Sunday, 6 September 2015

ಮನದಾಳದಲ್ಲುಳಿದಿರುವ ಶೆಟ್ಟಿ ಬಸ್


ಬೇರೆ ಬೇರೆ ಕಂಪೆನಿಗಳ  ಅನೇಕ ಬಸ್ಸುಗಳು ಓಡಾಡುತ್ತಿದ್ದರೂ ಮುಂಡಾಜೆ, ಉಜಿರೆ, ಬೆಳ್ತಂಗಡಿ ಭಾಗದ ಜನಜೀವನದ ಅವಿಭಾಜ್ಯ ಅಂಗವಾಗಿದ್ದದ್ದು ಬಾಬು ಶೆಟ್ರ ಶಂಕರ್ ವಿಠಲ್‌ ಮತ್ತು   "ಶೆಟ್ಟಿ ಬಸ್".   ಹೌದು, ಎಲ್ಲರಿಗೂ ಅದು "ಶೆಟ್ಟಿ ಬಸ್". "ನಾನು ಶಂಕರ್ ವಿಠಲ್‌ನಲ್ಲಿ ಬಂದೆ",  "ಹನುಮಾನ್‌ನಲ್ಲಿ ಬಂದೆ" ಅಥವಾ "ಸಿ.ಪಿ.ಸಿಯಲ್ಲಿ ಬಂದೆ" ಅಂದಂತೆ  ನಾನು "ಶೆಟ್ಟಿಯಲ್ಲಿ ಬಂದೆ" ಅಥವಾ "ಶೆಟ್ಟಿ ಮೋಟರ್ ಸರ್ವಿಸಲ್ಲಿ ಬಂದೆ" ಎಂದು ಯಾರೂ ಅನ್ನುತ್ತಿರಲಿಲ್ಲ.  "ಶೆಟ್ಟಿ ಬಸ್ಸಲ್ಲಿ ಬಂದೆ" ಎಂದೇ ಎಲ್ಲರೂ ಅನ್ನುತ್ತಿದ್ದುದು. ಊರಲ್ಲೆಲ್ಲೂ ಹೈಸ್ಕೂಲ್ ಇಲ್ಲದಿದ್ದ ಅಂದು ಮಕ್ಕಳನ್ನು 15 ಪೈಸೆಯ ರಿಯಾಯಿತಿ ದರದಲ್ಲಿ  ಉಜಿರೆಗೆ   ಕೊಂಡೊಯ್ಯುತ್ತಿದ್ದ ಇದು ಅಂದಿನ ಸ್ಕೂಲ್ ಬಸ್ಸೂ ಆಗಿತ್ತು.  ಊರವರು ಉಜಿರೆ ಬೆಳ್ತಂಗಡಿ ಕಡೆಗೆ ಹೋಗಲು ಅವಲಂಬಿಸುತ್ತಿದ್ದುದೂ ಈ ಬಸ್ಸನ್ನೇ. ಬೆಳ್ತಂಗಡಿಯಿಂದ ಬೆಳಗ್ಗೆ ಚಾರ್ಮಾಡಿಗೆ ಹೋಗಿ ಹಿಂತಿರುಗುತ್ತಾ ಶಾಲಾ ಸಮಯಕ್ಕೆ ಸರಿಯಾಗಿ ಉಜಿರೆ ತಲುಪಿ ಮುಂದೆ ಮಂಗಳೂರಿಗೆ ಇದರ ಪ್ರಯಾಣ.  ಸಾಮಾನ್ಯವಾಗಿ ಮಂಗಳೂರಿಗೆ ಹೋಗುವವರು ಉಜಿರೆ ವರೆಗೆ ಇದರಲ್ಲಿ ಹೋಗಿ  ಸುಮಾರು ಇದೇ ಹೊತ್ತಿಗೆ ಬರುತ್ತಿದ್ದ ಕಡೂರು ಮಂಗಳೂರು ಕೃಷ್ಣಾ ಎಕ್ಸ್‌ಪ್ರೆಸ್‌ನಲ್ಲಿ ಅಲ್ಲಿಂದ ಪ್ರಯಾಣ ಮುಂದುವರಿಸುತ್ತಿದ್ದರು. ಏಕೆಂದರೆ ಶಟಲ್ ಸರ್ವಿಸ್ ಆದ ಇದು ಮಂಗಳೂರು ತಲುಪುವಾಗ 12 ಗಂಟೆ ಕಳೆಯುತ್ತಿತ್ತು.  ಅಲ್ಲಿಂದ ಸಾಯಂಕಾಲ ಬೆಳ್ತಂಗಡಿಗೆ ಬಂದು ಅಲ್ಲಿ ಇದರ ಹಾಲ್ಟ್.

ಆಗ ಸಿ.ಪಿ.ಸಿ, ಪಿ.ವಿ. ಮೋಟರ್ಸ್ ಇತ್ಯಾದಿ ಬಸ್ಸುಗಳು ಫಾರ್ಗೊ ಅಥವಾ ಡಾಜ್ ಎಂಜಿನ್ ಹೊಂದಿದ್ದರೆ ಹನುಮಾನ್, ಶಂಕರ್ ವಿಠಲ್, ಭಾರತ್ ಮುಂತಾದವುಗಳಂತೆ ಶೆಟ್ಟಿ ಬಸ್ ಕೂಡ ಟಾಟಾ ಮರ್ಸಿಡಿಸ್ ಬೆಂಜ್ ಎಂಜಿನ್ ಉಳ್ಳದ್ದಾಗಿತ್ತು.  ಬೆಂಜ್ ಬಸ್ಸುಗಳೆಂದರೆ ಉಳಿದವುಗಳಿಗಿಂತ ಒಂದು ಕೈ ಮೇಲು ಎಂದು ಆಗ ನಮ್ಮ ಅಭಿಪ್ರಾಯ.  ಸ್ಟೇರಿಂಗಿನ ಮಧ್ಯದಲ್ಲಿ ಬೆಂಜ್ ಚಿಹ್ನೆಯ ಸ್ವಿಚ್ಚುಳ್ಳ ಎಲೆಕ್ಟ್ರಿಕ್ ಹಾರ್ನ್ ಇವುಗಳ ವಿಶೇಷ ಆಕರ್ಷಣೆ. ಬೆಂಜ್ ಬಸ್ಸುಗಳು ಉಳಿದವುಗಳಿಗಿಂತ ಹೆಚ್ಚು ವೇಗವಾಗಿ ಚಲಿಸುತ್ತವೆ ಎಂಬುದೂ ನಮ್ಮ ಆಗಿನ ಅನಿಸಿಕೆ. ಅದಕ್ಕೆ ತಕ್ಕಂತೆ  ಸಾಕಷ್ಟು ವೇಗವಾಗಿಯೇ ಚಲಾಯಿಸುತ್ತಿದ್ದ  ಶೆಟ್ಟಿ ಬಸ್ಸಿನ  ಡ್ರೈವರ್ ನಮಗೆಲ್ಲ ಅಚ್ಚು ಮೆಚ್ಚು. ಹೆಚ್ಚು ತಿರುವುಗಳಿಲ್ಲದ ಕಡೆ  ಸ್ಟೇರಿಂಗ್‌ನೊಳಗೆ ಎರಡೂ ಕೈಗಳನ್ನು ತೂರಿಸಿ ಮೊಣಕೈಗಳಿಂದ ಕಂಟ್ರೋಲ್ ಮಾಡುತ್ತಾ  ಬಸ್ಸು ಚಲಾಯಿಸುವುದು ಅವರ ಸ್ಪೆಷಲ್ ಸ್ಟೈಲ್ ಆಗಿತ್ತು. ಶಂಕರ್ ವಿಠಲಿನ ಬಾಬು ಶೆಟ್ರು, ಹನುಮಾನಿನ ರಾಮಣ್ಣ ಮುಂತಾದವರು ಪೋಲಿಸ್ ಚಡ್ಡಿ ಧರಿಸುತ್ತಿದ್ದರೆ ಇವರು ಖಾಕಿ ಪ್ಯಾಂಟ್ ತೊಟ್ಟು ರೈಸುತ್ತಿದ್ದರು.  ಸುಮಾರು ಅದೇ ಸಮಯಕ್ಕೆ ಘಟ್ಟದ ಮೇಲಿನಿಂದ ಬರುತ್ತಿದ್ದ "ಶಾರದಾಂಬಾ"  ಏನಾದರೂ ಹಿಂದಿನಿಂದ ಬರುವುದು ಕಂಡರೆ ಬಸ್ಸಿನ ಮೈಯೆಲ್ಲ ನಡುಗುವಂತೆ ಆವೇಶಭರಿತವಾಗಿ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಚಲಿಸಿ ಉಜಿರೆ ಮುಟ್ಟಿದ ಮೇಲೆಯೇ ಹಿಂತಿರುಗಿ ನೋಡುತ್ತಿದ್ದುದು. ನಿತ್ಯದ ಕಂಡಕ್ಟರ್ ರಜೆ ಮಾಡಿದಂದು ಡ್ರೈವರ್  ಸ್ಥಾನಕ್ಕೆ ಇನ್ಯಾರನ್ನೋ ನಿಯೋಜಿಸಿ ಅವರು ಕಂಡಕ್ಟರ್ ಕೆಲಸ ಮಾಡುವುದೂ ಇತ್ತು. ಮಂದವಾಗಿ ಉರಿಯುವ ಬಲ್ಬ್ ಹೊಂದಿದ್ದ ಏಸು ಕ್ರಿಸ್ತನ ಫೋಟೊ ಒಂದು ಬಸ್ಸಿನ ಮುಂಭಾಗದಲ್ಲಿ ಇದ್ದುದರಿಂದ ಅವರು ಕ್ರಿಶ್ಚಿಯನ್ ಎಂದು ತಿಳಿದಿತ್ತು.   "ಸೇರಿ ಸೇರಿ" ಎಂದು ಎಷ್ಟು ಜನರನ್ನೂ ಕೂರಿಸಬಹುದಾಗಿದ್ದ ಉದ್ದ ಸೀಟು ಹೊಂದಿದ್ದ ಇದರಲ್ಲಿ  ಮುಂಬದಿಯಿಂದ 3ನೇ ಸ್ಥಾನ ನಮ್ಮ ಪ್ರಥಮ ಆಯ್ಕೆ. ಇಲ್ಲಿಂದ  ಡ್ರೈವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕ್ಲಚ್ಚು, ಬ್ರೇಕ್, ಎಕ್ಸಲರೇಟರ್, ಗೇರು ಇತ್ಯಾದಿಗಳನ್ನು  ನೋಡಲು ಸಾಧ್ಯವಾಗುತ್ತಿದ್ದುದು ಇದಕ್ಕೆ ಕಾರಣ. ಬಸ್ಸು ಆಗಾಗ "ಸೀನು"ವುದನ್ನು ಗಮನಿಸಲೂ ಅದೇ ಪ್ರಶಸ್ತ ಜಾಗವಾಗಿತ್ತು.  ಆಗಿನ ಬಸ್ಸುಗಳಲ್ಲಿ ಧೂಮ್ರಪಾನ ಮಾಡಬಾರದು ಅಥವಾ ಬೀಡಿ ಸಿಗರೇಟು ಸೇದಬಾರದು ಎಂಬರ್ಥದಲ್ಲಿ ಹೊಗೆಬತ್ತಿ ಸೇದಬಾರದು ಎಂಬ ಬರಹ ಇರುತ್ತಿತ್ತು. ಇದನ್ನು ನೋಡಿದಾಗ ನನಗೆ  ಊದುಬತ್ತಿ ನೆನಪಾಗುತ್ತಿತ್ತು!

ಉಜಿರೆಯಲ್ಲಿ ತಾಮ್ರದ ಅಂಗಡಿಯ ಪಾಂಡುರಂಗರು ಇದರ ಏಜಂಟ್.  ಉಜಿರೆ ತಲುಪಿದ ಶೆಟ್ಟಿ ಬಸ್ಸು ಒಮ್ಮೆ ಎಂಜಿನ್ ರೇಸ್ ಮಾಡಿ ನಿಲ್ಲುತ್ತಿದ್ದಂತೆ ಅತ್ತ ಬರುತ್ತಾ "ಮಂಗಳೂರ್ ಯಾರು ಮಂಗಳೂರ್" ಎಂದು ಒಂದು ಸಲ ಮಾತ್ರ  ಜೋರಾಗಿ ಕೂಗುವುದು ಅವರ ಕ್ರಮ.   ಎರಡನೆಯ ಸಲ ಅವರು ಇದನ್ನು ಹೇಳಿದ್ದು ಯಾರೂ ಕೇಳಿಲ್ಲ!  ಎಲ್ಲ ಪ್ರಯಾಣಿಕರೂ ಊರವರೇ ಆಗಿರುತ್ತಿದ್ದುದರಿಂದ ಗುಣಸಾಗರಿ ರಸಾಯನದ ಲೈಟ್ ಭಟ್ರು ಈ ಬಸ್ಸಿನತ್ತ ಬರುತ್ತಿರಲಿಲ್ಲ ಎಂದು ನನ್ನ ನೆನಪು.

1968ರ ಸುಮಾರಿಗೆ ಈ ಭಾಗದ ಮಾರ್ಗಗಳು ರಾಷ್ಟ್ರೀಕೃತವಾದ ಮೇಲೂ ಒಂದೆರಡು ತಿಂಗಳು ಖಾಸಗಿ ಬಸ್ಸುಗಳಿಗೆ ಅವಕಾಶ ಇತ್ತು.  KSRTCಯ ರಿಯಾಯಿತಿ ಪಾಸುಗಳನ್ನು ಪಡೆದು ವಿದ್ಯಾರ್ಥಿಗಳನೇಕರು ಅವುಗಳಲ್ಲಿ ಪ್ರಯಾಣಿಸತೊಡಗಿದರು.  ಕೆಲವು ದಿನ KSRTC ಕೈ ಕೊಟ್ಟಾಗ  ಅವರನ್ನೂ 15 ಪೈಸೆಯ  ರಿಯಾಯಿತಿ ದರದಲ್ಲೇ ಕರೆದೊಯ್ಯುತ್ತಿತ್ತು ಶೆಟ್ಟಿ ಬಸ್.

ಒಮ್ಮೆ ಮುಂಡಾಜೆ ಸೇತುವೆ ದುರಸ್ತಿಗೆಂದು ಮುಚ್ಚಲ್ಪಟ್ಟಾಗ ಒಂದು  ವಾರ ಕಾಲ  ಶೆಟ್ಟಿ ಬಸ್ಸು ಸೇರಿದಂತೆ ಎಲ್ಲ ವಾಹನಗಳು ಪಂಚಾಯತು ರಸ್ತೆ ಮೂಲಕ ಗುಂಡಿ ದೇವಸ್ಥಾನದ ಎದುರಿಂದ ಹಾದು ಮೃತ್ಯುಂಜಯಾ ಹೊಳೆ ದಾಟಿ ಚಲಿಸುತ್ತಿದ್ದುದು ಇನ್ನೊಂದು ಮರೆಯಲಾಗದ ಅನುಭವ.  ಯಾವಾಗಲೂ ಎರಡು ಕಿಲೋಮೀಟರ್ ನಡೆದು ಬಸ್ ಹಿಡಿಯಬೇಕಾಗಿದ್ದ ನಮಗೆ ಆ ಒಂದು ವಾರ  ಮನೆಯೆದುರೇ ಬಸ್ಸನ್ನೇರಿ ಸಂಜೆ  ಮನೆ ಮುಂದೆಯೇ ಇಳಿಯುವ ಸಂಭ್ರಮ!

ಮೇಲಿನ ಚಿತ್ರದಲ್ಲಿ ಕಾಣಿಸುತ್ತಿರುವುದು ನಿಜವಾದ ಶೆಟ್ಟಿ ಬಸ್ಸೇನೂ ಅಲ್ಲ.   ಅಂತರ್ಜಾಲದಲ್ಲಿ  ದೊರಕಿದ  ಸರಿ ಸುಮಾರು ಅದನ್ನೇ ಹೋಲುವ ಬಸ್ಸಿನ ಚಿತ್ರವೊಂದನ್ನು ಒಂದಷ್ಟು ಮಾರ್ಪಡಿಸಿ ಶೆಟ್ಟಿ ಬಸ್ಸಿನ ಪ್ರತಿರೂಪವನ್ನಾಗಿಸಿದ್ದೇನೆ! ಶೆಟ್ಟಿ ಬಸ್ ಈಗ ಇರುವುದು ಮನದಾಳದಲ್ಲಿ ಮಾತ್ರ.

ಶೆಟ್ಟಿ ಬಸ್ಸಿನಷ್ಟೇ ಜನಪ್ರಿಯವಾಗಿದ್ದ ಇನ್ನೊಂದು ಬಸ್  ಬಾಬು ಶೆಟ್ರ ಶಂಕರ್ ವಿಠಲ್.  ಚಾರ್ಮಾಡಿ- ಮುಂಡಾಜೆ ಕಡೆಯವರಿಗೆ  ಪೇಟೆಗೆ ಬರಲು ದಿನದ ಮೊದಲ ಮತ್ತು ಮನೆಗೆ ಹಿಂತಿರುಗಲು ಕೊನೆಯ ಬಸ್ಸು ಅದೇ ಆಗಿತ್ತು.  ಚಾರ್ಮಾಡಿಯಲ್ಲಿ  ರಾತ್ರೆ ತಂಗುತ್ತಿದ್ದ ಅದು ಬೆಳಗ್ಗೆ ಸುಮಾರು 6 ಗಂಟೆಗೆ ಹೊರಟು 11 ಗಂಟೆ ಹೊತ್ತಿಗೆ ಮಂಗಳೂರು ತಲುಪುತ್ತಿತ್ತು.  ಅಲ್ಲಿಂದ ಕುಳೂರಿಗೆ ಒಂದು ಕಟ್ ಟ್ರಿಪ್ ಮಾಡಿ ಬಂದು ಮಂಗಳೂರಿಂದ 3 ಗಂಟೆಗೆ ಹೊರಟು ಸಂಜೆ 7ರ ಹೊತ್ತಿಗೆ ಮತ್ತೆ ಚಾರ್ಮಾಡಿ ಸೇರುತ್ತಿತ್ತು.  ಬಾಬು ಶೆಟ್ರು ಅಂದರೆ ಅಂದಿನವರಿಗೆ ಒಂದು free courier ಇದ್ದಂತೆ.  ಶೆಟ್ರೆ, ಈ ಕೆಲವು ತೆಂಗಿನ ಕಾಯಿಗಳನ್ನು ಬಂಟ್ವಾಳಕ್ಕೆ ತಲುಪಿಸಿ ಬಿಡಿ ಎಂದೋ, ಬರುವಾಗ ಮಂಗಳೂರಿಂದ ಒಂದು 10 ರೂಪಾಯಿಯ ಮಲ್ಲಿಗೆ ತನ್ನಿ ಎಂದೋ, ಈ ಮಕ್ಕಳನ್ನು  ಪುಂಜಾಲಕಟ್ಟೆಯಲ್ಲಿ ಇಳಿಸಿ ಶೆಟ್ರೇ ಎಂದೋ ಒಂದಲ್ಲ ಒಂದು ಕೋರಿಕೆ ಇಲ್ಲದ ದಿನವೇ ಇದ್ದಿರಲಾರದು.  ಎಲ್ಲರ ಕೋರಿಕೆಗಳನ್ನು ನಗುಮೊಗದಿಂದಲೇ ಪೂರೈಸುತ್ತಿದ್ದ ಬಾಬು ಶೆಟ್ಟರು ಜನಾನುರಾಗಿಯಾಗಿದ್ದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.  ಅವರ ಬಸ್ಸಿನ speedo meterನ ಮುಳ್ಳು 30 MPHನ್ನು ಎಂದೂ ದಾಟಿರಲಾರದು.  ಅದರ ಕಂಡಕ್ಟರ್ "ಬೇಗ ಬೇಗ ಬೇಗ" ಎಂದು ಹತ್ತುವವರನ್ನಾಗಲೀ ಇಳಿಯುವವರನ್ನಾಗಲಿ ಅವಸರಪಡಿಸಿದ್ದೂ ಇರಲಾರದು.

Dodge ಎಂಜಿನ್ ಹೊಂದಿದ್ದು"ಗುಡುಗುಡುಗುಡು" ಎಂಬ ವಿಶಿಷ್ಟ ಸದ್ದಿನೊಡನೆ ದ.ಕ. ಜಿಲ್ಲೆಯಲ್ಲಿ ಓಡಾಡುತ್ತಿದ್ದ C P C "ಮೆಡೋಸ್" ಬಸ್ಸಿನ ನೆನಪು ಕೂಡ ನಮ್ಮನ್ನು ಗತಕಾಲಕ್ಕೆ ಕರೆದೊಯ್ಯುವಂಥದ್ದೆ.  ಆ ಕಾಲಕ್ಕೆ ಹೊಸ ಮಾದರಿಯದಾಗಿದ್ದ ಇದಕ್ಕೆ "ಮೆಡೋಸ್" ಬಸ್ಸು ಎಂಬ ಹೆಸರೂ ಇತ್ತು. ಆಗ ಕಿಟಿಕಿಯ ಗಾಜು ಇದ್ದುದು ಭಾರತ್ ಮೋಟರ್ಸ್ ಮತ್ತು ಈ ಮಾದರಿಯ CPC ಬಸ್ಸುಗಳಿಗೆ ಮಾತ್ರ. ಉಳಿದ ಬಸ್ಸುಗಳಲ್ಲಿ ಮಳೆ ಬಂದಾಗಲಷ್ಟೇ ಬಿಡಿಸಿ ಕೆಳಗಿಳಿಸಲ್ಪಡುವ ಸುತ್ತಿಟ್ಟ ಟರ್ಪಾಲ್ ಇರುತ್ತಿತ್ತು. ಅದನ್ನು ಮಳೆ ಬಂದಾಗ ಬಿಡಿಸಿ ಮಳೆ ನಿಂತೊಡನೆ ಹಿಂದಿನ ಮತ್ತು ಮುಂದಿನವರೊಡನೆ ಸಮನ್ವಯ ಸಾಧಿಸಿ ಮತ್ತೆ ಸುತ್ತಿ ಕಟ್ಟುವ ವಿಶೇಷ duty ಕಿಟಿಕಿ ಪಕ್ಕ ಕುಳಿತವರದಾಗಿರುತ್ತಿತ್ತು. CPCಯಂತೆಯೇ ಶಂಕರ್ ವಿಟ್ಠಲ್, ಕೆನರಾ, PV ಮೋಟರ್ಸ್, ಹನುಮಾನ್(ಇದಕ್ಕೆ ಹೆಸರಿನ ದೊಡ್ಡ ಬೋರ್ಡು ಇರುತ್ತಿರಲಿಲ್ಲ. ಸಣ್ಣ ಅಕ್ಷರಗಳಲ್ಲಿ HT Co Ltd ಎಂದು ಮಾತ್ರ ಬರೆದಿರುತ್ತಿತ್ತು.), ಮಂಜುನಾಥ್, ಭಾರತ್ ಇವು ಆ ಕಾಲದಲ್ಲಿ ಹೆಚ್ಚು ಸಂಖ್ಯೆಯ ಬಸ್ಸುಗಳೊಂದಿಗೆ ನಮ್ಮ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ಕಂಪನಿಗಳು. ಒಂದೆರಡು ಬಸ್ಸುಗಳನ್ನು ಹೊಂದಿದ್ದ ಜಯಪದ್ಮಾ, ಆಂಜನೇಯ, ಶಾರದಾಂಬಾ, ಕೃಷ್ಣಾ, ವೆಸ್ಟ್ ಕೋಸ್ಟ್, CKMS(ಇದರ ನಿಜ ಹೆಸರು ಗೊತ್ತಿರಲಿಲ್ಲ. ನಾವು ಚಾಡಿಖೋರ ಮೋಟರ್ ಸರ್ವೀಸ್ ಅನ್ನುತ್ತಿದ್ದೆವು!), ವೆಂಕಟೇಶ್ ಮೋಟರ್ ಮುಂತಾದವೂ ಇದ್ದವು. ಆ ಮೇಲೆ ಬಲ್ಲಾಳ್ ಕಂಪನಿಯ ಬಸ್ಸುಗಳೂ ಆರಂಭವಾದವು. ಮಂಗಳೂರು - ಹಾಸನ, ಕುಂದಾಪುರ - ಬೆಂಗಳೂರು ರೂಟಿನ ST ಬಸ್ಸುಗಳೂ ನಮ್ಮೂರನ್ನು ಹಾದು ಹೋಗುತ್ತಿದ್ದವು.

ಬೆಳಗ್ಗೆ ಸುಮಾರು 11ಕ್ಕೆ ಮಂಗಳೂರಿನಿಂದ ಹೊರಟು 12-30ಕ್ಕೆ ಉಜಿರೆ ತಲುಪಿ ಚಾರ್ಮಾಡಿ ಘಾಟಿಯ ಮಧ್ಯ ಭಾಗದಲ್ಲಿರುವ ಗಡಿ ವರೆಗೆ ತಲುಪುತ್ತಿದ್ದ ತಿಳಿ ನೀಲಿ ಬಣ್ಣದ ಭಾರತ್ ಬಸ್ಸು ತಾರಾನಾಥ ಎಂಬ ಡ್ರೈವರನ ವೇಗದ ಚಾಲನೆಗೆ ಪ್ರಸಿದ್ಧವಾಗಿತ್ತು. ಚಾರ್ಮಾಡಿ ಗಡಿಯಿಂದ ಕಡೂರು ಕಡೆಗೆ ಈ ಸಮಯಕ್ಕೆ ಹೊಂದುವಂತೆ ಬೇರೆ ಕನೆಕ್ಷನ್ ಬಸ್ಸು ಇರುತ್ತಿತ್ತು. ಭಾಷಾವಾರು ಪ್ರಾಂತ ರಚನೆಗೆ ಮೊದಲು ಕರಾವಳಿ ಮದರಾಸು ಪ್ರೆಸಿಡೆನ್ಸಿಗೂ ಘಟ್ಟದ ಭಾಗ ಮೈಸೂರು ಸಂಸ್ಥಾನಕ್ಕೂ ಸೇರಿದ್ದುದರಿಂದ ಆಗ ಆಯಾ ಭಾಗದ ಬಸ್ಸುಗಳಿಗೆ  ಚಾರ್ಮಾಡಿ ಗಡಿ ವರೆಗೆ ಮಾತ್ರ ಪರ್ಮಿಟ್  ಇರುತ್ತಿತ್ತು. ಅಲ್ಲಿ ಪ್ರಯಾಣಿಕರು ಈಚೆ ಬಸ್ಸಿನಿಂದಿಳಿದು ಆಚೆ ಬಸ್ಸಿಗೆ ಏರಬೇಕಾಗಿತ್ತು. ಲಗೇಜನ್ನು ಬಸ್ಸಿನ ಸಿಬ್ಬಂದಿಯೇ ಸ್ಥಳಾಂತರಿಸುತ್ತಿದ್ದರಂತೆ. ಘಾಟಿಯ ಇಕ್ಕಟ್ಟಿನ ಗಡಿ ಪ್ರದೇಶದಲ್ಲಿ ಒಂದೆರಡು ಬಸ್ಸುಗಳು ಅಕ್ಕ ಪಕ್ಕ ನಿಲ್ಲುವಷ್ಟು ಸಮತಟ್ಟು ಜಾಗ ನಿರ್ಮಿಸಿದ್ದರಂತೆ.  ನಂತರ ಈ ಪರ್ಮಿಟ್ ಅಡಚಣೆ ನಿವಾರಣೆಯಾದರೂ ಭಾರತ್ ಬಸ್ಸು ಮಾತ್ರ ಕೊನೆ ವರೆಗೂ ಚಾರ್ಮಾಡಿ ಗಡಿ ವರೆಗೆ ಮಾತ್ರ ಚಲಿಸುತ್ತಿತ್ತು. 

ಈಗಲೂ ಚಾರ್ಮಾಡಿ ಮಂಗಳೂರು ಹೆದ್ದಾರಿಯಲ್ಲಿ ಸಾಗುವಾಗ ತಿರುವುಗಳನ್ನು ನೇರಗೊಳಿಸಿದಲ್ಲಿ ಉಳಿದಿರುವ ಹಳೆ ರಸ್ತೆಯ ಪಳೆಯುಳಿಕೆಗಳನ್ನು ಕಂಡಾಗ ಅವುಗಳ ಮೇಲೆ ಸಾವಿರಾರು ಬಾರಿ ಚಲಿಸಿರಬಹುದಾದ ಇಂತಹ ಹಳೆ ಬಸ್ಸುಗಳ ನೆನಪಾಗುವುದಿದೆ.

ಆ ಕಾಲದ ಒಂದು ಕಾಲ್ಪನಿಕ ಬಸ್ ಸ್ಟೇಂಡಿನ ಚಿತ್ರ.


ಅಂದಿನ ಪಿ.ವಿ. ಮೋಟರ್ ಸರ್ವಿಸ್ ಬಸ್ ಹೀಗಿರುತ್ತಿತ್ತು.



1933ರಲ್ಲಿ ಚಾರ್ಮಾಡಿ ಘಾಟಿ ತಿರುವಿನಲ್ಲಿ ಇಳಿಯುತ್ತಿರುವ ಹಳೆಯ ಕಾಲದ ಬಸ್ಸಿನ ಚಿತ್ರ.


ಇದು ಕಡೂರಿನಿಂದ ಮುಲ್ಕಿ ಅಥವಾ ಮಂಗಳೂರು ರೂಟಿನ ಕನೆಕ್ಟಿಂಗ್ ಬಸ್ ಆಗಿ ಚಾರ್ಮಾಡಿ ಗಡಿಯಿಂದ ಹೊರಟಿದ್ದು ಇದ್ದಲಿನ ಎಂಜಿನ್ ಹೊಂದಿರಬಹುದು. ನಮ್ಮ ಅಣ್ಣ ಉಜಿರೆ ಕಾರ್ಕಳ ಮಧ್ಯೆ ಇಂಥ ಇದ್ದಲಿನ  ಬಸ್ಸಲ್ಲಿ ಅನೇಕ ಸಲ ಓಡಾಡಿದ್ದರಂತೆ. ಬಸ್ಸಿನಿಂದಿಳಿಯುವಷ್ಟರಲ್ಲಿ ಇದ್ದಲಿನ ಪುಡಿ ಮೈಕೈಗೆ ಮೆತ್ತಿ ಬಸ್ಸಿನಿಂದಿಳಿಯುವವರ ಸ್ವರೂಪವೇ ಬದಲಾಗಿ ಯಾರೆಂದೇ ಗೊತ್ತಾಗುತ್ತಿರಲಿಲ್ಲವಂತೆ! ಶಿವರಾಮ ಕಾರಂತರ ಚಿತ್ರಮಯ ದಕ್ಷಿಣ ಕನ್ನಡ ಪುಸ್ತಕದಲ್ಲಿ ಈ ಫೋಟೊ ದೊರೆಯಿತು. ಅದನ್ನು ನಾನು ವರ್ಣರಂಜಿತಗೊಳಿಸಿದೆ.