Wednesday, 28 June 2023

ಕೈಗೆ ಸಿಕ್ಕದ ಕಾಲ




ಕಾಲವನ್ನು ಅಳೆಯಲು ಮಾನವ ಏನೇನೋ  ವ್ಯವಸ್ಥೆ ಮಾಡಿಕೊಂಡಿದ್ದರೂ ಅದು ಅಳತೆಗೆ ಸಿಗದೆ ನುಣುಚಿಕೊಳ್ಳುತ್ತಿರುತ್ತದೆ. ಗ್ರೆಗೊರಿಯನ್ ಕ್ಯಾಲೆಂಡರ್ ಆಧರಿಸಿದರೆ ನಾಲ್ಕು ವರ್ಷಕ್ಕೊಮ್ಮೆ ಒಂದು ದಿನ ಹೆಚ್ಚಿಸಬೇಕು. ಚಾಂದ್ರಮಾನ ಅನುಸರಿಸಿದರೆ  ಸುಮಾರು ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ  ಸೇರಿಸಬೇಕು.  ಆದರೆ ಇದನ್ನೆಲ್ಲ ನಮ್ಮಂಥ ಜನಸಾಮಾನ್ಯರು ಯಾಂತ್ರಿಕವಾಗಿ ಒಪ್ಪಿಕೊಂಡು ಅನುಸರಿಸುತ್ತೇವೆ ಹೊರತು ಯಾಕೆ ಎಂದು ಯೋಚಿಸುವುದು ಕಮ್ಮಿ.

ವ್ಯಾವಹಾರಿಕವಾಗಿ ನಾವೆಲ್ಲರೂ ಅನುಸರಿಸುವ ಸೌರಮಾನ ಆಧಾರದ ಗ್ರೆಗೊರಿಯನ್ ಕ್ಯಾಲೆಂಡರಿನ ಅಧಿಕ ವರ್ಷ ಅರ್ಥ ಮಾಡಿಕೊಳ್ಳುವುದು ಅಷ್ಟು ಕಷ್ಟವಲ್ಲ.  ಭೂಮಿ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಪೂರೈಸಲು ಸುಮಾರು 365.25 ದಿನ ತೆಗೆದುಕೊಳ್ಳುತ್ತದೆ.  ಆದರೆ ವರ್ಷಕ್ಕೆ 365.25 ದಿನ ಎನ್ನುವಂತಿಲ್ಲವಲ್ಲ.  ಆದ್ದರಿಂದ ನಾಲ್ಕು ವರ್ಷಗಳಲ್ಲಿ ಈ ವ್ಯತ್ಯಾಸ ಒಂದು ದಿನ ಆಗುವ ವರೆಗೆ ಕಾದು ಫೆಬ್ರವರಿಯಲ್ಲಿ 28ರ ಬದಲಿಗೆ 29 ದಿನ ಮಾಡಿ ಅದನ್ನು ಅಧಿಕವರ್ಷ ಅನ್ನಲಾಗುತ್ತದೆ.  ಆದರೆ ಹೀಗೆ ಸೇರಿಸಿದ್ದು ಬೇಕಾದ್ದಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹೀಗೆ ಸ್ವಲ್ಪ ಸ್ವಲ್ಪ ಹೆಚ್ಚು ಸೇರಿಸಿದ್ದು 100 ವರ್ಷಗಳಾಗುವಾಗ ಭರ್ತಿ ಒಂದು ದಿನ ಆಗುತ್ತದೆ.  ಆದ್ದರಿಂದ  100ನೇ ವರ್ಷ 4ರಿಂದ ನಿಶ್ಶೇಷವಾಗಿ ಭಾಗಿಸಲ್ಪಡುವ ನಿಯಮದಂತೆ ಅಧಿಕ ವರ್ಷವಾಗಿರಬೇಕಾದರೂ ಆ ವರ್ಷ ಫೆಬ್ರವರಿಯಲ್ಲಿ 28 ದಿನಗಳೇ ಇರುತ್ತವೆ.  ಆದರೆ ಈ ನಿಯಮ ಅನುಸರಿಸಿದಾಗ  400ನೆಯ  ವರುಷ ತಲುಪುವಷ್ಟರಲ್ಲಿ  ಮತ್ತೆ ಒಂದು ದಿನದ ಕೊರತೆ ಆಗಿ ಅದು ಅಧಿಕ ವರ್ಷವಾಗಬೇಕಾಗುತ್ತದೆ.  ಹೀಗಾಗಿ ಕ್ರಿ.ಶ. 100, 200, 300 ಅಧಿಕ ವರ್ಷಗಳಾಗಿರಲಿಲ್ಲ. ಆದರೆ ಕ್ರಿ.ಶ. 400 ಅಧಿಕ ವರ್ಷವಾಗಿತ್ತು. ಹಾಗೆಯೇ ಮುಂದಿನ ಕ್ರಿ.ಶ. 800, 1200 ,1600  ಇತ್ಯಾದಿ. ಅಂದರೆ ಶತಮಾನ ವರ್ಷಗಳು 4ರಿಂದ ನಿಶ್ಶೇಷವಾಗಿ ಭಾಗಿಸಲ್ಪಟ್ಟರೆ ಅಲ್ಲ, 400ರಿಂದ ನಿಶ್ಶೇಷವಾಗಿ ಭಾಗಿಸಲ್ಪಟ್ಟರೆ ಮಾತ್ರ ಅಧಿಕ ವರ್ಷ.  ಇತ್ತೀಚೆಗೆ ನಾವು ಕಂಡ Y2K ಎಂಬ ಅಭಿಧಾನ ಹೊಂದಿದ್ದ  2000ನೆಯ ಇಸವಿ ಈ ನಿಯಮದಂತೆ ಅಧಿಕ ವರ್ಷವೇ ಆಗಿತ್ತು.  ಆದರೆ ಮುಂಬರುವ 2100ರ ಫೆಬ್ರವರಿಯಲ್ಲಿ ಇಪ್ಪತ್ತೆಂಟೇ ದಿನಗಳಿರುತ್ತವೆ.  ಇಷ್ಟೆಲ್ಲ ಮಾಡಿದರೂ ಭೂಮಿಯ ಚಲನೆಯೊಂದಿಗೆ ಸರಿದೂಗಿಸಲು ಪ್ರಪಂಚದ ಮಾಸ್ಟರ್ ಪರಮಾಣು ಗಡಿಯಾರಕ್ಕೆ ಕೆಲವು ವರ್ಷಕ್ಕೊಮ್ಮೆ  ಒಂದು ಲೀಪ್ ಸೆಕೆಂಡ್ ಸೇರಿಸಬೇಕಾಗುತ್ತದಂತೆ.

ಆದರೆ ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಕಾಲವನ್ನು ಗಣಿಸುವ ಚಾಂದ್ರಮಾನ ಪದ್ಧತಿಯ ಲೆಕ್ಕಾಚಾರ ಇಷ್ಟು ಸರಳ ಅಲ್ಲ.  ಕಡಲಿನ ಉಬ್ಬರವಿಳಿತ ಹೊರತು ಪಡಿಸಿ ಪ್ರಕೃತಿಯ ಎಲ್ಲ ಆಗು ಹೋಗುಗಳೂ ಸೂರ್ಯನ  ಚಲನೆಯನ್ನು ಆಧರಿಸಿರುವುದರಿಂದ ಪ್ರಾಕೃತಿಕ ಘಟನೆಗಳೊಂದಿಗೆ ತಾಳಮೇಳ ಬೇಕಾದರೆ ಇಲ್ಲಿ ಹೆಚ್ಚು ಹೊಂದಾಣಿಕೆ ಮಾಡಬೇಕಾಗುತ್ತದೆ.  ಭೂಮಿಯ ಸುತ್ತ ಚಂದ್ರನ ಚಲನೆಯೂ  ಅರ್ಥೈಸಿಕೊಳ್ಳಲು ಕ್ಲಿಷ್ಟಕರವಾದದ್ದು.  

ಚಂದ್ರನು 360 ಡಿಗ್ರಿ ಕ್ರಮಿಸಿ ಭೂಮಿಯ ಸುತ್ತ ಬರಲು ಸುಮಾರು 27.322 ದಿನಗಳು ಬೇಕಾಗುತ್ತವೆ.  ಇದನ್ನು Sidereal ತಿಂಗಳು ಅನ್ನುತ್ತಾರೆ. ಆದರೆ ಸೂರ್ಯನ ಸುತ್ತ 360 ಡಿಗ್ರಿ ಕ್ರಮಿಸಿ ಸುತ್ತು ಬರಲು 12 ತಿಂಗಳು ತೆಗೆದುಕೊಳ್ಳುವ ಭೂಮಿಯು ಈ ಒಂದು ತಿಂಗಳಲ್ಲಿ ತನ್ನನ್ನು ಸುತ್ತುವ ಚಂದ್ರನ ಸಮೇತ ತನ್ನ ಪಥದಲ್ಲಿ ಸುಮಾರು 30 ಡಿಗ್ರಿ ಮುಂದೆ ಸಾಗಿರುತ್ತದೆ.  ಆದ್ದರಿಂದ ತನ್ನ ಪೂರ್ಣ ಪ್ರದಕ್ಷಿಣೆ ಮುಗಿಸಲು ಚಂದ್ರ 30 ಡಿಗ್ರಿ ಹೆಚ್ಚು ಪಯಣಿಸಬೇಕಾಗುತ್ತದೆ. ಇದಕ್ಕೆ 2.208 ಹೆಚ್ಚುವರಿ ದಿನಗಳು ಬೇಕಾಗುತ್ತವೆ.  ಅಂದರೆ ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ಸ್ಥಾನಕ್ಕೆ ಬರಲು ಚಂದ್ರನಿಗೆ 29.53 ದಿನಗಳು ಬೇಕಾಗುತ್ತವೆ.  ಇದನ್ನು Synodic ತಿಂಗಳು ಅನ್ನುತ್ತಾರೆ. ಈ ಲೆಕ್ಕದಲ್ಲಿ 12 ಚಾಂದ್ರಮಾನ ತಿಂಗಳುಗಳ ವರ್ಷಕ್ಕೆ ಸುಮಾರು 354 ದಿನಗಳಾಗುತ್ತವೆ.  ಇದು ಗ್ರೆಗೊರಿಯನ್ ವರ್ಷಕ್ಕಿಂತ ಸುಮಾರು 11 ದಿನ 6 ಗಂಟೆಗಳಷ್ಟು ಕಮ್ಮಿ.  ಹೀಗೆ ಋತುಮಾನ ಚರ್ಯೆಗಳಿಂದ ಸ್ವಲ್ಪ ಸ್ವಲ್ಪವೇ ಹಿಂದೆ ಸರಿಯುವ ಚಾಂದ್ರಮಾನ ಗಣನೆ 3 ವರ್ಷಗಳಲ್ಲಿ 33 ದಿನಗಳಷ್ಟು ಹಿಂದೆ ಬೀಳುತ್ತದೆ.  ಇದನ್ನು ಸರಿಪಡಿಸಲು ಸೇರಿಸುವ ಹೆಚ್ಚಿನ ತಿಂಗಳೇ ಅಧಿಕ ಮಾಸ.


ಆದರೆ ಯಾವ ತಿಂಗಳು ಸೇರಿಸಬೇಕು? ಇದನ್ನು ತಿಳಿದುಕೊಳ್ಳುವ ಮುನ್ನ ಚಂದ್ರನನ್ನು ಕುರಿತು ನಮಗೆ ಶಾಲೆಗಳಲ್ಲಿ ಕಲಿಸದ ಇನ್ನಷ್ಟು ವಿಷಯಗಳನ್ನು ಅರಿಯಬೇಕು.  ನಾವು ನೋಡುವಂತೆ ಚಂದ್ರನೂ ಸೂರ್ಯನಂತೆ ಪೂರ್ವ ದಿಶೆಯಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸುತ್ತಾನಲ್ಲವೇ.  ಭೂಮಿಯು ಸೂರ್ಯನನ್ನು ವರ್ಷಕ್ಕೊಮ್ಮೆ ಅಪ್ರದಕ್ಷಿಣಾಕಾರವಾಗಿ ಸುತ್ತಿದಂತೆ  ಚಂದ್ರನೂ ಭೂಮಿಯನ್ನು ತಿಂಗಳಿಗೊಮ್ಮೆ ಅಪ್ರದಕ್ಷಿಣಾಕಾರವಾಗಿಯೇ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ದಿನವೊಂದಕ್ಕೆ 13.2 ಡಿಗ್ರಿಗಳ ವೇಗದಲ್ಲಿ ಸುತ್ತುತ್ತಾನೆ.  ಹಾಗಿದ್ದರೆ ನಮಗೆ ಆತ ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಅಸ್ತಮಿಸಿದಂತೆ ಕಾಣಬೇಕಿತ್ತಲ್ಲವೇ. ಭೂಮಿ ತನ್ನ ಅಕ್ಷದ ಸುತ್ತ ತಿರುಗದೆ ಸ್ಥಿರವಾಗಿದ್ದರೆ ಹೀಗೆಯೇ ಆಗುತ್ತಿತ್ತು.  ಚಂದ್ರ ಪಶ್ಚಿಮದಲ್ಲಿ ಉದಯಿಸಿ  ಸುಮಾರು 14 ದಿನಗಳ ನಂತರ ಪೂರ್ವದಲ್ಲಿ ಅಸ್ತಮಿಸುತ್ತಿದ್ದ!  ಆದರೆ ಭೂಮಿಯು ದಿನಕ್ಕೆ 360 ಡಿಗ್ರಿ  ಅಂದರೆ ನಿಮಿಷಕ್ಕೆ 4 ಡಿಗ್ರಿಗಳಂತೆ ಚಂದ್ರ ಪೂರ್ವದತ್ತ ಸಾಗುವುದಕ್ಕಿಂತ ಸುಮಾರು 30 ಪಟ್ಟು ಹೆಚ್ಚು  ವೇಗದಿಂದ  ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದರಿಂದ  ಚಂದ್ರ ಕೂಡ ಇತರ ಆಕಾಶ ಕಾಯಗಳಂತೆ ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸಿದಂತೆ ಕಾಣುತ್ತಾನೆ.  ಆದರೆ ಇತರ ಆಕಾಶಕಾಯಗಳಿಗಿಂತ ಸ್ವಲ್ಪ ತಡವಾಗಿ. ಅಂದರೆ ರೈಲಿನಲ್ಲಿ ಚಹಾ ಮಾರುವವರು ಎಂಜಿನಿನ  ವಿರುದ್ಧ ದಿಕ್ಕಿಗೆ ಬೋಗಿಯಿಂದ ಬೋಗಿಗೆ ನಡೆದಾಗ ಆಗುವಂತೆ ಚಂದ್ರ  24 ಗಂಟೆ 49 ನಿಮಿಷಗಳಲ್ಲಿ ನಿಜವಾಗಿ ಆತ ಚಲಿಸುವ ವಿರುದ್ಧ ದಿಕ್ಕಿನಲ್ಲಿ ಭೂಮಿಗೆ ಒಂದು ಸುತ್ತು ಬಂದಂತೆ ನಮಗೆ ಭಾಸವಾಗುತ್ತದೆ. ಇದೇ ಕಾರಣಕ್ಕೆ ಆತ ದಿನಾ ಸ್ವಲ್ಪ ಸ್ವಲ್ಪವೇ ತಡವಾಗಿ ಉದಯಿಸಿದಂತೆ ನಮಗೆ ಕಾಣುವುದು.



ಹಾಗಾದರೆ ಚಂದ್ರನ ಈ ಚಲನೆಯನ್ನಾಧರಿಸಿ ಕಾಲದ ಗಣನೆ ಹೇಗೆ ಮಾಡುವುದು?  ಅದಕ್ಕೆ ನಮ್ಮ ಪೂರ್ವಜರು  ದಿಗಂತದ 360 ಡಿಗ್ರಿಗಳನ್ನು 12 ಡಿಗ್ರಿಗಳ 30 ಭಾಗಗಳಾಗಿ ಮಾಡಿ ಆಕಾಶದಲ್ಲಿ ಸೂರ್ಯ ಮತ್ತು ಚಂದ್ರರ ಮಧ್ಯದ ಕೋನ ಶೂನ್ಯ ಡಿಗ್ರಿ ಇರುವ ದಿನದಿಂದ ಆರಂಭಿಸಿ ಚಂದ್ರ 12 ಡಿಗ್ರಿಗಳಷ್ಟು ದೂರ ಚಲಿಸಲು ತಗಲುವ ಅವಧಿಯನ್ನು ಒಂದು ತಿಥಿ ಎಂದು ನಿಗದಿ ಪಡಿಸಿದರು. ಅವುಗಳನ್ನು ಶುಕ್ಲ ಪಕ್ಷದ ಪಾಡ್ಯ, ಬಿದಿಗೆ, ತದಿಗೆ... ಚತುರ್ದಶಿ, ಹುಣ್ಣಿಮೆ ಮತ್ತು  ಕೃಷ್ಣ ಪಕ್ಷದ  ಪಾಡ್ಯ, ಬಿದಿಗೆ, ತದಿಗೆ... ಚತುರ್ದಶಿ, ಅಮಾವಾಸ್ಯೆ ಎಂದು ಹೆಸರಿಸಿದರು. ಚಂದ್ರನ  ಸ್ಥಾನವನ್ನು ಪ್ರತಿ ದಿನ ಗುರುತಿಸಲು ಸುಲಭವಾಗುವಂತೆ ಆತನ ಪಥದಲ್ಲಿ  ಸುಮಾರು 13.2 ಡಿಗ್ರಿಗೆ ಒಂದರಂತೆ ಸಮಾನ ದೂರದಲ್ಲಿ ಇರುವ 27 ನಕ್ಷತ್ರಗಳನ್ನು  ಅಶ್ವಿನಿ, ಭರಣಿ..  ರೇವತಿ ಎಂದು  ಕರೆದರು. ಆ ನಕ್ಷತ್ರಗಳನ್ನು ಪಾದಗಳೆಂಬ ನಾಲ್ಕು ಭಾಗ ಮಾಡಿ 30 ಡಿಗ್ರಿಗಳ ಮೇಷ, ವೃಷಭ ...  ಮೀನ ಎಂಬ 12 ರಾಶಿಗಳಲ್ಲಿ ಸಮನಾಗಿ ಹಂಚಿದರು. ಶುಕ್ಲ ಪಕ್ಷದ 15 ಮತ್ತು ಕೃಷ್ಣಪಕ್ಷದ 15 ತಿಥಿಗಳನ್ನೊಳಗೊಂಡ ತಿಂಗಳುಗಳಿಗೆ ಹುಣ್ಣಿಮೆಯ ದಿನ ಚಂದ್ರನು ಇರುವ ನಕ್ಷತ್ರಕ್ಕೆ ಹೋಲುವ  ಚೈತ್ರ, ವೈಶಾಖ ಇತ್ಯಾದಿ ಹೆಸರಿಟ್ಟರು. ಎರಡೆರಡು ತಿಂಗಳುಗಳನ್ನು ಸೇರಿಸಿ ವಸಂತ, ಗ್ರೀಷ್ಮ, ವರ್ಷಾ, ಶರತ್, ಹೇಮಂತ ಮತ್ತು ಶಿಶಿರ ಎಂಬ 6 ಋತುಗಳನ್ನು ಮಾಡಿದರು. ಇಲ್ಲಿ ನಾವು ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ತಿಂಗಳುಗಳನ್ನು ಲೆಕ್ಕ ಹಾಕಿದಂತೆ ಉತ್ತರ ಭಾರತದ ಕೆಲವೆಡೆ ಹುಣ್ಣಿಮೆಯಿಂದ ಹುಣ್ಣಿಮೆಗೆ ತಿಂಗಳು ಬದಲಾಗುವ ಪದ್ಧತಿಯೂ ಇದೆಯಂತೆ.

ಪುರಾಣಗಳ ಪ್ರಕಾರ ಚಂದ್ರನ ಪಥದಲ್ಲಿರುವ  27 ನಕ್ಷತ್ರಗಳನ್ನು ಆತನ ಪತ್ನಿಯರೆಂದು   ಹೇಳಲಾಗುತ್ತದೆ.  ನಕ್ಷತ್ರಗಳ ಪೈಕಿ ರೋಹಿಣಿ  ಚಂದ್ರನಿಗೆ ಹೆಚ್ಚು ಪ್ರಿಯಳೆಂದೂ  ಆಕೆಯೊಡನೆ ಹೆಚ್ಚು ಸಮಯ ಕಳೆಯುತ್ತಾನೆಂದೂ ಹೇಳುವುದುಂಟು.  ಇದು ವೈಜ್ಞಾನಿಕವಾಗಿಯೂ ಸಿದ್ಧಪಟ್ಟಿದೆ.  ತನ್ನ ಪಥದ 4 ರಿಂದ 6 ಡಿಗ್ರಿ ಫಾಸಲೆಯೊಳಗೆ ಇರುವ ನಕ್ಷತ್ರಗಳನ್ನು  ಚಲನೆಯ ವೇಳೆ ಚಂದ್ರ ಕೆಲವೊಮ್ಮೆ ಮರೆ ಮಾಡುತ್ತಾನೆ.  ಇದನ್ನು lunar occultation ಅನ್ನಲಾಗುತ್ತದೆ. ಅತಿ ಹೆಚ್ಚು ಬಾರಿ ಚಂದ್ರನಿಂದ ಮರೆ ಮಾಡಲ್ಪಟ್ಟು occultationಗೆ ಒಳಗಾಗುವ ನಕ್ಷತ್ರ ರೋಹಿಣಿ.



ಹಾಗಿದ್ದರೆ ನಾವು ಪಂಚಾಂಗಗಳಲ್ಲಿ ಗಮನಿಸಿದಂತೆ ತಿಂಗಳ 30 ತಿಥಿಗಳ ಅವಧಿ ಏಕೆ ಸಮಾನವಾಗಿರುವುದಿಲ್ಲ? ಚಂದ್ರನು ಭೂಮಿಯ ಸುತ್ತ ಸುತ್ತುವ ಕಕ್ಷೆಯು ವೃತ್ತಾಕಾರವಾಗಿರದೆ ದೀರ್ಘ ವೃತ್ತವಾಗಿರುವುದೇ ಇದಕ್ಕೆ ಕಾರಣ. ಕೆಪ್ಲರನ ಎರಡನೆಯ ನಿಯಮದ ಪ್ರಕಾರ ಒಂದು ಆಕಾಶಕಾಯವು ಇನ್ನೊಂದರ ಸುತ್ತ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಚಲಿಸುತ್ತಿದ್ದರೆ  ಎರಡರ ನಡುವಿನ ದೂರ ಕಮ್ಮಿ ಇದ್ದಾಗ ಸುತ್ತುವ ವೇಗ ಜಾಸ್ತಿಯಾಗಿರುತ್ತದೆ ಮತ್ತು ದೂರ ಜಾಸ್ತಿ ಇದ್ದಾಗ ವೇಗ ಕಮ್ಮಿಯಾಗಿರುತ್ತದೆ.  ಒಡೆಯ ಸಮೀಪದಲ್ಲಿದ್ದಾಗ ಆಳುಗಳು ವೇಗವಾಗಿ ಕೆಲಸ ಮಾಡಿ ಆತ ದೂರ ಹೋದರೆ ನಿಧಾನಿಸುವುದನ್ನು ಇದಕ್ಕೆ ಹೋಲಿಸಬಹುದು.



ಹೀಗಾಗಿ ಭೂಮಿ ಚಂದ್ರರ ನಡುವಿನ ದೂರ ಕಮ್ಮಿ ಇದ್ದಾಗಿನ ತಿಥಿಗಳು ಕಮ್ಮಿ ಅವಧಿಯವು ಮತ್ತು ದೂರ ಜಾಸ್ತಿ ಇದ್ದಾಗ ಜಾಸ್ತಿ ಅವಧಿಯವಾಗಿರುತ್ತವೆ. ಶೋಭಕೃತ್ ಸಂವತ್ಸರದ ಆಷಾಢ ಮಾಸದ ತಿಥಿಗಳ ಅವಧಿ ಮತ್ತು ಚಂದ್ರನ ದೂರ ತೋರಿಸುವ ಚಿತ್ರದಲ್ಲಿ  ಚಂದ್ರನು ಅತ್ಯಂತ ಸಮೀಪ ಅಂದರೆ  3,60,352 ಕಿ.ಮೀ.ಗಳಷ್ಟೇ ದೂರ ಇದ್ದಾಗಿನ  ಬಹುಳ ಪಾಡ್ಯವು  20 ಗಂಟೆ  19 ನಿಮಿಷದಷ್ಟು ಅತ್ಯಂತ ಕನಿಷ್ಠ ಅವಧಿಯದಾಗಿದ್ದು  ಚಂದ್ರನು ಆತ್ಯಂತ  ಹೆಚ್ಚು ಅಂದರೆ 4,03,339 ಕಿ.ಮೀ.ಗಳಷ್ಟು   ದೂರ ಇರುವಾಗಿನ  ಅಮಾವಾಸ್ಯೆಯು 25 ಗಂಟೆ 52 ನಿಮಿಷದ ಅತ್ಯಂತ ದೀರ್ಘ  ಅವಧಿಯದ್ದಾಗಿರುವುದನ್ನು ಗಮನಿಸಬಹುದು.  ಸಾಂಪ್ರದಾಯಿಕ ಪಂಚಾಂಗಗಳಲ್ಲಿ ಸೂರ್ಯೋದಯದಿಂದ ಆರಂಭಿಸಿ 24 ನಿಮಿಷ ಅವಧಿಯ ಘಟಿಗಳಾಗಿ ತಿಥಿಗಳನ್ನು ತೋರಿಸಿರುತ್ತಾರೆ. ಸುಲಭದಲ್ಲಿ ಅರ್ಥವಾಗಲು ಇಲ್ಲಿ ಅದನ್ನು ಗಂಟೆ ನಿಮಿಷಗಳಾಗಿ ಪರಿವರ್ತಿಸಲಾಗಿದೆ.  ಶ್ರಾದ್ಧಕರ್ಮಾದಿಗಳಂಥ ವಿಶೇಷ ಸಂದರ್ಭಗಳನ್ನು ಬಿಟ್ಟರೆ ಸೂರ್ಯೋದಯ ಕಾಲದಲ್ಲಿ ಇರುವ ತಿಥಿಯಿಂದಲೇ ಆಯಾ ದಿನವನ್ನು ಗುರುತಿಸಲಾಗುತ್ತದೆ.  ತಿಥಿ ಹೆಚ್ಚು ಅವಧಿಯದಾಗಿದ್ದು ಎರಡು ಸೂರ್ಯೋದಯಗಳನ್ನು ಒಳಗೊಂಡರೆ ಅದನ್ನು ಅಧಿಕ ತಿಥಿ ಎಂದೂ ಒಂದು ಸೂರ್ಯೋದಯದ ನಂತರ ಆರಂಭವಾಗಿ ಇನ್ನೊಂದು ಸೂರ್ಯೋದಯದ ಮೊದಲೇ ಮುಗಿದರೆ ಕ್ಷಯ ತಿಥಿ ಎಂದೂ ಕರೆಯುತ್ತಾರೆ. ಆ ಪ್ರಕಾರ ಆಷಾಢ ಬಹುಳ ಚೌತಿ  ಕ್ಷಯ  ಆಗಿರುತ್ತದೆ.


ತಿಥಿಗಳ ಆರಂಭ ಮತ್ತು ಅಂತ್ಯ ಸ್ಥಿರ ನಕ್ಷತ್ರಗಳಿಗೆ ಹೋಲಿಸಿದ ಚಂದ್ರನ ಸ್ಥಾನವನ್ನು ಆಧರಿಸಿದ್ದು ಸೂರ್ಯಾಧಾರಿತ ದಿನಮಾನ, ಹಗಲಿರುಳು, ತಾರೀಕು ಇತ್ಯಾದಿಗಳೊಡನೆ ಯಾವ ರೀತಿಯ ಸಂಬಂಧವನ್ನೂ ಹೊಂದದಿರುವುದೂ ಗಮನಿಸಬೇಕಾದ ಅಂಶ.  ಹೀಗಾಗಿ ಪ್ರಪಂಚದ ಎಲ್ಲ ಭಾಗಗಳಲ್ಲೂ ತಿಥಿಗಳು ಏಕ ಕಾಲಕ್ಕೆ ಆರಂಭವಾಗಿ ಏಕ ಕಾಲಕ್ಕೆ ಅಂತ್ಯವಾಗುತ್ತವೆ. ಆಗಲೇ ಹೇಳಿದಂತೆ ಹಬ್ಬ ಹರಿದಿನಗಳಿಗೆ ಸೂರ್ಯೋದಯ ಕಾಲದಲ್ಲಿ ಇರುವ ತಿಥಿಯನ್ನು ಗಣನೆಗೆ ತೆಗೆದುಕೊಳ್ಳುವ ಪದ್ಧತಿ ಇರುವುದರಿಂದ  ಭಾರತದಲ್ಲಿ ಯಾವುದಾದರೂ ಹಬ್ಬದ  ತಿಥಿಯು ಸಂಜೆ ಆರಂಭವಾದರೆ  time zoneನಲ್ಲಿ ಒಂದು ದಿನ ಹಿಂದೆ ಇರುವ ಅಮೇರಿಕಾದಂಥ ದೇಶಗಳ ಕಾಲಮಾನ ಪ್ರಕಾರ ಅದು ಅವರಿಗೆ ಸೂರ್ಯೋದಯ ಕಾಲದಲ್ಲೇ  ಲಭ್ಯವಾಗಿ ನಮ್ಮಿಂದ ಮೊದಲೇ ಅವರು ಆ ಹಬ್ಬ ಆಚರಿಸುವ ಪ್ರಸಂಗಗಳು ಬರುವುದಿದೆ.   

ಕೆಲವು ಕಡೆ ಕಾಲ ಗಣನೆಗೆ ಸೌರಮಾನ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇಲ್ಲಿ ಭೂಮಿಯು ಸೂರ್ಯನ ಸುತ್ತ ತಿರುಗುವಾಗ ಸೂರ್ಯನು ನಮಗೆ ಯಾವ ರಾಶಿಯಲ್ಲಿರುವಂತೆ ಗೋಚರಿಸುತ್ತಾನೋ ಆ ಹೆಸರಿನಿಂದ ತಿಂಗಳುಗಳನ್ನು ಗುರುತಿಸಿ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಮಣ ಎನ್ನಲಾಗುತ್ತದೆ. ‘ಗೋಚರಿಸುತ್ತಾನೆ’ ಅಂದದ್ದೇಕೆಂದರೆ  ಇಲ್ಲಿ ವಾಸ್ತವವಾಗಿ ನಮ್ಮ ಭೂಮಿಯು ವಿವಿಧ ರಾಶಿಗಳಿಗೆ ಪ್ರವೇಶಿಸುವುದು.  ಅದರ ವಿರುದ್ಧ ದಿಕ್ಕಿನಲ್ಲಿರುವ ರಾಶಿಯಲ್ಲಿ ಸೂರ್ಯ ಇದ್ದಾನೆಂದು ನಮಗೆ ಅನ್ನಿಸುವುದು. ಚಂದ್ರನು ಸುಮಾರು 27 ದಿನಗಳಲ್ಲಿ ಭೂಮಿಯ ಪ್ರದಕ್ಷಿಣೆಯನ್ನು ಪೂರೈಸುವುದರಿಂದ  ದಿನಕ್ಕೊಂದು ನಕ್ಷತ್ರವನ್ನು ದಾಟಿ ಹೋಗುತ್ತಾನೆ. ಭೂಮಿಯು ಸೂರ್ಯನನ್ನು ಸುತ್ತಲು 365.25 ದಿನ ತೆಗೆದುಕೊಳ್ಳುವುದರಿಂದ ಸೂರ್ಯನು ಸುಮಾರು 13 ದಿನ ಒಂದು ನಕ್ಷತ್ರದ ಸನಿಹ ಇದ್ದಂತೆ ನಮಗೆ ಭಾಸವಾಗುತ್ತದೆ. ಇದನ್ನು ಮಹಾನಕ್ಷತ್ರ ಎನ್ನುವುದುಂಟು.  ಸಂಕ್ರಾಂತಿಯು ಬಹುತೇಕ ಗ್ರೆಗೊರಿಯನ್ ತಿಂಗಳುಗಳ ಮಧ್ಯ ಭಾಗದಲ್ಲೇ ಬಂದು  ಜನವರಿ 14ರ ಸನಿಹವೇ ಮಕರ ಸಂಕ್ರಾಂತಿ ಇರುತ್ತದೆ.  ಹಾಗಾಗಿ ಇಲ್ಲಿ ಅಧಿಕ ವರ್ಷ ಇತ್ಯಾದಿಗಳ ಅಗತ್ಯ ಬೀಳುವುದಿಲ್ಲ.  ಆದರೆ ಈಗ ಸೂರ್ಯನು ಡಿಸೆಂಬರ್ 22 ರ ಆಸುಪಾಸಿನಲ್ಲೇ ಮಕರ ರಾಶಿಯನ್ನು ಪ್ರವೇಶಿಸಿ ಉತ್ತರಾಯಣ ಆರಂಭವಾಗುತ್ತಿದ್ದರೂ ಈ ಸುಮಾರು 25 ದಿನಗಳ ಅಂತರವನ್ನು ಏಕೋ ಹಾಗೆಯೇ ಉಳಿಸಿಕೊಳ್ಳಲಾಗಿದೆ.



ಸೌರಮಾನ ಪದ್ಧತಿ ಅನುಸರಿಸುವವರೂ ಹಬ್ಬ ಹರಿದಿನಗಳನ್ನು ಚಾಂದ್ರಮಾನ ತಿಥಿ ಆಧರಿಸಿಯೇ ಆಚರಿಸುತ್ತಾರೆ.  ಆದರೆ ಜನ್ಮಾಷ್ಟಮಿಯಂತಹ ಆಚರಣೆಯಲ್ಲಿ ಒಂದು ತಿಂಗಳ ಅಂತರ ಬರುವುದಿದೆ.  ತುಳು ನಾಡಿನ ಜನರು ಮೇಷ, ವೃಷಭ ಇತ್ಯಾದಿಗಳ ಬದಲು ಪಗ್ಗು, ಬೇಶ, ಕಾರ್ತೆಲ್, ಆಟಿ, ಸೋಣ, ನಿರ್ನಾಲ್, ಬೋಂತೆಲ್, ಜಾರ್ದೆ, ಪೆರಾರ್ದೆ, ಪುಯಿಂತೆಲ್, ಮಾಯಿ, ಸುಗ್ಗಿ ಹೆಸರುಗಳಿಂದ ಸೌರ ತಿಂಗಳುಗಳನ್ನು ಗುರುತಿಸುತ್ತಾರೆ. ಚಂದ್ರನ ಚಲನೆಯನ್ನಾದರೆ ಹುಣ್ಣಿಮೆ ಅಮಾವಾಸ್ಯೆಗಳ ಮೂಲಕ ಸುಲಭವಾಗಿ ಗುರುತಿಸಬಹುದು. ಕೆಲವು ಹಳೆಯ ಸಿನಿಮಾಗಳಲ್ಲಿ ಪ್ರತಿ ಹುಣ್ಣಿಮೆಯಂದು ಗೋಡೆಯ ಮೇಲೊಂದು ಗೆರೆ ಎಳೆಯುವುದನ್ನು ನಾವು ನೋಡಿರುತ್ತೇವೆ. ಆದರೆ ಈಗಿನಂತೆ ಮನೆ ಮನೆಗಳಲ್ಲಿ ಕ್ಯಾಲೆಂಡರುಗಳಿಲ್ಲದಿದ್ದ ಕಾಲದಲ್ಲಿ ಆಗಿನ ಜನಪದರಿಗೆ ಸಂಕ್ರಮಣಗಳ ಬಗ್ಗೆ ಹೇಗೆ ಮಾಹಿತಿ ದೊರಕುತ್ತಿತ್ತೋ ಏನೋ.

ಈಗ  ಮತ್ತೆ ಚಾಂದ್ರಮಾನದ ಅಧಿಕ ಮಾಸದತ್ತ ಬರೋಣ.  ಈ ಪದ್ಧತಿಯ ವರ್ಷಾರಂಭ ಅಂದರೆ ಯುಗಾದಿ  3  ವರ್ಷಗಳಲ್ಲಿ ಸುಮಾರು 33 ದಿನ ಹಿಂದೆ ಬರುತ್ತದೆ ಎಂದು ಆಗಲೇ ನೋಡಿದೆವು.  ಹೀಗಾದರೆ ಪ್ರಕೃತಿಯೊಂದಿಗಿನ ತಿಂಗಳು ಮತ್ತು ಋತುಗಳ ತಾಳ ಮೇಳ ತಪ್ಪುತ್ತದಲ್ಲವೇ.  ಆದರೆ ಹೀಗಾಗದಂತೆ ತಿಂಗಳುಗಳ ದಿನಗಳನ್ನು ಹೆಚ್ಚು ಮಾಡುವಂತಿಲ್ಲ. ಹುಣ್ಣಿಮೆಯ ದಿನ ಪೂರ್ಣ ಚಂದ್ರ ಕಾಣಿಸಲೇ ಬೇಕು, ಅಮಾವಾಸ್ಯೆಯ ದಿನ ಮರೆಯಾಗಲೇ ಬೇಕು.  ಇದಕ್ಕಾಗಿ  ಚಾಂದ್ರಮಾನದ ತಿಂಗಳುಗಳನ್ನು ಸೌರಮಾನದ ಸಂಕ್ರಾಂತಿಯೊಂದಿಗೆ ತಳುಕು ಹಾಕಲಾಯಿತು.  ಸಾಮಾನ್ಯವಾಗಿ ಪ್ರತಿ ಚಾಂದ್ರಮಾನ ತಿಂಗಳಲ್ಲಿ  ಒಂದು ಸಂಕ್ರಾಂತಿ ಇದ್ದು ತಿಂಗಳ ಮಧ್ಯ ಭಾಗದಲ್ಲೆಲ್ಲೋ ಬರುತ್ತದೆ.  ಆದರೆ ಸಮಯ ಕಳೆದಂತೆ ಅದು ತಿಂಗಳ ಕೊನೆ ಭಾಗದತ್ತ ಸಾಗುತ್ತಾ ಹೋಗಿ ಮೂರನೆಯ ವರ್ಷದ ಒಂದು ತಿಂಗಳಲ್ಲಿ  ಸಂಕ್ರಾಂತಿಯೇ ಇಲ್ಲ ಎಂದಾಗುತ್ತದೆ.  ಈ ತಿಂಗಳನ್ನು ಆ ವರ್ಷದ ಅಧಿಕ ಮಾಸವೆಂದು ಘೋಷಿಸಿ ನಂತರದ ತಿಂಗಳನ್ನು ಅದೇ ಹೆಸರಿನ ನಿಜ ಮಾಸವೆಂದು ಪರಿಗಣಿಸಲಾಗುತ್ತದೆ.  ವೇಗವಾಗಿ ನಡೆಯುವ ಪತಿ ಮತ್ತು ನಿಧಾನ ಗತಿಯ ಪತ್ನಿ ಜತೆಯಲ್ಲಿ ಸಾಗುವಾಗ ನಡುವಿನ ಅಂತರ ಬಹಳ ಜಾಸ್ತಿ ಆದರೆ ಪತ್ನಿ ಬರುವ ವರೆಗೆ ಪತಿ ನಿಲ್ಲುವ ರೀತಿಯ ವಿದ್ಯಮಾನ ಇದು. 

ಶ್ರಾವಣವು ಅಧಿಕಮಾಸವಾದ ಶೋಭಕೃತ್ ಸಂವತ್ಸರದ ಸಂಕ್ರಾಂತಿ ವಿವರಗಳ ಪಟ್ಟಿಯಲ್ಲಿ ಕೃಷ್ಣ ಪಕ್ಷದಲ್ಲಿರುವ ಸಂಕ್ರಾಂತಿ ಬರಬರುತ್ತಾ ಮುಂದಕ್ಕೆ ಜರುಗಿ ಶ್ರಾವಣದಲ್ಲಿ ಸಂಕ್ರಾಂತಿಯೇ ಇಲ್ಲದಂತಾದುದನ್ನು ಗಮನಿಸಬಹುದು. ಹೀಗಾಗಿ ಇದು ಅಧಿಕ ಮಾಸವೆನಿಸುತ್ತದೆ. ಅಧಿಕ ಮಾಸದ ನಂತರ ಸಂಕ್ರಾಂತಿ ಶುಕ್ಲ ಪಕ್ಷಕ್ಕೆ ಸ್ಥಾನಾಂತರ ಹೊಂದುತ್ತದೆ. ಇದು ಹೀಗೇ ತಿಂಗಳಿಗೋ ಎರಡು ತಿಂಗಳಿಗೋ ಒಂದೊಂದು ತಿಥಿಯಷ್ಟು ಮುಂದೆ ಹೋಗುತ್ತಾ ಮತ್ತೆ ಮೂರು ವರ್ಷ ಆಗುವಾಗ ಇನ್ನೊಮ್ಮೆ ಅಧಿಕ ಮಾಸ ಬಂದು ಚಕ್ರ ಮುಂದುವರಿಯುತ್ತದೆ.  ಬಹುತೇಕ ಎಲ್ಲ ತಿಂಗಳುಗಳಲ್ಲಿ ಹುಣ್ಣಿಮೆಯ ದಿನ ಆಯಾ ತಿಂಗಳಿನ ಹೆಸರಿಗೆ ಸಾಮ್ಯ ಇರುವ ನಕ್ಷತ್ರ ಇರುವುದನ್ನೂ ನೋಡಬಹುದು.  


ಸಾಮಾನ್ಯವಾಗಿ ವೈಶಾಖದಿಂದ ಆಶ್ವೀಜದೊಳಗಿನ ಯಾವುದಾದರೂ ತಿಂಗಳೇ ಅಧಿಕ ಮಾಸ ಎನ್ನಿಸುವುದು.

ಅಧಿಕ ಮಾಸ ಇದ್ದಂತೆ ಬಲು ಅಪರೂಪಕ್ಕೊಮ್ಮೆ  ಕ್ಷಯಮಾಸ ಎಂಬ  ವಿದ್ಯಮಾನವೂ ಘಟಿಸುವುದುಂಟು.  ಒಂದು ಚಾಂದ್ರಮಾನ ಮಾಸದಲ್ಲಿ ಒಂದೂ ಸಂಕ್ರಾಂತಿ ಇಲ್ಲದಿದ್ದರೆ ಅದು ಅಧಿಕ ಮಾಸವಾಗುವಂತೆ ಒಂದು ತಿಂಗಳಲ್ಲಿ ಎರಡು ಸಂಕ್ರಾಂತಿಗಳು ಬಂದರೆ ಅದು ಕ್ಷಯಮಾಸವೆನ್ನಿಸಿ ಅದನ್ನು ನಂತರದ ತಿಂಗಳಿನೊಂದಿಗೆ ವಿಲೀನಗೊಳಿಸಲಾಗುತ್ತದೆ. 1963-64ರ ಶೋಭಕೃತ್ ಸಂವತ್ಸರದಲ್ಲಿ ಹೀಗಾಗಿತ್ತು. ಆ ವರ್ಷ ಮಾರ್ಗಶಿರ ಮಾಸವೇ ಇರಲಿಲ್ಲ. ವಿವರಗಳನ್ನು ಚಿತ್ರದಲ್ಲಿ ನೋಡಬಹುದು. 



ಆ ವರ್ಷ ಕನ್ಯಾ ಸಂಕ್ರಮಣದಿಂದ ಮೀನ ಸಂಕ್ರಮಣದ ವರೆಗೆ ಎಲವೂ ಅಮಾವಾಸ್ಯೆಯಂದೇ ಬಂದಿವೆ. ಹೀಗಾಗಿ ಮಾಸ  ಬದಲಾವಣೆ ಮತ್ತು ಸಂಕ್ರಮಣ ಆರಂಭದ ಕಾಲಗಳ ಲೆಕ್ಕಾಚಾರದ ಪ್ರಕಾರ ಅಶ್ವಯುಜ ನಂತರದ ಸಂಕ್ರಮಣ ರಹಿತ ಮಾಸವನ್ನು ಅಧಿಕ ಕಾರ್ತಿಕವೆಂದು ನಿರ್ಣಯಿಸಲಾಯಿತು. ನಿಜ ಕಾರ್ತಿಕ ಮಾಸದ ನಂತರ ಮಾರ್ಗಶಿರ ಮಾಸವಾಗಬೇಕಿದ್ದ ತಿಂಗಳಲ್ಲಿ  ಎರಡು ಸಂಕ್ರಾಂತಿಗಳ ಲೆಕ್ಕ ಸಿಕ್ಕಿ  ಮಾರ್ಗಶಿರ ಹೆಸರಿನ ಬದಲಿಗೆ ಅದನ್ನು ಮುಂದಿನ ಪುಷ್ಯ ಮಾಸದೊಂದಿಗೆ ವಿಲೀನ ಗೊಳಿಸಿ ಕ್ಷಯಾಕ್ಷ ಪುಷ್ಯ ಎಂದು ಹೆಸರಿಸಲಾಯಿತು.  ಹೀಗಾಗಿ ಆ ವರ್ಷದಲ್ಲಿ ಮಾರ್ಗಶಿರ ಮಾಸವೇ ಇಲ್ಲ. ಆದರೂ  ಎಂದಿನಂತೆ 12 ತಿಂಗಳುಗಳೇ  ಇವೆ.  

1982-83ನೇ ಸಾಲಿನ ದುಂದುಭಿ ಸಂವತ್ಸರದಲ್ಲೂ ಡಿಸೆಂಬರ್ 16ರಿಂದ ಜನವರಿ 14ರ ವರೆಗಿನ ಮಾರ್ಗಶಿರ ಮಾಸದ ನಂತರ ನೇರವಾಗಿ ಮಾಘ  ಮಾಸ ಬಂದು ಪುಷ್ಯವು ಲುಪ್ತವಾಗಿತ್ತು. ಜನವರಿ 15ರಿಂದ ಫೆಬ್ರವರಿ 12ರ ವರೆಗಿನ ಈ ‘ಪೌಷ-ಮಾಘ’ ಸಂಯುಕ್ತ ಮಾಸವನ್ನು ಪಂಚಾಂಗದಲ್ಲಿ ಅಂಹಸ್ಪತಿಸಂಜ್ಞಕ ಕ್ಷಯಮಾಸ ಎಂದು ಉಲ್ಲೇಖಿಸಲಾಗಿತ್ತು.  ಅದಕ್ಕೆ ಮುನ್ನ ಅಧಿಕ ಅಶ್ವಯುಜ  ಮತ್ತು ನಂತರ ಅಧಿಕ ಫಾಲ್ಗುಣವೂ ಇತ್ತು. ಅಂದರೆ ಆ ಸಂವತ್ಸರದಲ್ಲಿ ಎರಡು ಅಧಿಕ ಹಾಗೂ ಒಂದು ಕ್ಷಯ ಮಾಸ.  ಮುಂದೆ 2124 ಇಸವಿಯಲ್ಲಿ ಕ್ಷಯಮಾಸ ಇರುತ್ತದಂತೆ. ಮಾರ್ಗಶಿರ, ಪುಷ್ಯ ಅಥವಾ ಮಾಘ ಮಾಸ ಮಾತ್ರ  ಕ್ಷಯವಾಗುವುದು.

ಒಟ್ಟಿನಲ್ಲಿ ನಿಯಮಿತವಾಗಿ 3 ವರ್ಷಕ್ಕೊಮ್ಮೆ ಬರುವ ಸಂಕ್ರಾಂತಿರಹಿತ ಅಧಿಕ ಮಾಸ ಆ ಸಂವತ್ಸರಕ್ಕೆ 30 ತಿಥಿಗಳನ್ನು ಸೇರಿಸುತ್ತದೆ.  ಹಲವು ವರ್ಷಗಳಿಗೊಮ್ಮೆ 2 ಸಂಕ್ರಾಂತಿಗಳ ಕ್ಷಯಮಾಸ ಇದ್ದರೆ ಅದಕ್ಕೆ ಬದಲಾಗಿ ಒಂದು ಅತಿರಿಕ್ತ ಅಧಿಕ ಮಾಸ ಸೇರಿಸುವುದರಿಂದ ಒಂದು ತಿಂಗಳ ಹೆಸರನ್ನು ಬದಲಾಯಿಸಿದಂತಾಗುತ್ತದೆಯೇ ಹೊರತು ವರ್ಷದಲ್ಲಿರುವ ದಿನಗಳ ಸಂಖ್ಯೆಯಲ್ಲಿ ಯಾವ ವ್ಯತ್ಯಾಸವೂ ಅಗುವುದಿಲ್ಲ.  ಹೀಗಾಗಿ ಕ್ಷಯಮಾಸ ಪರಿಕಲ್ಪನೆಗೆ ಧಾರ್ಮಿಕ ಮಹತ್ವ ಮಾತ್ರ ಇರುವುದೇನೋ ಎಂದೆನ್ನಿಸುತ್ತದೆ.  

ಸೂರ್ಯ ಚಂದ್ರ ಗ್ರಹಣಗಳ ಕಾಲದಲ್ಲಿ ಪ್ರತ್ಯಕ್ಷವಾಗಿ ಒರೆ ಹಚ್ಚಲ್ಪಟ್ಟು ಶುದ್ಧ  ಪುತ್ಥಳಿ ಚಿನ್ನ ಎಂದು ಸಾಬೀತಾಗುತ್ತಾ ಬಂದಿರುವ ಪಂಚಾಂಗ ರಚನೆಯ ಸಿದ್ಧ ಸೂತ್ರಗಳನ್ನು ರಚಿಸಿದ ನಮ್ಮ ಪೂರ್ವಜರ ಜ್ಞಾನಕ್ಕೆ  ಮತ್ತು ಆ ಸೂತ್ರಗಳನ್ನು ಅರಗಿಸಿಕೊಂಡು  ಆಧುನಿಕ ಸ್ಪರ್ಶದೊಂದಿಗೆ ಈಗಲೂ ಕರಾರುವಾಕ್ಕಾದ ಪಂಚಾಂಗಗಳನ್ನು ರಚಿಸುತ್ತಿರುವ ವಿದ್ವಾಂಸರ ಜಾಣ್ಮೆಗೆ   ನಾವು ತಲೆ ಬಾಗಲೇ ಬೇಕು.

- ಚಿದಂಬರ ಕಾಕತ್ಕರ್, ಮಂಗಳೂರು.
****
ಈ ಬರಹದ ಸಂಕ್ಷಿಪ್ತ ರೂಪ 18-7-2023ರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು.