ವೀರಕೇಸರಿ ಚಿತ್ರದ ಈ ಹಾಡು ಬಹಳಷ್ಟು ಜನರಿಂದ ಮೆಲ್ಲುಸಿರೇ ಸವಿಗಾನ ಎಂದು ತಪ್ಪಾಗಿ ಉಲ್ಲೇಖಗೊಂಡು ತಪ್ಪಾಗಿ ಹಾಡಲ್ಪಡುವುದನ್ನು ಕಂಡರೆ ಆ ವೀರಕೇಸರಿಯೇ "ರೀ ಅದು ರೇ ಅಲ್ಲ ರೀ" ಅನ್ನುತ್ತಿದ್ದನೋ ಏನೋ. ಈ ಗೀತೆಯ ಪಲ್ಲವಿ ಭಾಗ ಜಯಗೋಪಾಲ್, ಉದಯಶಂಕರ್ ರಚನೆಗಳಂತೆ ಸರಳವಾಗಿರದೆ ಮೆಲ್ಲುಸಿರೀ ಸವಿಗಾನ ಎದೆ ಝಲ್ಲೆನೆ ಹೂವಿನ ಬಾಣ ಎಂದು ಬಿಡಿ ಬಿಡಿ ಪದಗಳ ರೂಪದಲ್ಲಿ ಇರುವುದು ಇದಕ್ಕೆ ಕಾರಣವಿರಬಹುದು. ಆಗ ಚಿತ್ರ ಮಂದಿರಗಳಲ್ಲಿ ಸಿಗುತ್ತಿದ್ದ ಪದ್ಯಾವಳಿಯಲ್ಲಿ ಹಾಡಿನ ಸಾಲು ಮೆಲ್ಲುಸಿರೀ ಎಂದೇ ಮುದ್ರಿತವಾಗಿದೆ. ಗಾಯಕರಿಬ್ಬರೂ ಸ್ಪಷ್ಟವಾಗಿ ಮೆಲ್ಲುಸಿರೀ ಎಂದೇ ಹಾಡಿರುವುದನ್ನೂ ಹೆಡ್‌ಫೋನಿನಲ್ಲಿ ಆಲಿಸಿ ಖಚಿತಪಡಿಸಿಕೊಳ್ಳಬಹುದು. ಉನ್ಮತ್ತ ಪ್ರೇಮಿಗಳ ಹಾಡಿನ ಈ ಸಾಲುಗಳನ್ನು ಅರ್ಥೈಸುವುದು ಕೇಳುಗರಿಗೆ ಬಿಟ್ಟದ್ದು. ನಮ್ಮಿಬ್ಬರ ಮೆಲ್ಲುಸಿರು, ಈ ಸವಿಗಾನಗಳ ಸಂಗಮದಿಂದ ಎದೆ ಝಲ್ಲೆನಿಸಿದಾಗ ಮನ್ಮಥನ ಸುಮಶರ ನಾಟಿದ ಅನುಭವವಾಯಿತು ಎಂದೋ, ಮೆಲ್ಲುಸಿರು, ಸವಿಗಾನ, ಕಾಮನ ಹೂವಿನಬಾಣಗಳು ಒಟ್ಟು ಸೇರಿ ಎದೆಯನ್ನು ಝಲ್ಲೆನಿಸಿದವು ಎಂದೋ ಇದರ ತಾತ್ಪರ್ಯವಾಗಿರಬಹುದು. ಘಂಟಸಾಲ ಅವರು ಸ್ವತಃ ಸಂಗೀತ ನಿರ್ದೇಶಿಸಿ ಪಿ. ಸುಶೀಲ ಅವರೊಂದಿಗೆ ಹಾಡಿದ ಕು. ರ. ಸೀತಾರಾಮ ಶಾಸ್ತ್ರಿ ವಿರಚಿತ ಆರೇ ಪದಗಳ ಅತ್ಯಂತ ಚಿಕ್ಕ ಪಲ್ಲವಿ ಭಾಗವನ್ನು ಹೊಂದಿದ ಈ ಹಾಡು ಸುಮನೇಶರಂಜಿನಿ/ಮಧುವಂತಿ ರಾಗಗಳ ಛಾಯೆ ಹೊಂದಿದೆ. ಅದಾಗಲೇ ಪಿ.ಬಿ. ಶ್ರೀನಿವಾಸ್ ಅವರು ರಾಜಕುಮಾರ್ ಅವರ ಧ್ವನಿಯಾಗಿ ಸ್ಥಾಪಿತವಾಗಿದ್ದರೂ ಈ ವೀರ ಕೇಸರಿ, ಸತ್ಯ ಹರಿಶ್ಚಂದ್ರ ಮುಂತಾದ ಚಿತ್ರಗಳಲ್ಲಿ ಘಂಟಸಾಲ ಅವರ ಧ್ವನಿ odd ಎಂದೇನೂ ಅನಿಸುತ್ತಿರಲಿಲ್ಲ. ಆದರೆ ತಾವೇ ಸಂಗೀತ ನೀಡಿದ ನನ್ನ ತಮ್ಮ ಚಿತ್ರದಲ್ಲಿ ಘಂಟಸಾಲ ಅವರು ಪಿ.ಬಿ.ಎಸ್ ಅವರನ್ನೇ ರಾಜ್ ಧ್ವನಿಯಾಗಿ ಬಳಸಿದ್ದರು.
ಕು.ರ.ಸೀ ಅವರ ಪ್ರಾಸಬದ್ಧ ಸಾಲುಗಳನ್ನು ಹೊಂದಿದ ಈ ಹಾಡಿನ ಮೂರೂ ಚರಣಗಳು ಅರ್ಥಗರ್ಭಿತವಾಗಿದ್ದು ಕೊನೆಯ ಚರಣದಲ್ಲಿರುವ ಚಿರ ನೂತನ ರೋಮಾಂಚನ ದಾಂಪತ್ಯದನುಸಂಧಾನ ಭಾಗವು ಪಂಚತಂತ್ರದ ಒಂದು ಭಾಗವಾದ ಮಿತ್ರಲಾಭದಲ್ಲಿರುವ ಆದಿತ್ಯಸ್ಯೋದಯಮ್ ತಾತ ತಾಂಬೂಲಂ ಭಾರತೀ ಕಥಾ | ಇಷ್ಟಾ ಭಾರ್ಯಾ ಸಮಿತ್ರಂಚ ಅಪೂರ್ವಾಣಿ ದಿನೇ ದಿನೇ || (ಸೂರ್ಯೋದಯ, ತಾಂಬೂಲ, ಮಹಾಭಾರತ ಕಥಾ ಶ್ರವಣ, ಮನ ಮೆಚ್ಚಿದ ಮಡದಿಯ ಸಂಗ ಮತ್ತು ಸನ್ಮಿತ್ರರ ಒಡನಾಟ ಇವುಗಳೆಲ್ಲ ಅನು ದಿನವೂ ನೂತನವೇ) ಎಂಬ ಶ್ಲೋಕವನ್ನು ನೆನಪಿಸುತ್ತದೆ.
ಸ್ವಾಭಿಮಾನದ ನಲ್ಲೆ, ಹರೆಯುಕ್ಕಿದೆ ಸೊಗಕಾದಿದೆ, ಓ ನಾಮ ಬಾರದ ಓ ರಾಮಯ್ಯ, ಆಡೊಕೆ ಬಾರದ ಓ ವಯ್ಯಾರಿ, ಎಲ್ಲ ನಿನಗಾಗಿ ಬಂದಿಹೆ ನಾನಾಗಿ, ಸುಗುಣ ನೀತಿ ಚಿರಕಾಲವು ಮತ್ತು ದುಂಡುಮಲ್ಲೆ ದುಂಡುಮಲ್ಲೆ ಈ ಚಿತ್ರದ ಇತರ ಹಾಡುಗಳು. ಇವುಗಳ ಪೈಕಿ ದುಂಡುಮಲ್ಲೆ ಹಾಡಿನಲ್ಲಿ ಹೋಟೊಂಪೆ ಐಸಿ ಬಾತ್, ಚುನರೀ ಸಂಭಾಲ್ ಗೋರೀ ಮುಂತಾದ ಹಿಂದಿ ಹಾಡುಗಳಲ್ಲಿ ಇದ್ದಂತೆ ವಿವಿಧ ತಾಳವಾದ್ಯಗಳನ್ನೊಳಗೊಂಡ ಸುದೀರ್ಘ ಹಿಮ್ಮೇಳ ಇದ್ದದ್ದು ಕನ್ನಡದಲ್ಲಿ ಹೊಸ ಪ್ರಯೋಗವಾಗಿತ್ತು. ವೀರ ಕೇಸರಿ ಚಿತ್ರದ ಕೆಲವು ರೀಲುಗಳು ಮಾತ್ರ ವರ್ಣದಲ್ಲಿದ್ದುದು ಇನ್ನೊಂದು ವಿಶೇಷ. ಮುಂದೆ ದೂರದ ಬೆಟ್ಟ ಚಿತ್ರದಲ್ಲೂ ಎರಡು ಹಾಡುಗಳು ವರ್ಣದಲ್ಲಿದ್ದುದು ಅನೇಕರಿಗೆ ನೆನಪಿರಬಹುದು. ಹಿಂದಿಯ ಕಪ್ಪು ಬಿಳುಪಿನ ಮೊಘಲೆ ಆಜಮ್ ಚಿತ್ರದ ಪ್ಯಾರ್ ಕಿಯಾ ತೊ ಡರನಾ ಕ್ಯಾ ಮತ್ತು ಚೌದವೀಂ ಕಾ ಚಾಂದ್ ಚಿತ್ರದ ಟೈಟಲ್ ಹಾಡುಗಳು ಕೂಡ ವರ್ಣದಲ್ಲಿ ಇದ್ದವು.
ಮೆಲ್ಲುಸಿರೀ ಸವಿಗಾನ
ಎದೆ ಝಲ್ಲೆನೆ ಹೂವಿನ ಬಾಣ
ಮನದಾಚೆ ದೂಡಿದ ಬಯಕೆ
ಕನಸಾಗಿ ಕಾಡುವುದೇಕೆ
ಮಧುಮಂಚಕೆ ವಿಧಿ ಹಂಚಿಕೆ
ಅದಕೇಕೆ ಅಂಜಿಕೆ ಶಂಕೆ
ವಿರಹಾಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯಿತು ಬಿಸಿಲು
ಹೋರಾಡಿದೆ ಹಾರಾಡಿದೆ
ಹಾರೈಸಿ ಪ್ರೇಮದ ಹೊನಲು
ಈ ದೇಹ ರಸಮಯ ಸದನ
ಈ ನೇಹ ಮಧು ಸಂಗ್ರಹಣ
ಚಿರನೂತನ ರೋಮಾಂಚನ
ದಾಂಪತ್ಯದನುಸಂಧಾನ