ಸುಮಾರು 35 ವರ್ಷ ಹಿಂದಿನ ಮಾತು. ಆಗ ತಾನೇ ನೇಶನಲ್ ಪಾನಾಸೋನಿಕ್ ಟೇಪ್ ರೆಕಾರ್ಡರ್ ಒಂದನ್ನು ಖರೀದಿಸಿದ್ದೆ. ವಿವಿಧ ಮೂಲಗಳಿಂದ ಹಳೆ ಚಿತ್ರಗೀತೆಗಳನ್ನು ಸಂಗ್ರಹಿಸಿ ಧ್ವನಿಮುದ್ರಿಸಿಕೊಳ್ಳುವುದರ ಜೊತೆಗೆ ಆಗಾಗ ಇತರ ಪ್ರಯೋಗಗಳನ್ನು ಮಾಡುವುದೂ ಇತ್ತು. ಆನಂಗಳ್ಳಿಯ ನಮ್ಮ ಕೂಡು ಕುಟುಂಬದಲ್ಲಿ ಹಾಡು ಪಾಡು ನಡೆಯುತ್ತಲೇ ಇರುತ್ತಿತ್ತು. ಪೂನಾದಲ್ಲಿರುವ ನಮ್ಮಣ್ಣ ಒಮ್ಮೆ ಊರಿಗೆ ಬಂದಿದ್ದ ಸಮಯದಲ್ಲಿ ನಮ್ಮ ಕೋರಲ್ ಗ್ರೂಪನ್ನು ಒಟ್ಟುಗೂಡಿಸಿ ಒಂದು ಹಾಡು ಯಾಕೆ ಧ್ವನಿಮುದ್ರಿಸಬಾರದು ಎಂಬ ಯೋಚನೆ ಬಂದಾಗ ಪ್ರಖ್ಯಾತ ಗಾಯಕ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಅವರು ಕಲಿಸಿ ಕೊಟ್ಟಿದ್ದ ಎಲ್ಲೋ ಜೋಗಪ್ಪ ಹಾಡು ನೆನಪಿಗೆ ಬಂತು. ನಾನು ಅಷ್ಟಿಷ್ಟು ಕೊಳಲು ನುಡಿಸುತ್ತಿದ್ದೆ. ಕೀಲಿಗಳೆಲ್ಲ ಮುರಿದು ತಂತಿ ಮಾತ್ರ ಉಳಿದಿದ್ದ ಬುಲ್ ಬುಲ್ ತರಂಗವೊಂದು ಮನೆಯಲ್ಲಿತ್ತು. ಚಿಕ್ಕ ಡಬ್ಬಿಯೊಂದು ತಾಳವಾದ್ಯದ ಕೆಲಸ ಮಾಡಿತು. ಮನೆಯ ಒಂದು ಕೋಣೆ ಸ್ಟೂಡಿಯೊ ಆಗಿ ಪರಿವರ್ತನೆಗೊಂಡು ಒಂದೆರಡು ರಿಹರ್ಸಲುಗಳ ನಂತರ ಟೇಕ್ ಕೂಡ ಓಕೆ ಆಯಿತು. ಅಂದಿನಿಂದ ಟೇಪಲ್ಲಿ ಮ್ಯಾಗ್ನೆಟಿಕ್ ರೂಪದಲ್ಲಿ ಹಾಯಾಗಿದ್ದ ಆ ಹಾಡು ಡಿಜಿಟಲ್ ರೂಪ ತಾಳಿ ಇಲ್ಲೀಗ ಅನಾವರಣಗೊಂಡಿದೆ.
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಕಂಕಣಘಟ್ಟ ಕಾರಣಘಟ್ಟ
ಮತಿಘಟ್ಟ ಮಾರಣಘಟ್ಟ
ಅಲ್ಲಿಗೈವತ್ತು ಗಾವುದರಮನೆ
ಅಲ್ಲಿಗೆಪ್ಪತು ಗಾವುದ ತಳಮನೆ
ಉದ್ದಿನ್ ಹೊಲವ ಬಿಟ್ಟು
ಮುದ್ದಾಡೊ ಗಂಡನ ಬಿಟ್ಟು
ಗುಡ್ಡಹತ್ತೊ ಜೋಗಿಕೂಟೆ ಬರಬಹುದೇ
ಗುಡ್ಡಹತ್ತೊ ಜೋಗಿಕೂಟೆ ಬರಬಹುದೇ
ಎಳ್ಳೀನ್ ಹೊಲವ ಬಿಟ್ಟು
ಒಳ್ಳೆ ಗಂಡನ ಬಿಟ್ಟು
ತಳ್ಹೊತ್ತು ಜೋಗಿಕೂಟೆ ಬರಬಹುದೇ
ತಳ್ಹೊತ್ತು ಜೋಗಿಕೂಟೆ ಬರಬಹುದೇ
ಕಡ್ಲೆ ಹೊಲವ ಬಿಟ್ಟು
ಕಡುಜಾಣ ಗಂಡನ ಬಿಟ್ಟು
ಕಡೆಹೊತ್ತು ಜೋಗಿಕೂಟೆ ಬರಬಹುದೇ
ಕಡೆಹೊತ್ತು ಜೋಗಿಕೂಟೆ ಬರಬಹುದೇ