Sunday 1 October 2017

ಲಂಡನ್‌ನಲ್ಲಿ ಜಗನ್ಮೋಹಿನಿ ಪತ್ತೆಯಾದಳು!


ಇಲ್ಲ ಇಲ್ಲ.  ಕೊಹಿನೂರ್ ವಜ್ರ ಅಥವಾ ಟಿಪ್ಪು ಖಡ್ಗದಂತೆ ಜಗನ್ಮೋಹಿನಿಯನ್ನು ಯಾರೂ ಹಾರಿಸಿಕೊಂಡು ಹೋಗಲಿಲ್ಲ. ವಾಸ್ತವವಾಗಿ  ಮೂಲ ಜಗನ್ಮೋಹಿನಿ ಲಂಡನ್‌ನಲ್ಲಿ ಇಲ್ಲ ಕೂಡ. ರಾಮಾಯಣದ ಕೆಲವು ಪಾಠಾಂತರಗಳ ಪ್ರಕಾರ ರಾವಣನ ಅಶೋಕವನದಲ್ಲಿದ್ದ ಛಾಯಾ ಸೀತೆಯಂತೆ  ಅಲ್ಲಿ ಇರುವುದು ಜಗನ್ಮೋಹಿನಿಯ ಛಾಯಾ ರೂಪ ಮಾತ್ರ! ಯಾರಪ್ಪಾ ಈ ಜಗನ್ಮೋಹಿನಿ ಎಂದು ಯೋಚಿಸುತ್ತಿದ್ದೀರಾ?  ಈಕೆ ಬೇರಾರೂ ಅಲ್ಲ.  50ರ ದಶಕದಲ್ಲಿ ಎಂದೋ ಎಂದೋ ಎಂದು ಹಾಡಿ ಎಲ್ಲರನ್ನೂ ಸಮ್ಮೋಹನಗೊಳಿಸಿದ್ದವಳು.  ಅರ್ಥಾತ್ ನಾನು ಅನೇಕ ವರ್ಷಗಳಿಂದ ಹುಡುಕಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದ ಜಗನ್ಮೋಹಿನಿ ಚಿತ್ರದ ಕೆಲವು ಹಾಡುಗಳು ಕೊನೆಗೂ ಲಂಡನ್‌ನಲ್ಲಿರುವ ಬ್ರಿಟಿಷ್ ಲೈಬ್ರರಿಯಲ್ಲಿ ಪತ್ತೆಯಾದವು.  ಅಷ್ಟೇ ಅಲ್ಲ. ನಾನು ನಿರೀಕ್ಷಿಸದಿದ್ದ ಇನ್ನೂ ಅನೇಕ ಹಳೆ ಹಾಡುಗಳ ಭಂಡಾರದ ಕೀಲಿ ಕೈಯೇ ದೊರಕಿದಂತಾಯಿತು.  ಮಿತ್ರರೊಬ್ಬರು ನೀಡಿದ ಸಣ್ಣ ಸುಳಿವೊಂದು ಇದಕ್ಕೆ ಕಾರಣವಾಯಿತು.

ಬ್ರಿಟಿಷ್ ಲೈಬ್ರರಿ ಹಮ್ಮಿಕೊಂಡ Endangered Archives Programme ಅಡಿಯಲ್ಲಿ ಯಂಗ್ ಇಂಡಿಯಾ ಲೇಬಲ್ ಹೊಂದಿ ಮುಂಬಯಿಯ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ ಸುಮಾರು 1935 ರಿಂದ 1955ರ ವರೆಗೆ ತಯಾರಿಸಿದ್ದ ಸಾವಿರಾರು 78 rpm ರೆಕಾರ್ಡುಗಳನ್ನು digitised ರೂಪದಲ್ಲಿ ಸಂಗ್ರಹಿಸಲಾಗಿದ್ದು ನಾವು ಚಂದಮಾಮ ಜಾಹೀರಾತುಗಳಲ್ಲಿ ನೋಡುತ್ತಾ ಬಂದಿರುವ ಅನೇಕ ಕನ್ನಡ ಚಿತ್ರಗಳ ಹಾಡುಗಳು  ಮುಕ್ತವಾಗಿ ಆಲಿಸಲು  ಅಲ್ಲಿ ಲಭ್ಯವಿವೆ.  ಜಗನ್ಮೋಹಿನಿಯ ಕೆಲವು ಹಾಡುಗಳ ಜೊತೆಗೆ ಶ್ರೀನಿವಾಸ ಕಲ್ಯಾಣ, ದಳ್ಳಾಳಿ, ಆಶಾಢಭೂತಿ, ಗಂಧರ್ವ ಕನ್ಯೆ, ಚಂಚಲ ಕುಮಾರಿ ಮುಂತಾದವು ಅಲ್ಲದೆ ಅನೇಕ ನಾಟಕಗಳು, ಲಾವಣಿಗಳು, ರಂಗ ಗೀತೆಗಳು, ಶಾಸ್ತ್ರೀಯ ಸಂಗೀತ ಇತ್ಯಾದಿಗಳ ದೊಡ್ಡ ಖಜಾನೆಯೇ ಇದೆ.  ಆಗಲೇ ಹೇಳಿದಂತೆ ಇವುಗಳ ಪ್ರತಿ ಮಾತ್ರ ಅಲ್ಲಿದ್ದು ಮೂಲ ಸಾಮಗ್ರಿ ಆಯಾ ಸಂಗ್ರಾಹಕರ ಬಳಿಯಲ್ಲೇ ಇರುತ್ತದೆ.  ಈ ಕನ್ನಡ ಖಜಾನೆ ಅಲ್ಲಿ ಸೇರ್ಪಡೆಯಾದದ್ದು  ವೆಂಕಟಮೂರ್ತಿ ಮತ್ತು ಕೊಚ್ಚಿಯ ಸಮೀಪದ ಪಾಲ ಎಂಬಲ್ಲಿ ಹಳೆ ಗ್ರಾಮೊಫೋನ್ ಮತ್ತು ರೆಕಾರ್ಡುಗಳ ಬೃಹತ್ ಸಂಗ್ರಹಾಲಯವನ್ನೇ ಹೊಂದಿರುವ ಸನ್ನಿ ಮಾಥ್ಯೂ ಎಂಬ ಮಹಾನುಭಾವರ ಸಹಕಾರದಿಂದ.  ಇತರ ಅನೇಕರೂ ವಿವಿಧ ಭಾಷೆಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.



ಬ್ರಿಟಿಷ್ ಮತ್ತು ಜರ್ಮನ್ ರೆಕಾರ್ಡಿಂಗ್ ಕಂಪನಿಗಳ ತೀವ್ರ ಸ್ಪರ್ಧೆ ಎದುರಿಸಿಯೂ ಈ ಅಪ್ಪಟ ಸ್ವದೇಶಿ ಸಂಸ್ಥೆಯಾದ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ  ಸುಮಾರು ಎರಡು ದಶಕಗಳ ಕಾಲ  10000ಕ್ಕೂ ಹೆಚ್ಚು 78 rpm ರೆಕಾರ್ಡುಗಳನ್ನು   ಬಿಡುಗಡೆ ಮಾಡಿತ್ತು.  ಸಿನಿಮಾ ಸಂಗೀತದ ಜೊತೆಗೆ ಹವ್ಯಾಸಿ ಕಲಾವಿದರಿಗೂ ಅವಕಾಶ ನೀಡುತ್ತಿದ್ದ ಇದು 1948ರ ಹೊತ್ತಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲತೊಡಗಿ 1955ರಲ್ಲಿ ಬಾಗಿಲು ಮುಚ್ಚಿತು.  ಕನ್ನಡದಲ್ಲಿ ಮಹಾತ್ಮಾ ಸಂಸ್ಥೆ ಬಿಟ್ಟರೆ ಇನ್ಯಾವ ಚಿತ್ರ ನಿರ್ಮಾಪಕರೂ ಈ ಲೇಬಲ್‌ನಲ್ಲಿ ರೆಕಾರ್ಡು ಬಿಡುಗಡೆ ಮಾಡಿದಂತಿಲ್ಲ. 

ಹಳೆ ಗ್ರಾಮೊಫೋನ್ ರೆಕಾರ್ಡು ಸಂಗ್ರಹದ ಹವ್ಯಾಸ ಇರುವ  ಎಷ್ಟೋ ಮಂದಿ ಇದ್ದಾರೆ. ಬೆಂಕಿ ಪೆಟ್ಟಿಗೆ ಸಂಗ್ರಹದಿಂದ ಕಡ್ಡಿ ಗೀರಲಾಗದು, ಸ್ಟಾಂಪ್ ಸಂಗ್ರಹದಿಂದ ಅಂಚೆಯಲ್ಲಿ ಕಾಗದ ಕಳಿಸಲಾಗದು, ನಾಣ್ಯ ಸಂಗ್ರಹದಿಂದ ಏನನ್ನೂ ಕೊಳ್ಳಲಾಗದು.  ಆದರೆ ಗ್ರಾಮೊಫೋನ್ ರೆಕಾರ್ಡುಗಳನ್ನು ಸುಮ್ಮನೆ ಕಪಾಟಿನಲ್ಲಿ ಇಟ್ಟುಕೊಳ್ಳುವ ಬದಲು ಈ ರೀತಿ ಡಿಜಿಟೈಸ್ ಮಾಡಿ ಈ ಮಹನೀಯರಂತೆ ಪ್ರಪಂಚಕ್ಕೆ ಹಂಚಬಹುದಲ್ಲವೇ.  ಎಲ್ಲ ಸಂಗ್ರಾಹಕರು ಬ್ರೀಟಿಷ್ ಲೈಬ್ರರಿ ಜೊತೆ ಕೈ ಜೋಡಿಸಿ  ಅಥವಾ ತಮ್ಮದೇ ರೀತಿಯಲ್ಲಿ ಈ ದಿಸೆಯಲ್ಲಿ ಮುಂದುವರಿಯಲಿ ಎಂದು ಹಾರೈಸೋಣ.

ಬ್ರಿಟಿಷ್ ಲೈಬ್ರರಿಯ ಮಹಾನ್ ಸಮುದ್ರವನ್ನು ಜಾಲಾಡಬಯಸುವವರು ಇಲ್ಲಿ ಕ್ಲಿಕ್ಕಿಸಬಹುದು.  ನಾನು ಅಲ್ಲಿ ಮುಳುಗು ಹಾಕಿ ತಂದಿರುವ ಕೆಲವು ಅನರ್ಘ್ಯ ಮುತ್ತು ರತ್ನಗಳನ್ನು ಸಾಧ್ಯವಾದಷ್ಟು ಸ್ವಚ್ಛಗೊಳಿಸಿ ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದೇನೆ. ಇವುಗಳೆಲ್ಲ ಡಿ.ಶಂಕರ್ ಸಿಂಗ್ ಅವರ ಚಿತ್ರಗಳ ಹಾಡುಗಳಾಗಿದ್ದು ಹೆಚ್ಚಿನವು ಅಕ್ಕನ ಅಂಗಿ ತೊಟ್ಟ ತಂಗಿಯಂತೆ ಜನಪ್ರಿಯ ಹಿಂದಿ  ಟ್ಯೂನ್ ಹೊಂದಿವೆ.   ಅಂದಿನ ರೆಕಾರ್ಡುಗಳಲ್ಲಿ ಚಿತ್ರದ ಹೆಸರು ಮತ್ತು ಸಂಗೀತ ನಿರ್ದೇಶಕರ ಹೆಸರುಗಳು ಮಾತ್ರ ಅಂಕಿತವಾಗುತ್ತಿದ್ದು ಗಾಯಕರು ಮತ್ತು ಗೀತ ರಚನೆಕಾರ ಕುರಿತ ಮಾಹಿತಿ ಇರುತ್ತಿರಲಿಲ್ಲ. ಮಹಾತ್ಮಾ ಫಿಲಂಸ್ ಸಂಸ್ಥೆಯ ಆಗಿನ ಬಹುತೇಕ ಚಿತ್ರಗಳಿಗೆ ಹುಣಸೂರ್ ಕೃಷ್ಣಮೂರ್ತಿ ಅವರ ಸಾಹಿತ್ಯ ಮತ್ತು ಹಾಡುಗಳಿರುತ್ತಿದ್ದು  ಪಿ.ಶ್ಯಾಮಣ್ಣ ಎಂದೇ ಗುರುತಿಸಲ್ಪಡುತ್ತಿದ್ದ ಪಲವಂಗುಡಿ ಶ್ಯಾಮ ಐಯರ್  ಅವರ ಸಂಗೀತವಿರುತ್ತಿತ್ತು.  ಟಿ. ಕಲ್ಯಾಣಂ ಎಂಬವರು arranger ರೂಪದಲ್ಲಿ ಅವರಿಗೆ ಸಹಾಯಕರಾಗಿರುತ್ತಿದ್ದರು.


ಈ vintage ಹಾಡುಗಳು ನಿಮ್ಮಲ್ಲಿ ಅನೇಕರಲ್ಲಿ ಯಾವ ಹಳೆ ನೆನಪುಗಳನ್ನೂ ಮೀಟಲಾರವು.  ಏಕೆಂದರೆ ನೀವು ಇವುಗಳನ್ನು ಒಮ್ಮೆಯೂ ಕೇಳಿರಲಾರಿರಿ.  ಹಾಂ, ಕೆಲವು ಹಾಡುಗಳ ಧಾಟಿಗಳು ಆಪ್ತವಾಗಬಹುದು. ಹಳೆ ರೆಕಾರ್ಡುಗಳಾದ್ದರಿಂದ ಧ್ವನಿಮುದ್ರಣದ ಗುಣಮಟ್ಟವೂ ಅಷ್ಟೊಂದು ಚೆನ್ನಾಗಿಲ್ಲ.  ಹೀಗಾಗಿ ಆಸಕ್ತಿಯಿದ್ದರೆ ಮಾತ್ರ ಮುಂದುವರೆಯಿರಿ. Headphone / earphone ಬಳಸಿ. Iphone / Ipad ಬಳಕೆದಾರರು Safari ಬದಲಿಗೆ Chrome ಬ್ರೌಸರ್ ಬಳಸಿದರೆ ಹಾಡುಗಳ player ತೆರೆದುಕೊಳ್ಳುತ್ತದೆ.

ಜಗನ್ಮೋಹಿನಿ


ನನ್ನ ಮುಖ್ಯ ಉದ್ದೇಶ ಆಗಿದ್ದದ್ದೇ ಈ ಚಿತ್ರದ ಹಾಡುಗಳನ್ನು  ಹುಡುಕುವುದು.  ಉಳಿದವು ನನಗೆ ಬೋನಸ್ ರೂಪದಲ್ಲಿ ದೊರಕಿದ್ದು.  ಆದರೆ ದುರದೃಷ್ಟವಶಾತ್ ಜಗನ್ಮೋಹಿನಿಯ 12 ಹಾಡುಗಳ ಪೈಕೆ 4 ಮಾತ್ರ ಸಿಕ್ಕಿವೆ.  ನನ್ನ ಮುಖ್ಯ ಗುರಿಯಾಗಿದ್ದ ಎಂದೋ ಎಂದೊ, ವಸಂತ ಮಾಸ ಓಡಿ ಬಂದಿದೆ, ಕರೆಯುವೆ ನಿನ್ನ ಇತ್ಯಾದಿ ಲಭ್ಯವಾಗಿಲ್ಲ.  ಮುಂದೊಂದು ದಿನ ಇವೂ ಸಿಗದೆ ಹೋಗಲಾರವು ಎಂಬ ನಂಬಿಕೆ ನನಗಿದೆ.  ಈ ಚಿತ್ರಕ್ಕೆ ಸಂಗೀತ ನೀಡಿದವರು ಪಿ. ಶ್ಯಾಮಣ್ಣ. ಜಗನ್ಮೋಹಿನಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿದೆ ಎಲ್ಲೂ ಇಲ್ಲದ ಆ ಹಾಡು ನೋಡಿ.

ನೀ ಎನ್ನ ಜೀವನ
ಬಹುಕಾಲದಿಂದ  ಚಂದಮಾಮದ ಜಾಹೀರಾತಿನಲ್ಲಿ ಈ ಸಾಲುಗಳನ್ನು ನೋಡುತ್ತಿದ್ದರೂ ಈ ಯುಗಳ ಗೀತೆ ದಿಲ್ಲಗಿ ಚಿತ್ರದ ತೂ ಮೇರಾ ಚಾಂದ್ ಮೈ ತೆರೀ ಚಾಂದನೀ ಧಾಟಿಯನ್ನು ಹೊಂದಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ.  ಪುರುಷ ಧ್ವನಿ ಯಾರದ್ದೆಂದು ಗೊತ್ತಿಲ್ಲ.  ಸ್ತ್ರೀ ಕಂಠ ಅಮೀರ್ ಬಾಯಿ ಕರ್ನಾಟಕಿ ಅವರದ್ದಿರಬಹುದೆನ್ನಿಸುತ್ತದೆ. ಆಗ ಗಾನಸರಸ್ವತಿ ಎಂಬವರೂ ಹಾಡುತ್ತಿದ್ದರು.



ಮನದೊಳತಿ ಚಿಂತೆ 
ಇದೊಂದು ವಿಷಾದ ಭಾವದ ಗೀತೆಯಾಗಿದ್ದು ಹೆಚ್ಚಿನ ಭಾಗ ಆಲಾಪ ಶೈಲಿಯಲ್ಲಿದ್ದು ಬರ್‌ಸಾತ್ ಚಿತ್ರದ ಅಬ್ ಮೇರಾ ಕೌನ್ ಸಹಾರಾ ಧಾಟಿಯನ್ನಾಧರಿಸಿದೆ. 



ಎಂದೋ ಎಂದೋ
ಈ ಹಾಡಿಲ್ಲದೆ ಜಗನ್ಮೋಹಿನಿಯ ನೆನಪೇ ಅಪೂರ್ಣ.  ಮೂಲ ಹಾಡು ಲಭ್ಯವಿಲ್ಲದ್ದರಿಂದ ನಾನು ಮರುಸೃಷ್ಟಿಗೊಳಿಸಿದ ವರ್ಷನ್ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.



ಕಬ್ಬಿನ ಮೇಲೆ ಜೇನು ಸುರಿದಂತೆ ಫೇಸ್ ಬುಕ್ ಮಿತ್ರ ಶ್ರೀನಾಥ್ ಅವರು ಜಗನ್ಮೋಹಿನಿ ಚಿತ್ರದ ಪದ್ಯಪುಸ್ತಕವನ್ನು ಒದಗಿಸಿದ್ದಾರೆ. ನೋಡಲು ಒಮ್ಮೆ ಕ್ಲಿಕ್ಕಿಸಿ scroll ಮಾಡಿ.




ಶ್ರೀನಿವಾಸ ಕಲ್ಯಾಣ
ಈ ಚಿತ್ರದಲ್ಲೇ ರಾಜಕುಮಾರ್ ಅವರು ಮೊದಲು ಬಣ್ಣ ಹಚ್ಚಿದ್ದಂತೆ.  ಸಪ್ತಋಷಿಗಳ ಪೈಕಿ ಓರ್ವನ ಪುಟ್ಟ ಪಾತ್ರ ಅವರದಾಗಿತ್ತು.. ಇದರಲ್ಲಿದ್ದ 10 ಹಾಡುಗಳಲ್ಲಿ ಕೆಲವು ಇಲ್ಲಿವೆ.


ಎಂಥ ಭಾಗ್ಯವತಿ
70ರ ದಶಕದಲ್ಲಿ ಬಂದ ರಾಜನ್ ನಾಗೇಂದ್ರ ಸಂಗೀತವಿದ್ದ  ಶ್ರೀನಿವಾಸ ಕಲ್ಯಾಣದ ನಾನೇ ಭಾಗ್ಯವತಿ ನೆನಪಾಯಿತೇ. ಈ ಹಾಡನ್ನು  ಹಾಡಿದವರು  ನಾಗೇಂದ್ರ.  ಹೌದು, ರಾಜನ್ ನಾಗೇಂದ್ರ  ಜೋಡಿಯಾಗಿ  ಸೌಭಾಗ್ಯ ಲಕ್ಷ್ಮಿ ಚಿತ್ರದ ಮೂಲಕ ಸಂಗೀತ ನಿರ್ದೆಶಕರಾಗುವುದಕ್ಕೂ ಮೊದಲು ಅದೇ ನಾಗೇಂದ್ರ ಹಾಡಿದ ಗೀತೆ ಇದು. 50ರ ದಶಕದಲ್ಲಿ ಅನೇಕ ವೈವಿಧ್ಯಮಯ ಗೀತೆಗಳನ್ನು ಹಾಡಿದ ಅವರು ನಂತರ ಹಾಸ್ಯಗೀತೆಗಳಿಗೆ ತಮ್ಮನ್ನು ಸೀಮಿತಗೊಳಿಸಿದ್ದೇಕೆ ಎಂದು ತಿಳಿಯದು.



ಪೋಗಿ ಬಾರಮ್ಮ ಪದ್ಮಾವತಿ
ಸಮೂಹಗಾನ ರೂಪದಲ್ಲಿರುವ ಇದು ಬಾಬುಲ್ ಚಿತ್ರದ ಛೋಡ್ ಬಾಬುಲ್ ಕಾ ಘರ್ ಹಾಡಿನ ಧಾಟಿಯಲ್ಲಿದೆ.  ಮುಖ್ಯ ಸ್ವರ ಅಮೀರ್ ಬಾಯಿ ಕರ್ನಾಟಕಿ ಅವರದ್ದಿರಬಹುದು. 



ಯೌವನ ತುಂಬಿದ ನವವಧುವಂತೆ
ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿ ವರ್ಣಿಸುವ ಈ ಆಕರ್ಷಕ ಹಾಡು ಯಾವ ಹಿಂದಿ ಧಾಟಿಯನ್ನಾಧರಿಸಿದೆ ಎಂದು ಗೊತ್ತಿಲ್ಲ.



ದಳ್ಳಾಳಿ
1953ರಲ್ಲಿ ಬಂದ ಈ ಚಿತ್ರದಲ್ಲಿ 10 ಹಾಡುಗಳಿದ್ದು ಅವುಗಳ ಪೈಕಿ ಕೆಲವು ಇಲ್ಲಿವೆ. ಸಂಗೀತ ಪಿ.ಶ್ಯಾಮಣ್ಣ.



ನಾನೊಂದು ಬೇಕೆಂದು
ಭಗವಾನ್ ದಾದಾ ಅವರ ಅಲಬೇಲಾ ಚಿತ್ರದ ಧೀರೆ ಸೆ ಆಜಾರಿ ಅಖಿಯನ್ ಮೆಂ ಹಾಡಿನ ಧಾಟಿಯನ್ನು ಇದು ಹೊಂದಿದೆ.



ಜೀವನ ಒಂದು ಸಂತೆ
ಪರ್‌ದೇಸ್ ಚಿತ್ರದಲ್ಲಿದ್ದ ಶಂಷಾದ್ ಬೇಗಂ ಹಾಡೊಂದರ ಧಾಟಿಯನ್ನಾಧರಿಸಿದ ಈ ಹಾಡು ಬಲು ಆಕರ್ಷಕವಾಗಿದೆ.



ದೂರಾಯಿತು ಮನದಾಶಾಕಿರಣ
ಇದು ಆವಾರಾ ಚಿತ್ರದ ಹಾಡೊಂದರ ಧಾಟಿಯನ್ನು ಹೊಂದಿದೆ.




ದಿನಾ ಜಗಳ ಕಾಯ್ದು
ಅಲಬೇಲಾ ಚಿತ್ರದ ಕಭಿ ನರಮ್ ಕಭಿ ಗರಮ್ ಧಾಟಿ ಹೊಂದಿರುವ ಇದು ಟಂಗ್ ಟ್ವಿಸ್ಟರ್ ರೀತಿಯ ಪದಗಳನ್ನು ಹೊಂದಿದೆ.  ಸುಂದರವಾಗಿ ಹಾಡಿದ ಗಾಯಕ ಯಾರು ಎಂಬ ಮಾಹಿತಿ ಇಲ್ಲ.



ಅನ್ನದ ಕೂಗು
ದೀದಾರ್ ಚಿತ್ರದಲ್ಲಿ ರಫಿ ಹಾಡಿದ ಮೇರಿ ಕಹಾನಿ ಭೂಲನೆವಾಲೆ ಧಾಟಿಯನ್ನು ಆಧರಿಸಿದ ಇದನ್ನು ಹಾಡಿದವರು ಎ.ಎಂ. ರಾಜಾ.



ವೆರಿ ಸೂನ್ ವೆರಿ ಸೂನ್
ಸಿ. ರಾಮಚಂದ್ರ ಅವರ ಸಂಡೆ ಕೆ ಸಂಡೆ ಮತ್ತು ಶಾಮ್ ಢಲೆ ಖೀಡಕೀ ತಲೆ ಧಾಟಿಗಳನ್ನು ಆಧರಿಸಿದ ಈ ಹಾಡಲ್ಲಿ ಇಬ್ಬರು ಗಾಯಕಿಯರಿದ್ದಾರೆ.



ಗಂಧರ್ವ ಕನ್ಯೆ
ಈ ಚಿತ್ರದಲ್ಲಿದ್ದ ಹಾಡುಗಳ ಸಂಖ್ಯೆ ಭರ್ತಿ 14.  ಅವುಗಳ ಪೈಕಿ 6 ಇಲ್ಲಿವೆ.



ಬಾ ಬಾ ಮುದ್ದಿನ್ ಗಿಣಿ
ನಾಗೇಂದ್ರ ಮತ್ತು ಎ.ಎಂ. ರಾಜಾ ಜೊತೆಯಾಗಿ ಈ ಹಾಡು ಹಾಡಿದ್ದಾರೆ. ಜತೆಯಲ್ಲಿರುವ  ಹೆಣ್ಣು ದನಿ ಪಿ.ಸುಶೀಲ ಅವರದ್ದಿರಬಹುದು.



ಕುಣಿಯುತ ದೋಣಿ ನೀ
ದೋಣಿ ಪಯಣದ ಹಾಡಾಗಿರಬಹುದಾದ ಇದನ್ನೂ  ನಾಗೇಂದ್ರ ಮತ್ತು ಎ.ಎಂ. ರಾಜಾ ಹಾಡಿದ್ದಾರೆ.



ಇಂದಿನ ದಿನ ಮನ
ಪಿ.ಸುಶೀಲ ಹಾಡಿರುವ ಈ ಹಾಡಿನ ಧಾಟಿ ಯಾವುದೆಂದು ಪ್ರತ್ಯೇಕವಾಗಿ  ಹೇಳಬೇಕಾದ ಅಗತ್ಯವೇ ಇಲ್ಲ.



ಎಲೆಲೆ ಬಾಳೆಯ ಹಣ್ಣೆ
ಪ್ರೇಮಲೋಕದಲ್ಲಿ ನಾಯಕಿಯನ್ನು ನಿಂಬೆ ಹಣ್ಣಿಗೆ ಹೋಲಿಸಲಾಗಿದ್ದರೆ ಎಷ್ಟೋ ವರ್ಷ ಮೊದಲೇ ಇಲ್ಲಿ ಆಕೆಯನ್ನು ಬಾಳೆಹಣ್ಣಿಗೆ ಹೋಲಿಸಲಾಗಿದೆ!   ನಾಗೇಂದ್ರ ಮತ್ತು ಎ.ಎಂ. ರಾಜಾ ಹಾಡಿದ್ದಾರೆ.  ಆಗ ಗಾಯಕರಿಗೊಂದು, ಆರ್ಕೆಷ್ಟ್ರಾಕ್ಕೊಂದು- ಹೀಗೆ ಎರಡೇ ಮೈಕ್ ಇರುತ್ತಿದ್ದುದಂತೆ.  ಹೀಗಾಗಿ ಒಂದೇ ಮೈಕನ್ನು share ಮಾಡುವಾಗ  ಗಾಯಕರಿಬ್ಬರ ಧ್ವನಿಯಲ್ಲಿ ಸ್ವಲ್ಪ imbalance ಆದಂತಿದೆ. ಹಿನ್ನೆಲೆಯಲ್ಲಿ ಚೌಡಕಿಯಂಥ ವಾದ್ಯವನ್ನು ಉಪಯೋಗಿಸಲಾಗಿದೆ.



ಈ ಸಂಸಾರ ನೌಕೆಯು
ಬೈಜು ಬಾವ್ರಾದ ತೂ ಗಂಗಾ ಕೀ ಮೌಜ್ ಧಾಟಿಯ ಈ ಹಾಡಲ್ಲಿ ಕೇಳಿಬರುವ ಧ್ವನಿಗಳು ಎ.ಎಂ. ರಾಜಾ ಮತ್ತು ಪಿ.ಸುಶೀಲ.



ನೀಲಾಕಾಶದಿ
ಪಿ.ಸುಶೀಲ ಧ್ವನಿಯಲ್ಲಿರುವ ಈ ಹಾಡಿನಲ್ಲಿ ಪ್ರಕೃತಿಯ ವರ್ಣನೆ ಇದೆ.



ಚಂಚಲಕುಮಾರಿ


ಈ ಚಿತ್ರಕ್ಕೆ ಸಂಗೀತ ನಿರ್ದೇಶನ ರಾಜನ್ ನಾಗೇಂದ್ರ ಅವರದ್ದು. ಧ್ವನಿಮುದ್ರಿಕೆಯಲ್ಲಿ ಅವರ ಹೆಸರು ಆರ್. ನಾಗೇಂದ್ರ ಮತ್ತು ರಾಜನ್ ಎಂದು ದಾಖಲಾಗಿತ್ತು. ಒಟ್ಟು ಆರು ಹಾಡುಗಳಿದ್ದವು.  ಅವುಗಳಲ್ಲಿ ಎರಡು ಇಲ್ಲಿವೆ.



ಕಣ್ಣಮುಂದೆ ನಿಲ್ಲು ಬಾ
ನಾಗೇಂದ್ರ ಅವರೊಡನೆ ಹಾಡಿದ ಗಾಯಕಿ ಯಾರೆಂಬುದರ ಬಗ್ಗೆ ಮಾಹಿತಿ ಇಲ್ಲ.



ಕಿಲಿ ಕಿಲಿ ವಚ್ ವಚ್
ಕುದುರೆ ಗಾಡಿ ಲಯದ ಈ ಹಾಡಿನ ಸಾಹಿತ್ಯ ಪೂರ್ತಿ ಹಿಂದಿಯಲ್ಲಿದೆ.  ನಾಗೇಂದ್ರ ಮತ್ತು ಹೆಸರು ತಿಳಿಯದ ಗಾಯಕಿ ಹಾಡಿದ್ದಾರೆ.




ಮಾಡಿದ್ದುಣ್ಣೋ ಮಹಾರಾಯ 
ಎ. ಎಂ.ರಾಜಾ ಮತ್ತು ಗಾನಸರಸ್ವತಿ ಹಾಡಿರುವ ಓ ನಲ್ಲೆ ಎಂಬ ಈ ಹಾಡು ಓ.ಪಿ.ನಯ್ಯರ್ ಸಂಗೀತವಿದ್ದ ಆರ್ ಪಾರ್ ಚಿತ್ರದ ಮೊಹಬ್ಬತ್ ಕರ್ ಲೊ ಜೀ ಭರ್ ಲೊ ಧಾಟಿಯನ್ನು ಹೊಂದಿದೆ. ಸಂಗೀತ ಪಿ. ಶ್ಯಾಮಣ್ಣ.



ಸೌಭಾಗ್ಯಲಕ್ಷ್ಮಿ

ರಾಜನ್ ನಾಗೇಂದ್ರ ಅವರು ‘ಆರ್. ನಾಗೇಂದ್ರನ್ - ರಾಜನ್’ ಎಂಬ ಹೆಸರಲ್ಲಿ ಮೊತ್ತ ಮೊದಲಿಗೆ ಸಂಗೀತ  ನಿರ್ದೇಶನ ಮಾಡಿದ  ಈ ಚಿತ್ರ  1953ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಬಹುತೇಕ ಹಾಡುಗಳಿಗೆ ಅವರು ಸ್ವಂತ ಟ್ಯೂನ್ ಅಳವಡಿಸಿದರೂ  ಕನಸಲ್ಲಿ ಒಬ್ಬ ಎಂಬ ಹಾಡು ಮಾತ್ರ ಆವಾರಾ ಚಿತ್ರದ ಎಕ್ ಬೇವಫಾ ಸೆ ಪ್ಯಾರ್ ಕಿಯಾ ಎಂಬ ಶಂಕರ್ ಜೈಕಿಶನ್ ಧಾಟಿಯನ್ನು ಹೊಂದಿತ್ತು. ಪಿ.ಲೀಲ ಹಾಡಿದ್ದ  ಇದರ happy ಮತ್ತು sad ವರ್ಷನ್‌ಗಳಿದ್ದು ಗ್ರಾಮೊಫೋನ್ ಪ್ಲೇಟಿನ ಎರಡೂ ಬದಿಗಳನ್ನಾವರಿಸಿದ್ದವು.  ಪಿ.ಲೀಲ ಅವರು ಆ ಮೇಲೆ ರಾಜನ್ ನಾಗೇಂದ್ರ ಅವರ ನಿರ್ದೇಶನದಲ್ಲಿ ಹೆಚ್ಚು ಹಾಡುಗಳನ್ನು ಹಾಡದಿದ್ದರೂ ನಾಗಾರ್ಜುನ, ಅನ್ನಪೂರ್ಣ, ಕನ್ನಿಕಾ ಪರಮೇಶ್ವರಿ ಕಥೆ ಮುಂತಾದ ಚಿತ್ರಗಳಲ್ಲಿ ಅವರ ಹಾಡುಗಳಿದ್ದವು.




4 comments:

  1. ಅಬ್ಬಾ, ಬಹುಶಃ ಭಗಿರಥ ಪ್ರಯತ್ನ ಅಂದರೆ ಇದು. ನಿಮ್ಮ ಸಂತೋಷ ಮತ್ತು ಅದನ್ನು ಹಂಚುವ ರೀತಿ ಯಾವಾಗಲು ಮುದ ನೀಡುವ ಸಂಗತಿ. ವೆಂಕಟಮೂರ್ತಿ ಮತ್ತು ಸನ್ನಿ ಮಾಥ್ಯೂ ಅಂಥ ಅನಾಮಿಕ ಮಹಾನುಭಾವರು ಇರುವುದು ನಮ್ಮ ಸೌಭಾಗ್ಯವೇ ಸರಿ. ರಾಜನ್-ನಾಗೇಂದ್ರ ಜೋಡಿಯ ರಾಜನ್ ರವರು ಇನ್ನೂ ನಮ್ಮ ನಡುವೆ ಇರುವುದರಿಂದ ಅವರ ಮೂಲಕ ಇನ್ನಷ್ಟೂ ಪೂರಕ ಮಾಹಿತಿ ಪಡೆಯಬಹುದೋ ಏನೋ.

    ReplyDelete
  2. ಅನರ್ಘ್ಯ ರತ್ನಗಳು..
    ಜಗನ್ಮೋಹಿನಿ - ಗಾಯನ: ಎಂ.ಜಿ.ಸರೋಜ, ನೀಲಮ್ಮ ಕಡಾಂಬಿ.
    ಶ್ರೀ ಶ್ರೀನಿವಾಸ ಕಲ್ಯಾಣ - ಗಾಯನ: ಅಮೀರ್ ಬಾಯಿ ಕರ್ನಾಟಕಿ, ಸರೋಜಾ, ರಾಮಚಂದ್ರ
    ದಳ್ಳಾಳಿ - ಗಾಯನ: ಎ.ಎಂ.ರಾಜ, ಹುಣಸೂರು, ಸರೋಜಾ, ಅಮೀರ್ ಬಾಯಿ ಕರ್ನಾಟಕಿ
    ಗಂಧರ್ವ ಕನ್ಯೆ - ಗಾಯನ: ಪಿ.ಸುಶೀಲ, ರಾಜಾ, ಗಾನ ಸರಸ್ವತಿ, ನಾಗೇಂದ್ರ
    ಚಂಚಲಕುಮಾರಿ - ಗಾಯನ: ರಾಜಾ, ಪಿ.ಲೀಲಾ, ಸಿ.ಎಸ್.ಸರೋಜಿನಿ
    ಸೌಭಾಗ್ಯ ಲಕ್ಷ್ಮಿ - ಗಾಯನ: ದೇವಿಕಾ, ನಾಗೇಂದ್ರ, ಪಿ. ಲೀಲಾ.

    ಶ್ರೀನಾಥ್ (FB)

    ReplyDelete
  3. ಹಳೆ ಹಾಡುಗಳನ್ನು ಹುಡುಕಿ, ದಾಖಲಿಸಿ ವಿವರಣೆಯೊಂದಿಗೆ ನಮಗೆ ನೀಡುವ ನಿಮ್ಮ ಹುಮ್ಮಸ್ಸಿಗೆ, ಪರಿಶ್ರಮಕ್ಕೆ ನನ್ನ ಒಂದು ಸಲಾಂ....ಅತ್ಯಂತ ಪ್ರಶಂಸಾರ್ಹ ಕಾರ್ಯ... .

    Vinod Phadke (FB)

    ReplyDelete
  4. I liked the song "ಇಂದಿನ ದಿನ ಮನ". Appreciate your effort in preserving and sharing the same.

    ReplyDelete

Your valuable comments/suggestions are welcome