Thursday, 16 October 2025

ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದ ಕಾಲದ ಕಥಾನಕ

ಇದು ನಮ್ಮ ಊರಿನ ಹಳೆ ಮನೆಯ ಒಳಗಿನ ಹಜಾರದ ಚಿತ್ರ. ಚಿತ್ಪಾವನಿಯಲ್ಲಿ ಇದನ್ನು ಆಂತ್ಲಿ ಮಾಳಿ ಅನ್ನುವುದು. ನಾನು ಚಿಕ್ಕವನಾಗಿದ್ದಾಗ ಅಲ್ಲಿಯ ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿರುವುದನ್ನು ಈ AI ಚಿತ್ರದಲ್ಲಿ ನೋಡುತ್ತಿದ್ದೀರಿ. ಕಿಟಿಕಿಯಲ್ಲಿ ಕುಳಿತು? ಹೌದು, ಸರಿಯಾಗಿಯೇ ಓದಿದ್ದೀರಿ. ಒಂದು ಗಜ ದಪ್ಪದ ಮಣ್ಣಿನ ಗೋಡೆಯ ಮನೆಗಳ ಕಿಟಿಕಿಗಳು ಹೀಗೆಯೇ ಇರುತ್ತಿದ್ದುದು. ಅದರಲ್ಲಿ ಕುಳಿತು ಕಾಫಿ ಕುಡಿಯುವುದೇನು, ಒಂದು ಸಣ್ಣ ಎಲೆ ಹಾಕಿ ಊಟ ಮಾಡುವಷ್ಟು ಅಗಲದ ಜಾಗ ಇರುತ್ತಿತ್ತು. 1967ರಲ್ಲಿ ಆ ಮನೆಗೆ ವಿದ್ಯುತ್ತಿನ ವಯರಿಂಗ್ ಮಾಡುವಾಗ ಗೋಡೆಗೆ ತೂತು ಕೊರೆಯುವ ಪೈಪಿನ ಉದ್ದ ಸಾಕಾಗದೆ ಅರ್ಧ ಈ ಕಡೆಯಿಂದ , ಅರ್ಧ ಆ ಕಡೆಯಿಂದ ಕೊರೆಯಬೇಕಾಗಿ ಬಂದಿತ್ತು!
ಊಟದ ಮನೆಯೂ ಆಗಿದ್ದ ಇಲ್ಲಿ ಈ ಕಿಟಿಕಿಯ ಬುಡ ನಾನು ಊಟಕ್ಕೆ ಕುಳಿತುಕೊಳ್ಳುವ ಶಾಶ್ವತ ಜಾಗ ಆಗಿತ್ತು. ಆಗ ಚಿಕ್ಕವರು ಮಣೆಯ ಮೇಲೆ ಕೂತು ಉಣ್ಣುವ ಪರಿಪಾಠ ಇಲ್ಲದಿದ್ದರೂ ನನಗೆ ನಿತ್ಯವೂ ಮಣೆ ಬೇಕೇ ಬೇಕಿತ್ತು. ಕಿಟಿಕಿ ಬದಿಯ ಸಾಲಿನಲ್ಲಿ ಚಿಕ್ಕ ಮಕ್ಕಳು, ಎದುರುಗಡೆ ಸಾಲಿನಲ್ಲಿ ತಂದೆಯವರು, ಅಣ್ಣಂದಿರು ಕುಳಿತುಕೊಳ್ಳುತ್ತಿದ್ದರು. ಎಲ್ಲರಿಗೂ ಅವರವರ ನಿಶ್ಚಿತ ಜಾಗಗಳಿದ್ದವು.

ದೇವರ ಕೋಣೆಯೂ ಇದೇ ಆಗಿತ್ತು. ಎಡ ಮೂಲೆಯಲ್ಲಿ ಕಾಣಿಸುವ ಕಪ್ಪು ಬಣ್ಣದ ಕಪಾಟಿನ ಒಳಗೆ ದೇವರ ಮಂಟಪ. ಕೆಂಪು ಬಣ್ಣದ ಚೌಕಾಕಾರದ ಸಿಮೆಂಟೇ ದೇವರ ಕೋಣೆಯನ್ನು ಬೇರ್ಪಡಿಸುವ demarcation. ದೇವರ ಮಂಟಪದ ಮೇಲ್ಭಾಗದಲ್ಲೂ ಕಪಾಟು ಇತ್ತು. ಕೆಳಗೆ ಶಾಶ್ವತವಾಗಿ ನಂದಾದೀಪ ಉರಿಯುತ್ತಿದ್ದುದರಿಂದ ಅದರೊಳಗೆ ಇಟ್ಟಿರುವ ವಸ್ತುಗಳೆಲ್ಲ ಬೂಸ್ಟು ಹಿಡಿಯದೆ ಬೆಚ್ಚಗಾಗಿ ಇರುತ್ತಿದ್ದವು.

ನಮ್ಮಲ್ಲಿ ನಿತ್ಯ ನಡೆಯುತ್ತಿದ್ದ ಷೋಡಶೋಪಚಾರ ಪೂಜೆಯ ಜೊತೆಗೆ ಸೋಮವಾರಗಳಂದು ರುದ್ರಾಭಿಷೇಕವೂ ಇರುತ್ತಿತ್ತು. ಪೂಜೆಯ ಕೊನೆಯಲ್ಲಿ ನೈವೇದ್ಯದ ಸಮಯ ಊದುಬತ್ತಿ, ಕರ್ಪೂರಗಳ ಸುವಾಸನೆ, ಬಿಸಿ ಬಿಸಿ ಅನ್ನದ ಹಬೆ, ಅಡುಗೆಮನೆಯಿಂದ ಬರುವ ಒಗ್ಗರಣೆಯ ಘಮ ಇವೆಲ್ಲ ಸೇರಿ ಒಂದು ದೈವಿಕ ವಾತಾವರಣ ಸೃಷ್ಟಿಯಾಗುತ್ತಿತ್ತು.

ಪ್ರತೀ ಶುಕ್ರವಾರ ರಾತ್ರಿ ಲಕ್ಷ್ಮೀನಾರಾಯಣ ಹೃದಯ ಗ್ರಂಥದ ಪಾರಾಯಣ ಇರುತ್ತಿತ್ತು. ಅದರಲ್ಲಿ ಬರುವ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು! ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು. ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು. ಪಾರಾಯಣದ ಒಂದು ಹಂತದಲ್ಲಿ ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ತಂದೆಯವರು ನಮ್ಮ ಬಾಯಿಗೆ ಹಾಕುತ್ತಿದ್ದರು. ಶುಕ್ರವಾರದ ಪಾರಾಯಣ, ಚೌತಿ, ನವರಾತ್ರಿ ಮತ್ತು ನವಾನ್ನ ಪೂಜೆಯ ದಿನ ಮಾತ್ರ ಮಂಗಳಾರತಿಯ ಸಮಯ ಜಾಗಟೆ ಬಾರಿಸುವುದು ನಮ್ಮಲ್ಲಿದ್ದ ಅಲಿಖಿತ ನಿಯಮ.

ಚೌತಿಯ ಗಣೇಶ ಹೊರಗಿನ ಹಜಾರದಲ್ಲಿ ಪೂಜಿಸಲ್ಪಡುತ್ತಿದ್ದರೂ ಸಣ್ಣ ಮಂಟಪವೊಂದರಲ್ಲಿ ಹರತಾಳಿಕಾ ಗೌರಿ ಪೂಜೆ ಇಲ್ಲೇ ನಡೆಯುತ್ತಿತ್ತು. ನವರಾತ್ರಿ ಪೂಜೆ ನಿತ್ಯದ ದೇವರ ಮಂಟಪದಲ್ಲೇ ನಡೆಯುತ್ತಿದ್ದುದು. ಆಗ ನೀಲಿ ನಾಮದ ಗೋರಟೆ, ಹಳದಿ ಮೈಸೂರು ಗೋರಟೆ ಮತ್ತು ಕೆಂಪು ಕೇಪುಳ ಹೂಗಳ ಮಾಲೆಗಳಿಂದ ಮಂಟಪವನ್ನು ಅಲಂಕರಿಸಲಾಗುತ್ತಿತ್ತು. ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವ ವ್ಯವಸ್ಥೆ ನಮ್ಮಣ್ಣ ಮಾಡಿದ್ದರು. ಅದಕ್ಕೆ ರೇಡಿಯೋದ ನಿರುಪಯೋಗಿ ಬ್ಯಾಟರಿಯನ್ನು ಒಡೆದು ಅದರೊಳಗೆ ಇರುವ ಸೆಲ್ಲುಗಳನ್ನು ಅವರು ಉಪಯೋಗಿಸುತ್ತಿದ್ದರು.

ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ನಡೆಯುತ್ತಿದ್ದುದು ಕಿಟಿಕಿಯಿಂದ ಸ್ವಲ್ಪ ಈಚೆಗೆ. ಪೂಜೆಮಾಡುವವರನ್ನುಳಿದು ಉಳಿದವರು ನಿತ್ಯ ಸಂಧ್ಯಾವಂದನೆ ಮಾಡುವ ಜಾಗವೂ ಅದೇ ಆಗಿತ್ತು. ಸಂಧ್ಯಾವಂದನೆಗೆ ಮೊದಲು ಹಗಲಿನಲ್ಲಿ ಗಂಧ, ರಾತ್ರೆ ಭಸ್ಮ ಧರಿಸುವ ಸಂಪ್ರದಾಯ ನಮ್ಮಲ್ಲಿತ್ತು.

ಬಾಣಂತಿಯರು ಶುದ್ಧ ಆದ ದಿನ ದೇವರೆದುರು ಕೂತು ಮನೆಯ ಸಣ್ಣ ಮಕ್ಕಳೆಲ್ಲರ ತಲೆಗೆ ಎಣ್ಣೆ ಹಚ್ಚಿ, ತುಪ್ಪದಲ್ಲಿ ಕಲಸಿದ ಶುಂಠಿಬೆಲ್ಲ ತಿನ್ನಲು ಕೊಡುವ ಕ್ರಮ ಇತ್ತು. ದೀಪಾವಳಿ ಸಮಯದಲ್ಲಿ ತೈಲಾಭ್ಯಂಗದ ದಿನ ಸ್ನಾನಾರಂಭಕ್ಕೆ ಮೊದಲು ಮನೆಯ ಕಿರಿಯ ಬಾಲಕನು ದೇವರೆದುರು ಭೂಮಿಯ ಮೇಲೆ ಎಣ್ಣೆಯ ಬೊಟ್ಟುಗಳನ್ನು ಇಟ್ಟು ಅರಸಿನ ಕುಂಕುಮ, ಹೂಗಳನ್ನು ಏರಿಸಿ ಭೂಮಿ ಪೂಜೆ ಮಾಡುವ ಪದ್ಧತಿ ಇತ್ತು. ನಾನು ಕಿಶೋರನಾಗಿರುವಷ್ಟು ಸಮಯ ಈ ಅವಕಾಶ ನನ್ನ ಪಾಲಿಗೆ ಬರುತ್ತಿತ್ತು.

ದೇವರ ಮಂಟಪದ ಪಕ್ಕದಲ್ಲಿ ಬಲಬದಿಗೆ ಕುಡಿಯುವ ನೀರನ್ನು ತುಂಬಿಡುವ ರಾಂಧಣಿ ಎನ್ನುವ ಮಣ್ಣಿನ ದೊಡ್ಡ ಪಾತ್ರೆ ಇಡುವ ಜಾಗ. ಅದರ ಮೇಲ್ಗಡೆ ತಾಯಿಯವರು ಮಾಡುತ್ತಿದ್ದ ಕೆಲವು ವಿಶೇಷ ಪೂಜೆಗಳಿಗಾಗಿ ಒಂದು ಸಣ್ಣ ದೇವರ ಗೂಡು. ಅದರಿಂದಾಚೆ ಅಡುಗೆ ಮನೆಗೆ ಹೋಗುವ ಬಾಗಿಲು.

ಅಡುಗೆ ಮನೆಯ ಬಾಗಿಲ ಬಲಬದಿಯಲ್ಲೊಂದು ಸಣ್ಣ ಕಂಬ ನೆಟ್ಟದ್ದು ಕಾಣಿಸುತ್ತಿದೆಯಲ್ಲವೇ? ಚಿತ್ಪಾವನಿಯಲ್ಲಿ ಇದರ ಹೆಸರು ತಾಕ್ಕಮೀಠಿ. ಇದಕ್ಕೆ ಕಡಗೋಲು ಕಟ್ಟಿಯೇ ರಂಗನಾಯಕ ರಾಜೀವ ಲೋಚನ ಎಂದು ಹಾಡುತ್ತಾ ಮನೆಯ ಮಹಿಳೆಯರು ಭರಣಿಯಲ್ಲಿ ಮಜ್ಜಿಗೆ ಕಡೆಯುತ್ತಿದ್ದುದು. ಚಿಕ್ಕ ಮಕ್ಕಳ ತಿಂಗಳ ಹುಟ್ಟುಹಬ್ಬಗಳ ಆಚರಣೆ ಇದರ ಎದುರೇ ನಡೆಯುತ್ತಿದ್ದುದು. ಅದರ ಮೇಲ್ಗಡೆ ಕಾಣಿಸುತ್ತಿರುವ ಸಣ್ಣ ಗೂಡು, ಒಳಗಡೆ ಕನ್ನಡಿ ಅಳವಡಿಸಿದ ಅರಸಿನ ಕುಂಕುಮದ ಪೆಟ್ಟಿಗೆ ಇಡುವ ಜಾಗ.

ಈ ಫೋಟೊದಲ್ಲಿ ಕಾಣಿಸುವ ಭಾಗಕ್ಕಿಂತ ಸ್ವಲ್ಪ ಹಿಂದೆ ಗೋಡೆ ಬದಿಯಲ್ಲಿ ಹೆಚ್ಚುವರಿಯಾಗಿ ನಿಲ್ಲಿಸಿದ ಕಂಬವೊಂದು ಇತ್ತು. ಚಿಕ್ಕ ಮಕ್ಕಳು ಕಂಬ ಮತ್ತು ಗೋಡೆಯ ನಡುವಿನ ಸಂದಿಯಲ್ಲಿ ನುಸಿಯುವ ಆಟ ಆಡುವುದಿತ್ತು. ಆ ಕಂಬಕ್ಕೆ ಸ್ವಲ್ಪ ಬೆಣ್ಣೆಯನ್ನು ಮೆತ್ತಿಟ್ಟು ನೀರೆಲ್ಲ ಇಳಿದ ಮೇಲೆ ಅದರಲ್ಲಿ ಸಾಲಿಸಿಲಿಕ್ ಎಸಿಡ್ ಬೆರೆಸಿ ಫಂಗಸ್‌ನಿಂದ ಉಂಟಾಗುವ ಸಿಬ್ಬದಂಥ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು.

ಇನ್ನೂ ಹಿಂದಕ್ಕೆ ಹೋದರೆ ವೇದಮಂತ್ರಗಳ ಅಮೂಲ್ಯ ಗ್ರಂಥಗಳನ್ನು ಇಡುವ ಮರದ ಕಪಾಟು ಇತ್ತು. ಆಗಿನ ಗ್ರಂಥಗಳೆಂದರೆ ಹೊಲಿಗೆ ಹಾಕಿ ಬೈಂಡ್ ಮಾಡಿದ ಪುಸ್ತಕಗಳಲ್ಲ. ಬಿಡಿ ಹಾಳೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಮೇಲೊಂದು ಕೆಳಗೊಂದು ಹಾಳೆಗಳ ಆಕಾರದ್ದೇ ಮರದ ತೆಳ್ಳಗಿನ ಹಲಗೆಗಳನ್ನಿಟ್ಟು ನಾರು ಬಟ್ಟೆಯಿಂದ ಗಟ್ಟಿಯಾಗಿ ಸುತ್ತಿ ಹಗ್ಗದಿಂದ ಬಿಗಿದ ವೇಷ್ಟಣಗಳು ಅವು. ಪುಸ್ತಕದ ಹುಳಗಳು ಬರದಂತೆ ಹಾವಿನ ಪೊರೆಯನ್ನು ಪುಟಗಳ ಮಧ್ಯೆ ಇರಿಸುವ ಕ್ರಮ ಇತ್ತು.

ಈ ಕಪಾಟಿನ ಪಕ್ಕದಲ್ಲೇ ಪ್ರತಿಸಾಂವತ್ಸರಿಕ ಶ್ರಾದ್ಧ, ಮಹಾಲಯಗಳು ನಡೆಯುತ್ತಿದ್ದುದು.

ಇನ್ನೂ ಹಿಂದೆ ಹೋದರೆ ಪಾತ್ರೆಗಳ ಕೋಣೆಗೆ ಹೋಗುವ ಬಾಗಿಲು. ಹೆಸರೇ ಸೂಚಿಸುವಂತೆ ದಿನನಿತ್ಯದ ಅಗತ್ಯಕ್ಕೆ ಬೇಕಾಗದ ಪಾತ್ರೆಗಳನ್ನಿರಿಸುವ ಕೋಣೆ ಇದು. ತಂದೆಯವರು ವೀಳ್ಯಕ್ಕೆ ಉಪಯೋಗಿಸುತ್ತಿದ್ದ ಹೊಗೆಸೊಪ್ಪನ್ನು ಶೇಖರಿಸಿಡುವ ಭರಣಿ ಈ ಕೋಣೆಯಲ್ಲೇ ಇರುತ್ತಿದ್ದುದು. ಈ ಕೋಣೆಯಲ್ಲಿರುತ್ತಿದ್ದ ಮರದ ಪೆಟ್ಟಿಗೆಯೊಂದು ಚೌತಿಯ ಗಣಪನನ್ನು ಮಂಟಪದ ಹಿಂದೆ ಎತ್ತರದಲ್ಲಿ ಕೂರಿಸುವ ಪೀಠವಾಗಿ ಉಪಯೋಗಿಸಲ್ಪಡುತ್ತಿತ್ತು. ಬಾಹೆರ್ಲಿ ಮಾಳಿ ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದ ಕಾಲದ ಕಥಾನಕದಲ್ಲಿ ಮೊನ್ನೆ ಆಂತ್ಲಿಮಾಳಿಯಲ್ಲಿ (ಒಳಹಜಾರ) ಇದ್ದೆವು. ಇಂದು ಒಂದು ಬಾಗಿಲು ದಾಟಿ ಬಾಹೆರ್ಲಿಮಾಳಿಗೆ (ಹೊರಹಜಾರ) ಬರೋಣ.

ಚಿತ್ರದಲ್ಲಿ ಕಾಣುತ್ತಿರುವುದು 1950ರ ದಶಕದಲ್ಲಿದ್ದ ಆ ಭಾಗದ ರೂಪ. ಅಲ್ಲಿರುವ ಬೃಹದಾಕಾರದ ಕಡೆಯುವ ಕಲ್ಲಿನಲ್ಲಿ ನಮ್ಮ ತಾಯಿಯವರು ದೀಪಾವಳಿಗೆ ದೋಸೆ ಹಿಟ್ಟು ರುಬ್ಬುತ್ತಿರುವ ದೃಶ್ಯ AIಯ ಸೃಷ್ಟಿ. ಇದೇನಿದು ದೀಪಾವಳಿಗೆ ದೋಸೆಹಿಟ್ಟು ಎಂದು ಕೆಲವರಿಗೆ ಅನುಮಾನ ಮೂಡಬಹುದು. ದಕ್ಷಿಣ ಕನ್ನಡದಲ್ಲಿ ದೀಪಾವಳಿ ಎಂದರೆ ದೋಸೆ ಹಬ್ಬವೇ. ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು. ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ ಬೆರೆಸಲಾಗುತ್ತಿತ್ತು. ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ. ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ. ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ. ಆಗ ನಮ್ಮಲ್ಲಿ ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ. ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು. ಗೋಪೂಜೆಯ ದಿನ ದನಕರುಗಳಿಗೂ ಎರಡೆರಡು ದೋಸೆ ತಿನ್ನುವ ಭಾಗ್ಯ. ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ ಸಿಗುತ್ತಿತ್ತು.

ನಾನು ಒಂದನೆಯ ಅಥವಾ ಎರಡನೆ ಕ್ಲಾಸಿನಲ್ಲಿ ಇರುವಾಗ ಕಡೆಯುವ ಕಲ್ಲು ಇದ್ದ ಜಾಗದಲ್ಲಿ ಹೊರಗಿನ ‘ಹೊಸ ಜಗಲಿ’ಗೆ ಹೋಗುವ ಬಾಗಿಲು ಬಂತು. ಕಡೆಯುವ ಕಲ್ಲು ಹೊಸ ಜಗಲಿಗೆ ಸ್ಥಳಾಂತರಗೊಂಡಿತು. ಆಣ್ಣಿ ಆಚಾರಿ ಹೊಸ ಜಗಲಿಗೆ ಮರದ ದಳಿ ಮತ್ತು ಇಲ್ಲಿ ಬಾಗಿಲು ಕೂರಿಸಿದ್ದು ನನಗೂ ನೆನಪಿದೆ. ಈ ಬಾಗಿಲಿನ ಒಳಬದಿಯ ಚಿಲಕಕ್ಕೆ ಆತ ರಹಸ್ಯ ಜಾಗದಲ್ಲಿ ಕಳ್ಳ ಕೀಲು ರಚಿಸಿ ಕೊಟ್ಟಿದ್ದ. ಮರದ ಬಾಗಿಲುಗಳಿಗೆ ಸಾಮಾನ್ಯವಾಗಿ ವಿರುದ್ಧ ದಿಕ್ಕಿಗೆ ಚಲಿಸುವ ಎರಡು ಚಿಲಕಗಳು ಇರುವುದು ವಾಡಿಕೆ. ಬಾಗಿಲು ಭದ್ರಪಡಿಸುವಾಗ ಒಂದೇ ಚಿಲಕ ಹಾಕಬೇಕೆಂದು ಅಣ್ಣಿ ಆಚಾರಿ ಹೇಳುತ್ತಿದ್ದ. ಹೀಗೆ ಮಾಡಿದರೆ ಯಾರಾದರು ಮಂತ್ರವಾದ ಮಾಡಿ ಚಿಲಕ ಸರಿಯಲಿ ಎಂದು ಹೇಳಿದ ಪಕ್ಷದಲ್ಲಿ ಒಂದು ಚಿಲಕ ತೆರೆದರೆ ಇನ್ನೊಂದು ಮುಚ್ಚುತ್ತದೆ ಎಂದು ಅವನ ಅಂಬೋಣ! ಕಡೆಯುವ ಕಲ್ಲು ಇದ್ದಲ್ಲಿ ಬಾಗಿಲು ಬಂದ ಮೇಲೆ.

ಮಕ್ಕಳ ತೊಟ್ಟಿಲು ಬಾಹೆರ್ಲಿ ಮಾಳಿಯಲ್ಲೇ ಇದ್ದದ್ದು. ಎಂದೋ ಎಂದೋ, ಎಂದೋ ನಿನ್ನ ದರುಶನ ಎಂದು ಹಾಡುತ್ತಾ ಅಂಬಕ್ಕ ನನ್ನನ್ನು ತೂಗಿದ್ದು ಇಲ್ಲೇ. ಹರಿಹರ ಅಣ್ಣ ಸಂಜೆ ನಮ್ಮನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ಬಾಯಿಪಾಠ ಹೇಳಿಕೊಡುತ್ತಿದ್ದರು. ಇದು ಶುಭಂ ಕರೋತು ಕಲ್ಯಾಣಂ ಶ್ಲೋಕದಿಂದ ಆರಂಭವಾಗಿ ಆದಿತ್ಯವಾರ ಸೋಮವಾರ, ಪಾಡ್ಯ ಯುಗಾದಿ ಪಾಡ್ಯ ಬಿದಿಗೆ ಸೋಮನ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು, ಮೇಷ ವೃಷಭ, ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ, ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು. ಕೊನೆಯಲ್ಲಿ ಸಂಡೆ ಮಂಡೆ ಹೇಳಿಕೊಡುತ್ತಿದ್ದ ನಮ್ಮಣ್ಣ ಸಾಟರ್‌ಡೇ ಆದ ಮೇಲೆ ಪ್ರಾಸಬದ್ಧವಾಗಿ ಪತ್ರೋಡೆಯನ್ನೂ ಸೇರಿಸುತ್ತಿದ್ದರು!

ಸ್ವಲ್ಪ ದೊಡ್ಡವರಾದ ಮೇಲೆ ನಾವು ತೊಟ್ಟಿಲಿನ ಆಚೀಚೆ ಅಂಚುಗಳ ಮೇಲೆ ಇಬ್ಬರು ಕುಳಿತು ಜೀಕುತ್ತಾ ಬಾರೊ ಬಾರೊ ಬಾರೊ ಗಣಪ, ಗೆಳೆಯನೆ ಪೇಳುವೆ ಕೇಳಣ್ಣ, ಝನ್ ಝನ್‌ಕ ಝನ್ಕರೊ ಇತ್ಯಾದಿ ಹಾಡು ಹೇಳುತ್ತಿದ್ದೆವು. 

ತೊಟ್ಟಿಲಿನ ಸಮೀಪ ಗೋಡೆಯಲ್ಲಿ ಇದ್ದ ಗೂಡು ಚಿಮಿಣಿ ದೀಪಗಳು ಮತ್ತು L ಆಕಾರದ outlet ಇದ್ದ ಹಸುರುಬಣ್ನದ ಚಿಮಿಣಿ ಎಣ್ಣೆಯ ಕ್ಯಾನ್ ಇಡುವ ಜಾಗವಾಗಿತ್ತು. ಇನ್ನೊಂದು ಬದಿಯಲ್ಲಿದ್ದ ಗೂಡಿನಲ್ಲಿ ತೆಂಗಿನೆಣ್ಣೆಯ ಉರುಳಿ ಇಡುತ್ತಿದ್ದ ಜಾಗ.

ಹೊರಗಿನ ಚಾವಡಿಯಿಂದ ಇಲ್ಲಿಗೆ ಬರುವ ಬಾಗಿಲಿನ ಮೇಲ್ಭಾಗದಲ್ಲಿ ಆಣಿ, ಸ್ಕ್ರೂ, ಬೋಲ್ಟ್, ನಟ್ ಇತ್ಯಾದಿ ಸಕಲ ಗುಜರಿ ವಸ್ತುಗಳನ್ನು ಹಾಕಿಡುವ ನಳೊ ಎಂಬ ಹೆಸರಿನ, ಮೇಲ್ಭಾಗ ತೆರೆದಿರುವ ಬಿದಿರಿನ ಅಂಡೆ ತೂಗಾಡುತ್ತಿತ್ತು. ಅಲ್ಲೇ ಸಮೀಪದಲ್ಲಿ ಕೃಷಿ ಕೆಲಸದ ಕತ್ತಿಗಳನ್ನು park ಮಾಡುವ ಸೀಳು ಬಿದಿರು.

ಚೌತಿಯ ಮಂಟಪ ಇಲ್ಲೇ ಇರುತ್ತಿದ್ದುದು. ಮಂಟಪವನ್ನು ನಿಲ್ಲಿಸಲು ಬೇಕಾಗುವ ಎರಡು ಬಿದಿರುಗಳು ಬಚ್ಚಲುಮನೆಯ ಅಟ್ಟದ ಮೇಲಿರುತ್ತಿದ್ದವು. ಅವುಗಳನ್ನು ಕೆಳಗಿಳಿಸಿ ತೊಳೆದು ಮಧ್ಯಾಹ್ನದೊಳಗೆ ಸೂಕ್ತ ಜಾಗದಲ್ಲಿ ಕಟ್ಟಿ ಮಾಳಿಗೆಯ ಮೇಲಿರುತ್ತಿದ್ದ ಮರದ ಮಂಟಪವನ್ನು ತಂದು ಅಳವಡಿಸುವ ಕೆಲಸ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಮನೆಯ ಆಳು ಕಾಳುಗಳಿಗೂ ಚೌತಿ ಗಣಪನ ದರ್ಶನ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಮಂಟಪಕ್ಕೆ ದೇವರ ಕೋಣೆ ಇದ್ದ ಆಂತ್ಲಿಮಾಳಿಯ ಬದಲು ಹೊರ ಚಾವಡಿಯಿಂದಲೂ ವೀಕ್ಷಿಸಲು ಸಾಧ್ಯವಾಗುವ ಈ ಸ್ಥಳವನ್ನು ನಿಗದಿ ಪಡಿಸಿರಬಹುದು.

ನಾವು ಮನೆಯಲ್ಲಿ ಬೆಳ್ತಿಗೆ ಅಕ್ಕಿ ಬಳಸುವುದು. ತೋಟಕ್ಕೆ ಮದ್ದು ಬಿಡುವವರಿಗೆ ಮತ್ತು ಅಡಿಕೆ ಕೊಯ್ಲು ಮಾಡುವವರಿಗೆ ಹೊರಗಡೆ ಕುಚ್ಚಲು ಅಕ್ಕಿಯ ಅನ್ನ ಮಾಡಿ ಬಡಿಸುವುದಿತ್ತು. ಕೊಟ್ಟಣದ ಕುಚ್ಚಲಕ್ಕಿಯ ಪರಿಮಳಕ್ಕೆ ಮನಸೋತ ನಮಗೂ ಅದನ್ನು ಉಣ್ಣಬೇಕೆಂದು ಆಸೆಯಾದರೆ ಹೊರ ಹಜಾರದಲ್ಲಿ ಕುಳಿತು ಉಣ್ಣುವ ಅನುಮತಿ ಸಿಗುತ್ತಿತ್ತು. ಜೊತೆಗೆ ದೀಗುಜ್ಜೆಯ ಹುಳಿ ಏನಾದರೂ ಇದ್ದರೆ ನಿತ್ಯದ ಎರಡರಷ್ಟು ಅನ್ನ ನಮ್ಮ ಹೊಟ್ಟೆ ಸೇರುತ್ತಿತ್ತು. ಆ ಕಾಲದಲ್ಲಿ ಕುಚ್ಚಲು ಅಕ್ಕಿಗೆ ಒಳಗೆ ಪ್ರವೇಶವಿರಲಿಲ್ಲ.

ಎದುರು ಭಾಗದಲ್ಲಿ ಕಾಣುವ ಮರದ ಕಪಾಟು ತೀರಾ ಹಳೆ ಕಾಲದ್ದಲ್ಲ. ನಮ್ಮ ನೆನಪಿನಲ್ಲೇ ಇನ್ನೊಬ್ಬ ಆಣ್ಣಿ ಆಚಾರಿ ಮಾಡಿದ್ದು. ಆತ ಹವ್ಯಾಸಿ ಯಕ್ಷಗಾನ ಹಲಾವಿದ ಕೂಡ. ಅನೇಕ ವರ್ಷಗಳ ನಂತರ ನಾನು ಮಂಗಳೂರಲ್ಲಿ ಮನೆ ನಿರ್ಮಿಸಿದಾಗ ಕಿಟಿಕಿ ಬಾಗಿಲುಗಳನ್ನು ಆತನೇ ನಿರ್ಮಿಸಿ ಕೊಟ್ಟದ್ದು. ಕಪಾಟುಗಳಿಗೆ, ಬಾಗಿಲುಗಳಿಗೆ ಕುಸುರಿ ಕೆತ್ತನೆ ಮಾಡುವ ಕೌಶಲವೂ ಅವನಲ್ಲಿತ್ತು. ನಮ್ಮ ಮನೆಯ ಮುಂಬಾಗಿಲಿಗೂ ಚಂದದ ಡಿಸೈನ್ ಮಾಡಿ ಕೊಟ್ಟಿದ್ದಾನೆ.

ಮುಂದುಗಡೆ ಕಾಣುವ ಮಾಳಿಗೆ ಮೆಟ್ಟಲಿರುವ ಜಂಕ್ಷನ್‌ನ ಎದುರುಗಡೆ ಮೂಲೆಯಲ್ಲಿ ಕಡಿದ ಬಾಳೆಗೊನೆ ಇಡುವ ಜಾಗ. ಅಲ್ಲೇ ಎಡಕ್ಕೆ ತಿರುಗಿದರೆ ಹಿತ್ತಲ ಜಗಲಿಗೆ ಹೋಗುವ, ಬಿಜಾಗಿರಿ ಬದಲಿಗೆ ಮೇಲೆ ಮತ್ತು ಕೆಳಗೆ ಮೊಳೆಕ್ಕುತ್ತಿ ಇರುವ ದಪ್ಪದ ಬಾಗಿಲಿನ ಹಿಂಭಾಗ ಹಲಸಿನ ಬೀಜಗಳನ್ನು ಹಸಿಮಣ್ಣಿನೊಡನೆ ಕಲಸಿ ಗುಡ್ದದಂತೆ ಮೆತ್ತಿಡುವ ಜಾಗ. ಹೀಗೆ ಸಂರಕ್ಷಿಸಿದ ಹಲಸಿನ ಬೀಜಗಳು ಎಷ್ಟು ಸಮಯವಾದರೂ ಕೆಡುವುದಿಲ್ಲ. ಬೇಕೆನಿಸಿದಾಗ ಆ ಗುಡ್ಡವನ್ನು ಅಗೆದು ಬೀಜಗಳನ್ನು ಗುದ್ದಿ ಬಳಸಿದರಾಯಿತು.




Sunday, 5 October 2025

ಕಣ್ತೆರೆದು ನೋಡು


1956ರ ಮುತ್ತೈದೆ ಭಾಗ್ಯ ಚಿತ್ರದಲ್ಲಿ ನಮ್ಮೂರೆ ಅಂದ ನಮ್ಮೋರೆ ಚಂದ ಅನ್ನುವ ನಾಡು ನುಡಿ ಕುರಿತಾದ ಹಾಡು ಇದ್ದರೂ ಮೊದಲು ಅಘೋಷಿತ ನಾಡಗೀತೆಯಾಗಿ ಜನಮನದಲ್ಲಿ ನೆಲೆಸಿದ್ದು 1961ರಲ್ಲಿ ಪ್ರದರ್ಶಿತವಾದ ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ  ಹಾಡು.  

ಆ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸ್ವತಃ ರೇಡಿಯೊ ನಿಲಯದಲ್ಲಿ  ಹಾಡುವ ಈ ಹಾಡು ಆಕಾಶವಾಣಿಯಲ್ಲೂ ಪದೇ ಪದೇ ಪ್ರಸಾರವಾಗುತ್ತಿದ್ದುದು ಇದಕ್ಕೆ ಇಷ್ಟೊಂದು ಜನಪ್ರಿಯತೆ ಸಿಗಲು ಕಾರಣವಾಗಿರಬಹುದು.  

ನಮ್ಮ ಮನೆಗೆ ಆಗಲೇ ರೇಡಿಯೋ ಬಂದಿದ್ದರೂ ಅದರಲ್ಲಿ ಕೇಳುವ ಮೊದಲೇ ನನಗೆ ಈ ಹಾಡಿನ ಪರಿಚಯವಾದದ್ದು ನಮ್ಮೂರಿನ ಪ್ರಸಿದ್ಧ ಕವಿ ರಾಮಚಂದ್ರಮಾಸ್ಟ್ರ  ಮಕ್ಕಳು ಅದನ್ನು ನಮ್ಮ ಶಾಲೆಯಲ್ಲಿ ಹಾಡಿದಾಗ.  ಏಕಪಾಠಿಗಳಾದ ಅವರು ಇದನ್ನು ಎಲ್ಲಿ ಕೇಳಿ ಕಲಿತುಕೊಂಡಿದ್ದರೋ ಏನೋ. 

ನಾನು ಜಿ.ಕೆ. ವೆಂಕಟೇಶ್ ಅನ್ನುವ ಹೆಸರು ಮೊದಲು ಕೇಳಿದ್ದೂ ಈ ಹಾಡಿನ ಜೊತೆಯಲ್ಲಿಯೇ.  ಆಗ ವಿವಿಧಭಾರತಿ ಹೊರತುಪಡಿಸಿ  ಇತರ ನಿಲಯಗಳಲ್ಲಿ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುವಾಗ ಗಾಯಕರು ಮತ್ತು ಕವಿಯ ಹೆಸರು ಮಾತ್ರ ಹೇಳುತ್ತಿದ್ದರೇ ಹೊರತು ಸಂಗೀತ ನಿರ್ದೇಶಕರ ಹೆಸರು ಹೇಳುತ್ತಿರಲಿಲ್ಲ. ಜಿ.ಕೆ. ವೆಂಕಟೇಶ್ ಎಂದು ಕೇಳಿದಾಗ ಬೆಳ್ತಂಗಡಿ ಬಸ್‌ಸ್ಟೇಂಡಿನಲ್ಲಿ  ಕಾಕಿ  ಚಡ್ಡಿ ಮತ್ತು ಶರ್ಟ್ ಧರಿಸಿ ಶರಬತ್ತು ತುಂಬಿದ ಗ್ಲಾಸುಗಳನ್ನು ತಟ್ಟೆಯಲ್ಲಿಟ್ಟುಕೊಂಡು ಮಾರುತ್ತಿದ್ದ ತೆಳ್ಳಗಿನ ವ್ಯಕ್ತಿಯ ಚಿತ್ರ ನನ್ನ  ಕಣ್ಣ ಮುಂದೆ ಬರುತ್ತಿದ್ದುದು! ಬೇಸಗೆ ರಜೆಯಲ್ಲಿ  ತಾಯಿಯೊಂದಿಗೆ ಅಜ್ಜಿಮನೆಗೆ ಹೋಗುವಾಗ  ಬೆಳ್ತಂಗಡಿಯಲ್ಲಿ ಹನುಮಾನ್ ಬಸ್ಸಿಗೆ ಕಾಯುವ ಸಮಯದಲ್ಲಿ ಈ ಹಾಡಿನ ಗುಂಗು ನನ್ನ ಮನಸ್ಸನ್ನು ಆವರಿಸಿದ್ದಾಗ ಆ ವ್ಯಕ್ತಿಯನ್ನು ಕಂಡದ್ದು ಇದಕ್ಕೆ ಕಾರಣವಾಗಿರಬಹುದು.

ನಾನು ಬಾಲ್ಯದಿಂದಲೂ ನೋಡಲು ಹಾತೊರೆಯುತ್ತಿದ್ದ, ಆದರೆ ನೋಡಲು ಅವಕಾಶ ಸಿಗದಿದ್ದ  ಚಿತ್ರ  ಕಣ್ತೆರೆದು ನೋಡು.  ಅನೇಕ ದಶಕಗಳ ನಂತರ TVಯಲ್ಲಿ ಕನ್ನಡ ಪ್ರಸಾರ ರಾಜ್ಯವ್ಯಾಪಿಯಾಗಿ  ವಾರಕ್ಕೊಂದು ಕನ್ನಡ ಚಿತ್ರ ಪ್ರಸಾರವಾಗತೊಡಗಿ ಈ ಚಿತ್ರದ ಸರದಿ ಬಂದಾಗಲಷ್ಟೇ ನನ್ನ ಕನಸು ಕೈಗೂಡಿದ್ದು. 

ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಹಾಡು ಅಘೋಷಿತ ನಾಡಗೀತೆ ಎನಿಸಿದರೂ  ಅದರ  ಉಳಿದೆಲ್ಲ ಹಾಡುಗಳೂ ಜನಪ್ರಿಯವೇ. ಭಕ್ತ ಕನಕದಾಸದ ನಂತರ ರಾಜಕುಮಾರ್ ಅವರ  ಎಲ್ಲ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿದ ಮೊದಲ  ಸಾಮಾಜಿಕ ಚಿತ್ರ  ಇದು.  ಕನ್ನಡದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಪಿ.ಬಿ.ಎಸ್ ಅವರಿಗೆ ಈ  ಚಿತ್ರ ಸಹಾಯ ಮಾಡಿತು.

ಅರುಣಾಚಲಮ್ ಸ್ಟುಡಿಯೋಸ್‌ನ  ಎ.ಕೆ. ವೇಲನ್ ನಿರ್ಮಿಸಿದ  ಈ ಚಿತ್ರದ ಪಾರಿಭಾಷಿಕ ವರ್ಗದ ವಿವರಗಳು ಹೀಗಿವೆ.
ಚಿತ್ರ ನಾಟಕ, ಸಂಭಾಷಣೆ : ಜಿ.ವಿ. ಅಯ್ಯರ್.
ಸಂಗೀತ : ಜಿ’ಕೆ. ವೆಂಕಟೇಶ್.
ಗೀತೆಗಳು : ಪುರಂದರದಾಸರು, ಜಿ.ವಿ. ಅಯ್ಯರ್.
ಹಿನ್ನೆಲೆ ಗಾಯಕರು : ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಲ್.ಆರ್. ಈಶ್ವರಿ, ಬೆಂಗಳೂರು ಲತಾ.
ಛಾಯಾಗ್ರಹಣ : ಬಿ.ದೊರೈರಾಜ್.
ನಿರ್ದೇಶನ :  ಟಿ.ವಿ. ಸಿಂಗ್ ಠಾಕೂರ್.
ತಾರಾಗಣ: ರಾಜಕುಮಾರ್, ಎಂ. ಲೀಲಾವತಿ, ಬಾಲಕೃಷ್ಣ, ನರಸಿಂಹರಾಜು, ರಾಜಶ್ರೀ, ಜಿ.ವಿ. ಅಯ್ಯರ್, ರಮಾದೇವಿ, ಗಣಪತಿ ಭಟ್ ಮತ್ತಿತರರು.

ಬೌದ್ಧಿಕ ಆಸ್ತಿಯ ಒಡೆತನದ ಬಗ್ಗೆ (ಕಾಪಿ ರೈಟ್) ಅನೇಕ ದಶಕಗಳ ಹಿಂದೆ ಬಂದ ಕನ್ನಡ  ಚಿತ್ರ ಎಂಬುದು ಇದರ ಹೆಗ್ಗಳಿಕೆ.  ಆಗ ನಮ್ಮ ಮನೆಗೆ ಬರುತ್ತಿದ್ದ ವಿಕಟವಿನೋದಿನಿ ಎಂಬ ಮಾಸ ಪತ್ರಿಕೆಯಲ್ಲಿ  ಸರಳ ಕತೆ, ಪ್ರತಿಭಾಪೂರ್ಣ ಸಾಹಿತ್ಯ, ಮಧುರ ಸಂಗೀತ ಹಾಸ್ಯದ ಹೊನಲು ಕೂಡಿ ಬಹು ರಮ್ಯವಾಗಿ ಚಿತ್ರಿತವಾದ ಚಿತ್ರ ಎಂದು ಇದನ್ನು ಬಣ್ಣಿಸಲಾಗಿತ್ತು. 

ಈಗ ಒಂದೊಂದೇ ಹಾಡಿನ ವಿವರ ನೋಡುತ್ತಾ, ಚಿತ್ರದ  ಕಥೆ ತಿಳಿಯುತ್ತಾ ಹೋಗೋಣ.

ಶರಣು ಕಾವೇರಿ ತಾಯೆ
ಕಣ್ಣಿನ ಚಿಕಿತ್ಸೆಗಾಗಿ ಪಟ್ಟಣಕ್ಕೆ ಹೊರಟ ಚಿತ್ರದ ದೃಷ್ಟಿಹೀನ ನಾಯಕ  ಗೋಪು (ರಾಜಕುಮಾರ್) ದೋಣಿಯಲ್ಲಿ  ಕಾವೇರಿ ನದಿ ದಾಟುವಾಗಿನ ಪಿ.ಬಿ.ಎಸ್ ಹಾಡು ಇದು. ಹಾಡು ಮುಗಿಯುತ್ತಲೇ ದೋಣಿ ಸುಳಿಗೆ ಸಿಕ್ಕು ಗೋಪುವಿನ ತಂದೆ  ಮತ್ತು ತಂಗಿ ಇಂದು ದಿಕ್ಕಾಪಾಲಾಗುತ್ತಾರೆ. ಗೋಪು ಒಬ್ಬನೇ ಹೇಗೋ ದಡ ಸೇರುತ್ತಾನೆ.   

ಅಂತರ್ಜಾಲದಲ್ಲಿ  ಕಣ್ತೆರೆದು ನೋಡು ಸಿನಿಮಾ ಲಭ್ಯವಿದ್ದರೂ ಈ ಹಾಡಿನ ಭಾಗ ರಸಭಂಗವಾಗುವಷ್ಟು ಕ್ಷತಿಗ್ರಸ್ತವಾಗಿದೆ. ಆದರೆ  ಇಲ್ಲಿ ನಿಮಗೆ  ಪೂರ್ತಿಯಾಗಿ ಕೇಳಲು ಸಿಗುತ್ತದೆ. ಇದರಲ್ಲಿ ಕೋರಸ್ ಸ್ವರಗಳು ಹಾಡುವ ತೆರೆ ತೆರೆ ತೆರೆ ತೇಲಿ ಬರೆ, ಸರ ಸರ ಸರವಾಗಿ ನೊರೆ ರೀತಿಯ ಸಾಲುಗಳನ್ನು ಬಂಗಾರದ ಮನುಷ್ಯದ ಆಹಾ ಮೈಸೂರು ಮಲ್ಲಿಗೆಯಲ್ಲೂ ಬಳಸಲಾಗಿದೆ.  ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ ದೀಪಗಳು ಆರಿ ತೆರೆಯ ಮೇಲೆ ಜಾಹೀರಾತುಗಳು ಬೀಳಲು ಆರಂಭವಾಗುವಾಗ ಈ ಹಾಡು ಹಾಕುತ್ತಿದ್ದರು. 

ಈ ಹಾಡಿನ ಆರ್ಕೆಸ್ಟ್ರೇಷನ್ ಅತಿ ಸುಂದರವಾಗಿದ್ದು, ಡೋಲು, ಢೋಲಕ್,  ಚೈನೀಸ್ ಟೆಂಪಲ್ ಬ್ಲಾಕ್, ಕೊಳಲು, ಗಿಟಾರ್, ಮ್ಯಾಂಡೊಲಿನ್, ವಯಲಿನ್ಸ್ ಇತ್ಯಾದಿ ವಾದ್ಯಗಳ ಹಾಗೂ ಕೋರಸ್ ಧ್ವನಿಗಳ ಸುಂದರ ಸಂಗಮವಿದೆ.

ಶರಣು ಕಾವೇರಿ ತಾಯೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ
ತುಂತುರು ತುಂತುರು ನೀರಹನಿ
ಕಲ ಕಲ ಮಾಡೆ ದನಿ

ಪುರದ ಪುಣ್ಯವತಿ ..........
ಪುರದ ಪುಣ್ಯವತಿ ಗಂಗೆ ತಾಯೆ
ಕರೆದು ಕಣ್ತೆರೆದು ನೋಡೆಲೆ ನೀಯೆ
ಓ ----
ಕರೆದು ಕಣ್ತೆರೆದು ನೋಡೆಲೆ ನೀಯೆ
ಕುರುಡು ಬಾಳಿನ ಸಾಗರಕೊಂದೆ
ಹರಿಯ ನಾಮ ಹರಿಗೋಲೆಂಬೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ

ಒಹೊ ಹೊ ...............
ಅಲೆಯ ಒಂದರಲಿ........
ಅಲೆಯ ಒಂದರಲಿ ಆಸೆಯು ಆರು
ಬಲೆಯ ತಾ ಬೀಸೆ ಬೀಳದೆ ಜಾರು
ಓ...........
ಬಲೆಯ ತಾ ಬೀಸೆ ಬೀಳದೆ ಜಾರು
ಮದವು ಮೋಹ ತುಂಬಿದ ಮೇಲೆ
ಬದುಕು ಬಾಳೆ ಬರಿ ಸಂಕೋಲೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ



ಕಲ್ಲು ಸಕ್ಕರೆ ಕೊಳ್ಳಿರೊ
ದೋಣಿ ಮಗುಚಿ ಮುಳುಗಿ ಹೋದರೂ ಹೇಗೋ ಬದುಕಿದ ಗೋಪು  ದಾಸಣ್ಣನೆಂಬ(ಬಾಲಕೃಷ್ಣ) ದಗಲ್ಬಾಜಿ ವ್ಯಕ್ತಿಯ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಗೋಪು ಒಳ್ಳೆಯ ಹಾಡುಗಾರನೆಂದು ಅರಿತ ಆತ ಇದರಿಂದ ಹಣ ಸಂಪಾದಿಸಬಹುದೆಂದು ಎಣಿಸಿ ಈ ದೇವರ ನಾಮ ಹಾಡಿಸುತ್ತಾನೆ.

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೊ
ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀ ಕೃಷ್ಣ ನಾಮವೆಂಬ
ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳ್ ತುಂಬುವುದಲ್ಲ
ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ತರುವಂಥ
ಕಲ್ಲು ಸಕ್ಕರೆ ಕೊಳ್ಳಿರೊ 
ಸಂತೆ ಕಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತೆಯೊಳಗೆ ಇದು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತ ಪುರಂದರ ವಿಠ್ಠಲ ನಾಮವೆಂಬ
ಕಲ್ಲು ಸಕ್ಕರೆ ಕೊಳ್ಳಿರೊ 


ಹಗಲೂ ಇರುಳು, ಸಿಗದಣ್ಣಾ ಇದು ನಾಳೆಗೆ ಸಿಗದು, ನಿನಗಿದು ನ್ಯಾಯವೇ



ದಾಸರ ಪದದಿಂದ ಸಾಕಷ್ಟು ದುಡ್ಡು ಸಂಗ್ರಹ ಆಗದಿದ್ದುದರಿಂದ  ದಾಸಣ್ಣನ ಕೋರಿಕೆಯಂತೆ ಗೋಪು ಹಾರ್ಮೋನಿಯಮ್ ನುಡಿಸುತ್ತಾ ತಾನೇ ರಚಿಸಿದ ಈ ಹಾಡುಗಳನ್ನು ಹಾಡುತ್ತಾನೆ.  ಮೆಚ್ಚಿದ ಜನರು ಕೊಟ್ಟ ಚಿಲ್ಲರೆ ಕಾಸನ್ನೆಲ್ಲ ದಾಸಣ್ಣ ಲಪಟಾಯಿಸುತ್ತಾನೆ. 

ಪಿ.ಬಿ.ಎಸ್ ಅವರ ಧ್ವನಿಯಲ್ಲಿರುವ ಆರ್ದ್ರತೆ ಈ ಕಿರು ಅವಧಿಯ ಹಾಡುಗಳನ್ನು ನೇರವಾಗಿ ಹೃದಯಕ್ಕಿಳಿಯುವಂತೆ ಮಾಡುತ್ತದೆ. ಬೀದಿ ಬದಿ ಹಾಡುಗಾರನನ್ನು ಪ್ರತಿನಿಧಿಸುವ ಹಾರ್ಮೋನಿಯಮ್ ಮತ್ತು ಢೋಲಕ್ ಸಂಗಮವಂತೂ ಹೃದಯಂಗಮ.  ಹಾಡುಗಳ  ನಡುವೆ ಬರುವ ಸಂಭಾಷಣೆಯ ತುಣುಕುಗಳಲ್ಲಿ ಒಂದು ಕಡೆ ರಫಿಯ ಉಲ್ಲೇಖ ಇರುವುದನ್ನು ಗಮನಿಸಿ. ನಿನಗಿದು ನ್ಯಾಯವೇ ಭಾಗದ ಆರಂಭದ ಆಲಾಪ ನಮ್ಮನ್ನು ಯಾವುದೋ ಲೋಕಕ್ಕೆ ಒಯ್ಯುತ್ತದೆ.  ಸಾಕ್ಷಾತ್ಕಾರ ಚಿತ್ರದ ಜನುಮ ಜನುಮದ ಅನುಬಂಧ ಹಾಡಿನ ಆರಂಭವೂ ಸುಮಾರಾಗಿ ಹೀಗೆಯೇ ಇದೆ.

ಹಗಲು ಇರುಳು ಕೊರಗೆ ಬರಿದೆ
ನಗುತಲಿ ನಲಿವ ದಿನವೇ ಇರದೆ

ಕರುಣೆಯ ನಗದ ಹೊಸ ವ್ಯಾಪಾರ
ಧಾರಣೆ ಮಾಡುವ ನೆಂಟರು ದೂರ
ಮಾಡಿದ ಪಾಪ ಭೋಗಿಸಲಾರೆ
ಎಂದರೆ ಕೇಳುವ ದೇವರು ಯಾರಾ
ಹಗಲು ಇರುಳು ಕೊರಗೆ 

ದಾಸಣ್ಣ: ಗೋಪು, ಇವತ್ತು ಯಾಕೋ ದೇವ್ರು ವರ ಕೊಡ್ಳಿಲ್ಲ ಕಣಯ್ಯ.  ನಾಳೆಯಿಂದ  ಈ ಪ್ರಾರ್ಥನೆ ರೀತಿನೇ ಬದ್ಲಾಯಿಸಿ ಬಿಡ್ಬೇಕು. ದಾಸರ ಪದಕ್ಕೆ ಸಲಾಮ್ ಹೊಡ್ದು ನಿನ್ನ ಸ್ವಂತದ್ದು ಯಾವ್ದಾದ್ರೂ ಲೈಟ್ ಸಾಂಗ್ ಹಾಡಯ್ಯಾ ನಾಳೆಯಿಂದ. 

ಸಿಗದಣ್ಣ ಇದು ನಾಳೆಗೆ ಸಿಗದು
ಸೊಗಸಿನ ನೋಟದ ಸಿರಿಯಣ್ಣ

ಧನಿಕನ ಸಾವಿರ ದಾನದ ಮೇಲೆ
ಬಡವನ ಒಡವೆ ಇದೆಯಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು

ಕುರುಡನ ಕಣ್ಣಿಗೆ ಕಾಣುವುದಣ್ಣ
ಮುರಹರ ನಿನ್ನಯ ನಿಜ ಬಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು

ದಾಸಣ್ಣ: ಅಪ್ಪಾ, ಗೋಪೂ, ನಿನ್ನ ಹಾಡೇ ಇಷ್ಟು ರಂಗು ಕಟ್ಟಿದೆ ಅಂದ ಮೇಲೆ ಆ ರಫಿ ಹಾಡುವಂಥಾದ್ದು ಒಂದನ್ನು ಎತ್ತಿ ನೋಡು. ದೇವ್ರು ತಬ್ಬಿಬ್ಬಾಗಿ ಬಗ್ಗಿಸಿ ಬಿಡ್ತಾನೆ ಭಂಡಾರಾನ. ಬಾ, ನಾಳೆ ಇನ್ನೊಂದು ಗುಡಿ ಇನ್ನೊಂದು ದೇವ್ರು. ನೋಡೋಣ.

ನಿನಗಿದು ನ್ಯಾಯವೇ ಮೋಸ
ದಾನಿಯಾಗಿ ಈ ವಂಚನೆ ವೇಷ
ನಿನಗಿದು ನ್ಯಾಯವೇ

ಮಾನಹೀನರ ಸಂಗವು ಸಾಕು
ಜ್ಞಾನ ಸಾಧನೆಯು ಎನಗಿರಬೇಕು
ದೀನಪಾಲಕ ನೀನಿರುವನಕ
ನಿನ್ನ ಸೇವೆಯ ನೀಡೋ ಸಾಕು

ಹಗಲೂ ಇರುಳೂ


ಸಿಗದಣ್ಣಾ, ನಿನಗಿದು ನ್ಯಾಯವೇ


ಬಂಗಾರದೊಡವೆ ಬೇಕೇ
ತನ್ನ ಹಾಡುಗಳಿಂದ ದೊರಕಿದ ಹಣವನ್ನು ದಾಸಣ್ಣ ಲಪಟಾಯಿಸಿದ್ದನ್ನು ತಿಳಿದು ಬೇಸರಗೊಂಡ ಗೋಫು ಆತನ ಸಹವಾಸ ತೊರೆಯುತ್ತಾನೆ . ಒಂದು ದಿನ ನದಿ ತೀರದಲ್ಲಿ ಕುಳಿತು ನದಿಯನ್ನು ಸ್ತ್ರೀಗೆ ಹೋಲಿಸಿ ಈ ಹಾಡು ಹಾಡುತ್ತಾನೆ.  ಅಲ್ಲಿ ಜಲಕ್ರೀಡೆಯಾಡುತ್ತಿದ್ದ ನಾಯಕಿ ಕಮಲ (ಲೀಲಾವತಿ) ಇದು ತನ್ನನ್ನು ಕುರಿತು ಹಾಡಿದ್ದೆಂದು ಭಾವಿಸಿ ಗೋಪುವಿನ ಕೆನ್ನೆಗೆ  ಬಾರಿಸುತ್ತಾಳೆ.  ಆ ಮೇಲೆ  ಗೋಪುವಿನ ಪ್ರೇಮಪಾಶಕ್ಕೆ ಸಿಲುಕಿ ಅವಳೇ ಬೆಂಗಳೂರು ಲತಾ ಧ್ವನಿಯಲ್ಲಿ  ಈ ಹಾಡು ಹಾಡುವ ಪ್ರಸಂಗವೂ ಬರುತ್ತದೆ.  

ಬಂಗಾರದೊಡವೆ ಬೇಕೆ ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ನಿಲ್ಲದೆ ನೀನೋಡಲೇಕೆ ನೀರೆ
ಕಣ್ಮನ ತಣಿಸುವ ಅಮೃತದ ಧಾರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ಸಂಜೆಯ ಹೊಂಬಿಸಿಲು ಸೂರ್ಯನ ಕೆಂಪೊಡಲು
ಅಂಗ ಸಂಗವ ಬಯಸಿ ನಿನ್ನ ಬಿಗಿದು ಅಪ್ಪಿರಲು
ಎಂಥ ರಮ್ಯದ ನೋಟ ನೋಡೆ
ನಿನ್ನಯ ಒಡಲು ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ಭಾಗ  2

ನೀರಡಿಕೆ ನಿನಗೆಂದು ನೀರೆ ನೀರನು ನೀಡೆ
ನೀನಿಂತು ನೋಡಲೇಕೆ ನೀರಾ
ಇನ್ನೇಕೆ ಬಾಯಾರಿಕೆ

ನೀರಡಿಕೆ ನೀರಿನದೆ ನೀನರಿಯೆಯಾ ಮುಗುದೆ
ಕಾರುಣ್ಯ ತೋರೆಯೇಕೆ ನೀರೇ
ಎನ್ನಾಸೆ ಈಡೇರದೇ
ಸೋತಿರುವ ಜೀವನಕೆ ಸಂಜೀವಿನಿಯಾಗೆ
ಅಮೃತವಾಹಿನಿ ಗಂಗೆ ಶರಣು ನಿನಗೆ
ಅಂಗನೆ ನಿನ್ನಂಗ ಸಿಂಗಾರಕೊಫ್ಫುವ 
ಬಂಗಾರದೊಡವೆ ಬೇಕೆ




ಹೆಣ್ಣಿನ ಮೇಲೆ ಕಣ್ಣಿಡುವಾಗ
ಅದೃಷ್ಟವಶಾತ್ ತಾನು ಹುಡುಕಿಕೊಂಡು ಬಂದಿದ್ದ ಕಣ್ಣಿನ  ಡಾಕ್ಟರ್ ಅಮೃತರಾಯರ (ಜಿ.ವಿ. ಅಯ್ಯರ್) ಭೇಟಿ  ಗೋಪುವಿಗೆ ಆಗುತ್ತದೆ.  ಅವರು ಆತನನ್ನು ತನ್ನ ಮನೆಯಲ್ಲಿರಿಸಿಕೊಂಡು ಚಿಕಿತ್ಸೆ ಪ್ರಾರಂಭಿಸುತ್ತಾರೆ. ಗೋಪುವಿನ ಹಾಡು ಕೇಳಿ ಕೆನ್ನೆಗೆ ಹೊಡೆದಿದ್ದ ಕಮಲಾ ಅಮೃತರಾಯರ ಪುತ್ರಿಯೇ  ಆಗಿರುತ್ತಾಳೆ.  ಅಮೃತರಾಯರ ಚಿಕಿತ್ಸೆಯಿಂದ ದೃಷ್ಟಿ ಮರಳಿ ಪಡೆದ ಗೋಪು ಮತ್ತು ಕಮಲಾ ಮಧ್ಯೆ ಪ್ರೇಮಾಂಕುರವಾಗಿ ಪಿ.ಬಿ.ಎಸ್ ಮತ್ತು ಎಸ್. ಜಾನಕಿ ಧ್ವನಿಯಲ್ಲಿ  ಈ ಹಾಡು ಹಾಡುತ್ತಾರೆ.  ಸಾರಂಗಿಯ ಸುಂದರ ಬಳಕೆ ಈ ಹಾಡಲ್ಲಿದೆ. ಹೊಸದಾಗಿ ಪ್ರೇಮಿಸತೊಡಗುವ ಗಂಡು ಹೆಣ್ಣುಗಳಿಗೆ ಒಂದು ರೀತಿಯ ನೀತಿಪಾಠವೂ ಇದರಲ್ಲಿದೆ.

ಈ ಹಾಡು ಮತ್ತು ಕರುಣೆಯೇ ಕುಟುಂಬದ ಕಣ್ಣು ಚಿತ್ರದ ನಿಜವೋ ಸುಳ್ಳೋ ನಿರ್ಧರಿಸಿ ಒಂದಕ್ಕೊಂದು ಸಂವಾದಿ ಎಂದೂ, ಇದು ಸ್ವಲ್ಪ ಮೇಲ್ದರ್ಜೆಗೆ ಸೇರಿದ್ದ್ದು ಅನ್ನುವ  ವಿಚಿತ್ರ ಭಾವನೆ ನನ್ನಲ್ಲಿತ್ತು!  ನಿಜವೋ ಸುಳ್ಳೋ ರೇಡಿಯೋದಲ್ಲಿ ಆಗಾಗ ಮತ್ತು ಈ ಹಾಡು  ಅಪರೂಪಕ್ಕೆ ಎಂದಾದರೊಮ್ಮೆ ಕೇಳಲು ಸಿಗುತ್ತಿದ್ದುದು ಇದಕ್ಕೆ ಕಾರಣವೋ ಏನೋ.  ಈ ಹಾಡಿನಲ್ಲಿ ನಾಟಕದಂತೆ ಜೀವನವಲ್ಲ ಎಂಬ ಸಾಲು ಇರುವುದರಿಂದ ಇದು ನಾಟಕ ರಂಗದ ಹಿನ್ನೆಲೆಯ ಕಥೆ ಇರುವ ಸಿನಿಮಾ ಆಗಿರಬಹುದೆಂದೂ ನನಗನ್ನಿಸಿತ್ತು.

ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಇದರ ತುಣುಕನ್ನು ಬಳಸಲಾಗಿದೆ.

ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬ ಬೇಕು
ಕಣ್ಣಲ್ಲಿ ಕಣ್ಣಿರಬೇಕು ಛಲ ಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು

ನಾಟಕದಂತೆ ಜೀವನವಲ್ಲ ಇದೇ ಬೇರೆ ಆಟ
ಜೀವಂತ ಭಾವದ ಎಲ್ಲ ಜಂಜಾಟ
ಕಣ್ಣೀರ ಕಾಲುವೆಯಲ್ಲೇ ಈಜಾಟ

ಕಣ್ಣೀರ ಹಿಂದೆ ಕೈವಾಡವೇನು
ನಾವ್ಯಾರೂ ಕಾಣದಂಥ ನೋವೇನು
ಯಾರೋ ವಿರೋಧಿ ಇಂದು
ವಿಷ ಹಿಂಡಿ ಹೋದನೇನು
ಹೊನ್ನಾದ ನಮ್ಮೀ ಆಸೆ ಮಣ್ಣೇನು
ಹೆಣ್ಣಾಸೆ ಏನದು ಎಂದು ತಿಳಿಬೇಕು

ಹೂವೊಂದೇ ಬೇರೆ ನಾರೊಂದೇ ಬೇರೆ
ಹೂಮಾಲೆ ಆಗದಂತೆ ಕೈಯಾರೆ
ಏನೋ ವಿನೋದ ನೋಡೆ 
ವಿಧಿ ನಿಂತು ಮಣ್ಣು ತೂರೆ್
ಕಣ್ಣೀರ ನೀತಿ ನೋಡು ಕೈಯಾರೆ




ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ



ದೃಷ್ಟಿ ಬಂದ ಮೇಲೆ  ಗೋಪುವನ್ನು ಅಮೃತರಾಯರು ತನ್ನ ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಆದರೆ ಕಮಲಳ ಮದುವೆ ಅಮೃತರಾಯರ ತಂಗಿ ಮಗ ಮಧುವಿನೊಂದಿಗೆ (ನರಸಿಂಹರಾಜು) ಮೊದಲೇ ನಿಶ್ಚಯವಾಗಿರುವುದನ್ನು ತಿಳಿದು ಮನ ನೊಂದ ಗೋಪು ಅವರ ಮನೆಯಿಂದ ಹೊರಬೀಳುತ್ತಾನೆ. ಹೋಟೆಲೊಂದರಲ್ಲಿ ತಂಗಿ ಕವನಗಳನ್ನು ರಚಿಸಿ ಅವುಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತಾನೆ.  ಆದರೆ ಯಾರೂ ಆತನನ್ನು ಪ್ರೋತ್ಸಾಹಿಸುವುದಿಲ್ಲ. ಹೀಗಿರುವಾಗ  ಆತನ  ಕವಿತೆಗಳಿದ್ದ ಕಾಗದದ ಕಟ್ಟು ಕಳೆದು ಹೋಗಿ ದಾಸಣ್ಣನ ಕೈ ಸೇರುತ್ತದೆ.  ಆತ ತನ್ನ ಹೆಸರಿನಲ್ಲಿ ಅವುಗಳನ್ನು ಪ್ರಕಟಿಸಿ ದೊಡ್ಡ ಕವಿ ಎನಿಸಿಕೊಳ್ಳುತ್ತಾನೆ.  ಹತಾಶನಾದ ಗೋಪು ಅಂಡಲೆಯುತ್ತಿದ್ದಾಗ ತಾನು ಬರೆದ ಹಾಡು ದಾಸಣ್ಣನ  ಹೆಸರಿನೊಂದಿಗೆ ರೇಡಿಯೊ ಮೂಲಕ ಪ್ರಸಾರವಾಗುವುದನ್ನು ಕೇಳಿಸಿಕೊಳ್ಳುತ್ತಾನೆ.  ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದ ಸಾರ್ವಜನಿಕ  ರೇಡಿಯೊ ಪೆವಿಲಿಯನ್ ಮತ್ತು ಜಿ. ಕೆ. ವೆಂಕಟೇಶ್ ಅವರು ಆಕಾಶವಾಣಿ ಸ್ಟುಡಿಯೊದಲ್ಲಿ ಆರ್ಕೆಷ್ಟ್ರಾದೊಂದಿಗೆ ಹಾಡುವ ದೃಶ್ಯ ಈ ಹಾಡಿನ ಸಂದರ್ಭದಲ್ಲಿ ನೋಡಲು ಸಿಗುತ್ತವೆ. ಆರಂಭದಲ್ಲಿ ಟೈಟಲ್ಸ್ ಹಿನ್ನೆಲೆಯಾಗಿಯೂ  ಈ ಹಾಡನ್ನು ಬಳಸಲಾಗಿದೆ.

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಭೇದಗಳ ಬಿಟ್ಟು ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತ ವೈಭವ ಕಾಣುವ
ನವಶಕ್ತಿಯ ತುಂಬುವ 
ಭುವನೇಶ್ವರಿ ನೀಡುವ
ಸಂದೇಶವ ಸಾರುವ


 

ಎಡವಿದರೆ ನಾಕುರುಳು
ಕೆಲವು ಸಜ್ಜನರಿಗೆ ದಾಸಣ್ಣನ ಮೋಸದ ಬಗ್ಗೆ ತಿಳಿಯುತ್ತದೆ. ಅವರ ಪ್ರಯತ್ನದಿಂದ  ಆತನ ಬಂಡವಾಳ ಬಯಲು ಮಾಡುವ ಸಲುವಾಗಿ ಹೂಡಿದ ತಂತ್ರದ ಭಾಗ ಈ ಹಾಡು. ಎಲ್.ಆರ್. ಈಶ್ವರಿ ಮತ್ತು  ಎಸ್. ಜಾನಕಿ ಧ್ವನಿಗಳಲ್ಲಿದೆ. ಸಾರಂಗಿ, ಮ್ಯಾಂಡೊಲಿನ್ ಮತ್ತು  ಮಹಾರಾಷ್ಟ್ರದ ಢೋಲಕಿಯ ಅದ್ಭುತ  ನುಡಿತ ಇದರಲ್ಲಿದೆ.  ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಈ ಹಾಡಿನ ತುಣುಕೂ ಇದೆ.

ಎಡವಿದರೆ ನಾಕುರುಳು ನುಡಿ ಜಾರೆ ನೂರುರುಳು
ನಡೆ ಜಾರೆ ಹೆಣ್ಣಿನ ಕೊರಳಿಗೆ ಉರುಳು

ಕಂಕಣ ಕಾಲುಂಗುರ ಸಿಂಗಾರದ ಗೋಪುರ
ಸುಂದರಿಯಳ ವೈಯಾರ ಗಂಡಿಗೇಕೆ ಬೇಸರ

ಎಡವಿದರೆ ನಾಕುರುಳು ನುಡಿ ಜಾರೆ ನೂರುರುಳು
ನಡೆ ಜಾರೆ ಗಂಡಿಗೆ ನರಕವೇ ನೆರಳು
ಎಡವಿದರೆ ನಾಕುರುಳು 

ಜಾಣೆಯಂತೆ ಮಾತನಾಡಿ ಜಾರಿ ಜಾರಿ ಬೀಳಬೇಡ
ಜಾರಿ ನೀನು ಬಿದ್ದಾಗ ನಗುವೆ ಏಕೆ ಎನಬೇಡ
ಎಡವಿದರೆ ನಾಕುರುಳು 

ನೀತಿ ನೂರು ಪಾಠ ನೂರು ಹೇಳುವವರು ಸಾವಿರಾರು
ಮಾತಲೊಂದು ಗೋಪುರ ಕಟ್ಟಬೇಡ ನೀ ಚತುರ
ಎಡವಿದರೆ ನಾಕುರುಳು 




ಕೊನೆಗೆ ಒಂದಷ್ಟು ಡಿಶುಂ ಡಿಶುಂ ಇತ್ಯಾದಿ ಆಗಿ ದಾಸಣ್ಣ ಸೋಲೊಪ್ಪಿಕೊಳ್ಳುತ್ತಾನೆ. ಗೋಪುವಿಗೆ ನ್ಯಾಯ ಸಿಗುತ್ತದೆ. ಆಗಲೇ ನಿಶ್ಚಯವಾಗಿದ್ದ ಮದುವೆ  ಮಧುವಿಗೆ ಇಷ್ಟವಿಲ್ಲದ್ದರಿಂದ ಕಮಲಳೂ ಸಿಗುತ್ತಾಳೆ. ಕಳೆದು ಹೋಗಿದ್ದ ತಂಗಿ, ತಂದೆ ಎಲ್ಲರೂ ಒಟ್ಟಾಗಿ ಎಲ್ಲವೂ ಸುಖಾಂತ್ಯವಾಗುತ್ತದೆ.

ಎಲ್ಲ ವಿಭಾಗಗಳಲ್ಲೂ  ಉತ್ತಮವೇ ಆದ ಈ ಚಿತ್ರದ ಹೈಲೈಟ್ ಮೋಸಗಾರ ದಾಸಣ್ಣನಾಗಿ  ಬಾಲಕೃಷ್ಣ ಅವರ ನಟನೆ. ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದವರು ಕನ್ನಡ ಮಾತ್ರವಲ್ಲ,  ಯಾವ ಚಿತ್ರರಂಗದಲ್ಲೂ ಇರಲಾರರು.