Friday, 24 May 2024

ತಾಯಿಯ ಹಾಡು ಒಂದಲ್ಲ ಎರಡು

       


     ಕನ್ನಡ ಸಿನಿಮಾಗಳಲ್ಲಿ ತಾಯಿಯ ಬಗ್ಗೆ ಅನೇಕ ಹಾಡುಗಳು ಬಂದಿವೆ.  ತಾಯಿ ದೇವರನು ಕಾಣೆ ಹಂಬಲಿಸಿ, ಅಮ್ಮ ಎಂದರೆ ಏನೋ ಹರುಷವುಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ, ಅಮ್ಮ ಅಂದಾಗ ಏನೋ ಸಂತೋಷವು ಮುಂತಾದವು ಆಗಾಗ ಕೇಳಲೂ ಸಿಗುತ್ತವೆ.  ಆದರೆ ನಾನಿಲ್ಲಿ ಕೇಳಿಸಹೊರಟಿರುವ ಕಾಣದ ದೇವರು ಊರಿಗೆ ನೂರು ಹಾಡು ಅಪರೂಪದ್ದು ಹಾಗೂ ಕೊಂಚ ಭಿನ್ನವಾದದ್ದು.  ಪಿ.ಬಿ.ಶ್ರೀನಿವಾಸ್ ಮತ್ತು ಕೆ.ಜೆ.ಜೇಸುದಾಸ್  ಜೊತೆಯಾಗಿ ಹಾಡಿರುವ ಏಕೈಕ ಹಾಡಿದು ಎಂಬುದು ಒಂದು ವಿಶೇಷವಾದರೆ  ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರಾ ಧ್ವನಿಗಳಲ್ಲಿ ಇದರ ಇನ್ನೊಂದು ವರ್ಶನ್ ಇರುವುದು ಇನ್ನೊಂದು ವಿಶೇಷ.  ಪಂಚಮ ವೇದ ಪ್ರೇಮದ ನಾದ, ಬರೆದೆ ನೀನು ನಿನ್ನ ಹೆಸರ, ಇಲ್ಲೂ ಇರುವೆ ಅಲ್ಲೂ ಇರುವೆ, ಆಸೆಯ ಭಾವ ಒಲವಿನ ಜೀವ, ನಿನ್ನ ನೀನು ಮರೆತರೇನು ಸುಖವಿದೆ ಮುಂತಾದವುಗಳಂತೆ ಸೊಲೊ ಹಾಡುಗಳ ಇಂತಹ ವರ್ಶನ್‍ ಇರುವುದು ಸಾಮಾನ್ಯವಾದರೂ ಡ್ಯುಯೆಟ್‍ ಈ ರೀತಿ ಇರುವುದು ಕಮ್ಮಿ.   ಇದೇ ರೀತಿ ಹಿಂದಿಯಲ್ಲಿ ಜಬ್ ಸೆ ಹಮ್ ತುಮ್ ಬಹಾರೊ ಮೆಂ ಎಂಬ ಒಂದು ಡ್ಯುಯೆಟ್ ಬೇರೆ ಬೇರೆಯಾಗಿ ರಫಿ-ಸುಮನ್ ಕಲ್ಯಾಣ್ಪುರ್ ಮತ್ತು ಮುಕೇಶ್-ಕಮಲ್ ಬಾರೋಟ್ ಧ್ವನಿಗಳಲ್ಲಿದೆ.  ಯಾದೋಂ ಕೀ ಬಾರಾತ್ ಚಿತ್ರದ ಟೈಟಲ್ ಹಾಡನ್ನು ಲತಾ ಮಂಗೇಶ್ಕರ್, ಪದ್ಮಿನಿ, ಶಿವಾಂಗಿ ಒಮ್ಮೆ, ಮಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಇನ್ನೊಮ್ಮೆ ಹಾಡಿದ್ದಕ್ಕೆ ಇದರ ಹೋಲಿಕೆ ಹೆಚ್ಚು ಹೊಂದುತ್ತದೆ.

    1969ರಲ್ಲಿ ತೆರೆಕಂಡ  ಸುವರ್ಣ ಭೂಮಿ ಚಿತ್ರಕ್ಕಾಗಿ ಕು.ರ.ಸೀ ಅವರು ಬರೆದು ವಿಜಯ ಭಾಸ್ಕರ್ ಸಂಗೀತ ನೀಡಿರುವ ಹಾಡಿನ ಎರಡೂ ವರ್ಶನ್‍ಗಳು ಇಲ್ಲಿವೆ.  ಎರಡರ ಚರಣಗಳ ಸಾಹಿತ್ಯ ಬೇರೆ ಬೇರೆ ಇರುವುದು ಗಮನಾರ್ಹ.  ಜಾನಕಿ-ಸುಮಿತ್ರಾ ವರ್ಶನ್‍ ಸಹೋದರರಿಬ್ಬರು ಬಾಲಕರಾಗಿದ್ದಾಗ ಹಾಡುವುದಾಗಿದ್ದು  ಅದರ ಸಾಹಿತ್ಯ ಮತ್ತು ಹಾಡಿದ ರೀತಿ ಆ ಸಂದರ್ಭಕ್ಕೆ ಹೊಂದುವಂತಿದೆ. ಇಲ್ಲಿ ಇಬ್ಬರೂ ಸಾಲುಗಳನ್ನು ಹಂಚಿಕೊಂಡು, ಕೆಲವೊಮ್ಮೆ ಒಟ್ಟಿಗೆ ಹಾಡುತ್ತಾರೆ.   ಪಿ.ಬಿ.ಎಸ್-ಜೇಸುದಾಸ್ ವರ್ಶನ್ ಆ ಸಹೋದರರು ಬಹುಕಾಲದ ನಂತರ ಭೇಟಿಯಾದಾಗ ಹಾಡುವಂಥದ್ದು.  ಅದಕ್ಕೆ ತಕ್ಕಂತೆ ಸಾಹಿತ್ಯದಲ್ಲಿ  ಫಿಲಾಸಫಿ ಮತ್ತು ಹಾಡುಗಾರಿಕೆಯಲ್ಲಿ ಗಾಂಭೀರ್ಯ ಇದೆ. ಇಲ್ಲಿ ಆರಂಭದಲ್ಲಿ ಪಲ್ಲವಿಯ ಸಾಹಿತ್ಯವನ್ನು ಪಿ.ಬಿ.ಎಸ್ ಸಾಕಿ ಶೈಲಿಯಲ್ಲಿ ಹಾಡಿದ ಮೇಲೆ ಜೇಸುದಾಸ್ ಪಲ್ಲವಿ ಮತ್ತು ಮೊದಲ ಚರಣವನ್ನು ಹಾಡುತ್ತಾರೆ. ನಂತರ ಪಿ.ಬಿ.ಎಸ್ ಪಲ್ಲವಿ ಮತ್ತು ಎರಡನೆ ಚರಣವನ್ನು ಹಾಡಿದ ಮೇಲೆ ಒಮ್ಮೆ ಜೇಸುದಾಸ್ ಒಬ್ಬರೇ, ಆ ಮೇಲೆ ಇಬ್ಬರೂ ಪಲ್ಲವಿಯನ್ನು ಜೊತೆಯಾಗಿ ಹಾಡುತ್ತಾರೆ.


   

 
ಗಾಯಕಿಯರು : ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರಾ

ಕಾಣದ ದೇವರು ಊರಿಗೆ ನೂರು
ಹುಡುಕುವರಾರು
ಕಾಣುವ ತಾಯೇ ಪರಮ ಗುರು


ಹೇಳಲು ಬಾರದ ಹಸುಳೆಯ ಆಸೆ
ಊಹಿಸಿ ತರುವಳು ಹಾಲಿನ ಶೀಸೆ
ಅಮ್ಮ ಎನ್ನುತ ಅಪ್ಪಿದ ಕೂಡಲೆ
ಹಿಗ್ಗುತ ಸುರಿವಳು ಮುತ್ತಿನ ಸುರಿಮಳೆ
ಬೇಡಿದುದೆಲ್ಲ ನೀಡಲು ಬಲ್ಲ
ತಾಯಿಗಿಂತ ದೇವರೆ ಇಲ್ಲ


ಆರಿದ ಬಾಯಿಗೆ ಹೀರುವ ಹಾಲು
ಸಂಜೆಯ ಜೋಲಿಗೆ ಜೋಗುಳ ಹಾಡು
ಓದುವ ಮಗುವಿಗ ಶ್ರೀ ಓನಾಮ
ಹಾಡುವ ಹೈದಗೆ ದೇವರ ನಾಮ
ಕೋರಿದ ವರವ ತೀರಿಸಿ ಬಿಡುವ
ತಾಯಿಗಿಂತ ದೇವರೆ ಇಲ್ಲ



 
ಗಾಯಕರು  : ಪಿ.ಬಿ.ಶ್ರೀನಿವಾಸ್ ಮತ್ತು ಕೆ.ಜೆ.ಜೇಸುದಾಸ್

ಕಾಣದ ದೇವರು ಊರಿಗೆ ನೂರು
ಹುಡುಕುವರಾರು
ಕಾಣುವ ತಾಯೇ ಪರಮ ಗುರು

ಸಾವಿರ ಕಾಳಗ ಕಾದುವ ಧೀರ
ನಾಡನು ನಡುಗಿಪ ದರೋಡೆಕೋರ
ಗಂಡರಗಂಡ ರಣಭೇರುಂಡ
ಹಾಕಬೇಕು ಪಾದಕೆ ದಂಡ

ಬೆತ್ಲೆಹೇಮಿನ ಏಸುಕ್ರಿಸ್ತ
ಮಕ್ಕಾ ನಗರದ ಗುರು ಪೈಗಂಬರ್
ರಾಘವ ಯಾದವ ಎಲ್ಲ ದೈವ
ತಾಯ ಮುಂದೆ ಬಾಲಕರವ್ವ



ಈ ಹಾಡಿನ ಧ್ವನಿಮುದ್ರಣ ಸಮಯದ ಫೊಟೊ