Wednesday, 8 November 2023

ನಾನ್ ಖಟಾಯಿಯನ್ನು ನಾರಾಯಣ ಕಟರ್ ಮಾಡಿದವರು ಯಾರು?




ನಾನು 1969 ರಿಂದ 1971ರ ವರೆಗೆ ಮುಂಡಾಜೆಯಿಂದ ಉಜಿರೆ ಕಾಲೇಜಿಗೆ ಸೈಕಲಲ್ಲಿ ದಿನಕ್ಕೆ 14 ಕಿ.ಮೀ. up & down ಮಾಡುತ್ತಿದ್ದ ಕಾಲ. ಮಧ್ಯಾಹ್ನ ಇಂದ್ರರ ಗೂಡಂಗಡಿಯ ಇಡ್ಲಿ ಅಥವಾ ಜನಾರ್ದನ ರೆಸ್ಟೋರೆಂಟ್ ಇಲ್ಲವೇ ಮಂಜುನಾಥರ ಹೋಟೇಲಿನ ಊಟ ಹೊಟ್ಟೆಗೆ ಬೀಳುತ್ತಿದ್ದರೂ 3 - 3:30ಕ್ಕೆ ಕಾಲೇಜು ಬಿಡುವ ಹೊತ್ತಿಗೆ ಅಸಾಧ್ಯ ಹಸಿವು ಬಾಯಾರಿಕೆ ಉಂಟಾಗುತ್ತಿದ್ದವು. ಹೈಸ್ಕೂಲಲ್ಲಿ ಇರುವಾಗ ಇಂದ್ರರ ಅಂಗಡಿಯಿಂದ ಕೊಳ್ಳುತ್ತಿದ್ದ ಅಕ್ರೋಟು, ಚಿಕ್ಕಿಗಳು ಈಗ below grade ಅನ್ನಿಸತೊಡಗಿದ್ದವು. ಹೀಗಾಗಿ ಸೀದಾ ಪೇಟೆಗೆ ಬಂದು ಕಿಸೆಯಲ್ಲಿ ಎಷ್ಟು ಪುಡಿಗಾಸು ಇದೆ ನೋಡಿಕೊಂಡು 15 ಪೈಸೆಗೆ ಸಿಗುತ್ತಿದ್ದ ದೊಡ್ಡ ಗ್ಲಾಸ್ ಕಬ್ಬಿನ ರಸ ಅಥವಾ 65 ಪೈಸೆಗೆ ಸಿಗುತ್ತಿದ್ದ ಗೋಲ್ಡ್ ಸ್ಪಾಟ್ ಕುಡಿಯುವುದಿತ್ತು. 5 ಪೈಸೆಗೆ ಸಿಗುತ್ತಿದ್ದ ಗಟ್ಟಿಯಾದ ಡೆಕ್ಕನ್ ಅಥವಾ ಪ್ಯಾರೀಸ್ ಚಾಕಲೇಟುಗಳನ್ನು ಕಿಸೆಗೆ ಹಾಕಿಕೊಳ್ಳುವುದೂ ಇತ್ತು. ಕೆಲವು ಸಲ ಒಂದು ಪಾರ್ಲೆ ಗ್ಲುಕೊ ಬಿಸ್ಕೆಟ್ ಪ್ಯಾಕೆಟ್ ಕೊಂಡು ಸೈಕಲ್ಲಿನ ಬೆತ್ತದ ಬುಟ್ಟಿಯಲ್ಲಿಟ್ಟುಕೊಂಡು ಒಂದೊಂದನ್ನೇ ತಿನ್ನುತ್ತಾ ಸೈಕಲ್ ತುಳಿಯುತ್ತಿದ್ದರೆ ಮನೆ ಸೇರುವಾಗ ಪ್ಯಾಕೆಟ್ಟಿನ wrapper ಮಾತ್ರ ಉಳಿದಿರುತ್ತಿತ್ತು.

ಒಂದು ಸಲ ಎಂದಿನಂತೆ ಗೋಪಾಲಮಾಸ್ಟ್ರ ಅಂಗಡಿಗೆ ಹೋಗಿ ಇಂದು ಏನು ಕೊಳ್ಳುವುದೆಂದು ಯೋಚಿಸುತ್ತಿರುವಾಗ ಗಾಜಿನ ಭರಣಿಯಲ್ಲಿ ನಸು ಹಳದಿ ಬಣ್ಣದ ಹೊಸ ಆಕರ್ಷಕ ತಿನಿಸೊಂದು ಕಾಣಿಸಿತು. 10 ಪೈಸೆಗೆ ದೊರಕಿದ ಅದನ್ನು ಬಾಯಿಗೆ ಹಾಕಿದೊಡನೆ ಕರಗಿ ಹೋಯಿತು.  ಅದರ ಹೆಸರೇನೆಂದು ಕೇಳಿದಾಗ ಅಂಗಡಿ ನೋಡಿಕೊಳ್ಳುತ್ತಿದ್ದ ಗೋಪಾಲ ಮಾಸ್ಟ್ರ ತಮ್ಮ ಗೋವಿಂದರು  'ನಾರಾಯಣ ಕಟರ್' ಎಂದು ಹೇಳಿದರು! ತಮಾಷೆ ಮಾಡುತ್ತಿರಬಹುದು ಎನ್ನಿಸಿ  ಇನ್ನೊಮ್ಮೆ ಕೇಳಿದಾಗ ಮತ್ತೆ ಅದನ್ನೇ ಹೇಳಿದಾಗ ಇದೆಂಥ ಹೆಸರಪ್ಪಾ ಎಂದು ಆಶ್ಚರ್ಯವಾಯಿತು. ಅದಕ್ಕೆ ಹೆಸರು ಅಂತ ಇಲ್ಲದ್ದರಿಂದ ತಾವೇ ಸೃಷ್ಟಿಸಿ ಹೀಗೆ ಹೇಳುತ್ತಿರಬಹುದೆಂದುಕೊಂಡೆ. ಆ ಮೇಲೆ ನಾನೂ ಆಗಾಗ ಆ ಹೆಸರು ಹೇಳಿಯೇ ಅದನ್ನು ಕೊಂಡು ತಿನ್ನುತ್ತಿದ್ದೆ. ಆದರೆ ಅದು ಅಧಿಕೃತ ಹೆಸರು ಅನ್ನುವ ನಂಬಿಕೆ ನನಗಿರಲಿಲ್ಲ.

55 ವರ್ಷಗಳ ನಂತರ ಈಗ  ಆ ಹೆಸರಿನ ಬಗ್ಗೆ ಕುತೂಹಲ ಮೂಡಿ ಅಂತರಜಾಲದಲ್ಲಿ ನಾರಾಯಣ ಕಟರ್ ಎಂದು ಹುಡುಕಿದರೆ ಅನೇಕ ರಿಸಲ್ಟುಗಳು ಪ್ರತ್ಯಕ್ಷವಾದವು!  ಅದಕ್ಕೆ ನಾನ್ ಖಟಾಯಿ ಎಂಬ ಹೆಸರಿರುವುದೂ ತಿಳಿಯಿತು. ನಾನ್ ಖಟಾಯಿಯೇ’ ಯಾರದೋ ಬಾಯಲ್ಲಿ ನಾರಾಯಣ ಕಟರ್ ಆಗಿ ಚಲಾವಣೆಗೆ ಬಂದಿರಬಹುದೇ ಎಂಬ ಶಂಕೆಯೂ ಮೂಡಿತು. ದಕ್ಷಿಣ ಕನ್ನಡದ ಹೊರಗೆ ಈ ಹೆಸರು ಇದ್ದಂತಿಲ್ಲ.

ನಾನ್ ಖಟಾಯಿ ಹೆಸರಿನ ಮೂಲ ಹುಡುಕಿಕೊಂಡು ಹೊರಟಾಗ ಪರ್ಶಿಯನ್ ಭಾಷೆಯಲ್ಲಿ ನಾನ್ ಅಂದರೆ ಬ್ರೆಡ್, ಖಟಾಯಿ ಅಂದರೆ ಬಿಸ್ಕೆಟ್ ಎಂಬ ಮಾಹಿತಿ wikiಯಲ್ಲಿ ದೊರಕಿತು.  ನಾನ್ ಖಟಾಯಿ ಸೂರತ್‌ನಲ್ಲಿ 16ನೇ ಶತಮಾನದಲ್ಲಿ ಜನ್ಮ ತಾಳಿತಂತೆ. ನಯವಾದ ಗೋಧಿ ಹಿಟ್ಟು, ಕಡಲೆ ಹಿಟ್ಟು,  ಗೋಧಿ ರವೆ ಮುಂತಾದವನ್ನು ಬಳಸಿ ಇದನ್ನು ತಯಾರಿಸಲಾಗುತ್ತಿತ್ತಂತೆ.

ಈಗ  ಸಮ ಪ್ರಮಾಣದ ಮೈದಾ, ಸಕ್ಕರೆ ಪುಡಿ ಮತ್ತು ತುಪ್ಪವನ್ನು ಸ್ವಲ್ಪ ಬೇಕಿಂಗ್ ಸೋಡಾದೊಂದಿಗೆ ಬೆರೆಸಿ ಉಂಡೆಕಟ್ಟಿ ಕಾದ ಹೊಯ್ಗೆ ಮೇಲೆ ಅಥವಾ ಓವನಿನಲ್ಲಿ ಬೇಕ್ ಮಾಡಿ ಇದನ್ನು ತಯಾರಿಸುವುದಂತೆ.  ಮೈದಾ ಮತ್ತು ಬೇಕಿಂಗ್ ಸೋಡಾ ಮುಖ್ಯ  ingredients ಆಗಿರುವುದರಿಂದ  ಹೆಚ್ಚು ತಿಂದರೆ ಖಂಡಿತವಾಗಿಯೂ ಇದು ಆರೋಗ್ಯಕ್ಕೆ ಹಾನಿಕರ ಎಂದು ನನಗೆ ಅನಿಸಿತು.  ಅಂಗಡಿ, ಬೇಕರಿಗಳಲ್ಲಿ ಸಿಗುವ ನಾರಾಯಣ ಕಟರಿಗೆ  ತುಪ್ಪದ ನೈವೇದ್ಯವನ್ನಾದರೂ ಮಾಡಿರುತ್ತಾರೋ ಇಲ್ಲವೋ.  ಸಕ್ಕರೆಯ ಬದಲು saccharineನಂಥ ಕೃತಕ ಸಿಹಿಕಾರಕ ಮತ್ತು ರಾಸಾಯನಿಕ ರುಚಿವರ್ಧಕಗಳನ್ನು ಬಳಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಕಾದ ಹೊಯ್ಗೆ ಮೇಲೆ ಬೇಕ್ ಮಾಡಿ ಮನೆಯಲ್ಲೇ ಇದನ್ನು ತಯಾರಿಸಬಹುದಾದ ವಿಧಾನವನ್ನು ವಿವರಿಸುವ Bhat & Bhat ವೀಡಿಯೊವನ್ನು ಇಲ್ಲಿ ನೋಡಬಹುದು.




ಈ ಬರಹವನ್ನು ಫೇಸ್ ಬುಕ್‌ನಲ್ಲಿ ಪ್ರಕಟಿಸಿದ್ದೆ. ಅಲ್ಲಿ ಬಂದ ಕೆಲವು ಮಾಹಿತಿಪೂರ್ಣ ಪ್ರತಿಕ್ರಿಯೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಬೆಣ್ಣೆ ಬಿಸ್ಕತ್ ಅಂತೀವಿ.
Lakshmi GN

ನಮ್ಮ ಕಡೆ ನಾಣಕಟಾರ್.
Vinayak Kamath

ಬೆಣ್ಣೆ biscuit
Ramesh Dalavai

ಇದು ನಾನ್ ಕಠಾಯ್ ಅಂತನೂ ಕೇಳಿದ್ದೇನೆ. ಚಿಕ್ಕಂದಿನಲ್ಲಿ ನಾವೂ ನಾರಾಯನ್ ಕಠಾರಿ ಅಂತನೇ ಹೇಳ್ತಿದ್ವಿ.
Madhav Dongre

ನಾನ್ ಕಟಾಯಿ ಅದನ್ನೇ ನಾರಾಯಣ್ ಕಟರ್ ಎನ್ನುತ್ತಿದ್ದಿದು.
Raghupathi Tamankar

ನಾನು ಕೂಡ ಬಹಳ ಸಲ ಇದನ್ನು ತಿಂದಿದ್ದೇನೆ. ಇದು ಹಳದಿ ಹಾಗೂ ಬಿಳಿಯ ಬಣ್ಣದಲ್ಲಿ ಸಿಗುತ್ತಿತ್ತು ಎಂದು ನೆನಪು. ಆದರೆ ಈ ಬಿಸ್ಕತ್ತು ಉಜಿರೆಯಲ್ಲಿ ನಾನು ತಿಂದಿರಲಿಲ್ಲ. ಇಂದ್ರರ ಗೂಡಂಗಡಿಯಲ್ಲಿ ನಾನು ಅಕ್ರೋಟ್ ಎಂಬ ಬೆಲ್ಲದ ಚಾಕೊಲೆಟ್ ತಿನ್ನುತ್ತಿದ್ದೆ. ನಂತರ ಬೆಂಗಳೂರಲ್ಲಿ ನವುಕರಿಯಲ್ಲಿದ್ದಾಗ ನೀವು 
ವಿವರಿಸಿದ ತಿಂಡಿ ತಿನ್ನುತ್ತಿದ್ದೆ. ಇಲ್ಲಿ ಇದಕ್ಕೆ ನಾನ್ ಕಟರ್/ಬೆಣ್ಣೆ ಬಿಸ್ಕತ್ತು ಎನ್ನುತ್ತಾರೆ.
Srikara Paranjape

ನಮ್ಮಲ್ಲಿ ಆಗಾಗ ಮಾಡುತ್ತಿದ್ದೆವು , ಈಗ ಅಪರೂಪ. ಜೂ. ಶಂಕರ್‌ಗೆ ಇದು ಬಲು ಇಷ್ಟ.
Subrahmanya Bhat

ಹೌದು.  ನನಗಿದು ಬಲು ಇಷ್ಟ.  ಅಜ್ಜಿ ಮತ್ತು ಅತ್ತೆ ಹೊಯ್ಗೆ ಓವನಿನಲ್ಲಿ ಇದನ್ನು ತಯಾರಿಸುತ್ತಿದ್ದರು. ಅನೇಕರು ಇದನ್ನು ಬೆಣ್ಣೆ ಬಟರ್ ಎಂದು ಗುರುತಿಸಿದ್ದನ್ನು ಗಮನಿಸಿದೆ.  ಆದರೆ ನಮ್ಮ ಕಡೆ ಬಟರ್ ಅಥವಾ ಬೆಣ್ಣೆ ಬಟರ್ (ಬಾರ್ ಸೋಪ್ ಸಾಬೂನು!) ಅಂದರೆ ನೋಡಲು ಹೀಗೆಯೇ ಇರುವ ಆದರೆ ಟೋಸ್ಟ್, ರಸ್ಕುಗಳಂತೆ ಗಟ್ಟಿಯಾದ ಬೇಕರಿ ಉತ್ಪನ್ನ.
Jr Shanmkar

ಮೊದಲು ಮನೆಯಲ್ಲಿ ಎಲ್ಲಾ ready ಮಾಡಿ bakeryಗೆ ಕೊಟ್ಟು bake ಮಾಡಿಸುತ್ತಿದ್ದೆವು. ಇದು ನಾನು primary school ನಲ್ಲಿ ಓದುವ timeನ ವಿಷಯ.
Shubha Mallya

ನಮ್ಮಲ್ಲಿ ನಾರಾಯಣ ಕಠಾರಿ ಅಂತ ಹೆಸರು. ಬೆಣ್ಣೆ ಬಟರ್, ಬಟರ್ ಬಿಸ್ಕತ್ತು ಇವೆಲ್ಲ ಬೇರೆಯ ತಿಂಡಿ - ಚಪ್ಪೆಯದು. ನಾರಾಯಣ ಕಠಾರಿ ಅಥವಾ ನಾನ್ ಕಥಾಯಿ ಶುಧ್ಧಾಂಗ ಸಿಹಿ ತಿಂಡಿ. ಮೈದಾ ಹಿಟ್ಟು, ಪುಡಿ ಮಾಡಿದ ಸಕ್ಕರೆಯನ್ನು - ಬಹುಶಃ ಸಮ ಪ್ರಮಾಣದಲ್ಲಿ, ಬೆಣ್ಣೆ ಅಥವಾ ಡಾಲ್ಡಾ /ವನಸ್ಪತಿ ಯಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಪುಟ್ಟ ಉಂಡೆ ಕಟ್ಟಿ ಕೆಳಗೆ ಮತ್ತು ಮೇಲೆ ಕೆಂಡದ ಉರಿಯಲ್ಲಿ ಕಾಯಿಸಿದರೆ ಈ ರುಚಿಯಾದ ಸಿಹಿ ತಿಂಡಿ ರೆಡಿ. ಬೇಕರಿ ಸುಲಭವಿಲ್ಲದಿದ್ದರೆ ಹಳೆಯ ಪ್ರೆಶರ್ ಕುಕರ್ ನ ಒಳಗೆ ಹೊಯಿಗೆ ಹಾಕಿ ಎಲ್ಯುಮಿನಿಯಂ ತಟ್ಟೆಯಲ್ಲಿ ಉಂಡೆಗಳನ್ನಿಟ್ಟು ಮೇಲಿಂದ ಮಡಿಕೆ ಮುಚ್ಚಳದಲ್ಲಿ ಕೆಂಡ ಹಾಕಿ ಬೇಯಿಸಬಹುದು. ಒವೆನ್ ನಲ್ಲಿ ಬೇಗನೇ ಕಾಯಿಸಬಹುದು, ಆದರೆ ನಿಧಾನವಾಗಿ ಬೇಯಿಸಿದ ಸಮಕ್ಕೆ ಬರುವುದಿಲ್ಲ.
ಬಹಳ ರುಚಿ ಅಂತ ಒಂದೆರಡಕ್ಕಿಂತ ಹೆಚ್ಚು ತಿಂದರೆ ಕಷ್ಟ 😂, ಮೈದಾ + ಎಣ್ಣೆ ಅಲ್ವಾ, ಅಜೀರ್ಣಕಾರಿ.
A.P. Subrahmanyam

ನಾನ್ ಖಟಯ್ ಬೆಣ್ಣೆ ಬಿಸ್ಕತ್ ಗುಜರಾತ್ ಕಡೆ.|
Sreelatha Reddy

ನಮ್ಮ ಮಿತ್ರರೆಲ್ಲರು ರಜೆಇಂದ ಹಿಂದೆ ಬರುವಾಗ ತಪ್ಪದೇ ಮಂಗಳೂರಿನ ತಾಜ್ಮಹಲ್, ಪ್ರಭು ಸ್ವೀಟ್ಸ್, ಶ್ರೇಯಸ್ ಸ್ವೀಟ್ಸ್, ರಾಮ ಭವನ ಅಥವಾ ಮೂಡುಬಿದಿರೆ ನವಭಾರತ ಬೇಕರಿ, ಕಾಮತ್ ಬೇಕರಿ ಇಂದ ಬರುವ ಸಿಹಿತಿಂಡಿಯ ಪೊಟ್ಟಣದಲ್ಲಿ ಈ ನಾರಾಯಣ ಕಟಾರ ಇದ್ದೇ ಇರುತ್ತದೆ.
ತುಂಬಾ ಸ್ವಾದಭರಿತವಾಗಿರುತ್ತದೆ.
Ramdas Kamath

ಪುಣೆಯಲ್ಲಿ ಇದಕ್ಕೆ ನಾನ್ ಕಟಾಯಿ ಎಂದೇ ಹೇಳುತ್ತಾರೆ.
P.B. Kakathkar

ಇದು ಬೆಣ್ಣೆ ಬಿಸ್ಕತ್ ಅಲ್ಲವೇ.
ಇತ್ತೀಚೆಗೆ ರಾಗಿ ಹಿಟ್ಟನ್ನು ಬಳಸಿ ಮಾಡುತ್ತಿದ್ದಾರೆ.
Jagannath BP

ಮನೆಯಲ್ಲೇ ಕುಕರ್ ನಲ್ಲಿ ಮಾಡಬಹುದು. ಆದರೆ- ಓರಿಯೆಂಟಲ್ ಬೇಕರಿ ಕಾರ್ಕಳದಲ್ಲಿ ಮಾಡಿದಷ್ಟು ಸ್ವಾದ ನಮ್ಮಿಂದ ಮಾಡಲಿಕ್ಕಾಗಲಿಕ್ಕಿಲ್ಲ. ನಾರಾಯಣ ಕಠಾರಿ ಅನ್ನುತ್ತಿದ್ದೆವು.
Mukiund Chiplunkar

ಬಾಲ್ಯದಲ್ಲಿ ಸಂಜೆಯ ಚಾಗೆ ಇದು ಕೊಡದಿದ್ದರೆ ಅಳುತ್ತಿದ್ದ ನೆನೆಪು.
Jayakumar Hegde

ಕಾರ್ಕಳದಲ್ಲೂ ನಾರಾಯಣ್ ಕಟರ್  ಹೆಸರಿಂದಲೇ ಫೇಮಸ್ ಆಗಿತ್ತು.
Srivathsa Joshi

ಶಿವರಾಮ ಕಾರಂತರ ಯಾವುದೋ ಒಂದು ಕಾದಂಬರಿಯಲ್ಲಿ..
ನಾನ್ ಕಠಾಯಿಯ ಉಲ್ಲೇಖ ಇದ್ದ ನೆನಪು.
ಬಂಟ್ವಾಳದ ಬಾಳಿಗರು...
ನಮ್ಮ ಬ್ಯಾಂಕಿಗೆ...
ಎರಡು ದೊಡ್ಡ ಬ್ಯಾಗ್ ಹಿಡ್ಕೊಂಡು
ಬಂದು..
ಬಟರ್ ಉಂಟು ..ಕಠಾರ್ ಉಂಟು
ಅಂತ ಹೇಳಿ...
ಹಲ್ವದ ತುಂಡು ಸ್ಯಾಂಪಲ್ ಕೊಡ್ತಿದ್ರು.
ಅವರು ನಾರಾಯಣ ಕಠಾರ್ ಅಂತಲೇ ಹೇಳ್ತಾ ಇದ್ದದ್ದು.
Moorthy Deraje

ಆ ಕಾಲದಲ್ಲಿ ಓವನ್ ಇತ್ತೇ?
ಅಥವಾ ಬೇರೆ ರೀತಿಯಲ್ಲಿ ಬೇಕ್ ಮಾಡುತ್ತಿದ್ದರೆ?
Shankara Hebbar

ಬೆಣ್ಣೆ ಬಿಸ್ಕಟ್ ಅಂತಾರೆ... .......
ಹೌದು .... ಸವಿನೆನಪುಗಳು ಬೇಕು ಸವಿಯಲೀ ಬದುಕು..ನೀವು ಇಂದ್ರರ ಹೋಟೆಲ್ ನೆನಪಿಸಿದಾಗ ನನಗೆ ನನ್ನ ಕಾಲೇಜು ಜೀವನದ (1973 ರಿಂದ1976 ರ ವರೆಗಿನ ಉಜಿರೆ ಕಾಲೇಜಿನ ಹಾಗೂ ಸಿದ್ಧವನ ಗುರುಕುಲ ಜೀವನ) ಸಮಯದಲ್ಲಿ ಅಲ್ಲಿ "ಕುಡ್ತೆ" ಹಾಲು ಕುಡಿಯುತ್ತಿದ್ದುದ್ದು ನೆನಪಾಯಿತು)
Suryanarayana KG

******

ಆದರೆ ನಾರಾಯಣ ಕಟರ್ ಎಂಬ ನಾಮಕರಣ ಮಾಡಿದವರು ಯಾರು ಎಂಬುದು ಸದ್ಯಕ್ಕಂತೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಈ ಭಾಗದಲ್ಲಿ  ನಾನ್ ಖಟಾಯಿಯನ್ನು ಮೊದಲ ಬಾರಿ  ಪರಿಚಯಿಸಿದ ಯಾರೋ ನಾರಾಯಣ ಎಂಬವರ ಹೆಸರು ಇದರೊಂದಿಗೆ  ತಳಕು ಹಾಕಿಕೊಂಡಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.