Monday, 25 May 2015

ಸಾರಂಗ ಸಂವಾದ


ಇತ್ತೀಚೆಗೆ ರೇಡಿಯೋ ಸಾರಂಗ್ 107.8 FM ವತಿಯಿಂದ ವಿ.ಕೆ.ಕಡಬ ಅವರು ತುಳು ಭಾಷೆಯಲ್ಲಿ ನನ್ನ ಸಂದರ್ಶನ ನಡೆಸಿದ್ದು ಅದು 24-5-2015ರಂದು ಪ್ರಸಾರವಾಗಿತ್ತು.   ತುಳುವೇತರರ ಅನುಕೂಲಕ್ಕೋಸ್ಕರ ಅದರ ಲಿಖಿತ ಕನ್ನಡ ಭಾವಾನುವಾದವನ್ನು ಇಲ್ಲಿ ನೀಡುತ್ತಿದ್ದೇನೆ. ತುಳುವಿನಲ್ಲಿ ಆಲಿಸುತ್ತಾ ಕನ್ನಡದಲ್ಲಿ ಓದುವ ವಿಶಿಷ್ಟ ಅನುಭವ ಪಡೆಯಿರಿ.



ಈ ವಾರದ ಬಿನ್ಯೆರೆ ಪಾತೆರ್ ಕತೆ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಪ್ರೀತಿಪೂರ್ವಕ ನಮಸ್ಕಾರ. ಪ್ರತಿ ವಾರವೂ ನಮ್ಮ ಊರಿನ ಬೇರೆ ಬೇರೆ ಕಲಾವಿದರು ಈ ಕಾರ್ಯಕ್ರಮದಲ್ಲಿ ಇರುತ್ತಾರೆ. ಇಂದೂ ಓರ್ವ ಹೊಸ ಅತಿಥಿ ಇದ್ದಾರೆ.  ಇವರು BSNLನಲ್ಲಿ ಸುಮಾರು 38 ವರ್ಷ ದುಡಿದವರು. ಕೊಳಲನ್ನೂದಿ ಮನಸ್ಸುಗಳಿಗೆ ರಂಗು ತುಂಬಿದವರು.  ಅಂತರ್ಜಾಲದತ್ತ ನೋಡಿದರೆ "ವಿರಾಮದ ವೇಳೆಗಾಗಿ" ಎಂಬ ಬ್ಲಾಗ್ ಮೂಲಕವೂ ರಂಜನೆ ನೀಡುತ್ತಿರುವವರು. ಒಟ್ಟಲ್ಲಿ ಹೇಳುವುದಾದರೆ ಸಕಲ ಕಲಾ ವಲ್ಲಭ ಎಂದೆನಿಸಿಕೊಳ್ಳಬಹುದಾದವರು.  ಅವರೇ ಚಿದಂಬರ ಕಾಕತ್ಕರ್.  ಸರ್, ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ.

ಎಲ್ಲರಿಗೂ ನಮಸ್ಕಾರ.

ನಾನು ಮೊದಲು ಕೇಳುವುದೇನೆಂದರೆ ಕಾಕತ್ಕರ್ ಎಂದರೆ ಎಲ್ಲಿ ಮತ್ತು ಏನು. (ಈ ಕಡೆ ಹೆಸರುಗಳ ಜೊತೆಗೆ ಊರನ್ನೂ ಸೇರಿಸಿ ಹೇಳುವ ವಾಡಿಕೆ ಇರುವುದರಿಂದ ಈ ಪ್ರಶ್ನೆ ಇರಬಹುದು.)

ಕಾಕತ್ಕರ್ ಅಂದರೆ ಅದು ನಮ್ಮ surname. ನಾವು ಮೂಲತಃ ಮಹಾರಾಷ್ಟ್ರದ ರತ್ನಾಗಿರಿಯವರು, ಸುಮಾರು 300-400 ವರ್ಷಗಳಿಗೂ ಹಿಂದೆ ಅಂದರೆ  ಪೇಶ್ವೆಗಳ ಕಾಲದಲ್ಲಿ ನಮ್ಮವರು ಈ ಕಡೆ ವಲಸೆ ಬಂದರಂತೆ. ನಮ್ಮ ಚಿತ್ಪಾವನ ಸಮುದಾಯದವರು ಮುಂಡಾಜೆ, ಶಿಶಿಲ, ಮಾಳ, ದುರ್ಗ ಮುಂತಾದೆಡೆ ನೆಲೆ ಕಂಡುಕೊಂಡಿದ್ದಾರೆ.  ನಮ್ಮ ಹಿರಿಯರು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮವನ್ನು ಆಯ್ದುಕೊಂಡರು.  ನಾನು ಅಲ್ಲೇ ಹುಟ್ಟಿ ಬೆಳೆದವನು.

ನಿಮಗೆ ಈ ಕೊಳಲೂದುವ ಕಲೆ ಒಲಿದದ್ದು ಹೇಗೆ.

ಅದು ಹೇಗೆಂದರೆ ಮೊದಲಿನಿಂದಲೂ ಯಾವುದೇ ವಾದ್ಯ ಕಂಡರೆ ನನಗೆ ಬಲು ಇಷ್ಟ. ನಮ್ಮ ಮನೆಗೆ ವಾದ್ಯ ನುಡಿಸುವವರು ಯಾರಾದರೂ ಬಂದರೆ ನಾನು ಆಸಕ್ತಿಯಿಂದ ಅವರನ್ನು ಗಮನಿಸುತ್ತಿದ್ದೆ. ವಾದ್ಯಗಳ ಪೈಕಿ ಅತಿ ಅಗ್ಗ ಮತ್ತು ಸುಲಭದಲ್ಲಿ ಸಿಗುವಂಥದ್ದು ಕೊಳಲಲ್ಲವೇ.  ಹಾರ್ಮೋನಿಯಮ್, ಸ್ಯಾಕ್ಸೊಫೋನ್, ನಾಗಸ್ವರ, ಕೀ ಬೋರ್ಡ್ ಮುಂತಾದವುಗಳು ಸಾವಿರಾರು ರೂಪಾಯಿ ಬೆಲೆ ಬಾಳುವಂಥವು.  ನಾವು ಚಿಕ್ಕವರಿರುವಾಗ ಪ್ರತಿ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ತಪ್ಪದೆ ಹೋಗುತ್ತಿದ್ದೆವು.  ನಿಮಗೆಲ್ಲ ಗೊತ್ತಿರುವಂತೆ ಜಾತ್ರೆಗಳಲ್ಲಿ ಸ್ಟೇರಿಂಗಿನಂಥ  ಸ್ಟೇಂಡ್ ಹೊಂದಿದ್ದು ಕೊಳಲು, ಬಲೂನ್ ಇತ್ಯಾದಿ ಮಾರುವ ಅಂಗಡಿಗಳಿರುತ್ತವಲ್ಲವೇ.  ನಾನು ಯಾವಾಗಲೂ ಮೊದಲು ಹುಡುಕುತ್ತಿದ್ದುದು ಅಂಥ ಅಂಗಡಿಗಳನ್ನು.  ಅಲ್ಲಿ ನಾಲ್ಕಾಣೆ ಕೊಟ್ಟು ಒಂದು ಕೊಳಲು ಖರೀದಿಸುತ್ತಿದ್ದೆ.  ನಾನು ಬೇರೆ ಏನನ್ನೂ ಕೊಳ್ಳುತ್ತಿರಲಿಲ್ಲ, ಬೇರೆ ಯಾವುದರಲ್ಲೂ ನನಗೆ ಆಸಕ್ತಿಯೂ ಇರಲಿಲ್ಲ. ಕೊಳಲನ್ನು ಕೊಂಡು ಮನೆಗೆ ಬರುತ್ತಿದ್ದೆ.  ಕೊಳಲನ್ನು ಹೇಗೆ ನುಡಿಸುವುದೆಂದು ಆಗ ನನಗೇನೂ ಗೊತ್ತಿರಲಿಲ್ಲ.  ಮನಸ್ಸಿಗೆ ಬಂದಂತೆ ಪೀ ಪೀ ಎಂದು ಊದಿ  "ಬೊಗಳಿ ಬೊಗಳಿ ರಾಗ ನರಳಿ ನರಳಿ ರೋಗ" ಎಂಬಂತೆ ಒಂದೊಂದೇ ಹಾಡು ನಾನಾಗಿಯೇ ನುಡಿಸುವುದನ್ನು ಕಲಿತೆ.  ನಮ್ಮದು ಹಳ್ಳಿಯಾದ್ದರಿಂದ ಅಲ್ಲಿ ಗುರು ಮುಖೇನ ಸಂಗೀತ ಕಲಿಯುವ ಸೌಲಭ್ಯ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಈ ರೀತಿ ನಾನೇ ಕಲಿಯಬೇಕಾಯಿತು.  ಇದು ನಾನು ಕೊಳಲು ಕಲಿತ ಕತೆ. (ಹಿನ್ನೆಲೆಯಲ್ಲಿ ವೇ ವೇಲ ಗೋಪೆಮ್ಮಾಲ ಹಾಡಿನ intro music).

BSNLನಲ್ಲಿ ನಿಮ್ಮದು ಸುದೀರ್ಘ ಸೇವೆ.  ಅಲ್ಲಿಯ ಅನುಭವ ಏನು.

ನಾನು ಸೇರುವಾಗ ಅದು Post & Telegraphs Department ಆಗಿತ್ತು. ಮುಂದೆ Department of Telecom  ಆಯ್ತು. ಈಗ ನಾನು ನಿವೃತ್ತನಾಗುವಾಗ BSNL  ಆಗಿದೆ.  ನಾನು ಸೇರುವಾಗ ಅದು ಏನೆಂದೇ ನನಗೆ ಗೊತ್ತಿರಲಿಲ್ಲ.  ಉಜಿರೆ SDM ಕಾಲೇಜಲ್ಲಿ B.Sc ಮುಗಿಸಿದ್ದೆ.  ನಮಗೆ ಬೇರೆ ಆಯ್ಕೆಯೂ ಇರಲಿಲ್ಲ. ಒಂದೇ ಕಾಲೇಜು.  ಅಲ್ಲಿಗೇ ಹೋಗಬೇಕು. ಮುಂದೆ ಪತ್ರಿಕೆಗಳ wanted column ನೋಡುತ್ತಾ ಪ್ರತಿಯೊಂದಕ್ಕೂ ಅರ್ಜಿ ಗುಜರಾಯಿಸುತ್ತಿದ್ದೆ.  ಆ ಕಾಲದಲ್ಲಿ campus interview ಇತ್ಯಾದಿ ಇರಲಿಲ್ಲ. ಕೊನೆಗೆ 1973ರಲ್ಲಿ ಮಂಗಳೂರಿನಲ್ಲಿ P&T ಇಲಾಖೆಗೆ ಸೇರ್ಪಡೆಗೊಂಡೆ.

ನೀವು ಕೊಳಲು ಊದುವುದಕ್ಕೆ ಇಂಥದ್ದೇ ವೇಳೆ ಎಂದೇನಾದರೂ ಇದೆಯೆ.

ಅದಕ್ಕೆ ಹೊತ್ತು ಎಂದೇನೂ ಇಲ್ಲ.  ನಾನು ಮನೆಯಲ್ಲೇ ಇದ್ದರೆ ನನಗೆ ಮನ ಬಂದಾಗ ನುಡಿಸುತ್ತೇನೆ.  ನಾನು ನನ್ನದೇ ಕಾರ್ಯಕ್ರಮಗಳನ್ನೂ ನೀಡುತ್ತೇನೆ.  ನನ್ನದೇ ತಂಡದೊಟ್ಟಿಗೆ ಮಧುರ ಗೀತೆಗಳ ಕಾರ್ಯಕ್ರಮ.  (ಹಿನ್ನೆಲೆಯಲ್ಲಿ ಮಂಗಳದ ಈ ಸುದಿನ ಹಾಡಿನ ತುಣುಕು.)  ಮಂಗಳೂರು ಆಸುಪಾಸಿನ ಬಹುತೇಕ ಎಲ್ಲ ಭರತ ನಾಟ್ಯ ತಂಡಗಳಲ್ಲೂ ಕೊಳಲುವಾದಕನಾಗಿ ಭಾಗವಹಿಸಿದ್ದೇನೆ. (ಹಿನ್ನೆಲೆಯಲ್ಲಿ ಧನಾಶ್ರೀ ತಿಲ್ಲಾನ.) ಉಡುಪಿಯ ಪ್ರೊ|| ಶಂಕರ್ ಮತ್ತು ಜೂ|| ಶಂಕರ್ ಅವರ ಗಿಲಿ ಗಿಲಿ ಮ್ಯಾಜಿಕ್  ಹೆಸರು ನೀವೆಲ್ಲರೂ ಕೇಳಿರಬಹುದು. ಸುಮಾರು ಮೂವತ್ತು ವರ್ಷಗಳಿಂದಲೂ ಅವರ ತಂಡದ ಕೊಳಲು ವಾದಕ ನಾನು.  ಅವರ ಜೊತೆ ಶ್ರೀ ಲಂಕಾ ಮತ್ತು ಕೊಲ್ಲಿ ದೇಶಗಳ ಪ್ರವಾಸ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. (ಹಿನ್ನೆಲೆಯಲ್ಲಿ ಓ ಮುಝೆ ಕಿಸೀಸೆ ಪ್ಯಾರ್ ಹೋಗಯಾ).

ಅಂತರ್ಜಾಲದತ್ತ ಕಣ್ಣು ಹಾಯಿಸಿದಾಗ ಯುವ ಪೀಳಿಗೆ ಹಾಗೂ ಆ ಬಗ್ಗೆ ಮಾಹಿತಿಯುಳ್ಳ ಇತರರಿಗೆ ಇಷ್ಟವಾಗಬಹುದಾದ "ವಿರಾಮದ ವೇಳೆಗಾಗಿ" ಎಂಬ ಬ್ಲಾಗ್ ಇತ್ಯಾದಿ ನೀವು ಬರೆಯುವುದು ಕಂಡು ಬರುತ್ತದೆ..  ನಿಮ್ಮ ಕಂಪ್ಯೂಟರ್ ಅನುಭವದ ಬಗ್ಗೆ ಏನು ಹೇಳುತ್ತೀರಿ.

ನಾನು BSNLನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದೆನಲ್ಲವೇ.  ನಮ್ಮ ಇಲಾಖೆಗೆ ಸುಮಾರು 20-25 ವರ್ಷ ಹಿಂದೆಯೇ ಒಂದು ಕಂಪ್ಯೂಟರ್ ಬಂದಿತ್ತು.  ಬಹುಶಃ ಮಂಗಳೂರಿಗೆ ಬಂದ ಮೊದಲ ಕಂಪ್ಯೂಟರ್ ಅದಾಗಿತ್ತೋ ಏನೋ. ಅದನ್ನು ಒದಗಿಸಿದ ಕಂಪೆನಿಯವರು ಒಂದೆರಡು ತಿಂಗಳಾದರೂ install  ಮಾಡಲು ಬಂದಿರಲಿಲ್ಲ.  ನಮ್ಮ ಇಲಾಖೆ ಲಕ್ಷಗಟ್ಟಲೆ ಖರ್ಚು ಮಾಡಿ ತರಿಸಿದ ಇದು ಹೀಗೆ ಹಾಳು ಬಿದ್ದಿದೆಯಲ್ಲ ಎಂದು ನಾನು ಯೋಚಿಸಿದೆ.  ನಾನೇ ಅದರಲ್ಲಿ ಏನಾದರೂ ಮಾಡಲು ಆಗುತ್ತದೆಯೇ ಎಂದು ಪ್ರಯೋಗ ನಡೆಸಲು ಪ್ರಯತ್ನಿಸಿದೆ.  ಮೊದ ಮೊದಲು ನನಗೆ ಏನೂ ಗೊತ್ತಾಗಲಿಲ್ಲ.  ನಾನು ಆಗಲೇ "ಬೊಗಳಿ ಬೊಗಳಿ ರಾಗ ನರಳಿ ನರಳಿ ರೋಗ"  ಎಂದು ಹೇಳಿದಂತೆ ಪ್ರಯತ್ನ ಪಡುತ್ತಾ ಚಿಕ್ಕ ಪುಟ್ಟ programs ಮಾಡುವುದನ್ನು ಕಲಿತೆ.  Duty chart, ಉಪಕರಣಗಳ history sheet ಇತ್ಯಾದಿಗಳನ್ನು ದಾಖಲಿಸಲು ಕೆಲವು  applications ಅಭಿವೃದ್ಧಿಪಡಿಸಿದೆ. ಅದು ತುಂಬಾ ಯಶಸ್ವಿಯಾಯಿತು.  ಇತರ ಕಡೆಗಳಲ್ಲೂ ಅವುಗಳನ್ನು ಉಪಯೋಗಿಸತೊಡಗಿದರು.  ಮುಂದೆ computerisation ಜಾಸ್ತಿ ಆಗತೊಡಗಿದಂತೆ ನನ್ನ programming ಕೂಡ ಹೆಚ್ಚಾಯಿತು.  ಮುಂದೆ ಬಂದ E-10-B, OCB, DOTSOFT, CDR  ಮುಂತಾದ ತಾಂತ್ರಿಕತೆಗಳಿಗೆ ಸಂಬಂಧಪಟ್ಟು ನಾನು ರೂಪಿಸಿದ programಗಳು ತುಂಬಾ ಪ್ರಸಿದ್ಧವಾದವು.  ನಾನು ನಿವೃತ್ತಿಹೊಂದಿ ಮೂರು ವರ್ಷ ಕಳೆದರೂ ಅವುಗಳಲ್ಲಿ ಕೆಲವು ಈಗಲೂ ಉಪಯೋಗವಾಗುತ್ತಿವೆ.  ಇದು ತಾಂತ್ರಿಕ ವಿಷಯದ ಬಗ್ಗೆ ಆಯಿತು. ನನಗೆ ಸಂಗೀತವೆಂದರೆ ಆಸಕ್ತಿಯ ಕ್ಷೇತ್ರವಲ್ಲವೇ.  ಅಂತರ್ಜಾಲ ಯುಗ ಆರಂಭವಾದ ಮೇಲೆ "ವಿರಾಮದ ವೇಳೆಗಾಗಿ" ಎಂಬ ಬ್ಲಾಗ್ ಇತ್ಯಾದಿ ರೂಪಿಸಿದೆ. ನನ್ನ ವಿವಿಧ ಹವ್ಯಾಸಗಳು ಅದರಲ್ಲಿ ಪ್ರತಿಫಲಿಸುತ್ತಿರುತ್ತವೆ.. (ಹಿನ್ನೆಲೆಯಲ್ಲಿ ವೇ ವೇಲ ಗೋಪೆಮ್ಮಾಲ).

ನಿಮಗೆ ಹಳೆ ಹಾಡುಗಳ ಸಂಗ್ರಹದ ಹವ್ಯಾಸವೂ ಇದೆಯಲ್ಲವೇ.

ಹೌದು,  ನನಗೆ ಹಿಂದಿನಿಂದಲೂ ರೇಡಿಯೋ ಕೇಳುವುದೆಂದರೆ ಬಲು ಇಷ್ಟ.  ನಾನು ಆರನೇ ಕ್ಲಾಸಲ್ಲಿರುವಾಗ ನಮ್ಮ ಮನೆಗೆ ಹಳೆಯ ನ್ಯಾಷನಲ್ ಎಕ್ಕೊ ರೇಡಿಯೊದ ಪ್ರವೇಶವಾಯಿತು.   ಅದು ವಾಲ್ವ್ ರೇಡಿಯೊ.  ಅದಕ್ಕೊಂದು ಗಜ ಗಾತ್ರದ ಬ್ಯಾಟರಿ.  ಆಗಲೇ ಆ ಬ್ಯಾಟರಿಯ ಬೆಲೆ 50 ರೂಪಾಯಿ.  ಈಗ ಅದು ಸುಮಾರು 5000 ರೂಪಾಯಿಗೆ ಸಮವೋ ಏನೋ.  ಆ ರೇಡಿಯೊದಲ್ಲಿ ಹಾಡು ಕೇಳಿ ಕೇಳಿಯೇ ನನಗೆ ಸಂಗೀತದಲ್ಲಿ ಆಸಕ್ತಿ ಮೂಡಿದ್ದು.  ಆಗ ಟೇಪ್ ರೆಕಾರ್ಡರ್ ಇತ್ಯಾದಿ ಇಲ್ಲದ್ದರಿಂದ ಸಂಗ್ರಹದ ಪ್ರಶ್ನೆ ಇರಲಿಲ್ಲ.  ಆಗ ಏನಿದ್ದರೂ ಕೇಳಿ ಕೇಳಿ ಮನಸ್ಸಿನಲ್ಲೇ ರೆಕಾರ್ಡಿಂಗ್.  ಈಗಲೂ ಆ ಕಾಲದ ಎಲ್ಲ ಹಾಡು ಹಾಗೂ ಅವುಗಳ ಸಾಹಿತ್ಯ ನನಗೆ ನೆನಪಿದೆ.  ಆ ಕಾಲದಲ್ಲಿ ಸಿನೆಮ ನೋಡುವಾಗ 10 ಪೈಸೆ ಕೊಟ್ಟರೆ ಹಾಡುಗಳ ಪದ್ಯಾವಳಿಗಳು ಸಿಗುತ್ತಿದ್ದವು. ಆಗ ನಮಗೆಲ್ಲ ಸಿನೆಮ ನೊಡುವ ಅವಕಾಶ ಕಮ್ಮಿ.  ರಜೆಯಲ್ಲಿ ಯಾವತ್ತಾದರೂ ಕಾರ್ಕಳ ಅಥವಾ ಮಂಗಳೂರಿಗೆ ಹೋದರೆ ಆಗ ಒಂದು ಸಿನೆಮ ನೋಡುವುದು.  ಮರೆಯದೆ ಅದರ ಪದ್ಯಾವಳಿ ಕೊಳ್ಳುವುದು.  ಮತ್ತೆ ರೇಡಿಯೊದಲ್ಲಿ ಆ ಸಿನೆಮದ ಹಾಡು ಬರುವಾಗ ಪದ್ಯಾವಳಿ ಎದುರಿಗೆ ಇಟ್ಟುಕೊಂಡು ಜೊತೆಗೆ ಹಾಡುವುದು. ಹೀಗೆ ಹಾಡುಗಳ ಹುಚ್ಚು ಬೆಳೆಯುತ್ತಾ ಹೋಯಿತು.  ಮುಂದೆ ಟೇಪ್ ರೆಕಾರ್ಡರ್ ಯುಗ ಬಂದ ಮೇಲೆ ನನ್ನ ಸಂಗ್ರಹ ಅಭಿಯಾನ ಆರಂಭವಾಯಿತು.   ಸಂಗ್ರಹ ಮಾಡುತ್ತ ಮಾಡುತ್ತ  ಈಗ ನನ್ನಲ್ಲಿ 2000 ಕ್ಕೂ ಮಿಕ್ಕಿ ಹಿಂದಿ ಹಾಗೂ 1000ಕ್ಕೂ ಮಿಕ್ಕಿ ಕನ್ನಡ ಹಾಡುಗಳು ಇರಬಹುದು.  ತುಳು ಹಾಡುಗಳೂ ಬಹಳ ಇವೆ ನನ್ನಲ್ಲಿ.  ಕಂಪ್ಯೂಟರ್ ಯುಗ ಆರಂಭವಾದ ಮೇಲೆ ಹಾಡುಗಳಲ್ಲೂ ನಾನು ಪ್ರಯೋಗ ನಡೆಸತೊಡಗಿದೆ.  ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಬೇರೆ ಬೇರೆಯಾಗಿ ಹಾಡಿದ ಬೊಳ್ಳಿ ತೋಟ ಚಿತ್ರದ ದಾನೆ ಪೊಣ್ಣೆ/ದಾನೆ ಪನ್ಲೆ ಹಾಡುಗಳನ್ನು ಯುಗಳ ಗೀತೆಯಾಗಿ ಪರಿವರ್ತಿಸಿದ್ದು ತುಂಬಾ ಜನಪ್ರಿಯವಾಗಿದೆ.(ಹಿನ್ನೆಲೆಯಲ್ಲಿ ಇದರ ತುಣುಕು).

ವೃತ್ತಿ ಜೀವನ, ನಿಜ ಜೀವನ ಎರಡರಲ್ಲೂ ನಿರಂತರ ಪ್ರಯೋಗಶೀಲತೆಯನ್ನು ರೂಢಿಸಿಕೊಂಡವರು ನೀವು.

ಹೌದು,   ನನ್ನ ಪ್ರಯೋಗಶೀಲತೆ ಮೊದಲಿಂದಲೂ ಇದೆ.  ನಾನು ಇನ್ನೊಂದು ಉದಾಹರಣೆ ಕೊಡುತ್ತೇನೆ.  ನಾವು 9ನೇ ಕ್ಲಾಸ್ ಇರುವಾಗ ನಮ್ಮ ಮನೆಗೆ ವಿದ್ಯುತ್ತು ಬಂತು.  ಅಲ್ಲಿ ವರೆಗೆ  ಚಿಮಿಣಿ ದೀಪ, ಲಾಟೀನುಗಳ ಬೆಳಕಲ್ಲೇ ಓದಿದವರು ನಾವು.  ನಮ್ಮದು ಹಳ್ಳಿಯ ದೊಡ್ಡ ಮನೆ.  10-15 ಕೋಣೆಗಳಿದ್ದವು.   ಕೂಡು ಕುಟುಂಬವಾದ್ದರಿಂದ ಅಣ್ಣ ತಮ್ಮಂದಿರ ಮಕ್ಕಳು ಇತ್ಯಾದಿ ಸೇರಿ ದಿನವೂ ಊಟಕ್ಕೆ 10-20 ಮಂದಿ ಇರುತ್ತಿದ್ದೆವು.  ಒಂದು ರೀತಿಯಲ್ಲಿ ನಿತ್ಯವೂ ಸಮಾರಾಧನೆಯೇ.  ನಮ್ಮ ತಾಯಿ, ಅತ್ತಿಗೆ ಮೊದಲಾದವರಿಗೆ ಊಟಕ್ಕೆ ಸಿದ್ಧವಾದೊಡನೆ ಗಂಡಸರನ್ನು ಕರೆಯುವುದು ಒಂದು ಸಮಸ್ಯೆಯಾಗುತ್ತಿತ್ತು.  ಒಳಗಿಂದ ಕರೆದರೆ ಹೊರಗೆ ಕೇಳುತ್ತಿರಲಿಲ್ಲ.  ಒಂದು ವೇಳೆ ಕೇಳಿಸಿದರೂ ಗಂಡಸರು ಕೂಡಲೇ ಒಳಗೆ ಬರುತ್ತಿರಲಿಲ್ಲ. ಅದಕ್ಕೆ ನಾನೊಂದು ಉಪಾಯ ಮಾಡಿದೆ.  ಒಂದು ಕಾಲ್ ಬೆಲ್ ಅಳವಡಿಸಿದೆ. ಆ ಕಾಲ್ ಬೆಲ್ ಜೊತೆಗೆ  ಟಿ.ವಿ.ತರಹ ಒಂದು screen ಮಾಡಿ ಅದರಲ್ಲಿ  "ಒಳಗೆ ಬನ್ನಿ" ಎಂಬ ಕೆಂಪು ಅಕ್ಷರಗಳು ಮೂಡುವಂತೆ ಮಾಡಿದೆ.  ಅಡಿಗೆ ತಯಾರಾಗಿ ಊಟಕ್ಕೆ ತಟ್ಟೆಗಳನ್ನು ಇರಿಸಿದೊಡನೆ ಒಳಗಿಂದ ಒಂದು ಗುಂಡಿ ಅದುಮಿದರಾಯಿತು.  ಹೊರಗಡೆ buzzer  ಸದ್ದಿನ ಜೊತೆಗೆ ಬೆಳಗುವ ಈ display ಕಂಡೊಡನೆ ಹೊರಗಿದ್ದವರೆಲ್ಲರೂ ಕೂಡಲೇ ಒಳಗೆ ಬರತೊಡಗಿದರು.  ಮತ್ತೆ ಮತ್ತೆ ಕರೆಯುವ ಬವಣೆಯಿಂದ ಮುಕ್ತಿ ದೊರೆಯಿತು.  ಅಂದಿನ ದಿನಗಳಲ್ಲಿ ನಮ್ಮ ಮನೆಗೆ ಬರುವ ಅತಿಥಿಗಳಿಗೆಲ್ಲ ಇದೊಂದು  ಪ್ರಮುಖ ಆಕರ್ಷಣೆಯಾಗಿತ್ತು.  ಇದರ ರೂವಾರಿಯಾದ ನನಗೂ ಪ್ರಶಂಸೆ ಸಲ್ಲುತ್ತಿತ್ತು.

ನಿಮಗೆ ವೀಡಿಯೊಗ್ರಾಫಿ ಹವ್ಯಾಸವೂ ಇದೆ ಎಂದು ಹೇಳಿದಿರಿ.  ಈ ಸಂಬಂಧ ಎಲ್ಲಿಗೆಲ್ಲ ಹೋಗಿದ್ದೀರಿ.

ನಾನು ವೀಡಿಯೊಗ್ರಾಫಿ ಮಾಡಲೆಂದೇ ಎಲ್ಲಿಗೂ ಹೋಗುವುದಿಲ್ಲ.  ಎಲ್ಲಿ ಹೋಗುವಾಗಲೂ ಸಾಧಾರಣವಾಗಿ ಕ್ಯಾಮರಾ ನನ್ನ ಜೊತೆಗೇ ಇರುತ್ತದೆ.  ವಿಶೇಷ ದೃಶ್ಯವೇನಾದರೂ ಕಣ್ಣಿಗೆ ಬಿದ್ದರೆ ಕೂಡಲೇ ಸೆರೆ ಹಿಡಿಯುತ್ತೇನೆ.  ನಮ್ಮ ಕುಟುಂಬದ ಸಮಾರಂಭಗಳಲ್ಲೂ ನಾನು ವಿಶೇಷ ರೀತಿಯ ವೀಡಿಯೊಗ್ರಾಫಿ ಮಾಡುತ್ತೇನೆ. ನನ್ನ ಶೈಲಿ ವೃತ್ತಿಪರರಿಗಿಂತ ಕೊಂಚ ಭಿನ್ನ.  ಉದಾಹರಣೆಗೆ ಮದುವೆ ಸಮಾರಂಭಗಳಲ್ಲಿ ವೃತ್ತಿಪರರು ವರನ ದಿಬ್ಬಣ, ವಧುವಿನ ದಿಬ್ಬಣ, ಧಾರೆ,  ಊಟ ಇತ್ಯಾದಿಗಳ ಕಡೆಗೆ ಹೆಚ್ಚು ಗಮನ ಹರಿಸಿದರೆ ನಾನು ಮೆಲ್ಲನೆ ಅಡಿಗೆ ಮನೆ ಹೊಕ್ಕೇನು.  ಅಲ್ಲಿ ಜಿಲೇಬಿಯೋ ಹೋಳಿಗೆಯೋ ಮಾಡುತ್ತಿದ್ದರೆ ವಿವಿಧ ಕೋನಗಳಲ್ಲಿ ಅದರ ವೀಡಿಯೋ ಮಾಡಿಯೇನು. ಮೊನ್ನೆ ಮೊನ್ನೆ ನಮ್ಮ ಕುಟುಂಬದಲ್ಲೊಂದು ಉಪನಯನವಿತ್ತು.  ಅಂದು ನಾನು ಇದೇ ರೀತಿ ಜಿಲೇಬಿ ತಯಾರಿಯ ಒಂದು ಕಿರು ವೀಡಿಯೋ ಮಾಡಿ ಅದಕ್ಕೆ ಸೂಕ್ತ ಹಿನ್ನೆಲೆ ಸಂಗೀತ ಅಳವಡಿಸಿ ಅಂತರ್ಜಾಲದಲ್ಲಿ ತೇಲಿ ಬಿಟ್ಟಿದ್ದೆ.  ಅದು ತುಂಬಾ ಜನಪ್ರಿಯವಾಯಿತು.

ನೀವು ಕೊಳಲಲ್ಲಿ ಹೆಚ್ಚಾಗಿ ಏನನ್ನು ನುಡಿಸುತ್ತೀರಿ.

ನಾನು ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದೇನೆ.  ಆದರೆ ನಾನು ವಿದ್ವಾಂಸನೇನೂ ಅಲ್ಲ.  ಸಂಗೀತದ ವ್ಯಾಕರಣ ತಿಳಿಯಲು ಮಂಗಳೂರು ಕಲಾನಿಕೇತನದ ಶ್ರೀ ಗೋಪಾಲಕೃಷ್ಣ ಅಯ್ಯರ್  ಅವರ ಬಳಿ ಸತತ 5-6 ವರ್ಷ ಸಂಗೀತ ಅಭ್ಯಾಸ ಮಾಡಿದ್ದೇನೆ.  ಭರತ ನಾಟ್ಯದ ಸಂದರ್ಭದಲ್ಲಿ ಶಾಸ್ತ್ರೀಯ ತರಬೇತಿ ತುಂಬಾ ಉಪಯೋಗವಾಗುತ್ತದೆ.  ವೇಣುಗಾನ ಮಂಜರಿ ಎಂಬ ನನ್ನದೇ ಕಾರ್ಯಕ್ರಮಗಳನ್ನೂ ನಾನು ನೀಡುತ್ತೇನೆ. ಮದುವೆ ರಿಸೆಪ್ಷನ್, ಉಪನಯನ, ಶುಭ ಸಮಾರಂಭಗಳು ಇತ್ಯಾದಿಗಳಲ್ಲಿ ಈ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮ ಕೇಳುಗರ ಕಿವಿಗಿಂಪಾಗುವಂತಹ  ಹಳೆಯ ಚಿತ್ರ ಗೀತೆಗಳು, ಭಕ್ತಿ ಗೀತೆಗಳು, ಜಾನಪದ ಗೀತೆಗಳು ಇತ್ಯಾದಿಗಳನ್ನೊಳಗೊಂಡಿರುತ್ತದೆ. ಆಧುನಿಕ orchestraಗಳ ಹಾಗೆ ಇದರಲ್ಲಿ ಅಬ್ಬರವಿಲ್ಲ.  ಇನ್ನೊಂದೆರಡು ಇಂತಹ ಹಾಡುಗಳು ಬೇಕಿದ್ದವು ಎಂದು ಅನ್ನಿಸುವಂತಹ ಆಯ್ಕೆ.  ಅನೇಕರು ಇದನ್ನು ಇಷ್ಟ ಪಡುತ್ತಾರೆ.  ನಾನು ವಿದ್ವಾಂಸನೇನೂ ಅಲ್ಲವೆಂದು ಮೊದಲೇ ಹೇಳಿದ್ದೇನೆ.  ಆದರೂ ನಾನು ಕೊಳಲು ನುಡಿಸುವ ಶೈಲಿಯಲ್ಲಿ ಏನೋ ಆಕರ್ಷಣೆ ಇದೆ ಎಂದು ಅನೇಕರು ಹೇಳುತ್ತಾರೆ.(ಹಿನ್ನೆಲೆಯಲ್ಲಿ ದೋಣಿ ಸಾಗಲಿ ಹಾಡಿನ prelude).

ನೀವು ಎಲ್ಲೆಲ್ಲ ಕಾರ್ಯಕ್ರಮ ನೀಡಿದ್ದೀರಿ.

ಹೆಚ್ಚು ಕಾರ್ಯಕ್ರಮಗಳನ್ನು ಮಂಗಳೂರಲ್ಲೇ ನೀಡಿದ್ದೇನೆ.  ದಕ್ಷಿಣ ಕನ್ನಡದ ವಿವಿಧ ಕಡೆಗಳಲ್ಲೂ ನೀಡಿದ್ದೇನೆ. ಬೆಂಗಳೂರು, ಹಾಸನ ಮುಂತಾದೆಡೆಯೂ ಕೆಲವು ಕಾರ್ಯಕ್ರಮಗಳು ನಡೆದಿವೆ.  ನನ್ನ ಕಾರ್ಯಕ್ರಮ ಅವಶ್ಯಕತೆಗೆ ತಕ್ಕಂತೆ ಅರ್ಧ, ಒಂದು, ಎರದು, ಮೂರು, ಕೆಲವು ಸಲ  ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ನಡೆಯುವುದೂ ಇದೆ.  ಕೊಳಲು, ರಿದಂ ಪ್ಯಾಡ್ ,ಕೀ ಬೋರ್ಡ್ ಮತ್ತು ತಬ್ಲಾಗಳನ್ನಷ್ಟೇ ಹೊಂದಿರುವ ನಮ್ಮದು ಚಿಕ್ಕ ತಂಡ.

ಈಗ ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಅಬ್ಬರದ DJ ಸಂಗೀತ ಇತ್ಯಾದಿಗಳನ್ನು ನಾವು ಹೆಚ್ಚಾಗಿ ನೋಡುತ್ತೇವೆ.  ಇದರ ನಡುವೆ ನಿಮ್ಮ ಮಧುರ ಸಂಗೀತದ ಸ್ಥಾನ ಏನು.

ಆ ಕೇಳುಗರೇ ಬೇರೆ, ಈ ಕೇಳುಗರೇ ಬೇರೆ.  DJ ಸಂಗೀತಕ್ಕೆ ಹೊಂದಿಕೊಂಡವರಿಗೆ ನನ್ನ ಶೈಲಿ ರುಚಿಸಲಾರದೋ ಏನೋ.  ಆದರೆ ನನ್ನ ಕಾರ್ಯಕ್ರಮಗಳನ್ನು ಇಷ್ಟ ಪಡುವವರಿಗೆ ಅವರದ್ದು ಕಿವಿ ಬಿರಿಯುವ ಗದ್ದಲ ಎಂದೆನ್ನಿಸಬಹುದು. ಅದು ಅವರವರ ಇಷ್ಟ.  ಲೊಕೋ ಭಿನ್ನ ರುಚಿಃ ಎಂಬ ಉಕ್ತಿಯೇ ಇದೆಯಲ್ಲ.  ಕೆಲವರಿಗೆ  ಅದು ಇಷ್ಟವಾದರೆ ಉಳಿದವರಿಗೆ ಇದು ಇಷ್ಟ.  ನನ್ನ ಶೈಲಿಯನ್ನೂ ಮನಸಾರೆ ಮೆಚ್ಚುವವರು ಅನೇಕರಿದ್ದಾರೆ.(ಹಿನ್ನೆಲೆಯಲ್ಲಿ ಪಹಾಡಿ ಧುನ್).

ನೀವು ಅನೇಕ ಹಾಡುಗಳನ್ನು ಕೊಳಲಿನಲ್ಲಿ ನುಡಿಸುತ್ತೀರಿ.  ನಿಮ್ಮದೇ ರಚನೆಗಳನ್ನೇನಾದರೂ ಪ್ರಸ್ತುತ ಪಡಿಸುವುದಿದೆಯೇ.

ಇಲ್ಲ.  ವಾದ್ಯಗಳನ್ನು ನುಡಿಸುವವರಿಗೆ ಅದೊಂದು minus point.  ನನ್ನದೇ ಒಂದು ರಚನೆಯನ್ನು ನಾನು ಕೊಳಲಿನಲ್ಲಿ ನುಡಿಸಿದರೆ ಕೇಳುಗರಿಗೆ ಅದು ಏನು ಎಂದು ತಿಳಿಯುವುದು ಹೇಗೆ.  ವಾದ್ಯಗಳಲ್ಲಿ ಪ್ರಸಿದ್ಧ ರಚನೆಗಳನ್ನೇ ನುಡಿಸಬೇಕಾಗುತ್ತದೆ.  ಒಹೋ, ಈ ಹಾಡು ನುಡಿಸಿದರು ಎಂದು ಆಗಲೇ ಜನರಿಗೆ ತಿಳಿಯುವುದು.  ಓರ್ವ ಗಾಯಕನಾದರೆ ತಾನೇ ಒಂದು ಹಾಡು ರಚಿಸಿ ರಾಗ ಸಂಯೋಜನೆ ಮಾಡಿ  ಪ್ರಸ್ತುತ ಪಡಿಸಬಹುದು.  ನಾನೇನಾದರೂ ನನ್ನದೇ ಒಂದು ರಾಗವನ್ನು ಉದ್ದಕ್ಕೆ ನುಡಿಸುತ್ತಾ ಹೋದರೆ ಕೇಳುಗರಿಗೆ ಬೋರಾದೀತು.  ನನ್ನ ನಂಬಿಕೆ ಏನೆಂದರೆ ನಾನು ನುಡಿಸುವ ಹಾಡು ಕೇಳುಗರಿಗೆ ಗೊತ್ತಿರಲಿ ಇಲ್ಲದಿರಲಿ, ಇದನ್ನು ಎಲ್ಲೋ ಕೇಳಿದಂತಿದೆಯಲ್ಲ ಎನ್ನುವ ಭಾವನೆಯಾದರೂ ಅವರ ಮನಸ್ಸಿನಲ್ಲಿ ಬರಬೇಕು.  ಆಗಲೇ ಕಾರ್ಯಕ್ರಮ ಯಶಸ್ವಿ ಆಗುವುದು.  ನನ್ನ ಆಯ್ಕೆ ಯಾವಾಗಲೂ ಹೀಗೆಯೇ.(ಹಿನ್ನೆಲೆಯಲ್ಲಿ ಆಧಾ ಹೈ ಚಂದ್ರಮಾ).

ಜನಪ್ರಿಯ ಹಾಡುಗಳ ಧಾಟಿಯಲ್ಲಿ ನೀವು ಕೆಲವು ಕವನಗಳನ್ನು ರಚಿಸಿದ್ದೀರಿ.  ಇದರ ಬಗ್ಗೆ ಏನು ಹೇಳುತ್ತೀರಿ.

ಹೌದು,  ಶಾಲಾ ಕಾಲೇಜಿನ ದಿನಗಳಲ್ಲಿ ನನಗೆ ಆ ಹುಚ್ಚೂ ಇತ್ತು.  ಆಗಿನ ಜನಪ್ರಿಯ ಹಾಡುಗಳ ಧಾಟಿಯಲ್ಲಿ ನಾನು ಕೆಲವು ಕವಿತೆಗಳನ್ನು ರಚಿಸಿದ್ದಿದೆ.  ನಮ್ಮ ಊರಿಗೂ ಒಂದು ಬಸ್ಸು ಬರಬೇಕೇಂದು ನನಗೆ ಭಾರೀ ಆಸೆ.  ಆಗ "ಏಕ್ ಖಬರ್ ಆಯೀ ಸುನೋ ಏಕ್ ಖಬರ್ ಆಯೀ" ಎಂಬ ಕಿಶೋರ್ ಕುಮಾರನ ಹಾಡೊಂದು ಪ್ರಸಿದ್ಧವಾಗಿತ್ತು.  ಆ ಧಾಟಿಯಲ್ಲಿ "ಅದೋ ಅಲ್ಲಿ ನಮ್ಮ ಊರ ಬಸ್ಸು ಬಂತು ನೋಡಿ ನಿಮಗೂ ಸಹ ಹೋಗಬೇಕೆ ಬೇಗ ಬೇಗ ಓಡಿ" ಎಂಬ ಕವನ ಬರೆದಿದ್ದೆ.  ಆದರೆ ಇಂದಿಗೂ ಅದು ಕವನ ಆಗಿಯೇ ಉಳಿದಿದೆ.  ಇವತ್ತಿನ ವರೆಗೂ ನಮ್ಮ ಕಲ್ಮಂಜ ಗ್ರಾಮಕ್ಕೆ ಬಸ್ಸಿನ ಮುಖ ಕಾಣುವ ಭಾಗ್ಯ ಬಂದಿಲ್ಲ!

ನಿಮಗೆ ತುಳು ಹಾಡುಗಳು ಗೊತ್ತಿವೆಯೇ.

ಈಗಿನ ಹೊಸ ತುಳು ಸಿನಿಮಾಗಳ ಒಂದೂ ಹಾಡು ನನಗೆ ಗೊತ್ತಿಲ್ಲ.  ಆ ಮಟ್ಟಿಗೆ ನನ್ನನ್ನು ಕ್ಷಮಿಸಿ.  ಆದರೆ 70ರ ದಶಕದಲ್ಲಿ ಬಂದ ಪ್ರತೀ ತುಳು ಸಿನೆಮಾದ ಪ್ರತೀ ಪದ್ಯವೂ ನನಗೆ ಗೊತ್ತಿದೆ ಮತ್ತು ಅವೆಲ್ಲ ನನ್ನ ಸಂಗ್ರಹದಲ್ಲೂ ಇವೆ. ಅವುಗಳಲ್ಲೆಲ್ಲ ನನಗೆ ಅತ್ಯಂತ ಹೆಚ್ಚು ಖುಶಿ ಕೊಟ್ಟದ್ದು ದಾನೆ ಪೊಣ್ಣೆ.  ಮಂಗಳೂರು ಆಸುಪಾಸಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಈ ಹಾಡನ್ನು ತಪ್ಪದೇ ನುಡಿಸುತ್ತೇನೆ.  ಕೋಟಿ ಚೆನ್ನಯದ ಎಕ್ಕ ಸಕ ಹಾಡೂ ಪ್ರತಿ ಕಾರ್ಯಕ್ರಮದಲ್ಲಿ ಇರುತ್ತದೆ.(ಹಿನ್ನೆಲೆಯಲ್ಲಿ ದಾನೆ ಪೊಣ್ಣೆ).

ನಿಮಗೆ ಪೈಂಟಿಂಗ್ ಹವ್ಯಾಸವೂ ಇದೆ ಎಂದು ಹೇಳಿದಿರಿ.  ಯಾವ ರೀತಿಯ ಪೈಂಟಿಂಗ್ ಮಾಡುತ್ತೀರಿ.

ಶಾಲಾ ದಿನಗಳಲ್ಲಿ ವಾಟರ್ ಕಲರ್ ಪೈಂಟಿಂಗ್ ಮಾಡುತ್ತಿದ್ದೆ.  ಈಗ ಈ ಹವ್ಯಾಸ ಕೊಂಚ ಹಿಂದೆ ಬಿದ್ದಿದೆ.  ಆಗಿನ ಪೈಂಟಿಂಗ್ ಈಗಲೂ ನನ್ನಲ್ಲಿವೆ.  ಕೆಲವನ್ನು "ವಿರಾಮದ ವೇಳೆಗಾಗಿ"ಯಲ್ಲಿ ನೋಡಬಹುದು.

ದೊಡ್ಡ ದೊಡ್ಡ ಕಲಾವಿದರೊಡನೆ ಕಾರ್ಯಕ್ರಮಗಳನ್ನೇನಾದರೂ ನೀಡಿದ್ದೀರಾ.

ದೊಡ್ಡ ದೊಡ್ದ ಕಲಾವಿದರ ಸಮ್ಮುಖದಲ್ಲೂ ನಾನು ಕಾರ್ಯಕ್ರಮ ನೀಡಿದ್ದೇನೆ. ನನ್ನ ಸ್ವಂತ ಕಾರ್ಯಕ್ರಮಗಳಿಗಾದರೆ ನನ್ನದೇ ತಂಡವಿದೆ.  ಭರತ ನಾಟ್ಯದ ಸಂದರ್ಭದಲ್ಲಿ ಬೇರೆ ಬೇರೆ ವಿದ್ವಾಂಸರ ಒಡನಾಟ ಸಿಕ್ಕುತ್ತಿರುತ್ತದೆ.  ನನ್ನ ವೃತ್ತಿ ಜೀವನದ ಆರಂಭದ ವರ್ಷಗಳಲ್ಲಿ ಕಲಾ ನಿಕೇತನದಲ್ಲಿ ಶಾಸ್ತ್ರೀಯ ತರಬೇತಿ ಪಡೆಯುತ್ತಿದ್ದಾಗ ಆಕಾಶವಾಣಿಯ ಯುವವಾಣಿಯಲ್ಲಿ ನಾನು ಕೊಳಲು ನುಡಿಸಿದ್ದಿದೆ.  ಆಗ ಕೆ.ಹರಿಶ್ಚಂದ್ರನ್, ಎ.ಆರ್.ಕೃಷ್ಣಮೂರ್ತಿ ಮೊದಲಾದ ವಿದ್ವಾಂಸರು ನನಗೆ ಪಕ್ಕ ವಾದ್ಯ ನುಡಿಸಿದ್ದಾರೆ.(ಹಿನ್ನೆಲೆಯಲ್ಲಿ ಯುವವಾಣಿಯ ಮಹಾ ಗಣಪತಿಂ).

ಕೊಳಲು ಕಲಿಯುವುದಕ್ಕೆ, ನುಡಿಸುವುದಕ್ಕೆ ವಿಶೇಷ ಕ್ರಮ, ನಿಯಮ ಅಂತೇನಾದರೂ ಇದೆಯಾ.

ನಿಯಮ ಅಂತೇನೂ ಇಲ್ಲ.  ಮುಖ್ಯವಾಗಿ ಆಸಕ್ತಿ ಬೇಕು. ಮನಸ್ಸಿನೊಳಗಿಂದ ಆಸಕ್ತಿ ಬೇಕು.  ಅಪ್ಪ ಹೇಳಿದ್ದಾರೆ, ಅಮ್ಮ ಹೇಳಿದ್ದಾರೆ ಎಂದು ಕೊಳಲು ಕಲಿಯಲು ಹೊರಟರೆ ಆಗದು.  ಒಳಗಿನಿಂದ ಆಸಕ್ತಿ ಹುಟ್ಟಿದರೆ ಯಾರೂ ಕೊಳಲು ಕಲಿಯಬಹುದು.   ಕೊಳಲಲ್ಲಿ ನುಡಿಸುವ ಹಾಡು ನಮ್ಮ ಮನಸ್ಸಿನಲ್ಲಿರಬೇಕು ಮತ್ತು ಹಾಡಲೂ ಬರಬೇಕು. ಧ್ವನಿಯೇನೂ ಚೆನ್ನಾಗಿರಬೇಕಾಗಿಲ್ಲ. ಬಾಯಲ್ಲಿ ಹಾಡಲು ಬಂದರೆ ಕೊಳಲಲ್ಲೂ ಹಾಗೆಯೇ ನುಡಿಸಬಹುದು.  ನನ್ನ ನುಡಿಸುವಿಕೆಯಲ್ಲಿ ಇದನ್ನು ಅಳವಡಿಸಿಕೊಂಡಿದ್ದೇನೆ.  ಸಿನೆಮ ಹಾಡೇ ಇರಲಿ, ಜಾನಪದ ಗೀತೆಯೇ ಇರಲಿ ಅದರ ಸಾಹಿತ್ಯ ಕೇಳುಗರ ಮನಸ್ಸಿನಲ್ಲಿ ಮೂಡುವಂತೆ ನಾನು ನುಡಿಸುತ್ತೇನೆ.  ಬರೇ ಸ್ವರಗಳನ್ನು ಬರೆದುಕೊಂಡು ನುಡಿಸಿದರೆ ಈ ಪರಿಣಾಮ ಉಂಟಾಗದು.(ಹಿನ್ನೆಲೆಯಲ್ಲಿ  ಭಾಗ್ಯದ ಬಳೆಗಾರ).

ರೇಡಿಯೋ ಸಾರಂಗ್ ಬಗ್ಗೆ ಏನು ಹೇಳುತ್ತೀರಿ.

ಸಾರಂಗ್ ಸರಿಯಾಗಿ ಕೇಳಿಸುವುದಿಲ್ಲ ಎಂದು ಕೆಲವರ ದೂರು ಇದೆ.  ನಾನು ಹೇಳುವುದೆಂದರೆ ರೇಡಿಯೊಗೆ ಯಾವಾಗಲೂ ಒಂದು antenna ಬೇಕು.  ಮಾಡಿನ ಮೇಲೆ ಅಳವಡಿಸುವ ದೊಡ್ಡ antenna ಆಗಬೇಕೆಂದೇನೂ ಇಲ್ಲ. ಒಂದು ಚಿಕ್ಕ ತಂತಿಯೂ ಸಾಕು. ಮತ್ತೆ FM ಸ್ವಲ್ಪ ಹಠಮಾರಿ ಇದ್ದಂತೆ.  ಇಲ್ಲಿ ಕೇಳಿಸಿದರೆ ಎರಡು ಅಡಿ ಆಚೆ ಕೇಳಿಸದು.  ಯಾವ positionನಲ್ಲಿ ಸರಿಯಾಗಿ ಕೇಳಿಸುತ್ತದೆ ಎಂದು ಸ್ವಲ್ಪ ಅನ್ವೇಷಣೆ ನಡೆಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.  ನನ್ನ FM Sterioದಲ್ಲಿ 200 ಕಿ.ಮೀ. ಗಿಂತಲೂ ಹೆಚ್ಚು ದೂರದ ಹಾಸನ , ಮಡಿಕೇರಿ FMಗಳೂ ಸ್ಪಷ್ಟವಾಗಿ ಕೇಳಿಸುತ್ತವೆ.

ನಿಮ್ಮ ವೃತ್ತಿ ಜೀವನ, ಕಲಾಜೀವನದ ಅನುಭವಗಳನ್ನು ಹಂಚಿಕೊಂಡಿದ್ದೀರಿ.  ರೇಡಿಯೋ ಸಾರಂಗ್ ವತಿಯಿಂದ ನಿಮಗೆ ವಂದನೆಗಳು.

ನಿಮಗೂ ವಂದನೆಗಳು.

ಕೇಳುಗರು ಏನಂದ್ರು

29-5-2015ರಂದು ಸಾರಂಗ ಸಂಗಮದಲ್ಲಿ ಪ್ರಸಾರವಾದ  ರೇಡಿಯೊ ಕೇಳುಗರ ಕೆಲವು ಅನಿಸಿಕೆಗಳು ಇಲ್ಲಿವೆ.





2 comments:

  1. ಈ ಕಾರ್ಯಕ್ರಮ ನಮಗೆ ಪುಣೆಯಲ್ಲಿ FM ನಲ್ಲಿ ಕೇಳಲು ಸಾಧ್ಯವಿರಲಿಲ್ಲ. ಆದರೆ ಅದರ ಧ್ವನಿಮುದ್ರಣ ಕೇಳಲು ಸಿಕ್ಕಿತು. ಬಹಳ ಸಂತೋಷವಾಯಿತು. ತುಳು ಭಾಷೆ ಬಾರದವರಿಗಾಗಿ ಕನ್ನಡಕ್ಕೆ ಭಾಷಾಂತರ ಮಾಡಿದ್ದರಿಂದ ಎಲ್ಲರಿಗೂ ತಿಳಿದುಕೊಳ್ಳುವ ಸೌಲಭ್ಯವಾಗಿದೆ. ಕಾರ್ಯಕ್ರಮ ಚೆನ್ನಾಗಿದೆ.

    ReplyDelete
  2. This is an excellent recording of a very well conducted interview. Thoroughly enjoyed listening to it. I must admit, not using Tulu language on a regular basis and living away from Tulu-naadu makes one forget some original Tulu words and expressions, you have used excellent vocabulary very proficiently. Also liked the re-designed blog, there is so much material which brings back my childhood memories.
    Narahari Joshi - Leeds , UK.

    ReplyDelete

Your valuable comments/suggestions are welcome