Friday, 30 November 2012

ಬರೆ ಕ್ಯಾಬರೆ ಅಲ್ಲ


ಎಲ್. ಆರ್ ಈಶ್ವರಿ ಅಂದಾಕ್ಷಣ ಜೋಕೆ ನಾನು ಬಳ್ಳಿಯ ಮಿಂಚುದೂರದಿಂದ ಬಂದಂಥ ಸುಂದರಾಂಗ ಜಾಣ ಇತ್ಯಾದಿ ಹಾಡುಗಳು ನೆನಪಾಗುವುದು ಸಹಜ.  ಆದರೆ ಅವರು ಕ್ಯಾಬರೆ ಛಾಯೆಯ ಇಂತಹ ಹಾಡುಗಳಲ್ಲದೆ  ವಿವಿಧ ಇತರ ರಂಗುಗಳ ಹಾಡುಗಳನ್ನೂ ಹಾಡಿದ್ದಾರೆ.  ಅಂತಹ  ಹೆಚ್ಚು ಚಾಲ್ತಿಯಲ್ಲಿಲ್ಲದ ಕೆಲವು ಹಾಡುಗಳತ್ತ ಇಲ್ಲಿದೆ ಒಂದು ನೋಟ.

1. ಕಂಡರೂ ಕಾಣದಾಂಗೆ - ಅಣ್ಣ ತಂಗಿ



ಇದು ಪ್ರಾಯಶ: ಕನ್ನಡದಲ್ಲಿ ಎಲ್ ಆರ್ ಈಶ್ವರಿ ಅವರ ಮೊದಲ ಹಾಡು.  ಅವರು ಸರೋಜಾ ದೇವಿಯ ದನಿಯಾದರೆ ಪೀಠಾಪುರಂ ನಾಗೇಶ್ವರ ರಾವ್ ರಾಜಕುಮಾರ್ ಅವರ ದನಿಯಾಗಿ ಜತೆಗಿದ್ದಾರೆ. (ಈ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಅವರು ಕೆ.ಎಸ್.ಅಶ್ವಥ್ ಅವರಿಗಾಗಿ ಇಂಗ್ಲಿಷ್ ಹಾಡು ಹಾಡಿದ್ದರು!  ಈ ಮೊದಲೇ  ರಾಜ್ ಗಾಗಿ ಪಿ.ಬಿ.ಎಸ್  ಓಹಿಲೇಶ್ವರದಲ್ಲಿ ಒಂದು ಹಾಡು ಹಾಡಿದ್ದರೂ ಭಕ್ತ ಕನಕದಾಸದಿಂದ ಮೊದಲ್ಗೊಂಡು ಅವರು ರಾಜ್ ಅವರ ಖಾಯಂ ಗಾಯಕರಾದರು).  Multi track system ನಲ್ಲಿ ರೆಕಾರ್ಡ್ ಆಗುವ ಇಂದಿನ ಹಾಡುಗಳನ್ನು ನಾಚಿಸುವಂತಿದೆ ಈ ಹಾಡಿನ ಧ್ವನಿಮುದ್ರಣದ ಗುಣಮಟ್ಟ.  ಕು.ರಾ.ಸೀ ಸಾಹಿತ್ಯಕ್ಕೆ ಸಂಗೀತ ಜಿ.ಕೆ. ವೆಂಕಟೇಶ್ ಅವರದ್ದು. ಈ ಚಿತ್ರದ ಟೈಟಲ್ ಕಾರ್ಡಲ್ಲಿ ಅವರ ಹೆಸರು ರಾಜೇಶ್ವರಿ ಎಂದು ದಾಖಲಾಗಿದೆ. ಆದರೆ ರಾಜೇಶ್ವರಿ ಎಂಬ ಇನ್ನೋರ್ವ ಗಾಯಕಿಯೂ ಇದ್ದುದರಿಂದ ನಂತರ ಅವರು ತನ್ನ ಪೂರ್ಣ ಹೆಸರಾದ ಲೂರ್ಡ್ ಮೇರಿ ರಾಜೇಶ್ವರಿಯನ್ನು ಹೃಸ್ವಗೊಳಿಸಿ ಎಲ್.ಆರ್. ಈಶ್ವರಿ ಮಾಡಿಕೊಂಡರು.

 
2. ಒಂದಾಗುವ ಮುಂದಾಗುವ - ಚಂದವಳ್ಳಿಯ ತೋಟ



ಇದು ಜೇಸುದಾಸ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಹಾಡು. ಟಿ.ಜಿ. ಲಿಂಗಪ್ಪ ಅವರ ಸಂಗೀತವಿದೆ. ಇದೇ ಚಿತ್ರದ ಸುಮಬಾಲೆಯ ಪ್ರೇಮದ ಸಿರಿಯೆ ಕೂಡ ಈಶ್ವರಿ ಅವರ all time hit ಗಳಲ್ಲಿ ಒಂದು. ಎಲ್. ಆರ್ ಈಶ್ವರಿ ಅವರು ಟಿ.ಜಿ. ಲಿಂಗಪ್ಪ ಸಂಗೀತದಲ್ಲಿ ಆಗಾಗ ಕಾಣಿಸಿಕೊಂಡರೂ ಜೇಸುದಾಸ್ ಮತ್ತೆ ಕಾಣಿಸಿಕೊಂಡದ್ದು ಬಹಳ ವರ್ಷಗಳ ನಂತರ ದೇವರ ಕಣ್ಣು ಚಿತ್ರದ ನಗುವಿನ ಅಳುವಿನ ಸಂಕೋಲೆಯಲ್ಲಿ.  !

3. ತಂಗಾಳಿ ಅಲೆಯೂ ಕೋಗಿಲೆ ಉಲಿಯೂ -  ಪ್ರತಿಜ್ಞೆ



ಪೇಟೆಯ ಲಲನೆಯರು ಸೈಕಲ್ ಮೇಲೆ ಸಾಗುತ್ತಾ ಹಾಡುವ ಹಾಡು.  ವಾಸ್ತವವಾಗಿ ಇದು ಹಿಂದಿ ಸಂಗೀತ ನಿರ್ದೇಶಕ ರವಿ ಅವರ ಟ್ಯೂನ್.  ಈ ಚಿತ್ರದ ನಿರ್ಮಾಪಕ ಬಿ.ಎಸ್.ರಂಗಾ ತಮ್ಮದೇ ನಿರ್ಮಾಣದ  ಪ್ಯಾರ್ ಕಿಯಾ ತೊ ಡರನಾ ಕ್ಯಾ ಚಿತ್ರದ ರಫಿ ಹಾಡಿನ ಧಾಟಿ ಇಲ್ಲಿ ಬಳಸಿಕೊಂಡಿದ್ದಾರೆ.  ಕನ್ನಡಕ್ಕೆ ಅಳವಡಿಕೆ  ಎಸ್. ಹನುಮಂತ ರಾವ್. ಹಿಂದಿಯಲ್ಲಿ ಶಮ್ಮಿಗೆ ರಫಿ ಹಾಡಿದ ಹಾಡನ್ನು ಕನ್ನಡದಲ್ಲಿ ಎಲ್.ಆರ್. ಈಶ್ವರಿ ಧ್ವನಿಯಲ್ಲಿ ಕೇಳುವುದು ಒಂದು ವಿಶಿಷ್ಟ ಅನುಭವ.  ಮೂಲ ಹಿಂದಿ ಹಾಡಿನ ವೀಡಿಯೊ ಇಲ್ಲಿ ನೋಡಬಹುದು.
 
4.  ಮುದ ತುಂಬಿ ಮೆರೆವ ಮದುಮಗಳೆ - ವಾತ್ಸಲ್ಯ



ಮದುಮಗಳಿಗಾಗಿ ಸಖಿಯರು ಹಾಡುವ ಹಾಡು.  ಇಲ್ಲಿ ಸಂಗೀತ ನಿರ್ದೇಶಕ ವಿಜಯ ಕೃಷ್ಣಮೂರ್ತಿ ಪಾಸಮಲರ್ ತಮಿಳು ಚಿತ್ರದ ಹಾಡಿನ ಧಾಟಿಯನ್ನು ಬಳಸಿಕೊಂಡಿದ್ದಾರೆ. ನಾಗಸ್ವರ, ತವಿಲ್, ಮ್ಯಾಂಡೊಲಿನ್, ಕೊಳಲು, ವಯಲಿನ್ಸ್,  ಢೋಲಕ್, ಕೋರಸ್, ಮಂತ್ರಘೋಷಗಳನ್ನೊಳಗೊಂಡ ಆಕರ್ಷಕ ಸಂಯೋಜನೆ.   ವಿಶ್ವನಾಥನ್ - ರಾಮಮೂರ್ತಿ ಸಂಗೀತ ನಿರ್ದೇಶನ ಉಳ್ಳ ಮೂಲ ತಮಿಳು ಹಾಡು ಇಲ್ಲಿ ಕೇಳಬಹುದು.  ಕನ್ನಡ ಹಾಗೂ ತಮಿಳು ಹಾಡುಗಳ ವಾದ್ಯ ಸಂಯೋಜನೆ (ತಾಂತ್ರಿಕವಾಗಿ arrangement ಅನ್ನುತ್ತಾರೆ) ಬಹುತೇಕ ಒಂದೇ ಇದ್ದರೂ ಕನ್ನಡ version ನಲ್ಲಿ ಢೋಲಕ್ ಬಳಕೆ ಹೆಚ್ಚು ಪರಿಣಾಮಕಾರಿಯಾಗಿರುವುದನ್ನೂ, ಎಲ್.ಆರ್.ಈಶ್ವರಿ ಅವರ ಧ್ವನಿಯ ಕತ್ತಿಯ ಅಂಚು ಕನ್ನಡದಲ್ಲಿ ಹೆಚ್ಚು ಹರಿತವಾಗಿರುವುದನ್ನೂ ಗಮನಿಸಬಹುದು.

ಮಾತಿನ ಮಲ್ಲ - ವಿಜಯನಗರದ ವೀರ ಪುತ್ರ.



ಈ ಹಾಡಲ್ಲಿ  ಮತ್ತೆ ಈಶ್ವರಿ ಮತ್ತು ಪೀಠಾಪುರಂ ಜೋಡಿ ಇದೆ.  ತೆರೆಯ ಮೇಲೆ  ನರಸಿಂಹರಾಜು ಲಕ್ಷ್ಮಿದೇವಿ ನಟಿಸಿದ್ದಾರೆ.  ಕವ್ವಾಲಿ ಶೈಲಿಯಲ್ಲಿರುವ ಅಪರೂಪದ  ಹಾಡಿದು. ಆಗಿನ RCA Sound System ನಲ್ಲಿ ಧ್ವನಿಮುದ್ರಿತವಾಗುತ್ತಿದ್ದ ಹಾಡುಗಳಲ್ಲಿ presence of voice and instruments ಎಷ್ಟು ಚೆನ್ನಾಗಿರುತ್ತಿತ್ತೆಂಬುದಕ್ಕೆ ಈ ಹಾಡಿನ ಕೊಳಲು, ಮ್ಯಾಂಡೊಲಿನ್ , ಢೋಲಕ್ ಹಾಗೂ ಹಾಡುಗಾರರ ಧ್ವನಿಯ ಸ್ಪಷ್ಟತೆಯೇ ಸಾಕ್ಷಿ.  ಸಂಗೀತ ದಕ್ಷಿಣದ ಶಂಕರ್-ಜೈಕಿಶನ್ ಎನ್ನಬಹುದಾದ ವಿಶ್ವನಾಥನ್ ರಾಮಮೂರ್ತಿ ಅವರದ್ದು.  ಸಾಹಿತ್ಯ ಆರ್.ಎನ್.ಜಯಗೋಪಾಲ್.  ಈ ಹಾಡಿನ ವೀಡಿಯೊ ಇಲ್ಲಿ ನೋಡಬಹುದು. ಈ ಹಾಡು ನರಸಿಂಹರಾಜು ಲಕ್ಷ್ಮಿದೇವಿ ಅವರದ್ದಾದರೂ ಇದರಲ್ಲಿ  ಪ್ರಖ್ಯಾತ ನಟ ಕಲ್ಯಾಣ್ ಕುಮಾರ್ ಅವರೂ ವಾದ್ಯಗಾರನಾಗಿ ಕಾಣಿಸಿಕೊಂಡಿದ್ದಾರೆ ! ಬಹುಶಃ ಆಗಿನ ಕಾಲದಲ್ಲಿ ಹೀರೊಯಿಸಂನ ego ಇತ್ಯಾದಿ ಇರಲಿಲ್ಲ. (ಇದೇ ರೀತಿ ತೀಸ್ರಿ ಕಸಂ ಚಿತ್ರದಲ್ಲಿ ರಾಜ್ ಕಪೂರ್ ಅವರು ಚಲತ ಮುಸಾಫಿರ್ ಮೋಹಲಿಯಾರೆ ಹಾಡಿನಲ್ಲಿ ಕೋರಸ್ ಹಾಡುಗಾರನಾಗಿ ಕಾಣಿಸಿಕೊಂಡಿದ್ದರು. )

6. ಜಿಗಿಜಿಗಿಯುತ ನಲಿ - ಜೇನುಗೂಡು



ಹಿಂದಿಯ ಭಾಭಿ ಕನ್ನಡದಲ್ಲಿ ಜೇನುಗೂಡು ಆಗಿ ಬಂದಿತ್ತು.  ಅಲ್ಲಿಯ ಚಲಿ ಚಲಿರೆ ಪತಂಗ್ ಮೇರಿ ಚಲಿರೆ ಇಲ್ಲಿ ಈ ಹಾಡಾಯಿತು.  ಜೆ.ವಿ. ರಾಘವುಲು ಎಂಬ ಹೆಚ್ಚು ಹೆಸರು ಮಾಡದ ಗಾಯಕ ಜತೆಗಿದ್ದಾರೆ.   ಆಗಿನ ಕಾಲಕ್ಕೆ ಕನ್ನಡ ಚಿತ್ರಗೀತೆಗಳಲ್ಲಿ ಮೂರು ಚರಣಗಳಿರುತ್ತಿದ್ದುದು ಕಮ್ಮಿ.  ಆದರೆ ಈ ಹಾಡಿನಲ್ಲಿವೆ.  (ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಬಳಸುತ್ತಿದ್ದ ಬಹುಚರಣಗಳ  ರಾಮನ ಅವತಾರದಂತಹ ಹಾಡುಗಳ ವಿಚಾರ ಬೇರೆ .)  ಆಗ ಬೇರೆ ಭಾಷೆಗಳ ಚಿತ್ರಗಳು ರೀಮೇಕ್ ಆಗಿ ಕನ್ನಡಕ್ಕೆ ಬಂದರೂ ಹಾಡುಗಳಿಗೆ ಸ್ವಂತ ಟ್ಯೂನ್ ಬಳಸುತ್ತಿದ್ದರು.  ಹಾಗಾಗಿ ಚಲ್ ಉಡ್ ಜಾರೆ ಪಂಛಿ - ಬಾಳೊಂದು ನಂದನ, ಟೈ ಲಗಾಕೆ ಮಾನಾ ಬನ್ ಗಯೆ ಜನಾಬ್ ಹೀರೊ - ಹೆಸರಿಗೆ ರಂಗ, ಛುಪಾಕರ್ ಮೇರಿ ಆಂಖೋಂಕೊ -ಜೇನಿರುಳು ಜತೆಗೂಡಿರಲು ಆಗಿ ವಿಜಯ ಕೃಷ್ಣಮೂರ್ತಿ ಸಂಗೀತದಲ್ಲಿ ರೂಪಾಂತರಗೊಂಡವು. ತಮಿಳಿನ ಪ್ರಸಿದ್ಧ ಚಿತ್ರ ಪಾಲುಂ ಪಳಮುಂ ಕನ್ನಡದಲ್ಲಿ ಬೆರೆತ ಜೀವ ಆದಾಗ ವಿಜಯ ಭಾಸ್ಕರ್ ಕೂಡ ಟ್ಯೂನ್ ಕಾಪಿ ಮಾಡಿರಲಿಲ್ಲ. ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

7.  ಏಳಯ್ಯ ಮನಮೋಹನ - ಸಂತ ತುಕಾರಾಂ



ತಾನು ಶಾಸ್ತ್ರೀಯ ಸಂಗಿತಾಧಾರಿತ ಹಾಡೂ ಹಾಡಬಲ್ಲೆ ಎಂದು ತೋರಿಸಿದ ಇದು ವಿವಿಧ ಹಂತಗಳಲ್ಲಿ ಸಾಗುತ್ತಾ ಕೊನೆಗೆ ಹೇ ಪಂಢರಯ್ಯ ನೀನೆ ಜಗದ ತಂದೆ ಕಣಯ್ಯಾ ಎಂದು ಭಗವಂತನಿಗೆ ಶರಣಾಗುವಾಗ ಪಿ.ಬಿ. ಶ್ರೀನಿವಾಸ್ ಕೂಡ ದನಿಗೂಡಿಸುತ್ತಾರೆ.  ಚಿ.ಸದಾಶಿವಯ್ಯ ಸಾಹಿತ್ಯಕ್ಕೆ ವಿಜಯ ಭಾಸ್ಕರ್ ಸಂಗೀತ.

8. ಕಂದ ಕಣ್ಮಣಿಯೆ - ಬಾಲ ನಾಗಮ್ಮ



ಇದು ಈಶ್ವರಿ ಅವರು ಹಾಡಿದ  ಜೋಗುಳಗಳ ಪೈಕಿ ಒಂದು.  ಸಂಗೀತ ಎಸ್.ರಾಜೇಶ್ವರ ರಾವ್. ಕಂಚಿನ ಕಂಠದ ಈ ಜೋಗುಳ ಕೇಳಿ ಮಗು ನಿದ್ರಿಸುತ್ತದೋ ಅಥವಾ ಕೈ ಕಾಲು ಕುಣಿಸಿ ಆಟವಾಡುತ್ತದೋ ಎಂಬ ಸಂದೇಹ !  ಮಹಾ ಸತಿ ಅನಸೂಯ ಚಿತ್ರದಲ್ಲೂ ತ್ರಿಮೂರ್ತಿಗಳಿಗೆ  ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೊ ಜೊ ಎಂಬ ಜೋಗುಳ ಹಾಡಿದ್ದಾರೆ. 

9. ಆಭರಣದ ಅಲಂಕಾರ - ಮಂತ್ರಾಲಯ ಮಹಾತ್ಮೆ



ನವ ವಧುವಿನಲ್ಲಿ  ಹೊಸ ಕಳೆ ಎಲ್ಲಿಂದ ಬಂತೆಂದು ಗೆಳತಿಯು ಛೇಡಿಸುವ ಈ ಹಾಡಿನಲ್ಲಿ ಈಶ್ವರಿ ಅವರ ದನಿಯ ಕೀಟಲೆ ಮತ್ತು ಜಾನಕಿ ಅವರ ದನಿಯ ಮುಗ್ಧತೆಯ ಸಮ್ಮಿಳನವಿದೆ.  ಆಲಿಸಿದಾಗ ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ ಸೇವಿಸಿದ ಅನುಭವವಾಗುತ್ತದೆ !  ಇದು ರಾಜನ್ ನಾಗೇಂದ್ರ ಅವರ ಸಂಗೀತ.

10  ಕುಣಿಯೋಣು ಬಾರಾ - ಚಕ್ರ ತೀರ್ಥ



ದ. ರಾ. ಬೇಂದ್ರೆ ಅವರ ಪ್ರಸಿದ್ಧ ಕವನಕ್ಕೆ ಈಶ್ವರಿ ದನಿಯಾಗಿದ್ದಾರೆ. ತ.ರಾ.ಸು ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಟಿ.ಜಿ..ಲಿಂಗಪ್ಪ ಅವರ ಸಂಗೀತ ಇದೆ.
     
     ಎಲ್.ಆರ್. ಈಶ್ವರಿ ಕಣ್ಣು ಕತ್ತಿಯ ಅಂಚು ಎಂದು ಹಾಡಲಿ  ಅಥವಾ ಇನ್ಯಾವುದೇ ಹಾಡು ಹಾಡಲಿ ಯಾವಾಗಲೂ ಅವರ ಕಂಠ ಕತ್ತಿಯ ಅಂಚು !   ಪುರುಷರಲ್ಲಿ ಈ ರೀತಿ ಕತ್ತಿಯ ಅಂಚಿನಂಥ ಕಂಠ ಉಳ್ಳವರು ಟಿ. ಎಂ. ಸೌಂದರರಾಜನ್ ಮಾತ್ರ. ನನ್ನ ಆರಂಭದ ರೇಡಿಯೋ ಕೇಳ್ಮೆ ದಿನಗಳಲ್ಲಿ ಅವರು ಹೆಚ್ಚು ಹೆಚ್ಚು ಕನ್ನಡ ಹಾಡುಗಳನ್ನು ಹಾಡಲಿ ಎಂದು ಹಾರೈಸುವುದಿತ್ತು ! ಯಾವಾಗಲಾದರೂ ಸದಾರಮೆ ಚಿತ್ರದ ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ ಅಥವಾ ಬಾರೆ ಬಾರೆ ನನ್ನ ಹಿಂದೆ ಹಿಂದೆ ಕೇಳಸಿಕ್ಕಿದರೆ ಹಿಗ್ಗುವುದಿತ್ತು.

     ಸಿಟ್ಯಾಕೊ ಸಿಡುಕ್ಯಾಕೊ, ವಾಹರೆ ಮೇರಾ ಮುರ್ಗಾ, ಅಯ್ಯಯ್ಯಯ್ಯೊ ಹಳ್ಳಿಮುಕ್ಕದಂತಹ ಯಾವಾಗಲೂ ಕೇಳಸಿಗುವ  ಅವರ ಹಾಡುಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿಲ್ಲ.