
ಆರ್.ಎನ್.ಜಯಗೋಪಾಲ್ ಅವರು ಯೌವನವನ್ನು ಮೋಜಿನ ಮೋಟರು ಗಾಡಿಗೆ ಹೋಲಿಸಿ ಬರೆದಿರುವ ಈ ಹಾಡು 1963ರಲ್ಲಿ ತಮ್ಮ ತಂದೆ ಆರ್. ನಾಗೇಂದ್ರ ರಾವ್ ನಿರ್ಮಿಸಿದ ಆನಂದ ಬಾಷ್ಪ ಚಿತ್ರದ್ದು. ಹಾಡಿದವರು ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರು. ಒಂದೆರಡು ಕಡೆ ಪೀಠಾಪುರಂ ನಾಗೇಶ್ವರ ರಾವ್ ಧ್ವನಿಯನ್ನೂ ಕೇಳಿದಂತಾಗುತ್ತದೆ. ಕಣ್ಣು ಮುಚ್ಚಿ ಕೇಳಿದರೂ ಚಲಿಸುವ ಮೋಟರು ಗಾಡಿಯ ದೃಶ್ಯವನ್ನು ಕಣ್ಣೆದುರಿಗೆ ತರುವಂತಹ ಲವಲವಿಕೆಯ ಸಂಗೀತ ಸಂಯೋಜಿಸಿದವರು ಜಿ.ಕೆ.ವೆಂಕಟೇಶ್. ಟ್ರಂಪೆಟ್, ಮ್ಯಾಂಡೊಲಿನ್, ಪಿಕೊಲೊ ಫ್ಲೂಟ್, ಕ್ಲಾರಿನೆಟ್, ಗಿಟಾರ್, ವಯೊಲಿನ್ಸ್, ಕೋರಸ್, ಬೊಂಗೊಗಳ ಅದೆಂತಹ crisp combination, ಧ್ವನಿಮುದ್ರಣದಲ್ಲಿ ಅದೆಂತಹ ಸ್ಪಷ್ಟತೆ! ವೇಗದ ಹಾಡು. ಆದರೆ ಅಬ್ಬರ ಇಲ್ಲ, ಕಿರಿಚಾಟ ಇಲ್ಲ. ಒಂದು ಕಾಲದಲ್ಲಿ ರೇಡಿಯೊದಲ್ಲಿ ಆಗಾಗ ಕೇಳಿ ಬರುತ್ತಿದ್ದ ಈ ಹಾಡು ಈಗ ಯಾಕೋ ಅಜ್ಞಾತ ವಾಸ ಅನುಭವಿಸುತ್ತಿರುವಂತಿದೆ.
ಸೂಕ್ಷ್ಮವಾಗಿ ಸಾಹಿತ್ಯವನ್ನು ಗಮನಿಸಿದರೆ ಜಯಗೋಪಾಲ್ ಅವರು ಎಷ್ಟು ಚೆನ್ನಾಗಿ ಯೌವನವನ್ನು ಮೋಟರಿನೊಂದಿಗೆ ಸಮೀಕರಿಸಿದ್ದಾರೆ ಅನ್ನಿಸದಿರದು. ಪಲ್ಲವಿಯಲ್ಲಿ ವಿವರಿಸಿದಂತೆ ಯೌವನವು ಒಮ್ಮೆ ಅತ್ತ ಒಮ್ಮೆ ಇತ್ತ ವಾಲುತ್ತಲಿರುವ ಚಂಚಲತೆಯ ಪ್ರತೀಕವೇ ಅಲ್ಲವೇ. ಹೆತ್ತವರು, ಗುರು ಹಿರಿಯರು ಸೂಕ್ತ ಮಾರ್ಗದರ್ಶನ ನೀಡಿ ನೂಕಿದರೆ ಮಾತ್ರ ಯೌವನದ ತೇರು ಸರಿಯಾದ ದಾರಿಯಲ್ಲಿ ಸಾಗೀತು, ಕೆಲವೊಮ್ಮೆ ಹುಚ್ಚು ಹುಮ್ಮಸ್ಸಿನ ಗೇರು ಕೈಕೊಟ್ಟರೂ ಛಲದಿಂದ ಮುನ್ನಡೆದರೆ ಕಷ್ಟ ಕಾರ್ಪಣ್ಯಗಳ ಏರು ಪೇರು ಲೆಕ್ಕಿಸದೆ ಯಶಸ್ಸೆಂಬ ಊರು ಸೇರೀತು ಅನ್ನುತ್ತದೆ ಮೊದಲ ಚರಣ. ಎರಡನೆ ಚರಣದಲ್ಲಿ ಸರಿ ತಪ್ಪುಗಳನ್ನು ಅರಿತು ನೇರ ದಾರಿಯಲ್ಲಿ ಸಾಗಿದರೆ ಇದು ಉಲ್ಲಾಸಮಯ ಪಯಣವಾದೀತು, ಯೌವನಕ್ಕೆ ಯಾವುದೇ ಬ್ರೇಕು ಇಲ್ಲ, ಹುಚ್ಚು ಕುದುರೆಯಂಥ ಓಟವನ್ನು ವಿವೇಕಯುತ ಕೌಶಲ್ಯ ಉಪಯೋಗಿಸಿ ನಿಯಂತ್ರಿಸದಿದ್ದರೆ ಪ್ರಪಾತಕ್ಕೆ ಬೀಳಬೇಕಾದೀತು ಎಂಬ ಎಚ್ಚರಿಕೆ ಇದೆ.
ನಿಜದೆ ಯೌವನ ಮೋಜಿನ ಮೋಟರು ಗಾಡಿ
ಅದರ ಗಾಲಿಯು ಉರುಳೊ ರೀತಿಯ ನೋಡಿ
ಈ ಕಡೆ ಆ ಕಡೆ ವಾಲುತೆ ಓಡಿದೆ
ನೂಕಿದರೆ ತಾ ಸಾಗುವ ತೇರು
ಸಮಯದಲಿ ಕೈ ಕೊಡುವುದು ಗೇರು
ಲೆಕ್ಕಿಸದು ಇದು ಏರು ಪೇರು
ಸೇರುವುದು ಊರು
ನೀರು ನೀರು ನೀರು
ಬಲ್ಲವಗೆ ಈ ಓಟವೆ ಜೋಕು
ನಿಲ್ಲಿಸಲು ಇದಕಿಲ್ಲ ಬ್ರೇಕು
ಓಡಿಸಲು ಇರಬೇಕು knackಉ
ಇಲ್ಲದಿರೆ shockಉ
ಸಾಕು ಸಾಕು ಸಾಕು
ಈ ಹಾಡಿನ ವೀಡಿಯೊ ಲಭ್ಯವಿಲ್ಲದಿದ್ದರೇನಂತೆ, ಚಲ್ತಿ ಕಾ ನಾಮ್ ಗಾಡಿಯ ಹಾಡಿನ ವಿಡಿಯೊಗೆ ಈ ಹಾಡನ್ನು super impose ಮಾಡಿದ ನನ್ನ ಪ್ರಯೋಗವೊಂದು ಇಲ್ಲಿ ನೋಡಿ.