್ಯಾವಳಿ




ಒಂದಾಗಿ ಬಾಳುವ ಒಲವಿಂದ ಆಳುವ
ಚಿತ್ರದ ಟೈಟಲ್ಸ್ ಜೊತೆಗೆ ಹಿನ್ನೆಲೆಯಲ್ಲಿ ಕೇಳಿಸುವ, ಸಹಜೀವನದ ಮಹತ್ವ ಸಾರುವ ಹಾಡಿದು. ಚಿತ್ರದ ನಾಯಕ ರಘು ಮರಣ ಶಯ್ಯೆಯಲ್ಲಿರುವ ತಂದೆಗೆ ಔಷಧಿ ಹಿಡಿದುಕೊಂಡು ಓಡುತ್ತಿರುವ ದೃಶ್ಯ ಹಿನ್ನೆಲೆಯಲ್ಲಿ ಕಾಣುತ್ತಿರುತ್ತದೆ. ಎಳೆ ಪ್ರಾಯದ ರಘು ಆಗಿ ರತ್ನಾಕರ್ ಕಾಣಿಸಿಕೊಂಡಿದ್ದಾರೆ. ಬಾಳು ನಂದನವಾಗಬೇಕಾದರೆ ಸ್ವಾರ್ಥವಿಲ್ಲದ ಸಹಜೀವನದ ಹೊರತು ಅನ್ಯ ಮಾರ್ಗವಿಲ್ಲ ಎಂದು ಸಾರುತ್ತದೆ ಈ ಗೀತೆ.  ವಿಜಯಾ ಕೃಷ್ಣಮೂರ್ತಿ ಅವರು ತನ್ನ music arrangementನ ಅನುಭವವನ್ನೆಲ್ಲ ಧಾರೆ ಎರೆದು ಸಿದ್ಧಪಡಿಸಿದಂತಿದೆ ಈ ಸಂಯೋಜನೆ. ಹಾಡಿನುದ್ದಕೂ melody, counter melodyಗಳ ಸಮತೋಲನವಿದೆ. ಕೀರವಾಣಿ ಮತ್ತು ಗೌರಿಮನೋಹರಿ ರಾಗಗಳ ಛಾಯೆಯ ಈ ಹಾಡಿನ ಮೂರು versionಗಳಿದ್ದು ಘಂಟಸಾಲ ಅವರು ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಭಾವ ತುಂಬಿ ಹಾಡಿದ್ದಾರೆ.



ಜೇನಿರುಳು ಜೊತೆಗೂಡಿರಲು


ರಘುವಿನ ತಮ್ಮ ರಮೇಶ್ ಮತ್ತು ಆತನ ಪತ್ನಿ ತಾರಾ ಮದುವೆಯಾದೊಡನೆ ಹಾಡುವ ಗೀತೆಯಿದು. ನವ ದಂಪತಿಗಳಲ್ಲಿರಬಹುದಾದ ಕುತೂಹಲ, ಅಜ್ಞಾನ, ಅಂಜಿಕೆ, ಭವಿಷ್ಯದ ಕನಸುಗಳು ಎಲ್ಲದರ ಸುಂದರ ನಿರೂಪಣೆ ಇದೆ ಇದರಲ್ಲಿ.  ಸೂರ್ಯಕುಮಾರ್ ಎಂಬ ಅಷ್ಟೊಂದು ಹೆಸರುವಾಸಿಯಲ್ಲದ ನಟ ಮತ್ತು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಜಯಂತಿ ಅವರ ಅಭಿನಯವಿದೆ. ಇವರ ಸಿಹಿ ದಾಂಪತ್ಯದ ಜೊತೆಗೆ  ರಾಜಾ(ಉದಯ ಕುಮಾರ್) ಮತ್ತು ಮಂಗಳ(ಲಕ್ಷ್ಮಿ ದೇವಿ) ಅವರ  ಕಹಿ ದಾಂಪತ್ಯದ   ದೃಶ್ಯಗಳೂ ಕಾಣಿಸುತ್ತವೆ.



ಹೆಸರಿಗೆ ರಂಗ


ತಾನು ಬಾಲವಿಧವೆಯೆಂದು ಗೊತ್ತಿಲ್ಲದ ಲತಾ, ರಘುವಿನ ಕಿರಿಯ ತಮ್ಮ ರಂಗನನ್ನು ಛೇಡಿಸುವ ತುಂಟತನದ ಹಾಡು..  ಹಿಂದಿಯಲ್ಲಿ ಈ ಸಂದರ್ಭಕ್ಕೆ ಟೈ ಲಗಾಕೆ ಮಾನಾ ಬನ್ ಗಯೆ ಜನಾಬ್ ಹೀರೊ ಹಾಡಿತ್ತು. ರಂಗನ ಪಾತ್ರ ನಿರ್ವಹಿಸಿದ್ದ ಜಿ.ವಿ.ಶಿವರಾಜ್ ಈ ಚಿತ್ರ ಮುಗಿಯುವಷ್ಟರಲ್ಲಿ ಎಳೆ ಪ್ರಾಯದಲ್ಲೇ ನಿಧನರಾದರು.



ಜಿಗಿಜಿಗಿಯುತ ನಲಿ


ಕೀಟಲೆಯು ವಯೋಸಹಜ ಒಲವಾಗಿ ಪರಿವರ್ತನೆಗೊಂಡು  ಒಬ್ಬರಿಗೊಬ್ಬರು ಸಮೀಪವಾಗುತ್ತಾ ಹೋದ ಲತಾ ಮತ್ತು ರಂಗ ಗಾಳಿಪಟ ಹಾರಿಸುವ ಸನ್ನಿವೇಶದ ಸೋರಟ್ ಅಶ್ವಥ್ ರಚಿಸಿದ ಹಾಡು. ಜೆ.ವಿ. ರಾಘವುಲು ಮತ್ತು ಎಲ್.ಆರ್. ಈಶ್ವರಿ ಹಾಡಿದ್ದಾರೆ.  ಹಾಡಿನ ಧ್ವನಿಮುದ್ರಿಕೆಯಲ್ಲಿ ಎರಡು ಚರಣಗಳು ಮಾತ್ರವಿದ್ದು ಚಿತ್ರದಲ್ಲಿ ಒಂದು ಹೆಚ್ಚುವರಿ ಚರಣವಿದೆ.  ಆದರೆ ಅಂತರ್ಜಾಲದಲ್ಲಿ ಲಭ್ಯವಿರುವ ಚಿತ್ರದ ಪ್ರಿಂಟು  ಅಲ್ಲಲ್ಲಿ ಕ್ಷತಿಗೊಂಡಿರುವುದರಿಂದ   ಹಾಡು ಕೇಳುವಾಗ ರಸಭಂಗವಾಗುತ್ತದೆ.  ಇದು ನಾನು ವಿಶೇಷವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿ ಸಿದ್ಧಪಡಿಸಿದ  ಮೂರು ಚರಣದ ವರ್ಷನ್.  ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿ ಜಿಗಿಜಿಗಿಯುವ ಹಾಡು ಲೇಖನದಲ್ಲಿ ಲಭ್ಯವಿದೆ. ಭಾಭಿಯಲ್ಲಿ ಚಲಿ ಚಲಿ ರೆ ಪತಂಗ್ ಮೇರಿ ಚಲಿರೆ ಈ ಸನ್ನಿವೇಶದ ಹಾಡಾಗಿತ್ತು.



ಬಾಳೊಂದು ನಂದನ 1


ಸೊಸೆಯರ ಕಾರಸ್ಥಾನದಿಂದ ಅಣ್ಣ ತಮ್ಮಂದಿರ ನಡುವೆ ವಿರಸದ ಬೀಜ ಮೊಳೆತು ಮನನೊಂದ ರಘು ಎಲ್ಲವನ್ನೂ ಬಿಟ್ಟು ಹಳ್ಳಿಯ ಮನೆಗೆ ಹೊರಟು ನಿಂತಾಗ ಹಿನ್ನೆಲೆಯಲ್ಲಿ ಕೇಳಿಸುವ ಹಾಡು. ಒಂದಾಗಿ ಬಾಳುವ ಹಾಡಿನದೇ ಟ್ಯೂನ್ ಆದರೆ ಮೂಡ್ ಬೇರೆ.  ಪಲ್ಲವಿ ಮತ್ತು ಚರಣಗಳ ಸಾಹಿತ್ಯ ಸಂಪೂರ್ಣ ಭಿನ್ನ. ಹಾಡಿನ ಮೂಡಿಗೆ ಹೊಂದುವ ಆರ್ಕೆಸ್ಟ್ರೇಶನ್.  ಹಿಂದಿಯ ಚಲ್ ಉಡ್ ಜಾರೆ ಪಂಛಿ ಹಾಡಿನ ಹಕ್ಕಿಯ ಉಪಮೆ ಅಥವಾ ಅದರ ಟ್ಯೂನ್ ಯಾವುದನ್ನೂ ಬಳಸದೇ ಇರುವುದು ಇಲ್ಲಿಯ ವಿಶೇಷ.



ನಾಗವೇಣಿ ರಜತಗಿರಿಗೆ


ಆ ಕಾಲದಲ್ಲಿ  ನಾಯಕ, ನಾಯಕಿ, ಇತರ ನಟರು ಯಾರೇ ಆಗಿರಲಿ;  ಪ್ರತಿ ಸಿನಿಮಾದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಇರಲೇ ಬೇಕಿತ್ತು.  ಇಲ್ಲವಾದರೆ ಚಿತ್ರಗಳಿಗೆ ಹಂಚಿಕೆದಾರರೇ ದೊರೆಯುತ್ತಿರಲಿಲ್ಲ.  ಇದು ಬಾಲಣ್ಣ ಮನ್ಮಥನಾಗಿ ಮತ್ತು ನರಸಿಂಹರಾಜು ರತಿಯಾಗಿ ಅಭಿನಯಿಸಿದ ಕಾಮದಹನ ನಾಟಕ ಸನ್ನಿವೇಶದ ಹಾಡು. ಇದರಲ್ಲಿ ರಾಜನ್-ನಾಗೇಂದ್ರ ಜೋಡಿಯ ನಾಗೇಂದ್ರ ಅವರ ಧ್ವನಿಯಿರುವುದು ವಿಶೇಷ.  ಸತ್ಯ ಹರಿಶ್ಚಂದ್ರ ಚಿತ್ರದ ಕಾಲ ಕೌಶಿಕನ ಮುಂದೆ ಅವರು ಹಾಡಿದ ತಮ್ಮದಲ್ಲದ ಇನ್ನೊಂದು ಹಾಡು.  ಗ್ರಾಮೀಣ ಪ್ರದೇಶದ ಉತ್ಸಾಹಿಗಳು ಅಭಿನಯಿಸುವ ನಾಟಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅನಗತ್ಯ ಮಹಾಪ್ರಾಣ ಇತ್ಯಾದಿಗಳನ್ನು ಇಲ್ಲಿ ಬೇಕೆಂದೇ  ಅಳವಡಿಸಿಕೊಳ್ಳಲಾಗಿದೆ.   ಸ್ಮೃತಿ ತಪ್ಪಿ ಬಿದ್ದ ರತಿ ಪ್ರೇಕ್ಷಕರ ಒನ್ಸ್ ಮೋರ್ ಕೇಳಿ ಮೇಲೆದ್ದು ಮತ್ತೆ ಹಾಡು ಹೇಳುತ್ತಾಳೆ! ಕಂಪನಿ ನಾಟಕಗಳಲ್ಲಿ ಇಂತಹ ಪ್ರಸಂಗಗಳು ನಡೆಯುತ್ತಿದ್ದುವಂತೆ. ಈ ಹಾಡಿನ ಧ್ವನಿಮುದ್ರಿಕೆ ತಯಾರಾಗಿರಲಿಲ್ಲ.  ಹೀಗಾಗಿ ಚಿತ್ರದ ಹೊರಗೆ  ಈ ಹಾಡು ಕೇಳುವಂತೆಯೇ ಇರಲಿಲ್ಲ.



ಬಾಳೊಂದು ನಂದನ 2


ತಾನು ವಿಧವೆಯೆಂದು ತಿಳಿದ ಲತಾ ತನ್ನ ಗಂಡನ ಸಂಬಂಧಿಗಳ ಜೊತೆ ಇರಲು ತೆರಳುವಾಗ ಮರುಕಳಿಸುವ ಹಾಡು.  ಆದರೆ ಸನ್ನಿವೇಶಕ್ಕೆ ತಕ್ಕಂತೆ ಭಿನ್ನ ಚರಣಗಳು. ಹೊಮ್ಮುವ ಭಾವಗಳೂ ಬೇರೆ.  ಒಂದು ಚರಣದಲ್ಲಿ  ರಂಗನ ಮನದಾಶೆಯ ಮಹದಾಶಯ ಮಣ್ಣಾಗಿ ಹೋದ ಬೇಗುದಿಯೂ ಪ್ರತಿಫಲಿತವಾಗಿದೆ.



ಈಗ ಇಂತಹ ಹಳೆಯ  ಹಾಡುಗಳು ವಿವಿಧ ಮಾಧ್ಯಮಗಳಲ್ಲಿ ಸುಲಭವಾಗಿ ಲಭ್ಯವಿವೆ.  ಆದರೆ 80 ಮತ್ತು  90ರ ದಶಕಗಳು ಹಳೆ ಹಾಡುಗಳ ಬರಗಾಲ ಬಾಧಿಸಿದ್ದ ಕಾಲ.  ಆಗ ಏಕೈಕ ಮಾಧ್ಯಮವಾಗಿದ್ದ ರೇಡಿಯೊದಲ್ಲಿ ತತ್ಕಾಲೀನ ಹಾಡುಗಳು ಮಾತ್ರ ಪದೇ ಪದೇ ಪ್ರಸಾರವಾಗುತ್ತಿದ್ದವು.  ಬೆಂಗಳೂರು ಮತ್ತು ಧಾರವಾಡ ವಿವಿಧಭಾರತಿಗಳಲ್ಲಿ ಹಳೆ ಹಾಡುಗಳು ಬರುತ್ತಿದ್ದರೂ ಅವುಗಳ ಪ್ರಸಾರ ವ್ಯಾಪ್ತಿ  ನಮ್ಮನ್ನು ತಲುಪುವಷ್ಟಿರಲಿಲ್ಲ.  ಹೀಗಾಗಿ ನಾನು ಯಾವತ್ತಾದರೂ ತರಬೇತಿ ಇತ್ಯಾದಿಗಳಿಗೆ ಬೆಂಗಳೂರಿಗೆ ಹೋಗುವ ಸಂದರ್ಭ ಬಂದರೆ ಟೇಪ್ ರೆಕಾರ್ಡರ್ ಜೊತೆಗೇ ಕೊಂಡೊಯ್ಯುತ್ತಿದ್ದೆ.  ಆದರೆ ಹಳೆ ಹಾಡುಗಳು ಬರುತ್ತವೆಂದು ನಾನು ಕಾದು ಕುಳಿತಾಗ ತತ್ಕಾಲೀನ ಹಾಡುಗಳ ಚರ್ವಿತ ಚರ್ವಣವೇ ಕೇಳಿ ಬರುತ್ತಿದ್ದುದು ಹೆಚ್ಚು.  ಆದರೂ ಕೆಲ ಹಾಡುಗಳನ್ನು ಈ ರೀತಿ capture ಮಾಡಲು ನನಗೆ ಸಾಧ್ಯವಾಗಿತ್ತು. ಕ್ಯಾಸೆಟ್ ಯುಗ ಆರಂಭವಾದ ಮೇಲೂ ನಮಗೆ ಬೇಕಿದ್ದ ಹಾಡುಗಳು ಸಿಗುತ್ತಿದ್ದುದು ಕಮ್ಮಿ.  ಹಳೆ ಹಾಡುಗಳಿಗಾಗಿ ನಾನು ಎಡತಾಕದ ಕ್ಯಾಸೆಟ್ ಅಂಗಡಿಗಳಿಲ್ಲ.  ನಾನು ಮೊತ್ತಮೊದಲು ಕೇಳುತ್ತಿದ್ದುದು ಜೇನುಗೂಡು ಕ್ಯಾಸೆಟ್ ಇದೆಯೇ ಎಂದು.  ಕೆಲವೆಡೆ ಇದೆ ಎಂದುತ್ತರಿಸಿ ಆ ಹೆಸರಿನ ಯಾವುದೋ ಜಾನಪದ ಹಾಡುಗಳ ಕ್ಯಾಸೆಟ್ ತೋರಿಸುತ್ತಿದ್ದರು.  ಕನ್ನಡ ದೂರದರ್ಶನ ರಾಜ್ಯವ್ಯಾಪಿಯಾದ ಮೇಲೆ ಅಲ್ಲಿಂದ ಪ್ರಸಾರವಾಗುತ್ತಿದ್ದ ಹಳೇ ಸಿನಿಮಾಗಳು ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮಗಳಿಂದ ಎಷ್ಟೋ ಹಾಡುಗಳನ್ನು ಧ್ವನಿಮುದ್ರಿಸಿಕೊಂಡಿದ್ದೇನೆ.  ಈಗ ಅಂತರ್ಜಾಲ ಕ್ರಾಂತಿಯಿಂದಾಗಿ ಬಹು ಕಾಲದಿಂದ ಬಯಸಿದ್ದ ಎಷ್ಟೋ ಅಪರೂಪದ ಹಾಡುಗಳು  ಕೈ ಬೆರಳ ತುದಿಯಲ್ಲೇ ಸಿಗುವುದು ನಮ್ಮೆಲ್ಲರ ಭಾಗ್ಯವೇ ಸರಿ.

ಜೇನುಗೂಡು  ಚಿತ್ರವು ಅಂತರ್ಜಾಲದಲ್ಲಿ ಲಭ್ಯವಿದ್ದು ಇಲ್ಲಿ ನೋಡಬಹುದು.