Monday, 29 March 2021

ಬಾಲ್ಯಕ್ಕೆ ರಂಗು ತುಂಬುತ್ತಿದ್ದ ಪುರ್ಸರ ಹುಣ್ಣಿಮೆ

ನಾಡಿನೆಲ್ಲೆಡೆ ಫಾಲ್ಗುಣ ಮಾಸದ ಹುಣ್ಣಿಮೆ ಹೋಳಿ ಆಚರಿಸುವ ಹಬ್ಬವಾದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದ ಜನರಿಗೆ  ಅದು ಸುಗ್ಗಿ ಹುಣ್ಣಿಮೆ ಅಥವಾ ಪುರ್ಸೆರೆ ಪುಣ್ಣಿಮೆ. ಸೌರಮಾನದ ಪ್ರಕಾರ ಇದು ಮೀನ ಮಾಸದಲ್ಲಿ ಬರುವ ಹುಣ್ಣಿಮೆ.  ಅಧಿಕ ಮಾಸವಿರುವ ಇಸವಿಯಲ್ಲಿ ಚೈತ್ರ ಮಾಸದ ಹುಣ್ಣಿಮೆ ಪುರ್ಸೆರೆ ಪುಣ್ಣಿಮೆ ಆಗುತ್ತದೆ. ಸುಗ್ಗಿಯ ಕಟಾವು ಆಗಿ ಬೆಳೆ ಒಳಗೆ ಸೇರಿ ರೈತಾಪಿ ಜನರು ಬೆವರೊರಸಿಕೊಂಡು ಉಸ್ಸಪ್ಪಾ ಎಂದು ಸುಧಾರಿಸಿಕೊಳ್ಳುವ ಕಾಲ ಅದು. ಶಾಲೆಗೆ ಹೋಗುತ್ತಿದ್ದ ನಮಗೆ ವಾರ್ಷಿಕ ಪರೀಕ್ಷೆಗಳು ಮುಗಿದು ಇನ್ನೇನು ದೊಡ್ಡ ರಜೆ ಸಿಗುವ ಸಮಯ. ಇಂಥ ಪುರ್ಸೆರೆ ಪುಣ್ಣಿಮೆಯ ಸಮಯದ ಕೆಲವು ದಿನ ರೈತಾಪಿ ವರ್ಗದ ವಿವಿಧ ಜನಾಂಗಗಳಿಗೆ ಸೇರಿದವರು ವಿವಿಧ ರೂಪಗಳಲ್ಲಿ ರಾತ್ರಿಯ ಹೊತ್ತು ಊರಿನ ಮನೆ ಮನೆಗೆ ತೆರಳಿ ವೈವಿಧ್ಯಮಯ ಪ್ರದರ್ಶನ ನೀಡಿ ನಮ್ಮ ಮನ ರಂಜಿಸುತ್ತಿದ್ದರು.

ಕಂರ್ಗೋಲು


ಊರಿನ ನಿರ್ದಿಷ್ಟ ಸಮುದಾಯದ ಮೂಲ ನಿವಾಸಿಗಳು ಇದರಲ್ಲಿ ಭಾಗವಹಿಸುವುದು. ಇಬ್ಬರು ಗಂಡಸರು ಕೈಯಲ್ಲಿ ಗಂಟಾಮಣಿ ಆಡಿಸುತ್ತಾ  ‘ಪೊಲಿಯೆ ಪೊಲ್ಯರೆ ಪೋ ಪೊಲ್ಯರೆ ಪೋ ಪೊಲಿಯೆ’ ಎಂದು ಆರಂಭವಾಗುವ  ಪಾಡ್ದನ ಹೇಳುತ್ತಾರೆ. ಇನ್ನಿಬ್ಬರು ಸೊಂಟಕ್ಕೆ ಬಿಳಿ ಬಟ್ಟೆ ಕಟ್ಟಿಕೊಂಡು ಮೈಗೆಲ್ಲ ಬಿಳಿ ಜೇಡಿಯ ಚುಕ್ಕೆ ಮತ್ತು ಗೆರೆಗಳನ್ನು ಚಿತ್ರಿಸಿ ಜುಟ್ಟಿಗೆ ಬಿಳಿ ಬಟ್ಟೆ ಸುತ್ತಿ ಕೈಯಲ್ಲಿ ನೆಕ್ಕಿ ಸೊಪ್ಪಿನ ಗೊಂಚಲುಗಳನ್ನು ಆಡಿಸುತ್ತಾ ಪಾಡ್ದನದ  ಲಯಕ್ಕೆ ಸರಿಯಾಗಿ ಬಳುಕುತ್ತಾ ಹಿಂದೆ ಮುಂದೆ ಚಲಿಸುತ್ತಾರೆ.  ಮಧ್ಯದಲ್ಲಿ ಕೆಲವು ಸಲ ಇಬ್ಬರೂ ಒಟ್ಟಿಗೆ ಕಿಟಾರನೆ ಕಿರುಚಿ ಹಿಮ್ಮುಖವಾಗಿ ತಿರುಗುತ್ತಾರೆ.  ಈ ಅನಿರೀಕ್ಷಿತ ಕಿರಿಚುವಿಕೆ ಚಿಕ್ಕವರಾದ ನಮ್ಮಲ್ಲಿ ತುಂಬಾ ಭಯವನ್ನುಂಟುಮಾಡುತ್ತಿತ್ತು. ಇವರು ಬೆಳಕಿನ ಯಾವ ಆಸರೆಯನ್ನೂ ಜೊತೆಯಲ್ಲಿ ತರುತ್ತಿರಲಿಲ್ಲ. ಚಂದ್ರನ  ಬೆಳದಿಂಗಳಲ್ಲೇ ನರ್ತನ ನಡೆಯುವುದು. ಮನೆಗಳಲ್ಲಿ ಆಗ ವಿದ್ಯುತ್ತೂ ಇರಲಿಲ್ಲ. ನಾವೂ ಕತ್ತಲಲ್ಲೇ ಜಗಲಿಯ ಮೇಲೆ ಕೂತು ಇದನ್ನು ವೀಕ್ಷಿಸುತ್ತಿದ್ದುದು.  ಕಂರ್ಗೋಲು ಅಂದರೆ ಕಾರಣಿಕ ಪುರುಷರಾದ ಕಾನದ, ಕಟದರ ಎಂಬ ಇಬ್ಬರು ವೀರರು;  ಇವರು ಅತಿಕಾರಿ ಎಂಬ ಬತ್ತದ ತಳಿಯನ್ನು ಗಟ್ಟದಿಂದ ತಂದು ಈ ಭಾಗಕ್ಕೆ ಪರಿಚಯಿಸಿದವರು ಎಂದೆಲ್ಲ ಐತಿಹ್ಯ ಇರುವುದು  ಆಗ ನಮಗೆ ಗೊತ್ತಿರಲಿಲ್ಲ. ಕಂರ್ಗೋಲು ಕುಣಿತ ಆದ ಮೇಲೆ ಕೆಲವು ಹುಡುಗರು ನೆಕ್ಕಿ ಸೊಪ್ಪಿನಿಂದ ನೆಲಕ್ಕೆ ಬಡಿಯುತ್ತಾ ‘ಕೇಜಿನಪ್ಪಾ ಕೇಜಿನ್’ ಅನ್ನುತ್ತಾ  ಕುಣಿದು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇರಿಸುವುದಿತ್ತು.

ಪಿಲಿ ಪಂಜಿ


ಇನ್ನೊಂದು ಸಮುದಾಯದವರ ಪಿಲಿ ಪಂಜಿ(ಹುಲಿ ಹಂದಿ) ತಂಡದಲ್ಲಿ ಒಂದಿಬ್ಬರು  ಡೋಲು ನುಡಿಸುತ್ತಾ ‘ಬಾಲಮ್ಮಾ  ಬಲಿಪಮ್ಮಾ ಢೇಣುಳ್ಳಾಯ್ ಮಾಮಾ’ ಎಂದು ಹಾಡುತ್ತಾರೆ. ಹುಲಿ ಮತ್ತು ಹಂದಿಯ ಸರಳ ಮುಖವಾಡ  ಧರಿಸಿದ ಇನ್ನಿಬ್ಬರು ಆ ಲಯಕ್ಕೆ ಸರಿಯಾಗಿ ಕುಕ್ಕರುಗಾಲಲ್ಲಿ ನರ್ತಿಸುತ್ತಾರೆ. ಬೆಳದಿಂಗಳ ಬೆಳಕಿನಲ್ಲಿ ಹುಲಿ ಮಾತ್ತು ಹಂದಿಗಳ ವಿಶೇಷ ಬಣ್ಣಗಳೇನೂ ಇಲ್ಲದ ಅಸ್ಪಷ್ಟ ಆಕೃತಿ ಮಾತ್ರ ನಮಗೆ ಕಾಣಿಸುತ್ತಿದ್ದುದು.  ಈ ತಂಡದವರು ಕೆಲವು ವರ್ಷಗಳಿಗೊಮ್ಮೆ ಮಾತ್ರ ಬರುತ್ತಿದ್ದುದು. ಚಾಮುಂಡಿ ಮತ್ತು ಪಂಜುರ್ಲಿ ದೈವಗಳ ಹಿನ್ನೆಲೆ ಈ ಪಿಲಿ ಪಂಜಿಗಳಿಗಿದೆಯೋ ಏನೋ.

ಗುಮಟೆ

 
ಮರಾಠಿ ನಾಯ್ಕ ಸಮುದಾಯದವರು ಭಾಗವಹಿಸುವ ಕುಣಿತ ಇದು. ಬಿಳಿಯ ಅಡ್ಡ ಪಂಚೆ ಧರಿಸಿ ತಲೆಗೆ ಬಿಳಿಯ ಮುಂಡಾಸು ಕಟ್ಟಿ ಮಣ್ಣಿನ ಮಡಕೆಗಳಿಗೆ ಚರ್ಮದ ಮುಚ್ಚಿಗೆಯಿರುವ ಗುಮ್ಟೆಗಳನ್ನು ಲಯಬದ್ಧವಾಗಿ ಬಾರಿಸುತ್ತಾ ದೇವಿಯನ್ನು ಸ್ತುತಿಸುವ ಹಾಡು ಹಾಡುತ್ತಾ ವೃತ್ತಾಕಾರವಾಗಿ ಚಲಿಸುತ್ತಾರೆ. ಇವರಿಗೂ ತಿಂಗಳ ಬೆಳಕೇ ಆಸರೆ.  ಈ ತಂಡದಲ್ಲಿ ಸಾಮಾನ್ಯವಾಗಿ ಹತ್ತು ಹನ್ನೆರಡು ಜನರಿರುತ್ತಿದ್ದರು.

ಕೊರಗ ಭೂತ


ಇದು ನಲ್ಕೆ ಸಮುದಾಯದವರು ನಡೆಸುತ್ತಿದ್ದ  ಹಗಲು ತಿರುಗಾಟ.  ಭೂತದ ಪಾತ್ರಧಾರಿ ವಿಧ್ಯುಕ್ತವಾಗಿ ಮುಖಕ್ಕೆ ಹಳದಿ ಬಣ್ಣದ ಅರ್ದಳ ಹಚ್ಚಿಕೊಂಡು ಕೆಂಪು ದಿರಿಸು ತೊಟ್ಟಿರುತ್ತಾನೆ. ಮನೆಯಂಗಳಕ್ಕೆ ಬಂದ ಮೇಲೆ ಗಗ್ಗರ ಧರಿಸುತ್ತಾನೆ.  ಜೊತೆಯಲ್ಲಿರುವ ಹೆಂಗಸರು ಸಂದಿ ಹೇಳುತ್ತಾ ತೆಂಬರೆ ನುಡಿಸುವಾಗ ನರ್ತಿಸುತ್ತಾನೆ.

ಪುರ್ಸರು


ನಾವೆಲ್ಲ ಕಾತರದಿಂದ ಕಾಯುತ್ತಿದ್ದುದು ಪುರ್ಸರಿಗಾಗಿ. ರೈತ ಸಮುದಾಯದವರೆಲ್ಲ ಭಾಗವಹಿಸುತ್ತಿದ್ದ  ಇದು ಯಾವುದೇ ದೈವ ದೇವರುಗಳಿಗೆ ನೇರ ಸಂಬಂಧವಿಲ್ಲದ ಒಂದು ರೀತಿಯ ಅಣಕು ಪ್ರದರ್ಶನ. ಈ ತಂಡದಲ್ಲಿ 20 ರಿಂದ 30 ಜನರಿರುತ್ತಿದ್ದರು. ಭಾಗವಹಿಸುವ ಎಲ್ಲರೂ ಊರಿನ ಗುತ್ತು ಮನೆಯೊಂದರಲ್ಲಿ  ಸೇರಿ ವಿವಿಧ ವೇಷಗಳನ್ನು ಧರಿಸಿ ಹೊರಡುತ್ತಿದ್ದರು. ಸಮ್ಮೇಳ ಮತ್ತು ವಾಲಗವನ್ನು ತಂಡದವರೇ ಯಾರಾದರೂ ನುಡಿಸುತ್ತಿದ್ದರು.  ಬೆಳಕಿಗೆ ಪೆಟ್ರೋಮ್ಯಾಕ್ಸ್ ಇರುತ್ತಿತ್ತು.  ಮನೆಯನ್ನು ಸಮೀಪಿಸುತ್ತಲೇ ವಾಲಗ ನುಡಿಸತೊಡಗಿ ‘ದಿಮಿಸೋಲೆ ಮಗಳಾಗ್ ದಾನೆಮಾರುಂಡಾಳ್’ ಎಂಬಿತ್ಯಾದಿ ಸಾಲುಗಳನ್ನು  ಮುಖ್ಯಸ್ಥನು ಹೇಳಿದಾಗ ಉಳಿದವರು ‘ದಿಮಿಸೋಲೆ’ ಅನ್ನುತ್ತಾ ಮನೆಯಂಗಳಕ್ಕೆ ಬಂದ ಮೇಲೆ ವಾಲಗದ ಸದ್ದು ನಿಲ್ಲುತ್ತಿತ್ತು.  ಅಷ್ಟರೊಳಗೆ ನಮಗೆಲ್ಲ ಎಚ್ಚರವಾಗಿರುತ್ತಿದ್ದರೂ ಮುಖ್ಯಸ್ಥನು ‘ಪುರ್ಸೆರ್ ಬತ್ತೇರ್.  ಬಾಕಿಲ್ ದೆಪ್ಪುಲೆ’ ಅನ್ನುವ ವರೆಗೆ ನಾವು  ಹೊರಗೆ ಹೋಗುವಂತಿರಲಿಲ್ಲ. ಆ ಮೇಲೆ ಮತ್ತೆ ವಾಲಗದ ಸದ್ದು ಆರಂಭವಾಗಿ ವೇಷಧಾರಿಗಳೆಲ್ಲರೂ ‘ದಿಮಿಸೋಲೆ, ದಿಮಿಸೋಲೆ, ಹೌದೆ, ಹೌದೆ ...’ ಅನ್ನುತ್ತಾ ಒಟ್ಟಿಗೆ ಕುಣಿಯುವುದು. ನಂತರ ದೇವರ ಪುಷ್ಪಕನ್ನಡಿ ಹೊತ್ತ ಪಾತ್ರಧಾರಿಯಿಂದ ದರ್ಶನ ಬಲಿ. ಆ ಮೇಲೆ ದೇವರನ್ನು ಒಂದು ಪೀಠದ ಮೇಲೆ ಕುಳ್ಳಿರಿಸಿ ಆರತಿ ಬೆಳಗಿ ಪೂಜೆ.  ನಮ್ಮೂರ ಗಿರಿಯಪ್ಪ ಮಾಸ್ಟ್ರು ಈ ಪೂಜಾರಿಯ ಪಾತ್ರ ವಹಿಸುತ್ತಿದ್ದರಿಂದ ಶಾಸ್ತ್ರೋಕ್ತ ಮಂತ್ರಗಳನ್ನು ಉಚ್ಚರಿಸಿಯೇ ಅವರು ಪೂಜೆ ಮಾಡುತ್ತಿದ್ದರು.  ನಂತರ ಬಿಳಿ ವೇಸ್ಟಿ, ಬಿಳಿ ರುಮಾಲು ಧರಿಸಿ ಒಂದು ಕೈಯಲ್ಲಿ  ಬಿಚ್ಚುಗತ್ತಿ ಹಾಗೂ ಪಿಂಗಾರ, ಇನ್ನೊಂದು ಕೈಯಲ್ಲಿ ಗಂಟೆ ಹಿಡಿದ ಕೊಡಮಣಿತ್ತಾಯ ‘ದೈವ’ದ ಪಾತ್ರಧಾರಿಯ ಅಣಕು ಆವೇಶ. ಈ ಪಾತ್ರಧಾರಿ ಹೆಚ್ಚಾಗಿ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಚಣಣ.(ಆತನ ನಿಜ ನಾಮಧೇಯ ಧರ್ಮಣ ಎಂದಾದರೂ ಆತನ ತಂಗಿ ಆತನನ್ನು ಸಣ್ಣಣ್ಣ, ಚಣ್ಣಣ್ಣ, ಚಣಣ ಅನ್ನುತ್ತಿದ್ದುದರಿಂದ ಎಲ್ಲರಿಗೂ ಆತ ಚಣಣನೇ ಆಗಿದ್ದ).   ಆತ ‘ಆಂಚಾತ್ತೋ ತಂತ್ರಿದಾರ್ರೇ’ ಅನ್ನುತ್ತಾ ಮನೆಯ ಮೆಟ್ಟಲನ್ನೂ ಏರಿದಾಗ ನಮಗೆ ಮನದಲ್ಲೇ ಹೆದರಿಕೆಯೂ ಆಗುತ್ತಿತ್ತು. ಅಣಕು ಕೊಡಮಣಿತ್ತಾಯನ ನುಡಿಕಟ್ಟಿನಲ್ಲಿ ‘ಸಿಯಾಳ ಕೊಂಡೊಯ್ದರೂ ಸಿಯಾಳದ ಚಿಪ್ಪು ಕೊಂಡೊಯ್ಯಲು ಬಿಡಲಾರೆ’ ಎಂಬರ್ಥದ ವಾಕ್ಯಗಳ ಜೊತೆ ಅಶ್ಲೀಲ ಅರ್ಥದ ಕೆಲ  ಸಾಲುಗಳು ಇರುತ್ತಿದ್ದವು.  ಈ ಕೊಡಮಣಿತ್ತಾಯನನ್ನು ಉದ್ದ ಗಡ್ಡದ ಸಾೖಬನ ವೇಷಧಾರಿ ಸಮಾಧಾನ ಮಾಡುವುದಿತ್ತು. ಮುಂದೆ ಮೈಗೆಲ್ಲಾ ಬಾಳೆಯ ಒಣ ಎಲೆಗಳನ್ನು ಸುತ್ತಿಕೊಂಡು  ತುದಿ ಸೀಳಿದ ಬಿದಿರಿನ ಕೋಲನ್ನು ನೆಲಕ್ಕೆ ಬಡಿದು ಠಪ್ ಠಪ್ ಸದ್ದು ಮಾಡುತ್ತಾ  ಬರುವ ಸೊಪ್ಪಿನವನಿಂದ ಸೊಂಟಕ್ಕೆ ಕಟ್ಟಿಕೊಂಡ  ಬೈಹುಲ್ಲಿನ ದೊಡ್ಡ ಲಿಂಗದಿಂದ ಮನೆಯ ಮೆಟ್ಟಲನ್ನು ಎಬ್ಬಿಸುವ ಪ್ರಯತ್ನ.  ಆತ ಹಾಳು ಮಾಡಿದ ಮೆಟ್ಟಲನ್ನು ರಿಪೇರಿ ಮಾಡಲು ಮರದ ಬಾಚಿಯೊಂದಿಗೆ ಬರುವವನು ‘ಅಡ್ಕುಲೊರೆ ಬುಡ್ಕುಲೊ ತೈಲ ತುಪ್ಪಾಚೊ,   ಕರ ಕೈಲ್ ಆಟ್ಟೊಡು ಬುಡೆದಿ ಬಾಲೆ ಗಟ್ಟೊಡು’ ಎಂದು ಹಾಡುವ ಒಬ್ಬ ಪೊರ್ಬು. ಬಾಲ್ಯದಲ್ಲಿ ನಮ್ಮ ಮನೆಯ ಗೋವಳನಾಗಿದ್ದ ನೋಣಯ ಹೆಚ್ಚಾಗಿ ಈ ಪೊರ್ಬು ಆಗುತ್ತಿದ್ದ. ನಂತರ ಕೊರಗ ಕೊರತಿ ಜೋಡಿಯಿಂದ ಕೊಳಲು ನುಡಿಸುತ್ತಾ ನರ್ತನ.  ಈ ಪಾತ್ರಗಳನ್ನು ನಿರ್ವಹಿಸುತ್ತಿದ್ದುದು ನಮ್ಮ ಮನೆಯ ಕಾಯಂ ಕೆಲಸದಾಳುಗಳಾಗಿದ್ದ ಆಣ್ಣು ಮತ್ತು ದೇವು. ಅಪರೂಪಕ್ಕೆ ಕೆಲವು ಸಲ ಕೋವಿ ಹಿಡಿದ ಧೊರೆಯೊಂದಿಗಿನ ಕರಡಿ ವೇಷವೂ  ಇರುತ್ತಿತ್ತು. ತಲೆಗೆ ಗೋವೆ ಸಂಪಿಗೆಯ ಕಿರೀಟ ಧರಿಸಿದ ಚಿಕ್ಕ ಮಕ್ಕಳ ದೊಡ್ಡ ದಂಡೇ ಇರುತ್ತಿತ್ತು. ಸುಮಾರು ಮೂರು ದಿನ ಆಸುಪಾಸಿನ  ಊರುಗಳ ಮನೆಗಳಿಗೆಲ್ಲ ಭೇಟಿ ಕೊಟ್ಟು ಆದ ಮೇಲೆ ಕೊನೆಯ ದಿನ ಕಲಸಿದ ಅವಲಕ್ಕಿಯ ರಾಶಿಗೆ ಪೂಜೆ  ಸಲ್ಲಿಸಿದಾಗ ಆ ವರ್ಷದ ಕಾರ್ಯಕ್ರಮ ಮುಕ್ತಾಯವಾಗುತ್ತಿತ್ತು. ಮುಂದೆ ಕೆಲವು ದಿನ ನಾವು  ಕೂಡ ಮನೆಯಲ್ಲಿ  ‘ಅಡ್ಕುಲೊರೆ ಬುಡ್ಕುಲೊ, ಆಂಚಾತ್ತೋ ತಂತ್ರಿದಾರ್ರೇ’ ಎಂದೆಲ್ಲ ಹೇಳುತ್ತಾ ಪುರ್ಸರನ್ನು ನೆನೆಸಿಕೊಂಡು ಆಡುವುದಿತ್ತು. 

ಪುರ್ಸ ವೇಷ ಕಟ್ಟುವುದಕ್ಕೆ ಸಾಮೂಹಿಕ ಸಹಕಾರ ಅಗತ್ಯವಾಗಿದ್ದು ಸಾಕಷ್ಟು ಖರ್ಚಿನ ಬಾಬ್ತೂ ಆಗಿರುತ್ತಿದ್ದುದರಿಂದ ಪ್ರತೀ ವರ್ಷ ಇದು ಸಾಧ್ಯವಾಗುತ್ತಿರಲಿಲ್ಲ.  ಕೆಲವು ವರ್ಷ ನಮ್ಮೂರ ಪಕ್ಕದ ಕುಕ್ಕಿಜಾಲು ಎಂಬಲ್ಲಿನ ಪುರ್ಸರು ಬರುತ್ತಿದ್ದರು.  ಅಪರೂಪಕ್ಕೆ ಎರಡೂ ಕಡೆಯ ಪುರ್ಸರು ಬಂದದ್ದೂ ಉಂಟು. ಕಂರ್ಗೋಲು ಹಾಗೂ ಗುಮ್ಟೆಯವರು ಈಗಲೂ ಒಮ್ಮೊಮ್ಮೆ ಬರುತ್ತಾರಾದರೂ  ಊರಿನಲ್ಲಿ ಮನೆಮನೆಗೆ ಪುರ್ಸರು ಬರುವುದು ನಿಂತು ಅನೇಕ ವರ್ಷಗಳೇ ಆಗಿವೆಯಂತೆ. ನಾನು ನೌಕರಿಗಾಗಿ ಊರು ಬಿಡುವ ಮುನ್ನ 31-3-72ರಂದು ಪುರ್ಸರು ಮತ್ತು ಗುಮ್ಟೆಯವರು ನಮ್ಮ ಮನೆಗೆ ಬಂದದ್ದು ನನ್ನ ದಿನಚರಿಯಲ್ಲಿ ದಾಖಲಾಗಿದೆ.  26-3-1972ರಂದು ಕೊರಗ ಭೂತ ಮತ್ತು 2-4-1972ರಂದು ಕಂರ್ಗೋಲರು ಬಂದಿದ್ದರು.