ನಾನು 1969ರಿಂದ ನಿಯಮಿತವಾಗಿ ದಿನಚರಿ ಬರೆಯುತ್ತಾ ಬಂದಿದ್ದೇನೆ. ದಿನಚರಿ ಅಂದರೆ ಸಾಮಾನ್ಯವಾಗಿ ಮುಖ್ಯವೆನ್ನಿಸಿದ ಘಟನೆಗಳನ್ನು ಮಾತ್ರ ದಾಖಲಿಸುತ್ತಾ ಹೋಗುವುದು ವಾಡಿಕೆ. ಹಾಗಾಗಿ ವಿಶೇಷವೇನೂ ಘಟಿಸದ ಕೆಲವು ದಿನಗಳ ಪುಟಗಳು ಖಾಲಿ ಉಳಿಯುವುದೂ ಉಂಟು. ಉಜಿರೆಯಲ್ಲಿ B.Sc ಮುಗಿಸಿದ ಮೇಲೆ 1972 ಇಸವಿ ಪೂರ್ತಿ ಕಾಲೇಜು, ಪರೀಕ್ಷೆ ಇತ್ಯಾದಿಗಳ ತಲೆ ಬಿಸಿ ಇಲ್ಲದೆ ಮನೆಯಲ್ಲಿ ಆರಾಮವಾಗಿದ್ದೆ. ಆಗ ಈಗಿನಂತೆ ಕ್ಯಾಂಪಸ್ ಸಿಲೆಕ್ಷನ್ ಇತ್ಯಾದಿಗಳ ಪರಿಕಲ್ಪನೆ ಇರಲಿಲ್ಲ. ಪದವಿ ಮುಗಿಸಿದ ಮೇಲೆ ಮುಂದೇನು ಎಂದು ನಮಗೆ ಕಾಲೇಜಲ್ಲೂ ಮಾರ್ಗದರ್ಶನ ಮಾಡಿದ್ದಿಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ಬಂದ ಜಾಹೀರಾತುಗಳನ್ನು ಗಮನಿಸುತ್ತಾ ಉದ್ಯೋಗಕ್ಕೆ ಅರ್ಜಿ ಗುಜರಾಯಿಸುವುದಷ್ಟೇ ನನ್ನ ಕೆಲಸವಾಗಿತ್ತು. ಆಗಿನ್ನೂ ಜೆರಾಕ್ಸ್ ಯುಗ ಆರಂಭವಾಗದಿದ್ದುದರಿಂದ ಮಾರ್ಕ್ಸ್ ಕಾರ್ಡುಗಳ ಕಾಪಿಗಳನ್ನು ಟೈಪ್ ಮಾಡಿಸಿ ಗಜೆಟೆಡ್ ಆಫೀಸರುಗಳಿಂದ attest ಮಾಡಿಸಿ ಇಟ್ಟುಕೊಳ್ಳಬೇಕಾಗುತ್ತಿತ್ತು. ಇದಿಷ್ಟು ಬಿಟ್ಟರೆ ಉಳಿದಂತೆ ನನಗೆ ಸಾಕಷ್ಟು ಸಮಯ ದೊರಕುತ್ತಿತ್ತು. ಹೀಗಾಗಿ ಆ ವರ್ಷ ಒಂದೂ ಪುಟ ಬಿಡದೆ ವಿವರವಾಗಿ ದಿನಚರಿ ಬರೆಯಲು ನನಗೆ ಸಾಧ್ಯವಾಗಿತ್ತು. ಅದರಲ್ಲಿ ನನ್ನೊಬ್ಬನ ಚಟುವಟಿಕೆಗಳ ಬಗ್ಗೆ ಮಾತ್ರವಲ್ಲದೆ ಮನೆಯ ಹಾಗೂ ಬಂಧು ಬಳಗದ ಎಲ್ಲರಿಗೆ ಸಂಬಂಧಪಟ್ಟ ವಿವರಗಳನ್ನು ದಾಖಲಿಸಿದ್ದರಿಂದ ಇತ್ತೀಚೆಗೆ ಕಂತುಗಳಾಗಿ ಅದನ್ನು ನಮ್ಮ ಕುಟುಂಬದ ಗ್ರೂಪಲ್ಲಿ ಹಂಚಿಕೊಂಡಿದ್ದೆ. ಕೆಲವರಿಗೆ ಹಳೆಯ ನೆನಪುಗಳು ಮರುಕಳಿಸಿದ್ದರಿಂದ, ಇನ್ನು ಕೆಲವರಿಗೆ ಗೊತ್ತಿಲ್ಲದ ವಿಷಯಗಳು ತಿಳಿದದ್ದರಿಂದ ಅದು ತುಂಬಾ ಜನಪ್ರಿಯವಾಯಿತು.
ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಅದರಲ್ಲಿ ಒಂದೆಡೆ ಉದಯವಾಣಿ ಪತ್ರಿಕೆಯ ಜನತಾವಾಣಿಗೆ ಪತ್ರ ಬರೆದೆನು ಎಂಬ ದಾಖಲೆ ಇತ್ತು. ಆದರೆ ಯಾವ ವಿಷಯದ ಬಗ್ಗೆ ಎಂಬ ವಿವರಗಳು ಇರಲಿಲ್ಲ. ಇತೀಚೆಗೆ ಅಂತರ್ಜಾಲದಲ್ಲಿ ಹಳೆಯ ಕೋಟಿ ಚೆನ್ನಯ ತುಳು ಚಿತ್ರ ವೀಕ್ಷಿಸಿದಾಗ ಝಗ್ಗನೆ ಅದರ ಸುಳಿವು ಸಿಕ್ಕಿತು.
ಅದಾಗಲೇ 1971ರಲ್ಲಿ ಎನ್ನ ತಂಗಡಿ ಮತ್ತು ದಾರೆದ ಬುಡೆದಿ ಹಾಗೂ 1972ರಲ್ಲಿ ಪಗೆತ ಪುಗೆ ಮತ್ತು ಬಿಸತ್ತಿ ಬಾಬು ತುಳು ಚಿತ್ರಗಳು ಬಂದಿದ್ದವು. ಬಿಸತ್ತಿ ಬಾಬು ಅಂತೂ ಭರ್ಜರಿ 75 ದಿನಗಳ ಪ್ರದರ್ಶನವನ್ನೂ ದಾಖಲಿಸಿತ್ತು. ಹೀಗಾಗಿ ತುಳುನಾಡಿನ ಚಾರಿತ್ರಿಕ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಚಿತ್ರ ತಯಾರಾಗುತ್ತಿರುವುದು ಎಲ್ಲರಲ್ಲೂ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸಿತ್ತು. ಹಿಂದಿ ಚಿತ್ರರಂಗದಲ್ಲಿ ಫೈಟರ್ ಶೆಟ್ಟಿ ಎಂದು ಪ್ರಸಿದ್ಧರಾಗಿದ್ದ ಮುದ್ದು ಶೆಟ್ಟಿ ಅವರು ಚಂದುಗಿಡಿಯ ಪಾತ್ರ ಹಾಗೂ ಮಿನುಗು ತಾರೆ ಕಲ್ಪನಾ ಅತಿಥಿ ಕಲಾವಿದೆಯಾಗಿ ದೇಯಿ ಬೈದೆತಿ ಮತ್ತು ಕಿನ್ನಿದಾರು ಎಂಬ ಎರಡು ಪಾತ್ರಗಳನ್ನು ಆ ಚಿತ್ರದಲ್ಲಿ ನಿರ್ವಹಿಸುವುದು ಇನ್ನೊಂದು ಆಕರ್ಷಣೆಯಾಗಿತ್ತು. ಉದಯವಾಣಿಯ ಸಿನಿಮಾ ಪುಟದಲ್ಲಿ ಪ್ರತೀ ವಾರವೂ ಈ ಚಿತ್ರದ ಒಂದಾದರೂ ಸ್ಥಿರ ಚಿತ್ರ ಪ್ರಕಟವಾಗುತ್ತಿತ್ತು. ಹೀಗೆ ಒಂದು ಸಲ ಕಲ್ಪನಾ ಕಾಲಿಗೆ ಹವಾಯಿ ಚಪ್ಪಲ್ ಧರಿಸಿ ಕೈಯಲ್ಲಿ ಬಿಂದಿಗೆ ಹಿಡಿದ ಒಂದು ಚಿತ್ರ ಪ್ರಕಟವಾದಾಗ ‘ಕೋಟಿ ಚೆನ್ನಯರ ಕಾಲದಲ್ಲಿ ಹವಾಯಿ ಚಪ್ಪಲ್‌ಗಳಿದ್ದವೇ?’ ಎಂದು ಎಲ್ಲರೂ ಮೂಗಿಗೆ ಬೆರಳೇರಿಸಿದರು. ಮರುದಿನವೇ ನಾನೂ ಈ ವಿಷಯದ ಬಗ್ಗೆ ಜನತಾವಾಣಿಗೆ ಪತ್ರ ಬರೆದೆ. ಇದರ ಉಲ್ಲೇಖವೇ ದಿನಚರಿಯಲ್ಲಿ ಇರುವುದು. ಆಕಾಶವಾಣಿಗೆ ನಾನು ಆಗಲೇ ಅನೇಕ ಪತ್ರಗಳನ್ನು ಬರೆದಿದ್ದರೂ ಪತ್ರಿಕೆಗೆ ಕಳಿಸಿದ ಮೊದಲ ಪತ್ರ ಅದಾಗಿತ್ತು. ಉದಯವಾಣಿಯಲ್ಲಿ ಆ ಪತ್ರ ಪ್ರಕಟವಾಯಿತೇ ಎಂದು ನೆನಪಿಲ್ಲ. ಆದರೆ ಈ ವಿಚಾರದ ಬಗ್ಗೆ ಪತ್ರಿಕೆಗಳಲ್ಲಿ ಬಹಳ ಚರ್ಚೆ ಆಯಿತು. ಕೊನೆಗೆ ಕಲ್ಪನಾ ಅವರೇ ‘ಅದು ದೃಶ್ಯದ ಅಭ್ಯಾಸ ನಡೆಸುತ್ತಿದ್ದಾಗಿನ ಫೋಟೋವೇ ಹೊರತು ಚಿತ್ರದ ನಿಜವಾದ ಸನ್ನಿವೇಶದ್ದಲ್ಲ. ಸಿನಿಮಾ ದೃಶ್ಯಗಳಲ್ಲಿ ನಾನೆಂದೂ ಇಂತಹ ಅಭಾಸಗಳಿಗೆ ಎಡೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟೀಕರಣ ನೀಡಬೇಕಾಯಿತು.
ಸಿನಿಮಾಗಳ ಟೈಟಲ್‌ಗಳಲ್ಲಿ ಸ್ಥಿರಚಿತ್ರ ಅಥವಾ ಸ್ಟಿಲ್ಸ್ ಇಂಥವರಿಂದ ಎಂಬ ಉಲ್ಲೇಖ ಇರುವುದನ್ನು ನೀವು ಗಮನಿಸಿರಬಹುದು. ಮೂವಿ ಕ್ಯಾಮರಾದಲ್ಲಿ ಸಿನಿಮಾ ಚಿತ್ರೀಕರಣ ಆಗುವಾಗ ಸ್ಟಿಲ್ ಕ್ಯಾಮರಾದಲ್ಲೂ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತದೆ. ಸಿನಿಮಾ ದೃಶ್ಯಗಳನ್ನು ಕಥೆಯ ಓಟದಂತೆ ಕ್ರಮವಾಗಿ ಚಿತ್ರಿಸದೆ ಅನುಕೂಲಕ್ಕೆ ತಕ್ಕಂತೆ ವಿವಿಧ ಸನ್ನಿವೇಶಗಳನ್ನು ಹಿಂದು ಮುಂದಾಗಿ ಚಿತ್ರೀಕರಣ ಮಾಡಿಕೊಳ್ಳುತ್ತಾರೆ. ಆಯಾ ದೃಶ್ಯಗಳಲ್ಲಿದ್ದ ಪಾತ್ರಗಳ ಉಡುಪು, ಸುತ್ತಮುತ್ತಲಿನ ವಸ್ತುಗಳು ಮುಂತಾದವುಗಳ continuityಗೆ ಈ ಸ್ಥಿರ ಚಿತ್ರಗಳು ಬೇಕಾಗುತ್ತವೆ. ಥಿಯೇಟರುಗಳ ಶೋಕೇಸಲ್ಲಿ ಪ್ರದರ್ಶಿಸುವ ಲಾಬಿ ಕಾರ್ಡುಗಳಲ್ಲೂ ಕೆಲವು ಸಲ ಸ್ಟಿಲ್ ಚಿತ್ರಗಳು ಇರುವುದುಂಟು. ಹೀಗಾಗಿ ಅಲ್ಲಿ ಕಂಡ ದೃಶ್ಯ ಸಿನಿಮಾದಲ್ಲಿ ಇಲ್ಲದೆಯೂ ಇರಬಹುದು. ಕೋಟಿಚೆನ್ನಯದ ವಿಷಯದಲ್ಲೂ ಹೀಗೆಯೇ ಆದದ್ದು. ಹವಾಯಿ ಚಪ್ಪಲ್ ಧರಿಸಿ ನಟಿ ಕಲ್ಪನಾ ದೃಶ್ಯ ಅಭ್ಯಾಸ ಮಾಡುವಾಗ ತೆಗೆದ ಸ್ಟಿಲ್ ಫೋಟೋ ಸರಿಯಾಗಿ ಪರಿಶೀಲಿಸಲ್ಪಡದೆ ಪತ್ರಿಕೆಯಲ್ಲಿ ಕಾಣಿಸಿ ಅವಾಂತರ ಸೃಷ್ಟಿಸಿತ್ತು. ‘ಕೋಟಿ ಚೆನ್ನಯ ಚಿತ್ರದಲ್ಲಿ ಕಲ್ಪನಾ’ ಎಂಬ ಮಾಮೂಲಿ ಶೀರ್ಷಿಕೆ ಆ ಚಿತ್ರಕ್ಕಿದ್ದುದು ಓದುಗರನ್ನು ಗೊಂದಲಕ್ಕೀಡು ಮಾಡಿದ್ದು ಸಹಜವೇ.
1973ರಲ್ಲಿ ನನಗೆ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರಕಿ ಮೇ 15ರಂದು ಮಂಗಳೂರಲ್ಲಿ ನನ್ನ ನೇಮಕಾತಿಯಾಯಿತು. ಅಷ್ಟರಲ್ಲಿ ಕೋಟಿ ಚೆನ್ನಯ ಚಿತ್ರದ ತಯಾರಿಯೂ ಪೂರ್ಣಗೊಂಡು ಜೂನ್ 4ರಂದು ಸೆನ್ಸಾರ್ ಆಗಿ ಜೂನ್ 15 ಶುಕ್ರವಾರದಂದು ಮಂಗಳೂರಿನ ಜ್ಯೋತಿ ಮತ್ತು ಉಡುಪಿಯ ಅಲಂಕಾರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ದಿನಾ 4 ದೇಖಾವೆ ಮತ್ತು ಭಾನುವಾರ 5 ದೇಖಾವೆಗಳಿದ್ದವು. ಬಿಡುಗಡೆ ಆಗಿ ಮೂರನೇ ದಿನ ಅಂದರೆ 17ನೇ ತಾರೀಕು ಭಾನುವಾರದಂದು ಅಪರಾಹ್ನ 11 ಗಂಟೆಯ ಎರಡನೇ ದೇಖಾವೆಯನ್ನು ರೂ1.95 ದರದ ಟಿಕೆಟ್ ಖರೀದಿಸಿ ಜ್ಯೋತಿ ಚಿತ್ರಮಂದಿರದ ಬಾಲ್ಕನಿಯಲ್ಲಿ ಕುಳಿತು ನೋಡಿದೆ. ಟಿಕೆಟ್ ಪಡೆಯಲು ಅಂಥ ನೂಕುನುಗ್ಗಲೇನೂ ಇರದಿದ್ದರೂ ಚಿತ್ರ ಮಂದಿರ ತುಂಬಿತ್ತು. ಕಲ್ಪನಾ ಇರುವ ದೃಶ್ಯಗಳಲ್ಲಿ ಅವರ ಕಾಲಿನಲ್ಲಿ ಹವಾಯಿ ಚಪ್ಪಲ್ ಏನಾದರೂ ಕಾಣಿಸುತ್ತದೆಯೇ ಎಂದು ಕಣ್ಣಲ್ಲಿ ಎಣ್ಣೆ ಹಾಕಿ ಗಮನಿಸಿ ಇಲ್ಲ ಎಂದು ಖಚಿತ ಪಡಿಸಿಕೊಂಡೆ!
ಮಿತ್ರರ ಒತ್ತಾಯದ ಮೇಲೆ 26ನೇ ತಾರೀಕಿನಂದು ಪುನಃ ಆ ಚಿತ್ರ ನೋಡಿದೆ. ನವಂಬರ್ 1 ರಂದು
ಎಡಕಲ್ಲು ಗುಡ್ಡದ ಮೇಲೆ ಚಿತ್ರ ತೆರೆಕಾಣುವ ವರೆಗೆ ಇದು ಜ್ಯೋತಿ ಚಿತ್ರಮಂದಿರದಲ್ಲಿ 139
ದಿನ ಯಶಸ್ವಿಯಾಗಿ ಪ್ರದರ್ಶಿತವಾಯಿತು.
ವಿಜಯ ಭಾಸ್ಕರ್ ಅವರ ಸಂಗೀತ ಎಂದು ಪತ್ರಿಕೆಗಳಲ್ಲಿ ಬಂದಿದ್ದರೂ ಪಿ.ಬಿ.ಶ್ರೀನಿವಾಸ್, ಹೆಚ್.ಎಂ. ಮಹೇಶ್ ಮತ್ತು ಎಸ್. ಜಾನಕಿ ಹಾಡಿದ ನಾಲ್ಕು ಹಾಡುಗಳು ಇರುವುದೆಂದು ನನಗೆ ಚಿತ್ರ ನೋಡಿದಾಗಲೇ ಗೊತ್ತಾದದ್ದು. ಆಗ ಗ್ರಾಮೊಫೋನ್ ಇರುವವರಲ್ಲಿ ಅಥವಾ ರೇಡಿಯೋ ಸಿಲೋನ್‌ನಲ್ಲಿ ಮಾತ್ರ ತುಳು ಹಾಡುಗಳು ಕೇಳಲು ಸಿಗುತ್ತಿದ್ದುದು. ಮುಂದೆ 1976ರಲ್ಲಿ ಆಕಾಶವಾಣಿ ಮಂಗಳೂರು ಕೇಂದ್ರ ಆರಂಭವಾದ ಮೇಲಷ್ಟೇ ತುಳು ಚಿತ್ರಗೀತೆಗಳು ನಿಯಮಿತವಾಗಿ ಕೇಳಲು ಸಿಗತೊಡಗಿದವು.
ಚಿತ್ರದ ನಾಲ್ಕು ಹಾಡುಗಳ ವಿವರ ಹೀಗಿದೆ.
1. ಜೋಡು ನಂದಾ ದೀಪ ಬೆಳಗ್‌ಂಡ್
ಪ್ರಸಿದ್ಧ ವಿದ್ವಾಂಸ ಅಮೃತ ಸೋಮೇಶ್ವರ ಅವರು ರಚಿಸಿದ ಈ ಹಾಡು ಕೋಟಿ ಚೆನ್ನಯರು ಜನಿಸಿದ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ಕೇಳಿಸುತ್ತದೆ. ಪಿ.ಬಿ. ಶ್ರೀನಿವಾಸ್ ಮತ್ತು ಸಂಗಡಿಗರ ಧ್ವನಿ ಇರುವ ಈ ಹಾಡಿನ ಮೇಲೆ ಗೈಡ್ ಚಿತ್ರದ ಪಿಯಾ ತೋಸೆ ನೈನಾ ಲಾಗೇರೆ ಹಾಡಿನ ರಾತ್ ಕೋ ಜಬ್ ಚಾಂದ್ ಚಮ್‌ಕೆ ಭಾಗದ ದಟ್ಟ ಪ್ರಭಾವ ಇದೆ.
2. ಮೊಕುಲು ವೀರೆರ್ ಮೊಕುಲು ಶೂರೆರ್
ಪಿ.ಬಿ.ಶ್ರೀನಿವಾಸ್ ಹಾಡಿರುವ ಈ ಹಿನ್ನೆಲೆ ಹಾಡನ್ನು ರಚಿಸಿದವರು ಚಿತ್ರದ ನಿರ್ದೇಶಕ ವಿಶುಕುಮಾರ್. ಲೇಖಕ, ನಾಟಕ ಕರ್ತ ಆಗಿದ್ದ ವಿಶುಕುಮಾರ್, ಮುಂಬಯಿಯಲ್ಲಿ ಪತ್ರಕರ್ತರಾಗಿದ್ದು ಆ ಮೇಲೆ ತರಂಗ ಸಾಪ್ತಾಹಿಕದ ಚುಕ್ಕಾಣಿ ಹಿಡಿದ ಸಂತೋಷ್ ಕುಮಾರ್ ಗುಲ್ವಾಡಿ ಮತ್ತು ಅಶೋಕ್ ಚರಣ್ ನೈಟ್ ಹೆಸರಲ್ಲಿ ಸಂಗೀತ ಸಂಜೆಗಳನ್ನು ನಡೆಸುತ್ತಿದ್ದು ಆ ಮೇಲೆ ಬೊಳ್ಳಿದೋಟ ಸಿನಿಮಾದ ದಾನೆ ಪೊಣ್ಣೆ ಹಾಡಿನಿಂದ ಬಲು ಪ್ರಸಿದ್ಧರಾದ ಚರಣ್ ಕುಮಾರ್ - ಈ ಮೂವರು ದಕ್ಷಿಣ ಕನ್ನಡದ ಕೀರ್ತಿಯನ್ನು ಎತ್ತರಕ್ಕೇರಿಸಿದ ಕುಮಾರತ್ರಯರು ಎಂದು ಕೆಲವರು ಹೇಳುವುದಿದೆ.
3. ಎಕ್ಕಸಕ
ಅವಳಿ ತಮ್ಮಂದಿರಾದ ಕೋಟಿ ಚೆನ್ನಯರು ಅನಿರೀಕ್ಷಿತವಾಗಿ ತನ್ನ ಮನೆಗೆ ಆಗಮಿಸಿದಾಗ ಅಕ್ಕ ಕಿನ್ನಿದಾರು ಖುಶಿಯಿಂದ ಹಾಡುವ ಈ ಹಾಡನ್ನು ಬರೆದವರು ಪ್ರೊ. ವಿವೇಕ ರೈ. ಧ್ವನಿ ಎಸ್. ಜಾನಕಿ ಅವರದ್ದು. ಚಿತ್ರದ ಎಲ್ಲ ಹಾಡುಗಳ ಪೈಕಿ ಇದು ಹೆಚ್ಚು ಜನಪ್ರಿಯತೆ ಗಳಿಸಿತು. ಎಕ್ಕಸಕ ಎಂಬುದು ದಿನ ನಿತ್ಯದ ತುಳು ಸಂಭಾಷಣೆಯಲ್ಲಿ ಬರುವ ಪದವಲ್ಲ. ಅನಿರೀಕ್ಷಿತವಾದ ಆನಂದೋದ್ವೇಗದ ನಡವಳಿಕೆ ಎಂಬ ಅರ್ಥ ಇದಕ್ಕಿದೆಯಂತೆ. ನಾನು ಕಾರ್ಯಕ್ರಮಗಳಲ್ಲಿ ನುಡಿಸುವ ದಾಂಡಿಯಾ ಮೆಡ್ಲೆಯಲ್ಲಿ ಈ ಹಾಡಿನ ತುಣುಕು ಇರುತ್ತದೆ. ಇದರ ಅನೇಕ remixಗಳೂ ಬಂದಿವೆ.
4. ಕೆಮ್ಮಲೆತ ಬ್ರಹ್ಮ
ಪಿ.ಬಿ.ಶ್ರೀನಿವಾಸ್ ಮತ್ತು ಹೆಚ್.ಎಂ. ಮಹೇಶ್ ಹಾಡಿರುವ ಇದನ್ನು ಬರೆದವರು ವಿಶುಕುಮಾರ್. ಒಂದೆರಡು ಪದಗಳಷ್ಟೇ ಮಹೇಶ್ ಅವರ ಸೋಲೊ ಧ್ವನಿಯಲ್ಲಿದ್ದು ಉಳಿದಂತೆ ಅವರು ಪಿ.ಬಿ.ಎಸ್ ಅವರೊಂದಿಗೆ ದನಿಗೂಡಿಸಿದ್ದಾರೆ. ನಂತರ ಅವರೇ ಮುಖ್ಯ ಗಾಯಕರಾಗಿ ಹಾಡಿದ ಅನೇಕ ತುಳು ಗೀತೆಗಳು ಜನಪ್ರಿಯವಾದವು. ಇದರ ಒಂದು interlude ಮಧುಮತಿ ಚಿತ್ರದ ಟೂಟೆ ಹುವೆ ಖ್ವಾಬೋ ನೆ ಹಾಡಿನಿಂದ ನೇರ ಎತ್ತಿಕೊಂಡದ್ದಾಗಿದೆ.
ವಿಜಯಭಾಸ್ಕರ್ ನೈಟ್ ಕಾರ್ಯಕ್ರಮದಲ್ಲಿ ಕೆಮ್ಮಲೆತಾ ಬ್ರಹ್ಮ ಹಾಡುತ್ತಿರುವ ಪಿ.ಬಿ.ಶ್ರೀನಿವಾಸ್ ಮತ್ತು ಹೆಚ್.ಎಂ. ಮಹೇಶ್.
ಹಾಡುಗಳನ್ನು ಇಲ್ಲಿ ಆಲಿಸಿ.
ಪಂಜೆ ಮಂಗೇಶ್ ರಾವ್ ಅವರು 1924ರಲ್ಲಿ ಬರೆದ ಕೋಟಿ ಚೆನ್ನಯ ಕೃತಿ ಇತ್ತೀಚೆಗೆ ಅಂತರ್ಜಾಲದಲ್ಲಿ ಓದಲು ಸಿಕ್ಕಿದಾಗ ಅದನ್ನು ಆಧರಿಸಿಯೇ ಈ ಸಿನಿಮಾ ನಿರ್ಮಾಣ ಮಾಡಿರಬಹುದು ಎಂದು ನನಗೆ ಅನ್ನಿಸಿತು. ಈ ಕೃತಿ ಮತ್ತು ಸಿನಿಮಾದ ಬಹುತೇಕ ಸನ್ನಿವೇಶಗಳು ಮತ್ತು ಸಂಭಾಷಣೆಗಳಲ್ಲಿ ಸಮಾನತೆ ಇದೆ. ಈ ಬಗ್ಗೆ ಸಿನಿಮಾದ ಟೈಟಲ್ಸ್‌ನಲ್ಲಿ ಅಧಿಕೃತ ಉಲ್ಲೇಖ ಇಲ್ಲ.
ಪಂಜೆಯವರು ಕೋಟಿ ಚೆನ್ನಯ ಕಥೆಯನ್ನು ಏನೆಕಲ್ಲು ಉಪಾದ್ಯಾಯರಾದ ಉಕ್ಕಣ್ಣ ಗೌಡರ ಸಹಕಾರದಿಂದ 1904ರಲ್ಲಿ ಸಂಗ್ರಹಿಸಿದರಂತೆ. 1909ರಲ್ಲಿ ಅವರಿಗೆ ಮೊಗ್ಲಿಂಗ್ ಅವರು ಸಂಗ್ರಹಿಸಿದ ತುಳು ಪಾಡ್ದೊನೆಳು ಕೃತಿ ದೊರಕಿತು. ಆ ಮೇಲೆ ಆವರು ಕಥೆಯ ರಂಗಸ್ಥಳಗಳಾಗಿದ್ದ ಪಂಜ ಪಡುಮಲೆ ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿಯ ಭೂತ
ಕಟ್ಟುವವರಿಂದ ಬೇರೆ ಬೇರೆ ಪಾಠಾಂತರಗಳನ್ನು ಸಂಗ್ರಹಿಸಿದರು. 1917ರಲ್ಲಿ ಆರ್.ಎಸ್. ಬಾಗಲೋಡಿಯವರ
ಸಹಕಾರದಿಂದ ಪಾಡ್ದೊನೆಗಳು ಕೃತಿಯ ಕನ್ನಡ ಅನುವಾದ ಮಾಡಿದರು. ಆದರೆ ವಿವಿಧ ಮೂಲಗಳ ವಿವರಗಳು ಒಂದಕ್ಕೊಂದು ತಾಳೆ ಆಗದ್ದರಿಂದ
ಈ ಯೋಜನೆ ಕೆಲವು ವರ್ಷ ನೆನೆಗುದಿಗೆ ಬಿತ್ತು. ಕೊನೆಗೆ ಅಕ್ರಮ, ವ್ಯರ್ಥ, ಪುನರುಕ್ತ, ಅಪಾರ್ಥ, ಹತೋಪಮೆ,
ಲೋಕನ್ಯಾಯ ವಿರುದ್ಧತೆ ಎಂಬ ವಚನದೋಷಗಳ ಪೈಕಿ ಪಾಡ್ದೊನೆಗಳಲ್ಲಿದ್ದ ಪ್ರಥಮ ಮೂರನ್ನು
ತೆಗೆದು ಕಥಾಭಾಗಗಳೆಲ್ಲ ಒಂದನ್ನೊಂದು ಕೂಡುವಂತೆ ಮಾಡಿ ಕೋಟಿ ಚೆನ್ನಯ ಕೃತಿ 1924ರಲ್ಲಿ
ಪ್ರಕಟವಾಯಿತು.
ಕಥಾ ಸಾರಾಂಶ
ಪಂಜೆಯವರ ಕೃತಿ ಮತ್ತು 1973ರ ಸಿನಿಮಾದಲ್ಲಿ ಸುಮಾರಾಗಿ ಸಮಾನವಾಗಿರುವ ಕಥಾ ಸಾರಾಂಶ ಇಷ್ಟು.
ಪಡುಮಲೆ, ಪಂಜ, ಎಣ್ಮೂರು ಎಂಬ ಮೂರು ಸೀಮೆಗಳಿಗೆ ಪೆರುಮಾಳ, ಕೇಮರ ಮತ್ತು ದೇವ ಎಂಬವರು ಬಲ್ಲಾಳರು. ಬೇಟೆಯಾಡಲು ಹೋದ ಪಡುಮಲೆ ಪೆರುಮಾಳ ಬಲ್ಲಾಳನ ಕಾಲಿಗೆ ಚುಚ್ಚಿದ ಮುಳ್ಳು. ಸಾಯಿನ ಬೈದ್ಯನ ತಂಗಿ ತುಂಬು ಬಸುರಿ ದೇಯಿಯ ಮದ್ದು. ಬಲ್ಲಾಳ ಗುಣಮುಖ. ಆದರೆ ಆಕೆಗೆ ಕೊಡುತ್ತೇನೆ ಎಂದು ಹೇಳಿದ್ದನ್ನು ಕೊಡಲು ಬಲ್ಲಾಳ ಮೀನ ಮೇಷ ಎಣಿಸಿದ. ಏನೋ ಒಂದಿಷ್ಟು ಕೊಟ್ಟು ಕಳಿಸುವಷ್ಟರಲ್ಲಿ ಆಕೆಗೆ ನೋವು ಆರಂಭವಾಗಿ ಬೀಡಿನಲ್ಲೇ ಹೆರಿಗೆಯಾಗಿ ಕೋಟಿ ಚೆನ್ನಯರ ಜನನ. ಪೆರುಮಾಳ ಬಲ್ಲಾಳನ ಆಶ್ರಯದಲ್ಲಿ ಬೆಳೆದು ದೊಡ್ಡವರಾದ ಕೋಟಿ ಚೆನ್ನಯರಿಗೆ ಮಂತ್ರಿ ಮಲ್ಲಯ್ಯ ಬುದ್ದಿವಂತನೊಂದಿಗೆ ವೈರ. ಆತನ ಕೊಲೆಯಲ್ಲಿ ಪರ್ಯವಸಾನ. ಪೆರುಮಾಳ ಬಲ್ಲಾಳನೊಂದಿಗೆ ಮನಸ್ತಾಪ. ಕೇಮರ ಬಲ್ಲಾಳನ ಪಂಜ ಸೀಮೆಗೆ ಕೋಟಿ ಚೆನ್ನಯರ ಪಯಣ. ಅಲ್ಲಿ ಅಕ್ಕ ಕಿನ್ನಿದಾರು, ಭಾವ ಪಯ್ಯಬೈದ್ಯನ ಭೇಟಿ. ಅಲ್ಲೇ ವಾಸ್ತವ್ಯ. ಕೇಮರ ಬಲ್ಲಾಳರ ಆಪ್ತ ಚಂದುಗಿಡಿಯೊಂದಿಗೆ ವೈರ. ಕೋಟಿ ಚೆನ್ನಯರು ಪಂಜ ಸೀಮೆಯಲ್ಲಿರುವುದನ್ನು ಅರಿತ ಪೆರುಮಾಳ ಬಲ್ಲಾಳ. ಅವರನ್ನು ಒಪ್ಪಿಸುವಂತೆ ಕೇಮರ ಬಲ್ಲಾಳನಿಗೆ ರಾಯಸ. ಚಂದುಗಿಡಿ ಮೋಸದಿಂದ ಕೋಟಿ ಚೆನ್ನಯರನ್ನು ಬಂಧನದಲ್ಲಿಟ್ಟ. ಅವರು ಅಲ್ಲಿಂದ ತಪ್ಪಿಸಿಕೊಂಡು ಎಣ್ಮೂರು ಸೀಮೆಗೆ ಹೋದರು. ಎಣ್ಮೂರಿನ ದೇವ ಬಲ್ಲಾಳ ಅವರನ್ನು ಸ್ವಾಗತಿಸಿದ. ಪಂಜದ ಕೇಮರ ಬಲ್ಲಾಳನೊಂದಿಗೆ ವ್ಯಾಜ್ಯವಿದ್ದ ಅಯ್ಯನೂರು ಗುತ್ತನ್ನು ಕೇಳಿ ಪಡೆದರು. ಹಂದಿ ಬೇಟೆಯ ನೆವದಿಂದ ಪಂಜದವರಿಗೂ ಕೋಟಿ ಚೆನ್ನಯರಿಗೂ ಹೊಯ್ ಕೈ. ಇದರಿಂದಾಗಿ ಪಡುಮಲೆಯ ಪೆರುಮಾಳ ಬಲ್ಲಾಳ ಮತ್ತು ಪಂಜದ ಕೇಮರ ಬಲ್ಲಾಳನ ಬಂಟ ಚಂದುಗಿಡಿಗೆ ಎಣ್ಮೂರಿನ ಮೇಲೆ ದಂಡೆತ್ತಿಹೋಗಲು ನೆವ ಸಿಕ್ಕಿತು. ಮೈತ್ರಿ ಮಾಡಿಕೊಂಡ ಪಡುಮಲೆ ಮತ್ತು ಪಂಜ ಹಾಗೂ ಎಣ್ಮೂರು ಸೀಮೆಯವರೊಳಗೆ ಕಾಳಗ. ಚಂದುಗಿಡಿ ಸತ್ತು ಪಡುಮಲೆ-ಪಂಜದವರು ಕದನದ ಕಳ ಬಿಟ್ಟು ಓಡಿದರು. ಆದರೆ ಕೋಟಿ ಚೆನ್ನಯರೂ ಕಾಳಗದಲ್ಲಿ ಹತರಾದರು. ಎಣ್ಮೂರು ದೇವ ಬಲ್ಲಾಳನು ಅವರ ಸಮಾಧಿಗಳನ್ನು ನಿರ್ಮಿಸಿ ಗರಡಿಗಳನ್ನು ಕಟ್ಟಿಸಿದನು. ಪೆರುಮಾಳ ಬಲ್ಲಾಳನೂ ಪಂಜದವರೊಡನೆ ಸೇರಿ ಅವರೊದನೆ ಹಗೆ ಸಾಧಿಸಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಅವರಿಗೆ ಗುಡಿಗಳನ್ನು ಕಟ್ಟಿಸಿ ಅವರ ಬಿಂಬಗಳನ್ನು ಸ್ಥಾಫಿಸಿದನು. ಕಾಲಕ್ರಮೇಣ ತುಳುನಾಡಿನ ಅನೇಕ ಸ್ಥಳಗಳಲ್ಲಿ ಅವರ ಗರಡಿಗಳು ಸ್ಥಾಪಿಸಲ್ಪಟ್ಟವು.
ಇದಿಷ್ಟು ಕಥಾಬಾಗವನ್ನು ಸುಂದರ ನುಡಿಕಟ್ಟು ಹಾಗೂ ಗಾದೆ ಮಾತುಗಳನ್ನು ಪೋಣಿಸಿ ಪಂಜೆಯವರು 63 ಪುಟಗಳ ಪುಸ್ತಕ ಮಾಡಿದರು, ವಿಶುಕುಮಾರರು ಒಂದೂವರೆ ಗಂಟೆ ಅವಧಿಯ 15 ರೀಲಿನ ಸಿನಿಮಾ ಮಾಡಿದರು.
ನುಡಿಕಟ್ಟು ಹಾಗೂ ಗಾದೆ ಮಾತುಗಳು
ಪಂಜೆಯವರ ಕೃತಿಯಲ್ಲಿರುವ ಕೆಲವು ನುಡಿಕಟ್ಟು ಹಾಗೂ ಗಾದೆ ಮಾತುಗಳು ಹೀಗಿವೆ.
ಹಾಲೆಮರಕ್ಕೆ ಹೋದ ಪಂಚವಳ್ಳಿ ಜಾತಿಯ ವೀಳ್ಯ, ಮಾವಿನ ಮರಕ್ಕೆ ಹೋದ ಮುಂಡುವಳ್ಳಿ ಜಾತಿಯ ವೀಳ್ಯ.
ಬೆಳೆಯ ಬಿಟ್ಟ ಬಳ್ಳಿ ಬೆಳೆಸಿದವನನ್ನೇ ಬಂಧಿಸಿ ಬಿಟ್ಟಿತು.
ಮೈ ಬೆವರಿನ ಉಪ್ಪಿನ ಸುಂಕವೋ, ಬಾಯಿ ವೀಳ್ಯದ ಸುಣ್ಣದ ಸುಂಕವೋ.
ಬಂಟರ ಕಾಲಿನ ಎಕ್ಕಡದ ಹೂವಿನ ಮೇಲೆ ಸುಂಕ, ಸೆಟ್ಟಿಯ ಕೊಡೆಯ ಕಾವಿನ ಮೇಲೆ ಸುಂಕ, ಅರಸುಮಗನ ದಂಡಿಗೆಯ ಕೊಂಬಿನ ಮೇಲೆ ಸುಂಕ.
ಬಿಂಕದ ಬಲ್ಲಾಳ ಸುಂಕದ ಕಲ್ಲಾಳ.
ನೂಲು ಹಾಕಿದವರಾದರೆ ಕೆಂದಾಳೆಯ ಪದ್ಮ ಕಟ್ಟೆ. ಒಕ್ಕಲಿಗರಾದರೆ ಬಡವರ ಚಪ್ಪರ, ಜಾತಿಯವರಾದರೆ ಮೊಗಸಾಲೆಯಲ್ಲಿ ತೂಗುಯ್ಯಾಲೆ.
ಉಲ್ಲಾಸದ ಏರ್ತ, ಉದ್ವೇಗದ ಇಳಿತ.
ಬಿತ್ತಿದ ಗದ್ದೆಗೆ ತೆವರಿ ಗಟ್ಟಿ ಇರಬೇಕು. ಹುಟ್ಟಿದ ಹೆಣ್ಣಿಗೆ ತವರು ಗಟ್ಟಿ ಇರಬೇಕು.
ಒಂದೇ ಮಡಕೆಯಲ್ಲಿ ಉಂಡ ಉಂಡಾಡಿಗಳು.
ನೀರು ಸೋಕಿದರೆ ಬಿಸಿ, ಗಾಳಿ ತಾಕಿದರೆಉರಿ ಎಂಬಂತಾಗು.
ಕಿಚ್ಚಿನ ಕಿಡಿಯೆಂದು ಗೊತ್ತಿದ್ದು ಕಚ್ಚೆಯಲ್ಲಿ ಕಟ್ಟಿಕೊಳ್ಳುವುದೇಕೆ.
ಮುಂಜಾನೆಯ ಮುಂಬಿಸಿಲಿಗೆ ಹಾಕಿಸಿ, ಸಂಜೆಯ ತಂಬಿಸಿಲಿಗೆ ತೆಗೆಯಿಸಿ ಸರಿಗೊಳಿಸಿದ ತಾಳೆಯ ಗರಿಗಳ ಕಟ್ಟು.
ಹಿತ್ತಾಳೆಯ ಕಿವಿ, ಕೆಸರುಗೂಟದ ಮನಸ್ಸು.
ಅಟ್ಟ ಅನ್ನದಲ್ಲಿ ಉಟ್ಟ ಉಡಿಗೆಯಲ್ಲಿ ಹೊರಟು ಬರಬೇಕು.
ಬಾಳೆಯಾಗಿ ಬೆಳೆಸಿದ್ದು ತಾಳೆಯಾಗಿ ತಲೆಯನ್ನು ಜಜ್ಜಿತು.
ಗೊತ್ತಾಗುವುದಕ್ಕೆ ಆರು ತಿಂಗಳಾದರೆ ಪೂರೈಸುವುದಕ್ಕೆ ಎಷ್ಟು ಕಾಲ ಬೇಕೋ?
ಆಳ ನೋಡಿ ತೊರೆಯನ್ನು ದಾಟಬೇಕು, ವೇಳೆ ನೋಡಿ ದೊರೆಯನ್ನು ಕಾಣಬೇಕು.
ಬಳ್ಳಿಯಷ್ಟು ಬಾವು ಇಲ್ಲ, ಮೂಗಿನಷ್ಟು ಮೊನೆಯಿಲ್ಲ.
ಇಂಬು ಎಂದು ನಂಬಿದ್ದು ಅಂಬು ಆಯಿತು.
ಕಳ್ಳು ಕುಡಿದು ಮೈ ಹಾಳು ಮಾಡಬಾರದು, ಸುಳ್ಳು ನುಡಿದು ಬಾಯಿ ಹೊಲಸು ಮಾಡಬಾರದು.
ಅಧರ್ಮ, ದಾರಿದ್ರ್ಯ, ರೋಗ, ಅಂತಃಕಲಹ ಇವೇ ಒಂದು ರಾಜ್ಯದ ತಿರುಳನ್ನು ತಿನ್ನುವ ಹುಳುಗಳು.
ಮುಂಜಾನೆಯ ನೆರಳಿನಂತೆ ಗಿಡ್ಡವಾಗು, ಸಂಜೆಯ ನೆರಳಿನಂತೆ ಉದ್ದವಾಗು.
ನಾಗರಹಾವನ್ನೂ ಕನ್ನಡಿ ಹಾವನ್ನೂ ಒಂದೇ ಬಿಲದಲ್ಲಿ ಇಟ್ಟಂತೆ.
ಜಗ ಇರುವಷ್ಟು ಕಾಲ ಜಗಳ ಇದೆ.
ಬೇಡುವ ಬಡವನು ಕೊಡುಗೈಯಾಗಿರುವ ಧೊರೆಗೆ ಬೇಕಾದವನಾಗುತ್ತಲೇ ಚಾಡಿಯ ಬಾಯಿ ತುರಿಸಹತ್ತುತ್ತದೆ.
ಅರಸನ ಕಿವಿಗೆ ತರಲೆ ಹಾಳು, ಬಾಗಿಲ ಕಿವಿಗೆ ಒರಲೆ ಹಾಳು.
ಉಂಡ ಉಣಿಸು ಕುತ್ತವಾಗು, ಕುಡಿದ ನೀರು ಪಿತ್ತವಾಗು.
ಬೂದುಗಣ್ಣಿನ ಮೊಲ, ಪಚ್ಚೆ ಕಾಲಿನ ಜಿಂಕೆ, ಕುಟುರುವ ಕುಡುಮುಲು ಹಕ್ಕಿ.
ಬಂಡೆ ಇದ್ದಲ್ಲಿ ಕಲ್ಲು, ಕಂಡಿ ಇದ್ದಲ್ಲಿ ಜನ, ಮೈದಾನು ಇದ್ದಲ್ಲಿ ನಾಯಿ.
ಓಡಿದರೆ ಮಾನದ ಮೇಲೆ ಬರುತ್ತದೆ, ನಿಂತರೆ ಪ್ರಾಣದ ಮೇಲೆ ಬರುತ್ತದೆ.
ಸುಗ್ಗಿಬೆಳೆಯ ಹುಲ್ಲುಸೂಡಿಗಳನ್ನು ಮಗುಚುವಂತೆ ಅಡ್ಡ ಹಾಕು.
ಬೆಂಕಿಗೆ ಚಳಿ ಹಿಡಿದರೆ, ನೀರಿಗೆ ಬಾಯಾರಿದರೆ, ಗಾಳಿಗೆ ಮೈ ಬೆವರಿದರೆ ನಿವಾರಿಸುವವರು ಯಾರು?
ಹಣೆಯನ್ನು ಕಡಿದು ಮಣೆಯಾಗಿ ಇಡು.
ಕಾಡಿ ಕಾಡಿ ಆಳಿದವರ ಹೆಸರು ಅಳಿಯಿತು, ನಾಡಿಗಾಗಿ ಕಾದಾಡಿ ಕಾಯ ಬಿಟ್ಟು ಕೈಲಾಸಕ್ಕೆ ಸಂದವರ ಹೆಸರು ಉಳಿಯಿತು.