ಹಿನ್ನೆಲೆ ಗಾಯಕರ ನಾಯಕ ಮಹಮ್ಮದ್ ರಫಿ ಭೌತಿಕವಾಗಿ ನಮ್ಮಿಂದ ಮರೆಯಾಗಿ ದಶಕಗಳೇ ಸಂದಿವೆ. ಆದರೆ ಇಂದಿಗೂ ರೇಡಿಯೊ, ಟಿ.ವಿ, ಸಿ.ಡಿ, ಐ ಪಾಡ್, ಮೊಬೈಲ್ ಫೋನ್ ಅಥವಾ ಇಂಟರ್ ನೆಟ್ ನಂತಹ ಯಾವುದಾದರೊಂದು ಮಾಧ್ಯಮದ ಮೂಲಕ ರಫಿಯ ಕೆಲವು ಹಾಡುಗಳನ್ನಾದರೂ ಆಲಿಸದೆ ಯಾವನೇ ಚಿತ್ರಸಂಗೀತ ಪ್ರೇಮಿಯ ಒಂದು ದಿನವೂ ಕಳೆಯಲಾರದು. ವಿಭಿನ್ನ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಅವರು ಹಾಡಿರುವ ಒಂದಷ್ಟು ಹಾಡುಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಇದು.
· ನೌಶಾದ್ :- ಅದೃಷ್ಟ ಪರೀಕ್ಷಿಸಲು ಮುಂಬಯಿಗೆ ಬಂದ ರಫಿ ಮೊದಲು ಭೇಟಿಯಾದದ್ದು ನೌಶಾದ್ ಅವರನ್ನೇ. ಶಾಮಸುಂದರ್,ಹುಸ್ನಲಾಲ್ ಭಗತರಾಮ್, ಗುಲಾಮ್ ಹೈದರ್ ಮುಂತಾದವರು ಆರಂಭದಲ್ಲಿ ಇವರಿಗೆ ಪ್ರೋತ್ಸಾಹ ನೀಡಿದರೂ ತಲತ್ ಮಹಮೂದ್ ಜತೆ ತೀವ್ರ ಸ್ಪರ್ಧೆ ಇದ್ದ ಕಾಲದಲ್ಲಿ ಬೈಜು ಬಾವ್ರಾ ಚಿತ್ರದಲ್ಲಿ ಇವರ ಪ್ರತಿಭೆ ಹೊರಹೊಮ್ಮುವಂತೆ ಮಾಡಿ ಮುಂಚೂಣಿಗೆ ಬರುವಂತೆ ಮಾಡಿದವರು ನೌಶಾದ್. ಈ ಮೊದಲೇ ಅಂದಾಜ್ , ಉಡನ್ ಖಟೋಲಾ , `ದೀದಾರ್ ಮುಂತಾದ ಚಿತ್ರಗಳಲ್ಲಿ ನೌಶಾದ್ ಗಾಗಿ ರಫಿ ಹಾಡಿದ್ದರೂ ಈ ಚಿತ್ರದ ಎಲ್ಲ ಹಾಡುಗಳು ಸುಪರ್ ಹಿಟ್ ಆಗಿ ರಫಿಯ ಪಾರಮ್ಯವನ್ನು ಜಗತ್ತಿಗೆ ಸಾರಿದವು. ಓ ದುನಿಯಾ ಕೆ ರಖವಾಲೆ ಯಲ್ಲಿ ಅವರ ಧ್ವನಿಯ ರೇಂಜ್ ಎಲ್ಲರನ್ನೂ ದಂಗು ಬಡಿಸಿತು. ಈ ಗೀತೆ ಇಂದಿಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಅಚ್ಚುಮೆಚ್ಚಿನದು. ಇದೇ ಚಿತ್ರದ ಮನ್ ತಡಪತ್ ಹಾಡು ಶಕೀಲ್ ಬದಾಯೂನಿ, ನೌಶಾದ್ ಹಾಗೂ ರಫಿ ಎಂಬ ಮೂವರು ಮುಸ್ಲಿಂ ಬಂಧುಗಳು ಸೇರಿ ಸೃಷ್ಟಿಸಿದ ಭಜನ್ ಎಂದೇ ಪ್ರಖ್ಯಾತ. ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದ ನೌಶಾದ್ ಸಾರಥ್ಯ ದಲ್ಲಿ ದುಲಾರಿ, ಕೊಹಿನೂರ್, ಲೀಡರ್, ಮೇರೆ ಮೆಹಬೂಬ್, ಗಂಗಾ ಜಮುನ, ದಿಲ್ ದಿಯಾ ದರ್ದ್ ಲಿಯಾ, ಸಾಜ್ ಔರ್ ಆವಾಜ್, ರಾಮ್ ಔರ್ ಶಾಮ್, ಆದ್ಮಿ ಮುಂತಾದ ಚಿತ್ರಗಳು ಎಂದಿಗೂ ಮರೆಯದ ರಫಿ ಹಾಡುಗಳನ್ನು ನಮಗೆ ನೀಡಿದವು. ಸಾಥಿ ಯಂತಹ ಕೆಲವು ಚಿತ್ರಗಳಲ್ಲಿ ಮುಕೇಶ್ ಅವರನ್ನು ಬಳಸಿಕೊಂಡದ್ದನ್ನು ಹೊರತುಪಡಿಸಿದರೆ ಸದಾ ಇವರ ಮುಖ್ಯ ಗಾಯಕ ರಫಿಯೇ ಆಗಿದ್ದರು.
· ಒ ಪಿ ನಯ್ಯರ್ :- ಇವರು ರಫಿಗೆ ಒಂದು ಸ್ಟೈಲ್ ಕೊಟ್ಟವರು. ಅಲ್ಲಿವರೆಗೆ ಭಕ್ತಿ ಗೀತೆ, ವಿರಹ ಗೀತೆ, ಹಾಸ್ಯ ಗೀತೆ, ಪ್ರೇಮ ಗೀತೆ ಎಲ್ಲವನ್ನೂ ವಿಷಾದದ ಛಾಯೆಯೊಡನೆ ಒಂದೇ ರೀತಿ ಹಾಡುತ್ತಿದ್ದ ರಫಿ ಅವರನ್ನು ಗುರುದತ್ ಅವರ ಆರ್ ಪಾರ್ ಹಾಗೂ ಶಮ್ಮಿ ಕಪೂರ್ ಅವರ ತುಮ್ ಸಾ ನಹೀಂ ದೇಖಾ ದಲ್ಲಿ ನಯ್ಯರ್ ಅವರು ಬೇರೆ ರೀತಿ ದುಡಿಸಿಕೊಂಡರು. ಧ್ವನಿಯ ಏರಿಳಿತ, ಥ್ರೋ ಗಳನ್ನು ತಿದ್ದಿ ತೀಡಿದರು. ತುಂಟತನವನ್ನು ತುಂಬಿಸಿದರು. ಫಾಲ್ಸ್ ವಾಯ್ಸನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ರೀತಿಯನ್ನು ತೋರಿಸಿಕೊಟ್ಟರು. ಈ ರೀತಿ ಕಾಯಕಲ್ಪಕ್ಕೊಳಗಾದ ರಫಿಯ ಧ್ವನಿ ಮುಂದೆ ದಶಕಗಳ ಕಾಲ ¸ಸಂಗೀತ ಕ್ಷೇತ್ರವನ್ನು ಆಳುವಂತೆ ಮಾಡಿದರು. ತಮ್ಮ ವೃತ್ತಿಜೀವನದ ಕೊನೆಯ ಕೆಲವು ವರ್ಷಗಳಲ್ಲಿ 0ಯಾವುದೋ ವಿರಸದಿಂದಾಗಿ ಕೆಲವು ಹಾಡುಗಳಿಗೆ ಮಹೇಂದ್ರ ಕಪೂರ್, ಮುಕೇಶ್ ಅವರನ್ನು ಬಳಸಿಕೊಂಡರೂ ಇವರ ಮೆಚ್ಚಿನ ಗಾಯಕ ಎಂದಿಗೂ ರಫಿಯೇ ಆಗಿದ್ದರು. ರಾಗಿನಿ ಚಿತ್ರದ ಮನ್ ಮೊರಾ ಬಾಂವರಾ ಹಾಡಿಗೆ ತೆರೆಯ ಮೇಲಿನ ಕಿಶೋರ್ ಕುಮಾರ್ ಗೆ ರಫಿ ಧ್ವನಿಯನ್ನು ಮತ್ತ ಮೊದಲಿಗೆ ಬಳಸಿದವರು ಇವರು. (ಕಿಶೋರ್ ಗಾಗಿ ರಫಿ ಹಾಡಿರುವ ಆದರೆ ಅಷ್ಟೊಂದು ಸುದ್ದಿ ಮಾಡದ ಇನ್ನೂ ಕೆಲವು ಹಾಡುಗಳು - ಶಂಕರ್ ಜೈಕಿಶನ್ ನಿರ್ದೇಶನದಲ್ಲಿ ಶರಾರತ್ ನ ಅಜಬ್ ಹೈ ದಾಸ್ತಾಂ ತೆರೀ , ಲಾಲಾ ಅಸರ್ ಸತ್ತಾರ್ ನಿರ್ದೇಶನದಲ್ಲಿ ಪ್ಯಾರ್ ದೀವಾನೆ ಚಿತ್ರದ ಅಪನೀ ಆದತ್ ಹೈ ಸಬಕೊ ಕೊ , ಬಿಪಿನ್ ಬಾಬುಲ್ ನಿರ್ದೇಶನದಲ್ಲಿ ಬಾಗೀ ಶಹಜಾದಾ ಚಿತ್ರದ ಮೈ ಇಸ್ ನಾಜುಕ್ ಚೆಹೆರೆಕೊ ) ನಯಾ ದೌರ್, ಸಿ ಐ ಡಿ, ಮೇರೆ ಸನಮ್, ಫಿರ್ ವಹೀ ದಿಲ್ ಲಾಯಾ ಹೂಂ, ಕಶ್ಮೀರ್ ಕೀ ಕಲಿ, ಫಾಗುನ್, ಏಕ್ ಮುಸಾಫಿರ್ ಏಕ್ ಹಸೀನಾ, ಬಹಾರೆ ಫಿರ್ ಭೀ ಆಯೆಂಗೀ, ಹಮ್ ಸಾಯಾ ಮುಂತಾದ ಚಿತ್ರಗಳಲ್ಲಿ ಮರೆಯಲಾಗದ ರಫಿ ಹಾಡುಗಳು ಇವರ ನಿರ್ದೇಶನದಲ್ಲಿ ಜನ್ಮ ತಾಳಿದವು.
ಶಂಕರ್ ಜೈಕಿಶನ್ :- ಇವರ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲು ಧ್ವನಿಮುದ್ರಣಗೊಂಡದ್ದು ಬರ್ಸಾತ್ ಚಿತ್ರಕ್ಕಾಗಿ ರಫಿ ಹಾಡಿದ ಮೈ ಜಿಂದಗೀ ಮೆ ಹರ್ ದಮ್ ರೋತಾ ಹೀ ರಹಾ ಹೂಂ ಹಾಡು. ಆದರೆ ಮುಂದೆ ಬಹಳಷ್ಟು ವರ್ಷ ರಫಿ ಇವರ ಮೊದಲ ಆಯ್ಕೆ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ರಫಿಯನ್ನು ಬಳಸಿ ಉತ್ತಮ ಹಾಡು ಗಳನ್ನು ನೀಡಿದರೂ ಮುಕೇಶ್, ತಲತ್ ಮಹಮೂದ್, ಹೇಮಂತ್ ಕುಮಾರ್ ಹಾಗೂ ಇವರಧ್ವನಿಯನ್ನೇ ಹೋಲುವ ಸುಬೀರ್ ಸೇನ್ ಅವರನ್ನು ಹೆಚ್ಚು ಬಳಸುತ್ತಿದ್ದರು. ಶಮ್ಮಿಕಪೂರ್ ನ ಉಜಾಲಾ ದಲ್ಲೂ ಅವರ ಆಯ್ಕೆ ಮನ್ನಾಡೆ ಆಗಿದ್ದರು. ಆದರೆ ಸಸುರಾಲ್ ನ ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ ಸುಪರ್ ಹಿಟ್ ಆದಮೇಲೆ 60ರ ದಶಕದ ಕೊನೆವರೆಗೂ ಇವರು ಸಂಪೂರ್ಣ ರಫಿ ನಿಷ್ಠರಾಗಿ ಉಳಿದರು. ರಫಿಯ ಸೊಲೊ ಹಾಡುಗಳನ್ನು ಲತಾ ಧ್ವನಿಯಲ್ಲೂ ಹಾಡಿಸುವ ಪರಂಪರೆಯನ್ನು ಜಂಗ್ಲಿ ಚಿತ್ರದ ಎಹೆಸಾನ್ ತೆರಾ ಹೋಗಾ ಮುಝ್ ಪರ್ (ಲತಾ) ಮೂಲಕ ಇವರು ಆರಂಭಿಸಿದರು. ಮುಂದೆ ಇದೇ ಜಾಡಿನಲ್ಲಿ ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ ಯ ಜಿಯಾ ಒ ಜಿಯಾ ಒ ಕುಛ್ ಬೊಲ್ ದೊ (ಲತಾ), ಲವ್ ಇನ್ ಟೋಕಿಯೊ ದ ಓ ಮೆರೆ ಶಾಹೆ ಖುಬಾ (ಲತಾ), ಯಕೀನ್ ಚಿತ್ರದ ಗರ್ ತುಮ್ ಭುಲಾ ನ ದೋಗೆ (ಲತಾ) , ಪಗಲಾ ಕಹೀಂ ಕಾ ದ ತುಮ್ ಮುಝೆ ಯೂಂ (ಲತಾ) ಇತ್ಯಾದಿ ಬಂದವು. ಆದರೆ ರಫಿ ಆವೃತ್ತಿಯ ಮಾದಕತೆ ಈ ಹಾಡುಗಳ ಲತಾ ಅವೃತ್ತಿಯಲ್ಲಿ ಕಾಣಿಸಲಿಲ್ಲ. ಮುಕೇಶ್, ಮನ್ನಾಡೆ ಹೊರತು ಇತರರ ಧ್ವನಿಯನ್ನು ಬಳಸದ ರಾಜ್ ಕಪೂರ್ ಗಾಗಿ ಏಕ್ ದಿಲ್ ಸೌ ಅಫಸಾನೆ ಚಿತ್ರದಲ್ಲಿ ತುಮ್ ಹೀ ತುಮ್ ಹೊ ಮೆರೆ ಜೀವನ್ ಮೆ ಹಾಗೂ ಮೇರಾ ನಾಮ್ ಜೋಕರ್ ನಲ್ಲಿ ಸದ್ ಕೆ ಹೀರ್ ತುಝ್ ಪೆ ಹಾಡುಗಳಿಗಾಗಿ ರಫಿ ಧ್ವನಿಯನ್ನು ಬಳಸಿದರು. (ರಫಿ ಹಾಡು ಥಿಯೇಟರ್ ಗಳಲ್ಲಿ ಪ್ರದರ್ಶಿತವಾದ ಜೋಕರ್ ನಲ್ಲಿ ಕಾರಣಾಂತರಗಳಿಂದ ಇರಲಿಲ್ಲ.) ಈ ಮಧ್ಯೆ ಕೆಲವು ಸಮಯ ಲತಾ-ರಫಿ ಜೊತೆಯಾಗಿ ಹಾಡುತ್ತಿರಲಿಲ್ಲ. ಆಗಲೂ ಡ್ಯುಯೆಟ್ ಗಳು ಬೇಕಿದ್ದಾಗ ಲತಾ ಬದಲಿಗೆ ಸುಮನ್ ಕಲ್ಯಾಣಪುರ್ ಮೊದಲಾದವರು ಬರುತ್ತಿದ್ದರೇ ಹೊರತು ರಫಿಗೆ ಪರ್ಯಾಯವನ್ನು ಯಾರೂ ಹುಡುಕುತ್ತಿರಲಿಲ್ಲ. ಕೊನೆಗೆ ಶಂಕರ್ ಜೈಕಿಶನ್ ಮಧ್ಯಸ್ತಿಕೆಯಲ್ಲಿ ಅವರೀರ್ವರಿಗೆ ರಾಜಿಯಾಗಿ ಗಬನ್ ಚಿತ್ರಕ್ಕಾಗಿ ತುಮ್ ಬಿನ್ ಸಜನ್ ಗೀತೆಯನ್ನು ಜತೆಯಾಗಿ ಹಾಡಿದರು. (ವಿರಸಕ್ಕೆ ಮುನ್ನ ಲತಾ-ರಫಿ ಜತೆಯಾಗಿ ಹಾಡಿದ್ದ ಕೊನೆಯ ಹಾಡು ಉಷಾ ಖನ್ನಾ ಸಂಗೀದಲ್ಲಿ ಆವೋ ಪ್ಯಾರ್ ಕರೇಂ ಚಿತ್ರದ ತುಮ್ ಅಕೆಲೆ ತೊ ಕಭಿ ಬಾಗ್ ಮೆ ಜಾಯಾ ನ ಕರೊ. ) ಶೋಕ ಸನ್ನಿವೇಶಗಳಿಗೆ ಹೆಚ್ಚಾಗಿ ಬಳಸಲ್ಪಡುವ ರಾಗ ಶಿವರಂಜಿನಿ ಆಧಾರಿತ ಸೂರಜ್ ಚಿತ್ರದ ಬಹಾರೊ ಫೂಲ್ ಬರಸಾವೊ ಅದ್ಭುತ ಶೃಂಗಾರ ಕಾವ್ಯವಾಗಿ ಹೊರಹೊಮ್ಮಿದ್ದು ಶಂಕರ್ ಜೈಕಿಶನ್ ಮ್ಯಾಜಿಕ್ ನಿಂದಾಗಿಯೇ. ಇದೇ ಹಾಡನ್ನು ರಫಿ ಅವರು ಶಂಕರ್ ಜೈಕಿಶನ್ ರಹಿತರಾಗಿ ಸ್ಟೇಜ್ ನಲ್ಲಿ ಹಾಡುವಾಗ ಶೋಕದ ಛಾಯೆ ಇಣುಕುತ್ತಿದ್ದುದನ್ನು ಗಮನಿಸಬಹುದು. ಈ ಗೀತೆಯ ಧಾಟಿಯಲ್ಲಿ ಹರೀಂದ್ರನಾಥ ಚಟ್ಟೋಪಾಧ್ಯಾಯ ರಚಿಸಿ ರಫಿ ಹಾಡಿದ ಇಂಗ್ಲೀಷ್ ಆಲ್ ದೊ ವಿ ಹೈಲ್ ಫ್ರಮ್ ಡಿಫರೆಂಟ್ ಲ್ಯಾಂಡ್ಸ್ ಹಾಡಿನದ್ದೂ ಇದೇ ಪಾಡು. ಗುಮ್ ನಾಮ್ ನ ಹಮ್ ಕಾಲೆ ಹೈಂ ತೊ ಕ್ಯಾ ಹುವಾ ಧಾಟಿಯಲ್ಲೂ ರಫಿ ಚಟ್ಟೋಪಾಧ್ಯಾಯರ ಇಂಗ್ಲಿಷ್ ರಚನೆ ಶಿ ಐ ಲವ್ ಈಸ್ ದ ಬ್ಯೂಟಿಫುಲ್ ಡ್ರೀಮ್ ಕಮ್ಸ್ ಟ್ರೂ ಹಾಡಿದ್ದಾರೆ. ಇದೇ ಗುಮ್ ನಾಮ್ ಹಾಡಿಗೆ ಬ್ರಹ್ಮಚಾರಿ ಚಿತ್ರದಲ್ಲಿ ಜೂ| ಮಹಮೂದ್ ಅಭಿನಯಿಸಿದ್ದು ಇನ್ನೊಂದು ವಿಶೇಷ. ಇದೇ ಚಿತ್ರದ ಜಾನ್ ಪೆಹಚಾನ್ ಹೊ ಹಾಡನ್ನು ಇಂಗ್ಲಿಷ್ ಘೋಷ್ಟ್ ವರ್ಲ್ಡ್ ಚಿತ್ರದ ಟೈಟಲ್ಸ್ ಗೆ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. ಬೇಟಿ ಬೇಟೆ ಚಿತ್ರದ ಇವರ ಹಾಡು ರಾಧಿಕೆ ತೂನೆ ಬಂಸುರೀ ಚುರಾಯೀ ಯಥಾವತ್ತಾಗಿ ತಂದೆ ಮಕ್ಕಳು ಚಿತ್ರದ ರಾಧಿಕೆ ನಿನ್ನ ಸರಸವಿದೇನೆ ಆಗಿದೆ. ಇವರು ನೀಡಿದ ಎಲ್ಲ ರಫಿ ಹಿಟ್ ಹಾಡುಗಳನ್ನು ಪಟ್ಟಿ ಮಾಡುವುದು ಅಸಾಧ್ಯ. ಆದರೆ ಆರಾಧನಾ ಸ್ಥಿಂತ್ಯಂತರದ ನಂತರ ಶಂಕರ್ ಜೈಕಿಶನ್ ಸಹ ತಕ್ಷಣ ಕಿಶೋರ್ ಕಡೆ ವಾಲಿದ್ದೂ ನಿಜ.
ರೋಶನ್ :- ಆಲಿಸಿದೊಡನೆ ತಮ್ಮೆಡೆಗೆ ಸೆಳೆಯಬಲ್ಲ ತಾಜ್ ಮಹಲ್ ನ ಜೊ ವಾದಾ ಕಿಯಾ ವೊ, ಆರತಿ ಯ ಬಾರ್ ಬಾರ್ ತೊಹೆ ಕ್ಯಾ ಸಮಝಾವೂಂ ದಂತಹ ಅನೇಕ ಅತಿಮಧುರ ಗೀತೆಗಳನ್ನು ರಫಿ ಧ್ವನಿಯಲ್ಲಿ ನೀಡಿದವರು ಇವರು. ಬರಸಾತ್ ಕೀ ರಾತ್ ನ ಜಿಂದಗೀ ಭರ್ ನಹೀಂ ಭೂಲೇಗಿ ಲತಾ ಆವೃತ್ತಿಯ ಎರಡನೇ ಚರಣದಲ್ಲಿ ರಫಿ ಪ್ರವೇಶ ಬೀರಿದ ಪರಿಣಾಮ ಅದ್ಭುತ. ಕವ್ವಾಲಿಗಳ ರಾಣಿಯೆಂದೇ ಖ್ಯಾತಿಯುಳ್ಳ ಇದೇ ಚಿತ್ರದ ನ ತೊ ಕಾರವಾಂ ಕೀ ತಲಾಶ್ ಹೈ ಯ ಕೊನೆ ಭಾಗದಲ್ಲಿ ರಫಿ ನಿರ್ವಹಣೆಯನ್ನು ಆನಂದಿಸದವರು ಯಾರಿದ್ದಾರೆ. ಚಿತ್ರಲೇಖಾ, ಬಾಬರ್, ಅನೋಖೀ ರಾತ್, ಭೀಗೀ ರಾತ್, ನಯೀ ಉಮರ್ ಕೀ ನಯೀ ಫಸಲ್, ಬೇದಾಗ್ ಮುಂತಾದ ಚಿತ್ರಗಳಲ್ಲೂ ಸುಂದರ ರಫಿ ಗೀತೆಗಳಿದ್ದವು. ಅಕಾಲದಲ್ಲಿ ಇವರು ನಮ್ಮನ್ನಗಲದೆ ಇರುತ್ತಿದ್ದರೆ ಇನ್ನಷ್ಟು ಮಧುರ ರಫಿ ಗೀತೆಗಳು ನಮಗೆ ದೊರೆಯುತ್ತಿದ್ದವು.
· ಚಿತ್ರಗುಪ್ತ:- ಕಿರು ಬಜೆಟ್ ಚಿತ್ರಗಳನ್ನು ನಿರ್ಮಿಸುವವರ ಅದರಲ್ಲೂ ದಕ್ಷಿಣ ಭಾರತದ ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಿವರು. ಆರಂಭದಿಂದಲೇ ಇವರ ಮುಖ್ಯ ಗಾಯಕ ರಫಿ. ಭಾಭೀ ಚಿತ್ರದ ಚಲ್ ಉಡ್ ಜಾ ರೆ ಪಂಛೀ, ಮೈ ಚುಪ್ ರಹೂಂಗೀ ಯ ಚಾಂದ್ ಜಾನೆ ಕಹಾಂ ಖೋ ಗಯಾ ಬಡಾ ಆದ್ಮೀ ಯ ಅಖಿಯನ್ ಸಂಗ್ ಅಖಿಯಾಂ, ವಾಸನಾ ಚಿತ್ರದ ಯೆ ಪರಬತೊಂ ಕೆ ದಾಯರೆ , ಪತಂಗ್ ಚಿತ್ರದ ಯೆ ದುನಿಯಾ ಪತಂಗ್ ನಿತ್ ಬದಲೆ ಯೆ ರಂಗ್ , ಊಂಚೇ ಲೋಗ್ ಚಿತ್ರದ ಜಾಗ್ ದಿಲೆ ದೀವಾನಾ ಮುಂತಾದ ಹಾಡುಗಳನ್ನು ಯಾರು ತಾನೇ ಕೇಳಿಲ್ಲ.
· ರವಿ:- ಬಿ.ಆರ್. ಚೋಪ್ರಾ ಚಿತ್ರಗಳನ್ನು ಹೊರತು ಪಡಿಸಿದರೆ ಇವರೂ ಸದಾ ರಫಿ ಮಾಧುರ್ಯವನ್ನು ಉಣಬಡಿಸಿದವರೇ. ಚೌದವೀಂ ಕಾ ಚಾಂದ್, ಭರೋಸಾ, ಕಾಜಲ್, ಪ್ಯಾರ್ ಕಾ ಬಂಧನ್, ಅಪನಾ ಬನಾಕೆ ದೇಖೊ, ಆಜ್ ಔರ್ ಕಲ್, ಯೆ ರಾಸ್ತೆ ಹೈಂ ಪ್ಯಾರ್ ಕೆ, ಪ್ಯಾರ್ ಕಿಯಾ ತೊ ಡರನಾ ಕ್ಯಾ, ಶಹನಾಯಿ, ಗೆಹ್ರಾ ದಾಗ್, ಖಾನ್ ದಾನ್, ದೊ ಬದನ್, ದೂರ್ ಕೀ ಆವಾಜ್, ದಸ್ ಲಾಖ್, ಏಕ್ ಫೂಲ್ ದೊ ಮಾಲಿ ಮುಂತಾಗಿ ಇವರ ಎಲ್ಲ ಚಿತ್ರಗಳೂ ರಫಿಯ ಗಾನ ಸುಧೆ ಹರಿಸಿದವುಗಳೇ. ನೀಲ್ ಕಮಲ್ ಚಿತ್ರದ ಬಾಬುಲ್ ಕೀ ದುವಾಯೆಂ ಲೇತೀ ಜಾ ಹಾಡಿನ ರೆಕಾರ್ಡಿಂಗ್ ಮಾಡುವಾಗ ರಫಿ ಅವರು ಧಾರಾಕಾರವಾಗಿ ಕಣ್ಣೀರು ಸುರಿಸಿದ್ದರಂತೆ. ಈ ಹಾಡು ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದು ಕೊಟ್ಟಿತು.
ಎಸ್. ಡಿ ಬರ್ಮನ್:- ಇವರ ಆದ್ಯತೆ ಕಿಶೋರ್ ಕುಮಾರ್ ಗಾದರೂ ರಫಿಯ ಬಹಳಷ್ಟು ಅಮರ ಹಾಡುಗಳನ್ನು ಇವರೂ ಸೃಷ್ಟಿಸಿದ್ದಾರೆ. ಕಾಲಾ ಬಜಾರ್, ಬೇನಜೀರ್, ಬಾತ್ ಏಕ್ ರಾತ್ ಕೀ, ತೇರೆ ಘರ್ ಕೆ ಸಾಮನೆ, ಜಿದ್ದಿ, ಗೈಡ್, ತಲಾಷ್, ಇಶ್ಕ್ ಪರ್ ಜೋರ್ ನಹೀಂ ಮುಂತಾದ ಚಿತ್ರಗಳಲ್ಲಿ ರಫಿಯೇ ಇವರ ಗಾಯಕ. ಮೇರಿ ಸೂರತ್ ತೇರಿ ಆಂಖೆಂ ಯಲ್ಲಿ ಮನ್ನಾಡೆ ಅವರ ಪೂಛೋ ನ ಕೈಸೆ ಮೈನೆ ರೈನ್ ಬಿತಾಯೀ ಗೆ ಸರಿಸಾಟಿಯಾಗುವಂತೆ ರಫಿ ಹಾಡಿದ ನಾಚೆ ಮನ್ ಮೊರಾ ತೆರೆ ಬಿನ್ ಸೂನೆ ನೈನ್ ಹಮಾರೆ ಹಾಡುಗಳನ್ನು ಮರೆಯಲುಂಟೆ. ತೀನ್ ದೇವಿಯಾಂ, ಜುವೆಲ್ ತೀಫ್ ನಂತಹ ಚಿತ್ರಗಳಲ್ಲಿ ಇವರು ಕಿಶೋರ್, ರಫಿ ಇಬ್ಬರನ್ನೂ ಬಳಸುತ್ತಿದ್ದರು. ಕಿಶೋರ್ ಯುಗದ ಆರಂಭಕ್ಕೆ ಕಾರಣವಾದ ಆರಾಧನಾ ದಲ್ಲೂ ಇವರಿಬ್ಬರೂ ಇದ್ದರಲ್ಲವೇ? ಮುಂದೆಯೂ ಅಭಿಮಾನ್, ಅನುರಾಗ್ ಮುಂತಾದ ಚಿತ್ರಗಳಲ್ಲಿ ರಫಿ ಹಾಡುಗಳಿದ್ದವು. ಕಿಶೋರ್ ಪ್ರಿಯರಾದ ಇವರ ಸುಪುತ್ರ ಪಂಚಮ್ ಸಹ ತೀಸ್ರೀ ಮಂಜಿಲ್, ರಾತೊಂಕಾ ರಾಜಾ, ಪ್ಯಾರ್ ಕಾ ಮೌಸಮ್, ಕಾರವಾಂ ಮುಂತಾದ ಚಿತ್ರಗಳಲ್ಲಿ ಅದ್ಭುತ ರಫಿ ಗೀತೆಗಳನ್ನು ನೀಡಿದ್ದಾರೆ. ಹಮ್ ಕಿಸೀ ಸೆ ಕಮ್ ನಹೀಂ ಯ ಕ್ಯಾ ಹುವಾ ತೆರಾ ವಾದಾ ರಫಿಗೆ 6ನೇ ಫಿಲಂ ಫೇರ್ ಎವಾರ್ಡ್ ತಂದುಕೊಟ್ಟುದನ್ನೂ ಮರೆಯಲಾಗದು.
· ಲಕ್ಷ್ಮಿಕಾಂತ್ ಪ್ಯಾರೆಲಾಲ್:- ಇವರು ಹಾಡುಗಳನ್ನು ರಚಿಸುತ್ತಿದ್ದುದೇ ರಫಿ ಅವರನ್ನು ಮನಸ್ಸಲ್ಲಿ ಇಟ್ಟುಕೊಂಡು. ತಮ್ಮ ಮೊದಲ ಚಿತ್ರ ಪಾರಸ್ ಮಣಿ ಯಿಂದ ಆರಂಭಿಸಿ ರಫಿ ಅವರ ಕೊನೆಯ ಚಿತ್ರ ಆಸ್ ಪಾಸ್ ವರೆಗೆ ಇವರದ್ದು ಅವಿನಾಭಾವ ನಂಟು. ದೋಸ್ತೀ, ಆಯಾ ತೂಫಾನ್, ವಾಪಸ್, ಫರ್ಜ್, ನೈಟ್ ಇನ್ ಲಂಡನ್, ಮೇರೆ ಹಮ್ ದಮ್ ಮೇರೆ ದೋಸ್ತ್, ಜೀನೆ ಕೀ ರಾಹ, ಆಯಾ ಸಾವನ್ ಝೂಮ್ ಕೆ, ಸಾಜನ್, ಜಿಗ್ರೀ ದೋಸ್ತ್, ಹಮ್ ಜೊಲಿ, ದೊ ರಾಸ್ತೆ .. ಎಂತೆಂತಹ ಚಿತ್ರಗಳು ಎಂತೆಂತಹ ಹಾಡುಗಳು. ಲೋಫರ್ ಚಿತ್ರದ ವಿಶಿಷ್ಠ ಶೈಲಿಯ ಹಾಡು ಆಜ್ ಮೌಸಮ್ ಬಡಾ ಬೆಇಮಾನ್ ಹೈ ಇತ್ತೀಚೆಗೆ ಮೊನ್ಸೂನ್ ವೆಡ್ಡಿಂಗ್ ಚಿತ್ರದಲ್ಲಿ ಅಳವಡಿಸಲ್ಪಟ್ಟದ್ದು ಉಲ್ಲೇಖನೀಯ. 1969ರಲ್ಲಿ ರಫಿ ವಿದೇಶ ಯಾತ್ರೆಗೆ ತೆರಳುವ ಮುನ್ನ ಲಕ್ಷ್ಮಿ ಪ್ಯಾರೆ ಅವರಿಗಾಗಿ ದಾಖಲೆ ಸಂಖ್ಯೆಯ ಹಾಡುಗಳನ್ನು ಒಂದೇ ದಿನ ಹಾಡಿದ್ದರಂತೆ. ಈ ಯಾತ್ರೆಯ ಕಾರಣ ಆರಾಧನಾ ದಲ್ಲಿ ರಫಿ ಹಾಡಬೇಕಿದ್ದ ಹಾಡುಗಳನ್ನು ಬರ್ಮನ್ ಒತ್ತಾಯದ ಮೇರೆಗೆ ಕಿಶೋರ್ ಕುಮಾರ್ ಹಾಡಿದ ನಂತರದ ವಿದ್ಯಮಾನಗಳು ಈಗ ಇತಿಹಾಸ. ನಂತರ ಕೆಲವು ಸಮಯ ರಫಿ ಅವರು ಹಿನ್ನಡೆ ಅನುಭವಿಸುವಂತಾದಾಗಲೂ ತಮ್ಮ ಬಹುತೇಕ ಚಿತ್ರಗಳಲ್ಲಿ ಒಂದಾದರೂ ರಫಿ ಹಾಡು ಇರುವಂತೆ ನೋಡಿಕೊಂಡವರು ಲಕ್ಷ್ಮಿ ಪ್ಯಾರೆ ಮಾತ್ರ. ಹಿನ್ನಡೆಯನ್ನು ಮೆಟ್ಟಿ ಮುನ್ನಡೆಯನ್ನು ಸಾಧಿಸಲು ರಫಿಗೆ ಅನುವು ಮಾಡಿಕೊಟ್ಟದ್ದು ಇವರ ಸರ್ ಗಮ್, ಅಮರ್ ಅಕ್ಬರ್ ಅಂಥೊಣಿ ಮುಂತಾದ ಚಿತ್ರಗಳೇ. ಆದರೂ ವಯಸ್ಸಿನ ಪ್ರಭಾವದಿಂದಲೋ, ಅನಾರೋಗ್ಯದಿಂದಲೋ ಅವರ ಕಂಠ ತನ್ನ ಮೊದಲಿನ ಮಾರ್ದವತೆಯನ್ನು ಕಳೆದುಕೊಂಡದ್ದರಿಂದ 60ರ ದಶಕದ ಪಾರಮ್ಯವನ್ನು ಮತ್ತೆ ಸಾಧಿಸಲು ಸಾಧ್ಯವಾಗಲೇ ಇಲ್ಲ.
· ಇತರ ಸಂಗೀತ ನಿರ್ದೇಶಕರು:- ಒಂದೊಂದು ಪ್ರಾತಿನಿಧಿಕ ಉದಾಹರಣೆಯೊಂದಿಗೆ ನೆನಸಿಕೊಳ್ಳುವುದಾದರೆ ಎನ್ ದತ್ತಾ(ಗ್ಯಾರಹ ಹಜಾರ್ ಲಡ್ಕಿಯಾಂ- ದಿಲ್ ಕಿ ತಮನ್ನಾ ಥೀ ಮಸ್ತಿ ಮೆಂ), ಮದನ್ ಮೋಹನ್( ರೇಲ್ವೆ ಪ್ಲಾಟ್ ಫಾರಮ್ - ಬಸ್ತಿ ಬಸ್ತಿ ಪರಬತ್ ಪರಬತ್), ಎಸ್ ಎನ್ ತ್ರಿಪಾಠಿ( ಜನಮ್ ಜನಮ್ ಕೆ ಫೇರೆ - ಜರಾ ಸಾಮನೆ ತೊ ಆವೊ ಛಲಿಯೆ), ಕಲ್ಯಾಣ್ ಜೀ ಆನಂದಜೀ (ಜಬ್ ಜಬ್ ಫೂಲ್ ಖಿಲೆ - ಯಹಾಂ ಮೈ ಅಜನಬೀ ಹೂಂ), ಸಲಿಲ್ ಚೌಧರಿ (ಮಧುಮತಿ - ಟೂಟೆ ಹುವೆ ಖ್ವಾಬೊಂನೆ), ಖಯ್ಯಾಮ್ ( ಮುಹಬ್ಬತ್ ಇಸ್ಕೊ ಕಹತೆ ಹೈಂ - ಠಹರಿಯೆ ಹೋಶ್ ಮೆ ಆವೂಂ), ಇಕಬಾಲ್ ಖುರೇಶಿ (ಚಾ ಚಾ ಚಾ - ಸುಬಹ ನ ಆಯೀ ಶಾಮ್ ನ ಆಯೀ), ಸರ್ದಾರ್ ಮಲ್ಲಿಕ್ (ಬಚಪನ್ - ಮುಝೆ ತುಮ್ ಸೆ ಮುಹಬ್ಬತ್ ಹೈ), ಉಷಾ ಖನ್ನಾ (ಆವೊ ಪ್ಯಾರ್ ಕರೇಂ - ಯೆ ಝುಕಿ ಝುಕಿ ನಿಗಾಹೆಂ ತೆರೀ), ಸ್ವತಃ ಗಾಯಕರಾದ ಹೇಮಂತ ಕುಮಾರ್ (ದೊ ದಿಲ್ - ತೇರಾ ಹುಸ್ನ್ ರಹೆ ಮೇರಾ ಇಶ್ಕ್ ರಹೆ), ರಾಮಲಾಲ್ ( ಸೆಹ್ರಾ - ತಕದೀರ್ ಕಾ ಫಸಾನಾ), ಸೋನಿಕ್ ಒಮಿ ( ದಿಲನೆ ಫಿರ್ ಯಾದ್ ಕಿಯಾ - ಕಲಿಯೊಂನೆ ಘುಂಗಟ್ ಖೋಲೆ), ಜಯ ದೇವ್ (ಹಮ್ ದೋನೊ - ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ ), ಸಿ ಅರ್ಜುನ್ (ಪುನರ್ಮಿಲನ್ - ಪಾಸ್ ಬೈಠೊ ತಬೀಯತ್ ಬಹಲ್ ಜಾಯೆಗೀ), ಜಿ ಎಸ್ ಕೊಹಲಿ ( ಎಡ್ವೆಂಚರ್ಸ್ ಆಫ್ ರಾಬಿನ್ ಹುಡ್ - ಮಾನಾ ಮೆರೆ ಹಸೀಂ ಸನಮ್), ಹಂಸರಾಜ್ ಬಹಲ್ ( ಚಂಗೇಜ್ ಖಾನ್ - ಮುಹಬ್ಬತ್ ಜಿಂದಾ ರಹತೀ ಹೈ), ಸಪನ್ ಜಗಮೋಹನ್ (ಬೇಗಾನಾ - ಫಿರ್ ವೊ ಭೂಲಿ ಸಿ ಯಾದ್ ಆಯೀ ಹೈ), ಲಚ್ಛೀರಾಮ್ (ಮೈ ಸುಹಾಗನ್ ಹೂಂ - ತೂ ಶೋಖ್ ಕಲಿ ಮೈ ಮಸ್ತ್ ಪವನ್ ) ಮುಂತಾದವರು ರಫಿ ಕಂಠದಲ್ಲಿ ನಮಗೆ ನೀಡಿದ ಮಾಧುರ್ಯವನ್ನೂ ಮರೆಯುವಂತಿಲ್ಲ.
ಕನ್ನಡ ಹಾಡು:- ಸತ್ಯಂ ಸಂಗೀತ ನಿರ್ದೇಶನದಲ್ಲಿ ಒಂದೇ ಬಳ್ಳಿಯ ಹೂಗಳು ಚಿತ್ರಕ್ಕಾಗಿ ಹಾಡಿದ ನೀನೆಲ್ಲಿ ನಡೆವೆ ದೂರ ಹಾಡು ಎಲ್ಲರಿಗೂ ಗೊತ್ತಿರುವಂತಹದ್ದೇ. ಈ ಚಿತ್ರ ಛೊಟೀ ಬಹನ್ ಚಿತ್ರದ ಕನ್ನಡ ಅವತರಣಿಕೆ. ಅಲ್ಲಿ ಈ ಸಂದರ್ಭಕ್ಕೆ ಮುಕೇಶ್ ಅವರ ಜಾವೂಂ ಕಹಾಂ ಬತಾ ಎ ದಿಲ್ ಹಾಡು ಇತ್ತು. 1954ರಲ್ಲಿ ಕಲ್ಯಾಣ್ ಕುಮಾರ್ ಅಭಿನಯದ ಆಶಾ ನಿರಾಶಾ ಎಂಬ ಮುಂಬಯಿಯಲ್ಲಿ ತಯಾರಾದ ಕನ್ನಡ ಚಿತ್ರಕ್ಕಾಗಿ ರಫಿ ಹಾಡಿದ್ದರು ಎಂದು ಆ ವರ್ಷದ ವಿಕಟ ವಿನೋದಿನಿ ಸಂಚಿಕೆಯೊಂದರಲ್ಲಿ ದಾಖಲಾಗಿದೆ. ಆದರೆ ಆ ಚಿತ್ರ ಪ್ರದರ್ಶಿತವಾಗಿತ್ತೇ ಹಾಗೂ ಚಿತ್ರದ ಹಾಡುಗಳ ಧ್ವನಿಮುದ್ರಿಕೆಗಳು ತಯಾರಾಗಿದ್ದವೇ ಎಂಬುದನ್ನು ಹಿರಿಯ ತಲೆಮಾರಿನವರಾರಾದರೂ ಹೇಳಬಲ್ಲರೇನೋ.
ಹೇಳುತ್ತಾ ಹೋದರೆ ಪಟ್ಟಿ ಮುಗಿಯಲಾರದು. ಸಾಗರವನ್ನು ಬೊಗಸೆಯಲ್ಲಿ ಮೊಗೆಯಲು ಹೊರಟಂತಾದೀತು. ಅಂತೂ ಇಂತಹ ಹಾಡುಗಳು ಮುಂಬರುವ ಶತ ಶತಮಾನಗಳ ಕಾಲ ಮಹಮ್ಮದ್ ರಫಿ ಅವರ ಅಭಿಮಾನಿಗಳನ್ನು ತಣಿಸುವುದಂತೂ ನಿಜ.