ನಮ್ಮೂರಲ್ಲಿ ಶಿವರಾತ್ರಿ ಅಂದರೆ ಶಿವಪೂಜೆ ಮತ್ತು ಜಾಗರಣೆ ಮಾತ್ರವಲ್ಲದೆ ಕಲ್ಮಂಜ-ಪರಾರಿ ವಾಳ್ಯಗಳಿಗೆ ನೀರುಣಿಸುತ್ತಿದ್ದ ಮೃತ್ಯುಂಜಯಾ ನದಿಯ ಕಟ್ಟದಲ್ಲಿ ಹೆಚ್ಚಿನ ನೀರು ಹೊರಹೋಗಲು ಬಿಡುತ್ತಿದ್ದ ಕಿಂಡಿಯನ್ನು ಸಂಪೂರ್ಣ ಮುಚ್ಚುತ್ತಿದ್ದ ದಿನವೂ ಆಗಿತ್ತು. ತಲ ತಲಾಂತರಗಳಿಂದ ಊರಿನ ಅಡಿಕೆ ತೋಟಗಳಿಗೆ ನೀರುಣಿಸಿ ಮನೆಗಳ ಬಾವಿಗಳು ತುಂಬಿ ತುಳುಕುವಂತೆ ಮಾಡುತ್ತಿದ್ದ ಈ ಕಟ್ಟವನ್ನು ಕಲ್ಲು, ಸೊಪ್ಪು ಮತ್ತು ಮಣ್ಣು ಉಪಯೋಗಿಸಿ ನಿರ್ಮಿಸಲಾಗುತ್ತಿತ್ತು. 3-4 ಜನ ಸೇರಿ ಎತ್ತಬೇಕಾದ ಬೃಹತ್ ಕಲ್ಲುಗಳನ್ನು ಕೆಲವು ನಿರ್ದಿಷ್ಟ ಸ್ಥಾನಗಳಲ್ಲಿ ಇಡಬೇಕಾಗುತ್ತಿತ್ತು. ಇವುಗಳ ಬಗ್ಗೆ ಮಾಹಿತಿ ಮತ್ತು ಎತ್ತಲು ಶಕ್ತಿ ಇದ್ದ ಆಳುಗಳೂ ಇದ್ದರು. ಕಟ್ಟ ಒಂದೇ ಆದರೂ ಇದರಲ್ಲಿ ಇಂಗ್ಲಿಷ್ L ಆಕಾರದ ಎರಡು ಭಾಗಗಳು. ಒಂದು ಆನಂಗಳ್ಳಿ ವಾಳ್ಯದ್ದಾದರೆ ಇನ್ನೊಂದು ಪರಾರಿಯದ್ದು. ಎರಡೂ ಕೈಗಳು ಸೇರಿದರೆ ಮಾತ್ರ ಚಪ್ಪಾಳೆ ಆಗುವಂತೆ ಎರಡೂ ಭಾಗಗಳು ಸೇರಿದರೆ ಮಾತ್ರ ಕಟ್ಟ ಸಂಪೂರ್ಣ. ಎರಡೂ ವಾಳ್ಯಗಳಿಂದ ಒಬ್ಬೊಬ್ಬ ಉತ್ಸಾಹಿ ಮುಂದೆ ಬಂದು ಕಟ್ಟ ಕಟ್ಟಿಸುವ ಕೆಲಸದ ಜವಾಬ್ದಾರಿ ವಹಿಸಿಕೊಳ್ಳುವುದು ಸಂಪ್ರದಾಯ. ಖರ್ಚಿನಲ್ಲಿ ಎಲ್ಲರಿಗೂ ಸಮ ಪಾಲು. ಸಾಮಾನ್ಯವಾಗಿ ದಿಸೆಂಬರ್ ತಿಂಗಳ ಕೊನೆಯೊಳಗೆ ಕಾಮಗಾರಿ ಮುಗಿದು ಮಧ್ಯದಲ್ಲಿ ಬಿಟ್ಟಿರುತ್ತಿದ್ದ ಕಿಂಡಿಗೆ(ಇದನ್ನು ಮಾದು ಅನ್ನುತ್ತಾರೆ) ಮಡಲುಗಳನ್ನು ಹಾಕಿ ಕಾಲುವೆಯಲ್ಲಿ ನೀರು ಹರಿಯತೊಡಗುತ್ತಿತ್ತು. ನೀರು ತಿರುಗಿಸುವ ದಿನ ಊರವರೆಲ್ಲರ ಸಮಕ್ಷಮದಲ್ಲಿ ನದಿಯ ಪೂಜೆ ಮಾಡುವ ವಿಶೇಷ ಗೌರವ ನಮ್ಮ ಮನೆತನಕ್ಕೆ. ಪೂಜೆ ಮುಗಿದೊಡನೆ ಬೇಗ ಮನೆಗೆ ಬಂದು "ಹಾವು ಹುಪ್ಪಟೆಗಳಿದ್ದಾವು, ಎಚ್ಚರ" ಎಂದು ಮನೆಯವರು ಬೈದರೂ ಕಾಲುವೆಯಲ್ಲಿ ಹರಿದು ಬರುವ ಮೊದಲ ನೀರಿನ ಸ್ಪರ್ಶಕ್ಕಾಗಿ ಕಾಯುವುದೆಂದರೆ ಅದೊಂದು ಥ್ರಿಲ್. ರಾತ್ರಿ ಊಟ ಮುಗಿಸಿ ಕೈ ತೊಳೆಯಲು ಹೊರಗಡೆ ಬಂದಾಗ ಕೇಳಿಸುವ ಕಾಲುವೆಯ ನೀರಿನ ಜುಳು ಜುಳು ಬಲು ಆಪ್ಯಾಯಮಾನ. ಈ ಜುಳು ಜುಳು ಸದ್ದು ಕೇಳತೊಡಗಿದರೆ ಚಳಿ ಜಾಸ್ತಿ ಎಂಬ ಭಾವನೆಯೂ ಇತ್ತು. ಕಾಲುವೆಗೆ ನೀರು ಬಂದ ಮೇಲೆ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸಗಳೆಲ್ಲ ಅದರ ಬದಿಯಲ್ಲೇ. ಮೇಲಿನಿಂದ ಹಕ್ಕಿಗಳು ಗಲೀಜು ಮಾಡದಂತೆ ಕಾಲುವೆಯ ಬದಿ ಮಡಲಿನ ಕಿರು ಚಪ್ಪರವನ್ನೂ ನಿರ್ಮಿಸಲಾಗುತ್ತಿತ್ತು. ಕಿರಿಯರ ಸ್ನಾನವೂ ಬಹುತೇಕ ಅಲ್ಲೇ. ಹಿರಿಯರ ಕಣ್ಣು ತಪ್ಪಿಸಿ ಸಂಕದ ಮೇಲಿನಿಂದ ನೀರಿಗೆ ಜಿಗಿಯುವುದು, ಬಾಳೆ ಗಿಡದ ತೆಪ್ಪ ನಿರ್ಮಿಸಿ ಕಾಲುವೆಯಲ್ಲಿ ಆಡುವುದೂ ಇತ್ತು. ಹೀಗೆ ಆಟ ಆಡುವಾಗ ನಮ್ಮ ಅಣ್ಣನಿಗೊಮ್ಮೆ ನೀರು ಹಾವು ಕಚ್ಚಿದ್ದೂ ಇದೆ! ಯಾವಾಗಲೂ ಸ್ಫಟಿಕ ಶುಭ್ರವಾಗಿರುತ್ತಿದ್ದ ಕಾಲುವೆಯ ನೀರು ಮಧ್ಯಾಹ್ನ 12ರ ನಂತರ ಮಾತ್ರ
ಕೊಂಚ ರಾಡಿ - ಕಾರಣ ಹೆಚ್ಚಿನ ಮನೆಯವರು ತಮ್ಮ ಎಮ್ಮೆಗಳನ್ನು ನೀರಲ್ಲಿ ಕಟ್ಟುವ ಸಮಯ
ಇದಾಗಿತ್ತು. ಅವರವರ ಸರದಿಯಂತೆ ಕಾಲುವೆಗೆ ತಡೆ ಕಟ್ಟಿ ತಮ್ಮ ತಮ್ಮ ತೋಟಗಳಿಗೆ ನೀರು ಹಾಯಿಸುವಲ್ಲಿ ಎಲ್ಲರೂ ಬಲು ಪ್ರಾಮಾಣಿಕರು. ನಮಗಿಂತ ಮೇಲಿನವರ ಸರದಿ ಇದ್ದ ದಿನ ನೀರ ಹರಿವು ಸ್ಥಗಿತವಾಗುವ ಕಾರಣ ಪಾತ್ರೆ, ಬಟ್ಟೆ ತೊಳೆಯಲು ಆಗುವುದಿಲ್ಲವೆಂದು ಮನೆಯ ಮಹಿಳೆಯರಿಗೂ, ನೀರಲ್ಲಿ ಆಡಲು ಆಗುವುದಿಲ್ಲವೆಂದು ಮಕ್ಕಳಿಗೂ ಬೇಸರ. ನಮ್ಮ ಮನೆಯ ಸರದಿ ಯಾವಾಗಲೂ ಮಧ್ಯ ರಾತ್ರಿ. ಆದರೂ ನಮ್ಮ ಅಣ್ಣಂದಿರು ಬೇಸರ ಪಟ್ಟುಕೊಳ್ಳದೆ ಲಾಟೀನು ಹಿಡಿದು ತೋಟಕ್ಕೆ ನೀರು ಹಾಯಿಸುತ್ತಿದ್ದರು.
ಶಿವರಾತ್ರಿ ಸಮಯಕ್ಕೆ ನದಿಯಲ್ಲಿ ನೀರ ಹರಿವು ಕಮ್ಮಿಯಾಗತೊಡಗುವುದರಿಂದ ಕಟ್ಟದ ಕಿಂಡಿಯನ್ನು ಸಂಪೂರ್ಣ ಮುಚ್ಚಲಾಗುತ್ತಿತ್ತು. ಆದರೂ ಅಲ್ಲಲ್ಲಿ ಎಡೆಗಳಿಂದ ತೂರಿ ಬಂದ ನೀರು ಕೆಳಗೆ ಕುಡೆಂಚಿ ವಾಳ್ಯದವರು ಕಟ್ಟುತ್ತಿದ್ದ ಕಟ್ಟದ ದಾಹ ತಣಿಸಲು ಸಾಕಾಗುತ್ತಿತ್ತು. ಮೇ ಅಂತ್ಯಕ್ಕೆ ಒಂದೆರಡು ಮಳೆ ಬಂದು ನದಿಯಲ್ಲಿ ನೀರ ಹರಿವೇನಾದರೂ ಹೆಚ್ಚಾದರೆ ಒಂದು ಕಿರು safety outlet ತೆರೆದು ಕಟ್ಟವನ್ನು ತಾತ್ಕಾಲಿಕವಾಗಿ ರಕ್ಷಿಸುವ ವ್ಯವಸ್ಥೆಯೂ ಇತ್ತು. ಪೂರ್ಣಪ್ರಮಾಣದ ಮಳೆಗಾಲ ಆರಂಭವಾದೊಡನೆ ಕಟ್ಟವು ತಾನಾಗಿ ಕಡಿದು ಉಪಯೋಗಿಸಿದ ಕಲ್ಲುಗಳು ಅಲ್ಲೇ ಬಿದ್ದು ಮರು ವರ್ಷ ಮತ್ತೆ ಉಪಯೋಗಕ್ಕೆ ಬರುತ್ತಿದ್ದರೂ ಸೊಪ್ಪು-ಮಣ್ಣುಗಳು ನೆರೆಯಲ್ಲಿ ಕೊಚ್ಚಿ ಹೋಗುತ್ತಿದ್ದವು. ಪ್ರತೀ ಸಲ ಅಷ್ಟೊಂದು ಮಣ್ಣು ಮತ್ತು ಸೊಪ್ಪು ನಾಶವಾಗುವುದನ್ನು ಕಂಡ ಊರಿನ ಉತ್ಸಾಹಿ ಯುವಕರು ಇತ್ತೀಚಿನ ಕೆಲವು ವರ್ಷಗಳಲ್ಲಿ ಇವುಗಳ ಬದಲಿಗೆ ದಪ್ಪ ಪ್ಲಾಸ್ಟಿಕ್ ಹಾಳೆ ಮತ್ತು ಮರಳಿನ ಚೀಲಗಳ ಉಪಯೋಗ ಆರಂಭಿಸಿ ಪರಿಸರಕ್ಕೆ ಹಾನಿಕರವೆಂದು ಹಣೆಪಟ್ಟಿ ಕಟ್ಟಿಕೊಂಡ ಪ್ಲಾಸ್ಟಿಕ್ ಪರಿಸರವನ್ನು ಉಳಿಸಲೂ ಬಲ್ಲುದು ಎಂದು ತೋರಿಸಿಕೊಟ್ಟಿದ್ದರು.
ಈಗ ಸರ್ಕಾರ ನಿರ್ಮಿಸಿಕೊಟ್ಟ ಕಿರು ಕಾಂಕ್ರೀಟ್ ಜಲಬಂಧದ ನೀರು ಅದೇ ಕಾಲುವೆಯಲ್ಲಿ ಹರಿಯುತ್ತಿದ್ದು ನದಿಯ ಆಚೆ ಬದಿಯಲ್ಲಿರುವ
ಕಡಂಬಳ್ಳಿ ವಾಳ್ಯಕ್ಕೆ ಹೋಗಲು ಸೇತುಬಂಧವಾಗಿಯೂ ಉಪಯೋಗವಾಗುತ್ತಿದ್ದ ಈ ಸಾಂಪ್ರದಾಯಿಕ
ಕಟ್ಟ ಮಾತ್ರ ಈಗ ಇತಿಹಾಸ ಸೇರಿದೆ.
ಆ ಪರಿಸರದ ಕಿರು ವಿಡಿಯೊ ಒಂದು ಇಲ್ಲಿದೆ.
ಇನ್ನೂ ಕೆಲವು ದೃಶ್ಯಾವಳಿಗಳಿಗಾಗಿ
ಇಲ್ಲಿ ಕ್ಲಿಕ್ಕಿಸಿ.